ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಕಲಿಯುವ ಬಗೆ

Last Updated 29 ಜೂನ್ 2014, 19:30 IST
ಅಕ್ಷರ ಗಾತ್ರ

ಹತ್ತನೇ ತರಗತಿಯ ದ್ವಿತೀಯ ಭಾಷೆ (ಇಂಗ್ಲಿಷ್) ಪಠ್ಯಪುಸ್ತಕದಲ್ಲಿ ಒಟ್ಟು 8 ಘಟಕಗಳಿವೆ. ಇದರೊಂದಿಗೆ 4 ಪೂರಕ ಅಧ್ಯಯನಗಳನ್ನು ಸೂಚಿಸಲಾಗಿದೆ.  ಕೊನೆಯಲ್ಲಿ ಪೂರಕ ಮಾಹಿತಿ ನೀಡಲಾಗಿದೆ.   ಈ 8 ಘಟಕಗಳಲ್ಲಿಯೂ ಭಾಷಾ ಕೇಂದ್ರಿತ ಹಾಗೂ ವಿಷಯವಸ್ತು ಕೇಂದ್ರಿತ ಉದ್ದೇಶಗಳನ್ನು ಕಾಪಾಡಿಕೊಂಡು ಬರಲಾಗಿದೆ. ಈ ಹೊಸ ಪಠ್ಯಪುಸ್ತಕದಲ್ಲಿ ನಿಗದಿಪಡಿಸಿರುವ ಎಲ್ಲಾ ಗದ್ಯ ಮತ್ತು ಪದ್ಯ ಪಾಠಗಳನ್ನು ಮೂಲ ಲೇಖಕರು ಬರೆದಿರುವ ಯಥಾಪ್ರತಿಯನ್ನು ಹಾಗೆಯೇ ತೆಗೆದುಕೊಂಡು ಅವುಗಳಿಗೆ ಅಭ್ಯಾಸ ಪ್ರಶ್ನೆಗಳನ್ನು ಮತ್ತು ಚಟುವಟಿಕೆಗಳನ್ನು ರಚಿಸಲಾಗಿದೆ. ಇದರಿಂದ ಓದುಗರು ಪ್ರಥಮ  ಮಾಹಿತಿಯನ್ನು ಓದಿ, ಅರ್ಥೈಸಿಕೊಂಡು ಉತ್ತರಿಸಲು ಸಹಕಾರಿಯಾಗಿದೆ.

  ಮೊದಲ ಘಟಕವು ಹಾಸ್ಯಕ್ಕಾಗಿ ಮೀಸಲಾಗಿರಿಸಿದೆ. ಎರಡನೆಯ ಘಟಕವು ಕರುಣಾರಸವನ್ನು ಸೂಚಿಸುವಂಥದ್ದಾಗಿದೆ.
ಮೂರನೆಯ ಘಟಕದಲ್ಲಿ ನೆಟಿವಿಟಿ ಥೀಮ್ ಆಧರಿಸಿದೆ. ನಾಲ್ಕನೆಯ ಘಟಕದಲ್ಲಿ ಸಂತೋಷವನ್ನು ಬಿಂಬಿಸಲಾಗಿದೆ.  ಐದನೆಯದರಲ್ಲಿ ಸಂಗೀತವನ್ನು ಆರನೆಯ ಘಟಕದಲ್ಲಿ ಸಾಹಸವನ್ನು ಏಳನೆಯ ಘಟಕದಲ್ಲಿ ಇಚ್ಛಾಶಕ್ತಿಯನ್ನು ಹೆಚ್ಚಿಸುವಂತೆ ವಿಕಲ ಚೇತನರ ಬಗೆಗಿನ ಲೇಖನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂಟನೆಯ ಘಟಕವು ವೈಜ್ಞಾನಿಕ ಬರಹವನ್ನು ಒಳಗೊಂಡಿದೆ.

ಭಾಷಾ ಪಠ್ಯಪುಸ್ತಕದಲ್ಲಿ ಬರಹಕ್ಕೆ ಬೇಕಿರುವ ಎಲ್ಲ ರಸಗಳನ್ನು ಅಡಕಗೊಳಿಸುವ ಪ್ರಯತ್ನ ಇದಾಗಿದೆ. ಅಭಿವ್ಯಕ್ತಿಯ ವಿವಿಧ ಪ್ರಕಾರಗಳನ್ನುಒಂದೆಡೆ ಸಮಗ್ರವಾಗಿ ನೀಡುವಂತೆ ರೂಪಿಸಲಾಗಿದೆ.

ಕೇವಲ ಓದಿಗಾಗಿ ಈ ಅಧ್ಯಯನಗಳನ್ನು ರೂಪಿಸಿಲ್ಲ. ಪ್ರತಿ ಘಟಕದ ನಂತರವೂ ಭಾಷಾ ಕೌಶಲಗಳನ್ನು ಹೆಚ್ಚಿಸುವಂಥ ಚಟುವಟಿಕೆಗಳನ್ನು ನೀಡಲಾಗಿದೆ.  ಕೇಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಪ್ರಚೋದಿಸುವಂತೆ ಮಾಡಲಾಗಿದೆ. ಜೊತೆಗೆ ಶಬ್ದ ಸಂಪತ್ತು ಹೆಚ್ಚುವಂತೆ, ಮಾಡುವುದು, ಬರವಣಿಗೆ ಮತ್ತು ಭಾಷಾ ಬಳಕೆಯಲ್ಲಿ ವ್ಯಾಕರಣ ಬದ್ಧವಾಗಿರುವುದು, ಇವೆಲ್ಲವನ್ನೂ ಆನ್ವಯಿಕ ಗೊಳಿಸಲು ಪ್ರಾಜೆಕ್ಟ್‌ ವರ್ಕ್‌ಗಳನ್ನೂ ನೀಡಲಾಗಿದೆ. 

ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಓದಿನ ರುಚಿ ಹತ್ತಿಸಲು ಪೂರಕ ಓದನ್ನೂ ಪರಿಚಯಿಸಲಾಗಿದೆ.
ಪ್ರತಿಯೊಂದು ಘಟಕಗಳ ಅಧ್ಯಯನಕ್ಕೂ ಮೊದಲು ಹಲವಾರು ಚಟುವಟಿಕೆಗಳನ್ನು ಪರಿಚಯಿಸಲಾಗಿದೆ. ಈ ಚಟುವಟಿಕೆಗಳು ಆಯಾ ಘಟಕದ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ಸಾಹಸ, ಆನಂದ, ಹಾಸ್ಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸ್ವಯಂಪ್ರೇರಿತರಾಗಿ ಹಲ ವಾರು ಚಟುವಟಿಕೆಗಳನ್ನು ರೂಪಿಸಬಹುದಾಗಿದೆ. 

ಗದ್ಯಭಾಗದಲ್ಲಿ ಪ್ರತಿಯೊಂದು ಪುಟದಲ್ಲಿಯೂ ಪಾಠವನ್ನು ಮನನ ಮಾಡಲು ಹಲವಾರು ಉಪಾಯಗಳನ್ನು ಅಳವಡಿಸಲಾಗಿದೆ. ನಿಮಗೇನು ತಿಳಿಯಿತು, ನಿಮ್ಮ ಪ್ರತಿಕ್ರಿಯೆ ಏನು? ಎಂಬಂಥ ಪ್ರಶ್ನೆಗಳನ್ನು ಮೂರು ನಾಲ್ಕು ಪ್ಯಾರಾಗ್ರಾಫ್‌ಗಳ ನಂತರ ನೀಡಲಾಗಿದೆ. ಪುಟದಲ್ಲಿ ಬರುವ ಕಠಿಣ ಶಬ್ದಗಳಿಗೆ ಅರ್ಥಗಳನ್ನೂ ಅದೇ ಪುಟದ ಅಡಿಬರಹದಲ್ಲಿ ವಿವರಿಸಲಾಗಿದೆ. ಸರಳವಾಗಿ ಇಡೀ ಪಾಠವನ್ನು ಮನನ ಮಾಡಿಕೊಳ್ಳಲು ಈ ಎಲ್ಲ ಚಟುವಟಿಕೆಗಳೂ ಸಹಾಯ ಮಾಡಲಿವೆ.  ಮಕ್ಕಳ ಗಮನ ಸೆಳೆಯಲು, ಮನವರಿಕೆ ಮಾಡಿಕೊಡಲು ಪೂರಕ ಚಿತ್ರಗಳನ್ನೂ ಬಳಸಿಕೊಳ್ಳಲಾಗಿದೆ.

ಅಭಿವ್ಯಕ್ತಿಗೆ ಹೆಚ್ಚು ಅವಕಾಶ ಕೊಡುವಂಥ ಪ್ರಶ್ನೆಗಳನ್ನು ರೂಪಿಸಲಾಗಿದ್ದು, ಪಠ್ಯದ ಬಗ್ಗೆ ಯೋಚಿಸಿ ಎಂಬಂಥ ಚಟುವಟಿಕೆಯನ್ನು ನೀಡಲಾಗಿದೆ. ಸಿದ್ಧ ಉತ್ತರಗಳನ್ನು ಪಠ್ಯದಲ್ಲಿ ಹುಡುಕುವುದು ಅಸಾಧ್ಯ. ಅವರ ಅರಿವಿಗೆ ಬಂದಿದ್ದನ್ನು ಬರಹಕ್ಕೆ ಇಳಿಸಬೇಕಿರುವುದು ಈ ಪ್ರಶ್ನೋತ್ತರಗಳ ವಿಶೇಷವಾಗಿದೆ.
ವಿದ್ಯಾರ್ಥಿಗಳ ಶಬ್ದ ಸಂಪತ್ತನ್ನು ಹೆಚ್ಚಿಸಲು ಪ್ರತಿಯೊಂದು ಘಟಕದಲ್ಲಿಯೂ ಆ ಥೀಮ್‌ಗೆ ಅನುಗುಣವಾದ ಒಂದಷ್ಟು ಶಬ್ದಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆ ಶಬ್ದಗಳ ಅರ್ಥ, ಬಳಕೆಯನ್ನು ವಿವರಿಸಲಾಗಿದೆ.

ಭಾಷೆಯೊಂದನ್ನು ಕೇಳದೇ ಮಾತಿಗೆ ತರಲಾರರು. ಉತ್ತಮ ಕೇಳುಗ ಮಾತ್ರ, ಉತ್ತಮ ವಾಕ್ಪಟು ಆಗಬಹುದು. ಹಾಗಾಗಿ ಪುಸ್ತಕದಲ್ಲಿ ಸಂಭಾಷಣೆಯ ರೂಪದ ಚಟುವಟಿಕೆಗಳನ್ನೂ ನೀಡಲಾಗಿದೆ. ಶಬ್ದ ಸಂಪತ್ತಿನೊಂದಿಗೆ, ಬಳಕೆ, ಆಂಗಿಕ ಚಲನವಲನ ಮುಂತಾದವುಗಳಿಂದ ಭಾಷೆಯನ್ನು  ಸಂವಹನಕ್ಕೆ ಒಗ್ಗುವಂತೆ ಮಾಡಲು ಈ ಚಟುವಟಿಕೆಗಳನ್ನು ನೀಡಲಾಗಿದೆ.

ಓದಿಗೆ ಸಂಬಂಧಿಸಿದಂತೆಯೂ ಹಲವಾರು ಹೊಸತನದಿಂದ ಕೂಡಿದ ಪ್ರಯೋಗಗಳನ್ನು ನೀಡಲಾಗಿದೆ. ಸಂಕೇತಗಳನ್ನು ಅರ್ಥೈಸಿಕೊಳ್ಳುವುದು, ಚಿತ್ರಗಳನ್ನು ಓದುವುದು, ನಕ್ಷೆಯನ್ನು ಅರ್ಥೈಸಿಕೊಳ್ಳುವುದು, ಮುಂತಾದ ಪ್ರಯೋಗಗಳನ್ನು ನೀಡಲಾಗಿದೆ.  

ದಿನನಿತ್ಯದ ಬಳಕೆಗೆ ನೀಡಿರುವಷ್ಟೇ ಮಹತ್ವವನ್ನು ಬರವಣಿಗೆಗೂ ನೀಡಲಾಗಿದೆ.
ಇಂಗ್ಲಿಷ್‌ ಬರವಣಿಗೆಯ ಮೂಲ ಕೌಶಲಗಳಾದ, ಶಬ್ದ ಸಂಪತ್ತು, ಸ್ಪೆಲ್ಲಿಂಗ್‌, ಉಚ್ಚಾರಣೆ, ಕೈ ಬರಹ, ಮಾಹಿತಿ ಸಂಗ್ರಹ, ಕ್ರಮಬದ್ಧ ರೂಪದಲ್ಲಿ ಜೋಡಣೆ, ಕರಡುಪ್ರತಿ ತಯಾರಿಕೆ ಮುಂತಾದವುಗಳನ್ನೂ ನೀಡಲಾಗಿದೆ.

ಸಂವಹನದ ಮೂಲಕ ವ್ಯಾಕರಣ ಕಲಿಯಿರಿ ಎಂಬ ಚಟುವಟಿಕೆಯನ್ನು ನೀಡಿದ್ದು, ವ್ಯಾಕರಣ ಸೂತ್ರಗಳಿಗಿಂತ ಆನ್ವಯಿಕ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. 

ಮಾಹಿತಿ ಸಂಗ್ರಹಣೆಗಾಗಿ ಉಲ್ಲೇಖಗಳನ್ನು ಹುಡುಕುವಂತೆ, ಅವನ್ನು ಪ್ರಸ್ತುತ ಪಡಿಸುವಂತಹ ಪ್ರಾಜೆಕ್ಟ್‌ಗಳನ್ನೂ ನೀಡಲಾಗಿದೆ.
ಸಮಗ್ರವಾಗಿ ಈ ಪಠ್ಯಪುಸ್ತಕವನ್ನು ದಿನನಿತ್ಯದ ಬಳಕೆಯಲ್ಲಿ, ಬರಹದಲ್ಲಿ ಇಂಗ್ಲಿಷ್‌ ಅನ್ನು ಸರಳವಾಗಿ ಆಚರಣೆಗೆ ತರುವ ರೀತಿಯಲ್ಲಿ ವಿನ್ಯಾಸಗೊಳಿಸ ಲಾಗಿದೆ. ವಿದ್ಯಾರ್ಥಿಗಳೂ ಶಿಕ್ಷಕರೂ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಅಷ್ಟೆ

ಯಾವ ಪದ್ಯಗಳನ್ನೂ ಕಂಠಪಾಠಕ್ಕೆ ನೀಡಿಲ್ಲ. ಓದನ್ನು ಆಸ್ವಾದಿಸಲಿ ಎಂದೇ ಪದ್ಯದಲ್ಲಿನ ಕಾಲ್ಪನಿಕ ಅಂಶಗಳನ್ನೂ, ಉಪಮೇಯಗಳನ್ನು, ಆಲಂಕಾರಿಕ ಭಾವಗಳನ್ನೂ ಚರ್ಚಿಸುವಂಥ ಪ್ರಶ್ನೋತ್ತರಗಳನ್ನು ರೂಪಿಸಲಾಗಿದೆ. 

ಒಟ್ಟಾರೆಯಾಗಿ ಈ ಪುಸ್ತಕವು ವಿದ್ಯಾರ್ಥಿಗಳು ಜ್ಞಾನವನ್ನು ಕಟ್ಟಿಕೊಳ್ಳುವುದಕ್ಕೆ ಪ್ರೇರಣೆ ನೀಡುವಂತಿದ್ದು, ರಚನಾವಾದದ(ಕಂನ್ಟ್ರ್‌ಕ್ಟೀವಿಸ್ಟ್ ಅಪ್ರೋಚ್) ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.  ಭಾಷೆಯನ್ನು ಪ್ರತ್ಯೇಕವಾಗಿ ಕಲಿಯಲು ಸಾಧ್ಯವಿಲ್ಲ. ಬೇರೆ, ಬೇರೆ ವಿಷಯಗಳನ್ನು ಇಂಟಿಗ್ರೇಟ್ ಮಾಡಿದಾಗ ಮಾತ್ರ ಎಲ್ಲಾ ರೀತಿಯ ಪದಗಳ ಪರಿಚಯವಾಗಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಮತ್ತು ಬರೆಯಲು ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮಿಳಿತವಾದದ (ಇಂಟಿಗ್ರೇಟೆಡ್ ಅಪ್ರೋಚ್) ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.  ವಿಷಯದ ಪುನರ್‌ಮನನಕ್ಕೆ ಪೂರಕವಾಗಿ ಸರಪಳಿವಾದದ (ಸ್ಪೈರಲ್ ಅಪ್ರೋಚ್‌)ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.    

ವಿದ್ಯಾರ್ಥಿಯ ಸ್ವ-ಕಲಿಕೆಗೆ ಮತ್ತು ಸ್ವ-ಮೌಲ್ಯಮಾಪನಕ್ಕೆ ಅನುಗುಣವಾಗುವಂತೆ ಪುಸ್ತಕದಲ್ಲಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಈ ವಿಧಾನದಲ್ಲಿ ಬೋಧನೆ ಮತ್ತು ಪರೀಕ್ಷೆಗಿಂತ ಕಲಿಕೆ ಮತ್ತು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಹೆಚ್ಚು ಆದ್ಯತೆ ಇದ್ದು, ವಿದ್ಯಾರ್ಥಿಯ ಕಲಿಕೆಯನ್ನು ಮೌಲ್ಯಮಾಪನ ಮಾಡಿ, ಹಿಮ್ಮಾಹಿತಿಯನ್ನು ನೀಡುತ್ತಾ ಸಾಗಬೇಕಿದೆ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಕಂಠಪಾಠ ವ್ಯವಸ್ಥೆಯಿಂದ ಮಗುವನ್ನು ಹೊರತಂದು ತಾರ್ಕಿಕವಾಗಿ ಚಿಂತಿಸುವಂತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಎನ್‌ಸಿಎಫ್-2005ರ ಆಶಯದಂತೆ ಯಾವುದೇ ಪದ್ಯವನ್ನು ಕಂಠಪಾಠಕ್ಕೆ ನಿಗದಿಪಡಿಸಿಲ್ಲ. ಮಗು ತನಗೆ ಇಷ್ಟವಾದ ಪದ್ಯವನ್ನು ಹಾಡಬೇಕು.  ಇಲ್ಲಿ ಶಿಕ್ಷಕರು ಮಗುವಿನ ಕಲಿಕಾನುಭವವನ್ನು ಚಕ್‌ಲಿಸ್ಟ್ ಆಧಾರದ ಮೇಲೆ ಅಳೆಯಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT