ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗುದಿ

ದೀಪಾವಳಿ ವಿಶೇಷಾಂಕ/ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದ ಕಥೆ
Last Updated 26 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಒಮ್ಮೆಲೇ ಮೈಮನವೆಲ್ಲ ರೂಮ್ ಎಂದು ಕಂಪಿಸಿ ಬೆವರುಸಾಲಿಯಂತೆ ಒರಟಾದ ಚರ್ಮವೆಂಬ ಚರ್ಮದ ಮೇಲೆ ನೀರು ಚುಮುಕಿಸಿದಂತೆ ಬೆವೆತುಕೊಂಡ. ಕ್ಷಣಹೊತ್ತಿನ ಹಿಂದೆ ಹಿತ್ತಲಿನ ಗೋಡೆಗೆ ಸೆಟೆದಂತೆ ಒರಗಿ ನಿಂತಿದ್ದ ಕಬ್ಬಿಣದ ನಿಚ್ಚಣಿಕೆಯಿಂದ ತನ್ನ ದೇಹವನ್ನು ಭೂಮಿಗೆ ಜಾಡಿಸಿದ್ದ. ಅಕ್ಕಪಕ್ಕಕ್ಕೆ ಯಾವ ಆಸರೆಯೂ ಇಲ್ಲದ್ದರಿಂದ ನಂದಿಗೋಲಿನಂತೆ ಅವನನ್ನು ಸೇರಿಸಿಕೊಂಡು ಜೋರಾಗಿ ಶಬ್ದಮಾಡುತ್ತಾ ಬಿದ್ದ ನಿಚ್ಚಣಿಕೆಯು ಯಾವ ಭಾವವಿಲ್ಲದೆ ಗೋಡೆಗೆ ಆನಿಸಿದಂತೆ ನೆಲದ ಮೇಲೆ ಒರಗಿತು. ಬಿದ್ದ ಬಲಕ್ಕೆ ಉಕ್ಕಿದ ದಿಢೀರ್ ಶಬ್ದ ಬೆನ್ನಿಗೆ ಬಿದ್ದ ಒದೆಯಿಂದ ಚೀರುವ ಮಗು ಚಾಕಲೇಟ್ ಕಂಡೊಡನೆ ಸುಮ್ಮನಾದಂತೆ ಕಳೆದುಹೋಯಿತು.

ಆದರೆ ಶ್ರೀನುವಿನ ಮೈಯಲ್ಲಿ ಎದ್ದ ತರಂಗಗಳು ಬಾಯಿಗೆ ಬಂದಂತಾಗಿ ಒಣಗಿದ ತಪ್ಪಲೆಯಂತೆ ಆಯಿತು ಬಾಯಿ. ಅಷ್ಟಕ್ಕೆ ಶ್ರೀನುನ ದಿಢೀರ್ ಸ್ಥಿತಿಗೆ ಚೀರಿ ಮಲಗಿದ ನಿಚ್ಚಣಿಕೆ ಒಂದೇ ಕಾರಣವಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ತಾನು ಮಾಡಿದ ಅನಾಹುತ ಅವನನ್ನು ಬೆಚ್ಚಿಬೀಳಿಸಿತ್ತು. ಅದುಕೂಡಾ ಕಿವಿಗೆ ಅಪ್ಪಳಿಸಿದ್ದು ಒಂದೇ ಸಾರಿ. ಎಲ್ಲವೂ ತಟಸ್ಥ, ನಿರ್ಜನ. ಶ್ರೀನುನ ತಟಸ್ಥ ದೇಹಮುದ್ರೆಯ ಆಂತರಿಕ ಹೊಯ್ದಾಟವನ್ನು ಹೊರತುಪಡಿಸಿ ಹಿತ್ತಲಿನಲ್ಲಿ ನಿಚ್ಚಣಿಕೆಯ ಕೆಳಭಾಗದಲ್ಲಿ ಅದ್ಯಾವುದೋ ಶಿಕಾರಿಗಾಗಿ ಪರಿತಪಿಸಿ ಕುಳಿತಿದ್ದ ಅವನದೇ ಪ್ರೀತಿಯ ಬೆಕ್ಕು ತಪ್ಪಿಸಿಕೊಳ್ಳಲಾಗದೇ ಅಪ್ಪಚಿಯಾಗಿತ್ತು.

ಅನಾಹುತದ ಸುಳಿವು ಸಿಗದ ಶ್ರೀನು ತಟಸ್ಥಗೊಂಡಿದ್ದ. ಎಲ್ಲವೂ ಒಂದೇ ಕ್ಷಣಕ್ಕೆ ರಪ್ಪನೆ ನಡೆದುಹೊಯಿತು. ಒಮ್ಮೆಲೆ ನಡೆದ ಪರಿಸ್ಥಿತಿಗೆ ತನ್ನನ್ನು ತಿರುಗಿಸಿಕೊಂಡ ಶ್ರೀನು ಜೋರಾಗಿ ನಿಚ್ಚಣಿಕೆಯನ್ನು ಎತ್ತಿ ಆಕಡೆ ಬಿಸಾಕಿ, ಬೆಕ್ಕಿನ ದೇಹಕ್ಕೆ ಕೈ ಹಾಕಬೇಕೆಂದವನು ಮತ್ತಷ್ಟು ಅದುರಿ ಹೋದ. ಬೆನ್ನಿನ ಭಾಗದ ಸಮೇತ ಹೊಟ್ಟ ಬೆರಣಿ ತಟ್ಟಿದಂತೆ ಚಕ್ಕಳೆಯಂತಾಗಿತ್ತು. ಕಣ್ಣುಗಳಿಂದ ರೆಪ್ಪೆಯ ಅಂಚಿಗೆ ಬಂದ ಹನಿ ‘ಏನಾಗಿದೆ ನೋಡುವಾ’ ಎಂಬಂತೆ ಬಂದು ನಿಂತಿತ್ತು. ಮುರಿದು ಬಿಸಾಡಿದ ಆಟಿಕೆ ಸಾಮಾನಿನಂತೆ ತಣ್ಣಗೆ ಮಲಗಿದ ಅದರ ದೇಹಕ್ಕೆ ತಮ್ಮನ್ನು ಸೋಕಿಸಿಕೊಳ್ಳಲು ಕೈಗಳು ಹೆದರಿಕೊಂಡಿದ್ದವು.

ಬಹಳ ಪ್ರೀತಿಯಿಂದ ಸಾಕಿದ್ದ, ತನ್ನನ್ನೇ ನೆಚ್ಚಿಕೊಂಡಿದ್ದ, ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಒಂಟಿತನವನ್ನು ಹೋಗಲಾಡಿಸಿ ಅದೆಂತದೋ ಪಿಚೂಪಿಚಾದ ಜಂಟಿತನವನ್ನು ನೀಡಿದ್ದ ಆ ಬೆಕ್ಕು, ಚಿಲ್ಲರೆ ಎನಿಸುವಂತ ಓಡಾಟ, ತಿಕ್ಕುವ ಆಯಾಮದಿಂದ ತನ್ನ ಇರುವನ್ನು ಅವನಿಗೆ ತೋರಿಸುತ್ತಾ ಅವನ ಒಂಟಿತನವನ್ನು ತುಸು ಪಕ್ಕಕ್ಕಿರಿಸಿತ್ತು. ಆದರೆ ಕ್ಷಣದಲ್ಲಿ ನಡೆದ ಘಟನೆಯಲ್ಲಿ ಕಲ್ಪನೆಯೆಂಬಂತೆ ಒಂದೇ ಕ್ಞೂಂ ಗುಟ್ಟುವಿಕೆಗೆ ಅದು ತನ್ನ ಹೊಟ್ಟೆಯನ್ನು ಬೆನ್ನಿಗೆ ತಾಕಿಸಿಕೊಂಡು ಅಪ್ಪಚ್ಚಿಗೊಂಡಿತ್ತು.

ದೇಹದಿಂದ ಚಿಮ್ಮಿದ ರಕ್ತ ಪಿಚೂಪಿಚಾಗಿ ಮಣ್ಣ ಮೇಲೆ ಚೆಲ್ಲಿತ್ತು. ಅವತ್ತು ಶ್ರೀನು ಯಾವುದೇ ಕೆಲಸವನ್ನು ಪೂರ್ಣಗೊಳಿಸಲಿಕ್ಕಾಗದೆ ಅಂದರೆ ತನ್ನ ಬದುಕನ್ನು ಬದುಕಿಸಲಿಕ್ಕಾಗಿ ಮಾಡುತ್ತಿದ್ದ ಲೈಟ್ ಬಾಯ್ ಕೆಲಸಕ್ಕೆ ಹೊಗಲಾಗದೆ ಅದೇ ಚಡಪಡಿಕೆಯಲ್ಲಿ ಸಮಯದೊಂದಿಗೆ ಮುರಿದು ಬಿದ್ದ ತನ್ನ ಜೊತೆಗಾರನಂತೆ ತಾನೂ ತನ್ನ ಮಬ್ಬುಗತ್ತಲಿನ ಮನೆಯೊಂದಿಗೆ ಸ್ಥಗಿತಗೊಂಡಿದ್ದ. ಅದಾಗಲೆ ಗಾಳಿಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಗಸ್ತು ತಿರುಗುತ್ತಿದ್ದ ಬಿಡಾಡಿ ನೊಣಗಳು ರಕ್ತದ ಕಲೆಗಳ ಮೇಲೆ ಮೆತ್ತಿಕೊಂಡಿದ್ದವು.

‘ಇದೇನೊ ಶ್ರೀನು, ಸಾಯಂಕಾಲವಾದರೂ ಯೂನಿಟ್‌ಕಡೆ ಬರಲೇ ಇಲ್ಲ. ಯಾಕೋ ಮಂಕಾದಂತೆ ಇದೀಯಾ, ಹುಷಾರ್ ಇಲ್ವಾ?’ ಎಂದು ಕೇಳುತ್ತಾ ಜಗುಲಿಯ ಕಡೆಗೆ ಹೆಜ್ಜೆ ಹಾಕಿದ ಮಾಂತ. ಮಾಂತನಾದ್ರೂ ಶ್ರೀನುವಿನೊಂದಿಗೆ ಸಿನಿಮಾದ ಶೂಟಿಂಗ್‌ನಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾ ಆರಕ್ಕೇರದ ಮೂರಕ್ಕಿಳಿಯದ ಆಸಾಮಿಯಾಗಿದ್ದ. ‘ಮಾಂತಾ ಅಲ್ನೋಡೊ’ ಎಂದು ಪಕ್ಕಕ್ಕೆ ಕೈಬೆರಳನ್ನು ನಿರ್ದೇಶಿಸಿದ. ‘ಪ್ಚೆ.. ಪ್ಚೆ.. ಏನಾಯಿತೋ. ಅಲೇ ಇದೇನೋ ಕರೆಕ್ಟಾಗಿ ಸೆಂಟರ್‌ಗೆ ಲಾಕ್ ಆಗಿದೆ. ಏನೋ ಮಾರಾಯಾ, ನೀನೇನಾದ್ರೂ ಭಕ್ತಕುಂಬಾರದಲ್ಲಿ ರಾಜಣ್ಣನವರು ತುಳಿದಂತೆ ಕಚಕಾ ಪಚಕಾ ಅಂತಾ ತುಳಿದುಬಿಟ್ಟೆಯೋ’ ಎಂದು ಉಸುರುತ್ತಾ ಅಲ್ಲೇ ಇದ್ದ ಜಂಗುಹಿಡಿದ ಕಬ್ಬಿಣದ ಚೇರನ್ನು ಕಿರ್ ಎಂದು ಎಳೆದು ಕುಕ್ಕರಿಸಿದ.

ಮಾಂತನಿಂದ ಬಂದ ಮಾತಿಗೆ ತುಂಬಾನೇ ಇರಿಸು ಮುರಿಸಾದ ಶ್ರೀನು ಅದೇನೋ ಬಯ್ಯಬೇಕೆಂದು ಮಾಂತನನ್ನು ಮತ್ತೊಮ್ಮೆ ನೋಡಿದ. ಗೋಡೆಯ ದಾರಕ್ಕೆ ತೂಗಿಬಿಟ್ಟಿದ್ದ ಚಾದರಿನ ವಿನ್ಯಾಸವನ್ನು ನೋಡುತ್ತಿದ್ದ ಮಾಂತ ಮತ್ತೆ ಹಿಂದಿನದು ಅದೇನೋ ಕ್ಷುಲ್ಲಕ ವಿಚಾರವೆಂಬಂತೆ ಚಾದರಿನ ಬಗ್ಗೆ ಪ್ರಶ್ನಿಸಿದ. ಅದೇನೋ ಒಂದು ಸಣ್ಣ ಉತ್ತರವನ್ನು ಉದುರಿಸಿ ಶ್ರೀನು ಮೌನಿಯಾದ. ಸತ್ತದ್ದು ಬೆಕ್ಕು, ಒಂದು ಚಿಲ್ಲರೆ ಪ್ರಾಣಿ. ಆದರೆ ಅದು ಒಂದು ಜೊತೆಗಾರನಾಗಲ್ಲವಾ, ಇಷ್ಟು ದಿನ ಅದು ನನ್ನೊಂದಿಗಿಲ್ಲವಾ? ಅದು ಇವನಿಗೆ ಗೊತ್ತಿಲ್ಲವಾ? ಒಂದು ಸಣ್ಣ ಒತ್ತರಿಸಿದ ಭಾವವನ್ನು ಸೂಚಿಸದಷ್ಟು ಕ್ಷುಲ್ಲಕವಾದುದಾ?

ಅದೇನೂ ಅಲ್ಲವೆಂಬಂತೆ ನೋಡುತ್ತಿರುವ ಇವನಿಗೆ ಭಾವನೆಗಳೇ ಇಲ್ಲವಾ? ಅದ್ಯಾಕೆ, ಈ ಜನ ಮನುಷ್ಯನ ಸಾವಿಗೆ ತೋರಿಸುವ ಅರ್ಧದಷ್ಟು ಸಂತಾಪವನ್ನು ಪ್ರಾಣಿಗಳ ವಿಷಯದಲ್ಲಿ ತೋರಿಸುವದಿಲ್ಲ. ಅಥವಾ ಭಾವನೆಗಳು ದೇಹದ, ಜಾತಿಯ, ಪ್ರಭೇದದ, ವರ್ಗಗಳ, ಕಾಲಮಿತಿಗಳ ಅಂಕೆಯಲ್ಲಿ ಬಿಚ್ಚಿಕೊಳ್ಳುತ್ತವಾ... ಇಲ್ಲಾ.. ಹಾಗೆ ಭಾವನೆಗಳನ್ನು ತೋರ್ಪಡಿಸಿಕೊಳ್ಳುವುದು ಬಾಲಿಶವಾದುದಾ? ಉತ್ತರ ತಿಳಿಯದಾದ ಶ್ರೀನು ನ್ಯೂಟನ್ನನ ಮೊದಲನೆಯ ನಿಯಮದಂತೆ ವಸ್ತುವಿನ ಮೇಲೆ ಬಲಪ್ರಯೋಗಿಸಿದಾಗ್ಯೂ ಅದು ಕ್ಷಣ ಹೊತ್ತು ತನ್ನ ಮೊದಲಿನ ಸ್ಥಿತಿಯಲ್ಲಿ ಮುಂದುವರೆಯುತ್ತದೆ ಎನ್ನುವಂತೆ ಮಾಂತ ಮತ್ತೆ ಮಾತನಾಡಿಸಿದರೂ ತನ್ನ ಯಥಾ ಮೌನಸ್ಥಿತಿಯಲ್ಲಿ ಮುಂದುವರೆದ ಶ್ರೀನು.

ಪರಿಸ್ಥಿತಿಯನ್ನು ಕೊಂಚ ಅರ್ಥಮಾಡಿಕೊಂಡ ಮಾಂತನು ಸ್ವಲ್ಪಹೊತ್ತು ಒತ್ತಾಯ ಪೂರ್ವಕವಾಗಿ ತನ್ನನ್ನು ಸುಮ್ಮನೆ ಕುಕ್ಕರಿಸಿಕೊಂಡ. ‘ಅದ್ಯಾಗೋ ಸತ್ತಿತು?’– ಮೌನಕ್ಕೆ ಮಾಂತ ಅಡ್ಡಗಾಲು ಹಾಕಿದ. ‘ನಾನಾಗೆ ಮಾಡಲಿಲ್ಲ ಕಣೋ. ಅದು ಕೆಳಗೆ ಕೂತುಕೊಂಡಿದ್ದು ಕೂಡಾ ನನಗೆ ತಿಳಿಯಲಿಲ್ಲ. ನಿಚ್ಚಣಿಕೆ ಜಾರಿ ಅದರ ಸಮೇತಾನೆ ಬಿದ್ದೆ ಅಷ್ಟೆ... ಎಲ್ಲಾ ಅಯೋಮಯ, ಅದೇನೋ ನಡೆದುಹೋಯಿತು. ನಿನಗೂ ಗ್ವತ್ತಲ್ವಾ, ಈ ಮನೇಲಿ ನನ್ನ ಜೊತೆ ಇಷ್ಟು ದಿನ ಇದ್ದದ್ದು ಅದೊಂದೇ ಅಂತಾ. ಅದೇನೋ ಅಂತಾ ಗೊತ್ತಿಲ್ಲಾ ಮಾಂತಾ, ನನಗೆ ಅದನ್ನ ಕಳೆದುಕೊಂಡೆ ಅನ್ನೋದಕ್ಕಿಂತ ಅದನ್ನು ಕಳೆದುಕೊಳ್ಳೊಕೆ ನಾನೇ ಕಾರಣ ಆದೆ ಅಂತಾ ಬಾಳಾನೇ ಅನಿಸ್ತಾಯಿದೆ, ಏನೂ ಮಾಡೋಕು ಕೈಕಾಲೇ ಆಡ್ತಾಯಿಲ್ಲ ಮಾಂತಾ’ ಅಂತಾ ಹಾಳೆಯಲ್ಲಿ ಬರೆದುಕೊಂಡು ಹೇಳಿದಂತೆ ಅದೆತ್ತಲೋ ಕಣ್ಣಾಯಿಸಿಕೊಂಡು ಉಸುರಿದ.

ಇದೇನಪ್ಪಾ ಗ್ರಹಚಾರವೆಂಬಂತೆ ಎಲ್ಲವನ್ನು ಆಲಿಸಿದ್ದಕ್ಕಾಗಿ ಏನಾದರೊಂದನ್ನು ಹೇಳಬೇಕೆಂದುಕೊಂಡ ಮಾಂತ. ಆದರೆ ತಲೆಗೆ ಏನೂ ಹೊಳೆಯದೆ ಮತ್ತೆ ಒಣಹಾಕಿದ ಚಾದರಿನ ವಿನ್ಯಾಸವನ್ನು ಬೇಕುಬೇಡವೋ ಎಂಬಂತೆ ನೋಡತೊಡಗಿದ. ‘ಅದನ್ನಾ ನಾನೇ ಕೊಂದೆ ಅಂತಾ ತುಂಬಾನೇ ಅನಿಸ್ತಾಯಿದೆ ಮಾಂತಾ. ಅದೇನ ಪಾಪ ಮಾಡಿತ್ತೊ ಏನೋ..’. ‘ಹ್ಞೂಂ.. ಪಾಪ ಅದು ಮಾಡಿಲ್ಲ ಕಣೋ, ಮಾಡಿರುವದು ನೀನು, ಪಾಪಿ’ ಎಂದು ನೀರುಕಂಡ ಕೆಂಡ ಇದ್ದಿಲಾಗೋಕೆ ಹಿಸ್ ಎಂದು ಶಬ್ದ ಹೊರಡಿಸಿದಂತೆ ಮಾಂತನಿಂದ ತೀಕ್ಷ್ಣವಾದ ಪ್ರತಿಕ್ರಿಯೆ ತೂರಿಬಂತು. ಮೊದಲೇ ಪಾಪಪ್ರಜ್ಞೆಯಿಂದ ಪೆಚ್ಚಾಗಿದ್ದ ಶ್ರೀನ ಗೋಡೆಯ ಒಳಗೆ ತುರಿಸಿಕೊಳ್ಳುತ್ತಿರುವ ಮೊಳೆಯಂತೆ ಮತ್ತಷ್ಟು ಕುಗ್ಗಿಹೋದ.

‘ಬೆಕ್ಕು ಕೊಲ್ಲೋದು ಮಾಹಾಪಾಪ. ಬಂಗಾರದ ಬೆಕ್ಕನ್ನ ಮಾಡಿಸಿಟ್ರು ಪಾಪ ತೊಳೆಯುವುದಿಲ್ಲಾ ಅಂತೆ ಕಣೋ, ನೀನೋ ಅದನ್ನಾ ಹಪ್ಪಳ ತಟ್ಟಿದಂಗೆ ತಟ್ಟಿದಿಯಾ, ಅದೆನೋಪಾ ನನಗೆ ತಿಳಿದಂಗೆ ಅನಿಸಿದ್ದನ್ನಾ ಹೇಳಿದೀನಿ. ಮುಂದಿಂದೂ ನಿನಗೆ ಬಿಟ್ಟಿದ್ದು. ಯಾವುದಕ್ಕೂ ಒಂದು ಪರಿಹಾರ ಅಂತಾ ಮಾಡಿಸಿಬಿಡು. ನಿನಗೆ ಬೇರೆ ಮನಸು ಸರಿ ಇಲ್ಲ. ಎದ್ದು ಸ್ವಲ್ಪ ಹೊರಗಡೆ ಸುತ್ತಾಡಿ ಬಾ. ನನಗೂ ಸ್ವಲ್ಪ ಕೆಲಸ ಇದೆ’ ಎಂದು ತನಗೆ ತಿಳಿದಿದ್ದನ್ನು ಒಪ್ಪಿಸಿ ತನ್ನ ಹವಾಯಿ ಚಪ್ಪಲಿಯಿಂದ ಲಟಪಟವೆಂದು ಶಬ್ದ ಮಾಡುತ್ತಾ ತನ್ನ ಇತರ ಕೆಲಸಕ್ಕೆ ಮನೆಯಿಂದ ಕಾಲ್ಕಿತ್ತ.

ಮೊದಲೇ ಬೆಳಕಿಲ್ಲದೆ ಬಡಕಲಾಗಿದ್ದ ಮನೆಯಲ್ಲಿ ಸಮಯ ಸ್ಥಾನ ಪಲ್ಲಟದಿಂದಾಗಿ ಭಾಸ್ಕರನ ಕಿರಣಗಳು ಕೊನೆ ಉಸಿರೆಳೆಯುತ್ತಿದ್ದವು. ಅದಾಗಲೇ ಪಿಚುಪಿಚಾಗಿ ಹರಡಿದ್ದ ರಕ್ತದ ಕಲೆಗಳು ಹಕ್ಕಳೆಯಂತಾಗಿ ನೊಣಗಳ ಸಂಖ್ಯೆ ಕ್ಷೀಣಗೊಂಡಿತ್ತು. ಸುತ್ತಲೆಲ್ಲ ಹಾರಾಡುತ್ತಿದ್ದ ನೊಣಗಳಿಗೆ ತಮ್ಮ ಜೀವಂತಿಕೆಯನ್ನು ತೋರಿಸಲೆಂಬಂತೆ ಆಗಾಗ ಬೆಕ್ಕಿನ ಮೀಸೆಗಳು ಕಿಟಕಿಯ ಸರಳುಗಳ ಮೂಲಕ ತೂರಿಬರುತ್ತಿದ್ದ ಗಾಳಿಗೆ ತಲೆಯಾಡಿಸುತ್ತಿದ್ದವು. ಖಾಲಿಯಾದ ಜಗುಲಿ ಬಾಗಿಲ ಪಡಕುಗಳ ಶಬ್ದದೊಂದಿಗೆ ಎರಡು ಸದಸ್ಯರುಗಳ ಮನೆಯು ಅದರ ಸಂಖ್ಯೆಯನ್ನು ಅದಾಗಲೇ ಒಂದಕ್ಕೆ ಇಳಿಸಿಕೊಂಡು ಸಂಪೂರ್ಣ ಕತ್ತಲೆಯಾಯಿತು.
***
‘ನಿನ್ನೆ ಅದ್ಯಾಗೋ ಗೊತ್ತಾಗದೆ ನಾನೇ ಪ್ರೀತಿಯಿಂದ ಸಾಕಿದ್ದ ಬೆಕ್ಕನ್ನು ಕೊಂದುಬಿಟ್ಟೆ, ನಾನೇ ಅದನ್ನು ಕೊಂದು ಬಿಟ್ಟೆನಲ್ಲ ಅಂತ ಅನ್ನಿಸ್ತಾಯಿದೆ ಪಂಡಿತರೇ. ಯಾಕೋ ಮನಸ್ಸಿಗೆ ಸಮಾಧಾನವೇ ಆಗ್ತಾಯಿಲ್ಲಾ. ನೀವೇ ಒಂದು ಪರಿಹಾರ ಹೇಳಬೇಕು, ಅಲ್ಲದೆ ಬೆಕ್ಕನ್ನ ಕೊಲ್ಲೋದು ಮಾಹಾಪಾಪ ಅಂತೆ? ನನಗೆ ಏನೂ ತೋಚತಾಯಿಲ್ಲಾ ಪಂಡಿತರೆ’. ಬಂಡೆಗೆ ಅಂಟಿಸಿದ್ದ ದೊಡ್ಡ ಸ್ಟಿಕ್ಕರ್ ರಂಗೋಲಿಯ ಮೇಲೆ ತನ್ನ ತೂಕವನ್ನು ಹೇರಿಸಿಕೊಂಡು ತೋರುಬೆರಳಿನಿಂದ ಕೈ ಆಡಿಸುತ್ತಾ ಲ್ಯಾಪ್‌ಟಾಪ್‌ ಪರದೆಯನ್ನು ದೃಷ್ಟಿಸುತ್ತಿದ್ದ ಪಂಡಿತರಲ್ಲಿ ತನ್ನ ಅಸಮತೋಲನವನ್ನು ತೋಡಿಕೊಂಡ ಶ್ರೀನು.

ಯಾವುದೇ ಸನ್ನೆ ಇಲ್ಲದೇ ಲ್ಯಾಪ್‌ಟಾಪ್ ಅನ್ನು ಸುಟ್ಟು ಬೂದಿಮಾಡುವಂತೆ ಅದನ್ನೇ ಕೆಕ್ಕರಿಸುತ್ತಿದ್ದ ಪಂಡಿತರು ಸ್ವಲ್ಪ ತಡೆದು ಅವನ ಹೆಸರು, ಹುಟ್ಟಿದ ದಿನಾಂಕ, ಹಸ್ತರೇಖೆ ತಿಳಿದುಕೊಂಡು ಮುಖ್ಯವಾದ ಪ್ರಶ್ನೆಗೆ ಪೀಠಿಕೆ ಹಾಕಿದರು. ‘ಹೌದು, ಆ ನಿಚ್ಚಣಿಕೆ ಇಟ್ಟಿದ್ದ ಗೋಡೆ ಯಾವ ದಿಕ್ಕಿಗಿದೆ?’. ‘ನನಗೆ ಅಷ್ಟೊಂದು ತಿಳಿಯುವುದಿಲ್ಲಾ ಪಂಡಿತರೆ, ನನಗನ್ನಿಸುತ್ತೆ ಅದು ಪಶ್ಚಿಮದಿಕ್ಕು ಅಂತಾ’. ‘ಪಶ್ಚಿಮಾನಾ..? ಗೋಡೆಗೆ ಹತ್ತಸಿ ಏನನ್ನಾದರು ಕಟ್ಟಿಸಿದಿರಾ?’. ‘ಹಾಂ.. ಪಂಡಿತರೆ. ಆ ಗೋಡೇನ ಒಂದು ಮೈ ಮಾಡಕೊಂಡು ಟಾಯ್ಲೆಟ್‌ನ ಕಟ್ಟಿಸಿದೆ, ಪಕ್ಕಕ್ಕೆ ತುಳಸಿಗಿಡದ ಕುಂಡಲ ಇತ್ತು. ಅದು ಬಾಡಿ ಹೋದುದಕ್ಕೆ ಮತ್ತೆ ಅದನ್ನು ಹಾಗೆ ಖಾಲಿ ಬಿಟ್ಟಿದ್ದೀವಿ’. ಜೋತಿಷ್ಯವ್ಯಾಪ್ತಿಗೆ ಬರಬಹುದೆಂದುಕೊಂಡು ತನಗೆ ತಿಳಿದಿದ್ದನ್ನು ಐದನೇ ತರಗತಿಯ ಮಗು ಪಾಠ ಒಪ್ಪಿಸಿದಂತೆ ಪಠಿಸಿದ.

ಲ್ಯಾಪ್‌ಟಾಪ್‌ ಗೋಣನ್ನು ಮುರಿದು ಮಲಗಿಸಿದ ಪಂಡಿತರು ಕೆಲಹೊತ್ತು ಕಾರ್ಯಕ್ರಮ ಪ್ರಾರಂಭಕ್ಕೆ ಪ್ರಾರ್ಥನೆ ಗೀತೆ ಎಂಬಂತೆ ಅದು ಇದು ಹೇಳಿ ದೋಷ ಪರಿಹಾರದ ವಿಷಯವನ್ನು ಉದ್ಘಾಟಿಸಿದರು. ಪಂಡಿತರ ಮಾತಿನ ಸಮಾರೋಪದ ಕೊನೆಗೆ ಶ್ರೀನು ತಲೆಗೆ ಎರಡು ವಿಷಯಗಳು ಸ್ಪಷ್ಟವಾಗಿ ಕುಟ್ಟಿದವು. ಒಂದು ಮನೆಯ ಆ ಗೋಡೆಗೆ ಆನಿಸಿ ಕಟ್ಟಿಸಿದ ಟಾಯ್ಲೆಟ್‌  ಮತ್ತು ಮುಖ್ಯವಾಗಿ ಬೆಕ್ಕಿನ ಪ್ರಾಣಹಾನಿಯ ದೋಷ ಪರಿಹಾರಕ್ಕಾಗಿ ಎರಡು ತೊಲೆಯ ಚಿನ್ನದ ಬೆಕ್ಕಿನ ಮೂರ್ತಿಮಾಡಿಸಿ ಆಯ್ದ ಬ್ರಾಹ್ಮಣನಿಗೋ ಅಥವಾ ಹತ್ತಿರದ ಪುಣ್ಯ ಕ್ಷೇತ್ರಕ್ಕೊ ದಾನ ಮಾಡುವುದು. ಎರಡು ಭಾರವಾದ ಪರಿಹಾರಗಳನ್ನು ತನ್ನ ತಲೆಯಲ್ಲಿ ಹೇರಿಸಿಕೊಂಡು ಪಂಡಿತರ ದಕ್ಷಿಣೆಯನ್ನು ಇಟ್ಟು ಹೊರಗಡೆ ಬಂದ ಶ್ರೀನುಗೆ ಮನೆಮುಂದುಗಡೆಯ ವಿದ್ಯುತ್ ಬಲ್ಬ್‌ ಅದಾಗಲೇ ಕತ್ತಲೆಯನ್ನು ಒದ್ದೋಡಿಸಿದೆ ಎಂಬ ನಂಬಿಕೆ ಮೂಡಲೇ ಇಲ್ಲ. ಬಸವಳಿದ ಹೆಜ್ಜೆಗಳೊಂದಿಗೆ ಸಪ್ಪಳವಿಲ್ಲದ ಪ್ಯಾರಾಗಾನ್ ಚಪ್ಪಲಿಯೊಂದಿಗೆ ಬಲ್ಬ್‌್ ಆಳ್ವಿಕೆ ಇಲ್ಲದ ಕತ್ತಲ ಮಡುವಿನಲ್ಲಿ ಅಸ್ಪಷ್ಟನಾದ.

ಇದ್ದರೂ ಇರಬಹುದಾ, ನನ್ನ ಪ್ರಯತ್ನವು ಕೂಡಾ ಸ್ವಲ್ಪವೇನಲ್ಲ. ಕರೆದ ಕಡೆಯಲ್ಲೆಲ್ಲಾ ಓಡೋಡಿ ಹೋಗುತ್ತೇನೆ, ಅದೆಷ್ಟು ತಾಸುಗಳವರೆಗೆ ಶೂಟಿಂಗ್ ನಡೆದರೂ ಹೆಗಲುಗಳು ಸೋತಿಲ್ಲ. ಆದರೂ ಆರಕ್ಕೇರದಿದ್ದರೂ ಪರವಾಗಿಲ್ಲ, ದಿನೇ ದಿನೇ ಮೂರಕ್ಕೆ ಇಳಿಯುತ್ತಲೇ ಇದೆಯಲ್ಲ. ನಿಜವಾಗಿಯೂ ಆ ದಿಕ್ಕಿನಲ್ಲಿ ಆತುಕೊಂಡ ಟಾಯ್ಲೆಟ್ ನನ್ನ ಅದೃಷ್ಟವನ್ನು, ದುಡಿಮೆಯನ್ನು, ಶ್ರಮವನ್ನು ಕಿತ್ತುಕೊಳ್ತಾಯಿದೆಯಾ? ಹ್ಞೂಂ.. ಕಿತ್ತುಕೊಳ್ಳೋಕಾದ್ರು ಏನಿದೆ? ಶಾವಿಗೆ ಬೇಡೊಕೆ ಹೋದ ಪೂಜಾರಿಯ ಎದುರಿಗೆ ಹಗ್ಗ ತಿನ್ನುತ್ತಾ ನಿಂತ ಹನುಮಂತನ ಜಾತಿ ನಂದು, ಎಲ್ಲಾ ನನ್ನ ವಿಧಿ... ಹಾಗಾದರೆ ಅದೊಂದು ಟಾಯ್ಲೆಟ್‌ ಆದಿಕ್ಕಿನಿಂದ ಹೊಡೆದುರುಳಿಸಿ ಬೇರೆಕಡೆ ಕಟ್ಟಿಸಿದರೆ ನನ್ನ ಕಾಡಾಟವನ್ನು ಒದ್ದೋಡಿಸಬಹುದಾ?–

ಯೋಚಿಸುತ್ತಾ ನಿಂತವನಿಗೆ ಬಾಗಿದ ಬೆನ್ನಿಗೆ ಮತ್ತೊಂದು ಗುದ್ದು ಎಂಬಂತೆ ಎರಡು ತೊಲೆಯ ಬಂಗಾರದ ಬೆಕ್ಕಿನ ಮೂರ್ತಿ ಒಂದು ಚಿರು ಚಿರಿ ತಟಸ್ಥಗೊಂಡಂತಾಗಿ ಶ್ರೀನುನ ತಲೆಯನ್ನು ಮತ್ತಷ್ಟು ಅದುಮಿ ಹಿಡಿಯಿತು. ಅದೇಗೋ ಶೂಟಿಂಗ್ ಸ್ಪಾಟ್‌ನವರೆಗೆ ತನ್ನ ದೇಹವನ್ನು ಹೊತ್ತು ತಂದು ಲೈಟಿಂಗ್‌ ಕೆಲಸಕ್ಕೆ ಅಣಿಗೊಳಿಸಿದ್ದ ಶ್ರೀನು. ಮುಂದೆ ತಾನೆ ಚೆಲ್ಲಿದ ಬೆಳಕಿನಲ್ಲಿ ನಟಿಸುತ್ತಿದ್ದ ಆಕೃತಿಗಳು, ಅವುಗಳ ದೇಹದ ಮೇಲಿನ ಬೆಳಕು, ಯಾವುದು ಕೂಡಾ ಶ್ರೀನುವಿನ ತಲೆಯಲ್ಲಿ ಓಡುತ್ತಿದ್ದ ಜೋಡು ಕುದುರೆಯ ಓಟಕ್ಕೆ ಲಗಾಮು ಹಾಕಲೇ ಇಲ್ಲ. ಅದುಹೇಗೋ ಕಾಡೊದೇವರ ಕಾಟ ಕಳಂದಂಗೆ ತನ್ನ ಹೆಗಲಿಗೆ ಆತುಕೊಂಡಿದ್ದ ದುಂಡನೆಯ ಬೆಳಕು ಉಗುಳುವ ಬಾಯಿಗೆ ಬೀಗಹಾಕಿ ಮನೆಯನ್ನು ಸೇರಿದ ಶ್ರೀನುಗೆ ಅದ್ಯಾಕೋ ಮುರಿದು ಬಿದ್ದು ಮಾಂಸವಾಗಿದ್ದ ಜೊತೆಗಾರ ಅಸ್ಪಷ್ಟವಾಗತೊಡಗಿದ್ದ, ಖಾಲಿಗೊಳ್ಳುತ್ತಿದ್ದ.

ಆ ನಿವೇಶನಕ್ಕೆ ಅದಾಗಲೆ ಎರಡು ತೊಲೆ ಅವಡುಗಚ್ಚಿ ಕುಳಿತಿತ್ತು. ಬೇಸರದಿಂದ ಎದ್ದು ಪಕ್ಕಕ್ಕಿದ್ದ ಖಾಲಿ ಜಗುಲಿಯ ಕಡೆಗೆ ಬಂದವನಿಗೆ ಕಾಣಿಸಿದ ಟಾಯ್ಲೆಟ್ ಯಾಕೋ ತುಸು ಕಿರಿಕಿರಿಯಾದಂತೆನಿಸಿತು. ಮತ್ತೆ ಅಲ್ಲಿ ನಿಲ್ಲದಂತೆನಿಸಿ ತನ್ನ ತಲೆಯಲ್ಲಿ ಹರಿದಾಡುತ್ತಿದ್ದ ಆಲೋಚನೆಗಳನ್ನು ಕೊಲ್ಲಲೋಸುಗ ಅಡುಗೆ ಮನೆಯ ಕುರುಹುವೆಂಬಂತಿದ್ದ ಸೀಮೆಯಣ್ಣೆ ಸ್ಟವ್‌ಅನ್ನು ಪಂಪು ಮಾಡಿದ. ಅದರ ಮೇಲೆ ಅಕ್ಕಿ, ನೀರು ತುಂಬಿಸಿಕೊಂಡ ತಪ್ಪಲೆ ತನ್ನ ತಿಕವನ್ನು ಅಗ್ನಿಗೆ ಆಹುತಿ ಮಾಡಿ ಕೊತಕೊತ ಶಬ್ದ ಮಾಡತೊಡಗಿತು. ಅದನ್ನೇ ದಿಟ್ಟಿಸಿ ನೋಡುತ್ತಾ ಕುಳಿತಿದ್ದ ಶ್ರೀನುಗೆ ಎರಡು ತೊಲೆಯ ಬೆಕ್ಕು ತಪ್ಪಲೆಯ ಬದಿಗೆ ನಿಂತು ಮತ್ತೊಮ್ಮೆ ಚೀರಿದಂತಾಯಿತು. ಅದ್ಯಾವಾಗಲೋ ಅಸ್ತಂಗತವಾಗಿದ್ದ ಆತನ ಪ್ರೀತಿಯ ಬೆಕ್ಕಿನ ಸ್ಥಾನವನ್ನು ಆಕ್ರಮಿಸಿದ್ದ ಈ ಎರಡು ತೊಲೆ ಅವನನ್ನು ಸಂಪೂರ್ಣ ಆವರಿಸಿತು.

ನನ್ನಿಂದ ಅದು ಸಾಧ್ಯಾನಾ, ಇವತ್ತಿನ ತುತ್ತಿಗೆ ಇವತ್ತು ಕಾರಿದ ಬೆಳಕು ಸಮ, ನಾಳೆಗೆ ಮತ್ತದೆ ಬೆಳಕಿನ ಬುಡದಲ್ಲಿ ಕತ್ತಲಾಗಿ ನಿಲ್ಲಬೇಕು, ಎರಡು ತೊಲೆಯ ಬಂಗಾರದ ಮೂರ್ತಿಕೆಯ ಸ್ಪಷ್ಟ ಆಕೃತಿಯನ್ನು ಮೂಡಿಸಿಕೊಳ್ಳೋಕು ನಾನು ಅಶಕ್ತ. ಅಂತಹದರಲ್ಲಿ ಇದೆಲ್ಲಾ ಹೇಗೆ ಸಾಧ್ಯ. ಧುಮ್ಮಿಕ್ಕುತಿದ್ದ ನಲ್ಲಿಯ ಟ್ಯಾಪ್‌ಬಂದು ಮಾಡಿದಂತಾಗಿ ಮಸ್ತಿಷ್ಕ ಒಂದು ಜರ್ಕು ಪಡೆದಂತಾಯಿತು. ತಪ್ಪಲೆಯಲ್ಲಿ ನೀರಿನೊಂದಿಗೆ ಕಾಳಗಕ್ಕೆ ಇಳಿದಿದ್ದ ಅಕ್ಕಿ ಅದಾಗಲೇ ಅನ್ನವಾಗಿ ರೂಪಾಂತರಗೊಂಡಿತ್ತು. ಎಚ್ಚೆತ್ತುಕೊಂಡ ಶ್ರೀನು ಸ್ಟವ್ ಜ್ವಾಲೆಯನ್ನು ಆರಿಸಲು ಅದರ ಪಕ್ಕಕ್ಕಿದ್ದ ಪ್ರಶರ್‌ವಾಲ್‌ಅನ್ನು ಸಡಿಲಗೊಳಿಸಿ ಒಳಗೆ ತುಂಬಿದ್ದ ಗಾಳಿಯನ್ನು ಖಾಲಿಮಾಡಿ ಸ್ಟವ್ ತಣ್ಣಗಾಗಿಸಿದ. ಯಾಕೋ ಆ ಸ್ಥಳ ಬೇಡವೆಂತೆನಿಸಿ ತಟ್ಟೆಯನ್ನು ಮುಟ್ಟದೇ ಮಂಚದ ಮೇಲೆ ಬಂದು ಬೋರಲಾಗಿ ಬಿದ್ದುಕೊಂಡ. ಮತ್ತದೇ ಎರಡು ತೊಲೆಯ ಕೂಗು ಟಾಯ್ಲೆಟ್ ಪಕ್ಕದಿಂದ ತೂರಿಬಂದಂತಾಗಿ ಬೋರಲು ಬಿದ್ದ ದೇಹ ಅಂಗಾತವಾಗಿ ತಿರುಗದೆ ಪಳಿಯುಳಿಕೆಯಂತಿದ್ದ ಅಭೋಧ ಫ್ಯಾನಿನ ಕಡೆ ಮುಖಮಾಡಿತು. ಬಂದಾಗಿದ್ದ ಟ್ಯಾಪ್‌ನಿಂದ ನೀರು ಮತ್ತೆ ಸಣ್ಣಗೆ ತೊಟಗುಟ್ಟತೊಡಗಿತು.

ದಿನಗಳು ಒಂದೊಂದಾಗಿ ಸಾಯುತ್ತಿದ್ದಂತೆ ಶ್ರೀನುವಿನ ತಲೆಯಲ್ಲಿನ ಸಾರೋಟದ ಜೋಡುಕುದುರೆಗಳು ಮತ್ತಷ್ಟು ಪಳಗಿ ಬಲಿಷ್ಟಗೊಳ್ಳತೊಡಗಿದವು, ದೈಹಿಕವಾಗಿ ಇದ್ದ ಶ್ರೀನು ಮಾನಸಿಕವಾಗಿ ಅಶಕ್ತನಾಗಹತ್ತಿದನು. ಅದಾಗಲೆ ನಕಾರಾತ್ಮಕ ದೃಷ್ಟಿಕೋನ ಶ್ರೀನು ತಲೆಯಲ್ಲಿ ತನ್ನ ಊಳಿಗಮಾನ್ಯ ದಾಸ್ಯ ಹೆಚ್ಚಾಗಿಬಿಟ್ಟಿತು. ಅವನು ದಿನೇದಿನೇ ಅದರ ತೆಕ್ಕೆಗೆ ಸಿಕ್ಕು ತನ್ನ ಪ್ರಜ್ಞೆಯನ್ನು ಕಳೆದುಕೊಳ್ಳತೊಡಗಿದ. ಇಂತವಕ್ಕೆಲ್ಲಾ ಪುಷ್ಟಿ ನೀಡಲೆಂಬಂತೆ ಘಟಿಸಿದ ಘಟನೆ ಅವನನ್ನು ಮತ್ತಷ್ಟು ಖಿನ್ನನನ್ನಾಗಿಸಿತು. ಶೂಟಿಂಗ್ ಯೂನಿಟ್‌ನಲ್ಲಿ ಅವತ್ತು ಮಾತ್ರ ಮಾಮೂಲಿನಂತೆ ಶೂಟಿಂಗ್‌ ತಯಾರಿ ನಡೆಯದೆ ಶೂಟಿಂಗ್ ಸ್ಪಾಟ್‌ನಲ್ಲಿದ್ದವರೆಲ್ಲಾ ಅದೇನೋ ತಲೆಯ ಮೇಲೆ ಬಿದ್ದವರಂತೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಅಲ್ಲಲ್ಲಿ ಗುಂಪಾಗಿ ನಿಂತಿದ್ದರು. ಸ್ಥಳಕ್ಕೆ ಬಂದ ಶ್ರೀನುಗೆ ಪ್ರಸ್ತುತ ವಸ್ತುಸ್ಥಿತಿ ತಿಳಿಯದೆ ಅಲ್ಲೇ ಯೂನಿಟ್‌ನಲ್ಲಿ ಮೂಲೆಗೆ ನಿಲ್ಲಿಸಿದ್ದ ಕ್ಯಾಮೆರಾದ ಹತ್ತಿರ ನಿಂತಿದ್ದ ಮಾಂತನ ಹತ್ತಿರ ಬಂದು ಏನೆಂದು ವಿಚಾರಿಸಿದ.

ವಿಷಯ ತಿಳಿದ ಶ್ರೀನು ಅದು ತನ್ನ ವ್ಯಾಪ್ತಿಗೆ ಬರದ ವಿಷಯವಾಗಿದ್ದರೂ ಏನೂ ತೋಚದವನಂತೆ ಮನಸ್ಸಿನಲ್ಲಿಯೇ ನಿರ್ಮಾಪಕರನ್ನು ಹಿಗ್ಗಾಮುಗ್ಗಾ ಬೈದುಕೊಳ್ಳುತ್ತಾ ಕೆನೆಯತೊಡಗಿದ. ಆದದ್ದಿಷ್ಟು. ಪಕ್ಕದ ಭಾಷೆಯ ಹಿಟ್ ಸಿನಿಮಾವನ್ನು ಕನ್ನಡಕ್ಕೆ ಭಟ್ಟಿ ಇಳಿಸುವದಕ್ಕಾಗಿ ಹೊಸ ತಂಡವೊಂದನ್ನು ಕಟ್ಟಿಕೊಂಡ ಹೊಸ ನಿರ್ದೇಶಕರು ಸುಮಾರು ಇಪ್ಪತ್ತು ದಿನಗಳಿಂದ ಕಂಠೀರವ ಸ್ಟೂಡಿಯೋದಲ್ಲಿ ಚಿತ್ರಿಕರಣಕ್ಕೆ ಬೀಡು ಬಿಟ್ಟಿದ್ದರು. ಈ ಹೊಸ ತಂಡವನ್ನು ತೂಗಿಸಿಕೊಂಡು ಸಿನಿಮಾಕ್ಕೆ ದುಡ್ಡು ಸುರಿದಿದ್ದ ಹೊಸ ನಿರ್ಮಾಪಕರು ಕೂಡಾ ಬರಿ ಚಿತ್ರವೀಕ್ಷಣೆಯ ಮೂಲಕ ಚಿತ್ರರಂಗದ ತೆಕ್ಕೆಗೆ ಬಿದ್ದವರು. ಹಾಕಿ ಬಿಟ್ಟ ಚಪ್ಪಲಿಯಲ್ಲೇ ತಮ್ಮ ಕಾಲನ್ನು ತೂರಿಸುತ್ತಿದ್ದರು.

ತಮ್ಮ ಕ್ರಿಯಾಶೀಲತೆಯನ್ನು ತೋರಿಸುವದಕ್ಕಾಗಿ ಒಂದು ಕ್ಲಬ್ ಸಾಂಗನ್ನು ಸಿನಿಮಾದಲ್ಲಿ ಪ್ರಾರಂಭಕ್ಕೆ ಇರಲಿ ಎಂಬಂತೆ ಮೂಲಕಥೆಯಲ್ಲಿ ಸ್ವಲ್ಪ ತಿದ್ದುಪಡಿ ಮಾಡಿಕೊಂಡಿದ್ದರು ಮತ್ತು ಆ ಸಾಂಗ್‌ಗೆ ತಕ್ಕದಾಗಿ ಕುಣಿಸುವುದಕ್ಕೆ ನಿರ್ಮಾಪಕರಿಗೆ ದುಂಬಾಲು ಬಿದ್ದು ಮುಂಬಯಿಂದ ನಟಿಯನ್ನು ಕರೆಸಲಾಗಿತ್ತು. ಆ ಸಾಂಗ್‌ನಲ್ಲಿ ತನ್ನ ದೇಹಸಿರಿಯ ಪ್ರದರ್ಶನಕ್ಕೆ ಅಂತಲೇ ನಿರ್ಮಾಪಕರಿಂದ ಹೆಚ್ಚಿನ ಮೊತ್ತದ ಹಣದ ಒಪ್ಪಂದವೂ ಆಗಿತ್ತು. ಆದರೆ ಸಾಂಗ್‌ನ ಮುಕ್ಕಾಲು ಶೂಟಿಂಗ್ ಮುಗಿದರೂ ನಿರ್ಮಾಪಕ ಹಣ ಬಿಚ್ಚದಿದ್ದ ಕಾರಣಕ್ಕೆ ಅವತ್ತು ಶೂಟಿಂಗ್ ಸ್ಪಾಟ್‌ನಲ್ಲಿ ನಿರ್ಮಾಪಕರಿಗೆ ಮತ್ತು ನಟಿಗೆ ಸಣ್ಣ ಮಾರಾಮಾರಿಯಾಗಿ, ಕಪಾಳಮೋಕ್ಷ ಮಾಡಿಸಿಕೊಂಡ ನಟಿ ನಿರ್ಮಾಪಕರೊಂದಿಗಿನ ತನ್ನ ಭಾವಭಂಗಿಯ ಎರಡು ಫೋಟೊಗಳನ್ನು ಟೀವಿಯ ಕ್ಯಾಮೆರಾಗಳೆದುರಿಗೆ ಪ್ರದರ್ಶಿಸಿ, ತನಗೆ ಮೋಸಮಾಡಿದ್ದಾರೆ ಎಂದು ರಾದ್ಧಾಂತವೆಬ್ಬಿಸಿದ್ದಳು.

ಸ್ವಿಚ್ಡ್‌ಆಫ್ ಆದ ಮೊಬೈಲ್‌ನೊಂದಿಗೆ ನಿರ್ಮಾಪಕರು ನಾಟ್‌ರೀಚಬಲ್ ಆಗಿದ್ದರು. ಹೋದವಾರ ಸಂಬಳ ಬಂದಿದ್ದು ಮತ್ತೆ ಮುಂದಿನ ವಾರಕ್ಕೆ ತೆರೆದುಕೊಳ್ಳುವದಿತ್ತು. ಸುಮಾರು ಆರು ದಿನಗಳಿಂದ ಒಂದು ಕಾಸು ಇಲ್ಲದೆ ಕೆಲಸ ಮಾಡುತ್ತಿದ್ದ ದಿನಗೂಲಿಗಳಿಗೆ ಜಾಗತೀಕರಣದ ಬಿಸಿ ದೂರದ ಹಳಿಯ ರೈತನಿಗೆ ತಟ್ಟಿದಂತೆ, ಆರುತ್ತಿದ್ದ ಬಾಣಲೆಯಲ್ಲಿನ ಎಣ್ಣೆಯನ್ನು ಒಲೆಯ ಮೇಲೆ ಇಟ್ಟಂತಾಗಿತ್ತು. ದಿನದಕೂಲಿ ದಿನಕ್ಕೆ ಎಂಬಂತಿದ್ದ ಪರಿಸ್ಥಿತಿಯಲ್ಲಿ ಈ ಘಟನೆ ಶ್ರೀನುವಿನನ್ನು ಒಂದು ಗಟ್ಟಿ ನಂಬಿಕೆಗೆ ಜೋತು ಬೀಳುವಂತೆ ಮಾಡಿತು. ಪಶ್ಚಿಮದ ಗೋಡೆಗೆ ಆನಿಸಿದ್ದ ಟಾಯ್ಲೆಟ್‌ ತನ್ನ ಪ್ರಭಾವದ ತೆಕ್ಕೆಗೆ ಅವನನ್ನು ಮತ್ತಷ್ಟು ಒಳಗೆಳೆದುಕೊಂಡಂತೆನಿಸಿತು. ಸಾರೋಟದ ವೇಗ ಮತ್ತಷ್ಟು ಹೆಚ್ಚಿತು.

ಅದ್ಯಾಕೋ ಮುರಿದು ಮಾಯವಾಗಿದ್ದ ತನ್ನ ಜೊತೆಗಾರನ ಚಿತ್ರಣ ಒಮ್ಮೆಲೆ ಕಣ್ಣ ಮುಂದೆ ಬಂದು ಸಿಟ್ಟು ಒತ್ತರಿಸಿ ಬಂತು. ಮುರಿದು ಹೋದ ಅಂದಿನ ಜೊತೆಗಾರನಿಗೆ ತೋರಿಸಿದ ಅಂದಿನ ಭಾವನೆಗಳು ಇಂದು ಪೂರ್ತಿ ತದ್ವಿರುದ್ಧವಾಗಿದ್ದವು. ಮಾನಸಿಕವಾಗಿ ಕುಸಿಯುತ್ತಿದ್ದ ತನ್ನನ್ನು ಎತ್ತಲು ಯಾರೂ ಇಲ್ಲವೇ ಎಂಬಂತೆ ಸುತ್ತಲೂ ದೃಷ್ಟಿ ಹಾಯಿಸಿದ. ಚಲಿಸದ ಚುಕ್ಕೆಗಳಂತೆ ಅಲ್ಲಲ್ಲೆ ನಿಂತಿದ್ದ ಗುಂಪುಗಳು ತಮ್ಮ ತಮ್ಮ ಮಾತುಗಳಲ್ಲಿ ಪೂರುಸೊತ್ತಿಲ್ಲದವರಾಗಿದ್ದರು. ಮೂಲೆಯ ಬದಿಗೆ ನಿಲ್ಲಿಸಿದ್ದ ಬೆಳಕು ಉಗುಳದೆ ತನ್ನಷ್ಟಕ್ಕೆ ತಾನು ಎಂಬಂತೆ ನಿಂತಿದ್ದ ಲೈಟ್‌ಸ್ಟ್ಯಾಂಡ್‌ಕಡೆಗೆ ಕಣ್ಣು ಹಾಯಿಸಿದ. ಯಾಕೋ ಸತ್ತ ಅಸ್ಥಿಪಂಜರದಂತೆ ಭಾಸವಾಯಿತು. ಬೆಳಕು ಉಗುಳುವ ಬಾಯಲ್ಲಿ ಮತ್ತೆ ಎರಡು ತೊಲೆ ಮೆವ್ ಎಂದಂತಾಯಿತು.
***
ಅದಾಗಲೇ ದಕ್ಷಿಣ ದಿಕ್ಕಿನ ಟಾಯ್ಲೆಟ್‌ನ ಪ್ರಭಾವದ ತೆಕ್ಕೆಗೆ ಹೊಕ್ಕವನಂತಾಗಿದ್ದ ಶ್ರೀನನಿಗೆ ತನ್ನ ಗ್ರಹಚಾರದ ಜೊತೆ ಅದು ತಳಕು ಹಾಕಿಕೊಂಡಿದೆ ಅಂತ ಸ್ಪಷ್ಟವಾಯಿತು. ತನ್ನ ಬೆಕ್ಕಿನ ಸಾವಿಗೆ ಕಾರಣ ಆಕಸ್ಮಿಕವಾದರೂ ಆ ಎರಡು ತೊಲೆಯ ಅಮೂರ್ತ ರೂಪಕ್ಕೆ ಇದುವೇ ಕಾರಣವೆಂದು ಬರಬರುತ್ತಾ ಶ್ರೀನನಿಗೆ ಕೆಣಕ ಹತ್ತಿತು. ದುರಸ್ತಿ ಮಾಡಲಾಗದ ಟ್ಯಾಪ್ ಅದಾಗಲೇ ಕಿತ್ತುಹೋಗಿ ಭೋರ್ಗರೆಯುತ್ತಲೇ ಇತ್ತು. ಪರಿಹಾರ ಮಾಡಿಸಿದರೆ ಮಾತ್ರ ನಾನು ನಾನಾಗಿ ಉಳಿಯಲು, ಒಂದು ಒಳ್ಳೆಯ ನೆಲೆ ಕಂಡುಕೊಳ್ಳಲು ಸಾಧ್ಯವೆಂದು ಮನಸ್ಸಿನ ಹಾಳೆಯ ಮೇಲೆ ಠಸ್ಸೆ ಒತ್ತುತ್ತಲೇ ಇದ್ದ. ತನ್ನದೇ ವಿಪ್ಲವ ಮನಸ್ಥಿತಿಯಿಂದ, ಒಲ್ಲದ ಮನಸ್ಸಿನಿಂದ ಕೈ ಹಾಕುತ್ತಿದ್ದ ಸಣ್ಣ ಪುಟ್ಟ ಕೆಲಸಗಳು ಉದ್ಘಾಟನಾ ವೇಳೆಗೆ ವಂದನಾರ್ಪಣೆ ಎಂಬಂತಾಗಿದ್ದವು.

ಮರಳಿ ಲೈಟ್‌ಬಾಯ್ ಆಗಿ ಅದೇ ಕೆಲಸದಲ್ಲಿ ಮುಂದುವರೆದರೂ ಬೈಗುಳಗಳು ಹೆಚ್ಚಾಗುತ್ತಲೇ ಹೋದವು. ಹೆಗಲು ಸಮಕ್ಕೆ ನಿಂತ ಬಾಯಿಯಿಂದ ಬೆಳಕನ್ನು ಉಗುಳಿಸುತ್ತಿದ್ದರು, ಸಾರೋಟದ ಉರುಳುವಿಕೆ ವೇಗವಾದಂದತೆ ತಾನು ಮಾತ್ರ ಕತ್ತಲ ಮಡುವಿನಲ್ಲಿ ಹುದುಗುತ್ತಲೇ ಹೋದ. ಮೊದಲ ದಿನಗಳಲ್ಲಿ ನಡೆಯುತ್ತಿದ್ದ ಸಾಮಾನ್ಯ ಎಡವಟ್ಟುಗಳು ಪ್ರಸ್ತುತ ಸ್ಥಿತಿಯಲ್ಲಿ ಘಟಿಸಿದರೆ ಅದಕ್ಕೆಲ್ಲ ಸಾರೋಟದ ಕುದುರೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತಿತ್ತು. ಚೇತರಿಸಿಕೊಳ್ಳಲಾಗದ ಒದೆ ಎಂಬಂತೆ ಕ್ಞೂಂ ಗುಟ್ಟತೊಡಗಿದ. ದಕ್ಷಿಣ ದಿಕ್ಕಿನ ಗೋಡೆಗೆ ಆನಿಸಿ ನಿಂತ ಟಾಯ್ಲೆಟ್‌ ನಿಜವಾಗಿಯೂ ಅವನನ್ನು ಕಬಳಿಸುತ್ತಲೇ ಹೋಯಿತು. ಅದ್ಯಾವಾಗಲೋ ಮುರಿದುಹೋಗಿದ್ದ ತನ್ನ ಜೊತೆಗಾರನು ಶ್ರೀನುವಿನ ಮನಸ್ಸಿನಲ್ಲಿ ಬಾಲ ಅಲ್ಲಾಡಿಸಿದರೆ ಹಿಂಬದಿಯೇ ಎರಡು ತೊಲೆ ಮೆವ್ ಎಂದು ಅವನನ್ನು ತಾಳ್ಮೆಗೆಡುವಂತೆ, ಸಿಟ್ಟಿಗೇಳುವಂತೆ ಮಾಡುತ್ತಿತ್ತು. ಸ್ವಲ್ಪವೇ ದಿನಗಳಲ್ಲಿ ಶ್ರೀನು ತನ್ನ ಮನಸ್ಥಿತಿಯ ಮೇಲಿನ ಲಗಾಮು ಕಳೆದುಕೊಂಡು ಬಿಟ್ಟ.

ಬಾಗಿದವನಿಗೆ ಮತ್ತೊಂದು ಗುದ್ದು ಜಾಸ್ತಿಯಾಗಿಯೇ ಬಿತ್ತು. ಚಿಂತೆಯಲ್ಲಿ ಹಲವು ದಿನಗಳಿಂದ ಸರಿಯಾಗಿ ತಿನ್ನದೇ ನಿದ್ದೆ ಇಲ್ಲದೆ ಬಸವನ ಹುಳುವಿನಂತೆ ದಿನಗಳನ್ನು ತೆವಳಿಸುತ್ತಿದ್ದ ಶ್ರೀನು ಒಂದು ಮುಂಜಾವು ಅದೆಂದಿನಂತೆ ಶೌಚಕ್ಕೆಂದು ಅದೇ ಟಾಯ್ಲೆಟ್‌ನಲ್ಲಿ ಕುಳಿತವನಿಗೆ ಒಮ್ಮೆಲೆ ಜೀವ ಬಾಯಿಗೆ ಬಂದಂತೆನಿಸಿತು. ಮಲದ ಜೊತೆ ರಕ್ತವು ವಸರಿ ಬಂದಿತ್ತು. ಕ್ಷಣವು ತಡಮಾಡದೆ ಬೇಗನೆ ಶೌಚ ಮುಗಿಸಿ ಹೊರಗೆ ಬಂದು ಬಾಗಿಲು ಚಿಲಕ ಹಾಕಿದವನಿಗೆ ಟಾಯ್ಲೆಟ್‌ ಒಂದು ಜೀವಂತ ಭೂತ ಬಂಗಲೆಯಂತೆ ಭಾಸವಾಗತೊಡಗಿತು. ಮನಸ್ಸಿನ ಸಾರೋಟದ ಕುದುರೆ ಹೂಂಕರಿಸಿ ಜಾಡಿಸಿ ಒದ್ದಂತಾಯಿತು. ಅಲ್ಲೇ ಇದ್ದ ಜಗುಲಿಗೆ ಬಂದು ಕುಕ್ಕರಿಸಿದವನಿಗೆ ತಿಕವೆಲ್ಲ ಮುಳ್ಳಿನಂತೆ ಚುಚ್ಚಿದಂತಾಗಿ ಎದ್ದು ನಿಂತ. ದೃಷ್ಟಿ ಅಲ್ಲೇ ಪಕ್ಕದಲ್ಲಿ ಗೋಡೆಯ ತಳದಲ್ಲಿ ಆನಿಸಿ ಮಲಗಿಸಿದ್ದ ನಿಚ್ಚಣಿಕೆಯ ಕಡೆ ಹರಿಯಿತು

ನನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ತನ್ನಷ್ಟಕ್ಕೆ ತಾನೂ ಮಲಗಿದ್ದ ಅದರ ದೇಹ ಅವನನ್ನು ಮತ್ತಷ್ಟು ಕೆಣಕಿದಂತಾಯಿತು. ತುಸು ಪಕ್ಕದಲ್ಲೆ ಅದೇ ಜಾಗದಲ್ಲಿ ಹಕ್ಕಳು ಗಟ್ಟಿದ್ದ ಪಿಚುಪಿಚಾದ ರಕ್ತದ ಕಲೆಗಳ ಒಂದೆರಡೂ ಅವಶೇಷಗಳು ಉಳಿದುಕೊಂಡಿದ್ದವು. ಅಷ್ಟು ಹೊತ್ತು ಹೊಡೆದುರುಳಿಸಿದಂತೆ ಸ್ತಬ್ಧಗೊಂಡಿದ್ದ ಶ್ರೀನುನ ಬಾಯಿಯು ಒಮ್ಮೆಲೆ ಜೀವ ಬಂದಂತಾಗಿ ನಾಲಿಗೆಯು ಎರಡು ಸಾರಿ ತಡೆತಡೆದು ರಕ್ತ... ರಕ್ತ... ಎಂದು ಕಂಪಿಸಿತು. ಗಾಳಿಯಲ್ಲೆಲ್ಲ ಚೆಲಾಪಿಲ್ಲಿಯಾಗಿದ್ದ ಬಿಡಾಡಿ ನೊಣಗಳು ತೂರಿಬಂದು ಅವನ ಚಪ್ಪಲಿಗಳ ಅಂಚಿಗೆ ಒಂದೊಂದಾಗಿ ಮೆತ್ತಿಕೊಳ್ಳತೊಡಗಿದವು. ಎದುರಿಗಿದ್ದ ಮುಚ್ಚಿದ ಬಾಗಿಲಿನ ಟಾಯ್ಲೆಟ್‌ ಮತ್ತಷ್ಟು ಭೂತವಾಗತೊಡಗಿತು. ಟಾಯ್ಲೆಟ್‌ನ ಗೋಡೆಯ ಕಿಡಕಿಯ ಸರಳುಗಳಿಂದ ಎರಡು ತೊಲೆ ಇಣುಕಿ ಮೆವ್ ಎಂದಿತು. ಕುಸಿದ ಗೋಡೆಯ ವಿಕಾರವಾದ ಟಾಯ್ಲೆಟ್‌ನ ರೂಪ ಕಣ್ಣುಗಳಿಗೆ ರಾಚತೊಡಗಿತು.

ಸರಳುಗಳಿಂದ ಇಣುಕಿ ಚೀರಿದ ಎರಡು ತೊಲೆ ಒಳಸೇರಿಕೊಂಡಿತು. ಕಾಲುಗಳ ಅಡಿಯಲ್ಲಿ ಮಲಗಿದ್ದ ಎರಡು ಚಪ್ಪಲಿಗಳನ್ನು ಕೈಗೆ ತೆಗೆದುಕೊಂಡು ಜೋರಾಗಿ ಟಾಯ್ಲೆಟ್‌ನ ಕಡೆ ಬಿರುಸಿನಿಂದ ಎಸೆದ. ಸರಳುಗಳ ಹಿಂದೆ ಅವಿತಿದ್ದ ಎರಡು ತೊಲೆ ಮತ್ತೆ ಈಚೆಗೆ ಬಂದು ಮತ್ತೊಮ್ಮೆ ಮೆವ್ ಎಂದು ಚೀರಿತು. ಮುಷ್ಟಿ ಬಿಗಿಗೊಳಿಸಿ ಶರ್ಟ್‌ನ ಗುಂಡಿಗಳು ಕಿತ್ತು ಬರುವಂತೆ ಅಂಗಿಯನ್ನು ಕಿತ್ತು ಕಿಡಕಿಯ ಸರಳುಗಳೆಡೆಗೆ ಜೋರಾಗಿ ಎಸೆದ. ಎಸೆದ ಬಲಕ್ಕೆ ಸರಳುಗಳ ಅಂಟಿನ ಪದಾರ್ಥಗಳ ಮೇಲೆ ಕುಳಿತಿದ್ದ ನೊಣಗಳೆಲ್ಲಾ ಚಂಗನೆ ಎಗರಿ ಚೆಲ್ಲಾಪಿಲ್ಲಿಯಾದವು. ಟಾಯ್ಲೆಟ್‌ನ ಬಾಗಿಲು ಪಡಕುಗಳ ಸಂಧಿಯಿಂದ ಮತ್ತೆ ಎರಡು ತೊಲೆ ಮೆವ್ ಎಂದಿತು. ಅಲ್ಲೇ ಮಲಗಿಸಿದ್ದ ನಿಚ್ಚಣಿಕೆಯ ಪಕ್ಕದಲ್ಲಿ ಮಲಗಿದ್ದ ಹಾರಿಯು ಕೈಗೆ ಬಂತು.

ಇರಿದ ಇರಿದ, ಸಿಕ್ಕಸಿಕ್ಕಲೆಲ್ಲಾ ಹಾರಿ ತನ್ನ ಮೂತಿಯನ್ನು ಟಾಯ್ಲೆಟ್‌ನ ಗೋಡೆಯಲ್ಲಿ ತೂರಿಸಿತು. ಎಡೆಬಿಡದೆ ಹಾರಿಯ ಮೂತಿ ಗೊಡೆಗಳಲ್ಲಿ ನುಗ್ಗಿತು. ದಢ್ ದಢ್ ಎಂಬ ಶಬ್ದದೊಂದಿಗೆ ಇಟ್ಟಂಗಳ್ಳಿಯ ತುಂಡುಗಳು ನೆಲಕಚ್ಚಿದವು. ಕ್ಷಣದಲ್ಲಿ ಅಮೂರ್ತಗೊಂಡ ಟಾಯ್ಲೆಟ್‌ನ ಗೋಡೆಗಳು ಕಿಟಕಿಯ ಸಮೇತ ನೆಲಕಚ್ಚಿದವು. ಜೋರಾಗಿ ಎರಡು ಇಟ್ಟಂಗಳ್ಳಿ ತುಂಡುಗಳನ್ನು ನಿಚ್ಚಣಿಕೆಯ ಕಡೆಗೆ ಎಸೆದ. ಜಣ್ ಎಂದು ಶಬ್ದ ಹೊರಡಿಸಿದ ನಿಚ್ಚಣಿಕೆ ಮತ್ತೆ ಸುಮ್ಮನೆ ಮಲಗಿತು. ಒಂದು ಕ್ಷಣ ಎಲ್ಲವೂ ಮೌನ, ಸ್ತಬ್ಧ, ನಿರ್ಜೀವ. ಎದುರುಗಡೆಯ ಮನೆಯ ಹೊರಗಿನ ಟಾಯ್ಲೆಟ್‌ನ ಕಿಟಕಿ ಸರಳುಗಳಿಂದ ಎರಡು ತೊಲೆ ಮೆವ್ ಎಂದಿತು. ಇಟ್ಟಂಗಳ್ಳಿಯ ರಾಶಿಯ ಮೇಲೆ ಬಿದ್ದಿದ್ದ ಹಾರಿಯನ್ನು ಪುನಾ ಕೈಗೆತ್ತಿಕೊಂಡ ಶ್ರೀನು...     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT