ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಕಾಲ ಮಿಂಚಿಲ್ಲ

ಹುಲಿ ಸಂರಕ್ಷಣೆ ಸವಾಲು
Last Updated 13 ಆಗಸ್ಟ್ 2016, 4:53 IST
ಅಕ್ಷರ ಗಾತ್ರ

ಹುಲಿಯೊಂದು ಸತ್ತಾಗ, ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವವರ ಸಂಖ್ಯೆ ದೊಡ್ಡದಿದೆ.  ಆದರೆ, ಮೂಲ ಪ್ರಶ್ನೆ ಅದಲ್ಲ. ಹುಲಿಗಳ ಆವಾಸಸ್ಥಾನ ಏನಾಗುತ್ತಿದೆ ಎಂಬ  ಬಗ್ಗೆ ನಾವು ಗಮನ ಹರಿಸಬೇಕು. ಮಾನವನ ಹಸ್ತಕ್ಷೇಪ ಇಲ್ಲದ, ಹುಲ್ಲೆಗಳ ಸಂತತಿಯೂ ಸಾಕಷ್ಟಿರುವ ಸಮೃದ್ಧ ನೆಲೆ ಎಲ್ಲಿದೆ ಎಂಬುದು ಮುಖ್ಯ. ಇವೆರಡೂ ಇಲ್ಲದಿದ್ದರೆ ಹುಲಿಗಳನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ನೆಲೆಗಳನ್ನು ಸಂರಕ್ಷಿಸಲು ಏನು ಕ್ರಮ ಕೈಗೊಂಡಿದ್ದೇವೆ ಎಂಬುದು  ಹುಲಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖವಾದುದು.

ಹುಲಿಗಳ ನೆಲೆಗಳು ಕುತ್ತು ಎದುರಿಸುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮತ್ತಿತರ ಅಭಿವೃದ್ಧಿ ಯೋಜನೆಗಳು, ಕೈಗಾರಿಕೆಗಳು,  ಗಣಿಗಾರಿಕೆ, ಅದರಲ್ಲೂ ಪ್ರಮುಖವಾಗಿ ಕಲ್ಲಿದ್ದಲು ಮತ್ತು ಅದಿರು ಗಣಿಗಾರಿಕೆ ಹುಲಿಗಳ ಪಾಲಿಗೆ ಸಂಚಕಾರ ತರುತ್ತಿವೆ. ಇಂತಹ ಯೋಜನೆಗಳಿಗೆ  ಕೇಂದ್ರ ಸರ್ಕಾರ  ವಿವೇಚನೆ ಬಳಸದೆಯೇ ಹಸಿರು ನಿಶಾನೆ ತೋರಿಸುತ್ತಿರುವುದು ಹುಲಿಗಳ ಸಂತತಿ ರಕ್ಷಣೆ ನಿಟ್ಟಿನಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ ಬೇಡ ಎಂದು ಯಾರೂ ಹೇಳುತ್ತಿಲ್ಲ.

ಹೆದ್ದಾರಿಯು ಅತಿಸೂಕ್ಷ್ಮವಾದ ಹಾಗೂ ಮಹತ್ವದ ವನ್ಯಜೀವಿ ಆವಾಸಸ್ಥಾನಗಳ ಮೂಲಕವೇ ಹಾದು ಹೋಗಬೇಕೆಂಬ ಜಿಡ್ಡುತನ ಏಕೆ ಎಂಬುದೇ ಅರ್ಥವಾಗುವುದಿಲ್ಲ. ದೇಶದ ಉತ್ತರ–ದಕ್ಷಿಣಕ್ಕೆ 6 ಸಾವಿರ ಕಿಲೊ ಮೀಟರ್‌ ಉದ್ದದ ಕಾರಿಡಾರ್ ರಸ್ತೆ ನಿರ್ಮಿಸುವಾಗ ಅದು ಸಾಗುವ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಿದರೆ ಆಗುವ ನಷ್ಟವಾದರೂ ಏನು?  ಹೆದ್ದಾರಿಗಾಗಿ ವನ್ಯಜೀವಿ ಆವಾಸಸ್ಥಾನಕ್ಕೆ ಧಕ್ಕೆ ಉಂಟು ಮಾಡಿ, ಪರಿಹಾರದ ರೂಪದಲ್ಲಿ ಬೇರೆ ಕಡೆ ಗಿಡ ನೆಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ನೆನಪಿಡಬೇಕು.

‘ಹುಲಿ ಅಥವಾ ನಿಸರ್ಗದ ಸಂರಕ್ಷಣೆಯು ಅಭಿವೃದ್ಧಿಗೆ ಅಡ್ಡಿಯಾಗಿಲ್ಲ ಎಂಬ ವಿಚಾರದಲ್ಲಿ ನನಗೆ ಬಲವಾದ ನಂಬಿಕೆ ಇದೆ. ಹುಲಿ ಸಂರಕ್ಷಣೆಯನ್ನು ಆದ್ಯತೆಯಾಗಿ ಹೊಂದಿರದ ಕ್ಷೇತ್ರಗಳಲ್ಲೂ ಅವುಗಳ ರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವ ಮೂಲಕ ನಮ್ಮ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ತನ್ಮೂಲಕ ಸಂರಕ್ಷಣಾ ಕಾರ್ಯವು ಅಭಿವೃದ್ಧಿ ವಿರೋಧಿಯಲ್ಲ, ಅದು ಅಭಿವೃದ್ಧಿ ಸಾಧಿಸಲು ಇರುವ ಮಾರ್ಗ ಎಂಬುದನ್ನು  ನಿರೂಪಿಸಬೇಕಾಗಿದೆ’  ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆದ ಏಷ್ಯಾ ಸಚಿವರ ಸಮ್ಮೇಳನದಲ್ಲಿ ಹೇಳಿದ್ದಾರೆ. ಆದರೆ, ಅವರ ಮಾತುಗಳು ರಾಷ್ಟ್ರೀಯ ನೀತಿಯಾಗಿ ಜಾರಿಗೆ ಬರುತ್ತಿಲ್ಲ. ವನ್ಯಜೀವಿಗಳ ಸಂರಕ್ಷಣೆ ವಿಚಾರದಲ್ಲಿ ಎದುರಾಗಿರುವ ದೊಡ್ಡ ತೊಡಕು ಇದು.

ಅಭಿವೃದ್ಧಿ ಚಟುವಟಿಕೆಗಳು ವನ್ಯಜೀವಿಗಳ ಆವಾಸಸ್ಥಾನಗಳನ್ನು ಸೀಳಿಕೊಂಡು ಹೋಗುವುದರಿಂದ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಬೈಪಾಸ್‌ ನಿರ್ಮಿಸುವ ಮೂಲಕ ನಗರಗಳಲ್ಲಿ ಹೆದ್ದಾರಿ ಹಾದುಹೋಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದಾದರೆ ವನ್ಯಜೀವಿಗಳ ರಕ್ಷಣೆ ವಿಚಾರದಲ್ಲಿ ಇದು ಏಕೆ ಸಾಧ್ಯವಿಲ್ಲ? ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಇಂದು ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳು ಬೆಳವಣಿಗೆ ಹೊಂದಿಲ್ಲವೇ?

ಹೆದ್ದಾರಿಯು ಹುಲಿಗಳ ಆವಾಸಸ್ಥಾನವನ್ನು ಸೀಳಿಕೊಂಡು ಹೋಗುವುದನ್ನು ತಪ್ಪಿಸಲು ಮೇಲ್ಸೇತುವೆ ಅಥವಾ ಕೆಳಸೇತುವೆ  ನಿರ್ಮಾಣ, ನವೀನ ವಿನ್ಯಾಸದ ಸೇತುವೆ... ಹೀಗೆ ಅನೇಕ ಮಾರ್ಗೋಪಾಯಗಳಿವೆ. ಆದರೆ  ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂತಹ ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ಆಸಕ್ತಿಯನ್ನೇ ಹೊಂದಿಲ್ಲ. ವನ್ಯಜೀವಿಗಳ ಸಂರಕ್ಷಣೆಗೆ  ಗಂಭೀರ ಸಮಸ್ಯೆ ಎದುರಾಗಿರುವುದು ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡುವ ಸರ್ಕಾರದ ನೀತಿಯಿಂದ.  ವನ್ಯಜೀವಿಗಳನ್ನು ಉಳಿಸುವ ಬಗ್ಗೆ ಕಾಳಜಿ ವಹಿಸಬೇಕಾದ ಪರಿಸರ ಸಚಿವಾಲಯವು ಬಾಗಿಲು ತೆರೆದು ಎಲ್ಲ  ಕೈಗಾರಿಕಾ ಯೋಜನೆಗಳಿಗೆ ಕಣ್ಣು ಮುಚ್ಚಿ ಅನುಮತಿ ನೀಡುತ್ತಿದೆ. ಅಭಿವೃದ್ಧಿ ಹಾಗೂ ಸಂರಕ್ಷಣೆ ನಡುವೆ ಸಮತೋಲನ ಸಾಧಿಸುವ ವಿಚಾರದಲ್ಲಿ ಸೂಕ್ಷ್ಮಮತಿ ಪ್ರದರ್ಶಿಸಬೇಕಾದ ಸಚಿವಾಲಯದ ಈ ನಡೆ ಆಘಾತಕಾರಿ.

ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿದರೆ ಅದಕ್ಕೆ ದಂಡ ಪಾವತಿಸಬೇಕು. ಅರಣ್ಯೀಕರಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಕ್ಯಾಂಪ) ಖಾತೆಯಲ್ಲಿ ಇದುವರೆಗೆ ₹40 ಸಾವಿರ ಕೋಟಿ ಜಮೆಯಾಗಿದೆ.  ಗಿಡ ನೆಡುವ ಕಾರ್ಯಕ್ರಮಗಳಿಗೂ ಈ ಹಣ ಬಳಸಲಾಗುತ್ತಿದೆ.

ಇದರಿಂದ ಅರಣ್ಯ ಸಂರಕ್ಷಣೆಯ ಉದ್ದೇಶ ಸಾಕಾರ ಆಗುವುದಿಲ್ಲ. ಇದು ಹಣ ದುರ್ಬಳಕೆಗೆ ದಾರಿ ಮಾಡಿಕೊಟ್ಟಂತೆ. ಗಿಡ ನೆಡುವುದಕ್ಕೆ ಹಣಕಾಸಿನ ವ್ಯವಸ್ಥೆ ಕಲ್ಪಿಸಲು ಬೇರೆ ಅನೇಕ ಮಾರ್ಗೋಪಾಯಗಳಿವೆ. ಈ ಹಣವನ್ನು ಅರಣ್ಯ ಛಿದ್ರೀಕರಣ ತಡೆಯುವ ಉದ್ದೇಶಕ್ಕೆ ಮಾತ್ರ  ಬಳಸಬೇಕು ಎಂದು ನಾನು ಸಲಹೆ ನೀಡಿದ್ದೆ. ಆದರೆ ಅದನ್ನು ಸರ್ಕಾರ ಒಪ್ಪಿಲ್ಲ. ವನ್ಯಜೀವಿಗಳ ನೆಲೆಯಿಂದ ಸ್ವಯಂಪ್ರೇರಿತರಾಗಿ ಹೊರ ಬರಲು ಬಯಸುವವರಿಗೆ  ಪರಿಹಾರ, ಪುನರ್ವಸತಿ ಕಲ್ಪಿಸಲು ಕ್ಯಾಂಪ ನಿಧಿ ಬಳಸಲು ಕೇಂದ್ರ ಇತ್ತೀಚೆಗೆ ಅನುಮತಿ ನೀಡಿರುವುದು ಸಕಾರಾತ್ಮಕ ಬೆಳವಣಿಗೆ. 

ಅರಣ್ಯ ಒತ್ತುವರಿ ಇನ್ನೊಂದು ದೊಡ್ಡ ಸಮಸ್ಯೆ. ಅರಣ್ಯ ಮತ್ತು ಪರಿಸರ ಸಚಿವರ ಪ್ರಕಾರ, ದೇಶದಲ್ಲಿ ಇದುವರೆಗೆ 18.99 ಲಕ್ಷ ಹೆಕ್ಟೇರ್‌ ಅರಣ್ಯ ಒತ್ತುವರಿಯಾಗಿದೆ. ಅಂದರೆ ಸರಿಸುಮಾರು 19 ಸಾವಿರ ಚದರ ಕಿ.ಮೀ.ನಷ್ಟು ಅರಣ್ಯವನ್ನು ಕಳೆದುಕೊಂಡಿದ್ದೇವೆ. ಇದು ಒಂದು ರಾಜ್ಯದ ಗಾತ್ರಕ್ಕೆ ಸಮ. ಅರಣ್ಯ ಹಕ್ಕು ಕಾಯ್ದೆ ಅಡಿ ಜನರಿಗೆ ಭೂಮಿ ಹಕ್ಕು ನೀಡುವುದರಿಂದ 25 ಲಕ್ಷ ಹೆಕ್ಟೇರ್‌ ಅರಣ್ಯಕ್ಕೆ ಕುತ್ತು ಬರುವ ಆತಂಕವಿದೆ. ಇದೊಂದು ಮುಗಿಯದ ಕತೆ.
ಹಿಂದಿನ ಯುಪಿಎ ಸರ್ಕಾರ ವನ್ಯಜೀವಿ ಕಾಯ್ದೆಗೆ ತಿದ್ದುಪಡಿ ತಂದು, ದಂಡ ಹೆಚ್ಚು ಮಾಡಿದೆವು ಎಂದು ಹೇಳಿಕೊಂಡಿತು. ಶಿಕ್ಷೆ ಪ್ರಮಾಣ ಹೆಚ್ಚು ಮಾಡುವುದರಿಂದ ಏನೂ ಆಗುವುದಿಲ್ಲ. ವನ್ಯಜೀವಿಗಳ ಸಂರಕ್ಷಣೆಗೆ ಈಗಿರುವ ಕಾನೂನುಗಳು ಸಾಕಷ್ಟು ಪ್ರಬಲವಾಗಿವೆ. ಅವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಸಾಕು.

ಪರಿಸರ ಸಂಬಂಧಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಸಲುವಾಗಿ ಕೇಂದ್ರ ಸರ್ಕಾರ ಟಿ.ಎಸ್.ಆರ್. ಸುಬ್ರಮಣಿಯನ್ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಶಿಫಾರಸುಗಳು ಅಪಾಯಕಾರಿಯಾಗಿದ್ದವು. ಅದೃಷ್ಟವಶಾತ್‌ ಸಂಸತ್ತಿನ ಉಪಸಮಿತಿ ಈ ಶಿಫಾರಸುಗಳನ್ನು ತಿರಸ್ಕರಿಸಿತು.  ಕಾನೂನು ತಿದ್ದುಪಡಿ ಮಾಡದಿದ್ದರೂ ಕೆಲವು ಸುತ್ತೋಲೆಗಳು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸುವ ಮೂಲಕ ಕಾನೂನು ಸಡಿಲ ಮಾಡುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿ. ಉದಾಹರಣೆಗೆ, ಈ ಹಿಂದೆ ಗಣಿಗಾರಿಕೆಗೆ ಗುತ್ತಿಗೆ ಅವಧಿ 30 ವರ್ಷಗಳಿಗೆ ಸೀಮಿತವಾಗಿತ್ತು. ಖನಿಜ ವಿನಾಯಿತಿ ನಿಯಮಗಳಲ್ಲಿ (ಮಿನರಲ್‌ ಕನ್‌ಸೆಷನ್‌ ರೂಲ್ಸ್‌) ಬದಲಾವಣೆ ತಂದು ಈ ಅವಧಿಯನ್ನು 50 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದೊಂದು ರೀತಿ ಹಿತ್ತಲಬಾಗಿಲಿನಿಂದ ಪ್ರವೇಶ ಮಾಡಿದಂತೆ.

ದೇಶದಲ್ಲಿ ಶೇ 4ರಷ್ಟು ಭೂಪ್ರದೇಶವನ್ನು ಮಾತ್ರ ವನ್ಯಜೀವಿಗಳ ಸಂರಕ್ಷಣೆಗೆ  ಕಾಯ್ದಿರಿಸಲಾಗಿದೆ. ಉಳಿದ ಶೇ 96ರಷ್ಟು ಭೂಪ್ರದೇಶವನ್ನು ಬಳಸಿಕೊಂಡ ಬಳಿಕವೂ ನಮಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯವಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ವಿಜ್ಞಾನ, ತಂತ್ರಜ್ಞಾನದ ನೆರವೂ ಲಭ್ಯ. ಹಣದ ಕೊರತೆ ಇಲ್ಲ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ತಳಮಟ್ಟದಲ್ಲೇ ಸಕಾರಾತ್ಮಕ ಬದಲಾವಣೆ ತರಲು ರಾಷ್ಟ್ರೀಯ ನೀತಿ ರೂಪಿಸುವುದು ತುರ್ತಾಗಿ ಆಗಬೇಕಾದ ಕೆಲಸ.
*
ಸಭೆಯೇ ನಡೆದಿಲ್ಲ
ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆ ಹೊಣೆ ಹೊತ್ತಿರುವುದು ಸಂವಿಧಾನಬದ್ಧ ಸಂಸ್ಥೆಯಾದ ರಾಷ್ಟ್ರೀಯ ವನ್ಯಜೀವಿ ಮಂಡಳಿ. ಪ್ರಧಾನಿ ಇದರ ಅಧ್ಯಕ್ಷರು. ಮಂಡಳಿಯಲ್ಲಿ 47 ಸದಸ್ಯರು ಇರಬೇಕು. ಅವರಲ್ಲಿ 10 ಸದಸ್ಯರು ಪರಿಸರ ವಿಜ್ಞಾನಿಗಳು ಹಾಗೂ ಐವರು ಸ್ವಯಂಸೇವಾ ಸಂಸ್ಥೆಗಳನ್ನು ಪ್ರತಿನಿಧಿಸುವವರಾಗಿರಬೇಕು. ಉಳಿದವರು ಸಂಸದರು, ರಾಜ್ಯ ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು. ಭಾರಿ ಯೋಜನೆಗಳಿಗೆ ಮಂಡಳಿಯ ಅನು ಮತಿ ಪಡೆಯುವುದು ತೀರಾ ಮುಖ್ಯ. ಅಚ್ಚರಿಯೆಂದರೆ ಮಂಡಳಿ ಎರಡು ವರ್ಷಗಳಲ್ಲಿ ಒಂದು ಸಭೆಯನ್ನೂ ನಡೆಸಿಲ್ಲ. ಈಗಿನ ಎನ್‌ಡಿಎ ಸರ್ಕಾರ ಮಂಡಳಿ ರಚನೆ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಬಳಿಕವಷ್ಟೇ ಕೆಲವು ಸದಸ್ಯರನ್ನು ನೇಮಿಸಲಾಯಿತು.

ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹೆಚ್ಚಿನ ಅಧ್ಯಯನಕ್ಕಾಗಿ ಮಂಡಳಿಯು ಸ್ಥಾಯಿ ಸಮಿತಿಗಳನ್ನು ರಚಿಸಬಹುದು. ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚನೆಯಾಗದಿದ್ದರೂ ಐವರು ಸದಸ್ಯರ ಸ್ಥಾಯಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಎರಡು ವರ್ಷಗಳಲ್ಲಿ 8 ಬಾರಿ ಸಭೆ ಸೇರಿದೆ. 301 ಯೋಜನೆಗಳನ್ನು ಪರಿಶೀಲಿಸಿದ್ದು ಈ ಪೈಕಿ ಕೇವಲ ನಾಲ್ಕು ಯೋಜನೆಗಳನ್ನು ತಿರಸ್ಕರಿಸಿದೆ. ಶೇಕಡ 1.29ರಷ್ಟು ಯೋಜನೆಗಳು ಮಾತ್ರ ತಿರಸ್ಕೃತಗೊಂಡಿ ರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಮಂಡಳಿಯ ಆದೇಶ ದಂತೆ ಕಾರ್ಯ ನಿರ್ವಹಿಸಬೇಕಾದ ಸ್ಥಾಯಿ ಸಮಿತಿಯು ಮಂಡಳಿಯ ಮೇಲೇ ಪ್ರಭುತ್ವ ಸಾಧಿಸಿದಂತಿದೆ. ಇದರಿಂದ ಮಂಡಳಿಯ ಪರಿಸ್ಥಿತಿ ನಾಯಿಯನ್ನೇ ಬಾಲ ಅಲ್ಲಾಡಿಸಿದಂತಾಗಿದೆ.

- ನಿರೂಪಣೆ: ಪಿ.ವಿ.ಪ್ರವೀಣ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT