ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಘಾತ ಮಾತ್ರ, ವಿಷಾದವಲ್ಲ

Last Updated 30 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಯಲ್ಲಿ ಮುಖ್ಯ­ಮಂತ್ರಿ ನರೇಂದ್ರ ಮೋದಿ ಪಾತ್ರವಿತ್ತೆಂಬುದಕ್ಕೆ ಸಾಕಷ್ಟು ಸಾಕ್ಷ್ಯಾ­ಧಾರಗಳಿಲ್ಲ ಎಂದು ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯ ಹೇಳಿದ್ದರ ಹಿಂದೆಯೇ ಗಲಭೆಯ ದಿನಗಳ ಕುರಿತಂತೆ ಮೋದಿ ಪ್ರತಿ­ಕ್ರಿಯಿಸಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ 2002ರ 'ಬುದ್ಧಿಹೀನ ಹಿಂಸೆ'ಯಿಂದ ತಾನು ಆಘಾತಗೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಹೇಳಿಕೆ­ಯನ್ನು ತಮ್ಮ ಪರವಾಗಿ ಬಂದ ತೀರ್ಪಿನ ಹಿನ್ನೆಲೆಯಲ್ಲಿ ಅವರು ನೀಡಿದ ಪ್ರತಿಕ್ರಿಯೆ ಎನ್ನಲು ಸಾಧ್ಯವಿಲ್ಲ.

ಈ ಹೇಳಿಕೆಯನ್ನು ಗಲಭೆಯ ನಂತರದ ಹನ್ನೊಂದು ವರ್ಷಗಳಲ್ಲಿ ನಡೆದಿರುವ ಅನೇಕ ಬೆಳವಣಿಗೆಗಳ ಭಾಗವಾಗಿ ಗ್ರಹಿ­ಸುವ ಅಗತ್ಯವಿದೆ. ಬಹುಶಃ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸೆಯ ನಂತರ ಅತ್ಯಂತ ಹೆಚ್ಚು ಸಾರ್ವಜನಿಕ ಚರ್ಚೆಗೆ ಗುರಿ­ಯಾಗಿದ್ದ ಮತ್ತೊಂದು ಹಿಂಸಾಚಾರ ಪ್ರಕರಣವಿದ್ದರೆ ಅದು 2002ರ ಗುಜರಾತ್ ಕೋಮು­ಗಲಭೆ. ಈ ಗಲಭೆಯ ನಂತರದ ಹತ್ತು ವರ್ಷಗಳಲ್ಲಿ ನಡೆದ ತನಿಖೆ­ಗಳು ಮತ್ತು ಅಧಿಕೃತ ಪ್ರತಿಕ್ರಿಯೆಗಳು ಈ ಹಿಂಸೆಯ ಹಿನ್ನೆಲೆಯನ್ನು ಸಂಕೀರ್ಣ­ಗೊಳಿ­ಸುತ್ತಾ ಹೋಯಿತು. ಇದರ ಜೊತೆಯಲ್ಲೇ ಈ ಕ್ರೂರ ನರಮೇಧವನ್ನೇ ಕೇಂದ್ರ­ವಾಗಿಟ್ಟುಕೊಂಡ ಒಂದು ರಾಜಕಾರಣವೂ ಬೆಳೆಯುತ್ತಾ ಹೋಯಿತು.

ಈ ಪ್ರಕ್ರಿಯೆಯಲ್ಲಿ ನರೇಂದ್ರ ಮೋದಿ ಎಂಬ ವ್ಯಕ್ತಿಯ ಸುತ್ತಾ ನಿಗೂಢ­ತೆಯ ಕೋಟೆಯೊಂದು ನಿರ್ಮಾಣವಾಗುತ್ತಾ ಹೋಗಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೂ ಆಗಿಬಿಟ್ಟರು. ಅಹಮದಾಬಾದ್ ಮೆಟ್ರೊ­ಪಾಲಿಟನ್ ನ್ಯಾಯಾಲಯದ ತೀರ್ಪು ತಮಗೆ ನೀಡುತ್ತಿರುವ ನಿರಾ­ಳತೆಯ ಕುರಿತಂತೇನೋ ಮೋದಿ ಹೇಳಿಕೊಳ್ಳುತ್ತಾರೆ. ಆದರೆ 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ತಮಗೆ ರಾಜಧರ್ಮ ಬೋಧಿಸಿದ್ದೇಕೆ ಎಂಬುದನ್ನು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿಸಿದ್ದಾರೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಗಲಭೆಯ ಕುರಿ­ತಂತೆ ಹನ್ನೊಂದು ವರ್ಷಗಳ ನಂತರ ತನಗೆ ಆಘಾತವಾಗಿತ್ತು ಎಂದು ಹೇಳುತ್ತಿ­ರುವುದರ ಹಿಂದಿನ ಉದ್ದೇಶವನ್ನು ಊಹಿಸುವುದು ಕಷ್ಟವೇನೂ ಅಲ್ಲ. ಕೇವಲ 'ಹಿಂದೂ ಹೃದಯ ಸಾಮ್ರಾಟ'ನಾಗಿದ್ದರಷ್ಟೇ ಪ್ರಧಾನಿ­ಯಾ­ಗಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಅರ್ಥ ಮಾಡಿಕೊಂಡಿದ್ದು ಅವರು 'ವಿಕಾಸ ಪುರುಷ'ನಾಗಿ ಅವತಾರವೆತ್ತಿದಾಗಲೇ ಸ್ಪಷ್ಟವಾಗಿತ್ತು. ಅದರ ಮುಂದು­ವರಿ­ಕೆಯಾಗಿ ಈ ‘ಆಘಾತ' ಕಾಣಿಸಿಕೊಂಡಿದೆ.

ಈ 'ಆಘಾತ, ಕ್ಲೇಷ, ಏಕಾಂಗಿತನ'ದಂಥ ಸುಂದರ ಪದಪುಂಜಗಳಾಚೆಗೂ ಹಲವು ಪ್ರಶ್ನೆ­ಗಳು ಈಗಲೂ ಉಳಿದುಕೊಂಡಿವೆ. ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿ­ಯೊಬ್ಬರೇ 2002ರ ಗಲಭೆಯಲ್ಲಿ ಪಾಲ್ಗೊಂಡಿದ್ದರೆಂಬುದು ನ್ಯಾಯಾ­ಲಯದಲ್ಲಿ ಸಾಬೀತಾಗಿ ಈಗ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾರೆ. ಹೀಗೆ ಸಂಪುಟ ಸಹೋದ್ಯೋಗಿಗಳೇ ಗಲಭೆಗಳಲ್ಲಿ ಪಾಲ್ಗೊಂಡದ್ದರ ನೈತಿಕ ಹೊಣೆ­ಗಾರಿಕೆಯನ್ನು ಮೋದಿ ನಿರಾಕರಿಸುತ್ತಾರೆಯೇ? ಒಂದು ವೇಳೆ ನಿರಾ­ಕರಿಸಿ­ದರೆ ತಮ್ಮಲ್ಲಿದೆ ಎಂದು ಹೇಳಿಕೊಳ್ಳುತ್ತಿರುವ 'ಪ್ರಬಲ ನಾಯಕತ್ವ ಗುಣ'­ವನ್ನು ಅವರೇ ನಿರಾಕರಿಸಿದಂತಾಗುತ್ತದೆಯಲ್ಲವೇ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೊರಟರೆ ಕೊನೆಗೂ ಕಾಣಿಸುವುದು ಮೈತ್ರಿಕೂಟ ರಾಜ­ಕಾರಣಕ್ಕೆ ಅಗತ್ಯವಿರುವ ಪ್ರಧಾನಿ ಅಭ್ಯರ್ಥಿಯಾಗುವ ನರೇಂದ್ರ ಮೋದಿ ತುಡಿತವಷ್ಟೇ ಕಾಣಿಸುತ್ತದೆ. ವಾಜಪೇಯಿ ರಾಜಧರ್ಮ ಬೋಧಿ­ಸಿ­ದಾಗಲೂ ನರೇಂದ್ರ ಮೋದಿ ಗಲಭೆಗಳಿಗಾಗಿ ವಿಷಾದಿಸಿರಲಿಲ್ಲ. ಈಗಲೂ ಅಷ್ಟೇ ಗಲಭೆ ಅವರಲ್ಲಿ ವಿಷಾದವನ್ನುಂಟು ಮಾಡಿಲ್ಲ. ಅದು ಕೇವಲ ಆಘಾತಕ್ಕೆ ಮಾತ್ರ ಕಾರಣವಾಗಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT