ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ ಮತ್ತು ನಾಡಗೀತೆ

ಚರ್ಚೆ
Last Updated 7 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಅಸಹಿಷ್ಣುತೆ ಎಂಬುದು ಈಗ  ಕೇಂದ್ರ ಬಿಟ್ಟು ರಾಜ್ಯಕ್ಕೂ ವಿಸ್ತರಿಸುತ್ತಿದೆ. ಸಾಹಿತ್ಯ ಬಿಟ್ಟು ಸಂಸ್ಕೃತಿಗೂ ಆವರಿಸುತ್ತಿದೆ. ಹೀಗೇಕೆ? ಕವಿ ಸುಮತೀಂದ್ರ ನಾಡಿಗರು ಹೊನ್ನಾವರದ ಕಾಲೇಜೊಂದರಲ್ಲಿ  ಮಾತನಾಡುತ್ತ ‘ಅಸಹಿಷ್ಣುತೆ ಹೆಸರಿನಲ್ಲಿ ಪ್ರಶಸ್ತಿ ವಾಪಸಾತಿ ಒಂದು ಫ್ಯಾಷನ್‌ ಆಗಿದೆ.

ವಾಪಸು ಮಾಡುತ್ತಿರುವ ಲೇಖಕರ ಸಂಖ್ಯೆ ಶೇ 10 ಮಾತ್ರ. ಲೋಕಸಭೆಯಲ್ಲಿ ಕೇವಲ 40 ಸ್ಥಾನ ಹೊಂದಿರುವ ಕಾಂಗ್ರೆಸ್‌ ಈ ವಾಪಸಾತಿ ಪ್ರಕ್ರಿಯೆಗೆ ಪುಸಲಾಯಿಸುತ್ತಿದೆ’ ಎಂದಿದ್ದಾರೆ (ಪ್ರ.ವಾ., ಡಿ. 2). ನಾಡಿಗರು ಇಷ್ಟಕ್ಕೆ ಸುಮ್ಮನಾಗಿಲ್ಲ. ‘ಕುವೆಂಪು ಅವರಿಗೆ ರವೀಂದ್ರನಾಥ ಟ್ಯಾಗೋರ್‌ ಅವರಂತೆ ರಾಷ್ಟ್ರಗೀತೆ ಬರೆಯಬೇಕೆಂಬ ಹಂಬಲ ಇತ್ತು. ಅದಕ್ಕಾಗಿ ಅವರು ‘ಜೈ ಭಾರತ ಜನನಿಯ ತನುಜಾತೆ’ ಬರೆದಿದ್ದಾರೆ.

ನಾಡ  ಗೀತೆಯಲ್ಲಿ ‘ಕಪಿಲ ಪತಂಜಲ ಗೌತಮ ಜಿನನುತ ಸಾಲೊಂ ದಿದೆ, 8 ಜನ ಕಪಿಲರು, 5 ಜನ ಗೌತಮರು ಇದ್ದಾರೆ. ಪತಂಜಲ ಎನ್ನುವವರು ಇಲ್ಲ. ಪತಂಜಲಿ ಎನ್ನುವವರು ಇದ್ದರು. ಜಿನನುತ ಎನ್ನುವ ವ್ಯಕ್ತಿಯೂ ಇಲ್ಲ’ (ಪ್ರ.ವಾ., ಡಿ. 5) ಎಂದು ಶಿರಸಿಯಲ್ಲಿ ಮಾತು ಮುಂದುವರಿಸಿ ದ್ದಾರೆ. ಸಾಹಿತಿಗಳು, ಸಂಸ್ಕೃತಿ ಚಿಂತಕರು ಸುಮ್ಮನಾಗಿ ಬಿಟ್ಟರೋ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ. ಅಪ್ಪಾಜಿಗೌಡರು, ಈ ಬಗ್ಗೆ ನಾಡಿಗರು ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದ್ದು ಸಹ ಪತ್ರಿಕೆ ಯಲ್ಲಿದೆ. ಕುವೆಂಪು ಎಂಬ ಮಹಾಚೇತನ ಜಾತಿ ಮತದ ಪರವೂ ಅಲ್ಲ, ವಿರೋಧಿಯೂ ಅಲ್ಲ. ಅದೊಂದು ಬುದ್ಧ ಪರಂಪರೆ. ವಿವೇಕಾನಂದರ ಮಾದರಿ. ವಿಶ್ವಮಾನವತ್ವದ ಪರಿ.

‘ಅಸಂತೋಷವೇ ಅಗ್ನಿ. ಹೀನ ಅಸೂಯಾದಿಭಾವದ ಮತ್ಸರಾಗ್ನಿಯು ಪಾವಕಾಗ್ನಿಯಲ್ಲ; ಚಿತೆ’ ಎಂದು ಭಾರತ ಸಂಸ್ಕೃತಿ ಸಾಹಿತ್ಯ ಕುರಿತ ಚಿಂತನೆಯಲ್ಲಿ ಶಂಬಾ ಜೋಷಿಯವರು ಹೇಳಿರುವುದು ಈ ರೀತಿಯ ಅಸಂತೋಷ, ಅಸಹಿಷ್ಣುತೆ ಬಗ್ಗೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.

ಮಂಗಳ ಗಂಗೋತ್ರಿಯಲ್ಲಿ ಕುವೆಂಪು ಅವರ ಮಹಾಕಾವ್ಯ ಪಠ್ಯವಾಗಿತ್ತು. ಮಹಾಕವಿಯನ್ನು ನೋಡಬೇಕು, ಕೆಲವು ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕೆಂದು ಮೈಸೂರಿಗೆ ನಾನು ಬಂದೆನು. 1974ರ ಏಪ್ರಿಲ್‌ ಎರಡನೇ ವಾರ ಎಂಬ ನೆನಪು. ‘ಉದಯ ರವಿ’ಯ ವರಾಂಡದಲ್ಲಿ ಮಹಾಕವಿ ಎದುರು ಕುಳಿತು ಮಾತನಾಡುತ್ತಾ ‘ಸಾರ್‌ ಕುರ್ತಕೋಟಿಯವರು ಹೀಗೆ ಹೇಳುತ್ತಾರಲ್ಲ!’ ಅಂದೆ. ತುಸು ಮೌನವಾದರು. ‘ನೋಡಿ ಹಸುವಿನ ಕೆಚ್ಚಲಿನಲ್ಲಿ ಹಾಲೂ ಇರುತ್ತದೆ, ರಕ್ತವೂ ಇರುತ್ತದೆ. ಉಣ್ಣೆ ಅದೇನನ್ನು ಕುಡಿಯುತ್ತದೆ ಹೇಳಿ’ ಎಂದರು. ‘ಅದು ರಕ್ತವನ್ನು ಮಾತ್ರ ಕುಡಿಯುತ್ತದೆ. ಹಾಗೆ ಕೆಲವರು’ ಎಂದರು. ಮೌನವಾದರು. ‘ಶೂದ್ರನಿಗೆ ಮುಕ್ತಿಯಿಲ್ಲ ಎನ್ನುವ ಧರ್ಮ ಅದೊಂದು ಧರ್ಮವೆ’ ಎಂದರು.

ನಿತ್ಯನಾರಕಿ ದ್ವೈತ ವಿಚಾರದ ಬಗ್ಗೆ ಆಲೋಚಿಸುತ್ತಿದ್ದರೆಂದು ಕಾಣುತ್ತದೆ. ಮುಂದೆ ಒಂದೆರಡು ದಿನಗಳಲ್ಲಿ ಪತ್ರಿಕೆಯಲ್ಲಿ ಸುದ್ದಿಯಿತ್ತು. ಅದು 1974ರ ಏಪ್ರಿಲ್‌ 20. ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ‘ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ ಉದ್ಘಾಟನೆಯ ಅವರ ಭಾಷಣವಾಗಿತ್ತು. ನಿತ್ಯನಾರಕಿ– ದ್ವೈತ ವಿಚಾರ, ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಬೂಸಾ ಎಂಬ ಬವಲಿಂಗಪ್ಪನವರ ಮಾತನ್ನು ಅನುಮೋದಿಸಿದ ವಿವರ ಅದರಲ್ಲಿತ್ತು. ಮುಂದೆ ಏನಾಯ್ತು, ಹೇಗೆ ತಣ್ಣಗಾಯ್ತು ಎಂಬುದು ಚರಿತ್ರೆ. ಅದು ಭಾರತ ದೇಶದ ಸಾಂಸ್ಕೃತಿಕ ಚರಿತ್ರೆಯೂ ಹೌದು. ಇಂಥದ್ದನ್ನು ಅರಿವಿಲ್ಲದೆ ಮಾತನಾಡುವಷ್ಟು ನಾಡಿಗರು ದಡ್ಡರಲ್ಲ.

ನಾಡಗೀತೆಯನ್ನು ಸರ್ಕಾರ ಪರಿಗಣಿಸಿದೆ. 7.12.1928ರಲ್ಲಿ ಬರೆದ ಕವನವಿದು. ‘ಕೊಳಲು’ ಕವನ ಸಂಕಲನದಲ್ಲಿದೆ. ಗಾಂಧಿಯವರನ್ನು ಮಹಾತ್ಮ ಎಂದು ಗೌರವಿಸಿದ ರವೀಂದ್ರನಾಥರ ಶಾಂತಿನಿಕೇತನಕ್ಕೆ ಸ್ಥಿರ ಸ್ವಭಾವದ ಕುವೆಂಪು ಚಲಿಸಿ ಹೋಗಿ ಬಂದಿದ್ದಾರೆ. ರಾಷ್ಟ್ರ ಕಲ್ಪನೆ ಹಾಗೂ ಒಕ್ಕೂಟ ಕಲ್ಪನೆಯ ಅನೇಕ ಕವನಗಳು ಅದರಲ್ಲಿವೆ. ಅವರ ಆತ್ಮಚರಿತ್ರೆಯಲ್ಲಿ ರವೀಂದ್ರರ ಮಟ್ಟಕ್ಕೇರುವ, ಏರಿದ, ಅನೇಕ ಸ್ವಾಭಿಮಾನದ ವಿವರಗಳಿವೆ. ಗಾಂಧಿ ಅವರೊಡನೆ ಸ್ಥಿರವಾಗಿ ನಿಂತು ರಾಷ್ಟ್ರಜಾಗೃತಿ ನಿರೂಪಿಸಿದ ಅನೇಕ ಕವನಗಳು, ವಿಚಾರಗಳು ಇವೆ. ರವೀಂದ್ರರೊಡನೆ ನೊಬೆಲ್‌ ಪ್ರಶಸ್ತಿಗೇರಬೇಕಾದ ಮನೋಸ್ಥೈರ್ಯ ಕೂಡ ಅವರಲ್ಲಿತ್ತು.

ಯಾರೇ ಆಗಲಿ ಕುವೆಂಪು ಹಾಗೂ ಬೇಂದ್ರೆ ಅವರ ಕವನಗಳನ್ನು ಸರಿಯಾಗಿ ಓದಲು ಬರದಿದ್ದರೆ ವಿಶ್ಲೇಷಣೆ ಮಾಡಲು ಹೋಗಬಾರದು. ಹಾಗೆ ಮಾಡಿದರೆ ಅದು ದಡ್ಡತನದ ಪ್ರದರ್ಶನವಾಗುತ್ತದೆ. ಇಲ್ಲವೆ ಅಸಂತೋಷದ ವಿಚಾರವಾಗುತ್ತದೆ. ಇಲ್ಲವೇ ಪಂಥೀಯ ಅಸಹಿಷ್ಣುತೆಯಾಗುತ್ತದೆ.

ರಾಷ್ಟ್ರಗೀತೆಯೂ ಚರ್ಚೆಗೊಳಗಾಗಿತ್ತು. ನಾಡಗೀತೆ ಇದಕ್ಕೆ ಹೊರತೇನೂ ಅಲ್ಲ. ಮಾಧ್ವರ ಹೆಸರು ಬಿಟ್ಟುಹೋಗಿತ್ತೆಂದೂ, ಯಾವಾಗ ಸೇರಿತೆಂದೂ, ಅದಕ್ಕೆ ಏನೇನು ಕಾರಣವೆಂದೂ ಈಗಾಗಲೇ ಬೇಕಾದಷ್ಟು ಚರ್ಚೆಗಳಾಗಿ ಒಂದು ಹಂತಕ್ಕೆ ಬಂದಿರುವಾಗ ನಾಡಿಗರು ಇದನ್ನು ಕೆಣಕುವ ಉದ್ದೇಶವೇನು? ಇದೇ ಅಸಹಿಷ್ಣುತೆ. ಕವನ ಉದ್ದವಾಯ್ತೆಂದು, ಅದು ಹೀಗೆ ಹಾಗೆ ಎಂದು ಹೇಳುವವರಿದ್ದಾರೆ.

ಇದರ ಪರಿಷ್ಕಾರ ಹೇಗೆಂಬುದನ್ನು ಚರ್ಚಿಸಿ ಸಲಹೆ ನೀಡಲು ನಾಡಿಗರು ಕೂಡ ಅರ್ಹರಿರಬಹುದು. ನಾಡಗೀತೆಯಲ್ಲಿರುವ ಕರ್ನಾಟಕ ಮಾತೆ ಭಾರತೀಯ ತನುಜಾತೆ. ಮಹಾಕವಿಯು ಗೀತೆಯನ್ನು ತಿದ್ದಿ ತೀಡಿ ಪರಿಷ್ಕರಿಸಿ ಜಲ, ನೆಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಧರ್ಮ, ಆಳ್ವಿಕೆ, ಪುರಾಣ, ಕಲೆ, ಸಂಗೀತ ಇವೆಲ್ಲದರ ಸಾರವೆಂಬಂತೆ ಕಾವ್ಯ ಸಂಸ್ಕರಣೆ ನೀಡಿ ಅದಕ್ಕೊಂದು ಪ್ರಾಸ, ಲಯ, ಸಂಗೀತ ಹೊದಿಕೆ ನೀಡಿ ನಾಡಿಗೆ ನೀಡಿದ್ದಾರೆ.

ಈ ನಾಡು ಭಾರತಾಂಬೆಯ ಒಕ್ಕೂಟದ ವ್ಯವಸ್ಥೆ. ಅದು ವಿಶ್ವಮಾನವ ಸಂದೇಶದ ಸಂಕೇತವೆಂದು ಗಮನವಿಟ್ಟಿದ್ದಾರೆ. ಕಪಿಲರು ಎಷ್ಟು ಜನ, ಗೌತಮರು ಎಷ್ಟು ಜನ, ಪತಂಜಲವೋ, ಪತಂಜಲಿಯೋ, ಜಿನನೋ ಜಿನನುತನೋ ಎಂದು ಅರಿಯದವರು ಕುವೆಂಪು ಅಲ್ಲ ಎಂಬುದನ್ನು ನಾಡಿಗರಂಥವರು ಅರಿಯಬೇಕು. ಎಲ್ಲೋ ನಿಂತು ಹೇಗೋ ಮಾತಾಡಿ ಅದಕ್ಕೊಂದು ರಾಜಕೀಯ ಬಣ್ಣ ನೀಡಿ ವರ್ತಮಾನದ ಪ್ರಶಸ್ತಿ ವಾಪಸಾತಿಯೊಡನೆ ನಾಡಗೀತೆಯನ್ನು, ನಾಡಿನ ಮಹಾಕವಿಯನ್ನು ಹಗುರಗೊಳಿಸುವ ಮೊದಲು ತಾವು ಕುವೆಂಪು ಕವನಗಳನ್ನು ಸರಿಯಾಗಿ ಓದಿಕೊಳ್ಳಬೇಕೆಂದು ನಾಡಿಗರನ್ನು ನಾಡು ಬಯಸುತ್ತದೆ.

ವಿಮರ್ಶಕರ ಅನಿಸಿಕೆ
ಕುವೆಂಪು ವಿರಚಿತ ನಾಡಗೀತೆಯನ್ನು ಟೀಕಿಸಿರುವ ಸುಮತೀಂದ್ರ ನಾಡಿಗರು ಕ್ಷಮೆ ಯಾಚಿಸುವಂತೆ ಒಕ್ಕಲಿಗರ ಸಂಘ ಒತ್ತಾಯಿಸಿದ ವಿಷಯ ಓದಿ ವಿಷಾದವೆನಿಸಿತು (ಪ್ರ.ವಾ., ಡಿ. 5).

ನಾಡಿಗರು ಒಬ್ಬ ಕಾವ್ಯ ವಿಮರ್ಶಕರಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯ ಮತ್ತು ಕವಿಗಳ ಕುರಿತು ಎಷ್ಟೋ ಉಪನ್ಯಾಸಕರು ಹಾಗೂ ವಿಮರ್ಶಕರು ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗ ನಾಡಿಗರು ಕ್ಷಮೆ ಕೋರುವಂತೆ ಒತ್ತಾಯಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅಸಹಿಷ್ಣುತೆ.

ಡಾ. ಅರ್ಜುನ ಯ. ಪಂಗಣ್ಣವರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT