ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುಗತಿಯಲ್ಲಿ ಕಾರು ಮಾರಾಟ?

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಏರುತ್ತಿದ್ದ ಇಂಧನ ಬೆಲೆ, ಬ್ಯಾಂಕ್‌ ಬಡ್ಡಿ ದರದಿಂದಾಗಿ 2014ರ ಆರಂಭದಲ್ಲಿ ಕಾರುಗಳ ಮಾರಾಟ ಅಷ್ಟಾಗಿ ಆಶಾದಾಯಕವಾಗಿರಲಿಲ್ಲ.
ಆದರೆ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಕುಸಿಯುತ್ತಿರುವುದರಿಂದ ಕಾರು ತಯಾರಿಕಾ ಕಂಪೆನಿಗಳು ಮತ್ತೊಮ್ಮೆ ಗರಿಗೆದರಿವೆ.

ವರ್ಷದಿಂದ ವರ್ಷಕ್ಕೆ ಕಂಪೆನಿಗಳ ಮಾರಾಟ ಪ್ರಗತಿಯನ್ನು ಗಮನಿಸಿದರೆ 2013ರಕ್ಕಿಂತ ಈ ಬಾರಿ ಶೇ 10ರಷ್ಟು ಕಾರುಗಳು ಹೆಚ್ಚು ಮಾರಾಟವಾಗಿರುವುದು ಈ ಪ್ರಗತಿಗೆ ಸಾಕ್ಷಿ. ಆದರೆ ಅತಿ ಹೆಚ್ಚು ಕಾರು ಮಾರಾಟವನ್ನು ಪ್ರಗತಿಯ ಹಾದಿಯಲ್ಲಿರುವ ಮೊದಲ ಆರು ಕಂಪೆನಿಗಳು ಅನುಭವಿಸಿವೆ.

ಸರ್ಕಾರ ನೀಡಿದ ಅಬಕಾರಿ ಸುಂಕದ ರಿಯಾಯಿತಿಯ ಲಾಭವನ್ನು ಪಡೆದ ಬಹಳಷ್ಟು ಕಾರು ತಯಾರಿಕಾ ಕಂಪೆನಿಗಳಿಗೆ, ಮುಂದೆ ಅವುಗಳು ರದ್ದಾಗುವ ಭೀತಿ ಇದೆ. ಹೀಗಾಗಿ ಬರಲಿರುವ ಬಜೆಟ್ ಗಮನಿಸಿದ ನಂತರ ಕಾರ್ಯತಂತ್ರ ರೂಪಿಸುವ ಯೋಜನೆಯನ್ನು ಕಂಪೆನಿಗಳು ಹೊಂದಿವೆ. ಆದರೆ ಸದ್ಯ ತಮ್ಮಲ್ಲಿ ಮಾರಾಟವಾಗದೆ ಉಳಿದಿರುವ ಕಾರುಗಳಿಗೆ ಉತ್ತಮ ರಿಯಾಯಿತಿ ನೀಡಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಕಂಪೆನಿಗಳು ನಿರತವಾಗಿವೆ.

ಕಂಪೆನಿಗಳ ಮಾರಾಟ ಪ್ರಗತಿಯನ್ನು ಗಮನಿಸಿದರೆ ಸರ್ವಕಾಲಿಕ ಮಾರುತಿ ಕಾರುಗಳೇ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಸ್ವಿಫ್ಟ್‌ ಹಾಗೂ ಹೊಸ ಆಲ್ಟೊ ಕೆ10 ಅತಿ ಹೆಚ್ಚು ಮಾರಾಟವಾಗಿವೆ. ಆದರೆ ಡಿಝೈರ್‌ ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗಿಲ್ಲ. ವರ್ಷದ ಕೊನೆಯ ಹೊತ್ತಿಗೆ ಬಿಡುಗಡೆ ಮಾಡಿದ ಸಿಜಾಝ್‌ ಕೂಡಾ ಜನರ ಆಕರ್ಷಣೆಗೆ ಕಾರಣವಾಗಿದೆ. ಉಳಿದಂತೆ ವ್ಯಾಗನ್ ಆರ್, ರಿಟ್ಜ್‌ ಮುಂತಾದ ಕಾರುಗಳು ಸಮಾಧಾನಕರ ಪ್ರಗತಿ ಕಂಡಿವೆ. ಈ ಬಾರಿ ಸೇನೆಗೆ 4ಸಾವಿರ ಜಿಪ್ಸಿ ಬೇಕಾಗಿರುವುದರಿಂದ ಅದು ಕೂಡಾ ಪ್ರಗತಿಯ ಹಾದಿಯಲ್ಲಿದೆ ಎಂದು ಕೆಲ ವರದಿಗಳು ಹೇಳುತ್ತವೆ.

ಉಳಿದಂತೆ ಹ್ಯುಂಡೈ ಕೂಡಾ ಮಾರುತಿಯಂತೆಯೇ ಒಂದರ ಹಿಂದೊಂದರಂತೆ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಹೊಸ ಐ20 ಈಗ ಅತಿ ಹೆಚ್ಚು ಮಾರಾಟವಾಗುವ ಕಾರು ಆಗಿರುವುದರಿಂದ, ಅದರ ಮಾರಾಟ ಸಂಖ್ಯೆ ಕಂಪೆನಿಯ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ಜತೆಯಲ್ಲೇ ಗ್ರ್ಯಾಂಡ್‌ ಐ10 ಕೂಡಾ ಉತ್ತಮವಾಗಿ ಮಾರಾಟವಾಗುತ್ತಿದೆ. ಆದರೆ ಹ್ಯುಂಡೈನ ದುಬಾರಿ ಕಾರುಗಳಾದ ಎಲೆಂಟ್ರಾ ಮೂರಂಕಿಯ ಮಾರಾಟ ಕಂಡರೆ, ಸೊನಾಟ ಒಂದಂಕಿಯಷ್ಟು ಮಾರಾಟವಾಗಿರುವುದು ಕಂಪೆನಿಗೆ ನುಂಗಲಾರದ ತುಪ್ಪವಾಗಿದೆ.

ಅದರಂತೆಯೇ ಹೋಂಡಾ ಕೂಡಾ ತನ್ನ 1.5ಲೀ ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಅಳವಡಿಸಿ ಹಲವು ಮಾದರಿಯನ್ನು ರಸ್ತೆಗಿಳಿಸಿರುವುದರಿಂದಲೂ ಅದರ ಮಾರಾಟವೂ ಪ್ರಗತಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ಮೊಬಿಲೊಗೆ ಜನ ಮುಗಿಬಿದ್ದಿದ್ದಾರೆ. ತನ್ನ ಬಹುನಿರೀಕ್ಷಿತ ಮಾದರಿ ಸಿಟಿ ಮಾರಾಟ ಈಗ ಜೋರಾಗಿದೆ. ಹೀಗಾಗಿ ಜಪಾನ್‌ನ ಹೋಂಡಾ ಕೂಡಾ ಈಗ ಭಾರತದ ರಸ್ತೆಯಲ್ಲಿ ಒಂದಷ್ಟು ಭರವಸೆಯ ಬೆಳಕನ್ನು ಕಾಣುತ್ತಿದೆ.

ಗುಣಮಟ್ಟ ಉತ್ತಮ; ಡೀಸೆಲ್‌ನತ್ತ ಹೊರಳಿದ ಗ್ರಾಹಕ
ಭಾರತದಲ್ಲಿ ಮಾರಾಟವಾಗುತ್ತಿರುವ ಕಾರುಗಳ ಮಾರಾಟ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿದೆ. 2013ರಲ್ಲಿ ಪೆಟ್ರೋಲ್‌ ಕಾರುಗಳ ಗುಣಮಟ್ಟ 115ಪಿಪಿ100 ಇದ್ದದ್ದು, 2014ರಲ್ಲಿ 100ಪಿಪಿ100ಕ್ಕೆ ಬಂದಿದೆ. ಈ ಲೆಕ್ಕವನ್ನು ಅರ್ಥ ಮಾಡಿಕೊಳ್ಳುವ ಬಗೆ ಎಂದರೆ, ನೂರು ಕಾರುಗಳಿಗೆ ಬರುವ ತೊಂದರೆಗಳು (ಪ್ರಾಬ್ಲಂ ಪರ್‌ 100) ಎಂದರ್ಥ.

ಅದರಂತೆಯೇ ಡೀಸೆಲ್‌ ಕಾರುಗಳ ಗುಣಮಟ್ಟದಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿರುವುದರಿಂದ ಡೀಸಲ್‌ ಕಾರುಗಳ ಮಾರಾಟ ತುಸು ಚುರುಕಾಗಿದೆ. 2010ರಲ್ಲಿ 148ಪಿಪಿ100 ಇದ್ದ ಗುಣಮಟ್ಟ, 2014ರಲ್ಲಿ 96ಪಿಪಿ100ಕ್ಕೆ ಬಂದಿರುವುದು ಗಮನಾರ್ಹ ಬೆಳವಣಿಗೆ ಎಂದು ವಾಹನ ಪಂಡಿತರು ಅಂದಾಜು ಮಾಡುತ್ತಾರೆ. ಹೀಗಾಗಿ ಡೀಸೆಲ್‌ ಕಾರುಗಳ ಮಾರಾಟದಲ್ಲಿ ಶೇ 16ರಷ್ಟು ಹೆಚ್ಚಾಗಿದೆ.

ಮಹಾನಗರಗಳಲ್ಲಿ ಹೆಚ್ಚಾದ ಇಂಧನ ಸೋರಿಕೆ
ಐಐಟಿ ದೆಹಲಿ ನಡೆಸಿದ ಸಮೀಕ್ಷೆಯ ಪ್ರಕಾರ ಮಹಾನಗರಗಳಲ್ಲಿ ವಾಹನಗಳು ಓಡುವುದಕ್ಕಿಂತ ತೆವಳುವುದೇ ಹೆಚ್ಚು ಎಂದಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರು ಮಾಲೀಕರು ತಮ್ಮ ಬಹುತೇಕ ಅಮೂಲ್ಯ ಸಮಯವನ್ನು ಕಾರಿನಲ್ಲೇ ಕಳೆಯುತ್ತಾರಂತೆ.

ಈ ಸಮೀಕ್ಷೆಯ ಅಂಕಿಅಂಶದಂತೆ ಶೇ 24ರಷ್ಟು ಕಾರುಗಳು ಪ್ರತಿ ಗಂಟೆಗೆ 4ಕಿ.ಮೀ. ವೇಗದಲ್ಲಿ ಚಲಿಸುತ್ತವಂತೆ. ಇದರಿಂದಾಗಿ ಮೋಟಾರು ವಾಹನದ ಉದ್ದೇಶ ಈಡೇರುತ್ತಿಲ್ಲ. ಜತೆಗೆ ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಈ ಸಮೀಕ್ಷೆ ಹೇಳಿದೆ. ಒಂದೊಮ್ಮೆ ಇದೇ ವೇಗದಲ್ಲಿ ಹತ್ತು ಲಕ್ಷ ವಾಹನಗಳು ಚಲಿಸಿದಲ್ಲಿ ಪ್ರತಿ ದಿನ 2.5ಲಕ್ಷ ಲೀಟರ್‌ ಇಂಧನ ಟ್ರಾಫಿಕ್‌ನಲ್ಲೇ ಸೋರಿಹೋಗುತ್ತದೆ ಎಂದು ಹೇಳಿದೆ.

ನಮ್ಮ ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ದ್ವಿಚಕ್ರ ಹಾಗೂ ಕಾರುಗಳ ಸರಾಸರಿ ವಯಸ್ಸು 4.4 ಹಾಗೂ 4.7. ಶೇ 68ರಷ್ಟು ವಾಹನಗಳು ಐದು ವರ್ಷಕ್ಕಿಂತ ಕಡಿಮೆ ಅವಧಿಯವು. 15 ವರ್ಷ ಮೇಲ್ಪಟ್ಟ ವಾಹನಗಳ ಸಂಖ್ಯೆ ಕೇವಲ ಶೇ 2. ಪೆಟ್ರೋಲ್‌ ಚಾಲಿತ ವಾಹನಗಳ ಸರಾಸರಿ ವಯಸ್ಸು 10 ವರ್ಷ. ಹೀಗಾಗಿ ಇನ್ನೇನು ಕೆಲವೇ ವರ್ಷಗಳಲ್ಲಿ 15 ವರ್ಷ ದಾಟಿದ ಪೆಟ್ರೋಲ್‌ ವಾಹನಗಳ ಸಂಖ್ಯೆ ಹೆಚ್ಚಲಿದೆ ಎಂಬುದು ಈ ಸಮೀಕ್ಷೆಯ ಲೆಕ್ಕಾಚಾರ. ವಾಹನದ ವಯಸ್ಸು ಹೆಚ್ಚಾದಂತೆ ಇಂಧನ ಬಳಕೆಯೂ ಹೆಚ್ಚಾಗುತ್ತದೆ ಎಂಬುದು ಲೆಕ್ಕಾಚಾರ.

ಒಟ್ಟಾರೆಯಾಗಿ 2014ರ ಕೊನೆಯಲ್ಲಿ ಕಾರುಗಳ ಮಾರಾಟ ಆರಂಭದಲ್ಲಿ ಕುಗ್ಗಿ, ಕೊನೆಯಲ್ಲಿ ಹಿಗ್ಗುತ್ತಾ ಸಾಗಿದೆ. ಇದಕ್ಕೆ ಕಾರು ತಯಾರಿಕಾ ಕಂಪೆನಿಗಳು ನೀಡುತ್ತಿರುವ ವರ್ಷದ ಕೊನೆಯ ಬೋನಸ್‌, ಹೊಸ ಮಾದರಿಗಳು ಹಾಗೂ ಇಂಧನ ಬೆಲೆಯಲ್ಲಿನ ಕಡಿತವೂ ಕಾರಣ. ಆದರೆ ಬರಲಿರುವ ವರ್ಷದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳಿಂದ ಕಾರು ಮಾರಾಟ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ತಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT