ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಸಭೆ ನಡೆಸಿದ್ದ ಶಂಕಿತರು

ಮೌಲ್ವಿ ಉಪಸ್ಥಿತಿಯಲ್ಲೇ ಸೇರಿದ್ದರು l ತುಮಕೂರು ಕಾಡಿನಲ್ಲೂ ಚರ್ಚೆ
Last Updated 23 ಜನವರಿ 2016, 20:08 IST
ಅಕ್ಷರ ಗಾತ್ರ

ಬೆಂಗಳೂರು: ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಶುಕ್ರವಾರ ಬಂಧಿತರಾದ ಶಂಕಿತರು, ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ಮೌಲ್ವಿ ಮೌಲಾನಾ ಸೈಯದ್‌ ಅಂಜಾನ್‌ ಶಾ ಖಾಸ್ಕಿಯ ಉಪಸ್ಥಿತಿಯಲ್ಲಿ ಎರಡು ಸಭೆಗಳನ್ನು ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೂಲಗಳು ತಿಳಿಸಿವೆ.

‘ಶುಕ್ರವಾರ ಬೆಳಗಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ಮುಂಬೈನ ಮುದಾಬಿರ್ ಮುಸ್ಕಾಕ್ ಶೇಕ್  ಹಾಗೂ ಹೈದರಾಬಾದ್‌ನ ನಫೀಜ್ ಖಾನ್ ಅಲಿಯಾಸ್ ಫಾತಿಮ್ ಖಾನ್ ಎಂಬುವರನ್ನು ಬಂಧಿಸಲಾಗಿದೆ. ಅಲ್‌ಕೈದಾ ಸಂಘಟನೆಯ ಸ್ಥಳೀಯ ಮುಖಂಡರೆಂದು ಘೋಷಿಸಿಕೊಂಡಿರುವ ಇವರು, ನ.9ರಂದು ಬೆಂಗಳೂರಿನಲ್ಲಿ ಮೊದಲ ಸಭೆ ನಡೆಸಿದ್ದರು. ಖಾಸ್ಮಿ ಮತ್ತು ಈಗ ನಗರದಲ್ಲಿ ಸೆರೆ ಸಿಕ್ಕಿರುವ ನಾಲ್ವರು ಶಂಕಿತರನ್ನು ಆ ಸಭೆಗೆ ಆಹ್ವಾನಿಸಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಇದಾದ 15 ದಿನಗಳ ಬಳಿಕ ಹಣ್ಣಿನ ವ್ಯಾಪಾರಿ ಸೈಯದ್ ಮುಜಾಹಿದ್, ತುಮಕೂರಿನ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಸಭೆ ಏರ್ಪಡಿಸಿದ್ದ. ರಾಜ್ಯದಲ್ಲಿ ಸಂಘಟನೆಯನ್ನು ವಿಸ್ತರಿಸುವ ಬಗ್ಗೆ ಆ ಎರಡು ಸಭೆಗಳಲ್ಲೂ ಚರ್ಚೆಗಳು ನಡೆದಿದ್ದವು’ ಎಂದು ತಿಳಿಸಿದ್ದಾರೆ.

ಖಾಸ್ಮಿ ನೆಚ್ಚಿನ ಗುರು:  ‘ಬ್ಯಾಟರಾಯನಪುರದಲ್ಲಿ ಬಂಧಿತನಾದ ಆಸಿಫ್ ಅಲಿಯು ಮೌಲ್ವಿ ಖಾಸ್ಮಿಯನ್ನು ಆರಾಧಿಸುತ್ತಿದ್ದ. ಈ ಮೌಲ್ವಿಯ ಪ್ರವಚನಕ್ಕೆ ಮಾರು ಹೋಗಿದ್ದ ಆತ, 2013ರಲ್ಲಿ ಅಫ್ಜಲ್, ಅಹದ್, ಹುಸೇನ್ ಹಾಗೂ ತುಮಕೂರಿನ ಮುಜಾಹಿದ್‌ಗೂ ಖಾಸ್ಮಿಯನ್ನು ಭೇಟಿ ಮಾಡಿಸಿದ್ದ. ಬೆಂಗಳೂರಿನ ಉತ್ತರ ವಿಭಾಗದಲ್ಲಿರುವ ಎರಡು ಪ್ರಾರ್ಥನಾ ಮಂದಿರಗಳಲ್ಲಿ ಖಾಸ್ಮಿ ಹಾಗೂ ಈ ಶಂಕಿತರು ಆಗಾಗ್ಗೆ ಸೇರುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ಜ.7ರಂದು ಖಾಸ್ಮಿಯನ್ನು ದೆಹಲಿ ಎಟಿಎಸ್ ಅಧಿಕಾರಿಗಳು ಇಲಿಯಾಸ್‌ನಗರದಲ್ಲಿ ಬಂಧಿಸಿದ್ದರು.
 

ಕಾನ್‌ಸ್ಟೆಬಲ್‌ಗೆ ಇರಿದ ಶಂಕಿತ: ಮತ್ತೊಂದೆಡೆ, ತನ್ನನ್ನು ಬಂಧಿಸಲು ಬಂದಿದ್ದ ತೆಲಂಗಾಣದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್‌) ಕಾನ್‌ಸ್ಟೆಬಲ್‌ಗೆ ಶಂಕಿತ ಉಗ್ರ ಜಾವೀದ್ ರಫಿಕ್ (30) ಎಂಬಾತ ಚೂರಿಯಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಗರದ ಪರಪ್ಪನ ಅಗ್ರಹಾರ ಸಮೀಪದ ದೊಡ್ಡನಾಗಮಂಗಲದಲ್ಲಿ ಶನಿವಾರ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಕಾನ್‌ಸ್ಟೆಬಲ್‌ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರವಷ್ಟೆ (ಜ. 22) ದೆಹಲಿಯ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ರಾಜ್ಯದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾದ ಅಫ್ಜಲ್ ಮತ್ತು ಅಹದ್ ಜತೆ ರಫಿಕ್ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು.

ದೆಹಲಿ ಮೂಲದ ಈತ, 6 ತಿಂಗಳ ಹಿಂದೆ ಸಾರಾಯಿಪಾಳ್ಯದ ಯಾಸ್ಮಿನ್ ಎಂಬಾಕೆಯನ್ನು ವಿವಾಹವಾಗಿ, ದೊಡ್ಡನಾಗಮಂಗಲದ ಬಾಡಿಗೆ ಮನೆಯೊಂದರಲ್ಲಿ ಪತ್ನಿಯೊಂದಿಗೆ ವಾಸವಿದ್ದ.

ಸಿಐಎ ನೆರವು (ನವದೆಹಲಿ ವರದಿ): ಶಂಕಿತ ಉಗ್ರರ ಬಂಧನಕ್ಕೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸಹಾಯ ಮಾಡಿದೆ. ಭಯೋತ್ಪಾದನೆ ತಡೆಗೆ ಸಂಬಂಧಿಸಿದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವುದರ ಬಗ್ಗೆ ಭಾರತ–ಅಮೆರಿಕ ನಡುವೆ ಒಪ್ಪಂದ ಇದೆ. 

ಸಿಐಎ ನೀಡಿದ ಸುಳಿವನ್ನು ಆಧರಿಸಿ ಎನ್‌ಐಎ ಅಧಿಕಾರಿಗಳು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಶಂಕಿತರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT