ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೀಮ ಅನುಪಮ ಚಿತ್ತಾಲ

Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನಾನು ಮೊದಲ ಸಲ, ಬಸ್ಸಿನಲ್ಲಿ, ಮುಂಬಯಿಗೆ ಹೋದದ್ದು ಸುಮಾರು ೧೯೭೮ರಲ್ಲಿ. ಬಸ್ಸು ಮುಂಬಯಿ ತಲುಪಿದಾಗ ಸಂಜೆ ಆರು ಗಂಟೆ. ಬಸ್ ಸ್ಟ್ಯಾಂಡಿಗೆ ಸ್ವತಃ ಯಶವಂತ ಚಿತ್ತಾಲರೇ ಕಾರು ಡ್ರೈವ್ ಮಾಡಿಕೊಂಡು ಬಂದು ಎದುರುಗೊಂಡರು– ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ. ಅಂದು ಮಾರ್ಗ ಮಧ್ಯದಲ್ಲಿ ನಡೆದ ಒಂದು ಘಟನೆ ನನ್ನ ಜೀವನಪರ್ಯಂತ ನಾನು ಮರೆಯದಂಥದು. 

ನಮ್ಮ ಕಾರು ಚಲಿಸುತ್ತಿರುವಾಗ ಒಂದು ಬಸ್ ಸ್ಟಾಪಿನಲ್ಲಿ ದಾಂಡಿಗನೊಬ್ಬ ಯುವತಿಯೊಬ್ಬಳನ್ನು ಎಳೆದಾಡುತ್ತಿರುವ ದೃಶ್ಯ. ಚಿತ್ತಾಲರು ಒಂದೆರಡು ಮಾರು ದೂರ ಹೋಗಿ ಕಾರನ್ನೇನೋ ನಿಲ್ಲಿಸಿದರು. ಆದರೆ ಹಿಂದೆ ಬೆನ್ನಟ್ಟಿ ಬರುವಂತಿದ್ದ ಸಾಲು ಸಾಲು ಕಾರುಗಳು ಅದೆಷ್ಟು ಅಬ್ಬರದಿಂದ ಕಿರಿಚತೊಡಗಿದವೆಂದರೆ ಅವರು ಕೆಲವೇ ಕ್ಷಣಗಳ ನಂತರ ಕಾರನ್ನು ಸ್ಟಾರ್ಟ್ ಮಾಡಬೇಕಾಯಿತು.  

ಮನೆ ತಲುಪಿದ ಮೇಲೆ ಆ ರಾತ್ರಿ ಮಲಗುವವರೆಗೂ ಅವರಿಗೆ ಆ ಯುವತಿಯದೇ ಯೋಚನೆ. ಅಷ್ಟೇಕೆ, ಮರುದಿನವಿಡೀ ಅವರು ‘ಛೆ ಛೆ, ಆವನು ಆ ಹುಡುಗಿಯನ್ನು ಎಲ್ಲಿಗೆ ಎಳೆದುಕೊಂಡು ಹೋಗಿ ಏನು ಮಾಡಿದನೋ; ನಾನಾದರೂ ಅವಳಿಗೆ ತುಸು ಆಸರೆಯಾಗಬಹುದಿತ್ತಲ್ಲಾ’ ಎಂದು ಪೇಚಾಡಿಕೊಂಡರು. ಆ ಸಂಗತಿಯನ್ನೇ ಮತ್ತೆ ಮತ್ತೆ ಕೇಳಿಸಿಕೊಂಡ ಕಾರಣ ಅವರ ಪತ್ನಿ ಮತ್ತು ಮಕ್ಕಳು ಒಂದಿಷ್ಟು ಅಸ್ವಸ್ಥರಾಗುವಂತಾಯಿತು.

ಇದೊಂದು ಘಟನೆ ನನಗೆ ಚಿತ್ತಾಲರ ಅನೇಕ ಕತೆಗಳನ್ನು, ಕಾದಂಬರಿಗಳ ಕೆಲವು ಭಾಗಗಳನ್ನು ನೆನಪಿಸುತ್ತಿರುತ್ತದೆ. ಉದಾಹರಣೆಗೆ ಅವರ ‘ಕತೆಯಾದಳು ಹುಡುಗಿ’ಯ ಈ ಭಾಗವನ್ನು ನೋಡಬಹುದು:
ಹಾಸಿಗೆಯಲ್ಲಿ ಕುಳಿತಲ್ಲೇ, ಹಿಂದೆ ಎಂದೂ ಮಾಡಿರದ ಹಾಗೆ ಕೈಮುಗಿದು ಪ್ರಾರ್ಥಿಸಿದೆ: ದೇವರೇ, ಎಲ್ಲರಿಗೂ ಅನ್ನ, ಬಟ್ಟೆ, ಇರಲು ಜಾಗ, ವಿದ್ಯೆ, ಬುದ್ಧಿ, ನೌಕರಿ ಇರುವಂತಹ; ಜಾತಿಗಳಿಲ್ಲದ, ವರ್ಗಭೇದವಿಲ್ಲದ, ಶೋಷಣೆ ಇಲ್ಲದ ಸುಖೀಸಮಾಜ ಹುಟ್ಟಿಬಂದಾಗ ಅದರಲ್ಲಿ ನಮ್ಮ ಚಿಕ್ಕ ಜಾನಕಿಯ ಬಗ್ಗೆ ಕತೆ ಬರೆಯುವ, ಬರೆದಾಗ ಪ್ರೀತಿಯಿಂದ ಓದುವ ಜನರೂ ಇರಲಿ....

ಅಪ್ಪನನ್ನೇ ಅಣ್ಣಾ ಎಂದು ಕರೆಯುತ್ತಿದ್ದ ನಮ್ಮ ಜಾನಕಿ ಆ ರಾತ್ರಿ ಮೊದಲ ಬಾರಿಗೆ ನನ್ನ ಕನಸಿನಲ್ಲಿ ಬಂದು ಸಿಹಿಯಾಗಿ ನಕ್ಕಳು. ಎಷ್ಟು ಸಿಹಿಯಾಗಿ ಅಂದರೆ ಬೆಳಿಗ್ಗೆ ಎಚ್ಚರವಾಗಿ ಹಾಸಿಗೆಯಿಂದ ಏಳುತ್ತಿರುವಾಗಲೇ ಮನಸ್ಸನ್ನು ಮುತ್ತಿ ನಿಂತ ಬೆಚ್ಚಗಿನ ಭಾವನೆಯೊಂದು ತನ್ನ ಹುಟ್ಟಿಗೆ ತಾನೇ ಬೆರಗುಗೊಂಡು ಅದರ ಮೂಲ ಹುಡುಕುವುದರಲ್ಲಿ ತೊಡಗಿರುವಂಥ ಅನ್ನಿಸಿಕೆ. ಹೆಂಡತಿ ಹಾಸಿಗೆಯಲ್ಲಿರಲಿಲ್ಲ. ಅಡುಗೆಯ ಮನೆಯಲ್ಲಿ ಚಹದ ಸಿದ್ಧತೆಯಲ್ಲಿರಬೇಕು ಎಂದುಕೊಳ್ಳುವಷ್ಟರಲ್ಲಿ ನಿನ್ನೆ ನಡೆದದ್ದೆಲ್ಲವೂ ನೆನಪಿಗೆ ಬರಹತ್ತಿತು.

ಬರಹತ್ತಿದ್ದೇ ನನ್ನ ಮನಸ್ಸು ಒಳಗೊಳಗೇ ಒಂದು ದೊಡ್ಡ ನಿರ್ಧಾರಕ್ಕೆ ಸಿದ್ಧವಾಗುತ್ತಿದೆ ಎನ್ನುವಂಥ ಅರಿವು... ನಾಷ್ಟಾಗೆ ಕುಳಿತಾಗ ಹೇಳಿದೆ: ಅನಾಥಾಶ್ರಮಕ್ಕೆ ಹೋಗಿ ಒಂದು ಮಗು ತರೋಣ ಎನ್ನುವಷ್ಟರಲ್ಲಿ ಗಂಟಲು ಬಿಗಿದುಬಂದಂತಾಗಿ ಮಾತು ಮುಂದುವರಿಸದೆ ಹೆಂಡತಿಯ ಕಣ್ಣುಗಳಲ್ಲಿ ದೃಷ್ಟಿ ನೆಟ್ಟು ಕೂತೆ.. .. ಸಹಜ ಸ್ಫೂರ್ತಿಯಿಂದ ಒದಗಿದ ಈ ಕೃತ್ಯದ ಫಲವಾಗಿ ಮನೆಗೆ ಬಂದ ಮಗು ನಮ್ಮ ಮಗುವಾಗಿ ಬೆಳೆದ ಮಾತ್ರಕ್ಕೇ ಕಷ್ಟಪಡುವಂತಾಗುವುದಾದರೆ ಹೆದರಬೇಕಾಗಿಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅನ್ಯಾಯಕ್ಕೆ ಬಾಗದೇ ತಲೆಯೆತ್ತಿ ನಿಲ್ಲುವ ತಾಕತ್ತು, ಹೋರಾಡುವ ಧೈರ್ಯ ಮಾನವಚೈತನ್ಯಕ್ಕೆ ಇದ್ದೇ ಇರುತ್ತವೆ...
ಇವೆರಡರಲ್ಲಿ ಒಂದು ನಿಜಕ್ಕೂ ನಡೆದ ಘಟನೆ. ಇನ್ನೊಂದು ಕತೆಗಾರನ ಕಲ್ಪನೆಯಲ್ಲಿ ಅರಳಿದ ಪ್ರತಿವಾಸ್ತವ. ಎರಡಕ್ಕೂ ಮಧ್ಯೆ ಅಂಥ ಕಂದರವೇನೂ ಇಲ್ಲವೆಂದು ತಿಳಿಯುವುದು ಕಷ್ಟವಲ್ಲ.

ನನಗೆ ಯಶವಂತ ಚಿತ್ತಾಲರ ಪರಿಚಯವಾದದ್ದು ತೀರ ಆಕಸ್ಮಿಕವಾಗಿ. ೧೯೭೪ರ ಸುಮಾರಿನಲ್ಲಿ ಅವರೊಂದು ದಿನ ಗೋಪಾಲಕೃಷ್ಣ ಅಡಿಗರನ್ನು ನೋಡಲೆಂದು ಗಾಂಧಿ ಬಜಾರಿನಲ್ಲಿ ಸುಮತೀಂದ್ರ ನಾಡಿಗರು ನಡೆಸುತ್ತಿದ್ದ ಪುಸ್ತಕದ ಅಂಗಡಿಗೆ ಬಂದಿದ್ದರು. ಅಂದು ಅದೇಕೋ ಅಡಿಗರು ಬರಲಿಲ್ಲ. ನಾಡಿಗರು ಕಾಫಿ ಕುಡಿಯುವುದಕ್ಕಾಗಿ ಚಿತ್ತಾಲರನ್ನು ಹೋಟೆಲಿಗೆ ಕರೆದುಕೊಂಡು ಹೋದಾಗ ಜೊತೆಗೆ ನಾನೂ ಇದ್ದೆ. ಅವರ ಎರಡು ಕಥಾ ಸಂಕಲನಗಳನ್ನೂ ‘ಮೂರು ದಾರಿಗಳು’ ಕಾದಂಬರಿಯನ್ನೂ ಓದಿಕೊಂಡಿದ್ದ ನನಗೆ ಸಹಜವಾಗಿಯೇ ಅವರ ಬಗ್ಗೆ ಕುತೂಹಲ, ಮೆಚ್ಚುಗೆ ಎರಡೂ ಇದ್ದವು.

ಅಂದು ನಾನು ಅವರ ಬರವಣಿಗೆಯ ಬಗ್ಗೆ ಆಡಿದ ಒಂದೆರಡು ಮಾತು ನನ್ನನ್ನು ಅವರ ಆತ್ಮೀಯ ವಲಯದೊಳಕ್ಕೆ ಕರೆದೊಯ್ಯುವಂತಾದದ್ದು ನಿಜಕ್ಕೂ ನನ್ನ ಸುಕೃತವೆಂದೇ ತಿಳಿದಿದ್ದೇನೆ. ಆಮೇಲೆ ನಾನು ‘ಮಲ್ಲಿಗೆ’ ಮಾಸಪತ್ರಿಕೆಯ ಸಂಪಾದಕನಾದೆ. ಆಗ ನನಗೆ ಅವರಿಂದ ಒಂದು ಅಂಕಣ ಬರೆಸಬೇಕೆನ್ನಿಸಿತು. ಸಾಕಷ್ಟು ಒತ್ತಾಯಿಸಿದ ಮೇಲೆ ಒಪ್ಪಿಕೊಂಡರು. ತಿಂಗಳಿಗೊಮ್ಮೆ ಸುಮಾರು ಒಂದು ವರ್ಷ ‘ಸ್ಪಂದನ’ ಎಂಬ ಶೀರ್ಷಿಕೆಯಲ್ಲಿ ಅವರು ಬರೆದದ್ದು ಇವತ್ತು ಕನ್ನಡದ ಕ್ಲಾಸಿಕ್ ಪ್ರಬಂಧಗಳೆನಿಸಿವೆ.

‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದ ಈ ಪ್ರಬಂಧಗಳಿಗೆ ಮುನ್ನುಡಿ ಬರೆಯುತ್ತ ಚಿತ್ತಾಲರು ಹೇಳಿದ್ದಿದು: ಮನಸ್ಸಿನಲ್ಲಿ ಹೊಳಹು ಹಾಕಿದ ವಿಚಾರಗಳನ್ನು ಕಾಗದಕ್ಕೆ ಇಳಿಸಲು ಕಾರಣರಾದವರು ಮಾತ್ರ ಆತ್ಮೀಯ ಗೆಳೆಯರಾದ ಎಸ್. ದಿವಾಕರರು. ಅವರು ಬೆಂಗಳೂರಿನಿಂದ ಹೊರಡುವ ‘ಮಲ್ಲಿಗೆ’ ಎಂಬ ಜನಪ್ರಿಯ ಮಾಸಪತ್ರಿಕೆಯ ಸಂಪಾದಕರಾಗಿದ್ದಾಗ ಈ ಪ್ರಬಂಧಗಳನ್ನು ಒಂದು ಮಾಲಿಕೆಯಾಗಿ ಬರೆದು ಕೊಡಬೇಕೆಂದು ಕೇಳಿಕೊಂಡರಷ್ಟೇ ಅಲ್ಲದೆ ಪ್ರೀತಿಯ ಒತ್ತಾಯದಿಂದ ಬರೆಯಿಸಿಕೊಂಡರು ಕೂಡ.

ಇಂಥ ಪ್ರಬಂಧಗಳನ್ನು ನಾನು ಬರೆಯಬಹುದು ಎನ್ನುವುದರಲ್ಲಿ ನನಗಿಂತ ಅವರಿಗೇ ಹೆಚ್ಚಿನ ವಿಶ್ವಾಸವಿದ್ದಂತಿತ್ತು: ನನ್ನಲ್ಲಿ ಇಂಥ ವಿಶ್ವಾಸವನ್ನು ಕುದುರಿಸಲು, ಕುದುರಿಸಿದ್ದನ್ನು ಗಟ್ಟಿಯಾಗಿಸಲು ಅವರು ಪಟ್ಟ ಪರಿಶ್ರಮ, ಉಪಯೋಗಿಸಿದ ‘ಹಿಕ್ಮತಿ’ಗಳು ನಾನೆಂದೂ ಮರೆಯಲಾರದ ಸಂಗತಿಗಳು. ‘ಮಲ್ಲಿಗೆ’ಯಲ್ಲಿ, ಸತತವಾಗಿ ಒಂದು ವರ್ಷ ಒಂದು ತಿಂಗಳು ‘ಸ್ಪಂದನ’ ಮಾಲಿಕೆಯಾಗಿ ಇಲ್ಲಿಯ ಪ್ರಬಂಧಗಳು (ಮೂರನ್ನು ಬಿಟ್ಟು) ಪ್ರಕಟವಾಗಲು ತೊಡಗಿದಾಗ ಓದುಗರಿಂದ, ಗೆಳೆಯರಿಂದ ಬಂದ ಉತ್ಸಾಹದ ಪ್ರತಿಕ್ರಿಯೆ ಬರೆಯುವ ಧೈರ್ಯ ಕುಗ್ಗದಂತೆ ನೋಡಿಕೊಂಡಿತು: ದೂರದ ಮುಂಬಯಿಯಲ್ಲಿ ತೀರ ಒಬ್ಬಂಟಿಯಾಗಿ– ನನ್ನಷ್ಟಕ್ಕೆ ನಾನು ಎಂಬಂತೆ– ಬರೆಯುವುದೇ ಅಭ್ಯಾಸವಾಗಿಬಿಟ್ಟ ನನಗೆ ‘ಶಿಕಾರಿ’ಗೆ, ಆನಂತರ ಬಂದ ‘ಸ್ಪಂದನ’ಕ್ಕೆ ಸಿಕ್ಕ ಉತ್ಸಾಹದ ಪ್ರತಿಸ್ಪಂದನ ನನ್ನ ಸಾಹಿತ್ಯಕ ಜೀವನದ ಅತ್ಯಂತ ಪ್ರಿಯವಾದ, ನೆನೆದ ಪ್ರತಿಸಲ ಹೃದಯ ತುಂಬಿ ಬರಲು ಕಾರಣವಾಗುವ ಘಟನೆಯಾಗಿದೆ.

ಆಮೇಲೆ ನನ್ನ ತಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ನನ್ನನ್ನು ಸಾಂತ್ವನಗೊಳಿಸಿದ್ದು, ತೀರ ಸರಳವಾಗಿ ನಡೆದ ನನ್ನ ಮದುವೆಗಾಗಿ ಮುಂಬಯಿಯಿಂದ ಬಂದು ಹರಸಿದ್ದು, ಸುಮಾರು ಒಂದು ವಾರ ನನ್ನನ್ನು ಮುಂಬಯಿಗೆ ಕರೆಸಿಕೊಂಡು ತಮ್ಮ ಮನೆಯಲ್ಲಿ ನಾನೆಂದಿಗೂ ಮರಯಲಾಗದಂಥ ಆತಿಥ್ಯ ನೀಡಿದ್ದು, ‘ಕತೆಯಾದಳು ಹುಡುಗಿ’ ಸಂಕಲನಕ್ಕೆ ನನ್ನಿಂದ ಮುನ್ನುಡಿ ಬರೆಸಿದ್ದು– ಇವೆಲ್ಲಕ್ಕೂ ಚಿತ್ತಾಲರ ಅಂತಃಕರಣವಷ್ಟೇ ಕಾರಣ. 

ಅವರು ದೂರದ ಮುಂಬಯಿಯಲ್ಲಿದ್ದರಷ್ಟೆ. ಕನ್ನಡ ಕಿವಿಗೆ ಬೀಳದ ಆ ಪರಿಸರದಲ್ಲಿ ಅವರು ಬಹುಶಃ ತಮ್ಮ ಒಬ್ಬಂಟಿತನವನ್ನು ಕತೆ, ಕಾದಂಬರಿ ಬರೆಯುವ ಮೂಲಕ ಕಳೆದುಕೊಳ್ಳುತ್ತಿದ್ದರೋ ಏನೊ. ಅಮೆರಿಕನ್ ಕತೆಗಾರ ಬರ್ನಾರ್ಡ್ ಮಾಲಮಡ್ ಒಮ್ಮೆ ಏಕಾಂಗಿಯಾಗಿ ಕತೆಗಳನ್ನು ಸೃಷ್ಟಿಸುವುದಿದೆಯಲ್ಲ, ಅದೇ ನಮ್ಮ ಒಬ್ಬಂಟಿತನವನ್ನು ನೀಗಿಕೊಳ್ಳುವ ಸರಿಯಾದ ಮಾರ್ಗ ಎಂದದ್ದು ಬಹುಶಃ ಈ ಅರ್ಥದಲ್ಲಿ.

ತಾವು ತಪಸ್ಸಿನಂತೆ ಕುಳಿತು ಬರೆಯುತ್ತಿದ್ದ ಕೃತಿಗಳನ್ನು ಕರ್ನಾಟಕದ ಯಾವುದೋ ಭಾಗದಲ್ಲಿ ಯಾರೋ ಓದಿದ್ದಾರೆಂದರೆ ಸಾಕು, ತುಂಬ ಸಂತೋಷದಿಂದ ಅವರ ಮೈ ನವಿರೇಳುತ್ತಿತ್ತು. ಒಳ್ಳೆಯ ಸಾಹಿತ್ಯ ಓದಿದವರು ಒಳ್ಳೆಯ ಮನುಷ್ಯರೂ ಆಗಿರುತ್ತಾರೆಂಬ ನಂಬಿಕೆ ಅವರದು. ೧೯೮೫ರಲ್ಲಿ ಎಂದು ಕಾಣುತ್ತದೆ, ಚಿತ್ತಾಲರು ತಮ್ಮ ಕಂಪೆನಿಯ ಕೆಲಸದ ಪ್ರಯುಕ್ತ ಎರಡು ದಿನಗಳ ಮಟ್ಟಿಗೆ ಬೆಂಗಳೂರಿಗೆ ಬಂದಿದ್ದರು. ಸಾಮಾನ್ಯವಾಗಿ ಅವರು ಹಾಗೆ ಬಂದಾಗಲೆಲ್ಲ ಲೇಖಕ ಮಿತ್ರರನ್ನು ಹೋಟೆಲಿಗೆ ಕರೆಯುತ್ತಿದ್ದದ್ದು ರೂಢಿ. (ಆ ಕಾಲದಲ್ಲಿ ಬೆಂಗಳೂರಲ್ಲಿದ್ದದ್ದು ಎರಡೇ ಪಂಚತಾರಾ ಹೋಟೆಲುಗಳು.

ಅವರು ಸಾಮಾನ್ಯವಾಗಿ ಇಳಿದುಕೊಳ್ಳುತ್ತಿದ್ದದ್ದು ಹೋಟೆಲ್ ಆಶೋಕಾದಲ್ಲಿ). ಹಾಗೆ ಒಂದು ಸಂಜೆ ಡಿ.ಆರ್. ನಾಗರಾಜರನ್ನು ಆಮಂತ್ರಿಸಿದ್ದರಂತೆ; ಸಾಹಿತ್ಯದ ಬಗ್ಗೆ ಚರ್ಚಿಸುತ್ತ ಊಟ ಮಾಡಿದ ಮೇಲೆ ಅವರಿಗೆ ತಮ್ಮ ಕಂಪೆನಿಯ ಪ್ರಚಾರಕ್ಕಾಗಿ ತಯಾರಿಸಲಾಗಿದ್ದ ಒಂದು ಪೆನ್ನನ್ನೂ ಇನ್ನೊಂದು ಟ್ರೇಯನ್ನೂ ನೀಡಿದರಂತೆ. ಈ ಸುದ್ದಿ ತಿಳಿದ ಶೂದ್ರ ಶ್ರೀನಿವಾಸ ತಮ್ಮ ‘ಶೂದ್ರ’ ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಈಚೆಗೆ ಬೆಂಗಳೂರಿಗೆ ಬಂದಿದ್ದ ಚಿತ್ತಾಲರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪಂಚತಾರಾ ಹೋಟೆಲಿನಲ್ಲಿ ಅಭಿಮಾನಿಗಳು ಕೆಲವರಿಗೆ ತಟ್ಟೆ ಹಂಚಿದರಂತೆ ಎಂದೇನೋ ಬರೆದಿದ್ದರು. ಅದೇ ಸಂದರ್ಭದಲ್ಲಿ ನಾನು ಮುಂಬಯಿಯಲ್ಲಿದ್ದೆ.

ಸ್ವಭಾವತಃ ಸೂಕ್ಷ್ಮ ಪ್ರಕೃತಿಯವರಾದ ಚಿತ್ತಾಲರು ಅದನ್ನು ಓದಿ ತುಂಬ ನೊಂದುಕೊಂಡಿದ್ದರು. ನನ್ನನ್ನು ನೋಡಿದ್ದೇ ‘ನೋಡಿ, ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಶೂದ್ರ ಶ್ರೀನಿವಾಸ ನನಗೆ ಸಿಕ್ಕಿದ್ದರು. ನನ್ನ ಕತೆಗಳ ಬಗ್ಗೆ ಒಳ್ಳೆಯ ಮಾತಾಡಿದ್ದರು. ಆಗ ಅವರ ಕೈಯಲ್ಲಿ ಎರಿಕ್ ಫ್ರಾಮ್ ಬರೆದ ಪುಸ್ತಕವೊಂದಿತ್ತು. ಎರಿಕ್ ಫ್ರಾಮ್‌ನನ್ನು ಓದಿಕೊಂಡವರು ಹೀಗೆ ಬರೆಯಲು ಹೇಗೆ ಸಾಧ್ಯ?’ ಎಂದು ಕೇಳಿದರು. ಒಂದೆರಡು ಸಲವಲ್ಲ, ಹತ್ತಾರು ಬಾರಿ. ಅವರ ಮುಗ್ಧತೆಗೆ ಏನು ಹೇಳೋಣ? ಎರಿಕ್ ಫ್ರಾಮ್‌ನಂಥ ಚಿಂತಕ, ಮನೋ ವಿಶ್ಲೇಷಣಾತಜ್ಞರನ್ನು ಓದಿದವರು ನಿಷ್ಕಲ್ಮಶ ಹೃದಯಿಗಳಾಗಿರಲೇಬೇಕು. ಇದು ಅವರ ಪ್ರಾಮಾಣಿಕ ಅಭಿಪ್ರಾಯವಾಗಿತ್ತು.

ನನ್ನ ದೃಷ್ಟಿಯಲ್ಲಿ ಚಿತ್ತಾಲರನ್ನು ಕನ್ನಡದ ಬೇರೆ ಯಾವ ಲೇಖಕರ ಜೊತೆಗೂ ಹೋಲಿಸುವಂತಿಲ್ಲ. ಎಷ್ಟೋ ಬಾರಿ ನನಗೆ ಅವರು ಬೇರೆಯಲ್ಲ, ಅವರ ಸೃಷ್ಟಿಯ ಪಾತ್ರಗಳು ಬೇರೆಯಲ್ಲ ಎನ್ನಿಸಿದ್ದಿದೆ.  ಯಾಕೆಂದರೆ ಅವರದು ಎಷ್ಟು ಸೂಕ್ಷ್ಮ ಮನಸ್ಸೋ ಅಷ್ಟೇ ಸೂಕ್ಷ್ಮ ಮನಸ್ಸಿನವು ಅವರ ಬಹುಪಾಲು ಪಾತ್ರಗಳು. ಮತ್ತೆ ಅಂಥ ಸೂಕ್ಷ್ಮ ಮನಸ್ಸಿರುವುದರಿಂದಲೇ ಆ ಪಾತ್ರಗಳು ನೈತಿಕವಾಗಿ ಘಾಸಿಗೊಳ್ಳುವವರು; ಅನಿರೀಕ್ಷಿತ ಯಾತನೆ ಅನುಭವಿಸುವವರು; ಆ ಯಾತನೆಯ ಅಗ್ನಿದಿವ್ಯವನ್ನು ದಾಟಿದ ಮೇಲಷ್ಟೆ ತಾವು ಮರುಹುಟ್ಟು ಪಡೆಯಬಹುದೆಂದು ನಂಬಿದವರು.

ಇನ್ನು ಅವರು ಸೃಷ್ಟಿಸಿದ ಪಾತ್ರಗಳಾದರೂ ಎಂಥವು? ಅವರೇ ಒಂದೆಡೆ ಬರೆದಿರುವಂತೆ ಅಗೇರ ಎಂಕು ಅವನ ತಮ್ಮ ಮುರ್ಕುಂಡಿ; ಕಳ್ಳ ಗಿರಿಯಣ್ಣ ಅವನ ಗೆಳೆಯ ಕೋಳಿ ಗಿರಿಯಣ್ಣ; ಆಬೋಲೀನ ಅವಳಪ್ಪ ಕೈತಾನ ಅವನ ಮಗ ಬಸ್ತ್ಯಾಂವ; ಸಮಗಾರ ವೋಮು; ಮಾಸ್ತಿ ಹೊನ್ನಪ್ಪ. ಅವನ ಹೆಂಡತಿ ಪರಮೇಶ್ವರಿ ಮಗಳು ಮಂಕಾಳೀ; ಉತ್ತುಮಿ ಅವಳ ಮಗಳು ಪಾರೂ; ಹುಲ್ಲು ಮಾರುವ ಬೊಮ್ಮಿ; ಮಡಿವಾಳ ಮಾದೇವ, ಊರಿನ ಹಿರಿಯ ಬುಡಣಸಾಬ; ಕಲಾಯಿಕಾರ ಶೇಕ್‌ಫರೀದ್; ಸುಗ್ಗಿ ಕುಣಿತದ ಕಾಣೆಗೌಡ; ಗುಮ್ಟೆಪಾಂಗಿನ ದಾಸಣ್ಣ; ಚಾ ದುಕಾನಿನ ಸಾಂತಯ್ಯ ಮಗ ಪುರುಷೋತ್ತಮ; ಕಿರಾಣಿ ಅಂಗಡಿಯ ಗಣಪಯ್ಯ ಮಗ ವಿಠ್ಠಲ; ಖೊಟ್ಟಿ ರೊಟ್ಟಿ ಬೇಡುತ್ತ ಕೇರಿ ಕೇರಿ ಅಲೆಯುವ ಮಳ್ಳಹನುಮ; ಬಯಲಾಟದ ದೊಡ್ತಮ್ಮ; ಹೂಜಡೆ ಮಾರುವ ತಿಮ್ಮಿ ಮಾನವಂತರು ಎಲ್ಲರೂ!

ಇವರೆಲ್ಲರ ಜೊತೆಗೆ ನಾಗಪ್ಪ, ಜಾನಕಿ, ನಾಗವೇಣಿ, ಗಣೇಶ, ವೆಂಕಟದಾಸೂ, ಅಹಿಲ್ಯೆ, ರಾಮನಾಥ, ದತ್ತಮಾಸ್ತರ, ತುಂಗಕ್ಕ, ವಿಶ್ವನಾಥ ಶಾನಭಾಗ, ನಿರ್ಮಲೆ, ಖಂಬಾಟ, ದಸ್ತೂರ್, ಮೇರಿ, ಶ್ರೀನಿವಾಸ, ಬೇನ್ಯಾ, ಸಿದ್ಧಾರ್ಥ, ಬೆಹರಾಮ್, ಶೆರೀನ್, ಕರುಣಾಕರನ್, ಇಂದಿರಕ್ಕ– ಹೀಗೆ ಇನ್ನೂ ಕೆಲವು ಪಾತ್ರಗಳನ್ನು ಸೇರಿಸಿಕೊಳ್ಳಿ. ಆಗ ಹನೇಹಳ್ಳಿ, ಮುಂಬಯಿಗಳನ್ನೊಳಗೊಂಡ ಚಿತ್ತಾಲರ ಮಾನವ ವಿಶ್ವಪೂರ್ಣವಾಗುತ್ತದೆ. 

ಈ ಕೆಲವು ಪಾತ್ರಗಳು ಅವರ ಕತೆ, ಕಾದಂಬರಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಬಹುಶಃ ಹೀಗೆ ಕಾಣಿಸಿಕೊಳ್ಳುವ ಮೂಲಕವೇ ಅವು ಬದುಕಿನ ಸಾತತ್ಯವನ್ನು ಸೂಚಿಸುತ್ತಿರಲಿಕ್ಕೆ ಸಾಕು. ಹೀಗೆ ಕತೆ, ಕಾದಂಬರಿಗಳಲ್ಲಿ ಕೆಲವೇ ಪಾತ್ರಗಳನ್ನು ಪುನರಾವರ್ತಿಸಿದ ಇಬ್ಬರು ಲೇಖಕರು ನನಗಿಲ್ಲಿ ನೆನಪಾಗುತ್ತಾರೆ. ಒಬ್ಬ ಸಿಸಿಲಿಯ ಲೇಖಕ ಜಿಯೋವಾನ್ನಿ ವೆರ್ಗ, ಇನ್ನೊಬ್ಬ ಅಮೆರಿಕನ್ ಲೇಖಕ ವಿಲಿಯಂ ಫಾಕ್ನರ್. ಇವರಿಬ್ಬರ ಜೀವನ ದರ್ಶನವೇನೆಂದು ತಿಳಿಯಬೇಕಾದರೆ ಇವರ ಒಂದೆರಡು ಕೃತಿಗಳನ್ನಲ್ಲ, ಸಮಗ್ರ ಸಾಹಿತ್ಯವನ್ನು ಓದಬೇಕು. ನಮ್ಮ ಚಿತ್ತಾಲರು ಕೂಡ ಈ ಬಗೆಯ ಲೇಖಕರೆಂಬುದರಲ್ಲಿ ನನಗಂತೂ ಸಂಶಯವಿಲ್ಲ.    

‘ಕತೆಯಾದಳು ಹುಡುಗಿ’ ಸಂಕಲನಕ್ಕೆ ಮುನ್ನುಡಿಯ ರೂಪದಲ್ಲಿ ನಾನು ಬರೆದ (ಇಂದು ಕೂಡ ನನಗೆ ಸೂಕ್ತವೆನ್ನಿಸುವ) ಕೆಲವು ಸಾಲುಗಳಿವು: ಚಿತ್ತಾಲರ ಬಹುಪಾಲು ಕತೆಗಳಲ್ಲಿ ವಾಸ್ತವವನ್ನು ಪ್ರತಿನಿಧಿಸುವ ಗೂಢಗಳೆಲ್ಲ ಅಂಡರ್‌ಸ್ಟೇಟ್ಮೆಂಟ್ ಆಗಿಯೇ ರೂಪುಗೊಳ್ಳುತ್ತವೆ. ತೀಕ್ಷ್ಣವಾದ ಪರಿಸರ ಪ್ರಜ್ಞೆಯುಳ್ಳ ಅವರು ಆಂತರಿಕ ಮಹತ್ವದ ಕಡೆ ಬೆರಳು ತೋರಿಸದೆ ಬದುಕನ್ನು ಅದು ಇರುವಂತೆ ನಿರೂಪಿಸುವುದಷ್ಟೇ ವಾಸ್ತವವಾದ ಎನ್ನುವುದಾದರೆ ಚಿತ್ತಾಲರು ವಾಸ್ತವವಾದಿಯೂ ಅಲ್ಲ.

ಯಾಕೆಂದರೆ ಅವರು ಹಿಡಿಯುವುದು ಸುಲಭಗ್ರಾಹ್ಯವಾದ ವಾಸ್ತವವಲ್ಲ; ಅರ್ಧ ಅಲಿಗರಿ ಆದ, ಅರ್ಧ ಸರ್ರಿಯಲಿಸ್ಟಿಕ್ ಆದ, ಪರಸ್ಪರ ವಿರುದ್ಧ ನಂಬಿಕೆಗಳಿಂದ ವಿಚ್ಛಿದ್ರವಾದ, ನಿರಂತರ ಬದಲಾವಣೆಗೆ ಗುರಿಯಾಗಬೇಕಾದ ಜಗತ್ತಿನ ವಾಸ್ತವ. ಕತೆಗಳಲ್ಲಿ ವಾಸ್ತವಾಂಶಗಳು, ಪಾತ್ರಗಳು, ಘಟನೆಗಳು ತಮ್ಮ ತಮ್ಮ ಅಸ್ತಿತ್ವದಲ್ಲೇ ಅರ್ಥ ಪಡೆದುಕೊಂಡು ವಾಸ್ತವತೆಯನ್ನು ಕಂಡುಹಿಡಿಯುತ್ತವೆ. ಅಂದರೆ ವಾಸ್ತವತೆ ಆಮೂಲಾಗ್ರ ಬದಲಾವಣೆಯ ಧ್ವನಿಯಿರುವ ಮಾನವ ಹಾರೈಕೆಯಾಗಿ ಬದ್ಧವಾಗುತ್ತದೆ.  ಇಲ್ಲಿ ಸಂಭಾವ್ಯಕ್ಕೆ, ಸಹಜವಾದುದಕ್ಕೆ ಸಮಾನ ಅವಕಾಶವಿದೆ. ಈ ದಿಸೆಯಲ್ಲಿ ಚಿತ್ತಾಲರ ಕತೆಗಳು ಸಮೂಹ ಪ್ರಜ್ಞೆಯನ್ನು ನೀಡುವ ಜೊತೆಯಲ್ಲೇ ದ್ವೇಷದಿಂದ ವಿಮುಖವಾಗುತ್ತಿರುವ ಜಗತ್ತಿನಲ್ಲಿ ಪ್ರೀತಿ, ಘನತೆ ಮತ್ತು ಸಾಮರಸ್ಯಕ್ಕಾಗಿ ಹಾತೊರೆಯುವ ವ್ಯಕ್ತಿಯೊಬ್ಬನ ಚಿತ್ರವೂ ಆಗಿಬಿಡುತ್ತವೆ.   

ಚಿತ್ತಾಲರು ನಮ್ಮ ಅಂತರಂಗ ಪ್ರಪಂಚದ ಶೋಧನೆಗೆ, ಭಾಷೆಯ ಮುಖಾಂತರ ಅದನ್ನು ಪ್ರಕಟಿಸುವುದಕ್ಕೆ ಬದ್ಧರಾಗಿದ್ದವರು. ಗೋಪಾಲಕೃಷ್ಣ ಅಡಿಗರು ‘ಆಟ’ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ– ‘ಅವರದು ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳಿಗೂ ವಿಚಾರದ ರೇಕುರೇಕುಗಳಿಗೂ ವಿಶಿಷ್ಟವಾದೊಂದು ಅನುಭವದ ಅಥವಾ ಕಾಣ್ಕೆಯ ಎಲ್ಲ ಸ್ತರಗಳಿಗೂ ತಕ್ಕ ಪ್ರತಿರೂಪವಾಗಬಲ್ಲಷ್ಟು ಕುಂಚನಶಕ್ತಿಯುಳ್ಳ ಗದ್ಯ... ಎಂದು ವರ್ಣಿಸಿದ್ದು ತೀರ ಅರ್ಥಪೂರ್ಣ. ಹಾಗೆ ನೋಡಿದರೆ ಚಿತ್ತಾಲರ ಆರಂಭದ ಬರವಣಿಗೆಯಲ್ಲೇ ಭಾಷೆಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಪಳಗಿಸಿಕೊಳ್ಳುವ ಪ್ರತಿಭೆ ಎದ್ದು ಕಾಣುತ್ತದೆ.

ಇದೊಂದು ಪ್ರಜ್ಞಾಪೂರ್ವಕ ಪ್ರಯತ್ನ. ಅದನ್ನು ಚಿತ್ತಾಲರೇ ಒಂದೆಡೆ ಹೀಗೆ ದಾಖಲಿಸಿದ್ದಾರೆ: ಒಂದು ಸಮಾಜದ ಅಂಗವಾಗಿ ಬದುಕುವ ಸೃಷ್ಟಿಶೀಲ ಪ್ರಜ್ಞೆಯೊಂದು ತಾನು ಬಂದಿಯಾದ ಸನ್ನಿವೇಶದಲ್ಲೇ ಆ ಸನ್ನಿವೇಶ ಭಾಗವಾದ ಇಡೀ ವಸ್ತುಸ್ಥಿತಿಯನ್ನು ಅನುಭವಿಸಿ, ಆ ಅನುಭವ ಕಾಣಿಸಿದ ನಿಷ್ಠುರ ಸತ್ಯದಿಂದ ಝಲ್ ಎಂದಾಗ ಎದ್ದ ನಡುಕ ಇತರರಿಗೂ ಮುಟ್ಟುವ ಬಯಕೆಯಿಂದ ಭಾಷೆಯಲ್ಲಿ ಸಶರೀರವಾಗಲು ಹವಣಿಸಿದಾಗ ಹುಟ್ಟುವ ಸಾಹಿತ್ಯ ತನ್ನ ಹುಟ್ಟಿನ ನೈಜತೆಯಿಂದ, ಸೃಷ್ಟಿಕ್ರಿಯೆಯ ಪ್ರಾಮಾಣಿಕತೆಯಿಂದ ನಮ್ಮನ್ನು ತಪ್ಪದೇ ತನ್ನ ಕಂಪನದ ಪರಿಧಿಯೊಳಗೆ ಸೆಳೆದುಕೊಂಡು ನಡುಗುವಂತೆ ಮಾಡುತ್ತದೆ’.

ನನ್ನ ದೃಷ್ಟಿಯಲ್ಲಿ ಚಿತ್ತಾಲರ ಒಟ್ಟು ಸಾಹಿತ್ಯದಲ್ಲಿ ಒಂದೇ ಒಂದಾದರೂ ತೀರ ಸಾಮಾನ್ಯ ಅಥವಾ ಕಳಪೆ ಎನ್ನಬಹುದಾದ ಕೃತಿಯಿಲ್ಲ. ಅಲ್ಲದೆ ಬರವಣಿಗೆಯೆನ್ನುವುದು ಒಂದು ಪವಿತ್ರ ಕಾರ್ಯ ಅಥವಾ ತಪಸ್ಸು ಎಂದು ನಂಬಿ ಬರೆದ ಇನ್ನೊಬ್ಬ ಕನ್ನಡ ಲೇಖಕನನ್ನು ನಾನು ಊಹಿಸಲಾರೆ.

ಅವರ ಕತೆಗಳಲ್ಲಿ ಅಸ್ತಿತ್ವದ ಅನಿಶ್ಚಿತತೆಯ ಬಗೆಗೆ ಹೇಗೋ ಹಾಗೆ ಮಾನವ ಆಶೋತ್ತರಗಳ ಹಾಗೂ ಸಾಧನೆಗಳ ಅಶಾಶ್ವತತೆಯ ಬಗೆಗೂ ಆಳವಾದ ಚಿಂತನೆಯಿದೆ. ಅರ್ಧ ಹತ್ತಿಕ್ಕಿದ ಹಳಹಳಿಕೆ, ಪದೇ ಪದೇ ಬಂದು ಕಾಡುವ ನೆನಪುಗಳು, ಅಳಿಸಲಾಗದ ಚಿತ್ರಗಳು, ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯನ ಘನತೆ ಮತ್ತು ಯಾತನೆ, ಇವೆಲ್ಲ ಓದುಗರ ಮನಸ್ಸನ್ನು ಕಲಕಿ, ಅವರನ್ನು ಚಿಂತೆಗೀಡುಮಾಡುತ್ತವೆ. 

ಮನುಷ್ಯನಲ್ಲಿ ಅಂತರ್ಗತವಾಗಿರುವ ಕೆಡುಕನ್ನು ಆಮೂಲಾಗ್ರವಾಗಿ ಶೋಧಿಸುವ ಅವರು ಸ್ವಾರ್ಥ ಮತ್ತು ಕ್ರೌರ್ಯ ಎರಡೂ ಅವನ ಸ್ವಭಾವದಲ್ಲಿಯೇ ಇವೆಯೆಂದೂ ಅವುಗಳನ್ನು ಎದುರಿಸುವ ಶಕ್ತಿ ಪ್ರೀತಿಗಾಗಲೀ ಅಂತಃಕರಣಕ್ಕಾಗಲೀ ಇಲ್ಲವೆಂದೂ ಪ್ರತಿಪಾದಿಸುವಂತೆ ತೋರುವುದುಂಟು. ಆದರೆ ಅವರ ದೃಷ್ಟಿಯಲ್ಲಿ ಮನುಷ್ಯತ್ವವನ್ನು ಸಾಧಿಸಬಹುದಾದದ್ದು ಪ್ರೀತಿ ಮತ್ತು ಅಂತಃಕರಣಗಳೇ. ಅವರ ಕತೆ, ಕಾದಂಬರಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ, ಧುತ್ತೆಂದು ಎದುರಾಗುವ ಸಾಮಾನ್ಯ ಘಟನೆಗಳು, ಜನ್ಮ ಮತ್ತು ಕುಟುಂಬದ ಸಮಸ್ಯೆಗಳು, ಬಟವಾಡೆಯಾಗದ ಪತ್ರಗಳು, ಅಪಾರ್ಥಕ್ಕೆ ಗುರಿಯಾಗುವ ಮಾತುಕತೆ, ಉಳ್ಳವರ ರಾಜಕೀಯ ಹಾಗೂ ದುರಾಕ್ರಮಣ, ಇವೆಲ್ಲವೂ ನಿರಪರಾಧಿಗಳ ಯಾತನೆಗೆ ಕಾರಣವಾಗುತ್ತವೆ.  ಇಂಥ ಕಡೆಗಳಲ್ಲಿ ಅವರು ಪ್ರತಿಪಾದಿಸುವುದು ಪ್ರೀತಿ, ಅಂತಃಕರಣಗಳನ್ನೇ.

 ಕನ್ನಡ ವಿಮರ್ಶಕರು ಚಿತ್ತಾಲರ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿಯೇ ಬರೆದಿದ್ದಾರೆ. ಆದರೂ ಚಿತ್ತಾಲರಿಗೇ ವಿಶಿಷ್ಟವಾಗಿರುವ, ’ಚಿತ್ತಾಲತನ’ದ ಅವರ ಸಾಹಿತ್ಯವನ್ನು ಬಗೆದು ನೋಡಬಲ್ಲ ವಿಮರ್ಶೆಗೆ ಬೇರೊಂದೇ ಮಾನದಂಡ ಅಗತ್ಯವೇನೋ. ಹಿಂದೊಮ್ಮೆ ಒಬ್ಬ ವಿಮರ್ಶಕರು ಅವರ ಸಾಹಿತ್ಯವನ್ನು ‘ಸೆಂಟಿಮೆಂಟಲ್’ ಎಂದು ಕರೆದದ್ದುಂಟು. ಅಮೆರಿಕದ ಶ್ರೇಷ್ಠ ಲೇಖಕ ವಿಲಿಯಂ ಫಾಕ್ನರನನ್ನು ಕೂಡ ಒಂದು ಕಾಲದಲ್ಲಿ ವಿಮರ್ಶಕರು ‘ಸೆಂಟಿಮೆಂಟಲ್’ ಎಂದು ಕರೆದಿದ್ದರೆಂದು ನಾನು ಓದಿ ಬಲ್ಲೆ.

ಕರ್ನಾಟಕದಿಂದ ಹೊರಗೇ ಇದ್ದ ಚಿತ್ತಾಲರು ಗೋಪಾಲಕೃಷ್ಣ ಅಡಿಗರಂತೆ ಜ್ಞಾನಪೀಠ ಪ್ರಶಸ್ತಿಯಿಂದ ವಂಚಿತರಾದವರು. ಅಂಥ ಪ್ರಶಸ್ತಿಗೆ ಎಂಥ ಲಾಬಿ ನಡೆಸಬೇಕೆಂಬ ಕಿಂಚಿತ್ ಅರಿವೂ ಅವರಿಗಿರಲಿಲ್ಲ. ಲಾಬಿ? ಹಾಗೆಂದರೇನು ಎಂದು ಕೇಳುವಷ್ಟು ಮುಗ್ಧರಾಗಿದ್ದರು ಅವರು. ಹಾಗೆ ನೋಡಿದರೆ ಅವರು ಪ್ರಶಸ್ತಿಗಿಂತ ಹೆಚ್ಚಾಗಿ ಬಯಸಿದ್ದು ಓದುಗರನ್ನು. ಅವರ ಬಯಕೆ ಈಡೇರಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇವತ್ತು ನವ್ಯ ಪಂಥದ ಲೇಖಕರಲ್ಲಿ ಅತ್ಯಂತ ಹೆಚ್ಚು ಓದುಗರಿರುವ ಲೇಖಕರೆಂದರೆ ಯಶವಂತ ಚಿತ್ತಾಲರೇ.

ಮಾಸ್ತಿಯವರು ಅವರ ಮೊದಲ ಕಥಾ ಸಂಕಲನ ‘ಸಂದರ್ಶನ’ದ ಬಗ್ಗೆ ಬರೆಯುತ್ತ, ‘ಬರವಣಿಗೆ ನನಗೆ ಮೆಚ್ಚುಗೆಯಾಗುವ ರೀತಿಯದು. ಎಂದರೆ ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯದು. ಸಾಹಿತ್ಯ ಹಲವು ರೀತಿ ಉದಯಿಸಬಲ್ಲದು. ಆದರೆ ಅದು ಹೀಗೆ ಉದಯಿಸಿದಾಗ ಸಾಹಿತ್ಯವೆಂಬ ಕರ್ಮದ ಅತ್ಯುತ್ತಮ ಲಕ್ಷ್ಯವನ್ನು ಸಾಧಿಸಹೊರಟಿರುತ್ತದೆ ಎಂದು ನನ್ನ ತಿಳಿವಳಿಕೆ....’ ಎಂದರು. ಚಿತ್ತಾಲರನ್ನು ಓದಿರುವವರಿಗೆ ಈ ಮಾತಿನ ಅಂತರಾರ್ಥವೇನೆಂದು ವಿವರಿಸಬೇಕಿಲ್ಲ.

ಅದೇ ಮಾಸ್ತಿಯವರು ಒಮ್ಮೆ ನನ್ನ ಜೊತೆ ಮಾತನಾಡುತ್ತ ‘ನನಗೆ ದೋಸ್ತೊಯೆವ್‌ಸ್ಕಿಗಿಂತ ಟಾಲ್ಸ್‌ಟಾಯ್ ದೊಡ್ಡ ಲೇಖಕ. ಯಾಕೆಂದರೆ ಅವನು ದೋಸ್ತೊಯೆವ್‌ಸ್ಕಿಯಂತೆ ಸಮಾಜದಲ್ಲಿ ಎಲ್ಲೆಲ್ಲೂ ಕೊಳಕೇ ಇದೆ ಎಂದಷ್ಟೇ ಹೇಳದೆ, ಆ ಕೊಳಕಿನಲ್ಲಿ ಒಂದು ಮಲ್ಲಿಗೆ ಬಳ್ಳಿ ನೆಡಬಹುದು ಎಂದು ಸೂಚಿಸುವ ಮಹರ್ಷಿ’ ಎಂದರು. ಈ ಮಾತನ್ನು ಸಮರ್ಥಿಸುವಂತಿದೆ ಚಿತ್ತಾಲರ ಒಟ್ಟು ಬರವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT