ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆತನ ಸಹಜವೇನಲ್ಲ; ಅಸಹಜವೂ ಅಲ್ಲ

Last Updated 22 ಆಗಸ್ಟ್ 2014, 19:44 IST
ಅಕ್ಷರ ಗಾತ್ರ

ಸಂಘ ಜೀವಿಯಾದ ಮಾನವ ಸ್ವಭಾವದಲ್ಲಿ ವ್ಯವ­ಸ್ಥೆಗೂ, ಅರಾಜ­ಕತೆಯ ಆಕರ್ಷಣೆಗೂ ಇರುವ ಆಧಾರ ಮನುಷ್ಯನ ‘ಒಳ್ಳೆತನ’. ಅಡಿಗರ ಈ ಸಾಲನ್ನು ನೋಡೋಣ:
‘ಒಳ್ಳೆತನ ಸಹಜವೇನಲ್ಲ; ಒಳ್ಳೆತನ ಅಸಹಜವೂ ಅಲ್ಲ’
‘ಒಳ್ಳೆತನ ಸಹಜವೇನಲ್ಲ’ ಎನ್ನುವಾಗ ಮಾನವ  ಸಂಯಮದ ಜೀವನ ಕ್ರಮ­ವನ್ನು ಕಲಿತು ಕರಗತ ಮಾಡಿಕೊಳ್ಳ­ಬೇಕು.- ಅದು ಸ್ವಯಂಪ್ರೇರಿತವಲ್ಲ ಎಂದು ಅರ್ಥ­ವಾಗುತ್ತದೆ.  ಅಷ್ಟೇ ಸತ್ಯ ‘ಒಳ್ಳೆತನ ಅಸ­ಹಜವೂ ಅಲ್ಲ’; ನಮ್ಮೊಳಗೆ ಸಹಜ­ವಾಗಿ ಇಲ್ಲದ್ದನ್ನು ನಾವು ಕೃತಕವಾಗಿ ಕಲಿತು ಪಡೆಯುವ ಗುಣ ಹಿಪೋಕ್ರಸಿಯೇ ಹೊರತಾಗಿ ಪರೋಪ­ಕಾರದ ಪ್ರೇರಣೆ ಪಡೆದ ‘ಒಳ್ಳೆತನ’ ಅಲ್ಲ. ಒಳ್ಳೆತನದಷ್ಟೇ ದುರಾಸೆಯೂ ಆತ್ಮರತ­ ನಾದ ಮನುಷ್ಯನ ಗುಣಗಳಲ್ಲಿ ಒಂದು; ಆದ್ದರಿಂದ ಅವನನ್ನು ಹಿಡಿತದಲ್ಲಿ ಇಡುವ ಹದ್ದುಬಸ್ತುಗಳ ಅಗತ್ಯ­ಕ್ಕಾಗಿಯೆ ಸ್ಟೇಟ್ (State) ಎಂಬುದು ಹುಟ್ಟಿ­ಕೊಂಡಿತು ಎಂಬುದಕ್ಕೆ ಒಂದು ಗಾಢವಾದ ಬೌದ್ಧ ಕಥೆಯಿದೆ.

‘ಸೃಷ್ಟಿಯ ಆದಿಯಲ್ಲಿ ಭೂಮಿಯ ಮೇಲೆಲ್ಲ ಮಾನವನಿಗೆ ಬೇಕಾದ ಆಹಾರ ಹಾಲಿನ ಕೆನೆಯಂತೆ ಹರಡಿಕೊಂಡಿ­ರುತ್ತಿತ್ತು, ಪ್ರತಿ ಮುಂಜಾನೆ... ಪ್ರತಿ ಮನುಷ್ಯನು ಪ್ರತಿ ದಿನವು ತನಗೆ ಬೇಕಾದಷ್ಟು ಆಹಾರವನ್ನು ನೇರವಾಗಿ ಭೂಮಿಯಿಂದ ಪಡೆದುಕೊಳ್ಳುತ್ತಿದ್ದ- ಹಸಿವನ್ನು ಹಿಂಗಿಸಿಕೊಳ್ಳಲು (Give us this day our daily bread) ದೈಹಿಕ ಶ್ರಮದ ದುಡಿಮೆ ಅಗತ್ಯ ಇರದ ಕಾಲ ಅದು. ಒಮ್ಮೆ ಒಬ್ಬನಿಗೆ ಆಸೆ ಹುಟ್ಟಿತು. ಪ್ರತಿ­ದಿನ ಯಾಕೆ ನಾನು ಆಹಾರವನ್ನು ಪಡೆದುಕೊಳ್ಳುವ ಶ್ರಮ ಪಡಬೇಕು? ಎರಡು-ಮೂರು ದಿನಗಳಿಗೆ ಸಾಕಾಗು­ವಷ್ಟನ್ನು ಒಟ್ಟಿಗೆ ಸಂಗ್ರಹಿಸಬ ಹುದಲ್ಲವೆ? ಹೀಗೆ ಇವನು ಸಂಗ್ರಹಿಸಿದ್ದನ್ನು ನೋಡಿ ನೆರೆಮನೆಯವನಿಗೂ ಆಸೆಯಾಗಿ ಅವನು ಒಂದು ವಾರಕ್ಕೆ ಬೇಕಾಗುವಷ್ಟು ಸಂಗ್ರಹಿಸಿ ಇಟ್ಟು­ಕೊಂಡ. ಇದು ಹೀಗೆ ಬೆಳೆದು ಪೈಪೋಟಿಯಲ್ಲಿ ಜನ ಭೂಮಿಯ ಮೇಲಿನ ಆಹಾರದ ಕೆನೆಯನ್ನು ಸಂಗ್ರಹಿಸತೊಡಗಿದರು.

ಆಗ ಪ್ರತಿನಿತ್ಯ ಬೇಕಾದಷ್ಟು ಆಹಾರದ ದಯೆಯನ್ನು ತೋರುತ್ತಿದ್ದ ಭೂತಾಯಿ ಬರಿದಾದಳು. ಇದರಿಂದ ಭೀತರಾದ ಜನರು ಒಟ್ಟಾಗಿ ಸೇರಿ ಪರಿಹಾರ ಹುಡುಕಿದರು. “ಮಹಾ­ಸಮ್ಮತ” ಒಬ್ಬನನ್ನು ಎಲ್ಲರೂ ಸೇರಿ ಆಯ್ಕೆ ಮಾಡಿದರು. ಅವನು ಹಾಕುವ ಕಟ್ಟುನಿಟ್ಟಿನ ನಿಯಮದಲ್ಲಿ ತಾವು ಬಾಳುವುದೆಂದು ನಿರ್ಧರಿಸಿದರು. ಸರ್ವಸಮ್ಮತ ನಿಯಮಗಳ ಸ್ಟೇಟ್ (State) ಮನುಷ್ಯನಿಗೆ ಯಾಕೆ ಅಗತ್ಯವೆಂಬ ಅದ್ಬುತ ಕಥೆ ಇದು. ಈ ಕಾಲಕ್ಕೂ ಸಲ್ಲುವ ಕಥೆ ಎನ್ನಬಹುದು.

ಈ ಭೂಮಿಯೊಂದು ಅಕ್ಷಯಪಾತ್ರೆ ಎಂದು ತಿಳಿಯು­ವುದರಿಂದಲೇ ಈ ಎಲ್ಲಾ ಗೊಂದಲಗಳು ಹುಟ್ಟಿಕೊಳ್ಳುತ್ತವೆ.  (ಡೆವಲಪ್ ಮೆಂಟ್ ದುರಾಸೆಗಳು) ಅಕ್ಷಯ­­ಪಾತ್ರೆಯಿಂದ ಬಾಚಿ ಬಾಚಿ ಉಣ್ಣುವುದಕ್ಕೆ ಪೈಪೋಟಿ ಶುರು­ವಾಗುತ್ತದೆ. ಆತ್ಮ ನಿರೀಕ್ಷಣೆ ಮಾಡಿ­ಕೊಳ್ಳು­ವಾತ ಅಕ್ಷಯ­ಪಾತ್ರೆಯಿಂದ ಆಕರ್ಷಿತನೂ ಆಗುತ್ತಾನೆ. ಅಂತೆಯೆ ಇದು ಅಕ್ಷಯ ಎಂದು ತಿಳಿಯುವುದು ಭ್ರಾಂತಿ ಇರಬಹುದು ಎನ್ನುವ ವಿಚಾರ ಅವನನ್ನು ಬಾಧಿಸುತ್ತದೆ. ಮಾರ್ಕ್ಸ್‌  ಕಲ್ಪನೆಯಲ್ಲಿ ಸ್ಟೇಟ್ ‘ಉದುರಿ’ ಹೋಗುವಷ್ಟು ಉತ್ಪಾದನಾ ಪ್ರಗತಿ ಸಾಧ್ಯ. ಯಾಕೆಂದರೆ ಈ ಭೂಮಿ ಅಕ್ಷಯ ಪಾತ್ರೆ.

ಮನುಷ್ಯ ಒಳ್ಳೆಯವನು ಅಲ್ಲ, ಕೆಟ್ಟವನು ಅಲ್ಲ ಎಂದು ತಿಳಿಯುವುದು ನಮ್ಮ ಹೊರಗಿರುವ ಮನುಷ್ಯರನ್ನು ನೋಡು­ವು­ದರಿಂದ ಮಾತ್ರವಲ್ಲ. ನಮ್ಮಲ್ಲೂ ಒಳಿತು/ಕೆಡಕುಗಳು ಘರ್ಷಣೆ­­ಯಲ್ಲಿ ಇರುತ್ತದೆ ಎಂದು ತಿಳಿಯುವುದರಲ್ಲಿ. ಹೀಗೆ ಆತ್ಮಪರೀಕ್ಷಣೆ­ಯಲ್ಲಿ   ಹೊರಗಿನ ಲೋಕವನ್ನೂ ನೋಡಿದಾಗ ಒಂದು ಸ್ಟೇಟ್ (State) ಎಷ್ಟು ಸ್ಪಂದನಶೀಲವಾಗಿ ಉಳಿದಿರ­ಬೇಕೆಂಬ ಪ್ರಜ್ಞೆ ನಮ್ಮಲ್ಲಿ ಮೂಡುತ್ತದೆ. ಮತೀಯತೆಯನ್ನೋ, ಜನಾಂಗೀ­ಯತೆಯನ್ನೋ (Race) ಆಧಾರ­ವಾಗಿಟ್ಟು­ಕೊಂಡಾಗ ಮನುಷ್ಯ ವರ್ತನೆಯ ನೈತಿಕ ಬಿಕ್ಕಟ್ಟುಗಳು ಮಾಯವಾಗುತ್ತವೆ.

ಸ್ಥಳೀಯರಾದವರನ್ನು ಹೊರಗಟ್ಟಿ ಯಹೂದ್ಯರಿಗೆಂದು ಇಸ್ರೇಲನ್ನು ಪಾಶ್ಚ್ಯಾತ್ಯರು ಸೃಷ್ಟಿಸಿದಾಗ ಗಾಂಧಿ ವಿರೋಧಿ­ಸಿದರು. ಚರಿತ್ರೆಯಲ್ಲಿ ಹಿಮ್ಮುಖ ನಡೆ (revivalism) ಸಲ್ಲದು. ಯಹೂದಿಗಳು ತಾವು ಇರುವ ಊರೇ ತಮ್ಮದು ಎಂದು ತಿಳಿದು ಬದುಕುವುದೇ ತಮ್ಮ ಪಾಡೆಂದು ಅರಿತು ಎಂದಿನಂತೆ ತಾವು ಬಾಳುವ ಲೋಕವನ್ನು ಬೆಳೆಸಬೇಕು. ಗಾಂಧಿ ಹೀಗೆ ಹೇಳಿ ಹಲವು ಯಹೂದ್ಯ ಚಿಂತಕರಿಗೆ ಸಲ್ಲದವ­ರಾಗಿದ್ದಾರೆ; ಸಾವರ್ಕರ್‌ಗೂ nation state ಬಗ್ಗೆ ಉದಾಸೀ­ನರಾಗಿದ್ದ ಗಾಂಧಿ ದೇಶದ್ರೋಹಿಯಾಗಿ ಕಂಡಿರಬಹುದು.

ಇಸ್ರೇಲ್ ಭೂಪಟದಲ್ಲಿ ನೋಡುವು­ದಕ್ಕೂ ಏಶ್ಯಾದ ಹೃದಯದಲ್ಲಿ ಇರಿದ ಚೂರಿಯ ಆಕಾರದಲ್ಲಿ ಇದೆ. ತಮ್ಮ ನೆಲಕ್ಕಾಗಿ ಹೋರಾಡುವ ಪ್ಯಾಲೆಸ್ತೀನಿ­ಗಳು ಮತ್ತು ಈ ಹೋರಾಟವನ್ನು ಅಮೆರಿಕಾದ ನೆರವಿನಿಂದ ಹತ್ತಿಕ್ಕುವ  ಇಸ್ರೇಲ್ ಈ ನಮ್ಮ ಕಾಲದ ಆತಂಕಕ್ಕೆ ಕಾರಣರಾಗಿದ್ದಾರೆ. ಇಸ್ಲಾಮಿಕ್ ಆತಂಕವಾದಿಗಳೂ ಮುಸ್ಲಿಮರಿಗಾದ  ಅನ್ಯಾಯ ದಿಂದ ಕ್ರುದ್ಧರಾಗಿ ಯಾವ ಪ್ರತಿಹಿಂಸೆಗೂ ಅಂಜದವ ರಾಗಿದ್ದಾರೆ. ಇಸ್ರೇಲಿನ ರೀತಿಯಲ್ಲೇ ಸಾವರ್ಕರ್ ಪ್ರೇರಿತ ಹಿಂದುತ್ವದ ರಾಷ್ಟ್ರವನ್ನು ಕಟ್ಟುವ ಪ್ರೇರಣೆಯ ಮೋದಿ ಸರ್ಕಾರ ಈಗ ಇಸ್ರೇಲ್ ಪರ ನಿಂತಿರುವುದು ಸ್ಪಷ್ಟವಾಗಿದೆ. ವಾಜಪೇಯಿ ಸರ್ಕಾರ­ಕ್ಕಿಂತ ಭಿನ್ನವಾದ ನಿಲುವು ಗುಜರಾತ್ ಯಜ್ಞದಲ್ಲಿ ‘ಬ್ರಹ್ಮ’ ಕೂತಿದ್ದ ಮೋದಿಯವರದು.

Orthodox ಎಂದರೆ ಮಡಿವಂತ ಜನ-. ವೈದಿಕರಿರಲಿ, ಕೋಶರ್ ಆಚರಿ­ಸುವ ಯಹೂದ್ಯರಿರಲಿ, ಇಸ್ಲಾಮಿಕ್ ಭಕ್ತರಿರಲಿ state ಅನ್ನು ಸ್ವತಃ ಕಟ್ಟುವವರಲ್ಲ. ಕಟ್ಟುವ ಲೌಕಿಕ ‘ಧೀರ’ರಿಗೆ ಇವರು ಎಂಬ್ಲೆಮ್ ಆಗಿ ಅಗತ್ಯ. ವೈದಿಕರಂತೂ ಈಚೆಗೆ ರಾಜಕಾರಿಣಿಗಳ ಜಾತಕ ನೋಡುವ ಶ್ರೀಮಂತ ಜೋತಿಷಿಗಳಾಗಿ ಬಿಟ್ಟಿದ್ದಾರೆ.

(ಯು.ಆರ್‌. ಅನಂತಮೂರ್ತಿ ಅವರು ಇತ್ತೀಚೆಗೆ ಬರೆದ  ಅಪ್ರಕಟಿತ ಲೇಖನದ ಒಂದು ಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT