ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ವಿಶ್ವಾಸ ಗೆಲ್ಲದವ ಸಮರ್ಥ ಪ್ರಧಾನಿ ಆಗಲಾರ

ಕಾರ್ಪೊರೇಟ್‌ ಕೈಯಲ್ಲಿ ನರೇಂದ್ರ ಮೋದಿ: ಆರ್ಥಿಕ ತಜ್ಞ ಟೀಕೆ
Last Updated 1 ಅಕ್ಟೋಬರ್ 2013, 9:34 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯವೊಂದರಲ್ಲಿ ಸಮರ್ಥ ಆಡಳಿತ ನೀಡಿದ್ದಾರೆ, ಅವರೇ ದೇಶದ ಭವಿಷ್ಯದ ಸಮರ್ಥ ಪ್ರಧಾನಿ ಎಂದು ಬಿಂಬಿಸುವ ಪ್ರಯತ್ನ ಇದೀಗ ನಡೆಯುತ್ತಿದೆ. ಹೀಗೆ ಪ್ರಚಾರ ಮಾಡುತ್ತಿರುವುದು ಉದ್ಯಮ ಜಗತ್ತು ಎಂಬುದನ್ನು ಮರೆಯಲಾಗದು. ಭವಿಷ್ಯದ ತಮ್ಮ ಹಿತ ನೋಡಿಕೊಂಡು ಇಂತಹ ಪ್ರಚಾರದಲ್ಲಿ ತೊಡಗಿರುವ ಉದ್ಯಮಗಳ ಕೃಪೆಗೆ ಪಾತ್ರವಾದ ವ್ಯಕ್ತಿ ಎಂತಹ ಆಡಳಿತ ನೀಡಲು ಸಾಧ್ಯ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಆರ್ಥಿಕ ಸಲಹೆಗಾರರಾಗಿದ್ದ ಜಗದೀಶ್‌ ಶೆಟ್ಟಿಗಾರ್‌ ಪ್ರಶ್ನಿಸಿದ್ದಾರೆ.

ಇಲ್ಲಿನ ಪುರಭವನದಲ್ಲಿ ಸೋಮವಾರ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪ್ರಜಾಪ್ರಭುತ್ವ ಉಳಿಸಿ ವೇದಿಕೆಗಳ ವತಿಯಿಂದ ನಡೆದ ‘ಪರ್ಯಾಯ ರಾಜನೀತಿ’ ಚಿಂತನಾ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತಮ್ಮ ಮುಕ್ಕಾಲು ಗಂಟೆ ಭಾಷಣದಲ್ಲಿ ಎಲ್ಲೂ ಮೋದಿ ಹೆಸರೆತ್ತದೆ ಕಟುವಾಗಿ ಟೀಕಿಸುತ್ತಲೇ ಹೋದ ಶೆಟ್ಟಿಗಾರ್‌, ‘ಚುನಾವಣೆಯಲ್ಲಿ ಗೆಲ್ಲುವುದು ಬೇರೆ, ಅಧಿಕಾರ ಹಿಡಿಯುವುದು ಬೇರೆ. ಅಧಿಕಾರಕೆ್ಕ ಬಂದ ನಂತರ ಯಾರು ತಮಗೆ ಮತ ನೀಡಿದ್ದಾರೆ, ಯಾರು ನೀಡಿಲ್ಲ ಎಂದು ವಿಮರ್ಶಿಸುವಂತಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡು ಯಾವುದೇ ಟೀಕೆಗೆ ಆಸ್ಪದ ಇಲ್ಲದಂತೆ ಆಡಳಿತ ನಡೆಸಬೇಕು. ಇದೀಗ ಬಿಂಬಿಸ­ಲಾಗುತ್ತಿರುವ ಭವಿಷ್ಯದ ಪ್ರಧಾನಿಗೆ ಅಂತಹ ಗುಣ ಇದೆಯೇ?’ ಎಂದು ಕೇಳಿದರು.

‘ಅವರು ನಿಜಕ್ಕೂ ಸಮರ್ಥ ಆಡಳಿತಗಾರರಾಗಿದ್ದರೆ 10 ವರ್ಷಗಳ ಹಿಂದೆ ರಾಜ್ಯದ ಅತ್ಯಂತ ಜನಪ್ರಿಯ ಸಚಿವನ ಕೊಲೆಯ ಹಿಂದಿನ ಸಂಚನ್ನು ಬಯಲು ಮಾಡಬೇಕಿತ್ತು. ಸಮರ್ಥರಿದ್ದೂ ಕೊಲೆ ಸಂಚನ್ನು ಹೊರತರುವುದು ಅವರಿಗೆ ಸಾಧ್ಯವಾಗಿಲ್ಲ ಎಂದಾದರೆ ಅಲ್ಲಿ ಏನೋ ನಡೆದಿದೆ ಎಂದೇ ಭಾವಿಸಬೇಕಾಗುತ್ತದೆ, ಇಂತಹ ಅನುಮಾನ ಪಡುವುದು ಬೇಡ ಎಂದು ಹೇಳುವುದಾದರೆ ಅವರೊಬ್ಬ ಅಸಮರ್ಥ ಆಡಳಿತಗಾರ ಎಂದೇ ಹೇಳಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲೇ ಸಮರ್ಥವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲದ ವ್ಯಕ್ತಿ ದೇಶ ಹೇಗೆ ಆಳುತ್ತಾರೆ’ ಎಂದು ಜಗದೀಶ್‌ ಶೆಟ್ಟಿಗಾರ್‌ ಪ್ರಶ್ನಿಸಿದರು.

ಕೋಟಿ ಕೋಟಿ ವೆಚ್ಚ: ‘ಭವಿಷ್ಯದ ಪ್ರಧಾನಿಯ ಭಾಷಣವನ್ನು ಟಿವಿ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತಿವೆ. ಹೀಗೆ ನೇರ ಪ್ರಸಾರ ಮಾಡಲು ಒಂದೊಂದು ಚಾನೆಲ್‌ಗೆ ಕನಿಷ್ಠ ಒಂದೊಂದು ಕೋಟಿ ಹಣ ಕೊಡಬೇಕು. ಹಾಗಿದ್ದರೆ ಇಂತಹ ದುಡ್ಡನ್ನು ಕೊಡುತ್ತಿರುವವರು ಯಾರು? ಕಾರ್ಪೊರೇಟ್‌ ಸಂಸ್ಥೆಗಳು ತಮ್ಮ ಇಷ್ಟಕ್ಕೆ ತಕ್ಕಂತೆ ವ್ಯಕ್ತಿಯನ್ನು ಬಿಂಬಿಸಲು ಹೊರಟಿವೆ’ ಎಂದು ಅವರು ವಿವರಿಸಿದರು.

’ಟಾಟಾ ಕಂಪೆನಿಗೆ ಕೇವಲ 24 ಗಂಟೆಗಳಲ್ಲಿ ಕಾರ್‌ ಕಂಪೆನಿ ಆರಂಭಿಸುವುದಕ್ಕೆ ಅವಕಾಶ ಕೊಟ್ಟದ್ದು ಒಂದು ರೀತಿಯಲ್ಲಿ ಉತ್ತಮ, ಇನ್ನೊಂದು ರೀತಿಯಲ್ಲಿ ಜನ­ಸಾಮಾನ್ಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಅವರ ಮೇಲೆ ಹೇರುವ ಹೊರೆ ಎನಿಸುತ್ತದೆ. ಯಾವುದೇ ಯೋಜನೆಯಾದರೂ ಸ್ಥಳೀಯರ ವಿರೋಧ ಕಟ್ಟಿಕೊಂಡು ಏನನ್ನೂ ಮಾಡಬಾರದು, ಅದಕ್ಕಾಗಿಯೇ ನಮ್ಮಲ್ಲಿ ಕೊಜೆಂಟಿರಿಕ್ಸ್ ನಂತಹ ಕಂಪೆನಿಗಳು ಕಾಲ್ಕೀಳಬೇಕಾಯಿತು. ಪರಿಸರ ರಕ್ಷಣೆ, ಜನರ ಭಾವನೆಗಳಿಗೆ ಸ್ಪಂದಿಸುವ ಮನೋಭಾವ ಕಳೆದುಕೊಂಡರೆ ಸಹ ಆತ ಉತ್ತಮ ಆಡಳಿತಗಾರ ಆಗಲು ಸಾಧ್ಯವಿಲ್ಲ’ ಎಂದು ಶೆಟ್ಟಿಗಾರ್ ಹೇಳಿದರು.

ಚಿಂತಕ, ಲೇಖಕ ಎಂ.ಸಿ.ರಾಜ್‌ ಅವರು ಪರ್ಯಾಯ ರಾಜಕೀಯ ಚಿಂತನೆಯ ಬಗ್ಗೆ ವಿವರವಾಗಿ ತಿಳಿಸಿ, ಚುನಾವಣೆಯಲ್ಲಿ ಚಲಾವಣೆಯಾಗುವ ಮತದಾನದ ಪ್ರಮಾಣಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳಿಗೆ ಪ್ರತಿನಿಧಿಸುವ ಅವಕಾಶ ಕೊಡಬೇಕು, ಇದರಿಂದ ಯಾರೊಬ್ಬರ ಧ್ವನಿಯೂ ಅಡಗಲು ಸಾಧ್ಯವಿಲ್ಲ, ಹತ್ತಾರು ಅಭ್ಯರ್ಥಿಗಳಲ್ಲಿ ಹೆಚ್ಚು ಮತ ಗಳಿಸಿದ ಒಬ್ಬ ವ್ಯಕ್ತಿ ಆಯ್ಕೆಯಾಗುವ ಈಗಿನ ಸ್ಥಿತಿಯಲ್ಲಿ ಉಳಿದ ಮತದಾರರ ಆಶಯಗಳಿಗೆ ಬೆಲೆಯೇ ಇಲ್ಲವಾಗುತ್ತದೆ ಎಂದರು.

ಸಮಾವೇಶದ ರಾಷ್ಟ್ರೀಯ ಸಂಯೋಜಕ ಸುರೇಂದ್ರ ಭೀಷ್ಮ, ರಾಜ್ಯ ಸಂಯೋಜಕರಾದ ಅಣ್ಣಾ ವಿನಯಚಂದ್ರ, ಗಣೇಶ್‌ ಶಾನುಭಾಗ್‌, ಜಿಲ್ಲಾ ಸಂಯೋಜಕ ಬಾಲಕೃಷ್ಣ ಬೋರ್ಕರ್‌, ಬಸವರಾಜ ಪಾಟೀಲ್‌ ವೀರಾಪುರ, ಶ್ರೀನಿವಾಸ ಶೆಟ್ಟೆ, ವಿಜಯ್‌, ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಇತರರು ಇದ್ದರು.

ಪ್ರಜಾಪ್ರಭುತ್ವದ ಉದ್ಯಮೀಕರಣ ಗೋವಿಂದಾಚಾರ್ಯ ಆತಂಕ
ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಉದ್ಯಮ ವಲಯಗಳ ಕೈಗೊಂಬೆ ಆಗತೊಡಗಿದೆ. ಇಂತಹ ವಿಷಯದಲ್ಲಿ ಆಡಳಿತ, ವಿರೋಧ ಪಕ್ಷಗಳೆಂಬ ಭೇದವೇ ಇಲ್ಲ. ಭ್ರಷ್ಟಾಚಾರದ ಮೂಲವೂ ಇದೇ ಆಗಿರುತ್ತದೆ. ಇದಕ್ಕಾಗಿ ಪರ್ಯಾಯ ರಾಜನೀತಿಯ ಬಗೆ್ಗ ಚಿಂತನೆ ನಡೆಸುವುದು ಅಗತ್ಯ, ಪ್ರಜಾಪ್ರಭುತ್ವ ಉಳಿಸಿ ವೇದಿಕೆ ಸ್ಥಾಪನೆಗೊಂಡದ್ದು ಸಹ ಇದೇ ಉದ್ದೇಶಕ್ಕೆ ಎಂದು ಒಂದು ಕಾಲಕ್ಕೆ ಬಿಜೆಪಿಯ ಚಿಂತನ ಚಿಲುಮೆ ಎಂದೇ ಖ್ಯಾತರಾಗಿದ್ದ ಕೆ.ಎನ್‌.ಗೋವಿಂದಾಚಾರ್ಯ ಹೇಳಿದರು.

‘ಗೆದ್ದ ಅಭ್ಯರ್ಥಿಗಳ ಜತೆಗೆ ಹೆಚ್ಚು ಮತ ಗಳಿಸಿ ಸೋತ ಅಭ್ಯರ್ಥಿಗಳನ್ನು ಪರ್ಯಾಯ ಅಭ್ಯರ್ಥಿ ಎಂದು ಪರಿಗಣಿಸಬೇಕು’ ಎಂದ ಅವರು, ’ಏರ್‌ ಇಂಡಿಯಾ, ಇಂಡಿಯನ್‌ ಏರ್‌ಲೈನ್ಸ್ ಗಳ ಪುನಶ್ಚೇತನಕ್ಕೆ 30 ಸಾವಿರ ಕೋಟಿ ಕೊಡುವ ಸರ್ಕಾರಕ್ಕೆ ನ್ಯಾಯಾಲಯಗಳ ರಚನೆ, ನ್ಯಾಯಾ­ಧೀಶರ ನೇಮಕಕ್ಕೆ 7 ಸಾವಿರ ಕೋಟಿ ಕೊಡಲು ಸಾಧ್ಯವಾಗುತ್ತಿಲ್ಲ ಏಕೆ? ಅನುಕೂಲಸಿಂಧು ರಾಜಕೀಯ ಧೋರಣೆ ಬದಲಾಗದಿದ್ದರೆ ದೇಶ ಅಭಿವೃದ್ಧಿಗೊಳ್ಳಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT