ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ಕಾಣಿಕೆ ಗಿಡಮೂಲಿಕೆ

Last Updated 17 ಮೇ 2013, 19:59 IST
ಅಕ್ಷರ ಗಾತ್ರ

`ನಾಸ್ತಿಮೂಲಂ ಅನೌಷಧಂ'- ಅಂದರೆ ಔಷಧೀಯ ಗುಣಗಳಿಲ್ಲದ ಗಿಡಗಳಿಲ್ಲ ಎಂದು ಒಂದು ಸುಭಾಷಿತ ಹೇಳುತ್ತದೆ. ಏಕೆಂದರೆ ಭೂಮಿಯ ಮೇಲಿರುವ ಪ್ರತಿ ಗಿಡದಲ್ಲೂ ವಿಶಿಷ್ಟ ತೆರನಾದ ಔಷಧೀಯ ಗುಣ ಇರುತ್ತದೆ. ಅಂತಹ ಕೆಲವು ಗಿಡಗಳ ಪರಿಚಯ ಇಲ್ಲಿದೆ.

ಕಿರಾತ ಕಡ್ಡಿ
ಎರಡು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದಲ್ಲಿ ಕಡು ಹಸಿರು ಬಣ್ಣದ ಸಣ್ಣನೆಯ ಉದ್ದುದ್ದ ಎಲೆಗಳಿರುತ್ತವೆ. ನೀಲಿ ಬಣ್ಣದ ಹೂಗಳನ್ನು ಬಿಡುತ್ತವೆ. ಎಲ್ಲ ಕಡೆಗಳಲ್ಲೂ, ಎಲ್ಲ ಋತುಗಳಲ್ಲೂ ಬೆಳೆಯುವ ಗಿಡ. ಕನ್ನಡದಲ್ಲಿ ಕಿರಾತಕಡ್ಡಿ ಅಥವಾ ನೆಲಬೇವು ಎಂದೂ, ಸಂಸ್ಕೃತದಲ್ಲಿ `ಕಾಲಮೇಷ' ಎಂದೂ ಕರೆಯಲಾಗುವ ಇದರ ವೈಜ್ಞಾನಿಕ ಹೆಸರು `ಎಂಡೊಗ್ರಾಫಿಕ್ ಪೆನ್ಸಿಕ್ಯುಲೆ ಟಾ' ಎಂದು.

ಇದರ ಎಲೆಗಳಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ. ಜೊತೆಗೆ ಸಾಮಾನ್ಯವಾಗಿ ಎಲ್ಲ ರೀತಿಯ ಚರ್ಮ ರೋಗಗಳೂ ವಾಸಿಯಾಗುತ್ತವೆ.

ಎಲೆಗಳನ್ನು ಅರೆದು ಲೇಪಿಸುವುದರಿಂದ ಸಿಡುಬಿನ ಕಲೆಗಳು ಮಾಯವಾಗುತ್ತವೆ. ಎಲೆಗಳ ಕಷಾಯಕ್ಕೆ ಬೆಳ್ಳುಳ್ಳಿ ಸೇರಿಸಿ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳು ನಿವಾರಣೆಯಾಗುತ್ತವೆ. ತುರಿಕಜ್ಜಿ, ಗಜಕರ್ಣ ಮುಂತಾದವಕ್ಕೆ ಇದರ ಎಲೆಗಳನ್ನು ಅರೆದು ಹಚ್ಚಿದರೆ ಬೇಗನೇ ವಾಸಿಯಾಗುತ್ತವೆ. ಅಷ್ಟೇ ಅಲ್ಲದೆ ಇದರ ಕಷಾಯ ಸೇವನೆಯು ಬಾಣಂತಿಯರ ದಾಹ ತಗ್ಗಿಸುವುದರಲ್ಲೂ ಸಹಕರಿಸುತ್ತದೆ. ರುಚಿಯಲ್ಲಿ ಮಾತ್ರ ಇದು ಬಹಳ ಕಹಿ. ಆದರೆ ಕಿರಾತಕಡ್ಡಿ `ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ' ಎಂಬಂತೆ ಕೆಲಸ ನಿರ್ವಹಿಸಬಲ್ಲ ಅತ್ಯುತ್ತಮವಾದ ಔಷಧೀಯ ಗಿಡ.

ಆಡುಸೋಗೆ
ಒತ್ತೊತ್ತಾದ ಟೊಂಗೆಗಳಿಂದ ಕೂಡಿದ ಸಸ್ಯ ಇದು. ಬಿಳಿ ಬಣ್ಣದ ಹೂವಿನ ಗೊಂಚಲುಗಳಿರುವ ಈ ಸಸ್ಯಗಳು ಬೇಲಿ ಬದಿಗಳಲ್ಲಿ, ತೋಟದ ಬದುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಸಸ್ಯದ ಸಂಪೂರ್ಣ ಭಾಗಗಳು ಔಷಧೀಯ ಗುಣಗಳನ್ನು ಒಳಗೊಂಡಿವೆ. ಸಂಸ್ಕೃತದಲ್ಲಿ `ವಾಸಕ' ಎಂದು ಕರೆಯುವ ಇದರ ವೈಜ್ಞಾನಿಕ ಹೆಸರು `ಅಡತೋಡಾ ವಾಸಿಕಾ'.

ಔಷಧೀಯ ಗುಣ: ಆಡುಸೋಗೆ ಎಲೆಯ ರಸವನ್ನು ಸೇವಿಸುವುದರಿಂದ ಕೀಲುನೋವು, ಸಂಧಿವಾತಕ್ಕೆ ಉತ್ತಮ ಉಪಶಮನ ದೊರೆಯುತ್ತದೆ.

ರುಚಿಯಲ್ಲಿ ಬಹಳ ಕಹಿಯಾಗಿರುವ ಈ ಸೊಪ್ಪಿನ ರಸವನ್ನು ಹಚ್ಚುವುದರಿಂದ ತುರಿಕಜ್ಜಿ ಬಹುಬೇಗ ವಾಸಿಯಾಗುತ್ತದೆ.
ಆಡುಸೋಗೆ ಸೊಪ್ಪಿನ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟೆಯಲ್ಲಿ ಸೇವಿಸುತ್ತಾ ಬಂದರೆ ಕೆಮ್ಮು, ಕಫ ವಾಸಿಯಾಗುತ್ತದೆ. ಅಷ್ಟೇ ಅಲ್ಲದೆ ಕ್ಷಯರೋಗಕ್ಕೂ ಇದು ಉತ್ತಮ ಔಷಧ.

ಆಡುಸೋಗೆಯ ಬೇರನ್ನು ಜಜ್ಜಿ ಹಾಲಿನಲ್ಲಿ ಕುದಿಸಿ ಕಷಾಯ ತಯಾರಿಸಿ ಕುಡಿಯುವುದರಿಂದ ಅಜೀರ್ಣ, ಭೇದಿ ಇತ್ಯಾದಿ ಶಮನವಾಗುತ್ತವೆ. ಮಾತ್ರವಲ್ಲ ಇದು ಬಾಯಿಹುಣ್ಣಿಗೂ ಉತ್ತಮ ಔಷಧ ಎನಿಸಿಕೊಂಡಿದೆ.

ಚಳಿ ಜ್ವರವಿದ್ದಾಗ ಆಡುಸೋಗೆ ಸೊಪ್ಪು, ಬಳ್ಳಿ ಮೆಣಸು, ಕರಿ ಜೀರಿಗೆ, ಓಂಕಾಳು ಸೇರಿಸಿ ಕಷಾಯ ತಯಾರಿಸಿ, ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉತ್ತಮ ಪರಿಹಾರ ದೊರೆಯುತ್ತದೆ.

ಹೀಗೆ ಬಹುಮುಖವಾಗಿ ಕಾರ್ಯ ನಿರ್ವಹಿಸಬಲ್ಲ ಆಡುಸೋಗೆಯು ನಮಗೆ ಪ್ರಕೃತಿ ನೀಡಿದ ಕೊಡುಗೆ ಎಂಬುದರಲ್ಲಿ ಎರಡು ಮಾತಿಲ್ಲ.

ಗರಿಕೆ
ಸಾಮಾನ್ಯವಾಗಿ ಹೂದೋಟಗಳಲ್ಲಿ, ಗದ್ದೆ ಬದಿ, ಗುಡ್ಡ ಎಲ್ಲೆಂದರಲ್ಲಿ ಕಾಣಸಿಗುವ ಪುಟ್ಟ ಗಿಡ ಗರಿಕೆ. ಸಣ್ಣಗೆ, ಉದ್ದಕ್ಕೆ ಸೂಜಿಯಂತಹ ಉದ್ದುದ್ದ ಎಲೆಗಳನ್ನು ಹೊಂದಿರುವ ಗರಿಕೆ ಹುಲ್ಲಿನಲ್ಲಿರುವ ಅತ್ಯುತ್ತಮ ಔಷಧೀಯ ಗುಣಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ.

ಗರಿಕೆ ಹುಲ್ಲಿನ ರಸ ತೆಗೆದು ದಿನವೂ ಖಾಲಿ ಹೊಟ್ಟೆಯಲ್ಲಿ ಎರಡು ಚಮಚದಷ್ಟು ಸೇವಿಸುತ್ತಾ ಬಂದರೆ ನರಗಳ ಚೈತನ್ಯ ಹೆಚ್ಚುವುದರೊಂದಿಗೆ ದೇಹದ ಬೊಜ್ಜು ಕರಗುತ್ತದೆ.

ಒಂದು ಲೋಟ ಹಾಲಿಗೆ ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವಿಕೆ ತಡೆಗಟ್ಟಬಹುದು.

ಗರಿಕೆಯನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ ಗಾಯವಾದ ಜಾಗಕ್ಕೆ ಹಚ್ಚಿದರೆ, ಬೇಗನೇ ವಾಸಿಯಾಗುತ್ತದೆ. ಇಷ್ಟೇ ಅಲ್ಲದೆ ಗರಿಕೆಯು ಹೃದ್ರೋಗ, ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೂ ಪರಿಣಾಮಕಾರಿ ಔಷಧ.

ಹೀಗಾಗಿ ಎಲ್ಲ ಕಾಲದಲ್ಲೂ ದೊರೆಯುವ ಈ ಗಿಡಗಳನ್ನು `ಹಿತ್ತಲಗಿಡ ಮದ್ದಲ್ಲ' ಎಂಬಂತೆ ತಿರಸ್ಕರಿಸದೆ ಪುರಸ್ಕರಿಸಿ, ಉಳಿಸಿ, ಬೆಳೆಸಿ, ಬಳಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT