ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ಜಗತ್ತಿನವರ ಮತ ನಿರ್ಲಕ್ಷ್ಯ

Last Updated 27 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: “ನಾನು ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊನ್ನೆ ಮೊನ್ನೆ ಐಟಿ ಕಂಪೆನಿಯ ಮುಖ್ಯಸ್ಥರನ್ನೆಲ್ಲಾ ಕರೆಸಿ, ಮತ ಹಾಕುವ ಮಹತ್ವದ ಕುರಿತು ಸಭೆ ನಡೆಸಿದ್ದರು. ಅವರೆಲ್ಲಾ ಇ-ಮೇಲ್ ಮೂಲಕ `ತಪ್ಪದೇ ಮತ ಹಾಕಿ' ಎಂದು ಸಾರಿದರು.


ನಮ್ಮಲ್ಲಿ ಕೆಲಸ ಮಾಡುವ ಅನೇಕರು ಹೊರಗಿನಿಂದ ಬಂದವರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿದೆಯೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳುವ ಮನಸ್ಥಿತಿಯೂ ಅವರದ್ದಲ್ಲ. ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಕೇಳಿದರೆ, `ಅದು ಮುಖ್ಯ ಅಲ್ಲವೇ ಅಲ್ಲ' ಎಂಬ ನಿರ್ಲಕ್ಷ್ಯದ ಪ್ರತಿಕ್ರಿಯೆ ಬರುತ್ತದೆ. ಕೆಲಸ, ಹಣ, ಐಷಾರಾಮದ ಬೆನ್ನಿಗೆ ಬಿದ್ದಿರುವ ಅಂಥವರಲ್ಲಿ ಯಾರು ಗೆದ್ದು ಬಂದರೂ ಅಂಥ ವ್ಯತ್ಯಾಸವೇನೂ ಇಲ್ಲವೆಂಬ ಭಾವವಿದೆ”- ಜಯನಗರದ ಪ್ರಕಾಶ್ ಆಡುವ ಈ ಮಾತು ಮಾಹಿತಿ ತಂತ್ರಜ್ಞಾನ (ಐ.ಟಿ.) ಜಗತ್ತಿನಲ್ಲಿ ಕಳೆದು ಹೋಗಿರುವ ಅನೇಕ ಮನಸ್ಥಿತಿಗಳ ಬಿಂಬವೂ ಹೌದು.

ಚುನಾವಣೆಯಲ್ಲಿ ನಗರ ನಾಗರಿಕರ ಮತದಾನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಗೊತ್ತಿರುವ ಸಂಗತಿಯೇ. ಮಾಹಿತಿ ತಂತ್ರಜ್ಞಾನದ ಬದಲಾವಣೆಯ ಬೀಸುಗಾಳಿ ಎದ್ದ ಮೇಲೆ ನಗರದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಕಂದಕವೇ ದೊಡ್ಡದಿದೆ. ದೇಶದ ಒಟ್ಟಾರೆ ಐಟಿ ಉದ್ಯೋಗಿಗಳಲ್ಲಿ ಶೇ 35ರಷ್ಟು ಬೆಂಗಳೂರಿನಲ್ಲಿಯೇ ಇದ್ದಾರೆ. ಜೀವನಶೈಲಿ, ಮನೆ ಬಾಡಿಗೆ ಬೆಲೆ ಏರಿಕೆ ಮೊದಲಾದ ಬೆಳವಣಿಗೆಗೆ ಕಾರಣವಾಗಿರುವ ಈ ಕ್ಷೇತ್ರದವರಿಗೆ ಮತದಾನದ ಕುರಿತು ನಿರ್ಲಕ್ಷ್ಯವಿದೆ.

ಈ ಸಮಸ್ಯೆಗೆ ರಚನಾತ್ಮಕ ಪರಿಹಾರ ಕಂಡುಕೊಳ್ಳುವ ಉಮೇದಿನಿಂದ ಇದೇ ಫೆಬ್ರುವರಿಯಲ್ಲಿ `ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ' (ಬಿ-ಪ್ಯಾಕ್) ಹುಟ್ಟಿತು. ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಇದರ ಅಧ್ಯಕ್ಷೆ. ಇನ್ಫೋಸಿಸ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿದ್ದ ಟಿ.ವಿ. ಮೋಹನ್‌ದಾಸ್ ಪೈ ಉಪಾಧ್ಯಕ್ಷರು.

ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ ಮತಹಾಕುವ ಪ್ರಜ್ಞೆ ಬೆಳೆಸುವುದರ ಜೊತೆಗೆ ರಾಜಕೀಯ ಕ್ಷೇತ್ರಕ್ಕೂ ಐ.ಟಿ. ಕ್ಷೇತ್ರಕ್ಕೂ ಅರ್ಥಪೂರ್ಣ ಕೊಂಡಿ ಬೆಸೆಯುವುದು ಬಿ.ಪ್ಯಾಕ್‌ನ ಉದ್ದೇಶ. ದೂರದೃಷ್ಟಿ ಇಟ್ಟುಕೊಂಡು ಇಂಥ ಸಂಘಟನೆ ಕಟ್ಟಿದರೂ ಈ ವರ್ಷ ಇದು ಐ.ಟಿ. ಮತದಾರದದ ಮೇಲೆ ಅಂಥ ಗಮನಾರ್ಹ ಪರಿಣಾಮವನ್ನೇನೂ ಬೀರಿದಂತಿಲ್ಲ.

ವಿಪರ್ಯಾಸವೆಂದರೆ ಸಾಫ್ಟ್‌ವೇರಿಗರಲ್ಲಿ ಕೆಲವರು ಏನಿದು ಬಿ.ಪ್ಯಾಕ್ ಎಂದು ಕೇಳುತ್ತಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಬಿ-ಪ್ಯಾಕ್ ಜಾಗೃತಿ ಜಾಥಾ ಕೂಡ ಇವರ ಅರಿವಿಗೆ ಬಂದಂತೆ ಕಾಣುತ್ತಿಲ್ಲ.

`ಮತದಾರರ ಪಟ್ಟಿಯಲ್ಲಿ ನೋಂದಣಿ ಪ್ರಕ್ರಿಯೆ ಹಾಗೂ ಮತದಾನದ ಮಹತ್ವದ ಬಗ್ಗೆ ಕಂಪೆನಿಯಿಂದಲೇ ಮೇಲ್ ಬಂತು. ಆದರೆ ಬಿ-ಪ್ಯಾಕ್ ಬಗ್ಗೆ ನಮ್ಮಲ್ಲಿ ಯಾರೂ ಮಾತನಾಡಿಕೊಂಡಿದ್ದನ್ನು ಕೇಳಿಲ್ಲ. ನನ್ನದು ಹತ್ತು ಜನರನ್ನೊಳಗೊಂಡ ತಂಡ. ನಾನೊಬ್ಬಳೇ ಕನ್ನಡತಿ. ಉಳಿದವರೆಲ್ಲ ಬೇರೆ ರಾಜ್ಯದವರು. ಹಾಗಾಗಿ ಅವರು ಯಾರ ಬಳಿಯೂ ಇಲ್ಲಿಯ ವೋಟರ್ ಐಡಿ ಇಲ್ಲ' ಎನ್ನುತ್ತಾರೆ ಆ್ಯಕ್‌ಸೆಂಚರ್‌ನಲ್ಲಿ ಟೀಂ ಲೀಡರ್ ಆಗಿರುವ ಪ್ರಿಯದರ್ಶಿನಿ.

ಇನ್ನು ವೋಟರ್ ಐಡಿ ಇದ್ದವರದ್ದು ಇನ್ನೊಂದು ಕಥೆ. ಇವರಲ್ಲಿ ಕೆಲವರಿಗೆ ಮತದಾನದ ಬಗ್ಗೆ ಆಸಕ್ತಿ ಇಲ್ಲ. ಆದರೂ ವೋಟರ್ ಐಡಿ ಮುಖ್ಯವಾಗುತ್ತದೆ. ಟಿಸಿಎಸ್ ಉದ್ಯೋಗಿ ಹೇಮಂತ್ ಹೇಳುವ ಪ್ರಕಾರ, ಎಷ್ಟೋ ಸಂದರ್ಭದಲ್ಲಿ ಇದು `ವಿಳಾಸ ಪುರಾವೆ'ಯಾಗಿ ಬಳಕೆಯಾಗುತ್ತದೆ. “ಆಧಾರ್ ಕಾರ್ಡ್ ಮಾಡಿಸುವಾಗ `ವಿಳಾಸ ಪುರಾವೆ'ಗೆ ನಾನು ವೋಟರ್ ಐಡಿ ಕಾರ್ಡ್ ಬಳಸಿದೆ” ಎಂದು ಅವರು ತಮ್ಮದೇ ಉದಾಹರಣೆಯನ್ನು ಕೊಡುತ್ತಾರೆ.

ತಮಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ವಿವಿಧ ವೇದಿಕೆಗಳಲ್ಲಿ ಹಕ್ಕೊತ್ತಾಯ ಮಂಡಿಸುವ ಐಟಿ ಮಂದಿಗೆ ಮತದಾನದ ವಿಷಯದಲ್ಲಿ ಯಾಕಿಷ್ಟು ಉದಾಸೀನವೋ?

ವರ್ಚಸ್ವಿ ನಾಯಕರ ಕೊರತೆ
`ಕೆಲವೊಮ್ಮೆ ಅಭ್ಯರ್ಥಿಗಳ ಹಿನ್ನೆಲೆಯೇ ನಮಗೆ ಗೊತ್ತಿರುವುದಿಲ್ಲ. ಹಿಂದೆಲ್ಲಾ ಎಂತೆಂಥಾ ಘಟಾನುಘಟಿ ಪ್ರಭಾವಿ ನಾಯಕರು ಇಲ್ಲಿಂದ ಆಯ್ಕೆಯಾಗಿದ್ದರು ಗೊತ್ತಾ' ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಗಾಂಧಿ ಬಜಾರಿನಲ್ಲಿ ಸ್ಟೇಷನರಿ ಅಂಗಡಿ ನಡೆಸುತ್ತಿರುವ ಮಂಜುನಾಥ್.

ಈಗಿನ ಪರಿಷ್ಕೃತ ಪಟ್ಟಿಯ ಪ್ರಕಾರ ಬೆಂಗಳೂರು ನಗರದಲ್ಲಿ 64.42 ಲಕ್ಷ ಮತದಾರರು ಇದ್ದಾರೆ. ಆದರೆ ಇವರಲ್ಲಿ ಎಷ್ಟು ಮಂದಿ ಮತ ಹಾಕಿಯಾರು?

2008ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಅದಕ್ಕೂ ಮುಂಚಿನ ಐದು ಚುನಾವಣೆಗಳಿಗಿಂತಲೂ ಈ ಕುಸಿತದ ಪ್ರಮಾಣ ತೀವ್ರವಾದುದು.

ಅನುಕೂಲದ ಪ್ರಶ್ನೆ

`ಚುನಾವಣೆಯಲ್ಲಿ ಯಾರೇ ಗೆಲ್ಲಲಿ ಅಥವಾ ಸೋಲಲಿ, ವೋಟ್ ಹಾಕಿದರೆಷ್ಟು, ಬಿಟ್ಟರೆಷ್ಟು. ನಮ್ಮ ಅನುಕೂಲಕ್ಕೇನು ಧಕ್ಕೆ ಇಲ್ಲ. ಚುನಾವಣೆ ಪ್ರಕ್ರಿಯೆ ನಮ್ಮ ನಿತ್ಯದ ಬದುಕಿನ ಮೇಲೆ ಯಾವ ಪರಿಣಾಮವನ್ನೂ ಬೀರದು' ಎನ್ನುವ ತಿರಸ್ಕಾರ ಜನರಲ್ಲಿ ಇದೆ. ಇನ್ನು ಹೊರಗಿನಿಂದ ಬಂದವರಲ್ಲಿ ಎಷ್ಟು ಮಂದಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ಪ್ರಶ್ನೆ. ಯಾಕೆಂದರೆ ಇವರಿಗೆ ಸ್ಥಳೀಯ ರಾಜಕೀಯ ಅರ್ಥವಾಗದೇ ಇಂಥದ್ದೊಂದು `ವಿಮುಖ' ಧೋರಣೆ ಇದ್ದರೂ ಇರಬಹುದು. ಈ ನಿಟ್ಟಿನಲ್ಲಿ ಸರಿಯಾದ ಅಧ್ಯಯನ ನಡೆಯಬೇಕಿದೆ.
- ಪ್ರೊ. ಚಂದನ್ ಗೌಡ ಅಜೀಂ  ಪ್ರೇಂಜಿ ವಿಶ್ವವಿದ್ಯಾಲಯ



ವರ್ಚಸ್ವಿ ನಾಯಕರ ಕೊರತೆ

`ಕೆಲವೊಮ್ಮೆ ಅಭ್ಯರ್ಥಿಗಳ ಹಿನ್ನೆಲೆಯೇ ನಮಗೆ ಗೊತ್ತಿರುವುದಿಲ್ಲ. ಹಿಂದೆಲ್ಲಾ ಎಂತೆಂಥಾ ಘಟಾನುಘಟಿ ಪ್ರಭಾವಿ ನಾಯಕರು ಇಲ್ಲಿಂದ ಆಯ್ಕೆಯಾಗಿದ್ದರು ಗೊತ್ತಾ' ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಗಾಂಧಿ ಬಜಾರಿನಲ್ಲಿ ಸ್ಟೇಷನರಿ ಅಂಗಡಿ ನಡೆಸುತ್ತಿರುವ ಮಂಜುನಾಥ್.

ಈಗಿನ ಪರಿಷ್ಕೃತ ಪಟ್ಟಿಯ ಪ್ರಕಾರ ಬೆಂಗಳೂರು ನಗರದಲ್ಲಿ 64.42 ಲಕ್ಷ ಮತದಾರರು ಇದ್ದಾರೆ. ಆದರೆ ಇವರಲ್ಲಿ ಎಷ್ಟು ಮಂದಿ ಮತ ಹಾಕಿಯಾರು?

2008ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಅದಕ್ಕೂ ಮುಂಚಿನ ಐದು ಚುನಾವಣೆಗಳಿಗಿಂತಲೂ ಈ ಕುಸಿತದ ಪ್ರಮಾಣ ತೀವ್ರವಾದುದು.

ಸುಶಿಕ್ಷಿತರ ಬೌದ್ಧಿಕ ಸಿನಿಕತನ
`ಇವ್ರೆಲ್ಲಾ ಯಾರು ಅಂತ ವೋಟ್ ಹಾಕ್ಬೇಕು, ಯಾರೇ ಗೆದ್ದರೂ ನಾವ್ ಮಾಡೋ ಕೆಲ್ಸ ತಪ್ಪುತ್ತಾ'
ಸಿಲಿಕಾನ್ ಸಿಟಿಯ ಸುಶಿಕ್ಷಿತ ಮಧ್ಯಮ ವರ್ಗದವರ ಮುಂದೆ ಇಂಥ ಹಲವಾರು ಪ್ರಶ್ನೆಗಳಿವೆ. ಪ್ರಜ್ಞಾವಂತರ ಬಡಾವಣೆಗಳು ಎಂದು ಕರೆಸಿಕೊಳ್ಳುವ ಬಸವನಗುಡಿ, ಜಯನಗರ, ಬಿಟಿಎಂ ಮತ್ತಿತರ ಪ್ರದೇಶಗಳಲ್ಲಿ ಬಹುತೇಕ ಮತದಾರರದ್ದು ನೀರಸ ಪ್ರತಿಕ್ರಿಯೆ.

`ಸುಸಜ್ಜಿತ ಬಡಾವಣೆಗಳಲ್ಲಿ ಜನಪ್ರತಿನಿಧಿಗಳು ಮಾಡಬೇಕಾಗಿರುವುದು ಏನೂ ಇಲ್ಲ. ಒಂದೊಂದು ಕಾಮಗಾರಿಗೆ ಕೋಟಿಗಟ್ಟಲೆ ಹಣ ಮಂಜೂರಾಗುತ್ತದೆ. ಇದರಲ್ಲಿ ಶೇ 40ರಷ್ಟು ಸ್ಥಳೀಯ ಕಾರ್ಪೊರೇಟರ್ ಹಾಗೂ ಶಾಸಕರ ಪಾಲಾಗುತ್ತದೆ. ಕೆಲಸ ಮಾಡಬೇಕಲ್ಲ ಎಂದು ತೋರಿಸುವುದಕ್ಕೆ ಸರಿ ಇದ್ದ ರಸ್ತೆಯನ್ನೇ ಕಿತ್ತು ರಿಪೇರಿ ಮಾಡುತ್ತಾರೆ. ಇವ್ರ ಏನ್ ಮಾಡ್ತಾರೆ ಅಂತ ಗೆಲ್ಲಿಸಿ ಕಳಿಸಬೇಕು'- ಇದು ಬಸವನಗುಡಿಯ ಶೇಖರ್ ಕೇಳುವ ಪ್ರಶ್ನೆ.

ರಾಜಕಾರಣಿಗಳ ಭ್ರಷ್ಟತೆ ಕೂಡ ಮಧ್ಯಮ ವರ್ಗದಲ್ಲಿ ನಿರಾಸೆ ಮೂಡಿಸಿದೆ. `ಕೋಟಿಗಟ್ಟಲೆ ಖರ್ಚು ಮಾಡೋರು ಮಾತ್ರ ಗೆಲ್ಲೋದು ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಪ್ರಜ್ಞಾವಂತರೊಬ್ಬರು ಸ್ಪರ್ಧಿಸಿದರೆ ಅವರು ಗೆಲ್ಲುವುದೇ ಅನುಮಾನ. ಹೀಗಿರುವಾಗ ಒಳ್ಳೆಯವರಿಗೆ ಮತ ಹಾಕಿದರೂ ಏನು ಪ್ರಯೋಜನ 'ಎಂದು ಪ್ರಶ್ನಿಸುತ್ತಾರೆ ಸಂಚಯ ಪ್ರಹ್ಲಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT