ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾಮಗಾರಿಗೆ ಸಂಸ್ಕರಿಸಿದ ನೀರು

ಸಿಐಐ ವಾರ್ಷಿಕ ಜಲ ಸಮಾವೇಶದಲ್ಲಿ ಜಲಮಂಡಳಿ ಅಧ್ಯಕ್ಷ ವಿಜಯಭಾಸ್ಕರ್‌ ಘೋಷಣೆ
Last Updated 11 ಫೆಬ್ರುವರಿ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡು ಹಂತಗಳಲ್ಲಿ ಸಂಸ್ಕರಿಸಿದ ಕೊಳಚೆ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಸುವ ಸಂಬಂಧ ರಿಯಲ್ ಎಸ್ಟೇಟ್‌ ಡೆವಲಪರ್‌ಗಳ ಒಕ್ಕೂಟದ (ಕ್ರಡಾಯ್‌) ಪ್ರತಿನಿಧಿಗಳ ಜತೆ ಚರ್ಚೆ ನಡೆಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ‘ಜಲ ಸಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

‘ಸಂಸ್ಕರಿಸಿದ ನೀರಿನ ಬಳಕೆಗೆ ಕ್ರಡಾಯ್‌ನಿಂದ ಆಸಕ್ತಿ ವ್ಯಕ್ತವಾಗಿದೆ. ಅತ್ಯಲ್ಪ ದರಕ್ಕೆ ನಾವು ನೀರು ಪೂರೈಕೆ ಮಾಡಲಿದ್ದೇವೆ. ಈ ಯೋಜನೆ ಕಾರ್ಯಗತವಾದರೆ ಅಂತರ್ಜಲದ ಬಳಕೆಯ ಪ್ರಮಾಣ ಕಡಿಮೆ ಆಗಲಿದೆ’ ಎಂದು ವಿವರಿಸಿದರು.

‘ನಗರದಲ್ಲಿ ಪ್ರತಿದಿನ 155 ಕೋಟಿ ಲೀಟರ್‌ ನೀರಿನ ಬಳಕೆ ಮಾಡಲಾಗುತ್ತಿದೆ. ಅದರಲ್ಲಿ ನಿತ್ಯ 130 ಕೋಟಿ ಲೀಟರ್‌ ನೀರು ಬಳಕೆಯಾದ ಮೇಲೆ ಚರಂಡಿ ಪಾಲಾಗುತ್ತಿದೆ. ಸದ್ಯ ಪ್ರತಿದಿನ 60 ಕೋಟಿ ಲೀಟರ್‌ ನೀರು ಸಂಸ್ಕರಣೆ ಮಾಡಲಾಗುತ್ತಿದೆ. ಹೊಸ ಘಟಕಗಳು ಕಾರ್ಯಾರಂಭ ಮಾಡಿದಾಗ ವರ್ಷಾಂ
ತ್ಯದ ವೇಳೆಗೆ ನಿತ್ಯ 110 ಕೋಟಿ ಲೀಟರ್‌ ನೀರಿನ ಸಂಸ್ಕರಣೆ ಮಾಡಲು ಸಾಧ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಮೂರು ಹಂತದಲ್ಲಿ ಸಂಸ್ಕರಣೆಗೆ ಮಾಡಿದ ನೀರನ್ನು ಕೈಗಾರಿಕೆಗಳ ಬಳಕೆಗೆ ಕೊಡಲು ಸಿದ್ಧರಿದ್ದೇವೆ. ಪ್ರತಿ ಸಾವಿರ ಲೀಟರ್‌ ಕಾವೇರಿ ನೀರು ₹ 70ಕ್ಕೆ ಸಿಕ್ಕರೆ, ಸಂಸ್ಕರಿಸಿದ ನೀರು ನಿಮಗೆ ಕೇವಲ ₹ 15ಕ್ಕೆ ಸಿಗಲಿದೆ. ಕುಡಿಯುವುದನ್ನು ಹೊರತುಪಡಿಸಿ ಮಿಕ್ಕೆಲ್ಲ ಉದ್ದೇಶಕ್ಕೂ ಸಂಸ್ಕರಿಸಿದ ನೀರನ್ನು ಬಳಕೆ ಮಾಡಬಹುದು’ ಎಂದು ಹೇಳಿದರು.

‘ಬೆಂಗಳೂರಿನ ಉತ್ತರ ಭಾಗದ ಬೇಡಿಕೆಯನ್ನು ಸಂಪೂರ್ಣವಾಗಿ ಪರಿಹರಿಸಲು ಆಗಿಲ್ಲ. ಹೀಗಾಗಿ ಅಲ್ಲಿ ಒತ್ತಡ ಹೆಚ್ಚಿದೆ. ಹೆಬ್ಬಾಳ ಹಾಗೂ ಯಲಹಂಕ ಭಾಗದ ಕೆರೆಗಳಲ್ಲಿ ಶುದ್ಧನೀರು ಸಂಗ್ರಹಿಸಿ, ಪೂರೈಸಲು ನಿರ್ಧರಿಸಲಾಗಿದೆ. ಸಿಂಗಪುರ ಸಂಸ್ಥೆಗೆ ವಿವರವಾದ ಯೋಜನೆ ತಯಾರಿಸಲು ಗುತ್ತಿಗೆ ನೀಡಲಾಗಿದೆ’ ಎಂದು ವಿವರಿಸಿದರು.

‘ನಿತ್ಯ 52 ಕೋಟಿ ನೀರಿನ ಸಂಸ್ಕರಣೆಗೆ ಅಗತ್ಯವಾದ ಘಟಕಗಳ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಕೇಳಲಾಗಿದೆ. ಘಟಕಗಳನ್ನು ನಿರ್ಮಾಣ, ನಿರ್ವಹಣೆ ಹಸ್ತಾಂತರ (ಬಿಒಟಿ) ಆಧಾರದ ಮೇಲೆ ಸ್ಥಾಪಿಸಲು ಏಳು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತದೆ’ ಎಂದು ತಿಳಿಸಿದರು.
ಜರ್ಮನಿಯ ಕಾನ್ಸಲ್‌ ಜನರಲ್‌ ಜಾರ್ನ್‌ ರೋಡ್‌, ‘ನಮ್ಮಲ್ಲೂ ನದಿಗಳು ಕಲುಷಿತಗೊಂಡಿದ್ದವು. ಆದರೆ, ಅವುಗಳನ್ನೆಲ್ಲ ಈಗ ಶುದ್ಧೀಕರಿಸಿದ್ದೇವೆ.

ಬಳಕೆಯಾದ ಶೇ 98ರಷ್ಟು ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡಲಾಗುತ್ತಿದೆ. ನೀರಿನ ಸದ್ಬಳಕೆ ಆಗುವಂತೆ ನೋಡಿಕೊಳ್ಳಲು ಅಪವ್ಯಯ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗುತ್ತದೆ’ ಎಂದು ವಿವರಿಸಿದರು.

‘ಪತ್ರಿಕೆಗಳಲ್ಲಿ ನಾನು ಗಮನಿಸಿದಂತೆ ಬೆಂಗಳೂರಿನ ನೀರಿನ ಸಮಸ್ಯೆಗೆ ಕೆರೆಗಳ ಅತಿಕ್ರಮಣ, ನೀರಿನ ದುರ್ಬಳಕೆ ಹಾಗೂ ಸಂಸ್ಕರಿಸಿದ ನೀರಿನ ಬಳಕೆಯಲ್ಲಿ ಅನಾದರ ಮುಖ್ಯ ಕಾರಣವಾಗಿವೆ’ ಎಂದು ವಿಶ್ಲೇಷಿಸಿದರು.

‘ಇನ್ವೆಸ್ಟ್‌ ಕರ್ನಾಟಕಕ್ಕೆ ಬಂದಿದ್ದ ಜರ್ಮನಿಯ ಉದ್ದಿಮೆದಾರರು ರಾಜ್ಯದಲ್ಲಿ ನೀರು ಮತ್ತು ವಿದ್ಯುತ್‌ ಪೂರೈಕೆ ಹೇಗಿದೆ ಎಂದು ಕೇಳಿದರು. ಕೈಗಾರಿಕೆ ಬೆಳೆಯುವ ದೃಷ್ಟಿಯಿಂದಲೂ ನೀರಿನ ಪಾತ್ರ ದೊಡ್ಡದಿದೆ. ಕೆರೆಗಳ ಶುದ್ಧೀಕರಣಕ್ಕೆ ಅಗತ್ಯವಾದ ತಂತ್ರಜ್ಞಾನ ಕೊಡಲು ಜರ್ಮನಿ ಸಿದ್ಧವಿದೆ. ಗಂಗಾನದಿ ಶುದ್ಧೀಕರಣ ಪ್ರಕ್ರಿಯೆಯಲ್ಲೂ ನಾವು ಕೈಜೋಡಿಸುತ್ತಿದ್ದೇವೆ’ ಎಂದು ವಿವರಿಸಿದರು.

ಸಮಾವೇಶ ಉದ್ಘಾಟಿಸಿದ ಬೆಂಗಳೂರು ಅಭಿವೃದ್ಧಿ  ಸಚಿವ ಕೆ.ಜೆ. ಜಾರ್ಜ್‌, ‘ನೀರಿನ ಮರು ಬಳಕೆ ತಂತ್ರಜ್ಞಾನವನ್ನು ಕೈಗಾರಿಕೆ ಘಟಕಗಳು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಲ ಕಾರ್ಯಕರ್ತರಿದ್ದು, ಅವರ ಮೂಲಕ ಜಲ ಜಾಲವನ್ನು ನಿರ್ಮಾಣ ಮಾಡುವ ಪ್ರಯತ್ನ ನಡೆದಿದೆ’ ಎಂದು ಸಿಐಐ ಜಲ ಕಾರ್ಯಪಡೆ ಮುಖ್ಯಸ್ಥ ಹರಿಪ್ರಸಾದ್‌ ಹೆಗಡೆ ಅವರು ವಿವರಿಸಿದರು.

‘ಸೃಷ್ಟಿ ಆಗಬೇಕಿದೆ ಮತ್ತೊಂದು ಕಾವೇರಿ’

ಬೆಂಗಳೂರು:  ‘ದೂರದ ಕಾವೇರಿ ನದಿಯಿಂದ ಸಾವಿರಾರು ಕೋಟಿ ವ್ಯಯಿಸಿ ಇನ್ನಷ್ಟು ಪ್ರಮಾಣದ ನೀರು ತರುವ ಯೋಜನೆ ರೂಪಿಸುವ ಬದಲು ನಗರದಲ್ಲೇ ಮತ್ತೊಂದು ಕಾವೇರಿಯನ್ನು ಸೃಷ್ಟಿಸಬೇಕು’ ಎಂದು ನಗರ ಯೋಜನೆ ತಜ್ಞ ಅಶ್ವಿನ್‌ ಮಹೇಶ್‌ ಅಭಿಪ್ರಾಯಪಟ್ಟರು.
ಗುರುವಾರ ಸಿಐಐ ಏರ್ಪಡಿಸಿದ್ದ ಏರ್ಪಡಿಸಿದ್ದ ‘ಜಲ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಮತ್ತೊಂದು ಕಾವೇರಿ ಸೃಷ್ಟಿಸುವುದು ಎಂದರೆ ನಗರದಲ್ಲಿ ನದಿ ನಿರ್ಮಾಣ ಮಾಡುವುದಲ್ಲ. ಕಲುಷಿತಗೊಂಡ ಕೆರೆಗಳನ್ನು ಶುದ್ಧೀಕರಿಸಿ ಅಲ್ಲಿನ ನೀರು ಬಳಕೆ ಮಾಡಬೇಕು. ಮಳೆ ನೀರನ್ನು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಬೇಕು. ಕಾವೇರಿಯಿಂದ ಪಡೆಯುವಷ್ಟು ನೀರನ್ನು ಸ್ಥಳೀಯ ಮೂಲಗಳಿಂದಲೇ ಪಡೆಯುವಂತೆ ಆಗಬೇಕು’ ಎಂದು ಅವರು ವಿವರಿಸಿದರು.

‘ಸರ್ಕಾರ, ಕೈಗಾರಿಕೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸುಸ್ಥಿರವಾದ ನೀರಿನ ನಿರ್ವಹಣೆ ವ್ಯವಸ್ಥೆ ರೂಪಿಸಲು ಸಾಧ್ಯ’ ಎಂದು ಹೇಳಿದರು. ‘ರಾಜ್ಯದ ಬಜೆಟ್‌ನಲ್ಲಿ ಈ ಯೋಜನೆಗೆ ₹ 150 ಕೋಟಿ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಮತ್ತೊಂದು ಕಾವೇರಿ ಸೃಷ್ಟಿ’ ಯೋಜನೆಯನ್ನು ವಿಸ್ತರಿಸಿ ಹೇಳಿದ ಅವರು, ‘ಕೇವಲ ಆರು ಕೆರೆಗಳ ನಿರ್ವಹಣೆಯಿಂದ ಪ್ರತಿದಿನ 70 ಕೋಟಿ ಲೀಟರ್‌ ನೀರು ಪಡೆಯಲು ಸಾಧ್ಯವಿದೆ. ನಗರದ ಅರ್ಧದಷ್ಟು ಕಟ್ಟಡಗಳು ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಂಡರೆ ನಿತ್ಯ 20 ಕೋಟಿ ಲೀಟರ್‌ನಷ್ಟು ನೀರು ಉಳಿತಾಯವಾಗಲಿದೆ’ ಎಂದು ವಿವರಿಸಿದರು.

‘ಕೈಗಾರಿಕೆ ಪ್ರದೇಶಗಳಿಗೆ ಎರಡು ಕೊಳವೆ ಮಾರ್ಗ ಕಲ್ಪಿಸಿದರೆ ನಿತ್ಯ ಮೂರು ಕೋಟಿ ಲೀಟರ್‌ ನೀರನ್ನು ಉಳಿತಾಯ ಮಾಡಬಹುದು. ಶುಲ್ಕ ಹಾಗೂ ದಂಡ ಆಕರಣೆ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಹೆಚ್ಚಿನ ಹಣ ಪಾವತಿಸುವ ಭೀತಿಯಿಂದ ಜನರ ನೀರಿನ ಬಳಕೆ ವಿಧಾನವೂ ಬದಲಾಗಲಿದೆ. ಇದರಿಂದ ಪ್ರತಿದಿನ 20 ಕೋಟಿ ಲೀಟರ್‌ ನೀರು ಉಳಿತಾಯ ಆಗಲಿದೆ’ ಎಂದರು.

‘ಒಂದು ಎಕರೆ ವಿಸ್ತಾರದ ಕೆರೆ ನಾಲ್ಕು ಸಾವಿರ ಜನರ ನೀರಿನ ದಾಹ ಇಂಗಿಸಬಲ್ಲದು. ಮುಂದಿನ 20 ವರ್ಷಗಳಲ್ಲಿ ನಗರದ ಜನಸಂಖ್ಯೆ ಮತ್ತೆ 80 ಲಕ್ಷದಷ್ಟು ಹೆಚ್ಚುವ ನಿರೀಕ್ಷೆ ಇದೆ. ಅದಕ್ಕಾಗಿ ನಾವು ಎರಡು ಸಾವಿರ ಎಕರೆಯಷ್ಟು ವಿಶಾಲವಾದ ಕೆರೆಗಳನ್ನು ಶುದ್ಧಗೊಳಿಸಿ, ಸಂರಕ್ಷಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ನಾಲ್ಕು ಅಂಕಿಗಳ ಸಹಾಯವಾಣಿ

ನೀರಿನ ಸೋರಿಕೆ ತಡೆಗಟ್ಟುವ ಜತೆಗೆ ಕೊಳಚೆ ನೀರು ರಸ್ತೆಗೆ ಹರಿಯದಂತೆ ನೋಡಿಕೊಳ್ಳಲು ಜಲಮಂಡಳಿಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಸೋರಿಕೆ ಗಮನಿಸುವ ಸಾರ್ವಜನಿಕರು ಈ ಸಹಾಯವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ವಿಜಯಭಾಸ್ಕರ್‌ ಮನವಿ ಮಾಡಿದರು. ಸದ್ಯ 2223 8888 ಸಂಖ್ಯೆಗೆ ದೂರು ನೀಡಬಹುದು. ವಾರದಲ್ಲೇ ನಾಲ್ಕು ಅಂಕಿಗಳ (1916) ಸಹಾಯವಾಣಿ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
 

‘ಕಸ ಬೆಳೆಯುತ್ತಿದೆ’

‘ಬೆಂಗಳೂರು ನಗರದ ಕಸ ಬೆಳೆಯುತ್ತಿದೆ’ ಎಂದು ಜರ್ಮನಿಯ ಕಾನ್ಸಲ್‌ ಜನರಲ್‌ ಜಾರ್ನ್‌ ರೋಡ್‌ ಬಾಯ್ತಪ್ಪಿನಿಂದ ಹೇಳಿದಾಗ ಸಭಾಂಗಣದಲ್ಲಿ ನಗೆಯ ಅಲೆ ಎದ್ದಿತು. ‘ನಗರ ಬಹು ವಿಧದಲ್ಲಿ ಬೆಳೆಯುತ್ತಿದೆ ಎನ್ನಲು ನಾನು ಹೊರಟಿದ್ದೆ’ ಎಂದು ಅವರು ಬೆನ್ನಹಿಂದೆಯೇ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT