ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಕಾವ್ಯದ ರುಚಿಹತ್ತಿಸಿ

Last Updated 29 ಫೆಬ್ರುವರಿ 2016, 19:46 IST
ಅಕ್ಷರ ಗಾತ್ರ

ಇತ್ತೀಚೆಗೆ ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಬರೆಯುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.   ಅದರಲ್ಲೂ ನಗರದಲ್ಲಿ ಸಾಹಿತ್ಯದ  ಓದು, ಬರವಣಿಗೆ ಕಾರ್ಯಾಗಾರಗಳು ಸಾಕಷ್ಟು ನಡೆಯುತ್ತಿವೆ. ಇದಕ್ಕೆ ಮತ್ತೊಂದು ಉದಾಹರಣೆ ‘ದ (ಗ್ರೇಟ್‌) ಇಂಡಿಯನ್‌ ಪೊಯೆಟ್ರಿ ಕಲೆಕ್ಟಿವ್‌’ ಸಂಸ್ಥೆ.

ಕನ್ನಡ ಸಾಹಿತ್ಯದ ಚರ್ಚೆ ಮತ್ತು ಓದಿನ ಜೊತೆ ಇಂಗ್ಲಿಷ್ ಸಾಹಿತ್ಯ ಕಲಿಕೆಯೂ ಚುರುಕಾಗಿದೆ.  ಸಮಕಾಲೀನ ಭಾರತೀಯ ಕಾವ್ಯದ ಓದು ಮತ್ತು ಕಾವ್ಯ ರಚನೆ ಬಗ್ಗೆ ತರಗತಿಗಳನ್ನು ನಡೆಸುತ್ತಿದೆ ‘ದ (ಗ್ರೇಟ್‌) ಇಂಡಿಯನ್‌ ಪೊಯೆಟ್ರಿ ಕಲೆಕ್ಟಿವ್‌’ ಸಂಸ್ಥೆ. ದ (ಗ್ರೇಟ್) ಇಂಡಿಯನ್‌ ಪೊಯೆಟ್ರಿ ಕಲೆಕ್ಟಿವ್ ಸಂಸ್ಥೆಯನ್ನು ಶುದ್ಧ ಕವಿತಾ ಮೋಹದಿಂದ ಹುಟ್ಟುಹಾಕಿದ್ದಾರೆ ಕವಯಿತ್ರಿಯರಾದ ಮಿನಲ್‌ ಹಜರತ್‌ವಾಲ್‌, ಎಲ್ಲೆನ್‌ ಕೊಂಬಿಯಿಲ್‌, ಶಿಖಾ ಮಾಳವಿಯ.

ಭಾರತೀಯ ಕಾವ್ಯದ ಬಗ್ಗೆ ತಿಳಿಯಲು ಬೆಂಗಳೂರಿನಲ್ಲಿ ಹನ್ನೊಂದು ವರ್ಷ ಇದ್ದ  ಎಲ್ಲೆನ್‌ ಕೊಂಬಿಯಿಲ್‌ ಅವರ ಮೂಲ ಶಿಕಾಗೊ.  ಮಿನಲ್‌ ಹಜರತ್‌ವಾಲ್‌, ಶಿಖಾ ಮಾಳವಿಯ ಅವರೊಂದಿಗೆ ಸೇರಿದ (ಗ್ರೇಟ್) ಇಂಡಿಯನ್‌ ಪೊಯೆಟ್ರಿ ಕಲೆಕ್ಟಿವ್ ಸಂಸ್ಥೆಯಲ್ಲಿ ನಿರಂತರವಾಗಿ ಕಾವ್ಯ ಚಟುವಟಿಯಲ್ಲಿ ತೊಡಗಿದವರು. ಸದ್ಯ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿ ಬೆಂಗಳೂರಿನ ಹಳೆಯ ಅನುಭವಗಳನ್ನು ಕಾವ್ಯದ ಮೂಲಕ ಹರಿಸುತ್ತಿದ್ದಾರೆ. 2013ರಲ್ಲಿ ಆರಂಭವಾದ ಸಂಸ್ಥೆ ಭಾರತೀಯ ನವೀನ, ವೈವಿಧ್ಯಮಯ ಕಾವ್ಯಾತ್ಮಕ ಧ್ವನಿಗಳನ್ನು ಪ್ರಕಟಿಸುತ್ತಿದೆ.

ಸಂಸ್ಥೆಯಿಂದ ಪುಸ್ತಕ ಪ್ರಕಟಣೆ
ಹೊಸದಾಗಿ ಕಾವ್ಯ ಕೃಷಿಯಲ್ಲಿ ತೊಡಗಿದವರಿಗೆ ಪ್ರೋತ್ಸಾಹಿಸುತ್ತಿರುವ ಸಂಸ್ಥೆಯು ಅವರಿಗಾಗಿ ವಾಚನಗೋಷ್ಠಿಗಳು, ಆ್ಯಪ್‌, ಕಾರ್ಯಾಗಾರ ಆಯೋಜಿಸುವ ಜೊತೆಗೆ ಕವನ ಸಂಕಲನ ಪ್ರಕಟಿಸುತ್ತಿದೆ. ಪ್ರತಿವರ್ಷ ಜೂನ್‌ ತಿಂಗಳಿನಲ್ಲಿ ‘ಎಮರ್ಜಿಂಗ್‌ ಪೊಯೆಟ್ಸ್‌ ಚಾಯ್ಸ್‌ ಹಾಗೂ ಎಡಿಟರ್ಸ್‌ ಚಾಯ್ಸ್‌’ ಪ್ರಶಸ್ತಿಗೆ ಅರ್ಜಿ ಅಹ್ವಾನಿಸುತ್ತದೆ. ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ನಗದು ಬಹುಮಾನವನ್ನು ನೀಡಿ, ಆಯ್ಕೆಯಾದ ಪದ್ಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ.

ಆ್ಯಂಡ್ರಾಯ್ಡ್‌ ಫೋನ್‌ಗಳಿಗೆ ಕಾವ್ಯ ಓದಿಗೆ ಆ್ಯಪ್‌ ತಯಾರಿಸಿದ್ದಾರೆ, ಈ ಆ್ಯಪ್‌ ವಿಶೇಷತೆ ಎಂದರೆ ಪ್ರತಿ ಬುಧವಾರ  ಹೊಸ ಪದ್ಯಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಅಲ್ಲದೆ ಪದ್ಯವನ್ನು ಓದಿ ಆ್ಯಪ್‌ ಬಳಕೆದಾರರು ಸಂವಾದ ನಡೆಸಬಹುದು. ಭಾರತೀಯ ಇಂಗ್ಲಿಷ್‌ ಬರಹಗಾರರ ಪದ್ಯಗಳಿಗೆ ಆದ್ಯತೆ. ‘ಭಾರತೀಯ ವಾಸ್ತವ ಚಿತ್ರಣವಿರುವ ಕವನಗಳು ಇಲ್ಲಿ ಹೆಚ್ಚು ಚರ್ಚೆಯಾಗುತ್ತವೆ ಹಾಗೂ ಆ್ಯಪ್‌ನಲ್ಲಿ ಪ್ರಕಟವಾಗುವ ಕವನಗಳನ್ನು ಇತರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಬುಕ್‌ಮಾರ್ಕ್ ಮಾಡಬಹುದು’ ಎಂದು ಆ್ಯಪ್‌ ಬಗ್ಗೆ ವಿವರಿಸುತ್ತಾರೆ ಮಿನಲ್‌ ಹಜರತ್‌ವಾಲ್‌.

ಅಪ್ಲಿಕೇಶನ್‌ನಲ್ಲಿ ಹಾಕುವ ಕವಿತೆಗಳು ಮ್ಯಾನ್ ಬೂಕರ್ ಪ್ರಶಸ್ತಿಯಲ್ಲಿ ಶಾರ್ಟ್‌್ ಲಿಸ್ಟ್‌ ಆದ ಜೀತ್‌ ಥಾಯಿಲ್‌, ಬೆಂಗಳೂರಿನ ಬರಹಗಾರ ಅಂಜುಮ್ ಹಸನ್ ಮತ್ತು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ವಿಜಯ್ ಶೇಷಾದ್ರಿ ಅವರಂಥ ಅಧುನಿಕ ಕವಿಗಳದ್ದು. ‘ಆ್ಯಪ್‌ನಲ್ಲಿ ಎಲ್ಲಾ ತರಹದ ಪದ್ಯಗಳನ್ನು ಹಾಕುತ್ತೇವೆ. ಭಾವನಾತ್ಮಕ, ಕ್ರಾಂತಿಕಾರಿ, ಹಾಸ್ಯ, ಶಾಂತರಸ ಹೀಗೆ ಎಲ್ಲ ಬಗೆಯ ಕಾವ್ಯವನ್ನು ಓದಬಹುದು’ ಎನ್ನುತ್ತಾರೆ ಮಿನಲ್‌ ಹಜರತ್‌ವಾಲ್‌. ಆಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಲು: goo.gl/4z7dS3

ಕಾವ್ಯ ಕಾರ್ಯಾಗಾರ ರೂಪರೇಷೆ
ಆ್ಯಪ್‌ ಜೊತೆಗೆ ಕಾವ್ಯ ಬರವಣಿಗೆ ಬಗ್ಗೆ ಕಾರ್ಯಾಗಾರವನ್ನು ದ (ಗ್ರೇಟ್‌) ಇಂಡಿಯನ್‌ ಪೊಯೆಟ್ರಿ ಕಲೆಕ್ಟಿವ್‌ ಸಂಸ್ಥೆ  ನಡೆಸುತ್ತಾ ಬಂದಿದೆ. ಹಲವು ವಿಷಯಾಧಾರಿತ ಕಾರ್ಯಾಗಾರವನ್ನು  ಸಂಸ್ಥೆ ರೂಪಿಸಿಕೊಂಡಿದೆ. ಪದ್ಯ ಬರವಣಿಗೆಯ ರಸಾಸ್ವಾದದಲ್ಲಿ ಲೈನ್ ಬ್ರೇಕ್ಸ್ ಬಹಳ ಮುಖ್ಯ. (ಉದಾಹರಣೆಗೆ–ಫ್ಯೂಚರ್ ಪರ್ಫೆಕ್ಟ್ ಆಫ್ ಎಲ್ಲೆನ್ ಕೊಂಬಿಯಿಲ್‌ ಪುಸ್ತಕದ ‘ಹಿಸ್ಟರೀಸ್’  ಕವಿತೆಯಲ್ಲಿ ಬರುವಂತೆ) ಲೈನ್‌ ಬ್ರೇಕ್‌ನ ಸಮಯೋಚಿತ ಬಳಕೆಯನ್ನು ಕಾರ್ಯಾಗಾರದಲ್ಲಿ ತಿಳಿಸುತ್ತಾರೆ.

ಹಾಗೆ ಛಂದೋಗತಿ, ಇದರ ಬಗ್ಗೆ ಅಧುನಿಕೋತ್ತರ ಕವಿಗಳು ಅಷ್ಟಾಗಿ ಗಮನಹರಿಸುತ್ತಿಲ್ಲವಾದರೂ ಕಾವ್ಯ ಬರವಣಿಗೆಗೆ ಇದು ಅಗತ್ಯ ಎನ್ನುವುದು ಇವರ ಪಾಠ. ಹೊಸ ಕವಿಗಳಿಗೆ  ಅಡಿಪಾಯ ಹಾಕುವ ಇವರು, ಕಲಿತ ನಂತರ ಎಲ್ಲಾ ಚೌಕಟ್ಟುಗಳನ್ನು ಮೀರಿ ಕಾವ್ಯ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು ಎಂದು ನವಕವಿಗಳಿಗೆ ಕಿವಿಮಾತು ಹೇಳುತ್ತಾರೆ.

ಕಾವ್ಯಕಟ್ಟುವಿಕೆಯಲ್ಲಿ ಶಬ್ದ ಲಹರಿ ಕೂಡ ಮುಖ್ಯ. ಓದುವಾಗಿನ ಪದ್ಯ ಗ್ರಹಿಕೆ, ಕೇಳುವ ಬಗೆ, ಪದಕ್ಕೊಂದು ಪದ ಹೊಂದಿಕೊಂಡು ಕಾವ್ಯವಾಗುವುದು... ಹೀಗೆ ಕವನ ಲಹರಿ ಉತ್ತಮಗೊಳಿಸಲು ಸಾಧ್ಯವಾಗುವುದು ಶಬ್ದ ಪ್ರಯೋಗದಿಂದ. ವ್ಯಂಜನ ಪ್ರಾಸ, ಆದಿಪ್ರಾಸ, ಅನುಕರಣ ಶಬ್ದ ಸೃಷ್ಟಿ, ಒತ್ತುಗಳ ಉಚ್ಚಾರ, ಓದುತ್ತಾ ಪದವನ್ನು ದೀರ್ಘಗೊಳಿಸುವುದು ಇವೆಲ್ಲಾ ಪದ್ಯದ ಓದಿನ ಕಲೆಗಳು. ಹಾಗೆ ಓದಿಗೆ ಅನುಕೂಲವಾಗುವಂತೆ ಬರೆಯುವುದನ್ನು ಶಬ್ದ ಬಳಕೆಯಲ್ಲಿ ತಿಳಿಸುತ್ತಾರೆ. ಹೀಗೆ ಕಾವ್ಯ ಸೃಷ್ಟಿಸುವ ನಿಟ್ಟಿನಲ್ಲಿ ಹೀಗೆ ತಮ್ಮನ್ನು ತೊಡಗಿಸಿಕೊಂಡಿರುವ ಕವಿಯಿತ್ರಿಯರು ಕನ್ನಡದ ಮನಸ್ಸುಗಳಿಗೆ ಇಂಗ್ಲಿಷ್‌ ಕಾವ್ಯದ ರುಚಿಹತ್ತಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT