ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದ ‘ಸ್ವದೇಶಿ’ ವಾಹನ ಪರೀಕ್ಷೆ ಯಶಸ್ವಿ

Last Updated 23 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸಲು ಮರುಬಳಕೆಯ ರಾಕೆಟ್‌ ಅಭಿವೃದ್ಧಿಯ ನಿಟ್ಟಿನಲ್ಲಿ ಇಸ್ರೊ ಒಂದು ಹೆಜ್ಜೆ ಮುಂದಿಟ್ಟಿದೆ. ‘ಸ್ವದೇಶಿ’ ಎಂಬ ಹೆಸರಿನ ಮರುಬಳಕೆಯ ಉಡಾವಣಾ ವಾಹನದ ಪರೀಕ್ಷೆ ಸೋಮವಾರ ಯಶಸ್ವಿಯಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಬೆಳಗ್ಗೆ 7 ಗಂಟೆಗೆ ಮರುಬಳಕೆ ಉಡಾವಣಾ ವಾಹನವನ್ನು (ರಿಯೂಸೆಬಲ್‌ ಲಾಂಚ್‌ ವೆಹಿಕಲ್‌ –ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌– ಆರ್‌ಎಲ್‌ವಿ–ಟಿಡಿ) ಹಾರಿಸಲಾಯಿತು. 65 ಕಿ.ಮೀ. ಎತ್ತರಕ್ಕೆ ಹಾರಿದ ವಾಹನವು ಬಾಹ್ಯಾಕಾಶ ತಲುಪಿತು. ನಂತರ ಅದು  ವಾತಾವರಣಕ್ಕೆ ಹಿಂದಿರುಗಿ ಬಂಗಾಳ ಕೊಲ್ಲಿಗೆ ಬಿತ್ತು.

ವಾತಾವರಣಕ್ಕೆ ಮರು ಪ್ರವೇಶಿಸುವಾಗ ಉಂಟಾಗುವ ಅತಿಯಾದ ಶಾಖವನ್ನು ತಾಳಿಕೊಳ್ಳುವುದಕ್ಕಾಗಿ ವಿಶೇಷವಾದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ವಾಹನವು ಶ್ರೀಹರಿಕೋಟಾದಿಂದ 450 ಕಿ.ಮೀ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ನಿಗದಿಪಡಿಸಲಾಗಿದ್ದ ಸ್ಥಳದಲ್ಲಿಯೇ ಬಿತ್ತು. 
ನೀರಿನ ಮೇಲೆ ಅಪ್ಪಳಿಸಿದ ರಭಸಕ್ಕೆ ವಾಹನವು ಛಿದ್ರವಾಗಿದೆ. ವಾಹನವು ನೀರಿಗೆ ಬಿದ್ದಾಗ ತೇಲುವ ರೀತಿಯಲ್ಲಿ ವಿನ್ಯಾಸ ಮಾಡದಿರುವುದು ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉಡಾವಣಾ ವಾಹನಕ್ಕೆ ಯಾವುದೇ ಹಾನಿ ಆಗದ ರೀತಿಯಲ್ಲಿ ವಾಹನವನ್ನು ಇಳಿಸುವ ಪರೀಕ್ಷೆ ಮುಂದಿನ ಹಂತಗಳಲ್ಲಿ ನಡೆಯಲಿದೆ.

ಶ್ರೀಹರಿಕೋಟಾದ ಉಡಾವಣಾ ಕೇಂದ್ರ ಮತ್ತು ಹಡಗೊಂದರಲ್ಲಿ ಸ್ಥಾಪಿಸಲಾಗಿದ್ದ ಕೇಂದ್ರದ ಮೂಲಕ ಹಾರಾಟದ ಮೇಲೆ ನಿಗಾ ಇರಿಸಲಾಗಿತ್ತು. ಒಟ್ಟು 770 ಸೆಕೆಂಡ್‌ನಲ್ಲಿ ಕಾರ್ಯಾಚರಣೆ ಮುಕ್ತಾಯಗೊಂಡಿತು.

ಇಸ್ರೊದಲ್ಲಿ ಎನ್‌ಎಎಲ್‌ ಪಾತ್ರ (ಬೆಂಗಳೂರಿನಿಂದ ಪ್ರಜಾವಾಣಿ ವರದಿ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮರು ಬಳಕೆ ಉಡಾವಣಾ ವಾಹನದ ಯಶಸ್ಸಿನಲ್ಲಿ  ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ ಮಹತ್ವದ ಪಾತ್ರವಿದೆ.

ಉಡಾವಣಾ ವಾಹನದ ಏರೋ ಡೈನಮಿಕ್‌ ಮತ್ತು ಶಬ್ದ ಪರೀಕ್ಷೆಯನ್ನು ಸಿಎಸ್‌ಐಆರ್‌- ಎನ್‌ಎಎಲ್‌ ಪ್ರಯೋಗಾಲಯದಲ್ಲಿ ಕೈಗೊಳ್ಳಲಾಯಿತು.  ಉಡಾವಣಾ ವಾಹನವು ನಭಕ್ಕೆ ಚಿಮ್ಮುವ ಸಂದರ್ಭದಲ್ಲಿ ಗಾಳಿಯನ್ನು ಸೀಳಿ ಮುನ್ನುಗುವಾಗ ಅದರ ಶಬ್ದ ಮತ್ತು ಭಾರದ ಸಾಮರ್ಥ್ಯವನ್ನು ಏಕೀಕೃತಗೊಳಿಸುವ ದಿಸೆಯಲ್ಲಿ ಪರೀಕ್ಷೆನಡೆಸಲಾಗುತ್ತದೆ.

ವಾಹನದ ವಿನ್ಯಾಸವು ವೇಗೋತ್ಕರ್ಷಕ್ಕೆ ಅಡ್ಡಿ ಉಂಟಾಗುವಂತಿದ್ದರೆ ಅದನ್ನು ಬದಲಿಸಲು ಅವಕಾಶವಿರುತ್ತದೆ.  ಈ ಪರೀಕ್ಷೆ 1.2 ಮೀಟರ್‌ ವಿಂಡ್‌ ಟನೆಲ್‌ನಲ್ಲಿ ನಡೆಸಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಯೋಜನೆಗಿರುವ ಅತ್ಯಂತ ಮಹತ್ವ ಪರೀಕ್ಷಾ ಕೇಂದ್ರ ಇದು. ಇಲ್ಲಿ ಗಾಳಿಯ ವೇಗವು ಶಬ್ದದ ವೇಗಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎಂದು  ಸಿಎಸ್‌ಐಆರ್‌- ಎನ್‌ಎಎಲ್‌ ನಿರ್ದೇಶಕ ಶ್ಯಾಮ್‌ ಚೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT