ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಸಮಸ್ಯೆ ಹಲವಾರು, ದಾರಿ ನೂರಾರು

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದೇಶದ ಶಿಕ್ಷಣ ಕ್ಷೇತ್ರದ ಕ್ರಾಂತಿಕಾರಕ ಹೆಜ್ಜೆ ಎಂದು ಭಾವಿಸಲಾದ ‘ಶಿಕ್ಷಣ ಹಕ್ಕು ಕಾಯ್ದೆ’ (ಆರ್‌ಟಿಇ) ಜಾರಿಯಾಗಿ  ಏಪ್ರಿಲ್‌ ಒಂದಕ್ಕೆ ಸರಿಯಾಗಿ ಐದು ವರ್ಷಗಳಾದವು. 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನೀಡುವ ಮಹತ್ವದ ಉದ್ದೇಶದೊಂದಿಗೆ ರೂಪಿಸಲಾದ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ  ದಿನದಂದು ಪ್ರತಿವರ್ಷ ಶಿಕ್ಷಣ ಹಕ್ಕು ದಿನಾಚರಣೆ ಆಚರಿಸಿ­ಕೊಂಡು ಬರಲಾಗುತ್ತಿದೆ.
ಆರ್‌ಟಿಇ ಐದನೇ ವರ್ಷಾಚರಣೆಯ ಸಂದರ್ಭದಲ್ಲಿ ಹತ್ತು, ಹಲವು ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ. ಕಾಯ್ದೆ ಜಾರಿ­ಯಿಂದ  ಶಿಕ್ಷಣ ವಂಚಿತ ಬಡ ಮಕ್ಕಳಿಗೆ ಏನಾ­ದರೂ ಪ್ರಯೋಜನವಾಗಿದೆಯೇ ಎಂಬ ಸಹಜ ಪ್ರಶ್ನೆ ಎದುರಾಗುತ್ತದೆ. ಬೆನ್ನಲ್ಲೇ  ಎಲ್ಲ ಮಕ್ಕಳಿಗೂ ಶಾಲೆಗಳಲ್ಲಿ ಪ್ರವೇಶ  ದೊರೆ­ತಿದೆಯೇ ಎಂಬ ಮತ್ತೊಂದು ಶಂಕೆ ಕಾಡಲು ಆರಂಭಿಸುತ್ತದೆ. 

ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಸಮೀಕ್ಷೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಇನ್ನೂ 1.70 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ!

ಈ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಇಲಾಖೆ ಕ್ರಿಯಾ ಯೋಜನೆಯೊಂದನ್ನು ರೂಪಿಸಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಟೆಂಟ್‌ ಶಾಲೆ ತೆರೆಯುವುದು, ಮೂರು ತಿಂಗಳ ವಿಶೇಷ ತರಬೇತಿ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ.

ಈ  ಎಲ್ಲ ಯೋಜನೆ, ಕಾರ್ಯಕ್ರಮಗಳು  ಸಮಸ್ಯೆಗಳಿಗೆ  ತಾತ್ಕಾಲಿಕ ಪರಿಹಾರ ಕಂಡು ಹಿಡಿಯುವ ಸೀಮಿತ ಉದ್ದೇಶದಿಂದ ಸಿದ್ಧಗೊಂಡವೇ ಹೊರತು ಮಕ್ಕಳು ಶಾಲೆಯಿಂದ ಹೊರಗುಳಿಯಲು ಮುಖ್ಯ ಕಾರಣ ಏನು ಎಂದು ಪತ್ತೆ ಹಚ್ಚುವ ಗೋಜಿಗೆ ಹೋಗಲಿಲ್ಲ.
1975ರಲ್ಲಿ  ಜಾರಿಯಾದ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯಂತೆ  ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಈ ಕಾರ್ಯಕ್ರಮ  ಕೇವಲ ಘೋಷಣೆ­ಯಾಗಿ ಉಳಿಯಬಾರದು.

ಜೀತಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿ­ಯಾದ ನಂತರ ಕೈಗೊಳ್ಳಲಾದ ಸಮೀಕ್ಷೆಗಳು ಜೀತದಾಳು ಮಕ್ಕಳ ಸಮಸ್ಯೆ ಮತ್ತು ಸಂಖ್ಯೆ­ಯನ್ನು ಗುರುತಿಸಿದವು.  ಅದಾದ ನಂತರ ಅಂಥವರಿಗೆ  ಪುನರ್ವಸತಿಯನ್ನೂ ಕಲ್ಪಿಸಲಾ­ಯಿತು. ನಂತರದ ದಿನಗಳಲ್ಲಿ ದೇಶದಲ್ಲಿ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನವಾಗಿ ಹೋಯಿತು ಎಂದು ನಂಬಲಾಯಿತು. ವಾಸ್ತವ­ದಲ್ಲಿ ಆ ಪದ್ಧತಿ ಕಪ್ಪುಕಲೆಯಂತೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. 

ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಬದಲು ಅವನ್ನು  ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಯಾವ ಮಕ್ಕಳೂ ಶಾಲೆಯಿಂದ ದೂರ ಉಳಿಯದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಬಡತನದ ಕರಾಳಮುಖ: ಬಹುತೇಕ ಮಕ್ಕಳು ಶಾಲೆಯಿಂದ ಹೊರಗುಳಿಯಲು ಮುಖ್ಯ ಕಾರಣ ಬಡತನ ಮತ್ತು ಬಾಲಕಾರ್ಮಿಕ ಪದ್ಧತಿ ಎಂಬುದು  ಕಟು ವಾಸ್ತವ.

27,808 ಮಕ್ಕಳು ಶಾಲೆಗೆ ಹೋಗದಿರಲು ಮುಖ್ಯ ಕಾರಣ ಅವರ  ಕುಟುಂಬ ಕೂಲಿ ಕೆಲಸದಲ್ಲಿ ತೊಡಗಿರುವುದು! ಆಂಧ್ರಪ್ರದೇಶದ ಎಂ.ವಿ. ಪ್ರತಿಷ್ಠಾನ ನಡೆಸಿದ ಸಮೀಕ್ಷೆ ಕೆಲವು ಆತಂಕಕಾರಿ ವಾಸ್ತವಾಂಶಗಳನ್ನು ಬಿಚ್ಚಿಟ್ಟಿದೆ. 

ಬಹುತೇಕ ಮಕ್ಕಳ ಮನೆ ದುಡಿಮೆ  ಶಾಲಾ ಅವಧಿಯಲ್ಲಿಯೇ. ಈ ಕೆಲಸದ ಅವಧಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಲ್ಲಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯ. ಶಾಲೆ ಆರಂಭಕ್ಕೂ ಮೊದಲು ಅಥವಾ ಶಾಲೆ ಅವಧಿ ಮುಗಿದ  ನಂತರ ಕೆಲಸದಲ್ಲಿ ತೊಡಗಿಕೊಳ್ಳಬಹುದು.
ಶಾಲೆಗೆ ಹೋಗುವ ಮಗುವಿನ ಕೆಲಸವನ್ನು ಕುಟುಂಬದ ಅನ್ಯ ಸದಸ್ಯರು ವಹಿಸಿಕೊಳ್ಳಬೇಕು. ಹಾಗಾದರೆ ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು ಎಂದು ಸಮೀಕ್ಷೆ ಕೆಲವು ಸಲಹೆ, ಸೂಚನೆ ನೀಡಿದೆ.
 
ಮಕ್ಕಳನ್ನು ಶಾಲೆಗೆ ಕಳಿಸಲೆಂದೇ ಕೆಲವು ಪೋಷಕರು ಮನೆಯಲ್ಲಿದ್ದ ದನ, ಕರುಗಳನ್ನು  ಮಾರಾಟ ಮಾಡಿದ ನಿದರ್ಶನಗಳಿವೆ. ಇಂಥ ಸಂದರ್ಭಗಳಲ್ಲಿ  ಆ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವುದು  ಅಗತ್ಯ.

ಕುಟುಂಬಕ್ಕೆ ಆದಾಯ ತರುವ   ಮಗು ಶಾಲೆಗೆ ಹೋದಾಗ ಅದಕ್ಕೆ  ಪರಿಹಾರ ರೂಪ­ವಾಗಿ   ಶಿಷ್ಯವೇತನ ನೀಡಿದಲ್ಲಿ ವಿದ್ಯಾರ್ಥಿ  ಕುಟುಂಬಕ್ಕೆ ಆರ್ಥಿಕ ನೆರವು ದೊರೆಯುತ್ತದೆ.

ಸಣ್ಣ ಹೆಗಲ ಮೇಲೆ ದೊಡ್ಡ ಹೊಣೆ: ಸಾಮಾನ್ಯ­ವಾಗಿ ಗ್ರಾಮೀಣ ಪ್ರದೇಶಗಳ ಕುಟುಂಬಗಳಲ್ಲಿ ಪೋಷಕರು ದುಡಿಯಲು ಹೋದಾಗ   ಒಡಹುಟ್ಟಿದ­ವರನ್ನು ನೋಡಿಕೊಳ್ಳುವ ಹೊಣೆ ಬಾಲಕಿಯರ ಹೆಗಲೇರುತ್ತದೆ.  ಹೀಗಾಗಿ ಅವರು ಶಾಲೆಗೆ ಹೋಗುವುದು ಅಪರೂಪ.
ಇಂಥ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ­ರುವ  ಹತ್ತಾರು ಚಿಕ್ಕಪುಟ್ಟ ಮಕ್ಕಳನ್ನು   ನೋಡಿ­ಕೊಳ್ಳಲು  ಮಹಿಳೆಯೊಬ್ಬಳನ್ನು ನಿಯೋಜಿಸ­ಬೇಕು. ಅದಕ್ಕಾಗಿ ಆ ಮಹಿಳೆಗೆ ವಿದ್ಯಾರ್ಥಿನಿ­ಯ­ರಿಗೆ ನೀಡುವ ಶಿಷ್ಯವೇತನದಲ್ಲಿ ಒಂದಿಷ್ಟು ದುಡ್ಡನ್ನು  ನಿಗದಿತವಾಗಿ ನೀಡಬಹುದು. ಆಗ ಹತ್ತಾರು ಬಾಲಕಿಯರು ಯಾವುದೇ ಅಡ್ಡಿ, ಆತಂಕ­ವಿಲ್ಲದೇ ಶಾಲೆಗೆ ತೆರಳಬಹುದು ಎನ್ನು­ತ್ತಾರೆ ಎಂಐಟಿ ಪ್ರಾಧ್ಯಾಪಕ ಮೈರಾನ್‌ ವೇನರ್‌.

ಬಾಲಕಾರ್ಮಿಕರಾಗಿ ದುಡಿಯುತ್ತಿರುವ 9,488 ಮಕ್ಕಳು ಶಾಲೆಯ ಮುಖ ಕಂಡಿಲ್ಲ.

ಆರ್‌ಟಿಇ ಮತ್ತು ಬಾಲಕಾರ್ಮಿಕ ಪದ್ಧತಿ ತಡೆ ಕಾಯ್ದೆಗಳು ಪರಸ್ಪರ ಪೂರಕವಾಗಿ ಕಾರ್ಯ­ನಿರ್ವ­ಹಿಸಬೇಕು. ಇಲ್ಲದಿದ್ದರೆ ಬಾಲಕಾರ್ಮಿಕ ಪದ್ಧತಿಗೆ ಮೂಗುದಾರ ತೊಡಿಸಲು  ಖಂಡಿತ ಸಾಧ್ಯವಿಲ್ಲ.

ಆರ್‌ಟಿಇ  ಕಾಯ್ದೆ  14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ.  ಆದರೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆ  ಇಂತಹ ಕೆಲವು  ಅಂಶಗಳಿಗೆ ಸಂಬಂಧಿಸಿದಂತೆ ಕಡ್ಡಾಯ ಹಕ್ಕು ನೀಡಿಲ್ಲ. ಮಕ್ಕಳನ್ನು ಎಲ್ಲ ರೀತಿಯ ದುಡಿಮೆಯಿಂದ ಹೊರಗಿಟ್ಟಿಲ್ಲ. ಅಪಾಯಕಾರಿ ಯಲ್ಲದ ಕ್ಷೇತ್ರ­ಗಳಲ್ಲಿ ಮಕ್ಕಳನ್ನು ಕೆಲಸಕ್ಕಿಟ್ಟು ಕೊಳ್ಳುವುದನ್ನು ಈ ಕಾಯ್ದೆ ನಿಷೇಧಿಸಿಲ್ಲ.
ಇದರಿಂದಾಗಿಯೇ ಕೃಷಿ, ಪಶು ಸಂಗೋಪನೆ­ಯಂತಹ ಅಪಾಯಕಾರಿಯಲ್ಲದ ಹಲವು  ಕ್ಷೇತ್ರಗಳಲ್ಲಿ ಮಕ್ಕಳು ದುಡಿಯುತ್ತಿದ್ದಾರೆ.

14 ವರ್ಷದೊಳಗಿನ ಮಕ್ಕಳನ್ನು ಎಲ್ಲ ರೀತಿಯ ಕೆಲಸಕ್ಕೆ (ಅಪಾಯಕಾರಿ ಮತ್ತು ಅಪಾಯ­ಕಾರಿಯಲ್ಲದ) ಇಟ್ಟುಕೊಳ್ಳು­ವು­ದನ್ನು  ತಡೆಯಲು ಬಾಲಕಾರ್ಮಿಕ ಪದ್ಧತಿಯನ್ನು ಕಟ್ಟು­ನಿಟ್ಟಾಗಿ ಮತ್ತು ಸಂಪೂರ್ಣವಾಗಿ ನಿಷೇಧಿಸಿಸ­ಬೇಕು. ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವ ವರಿಗೆ ನಿರ್ದಾಕ್ಷಿಣ್ಯವಾಗಿ ರೂ. 20 ಸಾವಿರ ದಂಡ ವಿಧಿಸ­ಬೇಕು. ಆ ಹಣವನ್ನು ಶಿಕ್ಷಣದಿಂದ ವಂಚಿತರಾದ ಬಾಲಕಾರ್ಮಿಕರ ಶಿಕ್ಷಣಕ್ಕೆ ವಿನಿಯೋಗಿಸಬೇಕು.

ಮಕ್ಕಳಿಗೇಕೆ ಗುಳೆ ಶಾಪ: ಬಡ ಕುಟುಂಬಗಳು ಒಂದೆಡೆ ನೆಲೆ ನಿಲ್ಲದೆ  ನಿರಂತರವಾಗಿ  ವಲಸೆ ಮತ್ತು ಗುಳೆ ಹೋಗುವ ಕಾರಣದಿಂದಾಗಿ 29,491 ಮಕ್ಕಳು ಶಿಕ್ಷಣದಿಂದ ವಂಚಿತ­ರಾಗಿದ್ದಾರೆ.

ಇಂತಹ ಮಕ್ಕಳಿಗಾಗಿಯೇ ಕಡ್ಡಾಯವಾಗಿ ಉಚಿತ ವಸತಿಶಾಲೆ ಸೌಲಭ್ಯ ಕಲ್ಪಿಸಬೇಕು. ಈ ಮಾಹಿತಿಯನ್ನು ಗುಳೆ  ಹೋಗುವ ಕುಟುಂಬ­ಗಳಿಗೆ ನೀಡಿ  ಸೌಲಭ್ಯ   ಸದ್ಬಳಕೆ ಮಾಡಿಕೊಳ್ಳು­ವಂತೆ ಮನವೊಲಿಸಬೇಕು. ಮೈನೆರೆಯುವುದು, ಬಾಲ್ಯವಿವಾಹ ಮುಂತಾದವು 9,461 ಬಾಲಕಿಯರು ಶಾಲೆಗೆ ಶರಣು ಹೇಳಲು  ಪ್ರಮುಖ ಕಾರಣಗಳಾಗಿವೆ.

ಶಾಲೆಗೆ ಹೋಗಿ, ಬರಲು ಉಚಿತ ಸಾರಿಗೆ ಸೌಲಭ್ಯ, ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ,   ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ಸ್‌ ಪೂರೈಕೆ ಇತ್ಯಾದಿ  ಬಾಲಕಿಯರ ಸ್ನೇಹಿ ಕ್ರಮಗಳು ಅವರ ಹಾಜರಾತಿ ಹೆಚ್ಚಳಕ್ಕೆ ಪೂರಕವಾಗಬಲ್ಲವು.

ಒಂದು ವೇಳೆ ಪೋಷಕರು ಶಾಲೆಗೆ ಹೋಗುವ ಹೆಣ್ಣು ಮಕ್ಕಳ  ಮದುವೆಗೆ ಮುಂದಾದರೆ ಅದನ್ನು ತಮ್ಮ ಗಮನಕ್ಕೆ ತರುವಂತೆ ಶಿಕ್ಷಕರು ಅಥವಾ ಮಕ್ಕಳ ಹಕ್ಕು ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿನಿ­ಯರಿಗೆ ತಿಳಿ ಹೇಳಬೇಕು. 

ಬಾಲ್ಯ ವಿವಾಹ ಯತ್ನಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಕಾನೂನು ಮಾರ್ಗದಲ್ಲಿಯೇ ತಡೆಯಬೇಕು.
ಬೇಕಿದೆ ದೃಢ ನಿರ್ಧಾರ: ಹತ್ತಿರದಲ್ಲಿ ಯಾವುದೇ  ಶಾಲೆ ಇರದ ಕಾರಣ 5,441 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ವಿದ್ಯಾರ್ಥಿ ವಾಸ­ವಿರುವ ಸ್ಥಳದಿಂದ  ಒಂದು ಕಿ.ಮೀ  ವ್ಯಾಪ್ತಿಯ ಹೊರಗಿರುವ  ಶಾಲೆಗಳಿಗೆ ತೆರಳಲು ಕಡ್ಡಾಯವಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ಸೌಲಭ್ಯ ಉಚಿತ ಶಿಕ್ಷಣದ ಒಂದು  ಕಡ್ಡಾಯ ಭಾಗವಾಗಬೇಕು.    

ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳಲ್ಲಿ ಒಂದಾದ  ಶಿಕ್ಷಣ ಹಕ್ಕಿನ ಮೂಲ ಆಶಯ ಈಡೇರಬೇಕಾದರೆ ಈ ಎಲ್ಲ ಬೇರು ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ದೃಢ ನಿರ್ಧಾರ ಮತ್ತು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ.
ಕಾತ್ಯಾಯಿನಿ ಚಾಮರಾಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT