ಧಾರವಾಡ: ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನವು ನೀಡುವ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಗೆ, ಪ್ರಸಕ್ತ ವರ್ಷ ಹಿರಿಯ ವಿಮರ್ಶಕ ಡಾ.ಜಿ.ಎಸ್. ಆಮೂರ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಇದೇ 16ರಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
‘ಕಥೆ, ಕಾದಂಬರಿ, ಜಾನಪದ ಸಂಶೋಧನೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ವಿಮರ್ಶಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಆಮೂರ ಈ ವರ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
‘ಹಿರಿಯ ಕವಿ, ಡಾ.ಚೆನ್ನವೀರ ಕಣವಿ ಅಧ್ಯಕ್ಷ ತೆಯ ಆಯ್ಕೆ ಸಮಿತಿ ಯಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಹಾಗೂ ಪ್ರೊ.ಶಾಂತಾ ಇಮ್ರಾಪುರ ಇದ್ದರು’ ಎಂದು ಪಾಟೀಲ ತಿಳಿಸಿದರು.