ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೆ ಈ ಅಸಡ್ಡೆ?

Last Updated 29 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನಾನು ರಂಗಭೂಮಿ ಕಲಾವಿದ. ಕಳೆದ ಮೂರು ವರ್ಷಗಳಿಂದ ನೀನಾಸಂ ತಿರುಗಾಟ, ಆದಿಮ ಹಾಗೂ ಜನಮನದಾಟ ಈ ತಂಡಗಳ ಭಾಗವಾಗಿ ಕನ್ನಡನಾಡಿನ ಉದ್ದಗಲಕ್ಕೂ ನಾಟಕವಾಡುತ್ತ ಪ್ರತಿವರ್ಷ ಹತ್ತಾರು ಕಡೆ ಸಂಚರಿಸಿದ್ದೇನೆ. ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ, ಕರ್ನಾಟಕದ ಬಹುಪಾಲು ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ರಂಗಮಂದಿರಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳು ಮತ್ತು ಪುಸ್ತಕ ಮಾರಾಟ ಮಳಿಗೆಗಳಿವೆ. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅದರ ಅಧೀನದ  ಅಕಾಡೆಮಿಗಳು ಪ್ರಕಟಿಸಿರುವ ಪುಸ್ತಕಗಳು ಅಲ್ಲೆಲ್ಲ ಕೊಳ್ಳಲು ಸಿಕ್ಕುತ್ತವೆ.

ಖುಷಿಯ ಸಂಗತಿಯೆಂದರೆ, ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಬಹಳಷ್ಟು ಉತ್ತಮ ಕೃತಿಗಳನ್ನು ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಮತ್ತು ಅಕಾಡೆಮಿಗಳು ಮುದ್ರಿಸಿವೆ ಎನ್ನುವುದು. ಋಗ್ವೇದ ಸಂಹಿತೆಯ ಸಂಪುಟಗಳಂಥ ಗ್ರಂಥಗಳಿಂದ ಹಿಡಿದು ಪ್ರಾಚೀನ ಕನ್ನಡ ಸಾಹಿತ್ಯದ ಮೇರು ಕೃತಿಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ಸ್ವಾತಂತ್ರ್ಯ ಹೋರಾಟದ ಸ್ಮೃತಿ ಕಥನಗಳು, ಪಂಜೆ ಮಂಗೇಶರಾಯರ ಸಾಹಿತ್ಯ, ಜಿ.ಪಿ.ರಾಜರತ್ನಂ ಅವರ ಸಮಗ್ರ ಮಕ್ಕಳ ಸಾಹಿತ್ಯ, ಡಿವಿಜಿ ಕೃತಿ ಶ್ರೇಣಿ, ಎಂ.ವಿ. ಸೀತಾರಾಮಯ್ಯನವರ ಕೃತಿ ಶ್ರೇಣಿ, ಶಿವರಾಮ ಕಾರಂತ ಕೃತಿ ಶ್ರೇಣಿ, ಕುವೆಂಪು ಸಾಹಿತ್ಯ, ಅಡಿಗರ ಸಮಗ್ರ ಸಾಹಿತ್ಯ, ಜಿ.ಎಸ್.ಶಿವರುದ್ರಪ್ಪನವವರ ಕೃತಿಗಳು - ಹೀಗೆ ಹಲವು ಅಮೂಲ್ಯ ಕೃತಿಗಳು ಇಲ್ಲಿ ಸಿಕ್ಕುತ್ತವೆ. ಪುಸ್ತಕಗಳ ಮಾರಾಟ ಬೆಲೆ ಕೂಡ ಕಡಿಮೆಯೇ.

ದುರಂತವೆಂದರೆ ಪುಸ್ತಕ ಮಾರಾಟ ಮಳಿಗೆಗಳು ಅಸಹನೀಯವಾದ ದುರಾಡಳಿತಕ್ಕೆ ಸಿಲುಕಿರುವುದು.  ಆಯಾ ಜಿಲ್ಲೆಗಳಲ್ಲಿನ ಜನರಿಗೇ ಈ ಮಳಿಗೆಗಳ ಕುರಿತು ಮಾಹಿತಿ ಇಲ್ಲ. ನಾವು ನಾಟಕವಾಡುತ್ತಾ ತಿರುಗಿದ ಜಿಲ್ಲಾ ಕೇಂದ್ರಗಳಲ್ಲಿನ ರಂಗಮಂದಿರಗಳಿಗೆ ಅಂಟಿಕೊಂಡಂತೆಯೆ ಇರುವ ಈ ಮಳಿಗೆಗಳಲ್ಲಿ  ಪುಸ್ತಕಗಳಿಗೆ ದೂಳು ಹಿಡಿದಿದೆ; ಅವುಗಳ ದಾಸ್ತಾನು ಮಾಡುವಿಕೆ ಮತ್ತು ಪ್ರದರ್ಶನದ ರೀತಿಯಲ್ಲಂತೂ ತುಂಬ ಅಸಡ್ಡೆ ಎದ್ದು ಕಾಣುತ್ತದೆ. ರಾಯಚೂರು ಮತ್ತು ತುಮಕೂರಿನ ಪುಸ್ತಕ ಮಳಿಗೆಗಳು ಅತ್ಯುತ್ತಮ ಉದಾಹರಣೆ.  ಖರೀದಿಸುವವರಿಗೆ ಸರಿಯಾದ ರಸೀತಿ ನೀಡಬೇಕೆಂಬ ತಿಳಿವಳಿಕೆಯಾಗಲಿ, ಲಭ್ಯವಿರುವ ಪುಸ್ತಕಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡಬೇಕೆಂಬ ಕಾಳಜಿಯಾಗಲಿ ಅಲ್ಲಿನ ಸಿಬ್ಬಂದಿಗೆ ಇಲ್ಲ. 

ಕೆಲವು ಕಡೆ ಸಿಬ್ಬಂದಿಯೇ ಇಲ್ಲ. ಇದ್ದಲ್ಲಿ ಅವರಿಗೆ ಗ್ರಾಹಕರ ಜತೆ ವ್ಯವಹರಿಸುವುದಕ್ಕೆ ಬೇಕಿರುವ ಸಾಮಾನ್ಯ ಸೌಜನ್ಯವೂ ಇಲ್ಲ. ಸರ್ಕಾರ, ಪುಸ್ತಕಗಳನ್ನು ಅಚ್ಚುಮಾಡಲು ಅಪಾರ ಹಣ ಖರ್ಚು ಮಾಡಿದೆ. ಆದರೆ ಆ ಪುಸ್ತಕಗಳನ್ನು ಜನರಿಗೆ ತಲುಪಿಸುವಲ್ಲಿ ಅದು ತೋರಿಸುತ್ತಿರುವ ಉಡಾಫೆಯಿಂದಾಗಿ ಆಗುತ್ತಿರುವ ನಷ್ಟ ಕಡಿಮೆಯದಂತೂ ಅಲ್ಲ.  ಇದೆಲ್ಲ ಬರಿಯ ಹಣದ ವ್ಯವಹಾರಕ್ಕೆ ಸೀಮಿತವಾದದ್ದಂತೂ ಅಲ್ಲವೇ ಅಲ್ಲ. ಮಾಹಿತಿ ತಂತ್ರಜ್ಞಾನ ಇಷ್ಟು ಮುಂದುವರಿದಿರುವ ಕಾಲದಲ್ಲಿ ನಾವಿದ್ದೇವೆ; ಆದರೂ ಈ ಪುಸ್ತಕಗಳ ಕುರಿತು ಸಾಹಿತ್ಯಾಸಕ್ತರಿಗೆ ಮಾಹಿತಿ ಒದಗಿಸುವುದು, ಇರುವ ಸೌಲಭ್ಯದ ಪ್ರಚಾರ ಮಾಡುವುದು, ಇದೆಲ್ಲ ಸಂಬಂಧಪಟ್ಟ ಇಲಾಖೆಗೆ ಅಂಥ ದೊಡ್ಡ ಹೊರೆಯಾದ ಸಂಗತಿಯೇ?

ಅಕ್ಷರ ಸಾಹಿತ್ಯವು ಹೃದಯಸಂಸ್ಕಾರದ ಬೆಳೆಗೆ ಬೇಕಿರುವ ಬಿತ್ತನೆ ಬೀಜ. ಆರೋಗ್ಯಪೂರ್ಣ ಸಮಾಜ ನಿರ್ಮಾಣದ ದಾರಿಯಲ್ಲಿ ಮತ್ತು ನಾಡಿನ ನುಡಿಯ  ಬೆಳವಣಿಗೆಯ ದೃಷ್ಟಿಯಿಂದ, ಈ ದೂಳು ಹಿಡಿದಿರುವ ಪುಸ್ತಕಗಳು ನಿಜಕ್ಕೂ ಮುಡಿಪಿಟ್ಟ ಬಿತ್ತನೆ ಬೀಜಗಳೆ. ಇವುಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹೊಣೆ ಯಾರದ್ದು? ಸರ್ಕಾರ ನಡೆಸುವ ಹಲವು ಉತ್ಸವಗಳು, ಹಬ್ಬಗಳ ನೆಪದಲ್ಲಿ, ಕನ್ನಡವು ಸಾವಿರಾರು ಫ್ಲೆಕ್ಸ್ ಹಾಗೂ ಬ್ಯಾನರುಗಳ ಮೇಲೆ ಹೊಳೆಯುತ್ತದೆ. ಆದರೆ ನಮಗೆ ಈ ಪುಸ್ತಕಗಳಿಗೆ ಹಿಡಿದಿರುವ ದೂಳು ಕಾಣುವುದೇ ಇಲ್ಲವಲ್ಲ! ಇನ್ನು ಜಿಲ್ಲಾ ರಂಗಮಂದಿರಗಳ ಬಗೆಗೇ ಹೇಳುವುದಾದರೆ, ಬೆರಳೆಣಿಕೆಯಷ್ಟು ರಂಗಮಂದಿರಗಳನ್ನು ಬಿಟ್ಟು ಕರ್ನಾಟಕದ ಎಲ್ಲ ರಂಗಮಂದಿರಗಳು ಹತ್ತು ಹಲವು ರೋಗಗಳಿಂದ ನರಳುತ್ತಿವೆ.

ಕೆಲವು ರಂಗಮಂದಿರಗಳಲ್ಲಿ, ಅವುಗಳನ್ನು ನೋಡಿಕೊಳ್ಳಲು ಸಿಬ್ಬಂದಿಯೇ ಇಲ್ಲ. ಇನ್ನುಳಿದವುಗಳಲ್ಲಿ ಸಿಬ್ಬಂದಿಯಿದ್ದರೂ  ಅಲ್ಲಿನ ನೆಲ, ಮಹಡಿ, ಪರದೆಗಳು, ಗ್ರೀನ್ ರೂಮುಗಳು, ಶೌಚಾಲಯಗಳು, ಇವೆಲ್ಲ ನೀರಿನ ಮುಖ ಕಂಡು ವರ್ಷಗಳಾಗಿರುತ್ತವೆ. ಅವುಗಳ ಸಭಾಂಗಣವನ್ನು ಗಮನಿಸಿದರೆ ಒಳಹೋಗಲು ಪ್ರೇಕ್ಷಕರಿಗೆ ಮನಸ್ಸೇ ಬರುವುದಿಲ್ಲ. ಬೆಳಕಿನ ಉಪಕರಣಗಳು ಮತ್ತು ಧ್ವನಿಯ ಉಪಕರಣಗಳ ಸ್ಥಿತಿಯೂ ಇದೇ. ನಾಟಕ ಆಡಲು ಹೋಗುವ ನಮ್ಮಂಥವರಿಗೆ ಅಲ್ಲಿನ ದೂಳಿನೊಟ್ಟಿಗೆ, ಹರಿದ ಪರದೆಗಳೊಟ್ಟಿಗೆ ಮತ್ತು ಕೆಲಸಕ್ಕೆ ಬಾರದ ಉಪಕರಣಗಳೊಟ್ಟಿಗೆ ಹೆಣಗಾಡುವುದರಲ್ಲೇ ಆಯುಷ್ಯ ಕಳೆದಿರುತ್ತದೆ. ಇನ್ನು ನಮ್ಮ ಅಂದಿನ ನಾಟಕ ಪ್ರದರ್ಶನಕ್ಕೆ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವವಿದ್ದರೆ ಮುಗಿದೇ ಹೋಯಿತು.

ಕಾರ್ಯಕ್ರಮದ ಆಯೋಜಕರು ಗಣ್ಯರೆನಿಸಿ ಕೊಂಡವರನ್ನು ಸ್ವಾಗತಿಸುವ, ಅಭಿನಂದಿಸುವ, ಅವರಿಂದ ಭಾಷಣ ಮಾಡಿಸುವ, ಹೊಗಳಿಸಿಕೊಳ್ಳುವ ಮತ್ತು ಅವರನ್ನು ಹೊಗಳುವ ಭರಾಟೆಯಲ್ಲಿ, ರಂಗದ ಹಿಂದೆ ಕೊಳಕುಕೊಳಕಾದ ಗ್ರೀನ್ ರೂಮುಗಳಲ್ಲಿ ಬಣ್ಣ ಬಳಿದುಕೊಂಡು ದೆವ್ವಗಳಂತೆ ಚಡಪಡಿಸುವ ಕಲಾ ವಿದರು ಮತ್ತು ನಾಟಕ ನೋಡಲು ಕಾಯುತ್ತ ರಂಗದ ಮುಂದೆ ಕೂರುವ ಸಹೃದಯರು - ಇವರಿಬ್ಬರ ನಡುವೆ ಆಗಬೇಕಾದ ನಾಟಕದ ಆಟ ಎಂಬ ಸಂವಾದವು ಅಮುಖ್ಯವಾಗಿ ಬಿಡುತ್ತದೆ. ಈ ಪುಣ್ಯಕ್ಕೆ ನಾಟಕವನ್ನು ಯಾಕೆ ಆಯೋಜಿಸುತ್ತೀರಿ ಎಂದು ಅವರನ್ನು ಕೇಳಿದರೆ, ವೇದಿಕೆಯಲ್ಲಿನ ಸ್ವಾಗತದ ಕಾರ್ಯಕ್ರಮ, ಅದರ ಫೋಟೊ ಹಾಗೂ ವಿಡಿಯೊ ದಾಖಲಾತಿ ತಮಗೆ ಬಹಳ ಮುಖ್ಯ ಅನ್ನುತ್ತಾರೆ!

ಅಂದರೆ ಇಲಾಖೆಯ ಮಟ್ಟಿಗೆ ರಂಗಮಂದಿರ, ಕಲಾವಿದ, ಪ್ರೇಕ್ಷಕ, ನಾಟಕ ನಗಣ್ಯ. ಕಾರ್ಯಕ್ರಮಗಳ ಗುಣಮಟ್ಟ ಮತ್ತು ಅವುಗಳಿಂದಾಗುವ ಸಾಮಾಜಿಕ ಪರಿಣಾಮ ಏನೇ ಇರಲಿ, ಹೇಗೇ ಇರಲಿ ಅವುಗಳ ಸಂಖ್ಯಾ ದಾಖಲಾತಿ ಮಾಡಿ ತೃಪ್ತಿಪಟ್ಟುಕೊಳ್ಳುವುದಕ್ಕಾಗಿ ಮಾತ್ರ ಇಲಾಖೆ ಇದೆಯೇ?  ಈ ಇಲಾಖೆ, ಕಲಾವಿದರನ್ನು ಮತ್ತು ಸಹೃದಯರನ್ನು ಮುಟ್ಟುವುದು ಯಾವಾಗ, ಹೇಗೆ? ಇದೆಲ್ಲದರ ಹೊಣೆ ಯಾರದ್ದು? ಇಂತಹ ಬೇಜವಾಬ್ದಾರಿ ತನ ಯಾಕೆ? ಅದರ ಆಡಳಿತ ಕಚೇರಿಗಳು ರಂಗ ಮಂದಿರಕ್ಕೆ ಅಂಟಿಕೊಂಡೇ ಇರುತ್ತವೆಯಾದರೂ ಈ ಎಲ್ಲ ಅವ್ಯವಹಾರ ಮತ್ತು ಅವ್ಯವಸ್ಥೆಯನ್ನು ಕಂಡೂ ಕಾಣದಂತಿ ರುವ ಈ ಜಾಣ ಕುರುಡು ಎಂಥದ್ದು? ಸಾಂಸ್ಕೃತಿಕ ಬರಗಾಲವನ್ನು ಸೃಷ್ಟಿಸಿಕೊಳ್ಳಲು ನಾವೇ ಹುಟ್ಟಿಸಿಕೊಳ್ಳುತ್ತಿರುವ ದಾರಿಗಳಿವು. ಸಂಸ್ಕೃತಿ ಇಲಾಖೆಯ ಸಚಿವರು ಮತ್ತು  ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಮನಿಸಬೇಕಿದೆ. ಆಗುತ್ತಲೇ ಇರುವ ದೊಡ್ಡ ಸಾಂಸ್ಕೃತಿಕ ದುರಂತವನ್ನು ತಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT