ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೂ ಮಾಸದ ನಗು

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಗೆಯ ಅಲೆಗಳಲ್ಲಿ ತೇಲುವಂತೆ ಮಾಡುತ್ತಲೇ ಆಸುಪಾಸಿನ ಆಗುಹೋಗುಗಳನ್ನು ವಿಡಂಬಿಸುತ್ತಿದ್ದ ಅಪ್ರತಿಮ ಕಲಾವಿದ ಚಾರ್ಲಿ ಚಾಪ್ಲಿನ್‌ ಹಾಸ್ಯಕ್ಕೆ ಹೊಸ ಮುಖವನ್ನು ಪರಿಚಯಿಸಿದ ವಿಲಕ್ಷಣ ನಟ. ಜಗತ್ತನ್ನೇ ತನ್ನ ತೆಕ್ಕೆಗೆ ಎತ್ತಿಕೊಂಡ ಸಿನಿಮಾ ಎಂಬ ಮಾಯೆಯೊಂದಿಗೆ ಹೆಜ್ಜೆ ಇಡುತ್ತ ಬಂದ ಚಾರ್ಲಿ ಇಪ್ಪತ್ತನೆ ಶತಮಾನದ ಚಿತ್ರ ಜಗತ್ತಿನ ತುಂಬಾ ಆವರಿಸಿಕೊಂಡಿದ್ದಾನೆ. ಭಾಷೆ, ದೇಶದ ಗಡಿಗಳನ್ನು ಮೀರಿ ಕಲಾಪ್ರೇಮಿಗಳನ್ನು ತನ್ನತ್ತ ಮೌನದಿಂದಲೇ ಸೆಳೆದುಕೊಂಡ ಅದ್ಬುತ ಪ್ರತಿಭೆ ಈ ಚಾಪ್ಲಿನ್‌.

ನೋವಿನ ಕಡಲಲ್ಲಿದ್ದರೂ ಹಾಸ್ಯದ ಹಾಯಿದೋಣಿಯನ್ನು ಮುನ್ನಡೆಸಿದ ಚಾರ್ಲಿ ಚಾಪ್ಲಿನ್‌ ಕಲಾವಿದನಾಗಿದ್ದೇ ಆಕಸ್ಮಿಕ. ಯಾವುದೇ ತಯಾರಿ ಇಲ್ಲದೆ ಹೆತ್ತತಾಯಿ ನೆರವಿಗೆ ವೇದಿಕೆಗೆ ಕಾಲಿಟ್ಟ ಆತ ಮುಂದೆ ನಡೆದಿದ್ದೆಲ್ಲಾ ಆನೆ ನಡಿಗೆ. ಇಂಗ್ಲೆಂಡ್‌ನ ಚಾರ್ಲಸ್‌ ಚಾಪ್ಲಿನ್‌–ಹೆನ್ನಾ ಮಗನಾಗಿ ಹುಟ್ಟಿದ ಸ್ಪೆನ್ಸರ್‌ ಜನಪ್ರಿಯನಾಗಿದ್ದು ಚಾರ್ಲಿ ಚಾಪ್ಲಿನ್‌ ಎಂಬ ಹೆಸರಿಂದ. ಹಾಡು ನಟಿ ಹೆನ್ನಾ ಮತ್ತು ಕಲಾವಿದ ಚಾರ್ಲಸ್‌ ಮಗ ಚಾಪ್ಲಿನ್‌ ಬಾಲ್ಯದ ದಿನಗಳೆಲ್ಲಾ ಯಾತನೆಯಿಂದಲೇ ಕೂಡಿತ್ತು.

ಪರಮ ಕುಡುಕ ಗಂಡನಿಂದ ಹೈರಾಣಾಗಿದ್ದ ಹೆನ್ನಾಳನ್ನು ಗಂಡನೇ ದೂರಮಾಡಿದ ಮೇಲಂತೂ ತಾಯಿ–ಮಗನ ಬದುಕು ಇನ್ನೂ

ದುಸ್ತರವಾಯಿತು. ಬಣ್ಣದ ಬದುಕಿನೊಡನೆ ಒಡನಾಟ ಇಟ್ಟುಕೊಂಡೇ ದಿನ ದೂಡಬೇಕಾದ ಅನಿವಾರ್ಯವಿದ್ದ ಹೆನ್ನಾಳ ಬೆನ್ನ ಹಿಂದೆ ಪುಟ್ಟ ಚಾರ್ಪಿನ್‌ ಇರಬೇಕಾಗಿದ್ದೂ ಅಷ್ಟೇ ಅನಿವಾರ್ಯವಾಗಿತ್ತು.

ಬಾಲ್ಯದಿಂದಲೇ ಕೆಲವರಿಗೆ ಕಲಾವಿದರಾಗುವ ಆಸೆ. ಇನ್ನೂ ಕೆಲವರು ಕಲಾವಿದರಾಗಲು ಪ್ರಯತ್ನಿಸುತ್ತಾರೆ. ಆದರೆ ಚಾರ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದು ತೀರಾ ಸಂದಿಗ್ಧ ಸ್ಥಿತಿಯಲ್ಲಿ. ಅದೂ ಹೊಟ್ಟೆಪಾಡಿಗಾಗಿ ವೇದಿಕೆಯ ಮೇಲೆ ಹಾಡಿ ಕುಣಿಯುವುದರೊಂದಿಗೆ. ಅಭಿನಯ ಮಾಡುತ್ತಿದ್ದ ಹೆನ್ನಾ ಗಂಟಲು ನೋವಿನಿಂದ ಹಾಡದಿದ್ದಾಗ, ವೀಕ್ಷಕರು ಆಕೆಯನ್ನು ಹಂಗಿಸುವ ಸ್ಥಿತಿಗೆ ತಲುಪಿದಾಗ ಚಾರ್ಪಿನ್‌ ತಾಯಿಯನ್ನು ಕುಚೋದ್ಯದ ಮಾತುಗಳಿಂದ ತಪ್ಪಿಸಲು ರಂಗಕ್ಕೆ ಕಾಲಿಟ್ಟು ಅಡ್ಡಾದಿಡ್ಡಿ ಕುಣಿದು ಕುಪ್ಪಳಿಸಿದ, ಯದ್ವಾತದ್ವಾ ಎಗರಾಡಿದ.

ಅಮ್ಮನಿಗಾದ ಅವಮಾನದಿಂದ ಕೋಪದಿಂದ ವೇದಿಕೆಯ ಮೇಲೆ ಕಿರುಚಾಡಿದ ಚಾಪ್ಲಿನ್‌ ಮಂಗನಾಟ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಯಿತು! ತಾಯಿ ನಿಟ್ಟಿಸುರು ಬಿಟ್ಟಳು. ನೋಡುಗರು ತೆಪ್ಪಗಾದರು. ಅಲ್ಲಿ ಮಹಾನ್‌ ಕಲಾವಿದನೊಬ್ಬನ ಜನನವಾಗಿತ್ತು.
ದೊಗಳೆ ಪ್ಯಾಂಟ್‌, ಕೈಕೋಲು, ಮೂಗಿನ ಕೆಳಗೆ ಚಿಕ್ಕ ಮೀಸೆ, ತಲೆಯ ಮೇಲೊಂದು ಹ್ಯಾಟ್‌– ಇಂತಹ ವಿಚಿತ್ರ ವೇಷ ಭೂಷಣಗಳೊಂದಿಗೆ ಆಗಷ್ಟೇ ಕಣ್ಬಿಟ್ಟ ನವಸಂವಹನ ಮಾಧ್ಯಮ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಚಾಪ್ಲಿನ್‌ ಚಿತ್ರದಿಂದ ಚಿತ್ರಕ್ಕೆ ಮೇಲೇರುತ್ತಲೇ ಹೋದರು. ನೋವಿನ ಕಡಲಲ್ಲಿದ್ದರೂ ನಗೆಯನ್ನು ಮಾರಿದ ಚಾಪ್ಲಿನ್‌ಗೆ ಕೊಪ್ಪರಿಗೆ ಹಣ ಬಂತು. ಗೌರವ ಬಂತು. ತಾರಾವರ್ಚಸ್ಸು ಹಿಂಬಾಲಿಸಿತು.

ಅಸ್ತವ್ಯಸ್ತ ಜೀವನದ ಅನುಭವಗಳ ಮೂಟೆಯನ್ನು ಎಳೆಯ ವಯಸ್ಸಿನಿಂದಲೇ ಹೊತ್ತು ಬಂದಿದ್ದ ಚಾರ್ಲಿ ತೆರೆಯ ಮೇಲೆ ಸಿಹಿ ಗುಳಿಗೆಗಳ ಮೂಲಕ ಅನಾವರಣಗೊಳಿಸಿ ಪ್ರೇಕ್ಷಕರ ಮನಸ್ಸಿನ ಕದ ತಟ್ಟಿದರು. ಆತನ ಚಿತ್ರಗಳು ಜಗತ್ತಿನಾದ್ಯಂತ ಗಲ್ಲಾ ಪೆಟ್ಟಿಗೆಯ ಕೊಳ್ಳೆಹೊಡೆದವು.

ಚಾರ್ಲಿ ತನ್ನ ಚಿತ್ರದ ಕಥೆಗಳನ್ನು ತಾನು ಕಂಡುಂಡ ಬದುಕಿನಿಂದಲೇ ಆಯ್ದು ತಂದ. ಬೀದಿಬದಿಯ ಸಂಗತಿಗಳನ್ನು ತೆರೆಯ ಮೇಲೆ

ತೆರೆದಿಟ್ಟ. ನಗಿಸುತ್ತಲೇ ನೋಡುಗರ ಕಣ್ಣು ಒದ್ದೆ ಮಾಡುವುದು ಚಾಪ್ಲಿನ್‌ಗೆ ಗೊತ್ತಿತ್ತು. ಪ್ರೇಕ್ಷಕರ ಅಂತರಾಳವನ್ನು ಆತ ಅರಿತಿದ್ದ. ‘ಸಿಟಿಲೈಫ್‌’, ‘ದಿ ಸರ್ಕಸ್‌’ ಚಿತ್ರಗಳೇ ಇದಕ್ಕೆ ಪುರಾವೆ. ನಗಿಸುವ ಕಲೆಯನ್ನು ಅರೆದು ಕುಡಿದ ಚಾಪ್ಲಿನ್‌ ಸರ್ವಾಧಿಕಾರಿಯನ್ನು ಹಂಗಿಸಲೂ ಹಿಂದೆ ಮುಂದೆ ನೋಡಲಿಲ್ಲ. ತಮಾಷೆಯ ಜೊತೆ ಜೊತೆಗೆ ಗಂಭೀರ ಚಿತ್ರಗಳನ್ನು ಮಾಡಿದ ಆತ ವ್ಯಂಗ್ಯದೊಂದಿಗೆ ಮಾನವೀಯ ಮುಖಗಳನ್ನು ತೆರೆಯ ಮೇಲೆ ಸರಾಗವಾಗಿ ದಾಟಿಸಿದ. ಹಿಟ್ಲರ್‌ನನ್ನು ಕೆಣಕುವ ‘ದಿ ಗ್ರೇಟ್‌ ಡಿಕ್ಟೇಟರ್‌’ನಂತಹ ಚಿತ್ರ ಕೊಟ್ಟ ಚಾಪ್ಲಿನ್‌ ಚಿಣ್ಣರ ಬದುಕಿನ ‘ದಿ ಕಿಡ್‌’ ತಯಾರಿಸಿದ. ಯಾವುದೇ ಚಿತ್ರ ಸಿದ್ಧಮಾಡಿದರೂ ಅದು ನಗೆಗುಳಿಗೆಗಳೊಂದಿಗೆ ಸಾಮಾಜಿಕ ಸಂದೇಶಗಳನ್ನು ಬಿಂಬಿಸುವುದು ಚಾಪ್ಲಿನ್‌ ವಿಶೇಷವಾಗಿತ್ತು.

ವಿಶ್ವದ ಅನೇಕ ದೇಶಗಳ ಚಲನಚಿತ್ರಗಳಲ್ಲಿ ಅನುಕರಿಸಲ್ಪಟ್ಟ ಏಕಮಾತ್ರ ಅನನ್ಯ ಕಲಾವಿದ ಚಾಪ್ಲಿನ್‌ ಮೌನದಿಂದಲೇ ಮಾತನಾಡುತ್ತಿದ್ದವರು. ಚಾರ್ಲಿ ತನ್ನ ದೇಹಭಾಷೆಯಿಂದಲೇ ಜನರನ್ನು ಮೋಡಿಮಾಡಿ ನಗಿಸುತ್ತಿದ್ದರು. ಹೊಸ ಹೊಸ ಆವಿಷ್ಕಾರಗಳಿಗೆ ಚಲನಚಿತ್ರ ಮಾಧ್ಯಮ ತೆರೆದುಕೊಳ್ಳುತ್ತ ಮೂಕಿ ಸಿನಿಮಾ ಟಾಕಿ ಸಿನಿಮಾ ಆದರೂ ಮೂಕಿ ಬಿಡುಲೊಲ್ಲದ ಚಾಪ್ಲಿನ್‌ ಮಾತಿನ ಚಿತ್ರಗಳಿಗೆ ಹೊರಳಿದರೂ ಹೆಚ್ಚು ಗಮನ ಕೊಟ್ಟಿದ್ದು ಮೌನಕ್ಕೆ.

ಅಮೇರಿಕದ ಟೈಮ್‌ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಈಗಲ್ಲ ಹಿಂದಿನಿಂದಲೂ ಎಂತಹವರಿಗಾದರೂ ಪ್ರತಿಷ್ಠೆಯ ವಿಷಯ, ಚಾರ್ಲಿ ಚಾಪ್ಲಿನ್‌ ‘ಟೈಂ’ ಮುಖಪುಟವನ್ನು ಅಲಂಕರಿಸಿದ ಮೊದಲ ಚಲನಚಿತ್ರ ನಟ (1925). ಆಸ್ಕರ್‌ ಪ್ರಶಸ್ತಿಗಳು ಅಸ್ತಿತ್ವಕ್ಕೆ ಬಂದ ವರ್ಷದಲ್ಲಿ ಅನೇಕ ವಿಭಾಗಗಳಿಗೆ ಚಾಪ್ಲಿನ್‌ ನಾಮನಿರ್ದೇಶನಗೊಂಡಿದ್ದರೂ (1929) ಅದನ್ನೆಲ್ಲಾ ಹಿಂಪಡೆದುಕೊಂಡ ಆಸ್ಕರ್‌ ಅಕಾಡಮಿ ಚಾರ್ಲಿ ಚಾಪ್ಲಿನ್‌ಗೆ ವಿಶೇಷ ಆಸ್ಕರ್‌ ಗೌರವ ನೀಡಿತು. ಇದಾದ ಬಹುವರ್ಷಗಳ ಬಳಿಕ ಚಾರ್ಲಿಗೆ (1972) ಆಸ್ಕರ್‌ ಗೌರವ ಪ್ರಶಸ್ತಿಯೂ ಸಂದಿತು.

ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿದ್ದ ಚಾಪ್ಲಿನ್‌ ಬದುಕು ಮಾತ್ರ ಸಂಕೀರ್ಣವಾಗಿತ್ತು. ಪೋಷಕರ ಲಾಲನೆ–ಪಾಲನೆ

ಸರಿಯಾಗಿ ದಕ್ಕದ ಚಾಪ್ಲಿನ್‌ ನಾಲ್ಕು ಬಾರಿ ಲಗ್ನವಾಗಿದ್ದ. ಆತನ ಎಲ್ಲಾ ಪತ್ನಿಯರೂ ಆತನಿಗಿಂತ ವಯಸ್ಸಿನಲ್ಲಿ ಬಹು ಚಿಕ್ಕವರಾಗಿದ್ದರು. ಎಲ್ಲರ ಬಗ್ಗೆಯೂ ಪ್ರೀತಿ ಅನುಕಂಪ ಹೊಂದಿದ್ದ ಚಾರ್ಲಿ ಕುರಿತು ಯಾವ ಸಂಗಾತಿಯೂ ಅನ್ಯೋನ್ಯತೆ ತೋರಿರಲಿಲ್ಲ. ಆತನನ್ನು ಅವರೆಲ್ಲರೂ ಶೋಷಣೆ ಮಾಡಿದರು. ಆತನಿಂದ ಸಂಪತ್ತು ಪೀಕಿದರೆಂಬ ಮಾತೂ ಇದೆ. ಚಾಪ್ಲಿನ್‌ ತೆರೆಗಿತ್ತ ಬಹಳಷ್ಟು ಚಿತ್ರಗಳ ಸಂಗತಿಗಳು ಆತ ಬದುಕಿನಲ್ಲಿ ನೈಜ ವಿಚಾರಗಳೇ ಆಗಿದ್ದವು. ಆತನ ಸಂಗಾತಿಗಳ ಕುರಿತಂತೆ ಚಾಪ್ಲಿನ್‌ ‘ಲೈಮ್‌ಲೈಟ್‌’ ಚಿತ್ರವನ್ನು ತಯಾರಿಸಿದ್ದು ಇದಕ್ಕೊಂದು ಉದಾಹರಣೆ.

ಬೀದಿ ಬದಿಯಿಂದಲೇ ಬದುಕು ಕಟ್ಟಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ಮೇರುನಟ ಚಾರ್ಲಿ ಚಾಪ್ಲಿನ್‌ಗೆ ಬಡಜನರ ದುಃಖ ದುಮ್ಮಾನಗಳಿಗೆ ದನಿಯಾಗಿದ್ದ ಮಹಾತ್ಮಗಾಂಧಿ ಅವರ ಬಗೆಗೆ ವಿಶೇಷ ಪ್ರೀತಿ. ಬಾಪು ಅವರನ್ನು ಖುದ್ದು ಭೇಟಿಯಾಗಿದ್ದ ಚಾಪ್ಲಿನ್‌ ಕೊನೆಯವರೆಗೂ ಅವರ ಅಭಿಮಾನಿಯಾಗಿದ್ದರು.

ಇಪ್ಪತ್ತನೆಯ ಶತಮಾನದ ಕಲೆ–ಸಾಹಿತ್ಯ ವಲಯದಲ್ಲಿ ಉನ್ನತ ಸ್ಥಾನ ಪಡೆದು ಸಿನಿಮಾ ಶ್ರೇಷ್ಠರ ಸಾಲಿನಲ್ಲಿ ಪ್ರಮುಖರೆನ್ನಿಸಿಕೊಂಡ ಚಾರ್ಲಿ ಚಾಪ್ಲಿನ್‌ ಕಣ್ಮರೆಯಾಗಿ ಸುಮಾರು ನಾಲ್ಕು ದಶಕಗಳೇ ಕಳೆದರೂ ಅವರು–ಅವರ ಚಲನಚಿತ್ರಗಳೂ ಇಂದಿಗೂ ಜನರಿಂದ ದೂರವಾಗಿಲ್ಲ. ಅವರನ್ನು ಸ್ಮರಿಸುವ ಅನೇಕ ಬಗೆಯ ಪ್ರಯತ್ನಗಳು ಇಂದಿಗೂ ನಿಂತಿಲ್ಲ. ಅವರ ಪ್ರತಿಮೆಗಳು ಹತ್ತಾರು ಕಡೆ ಅನಾವರಣಗೊಂಡಿವೆ. ಸಿನಿಮಾ ಜಗತ್ತಿಗೆ ಅವರಿತ್ತ ಕೊಡುಗೆಗಾಗಿ ಸಾಕ್ಯ್ಷಚಿತ್ರವೊಂದನ್ನು ಅಮೆರಿಕದಲ್ಲಿ ತಯಾರಿಸಲಾಗಿದೆ. ‘ಚಾರ್ಲಿ ಅವಿನ್ಯೂ’ ಎಂಬ ರಸ್ತೆಯೂ ಇದೆ.

ಹವ್ಯಾಸಗಳ ರಾಜನೆಂದೇ ಹೆಸರಾಗಿರುವ ‘ಅಂಚೆ ಚೀಟಿ’ ಸಂಗ್ರಹದಲ್ಲೂ ಚಾರ್ಲಿ ಚಾಪ್ಲಿನ್‌ಗೆ ಪ್ರಮುಖ ಸ್ಥಾನವಿದೆ. ಜಗತ್ತಿನ 80ಕ್ಕೂ ಹೆಚ್ಚು ದೇಶಗಳು ತಮ್ಮ ದೇಶಗಳ ಅಂಚೆಚೀಟಿ ಪಟ್ಟಿಯಲ್ಲಿ ಚಾಪ್ಲಿನ್‌ರಿಗೆ ಸ್ಥಳ ಮಾಡಿಕೊಟ್ಟಿವೆ.

ಭಾರತ ಚಾರ್ಲಿ ಚಾಪ್ಲಿನ್‌ ಕಣ್ಮರೆಯಾದ ಕೆಲವೇ ತಿಂಗಳುಗಳಲ್ಲಿ (16.04.1978) ವಿಶೇಷ ಅಂಚೆಚೀಟಿಯನ್ನು ಪ್ರಕಟಿಸಿ ಗೌರವ ಸಲ್ಲಿಸಿತು. ಇಂಗ್ಲೆಂಡ್‌ನಲ್ಲಿ ಹುಟ್ಟಿದರೂ ಅಮೆರಿಕ ಪೌರತ್ವವನ್ನು ಮೊದಲಿಗೆ ನಿರಾಕರಿಸಿದ್ದ ಚಾಪ್ಲಿನ್‌ ಬಗೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬಿಡುಗಡೆಯಾಗಿರುವ ಚಾಪ್ಲಿನ್‌ ಅಂಚೆಚೀಟಿಗಳು, ಮೊದಲ ದಿನ ಲಕೋಟೆಗಳು, ಠಸ್ಸೆಗಳು ಹತ್ತು ಹಲವು. ‘ಸೈಲೆಂಟ್‌ ಸ್ಟಾರ್‌್ಸ’ ಸರಣಿಯಲ್ಲಿ, ಟೂ ಬೀಟ್‌ ಟೂ ಮೂವೀಸ್‌ ಸರಣಿಯಲ್ಲಿ ಚಾರ್ಲಿ ಚಿತ್ರಗಳು ಮುದ್ರಣಗೊಂಡಿದ್ದು ಇಂಗ್ಲೆಂಡ್‌ ಹೊರತಂದ ಮಿಲೇನಿಯಂ ಸೀರೀಸ್‌ನಲ್ಲಿ ಚಾರ್ಲಿ ಚಾಪ್ಲಿನ್‌ಗೆ ಪ್ರಮುಖ ಸ್ಥಾನ ಸಿಕ್ಕಿದೆ.

ವಿಶ್ವದ ಅಗ್ರಮಾನ್ಯ ವ್ಯಕ್ತಿಗಳ ಸಂಸ್ಮರಣ ಅಂಚೆಚೀಟಿಗಳಲ್ಲಿ ನಾಲ್ಕಾರು ಬಾರಿ ಸ್ಥಾನ ಪಡೆದಿರುವ ಚಾಪ್ಲಿನ್‌ ಜಾಗತಿಕ ಸಿನಿಮಾ ಶ್ರೇಷ್ಠರ (ಪ್ರಕಟಣೆ: ಇಂಗ್ಲೆಂಡ್‌) ಅಂಚೆಚೀಟಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ವಾಲ್‌್ಟ ಡಿಸ್ನಿ  ಶತಮಾನೋತ್ಸವ ಸಂದರ್ಭದಲ್ಲಿ ಮುದ್ರಣವಾದ ಅಂಚೆ ಚೀಟಿಗಳಲ್ಲಿಯೂ ಚಾಪ್ಲಿನ್‌ ಇದ್ದಾರೆ. ಕೋಮಿ ದೇಶ ಚಾರ್ಲಿ ಅವರ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳನ್ನು ಕುರಿತು ಸಮೂಹ ಅಂಚೆ ಚೀಟಿಗಳನ್ನು ಹೊರತರುವ ಮೂಲಕ ಈ ಸುಪ್ರಸಿದ್ಧ ನಟನಿಗೆ ಗೌರವ ಅರ್ಪಿಸಿದ್ದರೆ, ಉರುಗ್ವೆ ಚಾರ್ಲಿಯ 25ನೇ ಪುಣ್ಯ ತಿಥಿಯಂದು ನಾಲ್ಕು ವಿಶೇಷ ಅಂಚೆ ಚೀಟಿಗಳನ್ನು ಪ್ರಕಟಿಸಿದೆ.

ಗ್ರೆನಡಾ, ರಿವಾಂಡ, ಜಪಾನ್‌, ಗಯಾನ, ಬಲ್ಗೇರಿಯಾ, ಕ್ಯೂಬಾ, ಬೆಲ್ಜಿಯಂ ಹೀಗೆ ಹಲವು ದೇಶಗಳು ಚಾರ್ಲಿಚಾಪ್ಲಿನ್‌ ಅಂಚೆಗಳನ್ನು

ವೈವಿಧ್ಯಮಯವಾದ ರೀತಿಯಲ್ಲಿ ಬಿಡುಗಡೆ ಮಾಡಿದ್ದು, ಪ್ರತಿವರ್ಷ ಒಂದಲ್ಲ ಒಂದು ದೇಶ ಈ ಅಪ್ಪಟ ಹಾಸ್ಯಗಾರನ ಜ್ಞಾಪಕಾರ್ಥ ಅಂಚೆಚೀಟಿ ಗೌರವ ಮುಂದುವರೆಸುತ್ತ ಬಂದಿವೆ.

ವಿಶ್ವದ ಮನರಂಜನಾ ಕ್ಷೇತ್ರದಲ್ಲಿ ಮೇರು ಶಿಖರವೇರಿದ ಕೆಲವೇ ಮಂದಿಯಲ್ಲಿ ಒಬ್ಬರೆನ್ನಿಸಿಕೊಂಡ ಚಾರ್ಲಿ ಚಾಪ್ಲಿನ್‌ ನಮ್ಮಿಂದ ದೂರವಾಗಿದ್ದರೂ (25 ಡಿಸೆಂಬರ್‌ 1977) ಈಗಲೂ ತನ್ನ ವಿಶಿಷ್ಟ ಪಾತ್ರಗಳಿಂದ, ಪೆದ್ದು ಪೆದ್ದಾದ ನಗುವಿನಿಂದ ಅಮಾಯಕತೆಯ ಪಾತ್ರಗಳ ಆಳದಿಂದ ಹೊರಡಿಸುತ್ತಿದ್ದ ಧ್ವನಿಪೂರ್ಣ ಸಂದೇಶಗಳಿಂದ, ಅವ್ಯಕ್ತ ಭಾವನೆಗಳಿಂದ ಜೀವಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT