ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪ್ರದೇಶ ವಿಭಜನೆಗೆ ಚಾಲನೆ

ಕಚೇರಿ, ಕಡತಗಳ ವಿಂಗಡಣೆ ಆರಂಭ
Last Updated 25 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರ ಪ್ರದೇಶ ವಿಭ­ಜನೆ ಪ್ರಕ್ರಿಯೆ ಬಹುತೇಕ ಮುಕ್ತಾಯದ ಹಂತದಲ್ಲಿದ್ದು  ಜೂನ್‌ 2ರಂದು  ತೆಲಂಗಾಣ ಅಸ್ತಿತ್ವಕ್ಕೆ ಬರಲಿವೆ. ಆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಸ್ಥಳಾಂತರ  ಮತ್ತು ಕಡತಗಳ ವಿಂಗಡಣೆ ಭರದಿಂದ ಸಾಗಿದೆ.

ರಾಜಭವನದ ಆದೇಶದಂತೆ ಈಗಾಗಲೇ 176 ಸರ್ಕಾರಿ ಕಚೇರಿಗಳ ಸ್ಥಳಾಂತರ ಮತ್ತು ಕಡತಗಳ ವಿಲೇವಾರಿ ಆರಂಭವಾಗಿದೆ. ಇದರೊಂದಿಗೆ ಆಂಧ್ರ  ವಿಭಜನೆಗೆ ಚಾಲನೆ ದೊರೆತಂತಾಗಿದ್ದು ಕಂಪ್ಯೂ­ಟರ್‌, ಫ್ಯಾಕ್ಸ್‌ ಯಂತ್ರ ಸೇರಿದಂತೆ ಕಾಗದ ಮತ್ತು ಗುಂಡುಸೂಜಿಗಳನ್ನು ಸಹ ಎರಡೂ ರಾಜ್ಯಗಳಿಗೆ ಸಮನಾಗಿ ವಿಂಗಡಿಸಲಾಗುತ್ತಿದೆ.

ರಾಜ್ಯ ಸಚಿವಾಲಯದ ಎ,ಬಿ,ಸಿ,ಡಿ ಬ್ಲಾಕ್‌ಗಳನ್ನು ತೆಲಂಗಾಣಕ್ಕೆ ಹಾಗೂ ಎಚ್‌,ಜೆ,ಕೆ ಮತ್ತು ಎಲ್‌ ಬ್ಲಾಕ್‌ಗಳನ್ನು ಆಂಧ್ರಪ್ರದೇಶಕ್ಕೂ ನೀಡಲಾಗಿದೆ. 
ಪ್ರಸಕ್ತ ವಿಧಾನಸಭಾ ಕಟ್ಟಡವನ್ನು ತೆಲಂಗಾಣಕ್ಕೂ, ಹಳೆ ಕಟ್ಟಡ ಹಾಗೂ ವಿಧಾನ ಪರಿಷತ್‌ ಕಟ್ಟಡವನ್ನು ಆಂಧ್ರ­ಕ್ಕೂ ನೀಡಲಾಗಿದೆ. ಇದ­­ರಿಂದಾಗಿ ಮುಂದಿನ 10 ವರ್ಷ­ಗಳ ಕಾಲ ತೆಲಂಗಾಣ ವಿಧಾನ ಪರಿ­­ಷತ್ತಿನ  ಕಲಾಪ­ಗಳು ಜ್ಯುಬಲಿ ಹಾಲ್‌ನಲ್ಲಿ ನಡೆಯಲಿವೆ.

ನಾಯ್ಡು, ರಾವ್‌ ಹಿಂದೇಟು: ತಮಗೆ ನಿಗದಿ ಮಾಡಲಾಗಿದ್ದ ‘ಎಲ್‌ ಬ್ಲಾಕ್‌’ ಕಚೇರಿಯನ್ನು ಆಂಧ್ರದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ತಿರಸ್ಕರಿಸಿದ್ದಾರೆ.  ಹಳೆಯ ‘ಎಚ್‌’ ಬ್ಲಾಕ್‌ ಕಚೇರಿಗಾಗಿ ಪಟ್ಟು ಹಿಡಿದಿದ್ದಾರೆ.
ದೆಹಲಿಯ ಆಂಧ್ರ ಭವನವನ್ನೂ ವಿಂಗ­ಡಿಸಿ ಎರಡೂ ರಾಜ್ಯಗಳಿಗೆ ನೀಡಲಾಗಿದೆ.

ಬೇಗಂಪೇಟ್‌ ರಸ್ತೆಯಲ್ಲಿರುವ ಮುಖ್ಯ­ಮಂತ್ರಿಗಳ ಅಧಿಕೃತ ನಿವಾಸವನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಮತ್ತು ರಾಜಭವನ ರಸ್ತೆಯಲ್ಲಿರುವ ಲೇಕ್‌ವ್ಯೂ ಅತಿಥಿಗೃಹವನ್ನು ನಾಯ್ಡು ಅವರಿಗೆ ನೀಡಲಾಗಿದೆ. ಆದರೆ, ಸದ್ಯಕ್ಕೆ ಇಬ್ಬರಿಗೂ ಅಧಿಕೃತ ನಿವಾಸಗಳಿಗೆ ವಾಸ್ತವ್ಯ ಬದಲಿಸುವ ಮನಸ್ಸಿಲ್ಲ. 

ಬೇಗಂಪೇಟ್‌ ನಿವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿಗಳಾದ ವೈ.ಎಸ್‌. ರಾಜ­ಶೇಖರ್‌ ರೆಡ್ಡಿ ಮತ್ತು ಕಿರಣ್‌ ಕುಮಾರ್‌ ರೆಡ್ಡಿ ಅಧಿಕಾರ ಪೂರ್ಣಗೊಳಿಸಿಲ್ಲ.  ಇದ­ರಿಂದಾಗಿ ತೆಲಂಗಾಣ ನಿಯೋಜಿತ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ಈ ಬಂಗಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಸಚಿವಾಲ­ಯ­ದಲ್ಲಿ ಆಂಧ್ರ ಸರ್ಕಾರಕ್ಕೆ ಸ್ಥಳ ನೀಡದಂತೆ ತೆಲಂಗಾಣ ಸರ್ಕಾರಿ ನೌಕರರ ಸಂಘಟನೆಗಳು ಒತ್ತಾಯಿಸುತ್ತಿವೆ.

ಒಂದೇ ಕಟ್ಟಡದಲ್ಲಿದ್ದರೆ ತೆಲಂಗಾಣ ಮತ್ತು ಸೀಮಾಂಧ್ರ ನೌಕರರ ನಡುವಿನ ಹಳೆ ಮನಸ್ತಾಪ ಮರುಕಳಿಸುವ ಸಾಧ್ಯತೆ­ಗಳಿವೆ ಎಂಬ ಕಾರಣವನ್ನು ಸಂಘಟನೆಗಳು ಮುಂದಿಟ್ಟಿವೆ. ಬಂಜಾರಾ ಹಿಲ್ಸ್‌ನಲ್ಲಿ­ರುವ ಡಾ.ಎಂಸಿಆರ್‌ ಮಾನವ ಸಂಪನ್ಮೂಲ ಅಭಿವೃದ್ಧಿ ಕಟ್ಟಡವನ್ನು ಆಂಧ್ರ ಸರ್ಕಾರಕ್ಕೆ ಬಿಟ್ಟುಕೊಡುವಂತೆ ಸಂಘಟನೆಗಳು ಮನವಿ ಸಲ್ಲಿಸಿವೆ.

ಹೊಸ ನಾಡಗೀತೆ, ಲಾಂಛನ
ತೆಲಂಗಾಣ ವಾಹನಗಳ ನೋಂದಣಿ ಫಲಕಗಳೂ ಜೂನ್‌ 2ರಿಂದ ಬದಲಾಗಲಿವೆ. ತೆಲಂಗಾಣ ಭಾಗದ ವಾಹನಗಳನ್ನು ‘ಎಪಿ ’ ಬದಲು ‘ಟಿಜಿ’ ನೋಂದಣಿಯ ಸಂಖ್ಯಾಫಲಕ ಅಲಂಕರಿಸಲಿವೆ.

ಹಳೆಯ ವಾಹನಗಳ ಸಂಖ್ಯಾಫಲಕ ಬದಲಾವಣೆಯ ಆಯ್ಕೆಯನ್ನು ವಾಹನ ಮಾಲೀಕರಿಗೆ ಬಿಡಲಾಗಿದೆ ಎಂದು ಸಾರಿಗೆ ಕಚೇರಿ ಅಧಿಕಾರಿಗಳು  ತಿಳಿಸಿದ್ದಾರೆ.

ಅದೇ ರೀತಿ ತೆಲಂಗಾಣ ರಾಜ್ಯ ಪಕ್ಷಿ ಮತ್ತು ಲಾಂಛನ ಕೂಡ ಬದಲಾಗಲಿವೆ. ಈ ಭಾಗವನ್ನು ಆಳಿದ್ದ ಕಾಕತೀಯ ರಾಜಮನೆತನದ ಲಾಂಛನವಾಗಿದ್ದ ಪಕ್ಷಿ ತೆಲಂಗಾಣ   ಲಾಂಛನವಾಗಲಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಲವು ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳು ಐತಿಹಾಸಿಕ ಚಾರ್‌ಮಿನಾರ್‌ ಲಾಂಛನವಾಗಲಿ ಎಂದು ಪಟ್ಟು ಹಿಡಿದಿವೆ. 

ಇನ್ನೂ ಕೆಲವು ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಈ ಬೇಡಿಕೆಯನ್ನು ಬಲವಾಗಿ ವಿರೋಧಿಸಿವೆ. ಹೊಸ ನಾಡಗೀತೆಯನ್ನೂ ಈಗಾಗಲೇ ಆಯ್ಕೆ ಮಾಡಲಾಗಿದೆ.

ನಾಡಗೀತೆ ತೀರಾ ದೊಡ್ಡದಾಗಿರುವ ಕಾರಣ ಕೆಲವು ಸಾಲುಗಳನ್ನು ಕೈಬಿಡಲು ಚಿಂತನೆ ನಡೆದಿದೆ ಎಂದು ಟಿಆರ್‌ಎಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT