ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇಸೂರಿನಡಿ ಸ್ಮಾರಕಗಳ ಮಾಹಿತಿ

ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಾಂಸ್ಕೃತಿಕ ಫಲಕಗಳ ಅಳವಡಿಕೆ
Last Updated 2 ಸೆಪ್ಟೆಂಬರ್ 2015, 19:50 IST
ಅಕ್ಷರ ಗಾತ್ರ

ಬೀದರ್: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎ.ಎಸ್.ಐ) ಧಾರವಾಡ ವೃತ್ತ ಕಚೇರಿಯು, ಬೀದರ್‌ ಕೋಟೆಯ ವಸ್ತು ಸಂಗ್ರಹಾಲಯದಲ್ಲಿ ಪರಂಪರೆ ನಗರಿಯಲ್ಲಿರುವ ಸ್ಮಾರಕಗಳ ಸಂಕ್ಷಿಪ್ತ ಮಾಹಿತಿ ಒದಗಿಸುವ ಸಾಂಸ್ಕೃತಿಕ ಫಲಕಗಳನ್ನು ಅಳವಡಿಸಲು ಮುಂದಾಗಿದೆ.

ಮೊದಲ ಹಂತವಾಗಿ ಕೋಟೆ ಆವರಣದೊಳಗೆ ಇರುವ ವಸ್ತು ಸಂಗ್ರಹಾಲಯದ ಒಳ ಭಿತ್ತಿಗೆ ಸಾಂಸ್ಕೃತಿಕ ಫಲಕಗಳನ್ನು ಅಳವಡಿಸಲು ಉದ್ದೇಶಿಸಿದೆ. ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮೊದಲು ವಸ್ತು ಸಂಗ್ರಹಾಲಯದ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಒಂದೇಸೂರಿನಡಿ ನಗರದ ಎಲ್ಲ ಸ್ಮಾರಕಗಳ ಸಂಕ್ಷಿಪ್ತ ಮಾಹಿತಿ ಒದಗಿಸಲು ಸಿದ್ಧತೆ ನಡೆಸಿದೆ. ಪ್ರವಾಸಿಗರು ಒಂದೇ ಸ್ಥಳದಲ್ಲಿ ಅಚ್ಚುಕಟ್ಟಾಗಿ ಸ್ಮಾರಕದ ಬಗೆಗೆ ಅರಿತುಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೇ ಸ್ಮಾರಕವಿರುವ ಸ್ಥಳಕ್ಕೂ ಭೇಟಿ ನೀಡಲು ಅನುಕೂಲವಾಗುತ್ತದೆ. 

ಸಾಂಸ್ಕೃತಿಕ ಫಲಕಗಳಲ್ಲಿ ಸ್ಮಾರಕಗಳ ಚಿತ್ರ ಮಾತ್ರವಲ್ಲದೇ ಸ್ಮಾರಕಗಳ ವೈಶಿಷ್ಟ್ಯ, ವಾಸ್ತುಶಿಲ್ಪ, ಗುಮ್ಮಟಗಳ ವಿಶೇಷತೆ, ಐತಿಹಾಸಿಕ ಕಟ್ಟಡದ ಕಿಟಕಿಯ ಸುತ್ತ ನಿರ್ಮಿಸಿರುವ ಸುಂದರ ಕಮಾನುಗಳು, ಜಾಲರಿಗಳ ಕುಸರಿ ಕಲೆಯ ಚಿತ್ರಗಳನ್ನು ಸಹ ಅಳವಡಿಸಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ವಸ್ತುಸಂಗ್ರಹಾಲಯದಲ್ಲಿಯೇ ಲಭ್ಯವಾಗಲಿದೆ.

ಸ್ಮಾರಕಗಳಿರುವ ಸ್ಥಳಗಳಲ್ಲೂ ಇಂತಹ ಫಲಕಗಳನ್ನು ಅಳವಡಿಸಿ, ಆಡಳಿತ ನಡೆಸಿದ ಸುಲ್ತಾನರ ಅವಧಿ, ಸ್ಮಾರಕಗಳ ನಿರ್ಮಾಣಕ್ಕೆ ಬಳಸಿದ ವಾಸ್ತುಶಿಲ್ಪ, ಸ್ಮಾರಕದ ವೈಶಿಷ್ಟ್ಯ ಇನ್ನಿತರ ಸಂಕ್ಷಿಪ್ತ ಮಾಹಿತಿ ಒದಗಿಸಲಾಗುವುದು.

ವಿದೇಶಿ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಸಾಂಸ್ಕೃತಿಕ ಫಲಕಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಸ್ಥಳೀಯರಿಗೂ ಇತಿಹಾಸದ ಮಾಹಿತಿಯನ್ನು ನೀಡುವ ದಿಸೆಯಲ್ಲಿ ಕನ್ನಡ ಹಾಗೂ ಉರ್ದು ಭಾಷೆಯಲ್ಲಿಯೂ ಫಲಕಗಳನ್ನು ಸಿದ್ಧಗೊಳಿಸಲಾಗುತ್ತಿದೆ.

‘ವಸ್ತುಸಂಗ್ರಹಾಲಯದಲ್ಲಿ ಅಳವಡಿಸಲಾಗಿರುವ ಸಾಂಸ್ಕೃತಿಕ ಫಲಕಗಳು ಫೈಬರ್‌ನಲ್ಲಿ ತಯಾರಾಗಿವೆ.  ಅವುಗಳ ಮೇಲೆ ಸ್ಮಾರಕಗಳ ಚಿತ್ರಗಳು ಹೆಚ್ಚು ಅಂದವಾಗಿ ಹಾಗೂ ಸ್ಪಷ್ಟವಾಗಿ ಕಾಣುತ್ತವೆ. ಇವು ಸಹಜವಾಗಿಯೇ ಪ್ರವಾಸಿಗರ ಗಮನ ಸೆಳೆಯಲಿವೆ’ ಎಂದು ಎ.ಎಸ್.ಐ. ಸಹಾಯಕ ಸಂರಕ್ಷಣಾಧಿಕಾರಿ  ಮೌನೇಶ್ವರ ಕುರವತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಯುಮಿನಿಯಂ ಫಲಕ: ಕೋಟೆ ಆವರಣದಲ್ಲಿರುವ ಮಹತ್ವದ ಸ್ಮಾರಕಗಳ ಎದುರು ಏಳು ವರ್ಷಗಳ ಹಿಂದೆಯೇ ಕಬ್ಬಿಣದ ಚೌಕಟ್ಟು ಹೊಂದಿರುವ ಅಲ್ಯುಮಿನಿಯಂ ಸಾಂಸ್ಕೃತಿಕ ಫಲಕಗಳನ್ನು ಅಳವಡಿಸಲಾಗಿದೆ. ನೈಸರ್ಗಿಕ ಕಾರಣಗಳಿಂದಾಗಿ ಅಲ್ಯುಮಿನಿಯಂ ಫಲಕದ ಮೇಲಿನ ಬರಹಗಳು ಈಗ ಮಾಸಿ ಹೋಗಿವೆ. ಹೀಗಾಗಿ ಆ ಜಾಗದಲ್ಲಿ ಎ.ಎಸ್‌.ಐ ಹೊಸ ಫಲಕಗಳನ್ನು ಅಳವಡಿಸಲು ನಿರ್ದೇಶನ ನೀಡಿದೆ.

‘ಅಲ್ಯುಮಿನಿಯಂನಲ್ಲಿ ತಯಾರಿಸಿದ ಮಾಹಿತಿ ಫಲಕದ ಅಂದವನ್ನು ಹೆಚ್ಚಿಸಲು ಸುಹಾಸ ಗ್ರಾಫಿಕ್ಸ್‌ ಅವರ ಸಲಹೆ ಪಡೆಯಲಾಗಿದೆ. ಒಟ್ಟು 22 ಕಡೆಗಳಲ್ಲಿ ಅಲ್ಯುಮಿನಿಯಂ ಸಾಂಸ್ಕೃತಿಕ ಫಲಕಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.  ಸೆ.4 ರಿಂದ ಅಲ್ಯುಮಿನಿಯಂ ಫಲಕ ಅಳವಡಿಸುವ ಕಾರ್ಯ ಆರಂಭವಾಗಲಿದೆ’ ಎಂದು ಕುರವತ್ತಿ ಮಾಹಿತಿ ನೀಡಿದರು. ಅಹಮದಾಬಾದ್‌ನ  ಪಾರಂಪರಿಕ ಸಾಂಸ್ಕೃತಿಕ ಫಲಕಗಳ ತಜ್ಞ ನಿತಿನ್ ವರ್ಮಾ ಫಲಕಗಳನ್ನು ತಯಾರಿಸಿ ಕೊಟ್ಟಿದ್ದಾರೆ.
*
ಸ್ಮಾರಕ ಇರುವ ಸ್ಥಳದಲ್ಲೂ ಸಹ ಸಾಂಸ್ಕೃತಿಕ ಫಲಕಗಳನ್ನು ಅಳವಡಿಸಲು ತಯಾರಿ ನಡೆಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಸುಲಭವಾಗಿ ಐತಿಹಾಸಿಕ ಮಹತ್ವ  ತಿಳಿದುಕೊಳ್ಳಲು ಸಾಧ್ಯವಾಗಲಿದೆ.
- ಮೌನೇಶ್ವರ ಕುರವತ್ತಿ
ಎಎಸ್‌ಐ ಸಹಾಯಕ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT