ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗಾರನ ಋಣ ತೀರಿಸುವ ಹೊತ್ತು...

Last Updated 9 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಈಸಾಲಿನ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಯು.ಆರ್. ಅನಂತಮೂರ್ತಿ ಅವರ ಹೆಸರಿರುವುದು ದೇಶದ ತುಂಬ ಇರುವ ಅವರ ಅಪಾರ ಅಭಿಮಾನಿಗಳಿಗೆ ಖುಷಿ ತಂದಿರಬಹುದು. ಆದರೆ ಇದು ಕನ್ನಡದ ಪುಟ್ಟ ಆದರೆ ವಾಚಾಳಿಯಾಗಿರುವ ಓದುಗ ವಲಯದಲ್ಲಿ ಹಳೆಯ ಚರ್ಚೆಯೊಂದನ್ನು ಮತ್ತೆ ಜೀವಂತಗೊಳಿಸಿದೆ:

ಅನಂತಮೂರ್ತಿ ಅವರು ಕನ್ನಡದ ಅತ್ಯುತ್ತಮ ಕಾದಂಬರಿಕಾರರೆ? ಹಾಗೆ ಹೇಳುವವರ ಪ್ರಕಾರ `ಸಂಸ್ಕಾರ', `ಭಾರತೀಪುರ', `ಅವಸ್ಥೆ'ಯಂಥ ಕಾದಂಬರಿಗಳಿಂದ ಅನಂತಮೂರ್ತಿ ಅವರಿಗೆ ಪ್ರಸಿದ್ಧಿ ದೊರೆತಿಲ್ಲ. ಬದಲಿಗೆ ಎಡಪಂಥೀಯರ ತಂತ್ರ ಅನಂತಮೂರ್ತಿಯವರನ್ನು ಕನ್ನಡದಲ್ಲಷ್ಟೇ ಅಲ್ಲದೆ ಭಾರತೀಯ ಭಾಷೆಗಳಲ್ಲೇ ಅತ್ಯುತ್ತಮ ಕಾದಂಬರಿಕಾರರಾದ ಎಸ್.ಎಲ್ ಭೈರಪ್ಪ ಅವರಿಗಿಂತಲೂ ಮೇಲಕ್ಕೆ ಕೊಂಡೊಯ್ದಿದೆ.

ಯಾರು ಈ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ? ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಅತಿ ಹೆಚ್ಚು ಓದುಗರನ್ನು ಪಡೆದ, ಅನೇಕ ಬಾರಿ ವಿವಾದಕ್ಕೀಡಾದ 21 ಕಾದಂಬರಿಗಳ ಕರ್ತೃ ಇವರು. ಎಸ್.ಎಲ್. ಭೈರಪ್ಪ ಹಿಂದುತ್ವವಾದಿ ಎಂಬ ಒಂದೇ ಕಾರಣಕ್ಕೆ ಅವರ ಉಳಿದೆಲ್ಲಾ ಸಾಧನೆಗಳು ಮೂಲೆಗುಂಪಾಗಿವೆ. ಅವರದ್ದು ಯಾವ ಲೇಪವೂ ಇಲ್ಲದ ಸ್ಪಷ್ಟ ರಾಜಕೀಯ ಅಭಿಪ್ರಾಯಗಳು- ಮತಾಂತರ ಹಾಗೂ ಗೋಹತ್ಯೆಯನ್ನು ಅವರು ವಿರೋಧಿಸುತ್ತಾರೆ.

ಟಿಪ್ಪು ಅವರ ಪಾಲಿಗೆ ದೇಶದ ಮಹಾಪುರುಷ ಎನ್ನುವುದಕ್ಕಿಂತಲೂ ಹೆಚ್ಚಾಗಿ ಧರ್ಮಾಂಧನಂತೆ ಕಂಡಿದ್ದಾನೆ- ಇವೆಲ್ಲಾ ಅವರದೇ ಅಭಿಮಾನಿ ವಲಯಕ್ಕೂ ಮುಜುಗರ ತರುವಂತಹವು. ಇದು ಕಟ್ಟಾ ಜಾತ್ಯತೀತರಾದ ಅನಂತಮೂರ್ತಿ ಅವರನ್ನು ಆರಾಧಿಸುವುದನ್ನು ಸುಲಭಗೊಳಿಸಿ ಭೈರಪ್ಪನವರ ಅಸ್ತಿತ್ವವನ್ನೇ ಮರೆಯುವುದಕ್ಕೆ ಕಾರಣವಾಗಿರಬಹುದು. ಆದರೆ ಸಮಸ್ಯೆ ಉದ್ಭವಿಸಿರುವುದು ಭೈರಪ್ಪನವರ ಬರಹಗಳೂ ಕೆರಳಿಸುವಷ್ಟು ಉತ್ತಮವಾಗಿರುವುದರಿಂದ.

81 ವರ್ಷದ, ಮೈಸೂರು ವಾಸಿ ಭೈರಪ್ಪ 1965ರಲ್ಲಿ ಬರೆದ `ವಂಶವೃಕ್ಷ' ಕಾದಂಬರಿ ಅವರನ್ನು ಪ್ರಸಿದ್ಧಿಯಲ್ಲಿ ತೇಲಿಸಿತು. ಸ್ವಾತಂತ್ರ್ಯಪೂರ್ವ ಮೈಸೂರಿನ ಎರಡು ಕುಟುಂಬಗಳ ನಡುವಣ ತಿರುವುಗಳನ್ನು ಹೇಳುವ ಕತೆ ಅದು. ಕಾದಂಬರಿಯ ಮುಖ್ಯಪಾತ್ರವಾದ ಕಾತ್ಯಾಯಿನಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಉಪನ್ಯಾಸಕರೊಬ್ಬರಿಗೆ ಮನಸೋಲುತ್ತಾಳೆ.

ಆಕರ್ಷಣೆ ಸಹಜವಾದರೂ ಮದುವೆ ಬಗ್ಗೆ ಯೋಚಿಸುವಂತಿಲ್ಲ; ಏಕೆಂದರೆ ಆಕೆ ವಿಧವೆ. ಇದು ಮತ್ತೆ ಮತ್ತೆ ಕಾಣಿಸಿಕೊಳ್ಳುವ ಭೈರಪ್ಪನವರ ವಸ್ತು. ಮನುಷ್ಯ ಸಹಜ ಪ್ರವೃತ್ತಿ ಧರ್ಮದ ವಿರುದ್ಧ ನಡೆದು ಕಡೆಗೆ ದುರಂತವನ್ನು ಎದುರಿಸುತ್ತದೆ. ಇದು ಅನಂತಮೂರ್ತಿ ಅವರ `ಸಂಸ್ಕಾರ'ದಂತೆ ಪದ ಚಾತುರ್ಯದಿಂದ ಕೂಡಿರದಿದ್ದರೂ ತಮ್ಮ ಪಾತ್ರಗಳ ಒಳ ಬದುಕನ್ನು ತೆರೆದಿಡುವಲ್ಲಿ (ಅದರಲ್ಲಿಯೂ ಹೆಣ್ಣು ಪಾತ್ರಗಳು), ವಿವರಣೆಯ ತಾದ್ಯಾತ್ಮದಲ್ಲಿ, ಭೂದೃಶ್ಯಗಳನ್ನು ಬಳಸಿಕೊಳ್ಳುವಲ್ಲಿ (ಮೈಸೂರಿನ ಬೆಟ್ಟಗಳು ಹಾಗೂ ಕೆರೆಗಳು ಕತೆಯಲ್ಲಿ ಕೇಂದ್ರ ಪಾತ್ರವಾಗಿವೆ) ಭೈರಪ್ಪನವರ `ವಂಶವೃಕ್ಷ' ಆಳವಾಗಿ ಕಾಡುವ ಕಾದಂಬರಿ.

ಅನಂತಮೂರ್ತಿ ಅವರ `ಸಂಸ್ಕಾರ'ಕ್ಕಿಂತಲೂ ಸ್ವಲ್ಪ ಮುಂಚಿತವಾಗಿ `ವಂಶವೃಕ್ಷ'ವನ್ನು ಹೊರತಂದ ಭೈರಪ್ಪ, ಅನಂತಮೂರ್ತಿ ವಿರೋಧಿ, ಹಿಂದೂಧರ್ಮದ ಮೇಲ್ಜಾತಿಯನ್ನು ಪ್ರತಿಪಾದಿಸುವ ಸಂಪ್ರದಾಯವಾದಿ ಎಂಬ ಅಪವಾದಕ್ಕೂ ಗುರಿಯಾದರು. ಇದೊಂದು ಒರಟು ದಾಳಿಯಾಗಿತ್ತು. ಇಂಗ್ಲಿಷ್, ಕನ್ನಡ ಹಾಗೂ ಸಂಸ್ಕೃತವನ್ನು ಆಳವಾಗಿ ಓದಿಕೊಂಡ, ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರವನ್ನು ಬಲ್ಲ ಭೈರಪ್ಪ, ವಿಲಿಯಂ ಜೇಮ್ಸನಿಂದ ಹಿಡಿದು ವಿ.ಎಸ್.ನೈಪಾಲ್‌ರ ತನಕ ಯಾರನ್ನು ಬೇಕಾದರೂ ಅಸ್ಖಲಿತವಾಗಿ ಉಲ್ಲೇಖಿಸಬಲ್ಲರು.

ಹಿಂದೂಗಳ ಮತಾಂತರ, ಗೋವಧೆಯ ವಿಷಯ ಬಂದಾಕ್ಷಣ ಅವರ ಅಧ್ಯಯನವೆಲ್ಲಾ ಶೂನ್ಯವಾಬಿಡುತ್ತದೆ. ತಮ್ಮ ಪ್ರಬಂಧಗಳಲ್ಲಂತೂ ಅವರು ತಮ್ಮ ಟೀಕಾಕಾರರೂ ಹೇಳುವುದನ್ನು ಹೋಲುವಂಥ ಪ್ರತಿಗಾಮಿಯನ್ನೇ ಧ್ವನಿಸುತ್ತಾರೆ. ಅವರ ಕಾದಂಬರಿಗಳು ಹೆಚ್ಚು ಸಂಕೀರ್ಣ. 1967ರಲ್ಲಿ ಬರೆದ `ಜಲಪಾತ'ದಲ್ಲಿ ಒಬ್ಬ ಚಿತ್ರಕಲಾವಿದ ನಗರದ ಅಮಾನವೀಯತೆಯನ್ನು ಹುಡುಕುತ್ತಾ ಮೈಸೂರಿನಿಂದ ಮುಂಬೈಗೆ ತೆರಳುತ್ತಾನೆ. ಮುಂಬೈ ಹಿಂದೂ ಮೌಲ್ಯಗಳ ವಿರುದ್ಧವಿದೆ ಎಂಬುದನ್ನು ಬಾಂದ್ರಾ ಉಪನಗರದಲ್ಲಿರುವ ಹಸುಗಳಿಂದ ತುಂಬಿರುವ ಕಸಾಯಿಖಾನೆಯೊಂದರ ವರ್ಣನೆಯಲ್ಲಿ ಧ್ವನಿಸುತ್ತದೆ.

ಜೀವಂತಿಕೆಯೇ ಇರದ ಇಂಥ ಸ್ಥಳದಲ್ಲಿ ಚಿತ್ರ ಬರೆಯಲಾಗದೆ ಆತ ತನ್ನ ಕುಟುಂಬದೊಂದಿಗೆ ಕರ್ನಾಟಕದ ಹಳ್ಳಿಯೊಂದಕ್ಕೆ ಮರಳುತ್ತಾನೆ- ನಗರದಲ್ಲಿ ತಾನು ಭೇಟಿಯಾದವರಿಗಿಂತಲೂ ಹಳ್ಳಿಗರು ಹೆಚ್ಚು ಲೋಭಿಗಳು ಎಂಬುದನ್ನು ಮಾತ್ರ ತಿಳಿಯಲೆಂಬಂತೆ. ಇದರಿಂದ ಪಾಠ ಕಲಿತು ಮುಂಬೈಗೆ ವಾಪಸ್ಸಾಗುತ್ತಾನೆ. ಆತ ಮತ್ತೆ ಕಸಾಯಿಖಾನೆಗೆ ತೆರಳುವುದರೊಂದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ: ಆಧುನಿಕತೆಯ ಕ್ರೌರ್ಯದಿಂದ ದೂರ ಓಡದೆ ಕೇವಲ ಅದಕ್ಕೆ ಸಾಕ್ಷಿಯಾಗಿದ್ದರೆ ಮಾತ್ರ ಕಲಾವಿದನಾಗಲು ಸಾಧ್ಯ ಎಂದು ಅರ್ಥ ಮಾಡಿಕೊಳ್ಳುತ್ತಾನೆ.

1960ರಿಂದ 70ರ ದಶಕದಲ್ಲಿ ಗುಜರಾತ್, ನವದೆಹಲಿ ಹಾಗೂ ಮೈಸೂರಿನಲ್ಲಿ ಬದುಕು ಕಳೆದ ಭೈರಪ್ಪ ಯಥೇಚ್ಛವಾಗಿ ಬರೆದರು. ಪ್ರಜ್ಞಾಪೂರ್ವಕವಾಗಿ ಸಮಕಾಲೀನತೆಯಿಂದ ಚಾರಿತ್ರಿಕತೆ ಎಡೆಗೆ, ನಗರದಿಂದ ಗ್ರಾಮ ಬದುಕಿನೆಡೆಗೆ ಚಲಿಸಿದರು. ಲಜ್ಜೆಗೆಟ್ಟ ಮಾತುಗಳನ್ನಾಡುವವರು, ಮೂರ್ಖರು, ಹಣದಾಹಿಗಳು ಆದರೂ ಅದಮ್ಯ ಕಸುವುಳ್ಳ ಹಳ್ಳಿಗರ ಪಾತ್ರಗಳು ಭೈರಪ್ಪನವರ ಅತ್ಯುತ್ತಮ ಸೃಷ್ಟಿಗಳು.   

1970ರಲ್ಲಿ ಮೂಡಿಬಂದ `ಗೃಹಭಂಗ' ಹಳ್ಳಿಯ ಬದುಕನ್ನು ಹತ್ತಿರದಿಂದ ಹಾಗೂ ಅಷ್ಟೇ ವಿಡಂಬನಾತ್ಮಕವಾಗಿ ತೋರಿಸುವ ಕಾದಂಬರಿ. ಕಾದಂಬರಿಯ ನಾಯಕ ಬಾಯಿ ತುಂಬ ತಾಂಬೂಲ ಜಗಿಯುತ್ತ ತನ್ನ ಮಗ ಬಹುತೇಕ ಶಾಶ್ವತವಾಗಿ ಹಳ್ಳಿ ತೊರೆಯುವುದನ್ನೇ ನೋಡುತ್ತಿದ್ದಾನೆ. ಆತ ಏನಾದರೂ ಹೇಳುತ್ತಾನಾ? `ಮಗ ಹಿಂತಿರುಗಿ ಬಾ' ಎಂದು ಕರೆಯುತ್ತಾನಾ? ಇಲ್ಲ. ಏಕೆಂದರೆ ತನ್ನ ಬಳಿ ಹೆಚ್ಚು ಎಲೆಯಡಿಕೆ ಇಲ್ಲ ಎಂಬುದಷ್ಟೇ ಅವನಿಗೆ ಗೊತ್ತಿರುವುದು. ಹಾಗಾಗಿ ಅದನ್ನು ಬಾಯಿಬಿಡಲು ಅದನ್ನು ಉಗುಳಬೇಕಾಗುತ್ತದೆ. ಹಾಗಾಗಿ ಆತ ಬಾಯಿಬಿಡದೆ ಮಗ ತೆರಳುವುದನ್ನೇ ನೋಡುತ್ತಾನೆ. ಅಪ್ಪ ಕಡೇಪಕ್ಷ ಒಂದು ವಿದಾಯದ ಮಾತನ್ನೂ ಹೇಳುತ್ತಿಲ್ಲವಲ್ಲ ಎಂದುಕೊಳ್ಳುತ್ತ ಮಗ ಅಲ್ಲೇ ಸುತ್ತುತ್ತಾನೆ. ತೀಕ್ಷ್ಣವಾದ ವಿಡಂಬನೆಯ ಮೂಲಕ ಅಲ್ಲಿ ಬದುಕಿನ ಹಾದಿ ಚಿತ್ರಿತವಾಗಿದೆ.

70ರ ದಶಕದ ಮಧ್ಯಭಾಗದ ಹೊತ್ತಿಗೆ ಕಾದಂಬರಿಕಾರರು ದಟ್ಟ ವಿವರಣೆಗಳಿಂದ ಮನ ಸೆಳೆದರು- ಪ್ರೇಮಿಯ ದೇಹದಿಂದ ಹೊರಬರುವ ಮೈಸೂರು ಸ್ಯಾಂಡಲ್ ಸೋಪಿನ ಘಮ, ನಾಯಕನನ್ನು ಕಂಗೆಡಿಸುವ ಹಲ್ಲು ನೋವು, ವೇದಾಧ್ಯಯನಕ್ಕೆ ತೆರಳುವ ಪಂಡಿತನಿಗೆ ಎದುರಾಗುವ ಹುಲಿಚರ್ಮ- ಕೆಲವರಿಗೆ ದನಿ ನೀಡುವ ಅವರ ಸಾಮರ್ಥ್ಯ, ಅದರಲ್ಲಿಯೂ ಮಹಿಳೆಯರನ್ನು ಚಿತ್ರಿಸಿದ ರೀತಿ ತಥಾಕಥಿತ ಪ್ರಯೋಗಗಳಿಗೆ ಹೊಸ ಹುರುಪು ತಂದವು. 1979ರಲ್ಲಿ ಜಾತಿ ಕುರಿತ ವಸ್ತುವಿದ್ದ `ದಾಟು' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ಬಳಿಕ ಅನೇಕ ಓದುಗರು ಸಮರ್ಥಿಸಿಕೊಳ್ಳುವ `ಪರ್ವ'ವನ್ನು ಹೊರತಂದರು.

ಮಹಾಭಾರತ ಕತೆಯನ್ನು ಮರು ನಿರೂಪಿಸುವ ಈ ಕೃತಿ ಮೇಲ್ನೋಟಕ್ಕೆ ಕುರುಕ್ಷೇತ್ರ ಯುದ್ಧವನ್ನು ಪುರಾಣದ ಕತೆಯೆಂಬಂತೆ ಬಿಂಬಿಸದೆ ನಡೆದ ಘಟನೆಯೆಂಬಂತೆ ಮಾನವಶಾಸ್ತ್ರೀಯವಾಗಿ ಚಿತ್ರಿಸಿದರೂ ನಿಜವಾಗಿ ಅತೀವ ಒತ್ತಡದಲ್ಲಿರುವ ಮನುಷ್ಯನನ್ನು ಅಧ್ಯಯನ ಮಾಡುತ್ತದೆ. ಅನೇಕ ಸ್ವಗತಗಳ ಸುತ್ತ ಹೆಣೆದ `ಪರ್ವ' ಒಂದಾದ ಮೇಲೊಂದರಂತೆ ಮೂಡುವ ಗೀತೆ ಗುಚ್ಛದಂತೆ ತೋರುತ್ತದೆ. ಸಂಕೀರ್ಣತೆಯನ್ನು ತರುವ ಉದ್ದೇಶದ ಕ್ಯೂಬಿಸ್ಟ್ ಶೈಲಿಯ ಪಾತ್ರಗಳನ್ನು ಚಿತ್ರಿಸುವ ಭೈರಪ್ಪ ನಂತರ ಪ್ರಮುಖ ಕೃತಿಕಾರರಂತೆ ಪಾಂಡವ ಕೌರವರು ಒಂದೇ ರೀತಿ ಎನ್ನುತ್ತಾರೆ.

ದ್ರೌಪದಿಯ ಮೇಲೆ ಅತ್ಯಾಚಾರವೆಸಗಲು ಕೌರವರನ್ನು ಪ್ರಚೋದಿಸುವ ಕರ್ಣ ಮೂರ್ಖ ಹಾಗೂ ಲಂಪಟನಂತೆ ಮೊದಲು ಕಂಡರೂ ನಂತರ ಗಂಗೆಯಲ್ಲಿ ಮಿಂದ, ಆಲೋಚನಾಶೀಲ ಹಾಗೂ ಅಭದ್ರನಂತೆ ಗೋಚರಿಸುತ್ತಾನೆ. ಕುಂತಿಯ ಅಕ್ರಮ ಸಂತಾನವಾದ ಆತನನ್ನು ಯುದ್ಧಭೂಮಿಯ ತಣ್ಣನೆ ರಕ್ತದ ಹಂತಕನಂತೆ, ಕೊಟ್ಟ ಮಾತಿಗೆ ತಲೆಬಾಗಿ ತನ್ನನ್ನು ತಾನೇ ಕೊಂದುಕೊಳ್ಳುವ ಧೀಮಂತನಂತೆ ಚಿತ್ರಿಸಲಾಗಿದೆ. ದನಿಯಲ್ಲಿ ವಿಷಾದವಿಟ್ಟುಕೊಂಡು- ಕಾದಂಬರಿಯ ಪ್ರತಿಪುಟದಲ್ಲಿ ಮಹಾಭಾರತ ವ್ಯಕ್ತವಾಗುತ್ತದೆ- `ಪರ್ವ' ಹಿಂದೂ `ಗೊತ್ತೆರ್‌ದಮ್ಮೆರಂಗ್'*ನಂತೆ ವೇದ್ಯವಾಗುತ್ತದೆ. ಪುನರುಕ್ತಿ ಹಾಗೂ ಸಾಂದರ್ಭಿಕ ಶಬ್ದಾತಿಶಯಗಳಿಂದಾಗಿ  ಪಾತ್ರ ಚಿತ್ರಣಗಳಲ್ಲಿ ಭೈರಪ್ಪನವರ ಸೋಲಿದ್ದರೂ 20ನೇ ಶತಮಾನದ ಕುತೂಹಲಕಾರಿ ಭಾರತೀಯ ಕಾದಂಬರಿಗಳಲ್ಲಿ ಇದೂ ಒಂದು.

`ಪರ್ವ'ದ ನಂತರದ ಕೃತಿಗಳು ಮಿಶ್ರ ಪ್ರತಿಕ್ರಿಯೆ ಪಡೆದವು. 888 ಪುಟಗಳಲ್ಲಿರುವ `ತಂತು' (1993) ಸ್ವಾತಂತ್ರ್ಯೋತ್ತರ ಭಾರತದ ಅವನತಿಯ ಚಿತ್ರಣ. ಕೇಂದ್ರ ಹಾಗೂ ರಾಜ್ಯ ಸಂಬಂಧಗಳ ಕುರಿತು ನಾನಿ ಪಾಲ್ಖೀವಾಲಾ ಸಲ್ಲಿಸಿದ ವರದಿಯನ್ನು ಅಧ್ಯಯನ ಮಾಡುತ್ತಿದ್ದ ಪತ್ರಕರ್ತನೊಬ್ಬ ತನ್ನೂರಿನ ಸರಸ್ವತಿ ವಿಗ್ರಹ ಕಳವಾಗಿರುವ ಕುರಿತು ಅರಿಯುವುದರೊಂದಿಗೆ ಕಾದಂಬರಿ ಬಿಚ್ಚಿಕೊಳ್ಳುತ್ತದೆ.

ಏರಿಳಿತಗಳಿರುವ ಈ ಕೃತಿಯ ಉದ್ದಕ್ಕೂ ವೈಯಕ್ತಿಕ, ಧಾರ್ಮಿಕ ಹಾಗೂ ರಾಜಕೀಯ ಆಶಯಗಳು ಹೆಣೆದುಕೊಂಡಿರುವುದರಿಂದಲೇ ಅದು ಶಕ್ತಿಶಾಲಿಯಾಗಿದೆ. ಬಹುಶಃ ಆನಂತರದ ಕೃತಿಗಳಲ್ಲಿ ಹೆಚ್ಚು ಅಸಲೀತನ ಕಾಣುವುದು `ಸಾಕ್ಷಿ'ಯಲ್ಲಿ (1986). ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಪರಮೇಶ್ವರಯ್ಯನ ಮರಣಾನಂತರದ ಬದುಕನ್ನು ತೆರೆದಿಡುವ ಮೂಲಕ ಕಾದಂಬರಿ ಅನಾವರಣಗೊಳ್ಳುತ್ತದೆ. ಅವನಿಗೆ ತಾನು ಸತ್ಯ ಹೇಳಿಕೊಳ್ಳಲು ಎರಡನೇ ಅವಕಾಶ ದೊರೆಯುವುದು ಯಮದೇವನ ಆಸ್ಥಾನದಲ್ಲಿ. ಮನುಷ್ಯ ಹೇಗೆ ಮತ್ತೊಬ್ಬರಿಗೆ ಸುಳ್ಳು ಹೇಳುತ್ತಾನೆ ಎಂಬ ತಲ್ಲಣ ಹುಟ್ಟಿಸುವ, ವಿಚಲಿತರನ್ನಾಗಿಸುವ ವಿವರ ಇಲ್ಲುಂಟು.

2002ರಲ್ಲಿ ಮುದ್ರಣ ಕಂಡ, ಶಾಸ್ತ್ರೀಯ ಸಂಗೀತವನ್ನು ವಸ್ತುವಾಗಿ ಒಳಗೊಂಡಿದ್ದ `ಮಂದ್ರ' ಭೈರಪ್ಪನವರಿಗೆ ಮನ್ನಣೆ ತಂದಿತ್ತ ಮತ್ತೊಂದು ಕೃತಿ. ಇದಕ್ಕೆ ಪ್ರತಿಷ್ಠಿತ `ಸರಸ್ವತಿ ಸಮ್ಮಾನ್' ಪ್ರಶಸ್ತಿಯೂ ಬಂತು. ಈ ಹೊತ್ತಿಗೆ  ಎಸ್.ಎಲ್. ಭೈರಪ್ಪ ಅವರ ಬರಹದ ಬದುಕು ನಿಶ್ಶಬದ್ದ ಮತ್ತು ಗೌರವಪೂರ್ವಕ ಅಂತ್ಯದತ್ತ ಸಾಗುತ್ತಿದೆ ಎಂದು ಭಾಸವಾಯಿತು.

ನಂತರ ಬಂದದ್ದು `ಆವರಣ'. ಹಲವು ದಶಕಗಳಿಂದ ಭೈರಪ್ಪ ಬೋಧಿಸುವುದು ಕಲಾವಿದನ ಕರ್ತವ್ಯವಲ್ಲ ಎಂದು ಹೇಳುತ್ತಿದ್ದರು. 2007ರಲ್ಲಿ ಅವರು ತಮ್ಮದೇ ನಿಯಮಗಳನ್ನು ಮುರಿದರು. ತಾಂತ್ರಿಕವಾಗಿ ಅವರ 20ನೇ ಕಾದಂಬರಿಯಾದ `ಆವರಣ' ಒಂದು ಖಂಡನೆ-ಮುಸ್ಲಿಮರು ಹಿಂದೂಗಳು ಹಾಗೂ ಅವರ ಸಂಸ್ಕೃತಿಯ ಮೇಲೆ ತಲೆಮಾರುಗಳ ಕಾಲ ನಡೆಸಿದ ಪಾಪಕೃತ್ಯಗಳ ಪಟ್ಟಿ. ಕಾದಂಬರಿಯನ್ನು ಅನಂತಮೂರ್ತಿ ಟೀಕಿಸಿದರು, ಭೈರಪ್ಪನವರು ಅನಂತಮೂರ್ತಿ ಅವರೊಂದಿಗೆ ಬಹಿರಂಗ ಚರ್ಚೆಗೆ ಮುಂದಾದರು (ಪರಸ್ಪರರ ಮೇಲಿನ ವಾಗ್ದಾಳಿಗಳ ಸುದೀರ್ಘ ಇತಿಹಾಸವೊಂದು ಇಬ್ಬರಿಗೂ ಇದೆ).

ಬೆಸ್ಟ್ ಸೆಲ್ಲರ್ ಆಗಿಬಿಟ್ಟ `ಆವರಣ' ವೃದ್ಧರಾಗುತಿದ್ದ ಭೈರಪ್ಪನವರಿಗೊಂದು ಯುವ ಮತ್ತು ಬಲಪಂಥೀಯ ಅಭಿಮಾನಿಗಳ ಪಂಥವೊಂದನ್ನೇ ಗಳಿಸಿಕೊಟ್ಟಿತು. ಭೈರಪ್ಪನವರೀಗ ತಮಗೆ ದೊರೆತಿರುವ ಹಿಂದುತ್ವದ ವಕ್ತಾರನ ಪಾತ್ರವನ್ನು ಆನಂದಿಸುತ್ತಿರುವಂತೆ ಕಾಣಿಸುತ್ತದೆ. ಇತ್ತೀಚೆಗೆ ವಿಶ್ವವಿದ್ಯಾಲಯವೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದು ಬೇಡ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. `ಆವರಣ' ಎಂಬ ಪದ ಈಗ ಭೈರಪ್ಪನವರಿಗೆ ಏನಾಗಿದೆ ಎಂಬುದನ್ನು ವಿವರಿಸುತ್ತಿದೆ.

ದುರ್ಬಲ ಕಾದಂಬರಿಯೊಂದು ಲೇಖಕನನ್ನೇ ನುಂಗಿದೆ. ಜ್ಞಾನಪೀಠದಂಥ ಅತ್ಯುನ್ನತ ಪುರಸ್ಕಾರವೂ ದೊರೆಯದಂತಾಗಿದೆ ಮತ್ತು ಅಭಿಮಾನಿಬಳಗವೆಲ್ಲವೂ ಸಂಪೂರ್ಣ ಧರ್ಮಾಂಧರಿಂದಲೇ ತುಂಬಿಬಿಡುವ ಅಪಾಯದಲ್ಲಿ ಭೈರಪ್ಪ ಇದ್ದಾರೆ.
ಆಧುನಿಕ ಕನ್ನಡ ಕಾದಂಬರಿ ಸಂದರ್ಭದಲ್ಲಿ ಅನಂತಮೂರ್ತಿ ಹಾಗೂ ಭೈರಪ್ಪ ಎರಡು ವಿರುದ್ಧ ಧ್ರುವಗಳು. ಒಬ್ಬರು ಗಾಢವಾದ, ತೀವ್ರವಾದ ಹಾಗೂ ಸಹಾನುಭೂತಿಯಲ್ಲಿ ಎಡಪಂಥೀಯ ಉದಾರವಾದಿಯಾದ ಫ್ರೆಂಚ್ ಲೇಖಕ ಫ್ಲೊಬೇರ್‌ನಂತೆ (Flaubert) ತೋರಿದರೆ ಮತ್ತೊಬ್ಬರು ಸಮೃದ್ಧವಾದ, ಸ್ವಚ್ಛಂದವಾದ, ತಮ್ಮ  ರಾಜಕಾರಣವನ್ನು ಅನುಮಾನಿಸಬಹುದಾದ ಫ್ರೆಂಚ್‌ನ ಮತ್ತೊಬ್ಬ ಲೇಖಕ ಬಾಲ್ಜಾಕ್‌ನಂತೆ ಗೋಚರಿಸುತ್ತಾರೆ.

ಅನಂತಮೂರ್ತಿ ಉತ್ತಮ ಲೇಖಕರಾಗಿರಬಹುದು, ಆದರೆ ಭೈರಪ್ಪ ಕನ್ನಡ ಮಾತನಾಡುವವರ ಮಧ್ಯೆ ಹೆಚ್ಚು ಪ್ರೀತಿಪಾತ್ರರು. ಇಪ್ಪತ್ತು ವರ್ಷಗಳಿಗೂ ಹಿಂದೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಿದ್ಯಾರ್ಥಿಯಾಗಿದ್ದ ನನಗೆ ಕರ್ನಾಟಕದ ಕರಾವಳಿ ಭಾಗದವರಾದ ಅಲ್ಲಿನ ಶ್ರೀಮಂತ ವೈದ್ಯರೊಬ್ಬರ ಪರಿಚಯವಾಯಿತು. ಭಾರತಕ್ಕೂ ಆಸ್ಟ್ರೇಲಿಯಾಕ್ಕೂ ತುಲನೆ ಮಾಡುವ ಹೊತ್ತಿನಲ್ಲಿ ಅವರು ವಿಷಣ್ಣರಾಗುತ್ತಿದ್ದರು. ಆಗ  ಆ ವೈದ್ಯರು ತಾವು ಊರಿನಿಂದ ತಂದಿದ್ದ `ಪರ್ವ'ದ ಹಳೆಯ ಪ್ರತಿಯನ್ನು ತಿರುವಿ ಹಾಕುತಿದ್ದರು. ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಬಿಟ್ಟುಕೊಡದೆ ಭಾರತ ಕೂಡ ಪ್ರವರ್ಧಮಾನಕ್ಕೆ ಬರುವ ರಾಷ್ಟ್ರವಾಗಲಿದೆ ಎಂಬ ಆಶಾಭಾವವನ್ನು ಆ ವೈದ್ಯರಲ್ಲಿ ಮೂಡಿಸಿದ್ದು ಮಹಾಭಾರತವನ್ನು ಆಧುನೀಕರಣಗೊಳಿಸಿದ ಭೈರಪ್ಪನವರ ಕಾದಂಬರಿ.

ಸತತ ಐದು ದಶಕಗಳಿಂದ ಭೈರಪ್ಪನವರ ಸಮೃದ್ಧ ಕಲ್ಪನೆ ಹಾಗೂ ಆಳ ಅನುಭವದ ಕಾದಂಬರಿಗಳು ಓದುಗರಿಗೆ ತಮ್ಮ ಬದುಕಿನ ಕಷ್ಟದ ಸಂದರ್ಭಗಳನ್ನು ಎದುರಿಸಲು ನೆರವಾಗಿವೆ. ಈಗ ಅವರ ಋಣ ತೀರಿಸುವ ಹೊತ್ತು ಬಂದಿದೆ. ಈ ಮಹತ್ವದ ಭಾರತೀಯ ಲೇಖಕನ ಪರಂಪರೆಯನ್ನು ಅದು ಎದುರಿಸುತ್ತಿರುವ ಗಂಡಾಂತರದಿಂದ ರಕ್ಷಿಸಬೇಕಾಗಿದೆ: ಭೈರಪ್ಪ ಎಂಬ ಗಂಡಾಂತರದಿಂದ!
(ಸೌಜನ್ಯ: ಔಟ್‌ಲುಕ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT