ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮುಜುಗರ ಬೇಕಿತ್ತೇ?

Last Updated 24 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಠಗಳಿಗೆ ಲಗಾಮು ಹಾಕುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ ವಾಪಸ್‌ ಪಡೆಯಬೇಕು ಎಂದು ರಾಜ್ಯ ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ನಡೆದಿದೆ ಎನ್ನಲಾದ ಚರ್ಚೆಯ ಧಾಟಿ, ಕೇಳಿಬಂದ ವಿರೋಧವನ್ನು ಗಮನಿಸಿದರೆ ‘ಇಂಥದೊಂದು ಮಸೂದೆ ಮಂಡನೆಯಾಗು­ತ್ತದೆ ಎಂಬುದು ಬಹುಪಾಲು ಸಚಿವರಿಗೇ ಗೊತ್ತಿರಲಿಲ್ಲ’.

ಸ್ವತಃ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಸಹ ‘ಇದೊಂದು ತಪ್ಪು ನಿರ್ಧಾರ. ಈ ವಿವಾದ ಏಕೆ ಬೇಕಿತ್ತು’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರನ್ನು ಪ್ರಶ್ನಿ­ಸಿ­ದರು ಎಂದು ವರದಿಯಾಗಿದೆ. ಇದು ನಿಜವೇ ಆಗಿದ್ದರೆ ಸಂಪುಟ ಮತ್ತು ಅದರ ಸಾಮೂಹಿಕ ಹೊಣೆಗಾರಿಕೆಯ ತತ್ವಕ್ಕೆ ತಿಲಾಂಜಲಿ ಕೊಟ್ಟು ಬೆಳಗಾವಿ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಆತುರಾತುರವಾಗಿ ಈ ಮಸೂದೆ ಮಂಡಿಸಲಾಯಿತು ಎನ್ನುವುದು ಸಾಬೀತಾಗುತ್ತದೆ.

ಇದು ದೊಡ್ಡ ಲೋಪ ಹಾಗೂ ಹೊಣೆಗೇಡಿತನ. ಮುಂದಾಲೋಚನೆಯ ಕೊರತೆ ಮತ್ತು ಆತುರ ಎದ್ದು ಕಾಣುತ್ತದೆ. ಈ ಮಸೂದೆ ಮೂಲಕ ಸರ್ಕಾರ ವಿನಾ­ಕಾರಣ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಂತಾಯಿತಷ್ಟೆ. ಬಿಜೆಪಿ ಮಾತ್ರ­ವಲ್ಲದೆ ನಾಡಿನ ಮಠಾಧೀಶರು,  ಮಠದ ಅಭಿಮಾನಿಗಳಿಗೆಲ್ಲ ತನ್ನನ್ನು ಹಣಿ­ಯುವ ಅಸ್ತ್ರವೊಂದನ್ನು ಸರ್ಕಾರವೇ ಕೊಟ್ಟಿತ್ತು. ಕಾನೂನು ಸಚಿವ­ರೇನೋ, ‘ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಸುಪ್ರೀಂ ಕೋರ್ಟ್‌­ನಲ್ಲಿ ಆಗ­ಬಹುದಾದ ಮುಜುಗರ ತಪ್ಪಿಸಿಕೊಳ್ಳಬೇಕಾಗಿತ್ತು.

ಇದರ ಪೂರ್ಣ ಹೊಣೆ ಹೊರುತ್ತೇನೆ’ ಎಂದು ಹೇಳಿದ್ದಾರೆ. ಆದರೆ ಕೋರ್ಟ್‌ನಲ್ಲಿ ಆಗುವು­ದ­ಕ್ಕಿಂತ ದೊಡ್ಡ ಮುಜುಗರ ಇಲ್ಲಿ ಇಡೀ ಸರ್ಕಾರಕ್ಕೆ ಆಗಿದೆ. ಮಸೂದೆ ಅನಿವಾ­ರ್ಯವೇ ಆಗಿದ್ದರೆ ಸಾರ್ವಜನಿಕರ ಗಮನಕ್ಕೆ ತರಬೇಕಿತ್ತು. ಜನವರಿ 13­ರಂದು ವಿಷಯ ಸುಪ್ರೀಂಕೋರ್ಟ್‌ ಮುಂದೆ ಬರುತ್ತದೆ ಎನ್ನುವುದು ಮೊದಲೇ ಗೊತ್ತಿತ್ತು. ಪೂರ್ವ ತಯಾರಿ ಮಾಡಬಹುದಿತ್ತು.

ಇದು ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಕೂಸು ಎನ್ನುವು­ದನ್ನು ಮನವರಿಕೆ ಮಾಡಿಕೊಡುವ ಅವಕಾಶ ಇತ್ತು. ಅವೆಲ್ಲ ಬಿಟ್ಟು ಏನೋ ಮಾಡಲು ಹೋಗಿ ಕೈಸುಟ್ಟುಕೊಂಡಿದೆ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಇದು ಹೊಸತೇನಲ್ಲ. ಮೌಢ್ಯ ನಿಷೇಧ ಮಸೂದೆ ತರುವುದಾಗಿ ಹೇಳಿ ದಾಗಲೂ ಇದೇ ಬಗೆಯಲ್ಲಿ  ವಿವಾದ ಸೃಷ್ಟಿಗೆ ಅವಕಾಶ ನೀಡಿತ್ತು.  ಹಾಗೆಯೇ ಭಾರೀ ವಿರೋಧಕ್ಕೆ ಕಾರಣವಾದ ಲೋಕಾಯುಕ್ತ ಕಾಯ್ದೆ ತಿದ್ದುಪಡಿಯನ್ನು  ಸರ್ಕಾರ ಕೈಬಿಟ್ಟಿತ್ತು. ಜೊತೆಗೆ ಸಿಇಟಿ ತಿದ್ದುಪಡಿ ಕಾಯ್ದೆ ನನೆಗುದಿಗೆ ಸಿಲುಕಿದೆ.

ಹಿಂದೆಲ್ಲ ಮಸೂದೆಯೊಂದನ್ನು ಮಂಡಿಸುವ ಮುನ್ನ ಪಕ್ಷದ ಶಾಸಕಾಂಗ ಸಭೆಯಲ್ಲಿ ಮತ್ತು ಸಂಪುಟದಲ್ಲಿ ಚರ್ಚಿಸುವ ಪರಿಪಾಠ ಇತ್ತು. ಆದರೆ ಇತ್ತೀ­ಚಿನ ವರ್ಷಗಳಲ್ಲಿ ಇದು ಮಾಯವಾಗುತ್ತಿದೆ. ಸಾಧಕ ಬಾಧಕ ಊಹಿಸದೆ ಮಸೂದೆ ಮಂಡಿಸುವುದು, ಶಾಸನ ಸಭೆಗಳಲ್ಲೂ ಚರ್ಚೆಯಿಲ್ಲದೆ  ಅಂಗೀಕರಿ­ಸು­ವುದು ಒಳ್ಳೆಯ ಬೆಳವಣಿಗೆಯಲ್ಲ.

ಶಾಸನಸಭೆಗಳಲ್ಲಿ ಆಗಬೇಕಾದ ಚರ್ಚೆ­ಗಳ ಮಹತ್ವವನ್ನು ಇನ್ನಾದರೂ ಅರಿಯಬೇಕು. ನೈತಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಇದು ಅನಾಹುತಕಾರಿ. ಇದನ್ನೆಲ್ಲ ನೋಡಿದರೆ ಸೂಕ್ಷ್ಮ­ವಾದ, ಜನರನ್ನು ಬೇಗ ಕೆರಳಿಸಬಹುದಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ನಿರ್ವಹಿಸುವಾಗ ಮೈಯೆಲ್ಲ ಕಣ್ಣಾಗಿದ್ದರೂ ಸಾಲದು ಎನ್ನುವ ಪಾಠವನ್ನು ಈ ಸರ್ಕಾರ ಕಲಿಯಬೇಕಿದೆ, ಆಡಳಿತದಲ್ಲಿ ಸಾಕಷ್ಟು ಪಳಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT