ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸದ ಅಡ್ಜಸ್ಟ್ ಮೆಂಟ್‌

ಇದು ಮೈಸೂರು ಪಂಚಾಯಿತಿ!
Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಅಧಿಕಾರ ದುರುಪಯೋಗ, ಸ್ವ-ಜನ ಪಕ್ಷಪಾತ,  ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುವ ಒಳ್ಳೆಯ ಉದ್ದೇಶದಿಂದ ಅವಿಶ್ವಾಸ ಗೊತ್ತುವಳಿ ಮಂಡನೆಯ ಅವಕಾಶವನ್ನು ಪಂಚಾಯಿತಿಗಳಿಗೆ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅವಕಾಶಗಳು ಖಂಡಿತವಾಗಿಯೂ ಇರಬೇಕು ಎಂಬುದರಲ್ಲಿ ಯಾವುದೇ ತಕರಾರಿಲ್ಲ ನಿಜ. ಆದರೆ, ಈ ಅವಿಶ್ವಾಸ ನಿರ್ಣಯದಂತಹ ಅಮೂಲ್ಯ ಅವಕಾಶದ ಮೇಲೆಯೇ ‘ಅವಿಶ್ವಾಸ’ ಮೂಡುವಂತಹ ಘಟನೆಗಳು ಸಂಭವಿಸಲಾರಂಭಿಸಿವೆ. 

ಮಹಿಳೆಯರನ್ನು, ದಲಿತರನ್ನು ಅಧಿಕಾರದಿಂದ ದೂರ ಇಡುವುದಕ್ಕೆ ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಮೀಸಲಾತಿಯ ರಕ್ಷಾ ಕವಚ ಬಂದಿದ್ದರಿಂದ ಇದಕ್ಕೆ ತಡೆ ಬಿದ್ದಿತು. ಆದರೆ, ಸ್ವಲ್ಪ ಖಡಕ್ ಆಗಿದ್ದರೆ, ಅವ್ಯವಹಾರಗಳಿಗೆ ಸ್ಪಂದಿಸದಿದ್ದರೆ, ಸದಸ್ಯರಿಗೆ ಸೂಕ್ತ ಗೌರವ ನೀಡದೇ ಇದ್ದರೆ ಲಿಂಗಾತೀತವಾದ, ಪಕ್ಷಾತೀತವಾದ, ಜಾತ್ಯಾತೀತವಾದ ಒಗ್ಗಟ್ಟು ಪ್ರದರ್ಶಿತಗೊಂಡು ‘ಅವಿಶ್ವಾಸಾಸ್ತ್ರ’ದ ಪ್ರಯೋಗ ನಡೆಯುತ್ತದೆ.

ಸದ್ಯ, ಮೈಸೂರಿನ ತಾಲ್ಲೂಕು ಪಂಚಾಯಿತಿಯಲ್ಲಿ 2011ರಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ನ ಮಹಿಳೆ ಒಬ್ಬರಿಗೆ (ಮಂಜುಳಾ ಮಂಜುನಾಥ್‌) 10 ತಿಂಗಳ ಅಧಿಕಾರ ನೀಡಲಾಗಿತ್ತು. ಆದರೆ, ಅವಧಿ  ರ್ಣವಾಗುವುದಕ್ಕೆ ಇನ್ನು 3 ತಿಂಗಳು ಇರುವಾಗಲೇ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಇವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿತು.

ಆಗ ಅಧ್ಯಕ್ಷೆಯಾಗಿದ್ದವರು ‘ಕೆಲವು ಸದಸ್ಯರು ಕೆಲಸ ಮಾಡಿಸದೇ ಇದ್ದರೂ ಬಿಲ್‌ಗೆ ಸಹಿ ಹಾಕುವಂತೆ ಒತ್ತಡ ಹೇರಿದರು. ಅದಕ್ಕೆ ನಾನು ಒಪ್ಪಲಿಲ್ಲ. ಹೀಗಾಗಿ, ಇವರು ಎಲ್ಲಾ ಸದಸ್ಯರಿಗೂ ವಿಷಯ ತಿಳಿಸಿ ವ್ಯವಸ್ಥಿತ ಪಿತೂರಿ ನಡೆಸಿದರು. ‘ಅವಿಶ್ವಾಸ ನಿರ್ಣಯ’ ಮಂಡಿಸಲು ಸಮಯ ಕಾಯುತ್ತಿದ್ದರು. ದೊಡ್ಡಮಾರಗೌಡನಹಳ್ಳಿಯಲ್ಲಿ ನೀರಿನ ಟ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಸದಸ್ಯರ ಹೆಸರು ಇರಲಿಲ್ಲ. ಸ್ವತಃ ನನ್ನ (ಅಧ್ಯಕ್ಷೆ) ಹೆಸರೂ ಇರಲಿಲ್ಲ. ಇದನ್ನು ಪ್ರಶ್ನಿಸಬೇಕೆಂದು  ಎಲ್ಲರೂ ಒತ್ತಡ ಹೇರಿದರು. ನಾನು ಹೆಸರಿನ ವಿಷಯ ದೊಡ್ಡದಾಗಬಾರದು ಎಂದು ಯಾರ ಹೆಸರು ಇರಲಿ, ಬಿಡಲಿ. ಒಂದು ಒಳ್ಳೆಯ ಕೆಲಸ ಆಗಿದೆಯೆಲ್ಲಾ ಅಷ್ಟೇ ಸಾಕು. ಎಲ್ಲೋ ಕಣ್ತಪ್ಪಿನಿಂದ ಹೆಸರು ಬಿಟ್ಟು ಹೋಗಿದೆ. ಅದನ್ನು ದೊಡ್ಡದನ್ನಾಗಿ ಮಾಡಬಾರದು ಎಂದು ಸುಮ್ಮನಾದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಅವಿಶ್ವಾಸ ಮಂಡಿಸಲು ವ್ಯವಸ್ಥಿತವಾದ ಸಂಚನ್ನು ಹೆಣೆಯಲಾಯಿತು’ ಎಂದು ಹೇಳುತ್ತಾರೆ.

ಇದರ ಸತ್ಯಾಸತ್ಯತೆ ಏನೇ ಇರಲಿ ಬಿಡಲಿ, ಇವರು ಸ್ವಲ್ಪ ‘ಖಡಕ್ ಅಧ್ಯಕ್ಷೆ’ ಎಂಬ ಹೆಸರು ಪಡೆದಿದ್ದಂತೂ ನಿಜ. ಇವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ಕರ್ನಾಟಕ ರಾಜ್ಯ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ ಸೇರಿದಂತೆ ಹಲವು ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಇವರ ಬೆಂಬಲಕ್ಕೆ ನಿಂತಿದ್ದನ್ನು ಗಮನಿಸಿದರೆ ಸಾಕಷ್ಟು ಜನಬೆಂಬಲವೂ ಇವರ ಪರವಾಗಿಯೇ ಇತ್ತು.

ಎಷ್ಟೇ ಜನಬೆಂಬಲವಿದ್ದರೂ ಅವರ ಕೈಹಿಡಿಯಬೇಕಿದ್ದ ಜೆಡಿಎಸ್ ‘ಕೈ’ ಹಿಡಿಯಲಿಲ್ಲ. ಪರಿಣಾಮ ಅವಿಶ್ವಾಸ ಗೊತ್ತುವಳಿ ಪರ 17 ಜನ ಸದಸ್ಯರು ಬೆಂಬಲ ಸೂಚಿಸಿದರು. ಆಶ್ಚರ್ಯ ಎಂದರೆ ಕಾಂಗ್ರೆಸ್ಸಿಗರು ಕೂಡ ಇವರಿಗೆ ಬೆಂಬಲ ನೀಡಲಿಲ್ಲ. ಕಾಂಗ್ರೆಸ್‌ನ 12 ಜನ ಸದಸ್ಯರು ಗೈರು ಹಾಜರಾಗಿದ್ದು ಜೆಡಿಎಸ್ ಹಾಗೂ ಬಿಜೆಪಿ ಪಾಲಿನ ಹಾದಿ ಸುಗಮವಾಗುವಂತೆ ಮಾಡಿತು. ಒಟ್ಟಾರೆ, ಅವಿಶ್ವಾಸಕ್ಕೆ ಪಕ್ಷಾತೀತವಾದ ಒಗ್ಗಟ್ಟು ಪ್ರದರ್ಶಿತವಾಯಿತು.

ವಾಸ್ತವವಾಗಿ ಕಾಂಗ್ರೆಸ್‌ಗೆ 10 ತಿಂಗಳು ಹಾಗೂ ಜೆಡಿಎಸ್‌ಗೆ 10 ತಿಂಗಳು ಎಂದು ಒಳ ಒಪ್ಪಂದವಾಗಿತ್ತು. ಆದರೆ, 10 ತಿಂಗಳು ಪೂರ್ಣವಾಗುವುದಕ್ಕೆ ಮುಂಚೆಯೇ ಜೆಡಿಎಸ್ ಅಧಿಕಾರದ ದಾಹಕ್ಕಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಿತು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವ ಬೇರೆಯೇ ಇತ್ತು. ಮುಖ್ಯವಾಗಿ ಅಧ್ಯಕ್ಷೆ (ಮಂಜುಳಾ ಮಂಜುನಾಥ್) ಅವರು ತಮ್ಮದೇ ಪಕ್ಷದ ಸದಸ್ಯರೂ ಸೇರಿದಂತೆ ಬೇರೆ ಯಾವ ಪಕ್ಷದ ಸದಸ್ಯರನ್ನೂ ‘ವಿಶ್ವಾಸ’ಕ್ಕೆ ತೆಗೆದುಕೊಂಡಿರಲಿಲ್ಲ. ಹೀಗಾಗಿ, ಇವರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷಾತೀತವಾದ ಒಗ್ಗಟ್ಟು ಪ್ರದರ್ಶಿಸಲಾಯಿತು ಎಂಬ ಮಾತುಗಳು ಆ ವೇಳೆ ಕೇಳಿ ಬಂದವು.

ನಂತರ ಜೆಡಿಎಸ್‌ನ ನೇತ್ರಾವತಿ ವೆಂಕಟೇಶ್‌ ಅವರು ಅಧ್ಯಕ್ಷರಾದರು. ಹೀಗಾಗಿ, ಮಹಿಳೆಯನ್ನು ಅಧಿಕಾರದಿಂದ ದೂರವಿಡಲು ಮಾಡಿದ ಅವಿಶ್ವಾಸದ ದುರ್ಬಳಕೆ ಇದಾಗಿರಲಿಲ್ಲ. ಅಲ್ಲದೆ, ಪಕ್ಷಗಳ ರಾಜಕಾರಣವೂ ಇದ್ದಂತೆ ಕಂಡುಬರುವುದಿಲ್ಲ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾದ್ದರಿಂದ ಇಲ್ಲಿ ಜಾತಿ ರಾಜಕಾರಣವೂ ಇಲ್ಲ. ಸದಸ್ಯರು ಹೇಳುವ ಪರಿಭಾಷೆಯಲ್ಲೇ ಹೇಳುವುದಾದರೆ ಎಲ್ಲ ಸದಸ್ಯರೊಂದಿಗೆ ‘ವಿಶ್ವಾಸ’ ದಿಂದ ಇದ್ದಿದ್ದರೆ ಖಂಡಿತ  ಅವರು ಒಪ್ಪಂದದಂತೆ 10 ತಿಂಗಳು ಪೂರ್ಣಗೊಳಿಸುತ್ತಿದ್ದರೇನೊ.

ಇದೇ ರೀತಿಯ ಬಹಳಷ್ಟು ಪ್ರಕರಣಗಳು ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಾಣಬಹುದು. ಹೆಚ್ಚಿನ ಕಡೆ ಅವಿಶ್ವಾಸ ಹಂತದ ಮೆಟ್ಟಿಲನ್ನು ಯಾರೂ ಏರುವುದಿಲ್ಲ. ಸಂವಿಧಾನದಲ್ಲಿ ಇಲ್ಲದ ಒಳ ಒಪ್ಪಂದದಂತೆ ಇಷ್ಟಿಷ್ಟು ತಿಂಗಳು ಇಷ್ಟಿಷ್ಟು ಮಂದಿಗೆ ಎಂದು ಹಂಚಿಕೆ ಮಾಡಲಾಗಿರುತ್ತದೆ. ಅದರನ್ವಯ ಅಧ್ಯಕ್ಷರು ಪದೇ ಪದೇ ಬದಲಾಗುತ್ತಲೇ ಇರುತ್ತಾರೆ. ಇದರಿಂದಾಗಿ ಅನಿಶ್ಚಿತ ನಾಯಕತ್ವ ಎಲ್ಲೆಡೆ ಕಂಡು ಬಂದು, ಅಭಿವೃದ್ಧಿಯ ವೇಗ ಕುಂಠಿತಗೊಳ್ಳುತ್ತದೆ.

9 ವರ್ಷಕ್ಕೆ 19 ಅಧ್ಯಕ್ಷರು !
ರಾಜ್ಯದ ಎಲ್ಲಾ ಪಂಚಾಯಿತಿಗಳ ಕಥೆಯಂತೆಯೇ ಇದೆ ಮೈಸೂರು ತಾಲ್ಲೂಕು ಪಂಚಾಯಿತಿ. ಕಳೆದ 9 ವರ್ಷಗಳಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಗದ್ದುಗೆ ಕಂಡಿರುವುದು 19 ಒಡೆಯರನ್ನು.  ಅಧಿಕಾರ ಲಾಲಸೆ, ಪಕ್ಷಗಳ ರಾಜಕೀಯ, ಅಧಿಕಾರ ಹಂಚಿಕೆಯ ಒಳ ಒಪ್ಪಂದಗಳು, ಸ್ವಾರ್ಥ ಇವೆಲ್ಲಾ ಕಾರಣಗಳಿಂದಾಗಿ ಒಬ್ಬರೇ ಒಬ್ಬ ಅಧ್ಯಕ್ಷರೂ ಕಳೆದ 18 ವರ್ಷಗಳಲ್ಲಿ ತನ್ನ ಸಂಪೂರ್ಣ ಅವಧಿಯನ್ನು ಪೂರ್ಣಗೊಳಿಸಲಾಗಿಲ್ಲ.

ಒಂದು ವೇಳೆ ವರ್ಷಕ್ಕೊಬ್ಬರು ಅಧ್ಯಕ್ಷರಾಗಿದ್ದರೂ 18ಜನ ಅಧ್ಯಕ್ಷರಾಗಬೇಕಿತ್ತು. ಆದರೆ, ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ  ಸರಾಸರಿ ಅವಧಿ 9 ತಿಂಗಳಿಗೂ ಕಡಿಮೆ!  ಇವರಲ್ಲಿ ಮೂವರು ಕೇವಲ 6 ತಿಂಗಳು ಮಾತ್ರ ಅಧ್ಯಕ್ಷರಾಗಿದ್ದರೆ, ಒಬ್ಬರು 7 ತಿಂಗಳು ಹಾಗೂ  ಇಬ್ಬರು 9 ತಿಂಗಳು ಅಧ್ಯಕ್ಷರಾಗಿದ್ದಾರೆ. ಇವರಲ್ಲಿ ನೇತ್ರಾವತಿ ಅವರು ಮಾತ್ರ ಗರಿಷ್ಠ 13 ತಿಂಗಳು ಅಧ್ಯಕ್ಷರಾಗಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿಯಲ್ಲಿ ಲಭ್ಯವಾದ ದಾಖಲಾತಿಗಳು ಹೇಳುತ್ತವೆ.

ಜಿಲ್ಲಾ ಪಂಚಾಯಿತಿ ಸ್ಥಿತಿ ಇದಕ್ಕಿಂತ ಭಿನ್ನವೇನೂ ಅಲ್ಲ. ಕಳೆದ 8 ವರ್ಷಗಳಲ್ಲಿ 9 ಚುನಾಯಿತ ಅಧ್ಯಕ್ಷರನ್ನು ಕಂಡಿದೆ.
ಈ ಅವಧಿಯಲ್ಲಿ ಭಾಗ್ಯ ಅವರು ಮಾತ್ರ ಕೇವಲ 3 ತಿಂಗಳಿಗಷ್ಟೇ ಚುನಾಯಿತರಾಗಬೇಕಾಯಿತು. ಇನ್ನುಳಿದಂತೆ ಮರೀಗೌಡ 5, ಎಂ.ಎನ್. ಸಿದ್ಧಾರ್ಥ ಹಾಗೂ ರಾಜಮ್ಮ 8  , ಧರ್ಮೇಂದ್ರ 9, ಸಿದ್ದವೀರಪ್ಪ 10, ಎಂ. ಲತಾಸಿದ್ದಶೆಟ್ಟಿ 11 ತಿಂಗಳ ಅವಧಿಗೆ ಅಧ್ಯ್ಷಕ್ಷರಾಗಿದ್ದರು. 20 ತಿಂಗಳು ಅಧಿಕಾರಾವಧಿಯ ಅಧ್ಯಕ್ಷರ ಅವಧಿ ಎಲ್ಲೂ ಕೂಡ ಪರಿಪೂರ್ಣವಾದ 20 ತಿಂಗಳನ್ನು ಮುಗಿಸಿಯೇ ಇಲ್ಲ ಎಂಬುದು ಪಂಚಾಯಿತಿಗಳ ವಿಪರ್ಯಾಸ.

ಇದಕ್ಕೆ ಬಹುತೇಕ ಕಡೆ ಪಕ್ಷವಾರು ರಾಜಕೀಯ, ಮಹಿಳೆಯರನ್ನು ಅಥವಾ ಹಿಂದುಳಿದ ವರ್ಗದವರನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಹುನ್ನಾರಗಳು ಬಹುಮಟ್ಟಿಗೆ ಕೆಲಸ ಮಾಡಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಎಲ್ಲೆಡೆ ಕೇಳಿ ಬರುವ ಒಂದೇ ಮಾತು ಅವರು ಸದಸ್ಯರಿಗೆ ‘ಅಡ್ಜೆಸ್ಟ್ ಆಗಿರಲಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ಮಾತು ಕೇಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ರಾಜೀ ಪಂಚಾಯಿತಿ ಮೂಲಕ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಡಿಸಲಾಗುತ್ತಿರುವುದು ತೆರೆದ ಸತ್ಯ.

ಅವಿಶ್ವಾಸ ನಿರ್ಣಯಗಳು
07–02–2014 ರಲ್ಲಿ ಹುರ ಗ್ರಾಮಪಂಚಾಯಿತಿ ಅಧ್ಯಕ್ಷ ಸಿ.ಎಂ. ರವಿ ವಿರುದ್ದ ಅವಿಶ್ವಾಸ ನಿರ್ಣಯವಾಯಿತು.

24–01–2014ರಲ್ಲಿ ಬದನವಾಳು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಎಲ್. ಲಕ್ಷ್ಮೀ ವಿರುದ್ಧ ಅವಿಶ್ವಾಸ ನಿರ್ಣಯವಾಯಿತು.
03–01–2014ರಲ್ಲಿ  ಹುಲ್ಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಎಚ್.ಎಂ. ಬಸವರಾಜು ವಿರುದ್ಧ ಅವಿಶ್ವಾಸ ನಿರ್ಣಯವಾಯಿತು.
24–01–2014ರಲ್ಲಿ ಬಿದರಹಳ್ಳಿ, 25–01–2014ರಲ್ಲಿ ಕೆ.ಆರ್‌.ನಗರ ತಾಲ್ಲೂಕಿನ ಹೆಬ್ಬಾಳು, 27–01–2014ರಲ್ಲಿ ಕೆ.ಆರ್. ನಗರ ತಾಲ್ಲೂಕಿನ ಬೇಯಾ, 29–01–2014ರಲ್ಲಿ ಮಾವತ್ತೂರು, 14–02–2014ರಲ್ಲಿ ಎಚ್.ಡಿ. ಕೋಟೆಯ ಡಿ.ಬಿ. ಕುಪ್ಪೆ, 18–02–2014ರಲ್ಲಿ ಅಡಗೂರಿನಲ್ಲಿ ಅವಿಶ್ವಾಸ ನಿರ್ಣಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT