ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೋ ಗೇರ್‌ನಲ್ಲಿ ಬರುತ್ತಿದೆ ನ್ಯಾನೊ ಕಾರು

Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು 2009ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಟಾಟಾ ಮೋಟಾರ್ಸ್‌ನ ‘ನ್ಯಾನೊ ಕಾರು’ ಈಗ ಎಲ್ಲ ವರ್ಗಗಳ ಕಾರಾಗಿ ಮಾರ್ಪಟ್ಟಿದೆ. ಯುವಕರು, ಈಗಾಗಲೇ ಒಂದು ಕಾರಿನ ಮಾಲೀಕರಾಗಿರುವವರು, ನಗರ ಪ್ರದೇಶಗಳಲ್ಲಿ ದೊಡ್ಡ ಕಾರು ಓಡಿಸುವುದು ಕಷ್ಟ ಅನ್ನುವವರು ಸೇರಿದಂತೆ ಎಲ್ಲರನ್ನೂ ಓಲೈಸುವ ಸಲುವಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ನ್ಯಾನೊ ಕಾರು ಸದ್ಯದಲ್ಲೇ ಮಾರುಕಟ್ಟೆ ಮರುಪ್ರವೇಶ ಮಾಡಲಿದೆ.

ಮಾರುತಿಯ ‘ಸೆಲೇರಿಯೊ’, ‘ಆಲ್ಟೊ ಕೆ10’ ಕಾರಿನಲ್ಲಿರುವ ಆಟೋಮ್ಯಾಟಿಕ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ (ಎಎಂಟಿ) ಎಂಬ ಹೊಸ ತಂತ್ರಜ್ಞಾನವನ್ನು ಈಗ ‘ಅಗ್ಗದ’ ನ್ಯಾನೊ ಕಾರಿಗೂ ಅಳವಡಿಸಲಾಗಿದೆ.

‘ಜೆನ್‌ ಎಕ್ಸ್‌‌ ನ್ಯಾನೊ ಈಸಿ ಶಿಫ್ಟ್‌’ ಹೆಸರಿನ ಈ ಕಾರನ್ನು ಓಡಿಸಲು, ಕ್ಲಚ್‌ ತುಳಿಯುವ ಮತ್ತು ಗೇರ್‌ ಬದಲಿಸುವ ಕಷ್ಟವೇ ಇಲ್ಲ. ಮುಂದೆ ಹೋಗಬೇಕಾದರೆ ಗೇರ್‌ ಲಿವರ್‌ ಅನ್ನು ‘ಎ’ (ಆಟೊ) ಮೋಡ್‌ಗೆ ಹಾಕಬೇಕು. ಹಿಂದಕ್ಕೆ ಚಲಿಸಬೇಕಾದರೆ ‘ಆರ್‌’ (ರಿವರ್ಸ್‌) ಮೋಡ್‌ಗೆ, ಎಲ್ಲಿಗೂ ಬೇಡ ನಿಂತಲ್ಲೇ ಇರಲಿ ಎನ್ನುವುದಕ್ಕೆ ‘ಎನ್‌’ (ನ್ಯೂಟ್ರಲ್‌) ಮೋಡ್‌ಗೆ ಹಾಕಬೇಕು. ಇದಲ್ಲದೆ, ‘ಎಸ್‌’ (ಸ್ಪೋರ್ಟ್ಸ್) ಮೋಡ್‌ಗೆ ಬದಲಿಸುವುದಕ್ಕೂ ಅವಕಾಶ ಇದೆ. ಈ ಬದಲಾವಣೆಗಳಿಗೆ ಮಾತ್ರ ಗೇರ್‌ ಲಿವರ್‌ ಬೇಕು. ಆದರೆ, ಅದನ್ನು ಬದಲಿಸುವುದಕ್ಕೆ ಕ್ಲಚ್‌ ತುಳಿಯಬೇಕಿಲ್ಲ. ಇಷ್ಟಕ್ಕೂ ಕ್ಲಚ್‌ ಇಲ್ಲವೇ ಇಲ್ಲ!

‘ಬೈಕ್‌ನಲ್ಲಿ ಓಡಾಡುವ ಸಾಮಾನ್ಯ ಜನರೂ ಕಾರಿನಲ್ಲಿ ಓಡಾಡುವ ಹಾಗೆ ಆಗಬೇಕು’ ಎಂದು ಟಾಟಾ ಸಂಸ್ಥೆಯ ಹಿಂದಿನ ಅಧ್ಯಕ್ಷ ರತನ್‌ ಟಾಟಾ ಅಗ್ಗದ ಕಾರನ್ನು ಜಗತ್ತಿಗೆ ಪರಿಚಯಿಸಿದ್ದರು. ‘ಒಂದು ಲಕ್ಷ ರೂಪಾಯಿಗೆ ಒಂದು ಕಾರು’ ಎಂದು ಹೇಳಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.  ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದ ಜನರು ಮುಗಿಬಿದ್ದು ಅದನ್ನು ಖರೀದಿಸಲಿಲ್ಲ.  ಬದಲಿಗೆ, ಅದರ ಗುಣಮಟ್ಟದ ಬಗ್ಗೆಯೇ ನಾನಾ ರೀತಿ ಚರ್ಚೆ ನಡೆಸಿದರು. ಅದು ‘ಆಟೋರಿಕ್ಷಾದ ಮತ್ತೊಂದು ರೂಪ’ ಎಂದೂ ಕುಹಕವಾಡಿದ್ದರು.

‘ಜಗತ್ತಿನ ಅತಿ ಅಗ್ಗದ ಕಾರು ಎನ್ನುವ ಹಿರಿಮೆ– ಗರಿಮೆಯಿಂದ ಪ್ರಯೋಜನ ಇಲ್ಲ’ ಎಂದು ತಿಳಿದ ಟಾಟಾ ಮೋಟಾರ್ಸ್‌ ಹಂತಹಂತವಾಗಿ ನ್ಯಾನೊ ಕಾರಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು. ಆರಂಭದಲ್ಲಿ ಪವರ್‌ ಸ್ಟೀರಿಂಗ್‌ ಇರಲಿಲ್ಲ. ಎಡ ಭಾಗದಲ್ಲಿ ಸೈಡ್‌ ಮಿರರ್‌ ಕೂಡ ಇರಲಿಲ್ಲ. ಗ್ರಾಹಕರ ಕೋರಿಕೆ ಮೇರೆಗೆ 2013ರಲ್ಲಿ ಅವೆಲ್ಲವನ್ನೂ ಒದಗಿಸಿತು. ಅದರ ನಂತರ ‘ಒಳ ಭಾಗದಿಂದ ಲಗೇಜ್‌ ಇಡುವುದು ಕಷ್ಟ. ಹೀಗಾಗಿ ಹಿಂಬದಿಯ ಬಾಗಿಲು ತೆರೆಯುವುದಕ್ಕೆ ಅವಕಾಶ ಇರಬೇಕು’ ಎಂದು ಗ್ರಾಹಕರು ತಮ್ಮ ಬೇಡಿಕೆ ಇಟ್ಟರು. ‘ನಗರ ಪ್ರದೇಶಗಳಲ್ಲಿ ಓಡಿಸುವುದಕ್ಕೆ ಆಟೋ ಗೇರ್‌ ಇದ್ದರೆ ಉತ್ತಮ’ ಎಂದೂ ಹೇಳಿದರು.

ಇವೆಲ್ಲವನ್ನೂ ಗಮನಿಸಿದ ಟಾಟಾ ಮೋಟಾರ್ಸ್‌ ಎ.ಎಂ.ಟಿ ತಂತ್ರಜ್ಞಾನದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಎಲ್ಲ ಕಾರುಗಳಲ್ಲಿ ಇರುವಂತೆ ನ್ಯಾನೊ ಕಾರಿಗೂ ಹಿಂಬದಿಯ ಬಾಗಿಲು ತೆರೆಯುವ ವ್ಯವಸ್ಥೆ  ಕಲ್ಪಿಸಲಾಗಿದೆ. 94 ಲೀಟರ್‌  ಬೂಟ್‌ ಸ್ಪೇಸ್‌ನಲ್ಲಿ ನಾಲ್ವರ ಲಘು ಪ್ರವಾಸಕ್ಕೆ ಅಗತ್ಯವಿರುವಷ್ಟು ವಸ್ತುಗಳನ್ನು ಕೊಂಡೊಯ್ಯುವ ಹಾಗೆ ಮಾಡಲಾಗಿದೆ.

ಹೊಸ ಕಾರಿನ ಮೇಲ್ಮೈ ಲಕ್ಷಣಗಳು ಹೆಚ್ಚಾಗಿ ಬದಲಾಗಿಲ್ಲ. ಅದರ ಆಕಾರ ಹಾಗೆಯೇ ಇದೆ.  ಮುಂದಿನ ಮತ್ತು ಹಿಂಬದಿಯ ಬಂಪರ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ‘ನಗು ಮುಖ’ದ (ಸ್ಮೈಲಿ ಫೇಸ್‌) ನ್ಯಾನೊ ಎಂದು ಹೇಳಿಕೊಳ್ಳುವ ಟಾಟಾ ಮೋಟಾರ್‌, ಕಾರಿನ ಹಿಂದೆ– ಮುಂದೆ ಇನ್‌ಫಿನಿಟ್‌ ಗ್ರಿಲ್‌ ಅಳವಡಿಸುವುದರ ಮೂಲಕ ಅದರ ನೋಟ ಮತ್ತಷ್ಟು ಆಕರ್ಷಕವಾಗಿರುವಂತೆ ಮಾಡಿದೆ. ಹೆಡ್‌ಲೈಟ್‌ಗಳ ವಿನ್ಯಾಸವನ್ನೂ ಬದಲಿಸಿದೆ.
 
ಆಟೋರಿಕ್ಷಾಗಳಲ್ಲಿ ಹಿಂಭಾಗ ಎಂಜಿನ್‌ ಕಾಣುವ ಹಾಗೆ ನ್ಯಾನೊ ಕಾರಿನಲ್ಲೂ ಎಂಜಿನ್‌  ಕಾಣುತ್ತಿತ್ತು. ಇದರ ಬಗ್ಗೆ ವ್ಯಾಪಕ ಟೀಕೆ ಕೂಡ ಮಾಡಲಾಗಿತ್ತು. ಈಗ ಅದನ್ನು ಪೂರ್ಣ ಕವರ್‌ ಮಾಡಲಾಗಿದೆ. ಮಾಮೂಲಿ ಕಾರಿನ ಲುಕ್‌ ಬಂದಿದೆ.

ಈ ಹಿಂದೆ ಇದ್ದ 642 ಸಿ.ಸಿ ಎಂಜಿನ್‌ ಅನ್ನೇ ಈಗಲೂ ಬಳಸಲಾಗಿದೆ. ಆದರೆ, ಅದರ ಕಾರ್ಯಕ್ಷಮತೆ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಹಿಂಬದಿಯ ಎಂಜಿನ್‌ ಸಮೀಪ ಇದ್ದ ರೇಡಿಯೇಟರ್‌ ಅನ್ನು ಮುಂಭಾಗಕ್ಕೆ ಸ್ಥಳಾಂತರಿಸಲಾಗಿದೆ.

ಗುಣಮಟ್ಟಕ್ಕೆ ಆದ್ಯತೆ
ಕಾರಿನ ಒಳ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ತೀರಾ ಕಳಪೆಯಾಗಿದ್ದ ಪ್ಲಾಸ್ಟಿಕ್‌ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲಾಗಿದೆ.  ಸೀಟುಗಳಿಗೆ ಡೇನಿಯಂ ಫ್ಯಾಬ್ರಿಕ್ಸ್‌ ಬಳಸಲಾಗಿದೆ. ಮುಂದಿನ ಎರಡೂ ಬಾಗಿಲುಗಳಿಗೆ ಪವರ್‌ ವಿಂಡೋ ವ್ಯವಸ್ಥೆ ಇದೆ. ಡ್ಯಾಷ್‌ಬೋರ್ಡ್‌ನಲ್ಲಿ ಎರಡು ಕಡೆ ಪರ್ಸ್, ಮೊಬೈಲ್‌ ಇತ್ಯಾದಿ ಸಣ್ಣಪುಟ್ಟ ಅಗತ್ಯ ವಸ್ತುಗಳನ್ನು ಇಡುವುದಕ್ಕೆ ಜಾಗ ಕಲ್ಪಿಸಲಾಗಿದೆ. ‘ಜೆಸ್ಟ್‌’ ಮತ್ತು ‘ಬೋಲ್ಟ್’‌ ಕಾರುಗಳಲ್ಲಿ ಬಳಸಲಾದ ಸ್ಟೇರಿಂಗ್‌ ಅನ್ನೇ ಜೆನ್‌ ಎಕ್ಸ್‌ ನ್ಯಾನೊ ಕಾರಿಗೂ ಬಳಸಿದ್ದು, ಹೆಚ್ಚು ಹಿತಕರ ಅನಿಸುತ್ತದೆ.

ಮತ್ತೊಂದು ಪ್ರಮುಖ ಬದಲಾವಣೆ ಅಂದರೆ ಪೆಟ್ರೋಲ್‌ ಟ್ಯಾಂಕ್‌ ಸಾಮರ್ಥ್ಯ ಹೆಚ್ಚಿಸಿರುವುದು. ಈ ಹಿಂದೆ ಕೇವಲ 15 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಇತ್ತು. ಈಗ ಅದನ್ನು 24 ಲೀಟರ್‌ಗೆ ಹೆಚ್ಚಿಸಿದ್ದು, ಕನಿಷ್ಠ 500 ಕಿ.ಮೀ. ಓಡಿಸುವವರೆಗೂ ಪೆಟ್ರೋಲ್‌ ಬಂಕ್‌ಗೆ ಹೋಗಬಾರದು ಎನ್ನುವುದು ಇದರ ಹಿಂದಿನ ಉದ್ದೇಶ ಎನ್ನುತ್ತಾರೆ ಟಾಟಾ ಅಧಿಕಾರಿಗಳು.

ಅತಿ ಕಡಿಮೆ ಜಾಗದಲ್ಲಿ ತಿರುಗಿಸಬಲ್ಲ ಕಾರು ಎನ್ನುವ ಹೆಗ್ಗಳಿಕೆಯೂ ಈ ನ್ಯಾನೊಗೆ ಇದೆ. ಕೇವಲ ನಾಲ್ಕು ಮೀಟರ್‌ ಸುತ್ತಳತೆಯ ಜಾಗದಲ್ಲಿ ನ್ಯಾನೊ ಕಾರನ್ನು ತಿರುಗಿಸಬಹುದು. ಹೀಗಾಗಿ ಇದು ಸಂಚಾರ ದಟ್ಟಣೆ  ಇರುವ ನಗರ ಪ್ರದೇಶಗಳಿಗೆ ಹೇಳಿಮಾಡಿಸಿದಂತಿದೆ.

110 ಕಿ.ಮೀ ವೇಗದಲ್ಲಿ...!
ಜೆನ್‌ ಎಕ್ಸ್‌ ನ್ಯಾನೊ ಬಿಡುಗಡೆಗೂ ಮುನ್ನ ಮಹಾರಾಷ್ಟ್ರದ ಪುಣೆಯಲ್ಲಿ ಮಾಧ್ಯಮದವರಿಗಾಗಿ ಪರೀಕ್ಷಾರ್ಥ ಚಾಲನೆಗೆ ಟಾಟಾ ಮೋಟಾರ್‌ ವ್ಯವಸ್ಥೆ ಮಾಡಿತ್ತು. ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಸಂದರ್ಭದಲ್ಲಿ ಅದರ ಕಾರ್ಯಕ್ಷಮತೆ ಹೇಗಿದೆ? ಹೆದ್ದಾರಿಗಳಲ್ಲಿ ಅದರ ಗರಿಷ್ಠ ವೇಗ ಎಷ್ಟು? ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಾರನ್ನು ಓಡಿಸಲಾಯಿತು.

ಸಂಚಾರ ದಟ್ಟಣೆ ಪ್ರದೇಶದಲ್ಲಿ ಎಎಂಟಿ ಹೆಚ್ಚು ಆರಾಮದಾಯಕ ಅನಿಸಿತು. ಗೇರ್‌ ಬದಲಿಸುವ ಕಷ್ಟ ಇಲ್ಲದ ಈ ವ್ಯವಸ್ಥೆ ಕಾರು ಚಾಲಕರಿಗೆ ಹೆಚ್ಚು ತ್ರಾಸ ಅನಿಸುವುದಿಲ್ಲ. ಪದೇ ಪದೇ ಕ್ಲಚ್‌ ತುಳಿಯುವುದು, ನಂತರ ಅದನ್ನು ಬಿಡುವ ಗೊಡವೆಯೇ ಇಲ್ಲ. ‘ಡಿ’ ಮೋಡ್‌ಗೆ ಹಾಕಿಕೊಂಡು ಆ್ಯಕ್ಸಿಲೇಟರ್‌ ತುಳಿದರೆ ಸಾಕು ಕಾರು ಮುಂದಡಿ ಇಡುತ್ತದೆ. ವೇಗವಾಗಿ ಹೋಗಬೇಕು ಎಂದರೆ ಸ್ವಲ್ಪ ಒತ್ತಡ ಹಾಕಿ ಆ್ಯಕ್ಸಿಲೇಟರ್‌  ತುಳಿಯಬೇಕು. ವಿಪರೀತ ಅದನ್ನು ತುಳಿದರೂ ಮೈಲೇಜ್‌ ಬರುವುದಿಲ್ಲ ಎಂದು ಎಚ್ಚರಿಕೆ ಕೊಡುವ ವ್ಯವಸ್ಥೆಯೂ ಈ ಕಾರಿನಲ್ಲಿರುವುದು ವಿಶೇಷ.

ಪ್ರತಿಕ್ಷಣದ ಕಾರಿನ ವೇಗ ಮತ್ತು ಚಾಲಕ ಅದನ್ನು ಹೇಗೆ ಓಡಿಸುತ್ತಿದ್ದಾರೆ, ಅದರಿಂದ ಎಷ್ಟು ಮೈಲೇಜ್‌ ಬರಬಹುದು ಇತ್ಯಾದಿ ಮಾಹಿತಿಯನ್ನು ನೀಡುವ ವ್ಯವಸ್ಥೆ ಕೂಡ ಇದೆ. ಇದು ಕೂಡ ದುಬಾರಿ ಕಾರುಗಳಲ್ಲಿ ಇರುವ ವ್ಯವಸ್ಥೆ ಎನ್ನುತ್ತಾರೆ ನ್ಯಾನೊ ಕಾರಿನ ವಿನ್ಯಾಸ ತಂಡದ ಮುಖ್ಯಸ್ಥ ಉಮೇಶ್‌ ಅಭ್ಯಂಕರ. ಇವರು ಮುಂಬೈನ ಐಐಟಿಯಲ್ಲಿ ಎಂ.ಟೆಕ್‌ ಮಾಡಿದ್ದಾರೆ. ‘ನ್ಯಾನೊ ಕಾರಿನ ವಿನ್ಯಾಸವನ್ನು ಜನಾಭಿಪ್ರಾಯದಂತೆ ಬದಲಿಸಲಾಗಿದೆ. ಇದು ಎಲ್ಲ ವರ್ಗದ ಜನರು ಇಷ್ಟಪಡುವ ಕಾರು ಆಗಲಿದೆ’ ಎನ್ನುತ್ತಾರೆ ಅವರು.

ನಗರ ಪ್ರದೇಶಕ್ಕೆ ಹೇಳಿ ಮಾಡಿಸಿರುವ ಈ ಕಾರಿನ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಹಳೇ ಕಾರಿನ ಹಾಗೆ ವೈಬ್ರೇಷನ್‌ ಇಲ್ಲ. ಗಟ್ಟಿಮುಟ್ಟಾಗಿದೆ. ಪುಣೆ– ಮುಂಬೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 110 ಕಿ.ಮೀ ವೇಗದಲ್ಲಿ ಕಾರು ಓಡಿಸಿದರೂ ಅಲುಗಾಡಲಿಲ್ಲ. ಟಾಟಾದವರೇ ಹೇಳುವ ಹಾಗೆ 80 ಕಿ.ಮೀ ವೇಗದಲ್ಲಿ ಕಾರು ಓಡಿಸುವುದು ಹೆಚ್ಚು ಸುರಕ್ಷಿತ. ಮೈಲೇಜ್‌ ಕೂಡ ಚೆನ್ನಾಗಿರುತ್ತದೆ.

‘ಆಟೋ ಮೋಡ್‌ನಲ್ಲಿ ಕಾರು ಓಡಿಸಿದರೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 21.9 ಕಿ.ಮೀ ಮೈಲೇಜ್‌ ಬರುತ್ತದೆ. ಮ್ಯಾನುಯಲ್‌ ಮೋಡ್‌ನಲ್ಲಿ ಅದರ ಕಾರ್ಯಕ್ಷಮತೆ ಹೆಚ್ಚಾಗಿ 23.6 ಕಿ.ಮೀವರೆಗೂ ಮೈಲೇಜ್‌ ಬರುತ್ತದೆ’ ಎನ್ನುತ್ತಾರೆ ಟಾಟಾ ಮೋಟಾರ್ಸ್‌ಸ ಉಪಾಧ್ಯಕ್ಷ ಗಿರೀಶ್‌ ವಾಘ.

ಇಷ್ಟೆಲ್ಲ ಹೊಸ ಹೊಸ ತಂತ್ರಜ್ಞಾನಕ್ಕೆ ನ್ಯಾನೊ ತೆರೆದುಕೊಂಡರೂ ಹಳೆಯದಾದ ‘ಡ್ರಮ್‌ ಬ್ರೇಕ್‌’ ವ್ಯವಸ್ಥೆಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.  ‘ಈ ರೀತಿಯ ಸಣ್ಣ ಕಾರುಗಳಿಗೆ ಡಿಸ್ಕ್‌ ಬ್ರೇಕ್‌ ಅಗತ್ಯ ಇಲ್ಲ’ ಎಂದೂ ಟಾಟಾ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಈ ಕಾರಿನ ದರ ಇನ್ನೂ ನಿಗದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT