ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಶ್ವರ್ಯಾಗೆ ಪರಭಾಷಾ ರತ್ನಗಂಬಳಿ

ಪಂಚರಂಗಿ
Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಕನ್ನಡ ಚಿತ್ರರಂಗದಲ್ಲಿ ಇಲ್ಲಿನ ನಾಯಕಿಯರಿಗೆ ಅವಕಾಶಗಳು ಸಿಗುವುದಿಲ್ಲ. ಪರಭಾಷಾ ನಾಯಕಿಯರಿಗೇ ಮಣೆ ಹಾಕುತ್ತಾರೆ’– ಇದು ಲಾಗಾಯ್ತಿನಿಂದಲೂ ಚಿತ್ರರಂಗ ನೆಲದ ಪ್ರತಿಭೆಗಳನ್ನು ನಡೆಸಿಕೊಳ್ಳುತ್ತಿರುವುದರ ಬಗ್ಗೆ ಇರುವ ಆರೋಪ. ಆ ಆರೋಪಕ್ಕೆ ದನಿಗೂಡಿಸುತ್ತಾರೆ ನಟಿ ಐಶ್ವರ್ಯಾ ನಾಗ್‌. ಪ್ರತಿಭೆ ಸಾಬೀತುಪಡಿಸಿದರೂ ಅದಕ್ಕೆ ಮನ್ನಣೆ ಸಿಗುತ್ತಿಲ್ಲ ಎಂಬ ಬೇಸರ ಅವರನ್ನು ನೆರೆರಾಜ್ಯದಿಂದ ಹರಿದುಬರುತ್ತಿರುವ ಅವಕಾಶಗಳತ್ತ ಹೊರಳಿಸಿದೆ.

‘ಜಾಲಿಡೇಸ್‌’ ಚಿತ್ರದ ಮೂಲಕ ಗುರ್ತಿಸಿಕೊಂಡ ಐಶ್ವರ್ಯಾ ನಾಗ್‌, ಓದಿನ ಕಾರಣಕ್ಕೆ ಕೆಲ ಕಾಲ ಚಿತ್ರರಂಗದಿಂದ ದೂರವಿದ್ದವರು. ಮತ್ತೆ ಬಣ್ಣದ ಲೋಕಕ್ಕೆ ಹಿಂದಿರುಗಿದ ಬಳಿಕ ದಿನಕ್ಕೆ ಎರಡು ಪಾಳಿಗಳಲ್ಲಿ ಕೆಲಸ ಮಾಡುವಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡರು. ನಿರಂತರ ಶೂಟಿಂಗ್‌ನಲ್ಲಿ ಮುಳುಗಿರುತ್ತಿದ್ದ ಐಶ್ವರ್ಯಾ ಈಗ ಸಿನಿಮಾ ಆಯ್ಕೆ ವಿಚಾರದಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಸಿನಿಮಾಗಳಲ್ಲಿ ನಿರೀಕ್ಷಿಸಿದ ಯಶಸ್ಸು ಎಟುಕದಿರುವುದು ಅವರು ಅಳೆದೂ ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಕಾರಣ.

ಕಮರ್ಷಿಯಲ್‌ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ಐಶ್ವರ್ಯಾರ ಪ್ರತಿಭೆಗೆ ಸವಾಲೊಡ್ಡಿದ್ದು ಟಿ.ಎಸ್‌. ನಾಗಾಭರಣ ನಿರ್ದೇಶನದ ‘ವಸುಂಧರ’. ಶೀರ್ಷಿಕೆಯ ಹೆಸರನ್ನೇ ಉಳ್ಳ ಮುಖ್ಯಪಾತ್ರವನ್ನು ಪೋಷಿಸುವುದು ಅವರಿಗೆ ಸುಲಭವಾಗಿರಲಿಲ್ಲ. ಆದರೆ ನಾಗಾಭರಣ ಮತ್ತು ಚಿತ್ರತಂಡದಲ್ಲಿದ್ದ ರಾಜೇಶ್‌, ಜಯಂತಿ, ಸುಧಾರಾಣಿಯಂಥ ಹಿರಿಯ ಕಲಾವಿದರ ಮಾರ್ಗದರ್ಶನ ಪಾತ್ರದೊಳಗೆ ಹೊಕ್ಕಲು ನೆರವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಅವರು. ನಾಗಾಭರಣರೇ ಒಂದು ಕಲಾಶಾಲೆ ಇದ್ದಂತೆ ಎನ್ನುವ ಅವರಿಗೆ ಚಿತ್ರೀಕರಣದ ವಾತಾವರಣ ಮನೆಯಲ್ಲಿಯೇ ಇದ್ದ ಆಹ್ಲಾದ ಅನುಭವ ನೀಡಿತ್ತಂತೆ.

ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ‘ವಸುಂಧರ’ ಚಿತ್ರದಲ್ಲಿನ ನಟನೆಗೆ ಐಶ್ವರ್ಯಾ ವಿಮರ್ಶಕರಿಂದ ಮೆಚ್ಚುಗೆ ದೊರೆತಿದೆ. ಸಿನಿಮಾ ನೋಡಿದ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದವರೂ ಐಶ್ವರ್ಯಾರಿಗೆ ಆಹ್ವಾನಗಳನ್ನು ನೀಡಿದ್ದಾರೆ. ‘ಅನೇಕ ಹಿರಿಯ ಕಲಾವಿದರು, ವಿಮರ್ಶಕರು ಪ್ರಶಂಸೆ ವ್ಯಕ್ತಪಡಿಸಿದರು. ಆದರೆ ಆ ಪ್ರತಿಭೆಯನ್ನು ನಮ್ಮ ಚಿತ್ರರಂಗ ಪರಿಗಣಿಸುವುದಿಲ್ಲ. ಇದು ನನ್ನೊಬ್ಬಳ ಅಭಿಪ್ರಾಯವಲ್ಲ. ನನ್ನಂಥ ಅನೇಕ ನಟಿಯರ ಅನುಭವ ಕೂಡ. ಕನ್ನಡದ ನಟಿಯರಲ್ಲಿಯೇ ಎಂಥ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಪ್ರತಿಭೆಯಿದ್ದರೂ ಪರಭಾಷಾ ನಟಿಯರಿಗೆ ಆದ್ಯತೆ ನೀಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು. ಸಿಕ್ಕ ಅವಕಾಶಗಳಲ್ಲಿಯೇ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ತೃಪ್ತಿ ಅವರಲ್ಲಿದೆ.

ಪಾತ್ರ ವೈವಿಧ್ಯದ ಕಾರಣಕ್ಕೆ ಒಪ್ಪಿಕೊಂಡ ಸಿನಿಮಾಗಳು ಗಳಿಕೆಯ ನಿಟ್ಟಿನಲ್ಲಿ ಕೈಹಿಡಿಯಲಿಲ್ಲ. ಹೀಗಾಗಿ ತಮ್ಮ ಆಯ್ಕೆಯ ವಿಧಾನವನ್ನು ವಿಮರ್ಶೆಗೆ ಒಡ್ಡಿಕೊಂಡಿರುವ ಐಶ್ವರ್ಯಾ ಕಥೆಯಲ್ಲಿ ಗಟ್ಟಿತನವುಳ್ಳ ಮತ್ತು ಪಾತ್ರಕ್ಕೆ ಮಹತ್ವವಿರುವ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ. ಹಳ್ಳಿ ಹುಡುಗಿ, ಮುಗ್ಧೆ, ತರಲೆ, ವೈದ್ಯೆ ಹೀಗೆ ತರಹೇವಾರಿ ಪಾತ್ರಗಳಲ್ಲಿ ನಟಿಸಿದ್ದ ಅವರಿಗೆ ಬುಲ್ಲೆಟ್‌ ಬೈಕ್‌ ಓಡಿಸುವ ಅವಕಾಶ ನೀಡಿರುವುದು ‘ಮುದ್ದು ಮನಸೇ’ ಚಿತ್ರ. ಈ ಚಿತ್ರದಲ್ಲಿ ಬೋಲ್ಡ್‌ ಯುವತಿಯ ಪಾತ್ರ ತಮ್ಮದು ಎನ್ನುವ ಅವರು, ತಮ್ಮ ವೃತ್ತಿ ಬದುಕಿಗೆ ಇದು ತಿರುವು ನೀಡಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ‘ಹಿಂದೆಯೇ ಪರಭಾಷಾ ಚಿತ್ರಗಳಿಂದ ಅವಕಾಶಗಳು ಬಂದಿದ್ದವು. ಆದರೆ ಕನ್ನಡದಲ್ಲಿ ಬಿಜಿಯಾಗಿದ್ದರಿಂದ ಒಪ್ಪಿಕೊಂಡಿರಲಿಲ್ಲ. ಈಗ ಇಲ್ಲಿ ಸಿನಿಮಾ ಆಯ್ಕೆಯಲ್ಲಿ ಚೂಸಿಯಾಗಿದ್ದೇನೆ. ನೆರೆಯ ಸಿನಿಮಾರಂಗಗಳ ದೊಡ್ಡ ಬ್ಯಾನರ್‌ಗಳಿಂದ ಉತ್ತಮ ಅವಕಾಶಗಳು ಬಂದಿವೆ’ ಎಂದು ಶೀಘ್ರದಲ್ಲಿಯೇ ನೆರೆಯ ಚಿತ್ರರಂಗದತ್ತ ಪಯಣಿಸುವ ಸೂಚನೆ ನೀಡುತ್ತಾರೆ ಐಶ್ವರ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT