ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತು ವಿಲಾಸದಲ್ಲೊಂದು ಚೆಂಬೆಳಕು...

Last Updated 27 ಜನವರಿ 2013, 19:59 IST
ಅಕ್ಷರ ಗಾತ್ರ

ಧಾರವಾಡ: ಪೊಟರೆಯ ಗಿಳಿಗಳು... ಗೌಡರ ಮನಿ... ಎಲೆದೋಟ... ಚೊಗಚಿ ಹೂ... ಕಮ್ಮಾರನ ಕುಲುಮಿ... ಕುಣಿವ ಲಂಬಾಣಿ... ಶಿವಮೊಗ್ಗೆಯ ಕಾನು... ಕಲ್ಲುಗುಡ್ಡದ ಬಯಲು...

ಭಾನುವಾರ ನಡೆದ `ಧಾರವಾಡ ಸಾಹಿತ್ಯ ಸಂಭ್ರಮ'ದ ಕೊನೆಯ ಗೋಷ್ಠಿ `ಕವಿಯೊಂದಿಗೆ ಕವಿ' ಸಭಿಕರನ್ನು ಹಲವು ದಶಕಗಳ ಹಿಂದಕ್ಕೆ ಕರೆದೊಯ್ಯಿತು. `ನವೋದಯದ ಕಿರಣ ಲೀಲೆ'ಯೊಳಗೆ ಮೀಯಿಸಿತು. `ಋತು ವಿಲಾಸ'ದಲ್ಲಿ ಅಲೆದಾಡಿಸಿತು. ನಾಡಿನ ಹಿರಿಯ ಕವಿಗಳಾದ ಚೆನ್ನವೀರ ಕಣವಿ ಹಾಗೂ ಎಚ್.ಎಸ್. ವೆಂಕಟೇಶಮೂರ್ತಿ ತಮ್ಮ  ಕಾವ್ಯದ ಹಿಂದಿನ ಲೋಕವನ್ನು ಒಂದೊಂದಾಗಿ ತೆರೆದಿಟ್ಟರು.

ಕಣವಿ ಅವರು ಮಾತಿನ ಬುತ್ತಿ ಬಿಚ್ಚುತ್ತಿದ್ದಂತೆಯೇ ಸಭಾಂಗಣದ ತುಂಬ ಮೌನ. ಹಿರಿಯ ಜೀವ ಏನು ಹೇಳುತ್ತದೋ ಎಂಬ ಕಾತರ. `ಸಮನ್ವಯ ಕವಿ' ಬಾಲ್ಯದ ಮೋಜಿನ ಬಗ್ಗೆ ಮಾತನಾಡುತ್ತಲೇ ಚೊಗಚಿ ಹೂವಿನ ಮೂಲಕ ವರಕವಿ ದ.ರಾ. ಬೇಂದ್ರೆ ಹೃದಯಕ್ಕೆ ಹತ್ತಿರವಾದುದನ್ನು ಹೇಳಿದರು. ಸ್ವಾತಂತ್ರ್ಯ ಹೋರಾಟದ ದೆಸೆಯಿಂದ ಗಾಂಧಿ ಟೋಪಿ, ನೆಹರೂ ಷರ್ಟು ತೊಟ್ಟು ಓಡಾಡಿದ್ದನ್ನು ನೆನಪಿಗೆ ತಂದುಕೊಂಡರು.

ಮೈಸೂರು ಮಲ್ಲಿಗೆಯ ಕಂಪು: ವೆಂಕಟೇಶಮೂರ್ತಿ ಅವರ ಭಾವಲೋಕ ತುಸು ಬೇರೆ. ಅನ್ನವನ್ನೇ ಉಣ್ಣುವ ಶಿವಮೊಗ್ಗೆ ಹಾಗೂ ಮುದ್ದೆ ಸಾರಿನ ಬಯಲು ಸೀಮೆಯ ಮಧ್ಯದ ಪುಟ್ಟ ಊರು ಅವರದು. ಊರಿನ ಶಾನುಭೋಗರ ಮನೆಯಲ್ಲಿದ್ದ ಕೆ.ಎಸ್.ನರಸಿಂಹಸ್ವಾಮಿ ಅವರ `ಮೈಸೂರು ಮಲ್ಲಿಗೆ' ಪುಸ್ತಕವನ್ನು ಅವರ  ತಂದೆಯವರು ಓದಿ, ಅಲ್ಲಿನ ಸ್ತ್ರೀ ಪಾತ್ರವನ್ನು ತಮ್ಮ ಹೆಂಡತಿಗೆ ಹೋಲಿಸಿ ವರ್ಣಿಸುತ್ತಿದ್ದರಂತೆ. ಈ ವಿಷಯವನ್ನು ತಾಯಿ ಅವರಿಗೆ ತಿಳಿಸಿದ್ದರಂತೆ. `ಮೈಸೂರು ಮಲ್ಲಿಗೆ' ಕಂಪು ಮೂರ್ತಿಯವರ ಮನೆಯಲ್ಲಿ ಆ ಕಾಲದಲ್ಲಿ ಹರಡಿತ್ತು.

`ಡಿಪ್ಲೊಮಾ ಸೇರಿದ್ದರೂ ಪಾಲಿಟೆಕ್ನಿಕ್ ಪುಸ್ತಕಗಳು ನನಗೆ ಹಿಡಿಸಲಿಲ್ಲ. ತರಗತಿಯೊಳಗೆ ಒಮ್ಮೆ ನನ್ನ ಕೈಯಲ್ಲಿದ್ದ ಕಾರಂತರ `ಬೆಟ್ಟದ ಜೀವ'ವನ್ನು ಕಂಡು ಮೇಷ್ಟ್ರು ಕೆಂಡಾಮಂಡಲರಾಗಿದ್ದರು. ಕಣವಿ ಅವರ ಪದ್ಯವನ್ನು ಪಠ್ಯವಾಗಿ ಓದಿದ್ದ ನನಗೆ ಕಡೆಗೆ ಅವರಿಗೇ ಹತ್ತಿರವಾದರು. ಮೇಲುಕೋಟೆಯಲ್ಲಿ ಕವಿ ಪು.ತಿ. ನರಸಿಂಹಚಾರ್ ಮನೆಯನ್ನು ಸ್ಮಾರಕವಾಗಿ ಮಾಡುವ ಕೆಲಸ ಇಬ್ಬರ ಸ್ನೇಹವನ್ನು ಇನ್ನಷ್ಟು ಬೆಸೆಯಿತು' ಎಂದರು.

ಇಷ್ಟಾದರೂ `ನಾನು ಕಣವಿ ಅವರಿಂದ ಪ್ರಭಾವಿತನಾದವನಲ್ಲ' ಎಂದ ಎಚ್‌ಎಸ್‌ವಿ, `ಯಾರಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳುವುದು ಕಷ್ಟ. ಅನೇಕರ ಕಾವ್ಯ ಪರಂಪರೆ ನನ್ನ ಬೆನ್ನಿಗಿದೆ. ಅಂತಹ ಅನೇಕರ ಆಶೀರ್ವಾದದಲ್ಲಿ ನಿಮ್ಮದೂ ಒಂದು' ಎಂದು ವಿನಯಪೂರ್ವಕವಾಗಿ ಹೇಳಿದರು.

ಅವರೆಂದರೆ ಭಯ: ಮಾತು ಮತ್ತೆ ಚೆಂಬೆಳಕಿನ ಕವಿ ಕಣವಿಯವರತ್ತ ಹೊರಳಿತು. `ನವೋದಯ ಚಳವಳಿಯ ಅನೇಕ ಕವಿಗಳ ಬಗ್ಗೆ ನನಗೆ ಅಪಾರ ಗೌರವ ಇತ್ತು. ಆದರೆ ಬೇಂದ್ರೆ ಹಾಗೂ ಶಿವರಾಮ ಕಾರಂತರೆಂದರೆ ಏನೋ ಅಳುಕು. ಯಾವಾಗ ಏನು ಹೇಳುತ್ತಾರೋ ಎಂಬ ಭೀತಿ' ಎಂದು ಕಣವಿ ಹೇಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.

ಪು.ತಿ.ನ ಅವರ ಸಜ್ಜನಿಕೆ ಬಗ್ಗೆ ಕಣವಿ ಸ್ಮರಿಸುತ್ತಿರುವಾಗಲೇ ಎಚ್‌ಎಸ್‌ವಿ, `ಅವರೇನೂ ಪೂರ್ಣ ಸಾತ್ವಿಕರಲ್ಲ ಎಂಬ ಗುಟ್ಟು ನಿಮಗೆ ಗೊತ್ತಿದೆಯೇ' ಎಂದು ಪ್ರಶ್ನಿಸಿದರು.  ಜತೆಗೆ ಅವರ ರಸಿಕತನಕ್ಕೆ ಸಾಕ್ಷಿಯಾದ ಕಾಳಿದಾಸನ ಮೇಘದೂತದ ಪ್ರಸಂಗವನ್ನು ಹೇಳಿದರು.

`ಜಿ.ಎಸ್. ಶಿವರುದ್ರಪ್ಪನವರೊಂದಿಗೆ ಮಾತನಾಡುತ್ತಿದ್ದ ಪು.ತಿ.ನ ಇದ್ದಕ್ಕಿದ್ದಂತೆ ಮೇಘದೂತದ ಯಕ್ಷ ಜೋಡಿ ನಿಜವಾಗಿಯೂ ದಂಪತಿಗಳಾಗಿದ್ದರೆ ಎಂಬ ಪ್ರಶ್ನೆ ಎಸೆದರು. ಜಿಎಸ್‌ಎಸ್ ಅವರಿಗೆ ಆ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ಚಟಾಕಿ ಹಾರಿಸಿದ ಪು.ತಿ.ನ ಅಷ್ಟು ಅನ್ಯೋನ್ಯತೆ ಇರುವವರು ದಂಪತಿಗಳಾಗಲು ಸಾಧ್ಯವೇ ಇಲ್ಲ ಬಿಡು ಎಂದರಂತೆ'. ಮಾತು ಮುಗಿಯುವ ಮುನ್ನವೇ ಗೋಷ್ಠಿಯಲ್ಲಿ ನಗೆಯ ಹೊಳೆ. ಪು.ತಿ.ನ ಅವರ ಕಿಲಾಡಿತನಗಳ ಬಗ್ಗೆ ಬೇಂದ್ರೆ ಹೇಳಿದ್ದನ್ನು ಕಣವಿಯವರೂ ಸ್ಮರಿಸಿದರು.

ಸಭಿಕರೊಬ್ಬರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಎಚ್‌ಎಸ್‌ವಿ `ಪ್ರಾಸವಿಲ್ಲದೆ ಪದ್ಯವಿರದು. ಆದರೆ ಅದು ಆದಿ ಪ್ರಾಸ ಅಂತ್ಯಪ್ರಾಸವಷ್ಟೇ ಆಗಿರುವುದಿಲ್ಲ. ಹಾಗೆಯೇ ಇಂಗ್ಲಿಷ್‌ನೊಳಗೆ ಕನ್ನಡ ಬೆರೆತರೆ ತಪ್ಪಿಲ್ಲ. ಒಳ್ಳೆಯ ಕನ್ನಡದಲ್ಲಿ ಉತ್ತಮ ಇಂಗ್ಲಿಷ್ ಸೇರಿಕೊಳ್ಳಲಿ. ಸಂಸ್ಕೃತ ಕನ್ನಡದೊಂದಿಗೆ ಬೆರೆತಾಗ ಕೂಡ ಇಂಥದ್ದೇ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೆ ಪಂಪ ರನ್ನರು, ವಚನಕಾರರು ಆ ಸವಾಲಿಗೆ ಉತ್ತರಿಸಿದರು. ಅಚ್ಚಗನ್ನಡವೇ ಇರಬೇಕೆಂಬ ಮಡಿವಂತಿಕೆ ಸಲ್ಲದು' ಎಂದು ಕಿವಿಮಾತು ಹೇಳಿದರು.

ಕೋಗಿಲೆ ಮತ್ತು ಮರ: ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಎಚ್‌ಎಸ್‌ವಿ ಒಂದು ರೂಪಕವನ್ನು ತೆರೆದಿಟ್ಟರು. ಅವರು ಓದುತ್ತಿದ್ದಾಗ ಸ್ವಾಮೀಜಿಯೊಬ್ಬರು ಕೋಗಿಲೆಯನ್ನು ಸಾಕುವ ಬಯಕೆ ವ್ಯಕ್ತಪಡಿಸಿದರಂತೆ. ಆಗ ಕೆಲವರು ಮಠಕ್ಕೆ ಕೋಗಿಲೆಯನ್ನು ತಂದು ಪಂಜರದಲ್ಲಿ ಬಂಧಿಸಿಟ್ಟರು. ಮರು ದಿವಸವೇ ಅದು ಪ್ರಾಣ ಬಿಟ್ಟಿತು. `ಮಠಕ್ಕೆ ಕೋಗಿಲೆ ತರಬಾರದಿತ್ತು. ಬದಲಿಗೆ ಒಂದು ಮರವನ್ನು ಬೆಳೆಸಬೇಕಿತ್ತು ಆಗ ಕೋಗಿಲೆ ತಾನಾಗಿಯೇ ಅಲ್ಲಿ ಕೂರುತ್ತಿತ್ತು'  ಎಂದರು. ಗೋಷ್ಠಿಯಲ್ಲಿ ಚಪ್ಪಾಳೆಯ ಸುರಿಮಳೆ. ಹಲವರಿಂದ `ಅಬ್ಬಾ' ಎಂಬ ಉದ್ಗಾರ.

ಇಬ್ಬರೂ ಕವಿಗಳು ತಮ್ಮ ಕವಿತೆಗಳನ್ನು ವಾಚಿಸುವುದರೊಂದಿಗೆ ಗೋಷ್ಠಿ ಮುಕ್ತಾಯವಾಯಿತು.
ಹಿರಿಯ ಕವಿ ಆನಂದ ಝುಂಜರವಾಡ ಗೋಷ್ಠಿಯ ನಿರ್ದೇಶಕರಾಗಿದ್ದರು.

`ಆಶಿಷ್ ನಂದಿ ಹೇಳಿಕೆಗೆ  ಸಹಮತ ಇಲ್ಲ'

`ಭ್ರಷ್ಟತೆಗೆ ಜಾತಿ ನಂಟು ಬೆಸೆದ ಲೇಖಕ ಆಶಿಷ್ ನಂದಿ ವಿಚಾರಧಾರೆ ಸರಿಯಲ್ಲ. ಅದಕ್ಕೆ ನಮ್ಮ ಸಹಮತವಿಲ್ಲ' ಎಂದು ವಿಮರ್ಶಕ ಹಾಗೂ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಭಾನುವಾರ ಇಲ್ಲಿ ಹೇಳಿದರು.

`ಜೈಪುರ ಸಾಹಿತ್ಯೋತ್ಸವದಲ್ಲಿ ಆಶಿಷ್ ನಂದಿ ಈ ವಿಚಾರವನ್ನು ಪ್ರತಿಪಾದಿಸಿದ್ದಾರೆ. ಆದರೆ, ಭ್ರಷ್ಟಾಚಾರ ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾದುದ್ದಲ್ಲ. ಭ್ರಷ್ಟಾಚಾರದ ವಿರುದ್ಧ ನಮ್ಮ  ಹೋರಾಟವೂ ನಡೆಯುತ್ತಿದೆ. ಹೀಗಾಗಿ ಅವರ ಹೇಳಿಕೆಯನ್ನು ನಾವು ಬೆಂಬಲಿಸುವುದಿಲ್ಲ' ಎಂದು ಅವರು ಸಾಹಿತ್ಯ ಸಂಭ್ರಮದ ಮೂರನೇ ದಿನದ ಪ್ರಥಮ ಗೋಷ್ಠಿಯ ಪ್ರಾರಂಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT