ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆಯ ಸ್ವಾತಂತ್ರ್ಯ ನೀಡುವ ಗೀತೆ...

Last Updated 12 ಜನವರಿ 2015, 16:53 IST
ಅಕ್ಷರ ಗಾತ್ರ

‘ಜಾತಿ ವ್ಯವಸ್ಥೆ ಪ್ರತಿಪಾದಿಸುವ ಭಗವದ್ಗೀತೆ’ (ಪ್ರೊ. ಕೆ.ಎಸ್. ಭಗವಾನ್‌, ಸಂಗತ, ಡಿ.24) ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡುವ ಪ್ರಸ್ತಾವಕ್ಕೆ ನನ್ನ ಸಮ್ಮತಿ ಇಲ್ಲ. ಆದರೆ ಗೀತೆಯ ಕುರಿತ ಭಗವಾನರ ಹೆಚ್ಚಿನ ಆಕ್ಷೇಪಗಳು ಒಪ್ಪುವಂತಿಲ್ಲ. ಹೇಗೆಂದರೆ:

ಕೃಷ್ಣನು ಅಧ್ಯಾತ್ಮ ಜ್ಞಾನ ಗಳಿಸಲು ತಪಸ್ಸು ಮಾಡಿದ್ದಕ್ಕೆ ವಿವರಗಳಿಲ್ಲ ಎಂದು ಭಗವಾನ್‌ ಅವರು ಹೇಳುತ್ತಾರೆ. ಆದರೆ ಅಧ್ಯಾತ್ಮ ಶಾಸ್ತ್ರದಲ್ಲಿ ತಪಸ್ಸು ಮಾಡದೆಯೂ ಕೆಲವು ವ್ಯಕ್ತಿಗಳು ಸಿದ್ಧಿ ಪಡೆಯಲು ಸಾಧ್ಯವಿದೆ. ಇದನ್ನು ಮುಕ್ತ ಪ್ರಜ್ಞೆಯ ದಾರ್ಶನಿಕ ಓಶೊ (ಇವರು ಬ್ರಾಹ್ಮಣ­ರಲ್ಲ. ಜೈನ ಸಮುದಾಯದಲ್ಲಿ ಹುಟ್ಟಿದವರು) ‘ಸಾಧನಾರಹಿತ ಸಿದ್ಧಿ’ಯೆಂದೂ, ಕೃಷ್ಣ ಅದನ್ನು ಪಡೆದಿದ್ದ ಎಂದೂ ಹೇಳುತ್ತಾರೆ (OSHO: KRISHNA-The Man and His Mission).  ಆಧುನಿಕ ಕಾಲದಲ್ಲಿ ರಮಣ ಮಹರ್ಷಿ­ಗಳು ಅಂತಹ ಸಾಧನಾರಹಿತ
ಸಿದ್ಧಿ­ಯನ್ನು ಪಡೆದಿದ್ದರು.

ಗೀತೆಯಲ್ಲಿ ಕುಲಕ್ಷಯ, ವರ್ಣಸಂಕರ ಇತ್ಯಾದಿ­ಗಳ ಬಗ್ಗೆ ಗೋಳಾಡಿದವನು ಅರ್ಜುನನೇ ಹೊರತು ಕೃಷ್ಣನಲ್ಲ. ಗೀತೆ ವ್ಯಕ್ತವಾದ ಸಂದರ್ಭ­ದಲ್ಲಿ ಅರ್ಜುನನ ಪಾತ್ರ ಯುದ್ಧದಲ್ಲಿ ತೊಡಗಿ­ರುವ ಯೋಧನ ಪಾತ್ರ. ಆ ಸಂದರ್ಭದಲ್ಲಿ ತಾನು ವಹಿಸಿದ ಪಾತ್ರಕ್ಕೆ ತಕ್ಕಂತೆ ನಡೆಯ­ಬೇಕಾದ್ದೇ ಸ್ವಧರ್ಮ. ಇದು ಎಲ್ಲ ಕಾಲಕ್ಕೂ ಸಲ್ಲುವ ಕರ್ತವ್ಯಜ್ಞಾನ. ಇದನ್ನು ಯಾವುದೋ ಕ್ಷಣಿಕ ಭಾವಾವೇಶದಿಂದ ಅರ್ಜುನ ಮರೆತಿದ್ದ. ಕೃಷ್ಣ ಅದನ್ನು ನೆನಪಿಸಿ, ಕರ್ತವ್ಯ ಕಠಿಣವಾಗಿದೆ­ಯೆಂದು ಪಲಾಯನ ಮಾಡಬಾರದೆಂದು ಹೇಳು­ತ್ತಾನೆ. ಇದನ್ನು ಕೃಷ್ಣ ಕೊಲೆಗೆ ಪ್ರೇರಣೆ ನೀಡಿದ್ದಾನೆಂದು ಪ್ರೊ. ಭಗವಾನರು ವ್ಯಾಖ್ಯಾ­ನಿ­ಸುವುದು ಹಾಸ್ಯಾಸ್ಪದ. ವೈಯಕ್ತಿಕ ಜಗಳಗಳಲ್ಲಿ ನಡೆಯುವ ಕೊಲೆಗೂ, ಸೈನಿಕರು ಯುದ್ಧದಲ್ಲಿ ಮಾಡುವ ಶತ್ರು ಸೈನಿಕರ ಕೊಲೆಗೂ, ನ್ಯಾಯಾಲಯ­ದಿಂದ ಮರಣ­ದಂಡನೆ­ಗೊಳ­ಗಾದವನ ಗಲ್ಲು­ಶಿಕ್ಷೆಗೂ (ಕೊಲೆ) ವ್ಯತ್ಯಾಸವೇ ಇಲ್ಲವೇ? ಇವೆಲ್ಲವೂ ಒಂದೇ ಎಂದಾದರೆ ನಾವು ದೇಶದ ಸೈನ್ಯ, ಪೊಲೀಸ್‌ ವ್ಯವಸ್ಥೆಗಳನ್ನೇ ವಿಸರ್ಜಿಸಿ ಸರ್ವನಾಶ ಮಾಡಿ­ಕೊಳ್ಳಬೇಕಾಗುತ್ತದೆ.

‘ನೀನು ಈ ಸಂದರ್ಭದಲ್ಲಿ ಮಾಡಬೇಕಾದ ಕರ್ತವ್ಯವನ್ನು (ಧರ್ಮ, ಕರ್ಮ) ಮಾಡು. ಅದರ ಪರಿಣಾಮ (ಫಲ) ನಿನ್ನೊಬ್ಬನ ಕೈಯ­ಲ್ಲಿಲ್ಲ. ಏಕೆಂದರೆ ಅದು ಅನೇಕ ವ್ಯಕ್ತಿಗಳ, ಶಕ್ತಿಗಳ ಸಂಯುಕ್ತ ಕ್ರಿಯೆಗಳ ಸಮಷ್ಟಿ ಪರಿಣಾಮ’ ಎಂಬುದೇ ‘ಕರ್ಮಣ್ಯೇವಾಧಿಕಾರಸ್ತೇ....’ಯ ಸಾರಾರ್ಥ. ಒಬ್ಬ ಆಟಗಾರ ‘ನಾವು ಗೆಲ್ಲುವುದಾದರೆ ಮಾತ್ರ ಆಡುತ್ತೇವೆ’ ಎಂದರೆ ಆ ಮಾತಿಗೆ ಅರ್ಥವಿಲ್ಲ. ಚೆನ್ನಾಗಿ ಆಡುವುದು ಆಟಗಾರನ ಕರ್ತವ್ಯ. ಸೋಲು–ಗೆಲುವು ಇತರ ಅನೇಕ ಅಂಶಗಳನ್ನವಲಂಬಿಸಿರು­ತ್ತದೆ. ಇದೇ ತತ್ವ ಯುದ್ಧರಂಗದಲ್ಲಿರುವ ಯೋಧ­ನಿಗೂ ಅನ್ವ­ಯಿಸು­ತ್ತದೆ. ಇದಕ್ಕೂ ಜೀತಪದ್ಧತಿಗೂ ತಳಕು ಹಾಕುವುದು ಅಸಂಬದ್ಧ ಪ್ರಲಾಪವೇ ಸರಿ.

ಪ್ರೊ. ಭಗವಾನರು ‘ಗೀತೆಯನ್ನು ಹೇಳಿದವ, ಕೇಳಿದವ ಹಾಗೂ ಬರೆದವ– ಈ ಮೂವರೂ ಅಬ್ರಾಹ್ಮಣರಾಗಿದ್ದರೂ ಅದರಲ್ಲಿ ತುಂಬಿರು­ವುದು ಬ್ರಾಹ್ಮಣಮತ’ ಎಂದಿದ್ದಾರೆ. ಇದು ಅವರ ತಪ್ಪು ತಿಳಿವಳಿಕೆ. ಬ್ರಾಹ್ಮಣಮತ ಎಂಬ ಮತವೇ ಇಲ್ಲ. ಅದು ಬ್ರಿಟಿಷ್‌ ವಸಾಹತುಶಾಹಿ­ಗಳ ಕೃತಕ ಸೃಷ್ಟಿ. ನಮ್ಮಲ್ಲಿರುವುದು ಸನಾತನ (ಹಿಂದೂ) ಧರ್ಮವಷ್ಟೆ. ಬ್ರಾಹ್ಮಣರು ಅದರ ಒಂದು ಭಾಗವಾದ ಪುರೋಹಿತ ವರ್ಗದವರಷ್ಟೆ. ಇಂಥ ಪುರೋಹಿತವರ್ಗ ಇಸ್ಲಾಂ, ಕ್ರೈಸ್ತ ಇತ್ಯಾದಿ ಮತಧರ್ಮ­ಗಳಲ್ಲೂ ಇದೆ. ಹಿಂದೂ ಧರ್ಮ­ದಲ್ಲಿ ಬ್ರಾಹ್ಮಣರಿಗೆ ಧಾರ್ಮಿಕ ವಿಷಯಗಳಲ್ಲಿ ಪ್ರಾಶಸ್ತ್ಯ­ವಿದ್ದಿ­ದ್ದರೂ ಅಧ್ಯಾತ್ಮ– ಸಾಧನೆ–ಸಿದ್ಧಿ ಇತರ ವರ್ಗದವರಿಗೂ ಲಭ್ಯವಿತ್ತು. ಕ್ಷತ್ರಿಯನಾಗಿದ್ದ ಜನಕಮಹಾರಾಜ, ವೈಶ್ಯ­ನಾ­ಗಿದ್ದ ತುಲಾಧಾರ, ಕಟುಕ­ನಾಗಿದ್ದ ಧರ್ಮವ್ಯಾಧ ಮುಂತಾದ ಜ್ಞಾನಿಗಳೇ ಇದಕ್ಕೆ ಸಾಕ್ಷಿ. ಹಾಗೆಯೇ ವಿಷ್ಣುವಿನ ದಶಾವತಾರಗಳಲ್ಲಿ ಬ್ರಾಹ್ಮಣ ಅವತಾರಗಳಾದ ವಾಮನ, ಪರಶುರಾಮರಿಗೆ ಪೂಜೆ, ಪ್ರಾಶಸ್ತ್ಯ­ಗಳಿಲ್ಲ. ಆದರೆ ಅಬ್ರಾಹ್ಮಣ ಅವತಾರ­ಗಳಾದ ರಾಮ, ಕೃಷ್ಣ, ನರಸಿಂಹ, ವರಾಹರಿಗೆ ಪೂಜೆ, ಪ್ರಾಶಸ್ತ್ಯ ಇರುವುದನ್ನು ಗಮನಿಸಬೇಕು.

ಗೀತೆಯು ಹಿಂದೂ ದರ್ಶನಗಳ ಕೋಷ್ಟಕ­ದಂತಿ­ದ್ದರೆ ಅದೇನೂ ತಪ್ಪಲ್ಲ. ಅದರಲ್ಲಿ ಧರ್ಮ, ಕರ್ಮ, ಯೋಗ, ಧ್ಯಾನ, ಭಕ್ತಿ, ಅಧ್ಯಾತ್ಮ, ಮನೋ­ವಿಜ್ಞಾನ, ಸಮಾಜ ವಿಜ್ಞಾನ, ವ್ಯಕ್ತಿತ್ವ­ವಿಕಾಸ ಮುಂತಾದ ಹಲವು ವಿಷಯಗಳಿರುವುದು ನಿಜ. ಆದ್ದರಿಂದ ಯಾರಿಗೆ ಯಾವುದರಲ್ಲಿ ಆಸಕ್ತಿ, ಅಭಿರುಚಿ ಇದೆಯೋ, ಅವರು ತಮಗೆ ಬೇಕಾದು­ದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಗೀತೆಯ ವೈಶಿಷ್ಟ್ಯವೇ ಹೊರತು ದೋಷವಲ್ಲ. ಗೀತೆಯ ಕೊನೆಯ ಅಧ್ಯಾಯದಲ್ಲಿ (18.63) ಕೃಷ್ಣನೇ ‘ನಾನು ಹೇಳಿದ್ದನ್ನು ಸಂಪೂರ್ಣ ವಿಮರ್ಶೆ ಮಾಡಿ ನಿನ್ನಿಷ್ಟದಂತೆ ಮಾಡು’ ಎಂದು ಹೇಳಿದ್ದನ್ನು ಮರೆಯಬಾರದು. ಆಯ್ಕೆಯ ಸ್ವಾತಂತ್ರ್ಯ­ವನ್ನು ಗೀತೆ ಓದುಗನಿಗೆ ನೀಡಿದೆ. ಹೆಚ್ಚಿನ ವಿವರಗಳಿಗೆ ಭಗವಾನರು ಓಶೊ ಅವರ ಗ್ರಂಥವನ್ನು ಓದಲಿ.

ಅಪಾರ್ಥ ಮಾಡಿಯಾದರೂ ಗೀತೆಯನ್ನು, ಬ್ರಾಹ್ಮಣ್ಯವನ್ನು ಖಂಡಿಸಬೇಕೆಂಬ ಹಟವಿಲ್ಲದೆ ತೆರೆದ ಮನಸ್ಸಿನಿಂದ, ಸಮಗ್ರ ದೃಷ್ಟಿಯಿಂದ ಅಧ್ಯಯನ ಮಾಡಿದರೆ ಗೀತೆಯ ಶ್ರೇಷ್ಠತೆಯ ಅರಿವಾದೀತು. ಆದಾಗ್ಯೂ ಅದೊಂದು ಧರ್ಮ­ಗ್ರಂಥ­ವಾಗಿರುವ ಕಾರಣ ಅದನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡುವುದಕ್ಕೆ ನನ್ನ ಸಮ್ಮತಿ ಇಲ್ಲ.
-ಬಿ.ವಿ. ಕೆದಿಲಾಯ, ಬೆಂಗಳೂರು

ಗೀತೆ ಹಾಗೂ ಜಾತಿ ವ್ಯವಸ್ಥೆ
ಕೆ.ಎಸ್‌.ಭಗವಾನ್‌ ಅವರು ಬರೆದ   ಲೇಖನ ವಿಚಾರಪೂರ್ಣವಾಗಿದೆ. ಭಗವದ್ಗೀತೆಯಲ್ಲಿ ಕೆಲವು ಮೌಲ್ಯಗಳು ಉಂಟೆಂದು ತೋರಿದರೂ, ಅದನ್ನು ಪ್ರಪಂಚದ ಶ್ರೇಷ್ಠ ಧಾರ್ಮಿಕ ಗ್ರಂಥಗಳಲ್ಲಿ ಒಂದು ಎಂದು ಪರಿಗಣಿಸಲಾಗಿ­ದ್ದರೂ ಒಟ್ಟಾರೆ  ಅದು ಪ್ರತಿಪಾದಿಸುವ ನೀತಿಯು ಜಾತಿ ವ್ಯವಸ್ಥೆಯ ಸ್ವೀಕರಣವೇ ಹೊರತು ಮಾನವರೆಲ್ಲ ಸಮಾನರೆಂಬ ಉದಾತ್ತ ತತ್ವವಲ್ಲ.

‘ಧರ್ಮಕ್ಷೇತ್ರೇ ಕುರುಕ್ಷೇತ್ರೇ’ ಎಂದು ಭಗವದ್ಗೀತೆ ಶುರುವಾಗುತ್ತದೆ. ಕುರುಕ್ಷೇತ್ರ ಕದನ ಕ್ಷೇತ್ರವು ಧರ್ಮಕ್ಷೇತ್ರವೂ ಅಲ್ಲ, ಅಲ್ಲಿ ನಡೆದುದು ಧರ್ಮಯುದ್ಧವೂ ಅಲ್ಲ. ಆರಂಭದ ಕೃಷ್ಣಾರ್ಜು­ನರ ಸಂವಾದದಲ್ಲಿ ಅರ್ಜುನನು ವಿಷಣ್ಣನಾಗಿ, ಯುದ್ಧ ವಿಮುಖಿಯಾಗಿ ಸಾರಥಿಯಾಗಿದ್ದ ಕೃಷ್ಣನ ಮುಂದೆ ಕೆಲವು ಆತಂಕಗಳನ್ನು, ಶಂಕೆಗಳನ್ನು, ಪ್ರಶ್ನೆಗಳನ್ನು ಇಡುತ್ತಾನೆ. ಜಿಜ್ಞಾಸೆ­ಯಲ್ಲಿ ಇರುತ್ತಾನೆ. ಆತನ ಸಂಶಯ, ಆತಂಕ­ಗಳಿಗೆ ನ್ಯಾಯವಾಗಿ ಉತ್ತರಿಸದ ಕೃಷ್ಣ, ತನ್ನ ಜಾಣ್ಮೆಯಿಂದ ಆತನ ಬಾಯಿ ಮುಚ್ಚಿಸುವ ತಂತ್ರವನ್ನು ಪ್ರಯೋಗಿಸುತ್ತಾನೆ. ವಾಗ್ವಾದ ಮುಂದುವರಿದಾಗ ಕೃಷ್ಣ ತನ್ನ ‘ವಿಶ್ವರೂಪ’ ಎಂಬ ಜಾದೂ ಅಥವಾ ಸಮ್ಮೋಹಿನಿ ವಿದ್ಯೆ­ಯನ್ನು ಪ್ರಯೋಗಿಸುತ್ತಾನೆ.

ಕೃಷ್ಣಾರ್ಜುನರ ಸಂವಾದವನ್ನು ಪರಿಶೀಲಿಸಿ­ದರೆ ಅರ್ಜುನನ ಅಭಿಪ್ರಾಯವೇ ಹೆಚ್ಚು ಸಂಗತ ಹಾಗೂ ಪ್ರಾಮಾಣಿಕ ಎನಿಸುತ್ತದೆ. ಕೃಷ್ಣನೇನೋ ಕೊನೆಗೂ ಅರ್ಜುನನನ್ನು ಪುಸಲಾಯಿಸಿ ವಿನಾಶಕಾರಿ ಯುದ್ಧಕ್ಕೆ ಪ್ರೇರೇಪಿಸುತ್ತಾನೆ. ಹೀಗಿದ್ದರೂ ಅರ್ಜುನ ಹೇಳಿದ ಮಾತೇ ಕೊನೆಗೆ ನಿಜವೆನಿಸುತ್ತದೆ.

ಹದಿನೆಂಟು ದಿನಗಳ ಮಹಾಭಾರತ ಮಹಾ­ಯುದ್ಧವಾದ ಬಳಿಕ ಅಲ್ಲಿ ಉಳಿದುದು ಬರಿಯ ‘ಸ್ಮಶಾನ ಕುರುಕ್ಷೇತ್ರ’ವಷ್ಟೆ. ಧರ್ಮರಾಯನಿಗೆ ಆಳಲು ದೊರಕಿದ್ದು ಸರ್ವ ರೀತಿಯಿಂದಲೂ ಸಂಪನ್ನವಾದ ಸಾಮ್ರಾಜ್ಯವಲ್ಲ. ವೃದ್ಧರೂ, ಅಂಗವಿಕಲರೂ, ದುರ್ಬಲರೂ, ವಿಧವೆಯರೂ ತುಂಬಿದ ಪ್ರಜಾವರ್ಗ. ಇಂತಹ ರಾಜ್ಯವನ್ನು ಆಳಲು ಧರ್ಮರಾಯ ಯಾವ ಪುಣ್ಯವನ್ನು ಮಾಡಿದ್ದನೋ? ಅಲ್ಲಿ ಯಾವ ಸಂತೋಷ, ಸೌಭಾಗ್ಯಗಳನ್ನು ಕಂಡನೋ?

ಪಾಂಡವರು ದ್ರೋಣ, ಭೀಷ್ಮಾದಿ ಗುರು ಹಿರಿಯರನ್ನು ವಧಿಸಬೇಕಾಯಿತು. ಬಂಧುಗಳೇ ಆಗಿದ್ದ ಕೌರವರನ್ನು ಕೊಲ್ಲಬೇಕಾಯಿತು. ಹದಿನೆಂಟು ಅಕ್ಷೋಹಿಣಿ ಸೇನೆ ಹತವಾಯಿತು. ಇದನ್ನು ಭೂಭಾರಹರಣ ಎನ್ನೋಣವೇ? ಮುಂದೆ ಬಂಧು ಹತ್ಯೆಯ ದೋಷ ನಿವಾರಣೆ­ಗಾಗಿ ಅಶ್ವಮೇಧಯಾಗ ಮಾಡಬೇಕಾಗಿ ಬಂದುದು ಏನನ್ನು ಹೇಳುತ್ತದೆ?

ಇದೆಲ್ಲವನ್ನೂ ಆಲೋಚಿಸಿದಾಗ ಭಗವದ್ಗೀತೆ ಪ್ರತಿಪಾದಿಸಿದ್ದು ಹಿಂಸಾತ್ಮಕವಾದ ಯುದ್ಧವೇ ಹೊರತು ಲೋಕಹಿತ ಕಾಯಕವಲ್ಲ ಎಂಬುದು ತಿಳಿಯುತ್ತದೆ.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರು ಭಗವದ್ಗೀತೆಯನ್ನು ಭಾರತದ ರಾಷ್ಟ್ರೀಯ ಗ್ರಂಥವೆಂದು ಕೊಂಡಾಡಲು ಹೊರಟಿರುವುದು ಒಪ್ಪತಕ್ಕದ್ದಲ್ಲ.
-ಪ್ರೊ. ಅಮೃತ ಸೋಮೇಶ್ವರ­ಕೋಟೆಕಾರ್‌, ದಕ್ಷಿಣ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT