ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು ಗುರು ನಿಹಾರ್‌

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಬೆಂಗಳೂರಿನ ಈಜು ಕೋಚ್‌ ನಿಹಾರ್‌ ಅಮೀನ್‌  ಅವರೊಡನೆ ಜಿ.ಶಿವಕುಮಾರ್‌ ನಡೆಸಿದ ಮಾತುಕತೆ ಇಲ್ಲಿದೆ.

ದೇಶದ ನಾನಾ ಭಾಗಗಳಿಂದ ಈಜುಪಟುಗಳು ಅವರನ್ನು ಅರಸಿ ಬರುತ್ತಾರೆ. ಹಾಗೆ ಬಂದವರ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ಹೊಸ ತಂತ್ರಗಳನ್ನು ಹೇಳಿಕೊಟ್ಟು ನವೋತ್ಸಾಹ ತುಂಬಿ ಎತ್ತರದ ಸಾಧನೆಯ ಹಾದಿಯಲ್ಲಿ ಈಜುವಂತೆ  ಮಾಡುವ  ಗುರು ನಿಹಾರ್‌ ಅಮೀನ್‌.

ಭಾರತ ಕಂಡ ಕೆಲವು ಪ್ರಮುಖ ಈಜುಪಟುಗಳಿಗೆ ನಿಹಾರ್‌ ಅಮೀನ್‌ ಅವರ ಮಾರ್ಗದರ್ಶನ ಸಿಕ್ಕಿದೆ. ಶ್ರೇಷ್ಠ ಈಜುಪಟುಗಳಾದ ಶಿಖಾ ಟಂಡನ್‌, ಎಸ್‌.ಎಚ್‌.ಹಕೀಮುದ್ದೀನ್‌ , ನಿಶಾ ಮಿಲ್ಲೆಟ್‌, ರೆಹಾನ್‌ ಪೂಂಚಾ, ವೀರ್‌ಧವಳ್‌ ಖಾಡೆ ಮತ್ತು ಸಂದೀಪ್‌ ಸೆಜ್ವಾಲ್‌, ಪ್ರಶಾಂತ್‌ ಕರ್ಮಾಕರ್‌ ಹೀಗೆ ಹಲವು ಮಂದಿ ಅಮೀನ್‌ ಅವರ ಮಾರ್ಗದರ್ಶನದಲ್ಲಿ ಪಳಗಿದ್ದಾರೆಂಬುದು ವಿಶೇಷ.

ಅಮೀನ್‌ ಅವರು ರಾಷ್ಟ್ರೀಯ ತಂಡಕ್ಕೆ ಕೋಚ್‌ ಆಗಿ ಮಾತ್ರವಲ್ಲ, ತಂಡದ ಮ್ಯಾನೇಜರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಈಜಿನ ಪಾಠ ಕಲಿತವರು ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟ, ಕಾಮನ್‌ವೆಲ್ತ್‌, ವಿಶ್ವ ಚಾಂಪಿಯನ್‌ಷಿಪ್‌ ಹೀಗೆ ಎಲ್ಲಾ ಕೂಟಗಳಲ್ಲೂ ಭಾಗವಹಿಸಿದ್ದಾರೆ. 

ಅಮೆರಿಕದ ಈಜು ಕೋಚ್‌ಗಳ ಸಂಸ್ಥೆಯಿಂದ ಲೆವೆಲ್‌–5 ಪ್ರಮಾಣಪತ್ರ ಕೋಚ್‌ ಎಂಬ ಹಿರಿಮೆಯೂ ಅಮೀನ್‌ ಅವರದ್ದಾಗಿದೆ. ಅವರು ಮೂರು ದಶಕಗಳಿಂದ  ಭಾರತದ ವಿವಿಧ ಕಡೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಜೀವಮಾನ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಈ ವರ್ಷ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿದೆ. ಈಜು ವಿಭಾಗದಲ್ಲಿ ಈ ಪ್ರಶಸ್ತಿ ಪಡೆದ ದೇಶದ ಮೊದಲ ಕೋಚ್‌ ಎಂಬ ಹೆಗ್ಗಳಿಕೆ ಹೊಂದಿರುವ ನಿಹಾರ್‌ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.

* ಕೋಚ್‌ ವೃತ್ತಿ ಆರಂಭವಾಗಿದ್ದು ಹೇಗೆ?
1981ರಲ್ಲಿ ನನ್ನ ಸಹೋದರಿ ಶಹನಾಜ್‌ ಶಾಕೂರ್‌ ಈಜಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರು 1982ರ ಏಷ್ಯನ್‌ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದರು. ಅಂದಿನ ದಿನಗಳಲ್ಲಿ ಅವರಿಗೆ ಗುಣಮಟ್ಟದ ಸೌಕರ್ಯಗಳಿರಲಿಲ್ಲ. ಜತೆಗೆ ಕೋಚ್‌ಗಳೂ ಇರಲಿಲ್ಲ. ಹೀಗಾಗಿ ನಾನೇ ಅವಳಿಗೆ ಮಾರ್ಗದರ್ಶನ ನೀಡಲು ಮುಂದಾದೆ. ಹೀಗೆ ಈ ಕಾಯಕ  ಆರಂಭವಾಯಿತು.

* ಅಮೆರಿಕದಲ್ಲಿ ಕಳೆದ  ದಿನಗಳ ಬಗ್ಗೆ ಹೇಳಿ?
1988ರಲ್ಲಿ ಈ ಕೋಚ್‌ ಕೆಲಸವನ್ನು ಬಿಟ್ಟು  ನಮ್ಮ ತಂದೆಯ ಜತೆ ಫರ್ನಿಚರ್‌್  ವ್ಯವಹಾರಗಳಲ್ಲಿ ತೊಡಗಿ ಕೊಂಡೆ. ಆದರೆ ಮನಸ್ಸು ಮಾತ್ರ ಕೋಚಿಂಗ್‌ನತ್ತಲೇ ಸೆಳೆಯುತ್ತಿತ್ತು. ಹೀಗಾಗಿ ಈ ವೃತ್ತಿಯಲ್ಲೇ ಮುಂದುವರಿಯಬೇಕು ಎಂದು ದೃಢವಾಗಿ ನಿಶ್ಚಯಿಸಿದೆ. ಮರು ವರ್ಷವೇ ಅಮೆರಿಕಕ್ಕೆ ಹೋದೆ. ನಾಲ್ಕು ವರ್ಷಗಳ ಕಾಲ (1989ರಿಂದ 1992) ಅಲ್ಲಿನ ಒಲಿಂಫಿಕ್‌ ಕೋಚ್‌ ಜ್ಯಾಕ್‌ ನೆಲ್ಸನ್‌ ಅವರೊಂದಿಗೆ ಸಹಾಯಕನಾಗಿ ದುಡಿದೆ.

ಈ ಅವಧಿಯಲ್ಲಿ ಅಲ್ಲೇ ರಾಷ್ಟ್ರೀಯ ಸಹಾಯಕ ಕೋಚ್‌ ಫ್ಲಾರಿಡಾದ ಫೋರ್ಟ್‌ ಲೌಡೆರ್‌ಡೇಲ್‌ ಈಜು ತಂಡದ ಹಿರಿಯ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿ ಈ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸಿದೆ.

* ವೃತ್ತಿಯ ಆರಂಭದ ದಿನಗಳು ಹೇಗಿದ್ದವು?
1992ರಲ್ಲಿ ಒಂದು ದಿನ ಮಿಯಾಮಿಯಲ್ಲಿ ಜಗದಾಳೆಯವರ ಪರಿಚಯವಾಯಿತು. ಅವರು ತಮ್ಮ ಕಂಪೆನಿ ಸರ್ಚ್‌ ಫೌಂಡೇಷನ್‌ನಲ್ಲಿ  ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಆಹ್ವಾನ ನೀಡಿದರು. ಅವರ ಆಹ್ವಾನದ ಮೇರೆಗೆ ನಾನು ಭಾರತಕ್ಕೆ ಬಂದೆ. ಅಲ್ಲಿ ಕಾರ್ಯನಿರ್ವಹಿಸುವ ವೇಳೆ ಪ್ರತಾಪ್‌ ರೆಡ್ಡಿ ಅವರೊಂದಿಗೆ ಸ್ನೇಹ ಬೆಳೆಯಿತು. ಅವರು ಬೆಂಗಳೂರಿನ ಸದಾಶಿವ ನಗರದಲ್ಲಿ ಈಜು ಕೇಂದ್ರ ಆರಂಭಿಸಲು ಚಿಂತಿಸಿದ್ದರು. ಅಲ್ಲಿ (ಕೆ.ಸಿ. ರೆಡ್ಡಿ ಈಜು ಕೇಂದ್ರ) 17 ವರ್ಷಗಳ ಕಾಲ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿದೆ. ಅಲ್ಲಿಂದ ನನ್ನ ಕೋಚ್ ಜೀವನಕ್ಕೆ ಹೊಸ ತಿರುವು ಲಭಿಸಿತು. 2010ರಲ್ಲಿ ಕೆಲ ಕಾರಣಗಳಿಂದ ಕೆಲಸ ಬಿಟ್ಟೆ.

* ಇತರ ಕೋಚ್‌ಗಳ ಕೆಲಸವನ್ನು ಕಿತ್ತುಕೊಂಡಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆಯಲ್ಲ?
ನಾನು ನನ್ನ ಕೆಲಸವನ್ನು ಬಹಳ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡುತ್ತೇನೆ. ಒಬ್ಬ ಪರಿಪೂರ್ಣ ಈಜುಪಟುವನ್ನು  ರೂಪಿಸಲು ಏನು ಅಗತ್ಯವೊ ಅದನ್ನು ಗುರುತಿಸಿ ಕೆಲಸ ಮಾಡುತ್ತೇನೆ. ಹೀಗಾಗಿಯೇ ಇತರ ರಾಜ್ಯಗಳ ಈಜುಪಟುಗಳು ನನ್ನ ಬಳಿ ತರಬೇತಿ ಪಡೆಯಲು ಬರುತ್ತಾರೆಯೇ ಹೊರತು  ಸ್ವತಃ ನಾನೇ ಯಾರಿಗೂ ನನ್ನ ಬಳಿ ಬರುವಂತೆ ಆಹ್ವಾನ ನೀಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳದೇ ಕೆಲವರು ತಮ್ಮ ಕೆಲಸವನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸು ತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಹೋಗುವುದಿಲ್ಲ.

* ಬೆಂಗಳೂರಿನಲ್ಲಿ ಸ್ವಂತ ಈಜು ಕೇಂದ್ರ ಸ್ಥಾಪಿಸಿದ್ದರ ಹಿಂದಿನ ಉದ್ದೇಶ?
2010ರಲ್ಲಿ ಕೆ.ಸಿ. ರೆಡ್ಡಿ ಈಜು ಕೇಂದ್ರವನ್ನು ಬಿಟ್ಟ ಬಳಿಕ ಸ್ವಂತ ಈಜು ಕೇಂದ್ರ ಆರಂಭಿಸುವ ಆಲೋಚನೆ ಬಂತು.
ಬೆಂಗಳೂರಿನಲ್ಲಿ ಅದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಹಾಗೂ ವಾತಾವರಣ ಇತ್ತು. ಹೀಗಾಗಿ  ಮತ್ತಿಕೆರೆ ಯ ಜೆ.ಪಿ.ಪಾರ್ಕ್‌ ಬಳಿ ಅದೇ ವರ್ಷ ಡಾಲ್ಫಿನ್‌ ಈಜು ಕೇಂದ್ರವನ್ನು ಶುರುಮಾಡಿದೆ.

* ಯಾವ ಅವಧಿಯಲ್ಲಿ ತರಬೇತಿ ನೀಡುತ್ತೀರಿ?
ಸದ್ಯ ನಮ್ಮ ಈಜು ಕೇಂದ್ರದಲ್ಲಿ 250ಕ್ಕೂ ಹೆಚ್ಚು ಜೂನಿಯರ್‌, ಸಬ್‌ ಜೂನಿಯರ್‌ ಮತ್ತು ಸೀನಿಯರ್‌ ಈಜುಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಬೆಳಿಗ್ಗೆ 5:30ರಿಂದ 9 ಗಂಟೆ. ನಂತರ ಸಂಜೆ 4:15ರಿಂದ 8 ಗಂಟೆಯವರೆಗೆ ತರಬೇತಿ ನೀಡುತ್ತೇನೆ.

* ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದೀರಿ, ಏನನ್ನಿಸುತ್ತದೆ ?
ತುಂಬಾ ಖುಷಿಯಾಗಿದೆ. ಮೂರು ದಶಕಗಳ ಈಜು ಬದುಕನ್ನು ಒಮ್ಮೆ ನೆನಪಿಸಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT