ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲ!

Last Updated 17 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಮಾಂಸ ಬೇಯಿಸಲು, ಮಡಕೆ ಇಲ್ಲವೇ ಹಳೆಯ ಅಲ್ಯೂಮಿಯಂ ಪಾತ್ರೆಯನ್ನು ಬಳಸಲಾಗುತ್ತಿತ್ತು. ತೆಂಗಿನ ಚಿಪ್ಪಿನ ಸೌಟು ಕೆಲವು ಕಾಲವಿತ್ತು. ನಂತರ ಆ ಜಾಗಕ್ಕೆ ಕಬ್ಬಿಣದ ಸೌಟು ಬಂತು. ಊಟ ಮಾಡಲು ಎಲೆ ಬಳಸಲಾಗುತ್ತಿತ್ತು. ನೀರು ಕುಡಿಯಲು ಬಳಸುತ್ತಿದ್ದ ಲೋಟ ಚೆಂಬುಗಳನ್ನು ಅಡುಗೆ ಮನೆಯ ಇತರೆ ಪಾತ್ರೆಗಳಿಗೆ ಮುಟ್ಟಿಸುತ್ತಿರಲಿಲ್ಲ.

ಮಾಂಸ ಬೇಯಿಸಲು ಬಳಸುತ್ತಿದ್ದ ಒಲೆಯೂ ಬೇರೆಯದಾಗಿತ್ತು. ಅದಕ್ಕೆ ಒಂದು ಕಬ್ಬಿಣದ ಎತ್ತೊಲೆಯನ್ನು ಬಳಸಲಾಗುತ್ತಿತ್ತು. ಅಂತಹ ಒಲೆ ಮತ್ತು ಪಾತ್ರೆಗಳನ್ನು ದನದ ಕೊಟ್ಟಿಗೆಯಲ್ಲಿಡಲಾಗುತ್ತಿತ್ತು. ಈ ಪಾತ್ರೆಗಳನ್ನು ಮಾಂಸದ ಅಡುಗೆ ಮಾಡುವ ದಿನ ತೆಗೆದು ತೊಳೆದು ಬಳಸಲಾಗುತ್ತಿತ್ತು.  ಅವನ್ನು ಬೇರೆ ಯಾವುದಕ್ಕೂ ಬಳಕೆ ಮಾಡುತ್ತಿರಲಿಲ್ಲ. ಬಹುತೇಕ ವೇಳೆ ಊಟವೂ ದನದ ಕೊಟ್ಟಿಗೆಯಲ್ಲಿಯೇ ಆಗುತ್ತಿತ್ತು.

ಇಂದಿಗೂ ಈ ಪದ್ಧತಿಯನ್ನು ಆಚರಿಸುವ ಹಳ್ಳಿಮನೆಗಳಿವೆ. ನಗರಗಳ ಹಲವು ಮನೆಗಳಲ್ಲಿಯೂ ಇದನ್ನು ಕಾಣಬಹುದು. ಮಾಂಸದೂಟ ಮಾಡಿದ ಬಳಿಕ ಇಡೀ ಮನೆಗೆ ಮಜ್ಜನ ಮಾಡಿಸುತ್ತಾರೆ. ಸಾರಿಸಿ ಗುಡಿಸಿ ಮನೆಯನ್ನು  ಶುದ್ಧ  ಮಾಡುತ್ತಾರೆ. ತಿನ್ನಲು ಹೊತ್ತು, ದಿನ, ತಿಂಗಳುಗಳನ್ನು ಗುರುತಿಸಲಾಗಿದೆ. ಈಚೆಗೆ ಮಾಧ್ಯಮಗಳ ಹಾವಳಿ ಹೆಚ್ಚಾದಂತೆ ಬುಧವಾರ ಭಾನುವಾರಗಳು ಬಾಡು ತಿನ್ನಲಾಗದ ದಿನಗಳಾಗಿವೆ.

ಮೊದಲು ವಿಷ್ಣುವಿನ ಆರಾಧಕರು ಶನಿವಾರ, ಶಿವನ ಆರಾಧಕರು ಸೋಮವಾರ ಬಿಟ್ಟು ಉಳಿದಂತೆ ಎಲ್ಲ ದಿನಗಳಲ್ಲಿ ಮಾಂಸ ತಿನ್ನುತ್ತಿದ್ದರು. ಈಗ ಲಕ್ಷ್ಮೀ, ರಾಘವೇಂದ್ರ, ಸತ್ಯನಾರಾಯಣ ಮುಂತಾದ ದೇವರು ಮತ್ತು ವ್ರತಗಳ ಸಂಖ್ಯೆ ಹೆಚ್ಚಿದಂತೆ ಮಾಂಸಾಹಾರ ಸೇವನೆಯ ದಿನಗಳಿಗೂ, ತಿಂಗಳುಗಳಿಗೂ ಕತ್ತರಿ ಬಿದ್ದಿದೆ. ಮಾಂಸಾಹಾರದ ಬಗೆಗೆ ಮಡಿ ಭಾವನೆ ಹೆಚ್ಚಾಗುತ್ತಿದೆ.

ಕೆಲವು ಜೋತಿಷಿಗಳಂತೂ ಮಾಂಸಾಹಾರವನ್ನು ನಿಷೇಧಿಸುವಂತೆ ಒತ್ತಡ ಹೇರುತ್ತಾರೆ. ದುಡಿಯವ ವರ್ಗಕ್ಕೆ ಮಾಂಸ ಮುಖ್ಯ ಆಹಾರ. ಆದರೂ ಮಾಂಸಾಹಾರಿಗಳು ಅದನ್ನು `ಹೊಲಸು'  ಎಂದು ನಂಬಲು ಕಾರಣವೇನು?  ಆಹಾರವನ್ನು ಹೊಲಸು ಎಂಬ ನುಡಿಗಟ್ಟಿನ ಮೂಲಕ ಗುರುತಿಸುವಂತಾದ ನಂತರ ಅದರ ಸಾಮಾಜಿಕ, ಸಾಹಿತ್ಯಿಕ, ಭಾಷಿಕ ಪರಿಣಾಮಗಳೇನು? ಎಂಬ ಪ್ರಶ್ನೆಗಳು ಇಲ್ಲಿ ಮುಖ್ಯವಾಗಬೇಕಿದೆ.

ಮೊದಲಿಗೆ ಕರ್ನಾಟಕದಲ್ಲಿ ಮಾಂಸಾಹಾರ ಹೊಲಸಾದ ಬಗೆಯನ್ನು ಗಮನಿಸಬಹುದು. ಇದಕ್ಕಾಗಿ ಇಂದು ಬಳಕೆಯಲ್ಲಿರುವ ಕೆಲವು ಪದಕಟ್ಟುಗಳನ್ನು ಗಮನಿಸಲೇಬೇಕು.

ಸಾತ್ವಿಕ ಆಹಾರ-ತಾಮಸಿಕ ಆಹಾರ; ಶಾಖಾಹಾರ-ಮಾಂಸಾಹಾರ; ಕಚ್ಚಾಹಾರ-ಪಕ್ಕಾಹಾರ ಇತ್ಯಾದಿ. ಇವು ಆಹಾರದ ವರ್ಗೀಕರಣವನ್ನು ಸೂಚಿಸುವ ಪದಗಳಷ್ಟೇ ಅಲ್ಲ. ಆಹಾರ ಆಧಾರಿತ ಮೇಲು ಕೀಳನ್ನೂ ಸೂಚಿಸುವ ಪದಗಳೂ ಹೌದು. ಸಾತ್ವಿಕ ಆಹಾರ ಶ್ರೇಷ್ಠ, ತಾಮಸಿಕ ಆಹಾರ ಕನಿಷ್ಠವೆಂಬ ಸಾಮಾಜಿಕ ತಿಳಿವಳಿಕೆಗಳಿವೆ.

ಮಾಂಸಾಹಾರವನ್ನು ತಾಮಸಿಕ ಆಹಾರವೆನ್ನಲಾಗಿದೆ. ಹಾಗೆಯೇ ಹಿಂದುಳಿದ, ಅಸ್ಪೃಶ್ಯ ಜಾತಿಗಳ,  ಮುಸ್ಲಿಮರ ಮತ್ತು ಕ್ರೈಸ್ತರ ಆಹಾರವನ್ನಾಗಿಯೂ ಗುರುತಿಸಲಾಗಿದೆ. ಮಾಂಸಾಹಾರದ ಮೂಲಕವೇ ಜಾತಿಯನ್ನು ಗುರುತಿಸುವ ಪದ್ಧತಿಯಿದೆ. ನಗರದಲ್ಲಿ ಬಾಡಿಗೆ ಮನೆ ಕೇಳುವಾಗ `ನೀವು ವೆಜ್ಜೋ, ನಾನ್‌ವೆಜ್ಜೋ' ಎಂದು ಕೇಳುವ ಪ್ರಶ್ನೆಗಳೇ ಇದನ್ನು ಸ್ಪಷ್ಟಪಡಿಸುತ್ತವೆ.

ಮೊದಲಿಗೆ ಈ ಆಹಾರ ವಿಭಜನೆ ಎಂಬುದು ವೈದಿಕ ಎಂದು ಗುರುತಿಸಬಹುದಾದ ಪುರಾಣಗಳಿಂದ ಆರಂಭವಾದಂತಿದೆ. ಪುರಾಣಗಳಲ್ಲಿ ಋಷಿಗಳು ಸಾತ್ವಿಕ ಆಹಾರನ್ನೂ ರಾಕ್ಷಸರು ತಾಮಸಿಕ ಆಹಾರವನ್ನೂ ತಿನ್ನುವವರು ಎಂಬಂತೆ ಚಿತ್ರಿಸಲಾಗಿದೆ. ಮಾಂಸಾಹಾರ ಸೇವಿಸುವ ಕಾರಣಕ್ಕಾಗಿಯೇ ಅವರು ರಾಕ್ಷಸರಾದರು ಎಂಬಂಥ ವ್ಯಾಖ್ಯಾನಗಳಿವೆ. ಮಾಂಸ ತಿಂದರೆ ರಾಕ್ಷಸ ಭಾವನೆಗಳು ಬೆಳೆಯುತ್ತವೆ ಎಂಬ ಮೂಢನಂಬಿಕೆ ಇಂದಿಗೂ ಜನರಲ್ಲಿದೆ.

ವೈದಿಕ ಜನ್ಯ ಆಹಾರಾಧಾರಿತ ಸಾಮಾಜಿಕ ವಿಭಜನೆಯ ಹಂತದ ನಂತರ ಕರ್ನಾಟಕದಲ್ಲಿ ಹೆಚ್ಚು ವ್ಯಾಪಕವಾಗಿದ್ದ ಜೈನ ಧರ್ಮ ಕೂಡಾ ಸಸ್ಯಾಹಾರ ಪದ್ಧತಿಯನ್ನು ಕಠೋರವಾಗಿ ಪಾಲಿಸಿತು. ವಚನ ಚಳವಳಿ ಕೂಡ ಮಾಂಸಾಹಾರವನ್ನು ತಾಮಸಿಕ ಆಹಾರ ಎಂದೇ ನಂಬಿತ್ತು.

ವಚನಕಾರರು  `ಹೊಲಸು ತಿಂಬುವನೇ ಹೊಲೆಯ' ಎಂದು ಹೇಳತೊಡಗಿದ್ದರು. ಅಲ್ಲದೆ ಬೆಳ್ಳುಳ್ಳಿ, ಈರುಳ್ಳಿ, ನುಗ್ಗೇಕಾಯಿಗಳು ನಿಷೇಧಿತ ಆಹಾರ ಪದಾರ್ಥಗಳಾದವು! ಇದನ್ನು ಕಾಳವ್ವೆಯಂತಹ ಕೆಳಜಾತಿಗಳಿಂದ ಬಂದ ವಚನಕಾರರು ವಿರೋಧಿಸಿದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.

ನಂತರ ಬಂದ ವೈದಿಕ ಭಕ್ತಿಪಂಥವೂ ಮಾಂಸಾಹಾರವನ್ನು ನಿಷೇಧಿಸಿತು. ರಾಮಾನುಜರು ಶೂದ್ರರನ್ನು ಉದ್ಧಾರ ಮಾಡುವ ಭಾಗವಾಗಿ ಕೈಗೊಂಡ ಸುಧಾರಣೆಗಳು ಮಾಂಸಾಹಾರವನ್ನು ಜರಿದವು. ಈ ನಡುವೆ ಹದಿನೈದನೆಯ ಶತಮಾನದ ನಂತರ ಕಾಣಿಸಿಕೊಂಡ ಮಂಟೇಸ್ವಾಮಿ ಪರಂಪರೆ ಮಾತ್ರ ಮಾಂಸಾಹಾರವನ್ನು ಘನತೆಯಿಂದ ಕಂಡಿತು.
ಹಾಗಾಗಿಯೇ ಇಂದಿಗೂ ಕೂಡ ಮಂಟೇಸ್ವಾಮಿ ಪರಂಪರೆಯಲ್ಲಿ ಮಾಂಸಾಹಾರಕ್ಕೆ ವಿಶೇಷ ಮಹತ್ವವಿದೆ.

ಕಳೆದ ಎರಡು ಸಹಸ್ರಮಾನಗಳ ಕರ್ನಾಟಕದ ಚರಿತ್ರೆಯನ್ನು ಗಮನಿಸಿದರೆ ಮಾಂಸಾಹಾರದ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಹಲ್ಲೆ ನಡೆಯುತ್ತಲೇ ಇದೆ. ಈ ಹಲ್ಲೆಗಳಿಂದ ದುಡಿವ ಜನರು ಇಕ್ಕಟ್ಟಿನ ಕಂಬಚ್ಚಿನಲ್ಲಿ ಹಾಯುತ್ತ ಮಾಂಸಾಹಾರವನ್ನು ಪೂರ್ಣಬಿಡಲಾಗದೆ, ಅದನ್ನು ಹೆಮ್ಮೆಯಿಂದ ಬಳಸಲಾಗದೆ, ಹೊಲಸೆಂದು ನಂಬುತ್ತಲೇ ತಮ್ಮ ಆಹಾರವಾಗಿ ಇಂದಿಗೂ ಉಳಿಸಿಕೊಂಡಿದ್ದಾರೆ. ಈ  ಹೊಲಸು  ಪದ್ಧತಿಯಿಂದ ಹೊರಬರಲು ಯತ್ನಿಸಿದವರು ವೀರಶೈವರೋ ಜೈನರೋ ಆಗಿ ಬದಲಾದ ಅಥವಾ ಬ್ರಾಹ್ಮಣೀಕರಣಗೊಂಡ ವಿದ್ಯಮಾನ ನಡೆದಿದೆ.

ಎರಡನೆಯದಾಗಿ, ಮೇಲೆ ಗಮನಿಸಿದಂತೆ ಕರ್ನಾಟಕದ ಧಾರ್ಮಿಕ ಚರಿತ್ರೆಯ ಜೊತೆ ಜೊತೆಗೇ ಸಾಹಿತ್ಯ ಚರಿತ್ರೆಯನ್ನೂ ಗ್ರಹಿಸಬೇಕಾಗುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯ ಸೃಷ್ಟಿಯಾಗಿದ್ದೇ ಧರ್ಮಗಳ ಪ್ರತಿಪಾದಕರು ಮತ್ತು ಅದರ ಅನುಯಾಯಿಗಳಿಂದ. ಅವರು ತಮ್ಮ ಧಾರ್ಮಿಕ ವಿಚಾರಗಳನ್ನೇ ಮುಖ್ಯಧಾರೆಗೆ ತರಲು ಯತ್ನಿಸುತ್ತಿದ್ದಾಗ ಅದಕ್ಕೆ ವಿರುದ್ಧವಿರುವ ಲೋಕದ ಸಂಗತಿಗಳನ್ನು ತಮ್ಮ ಸಾಹಿತ್ಯದಲ್ಲಿ ನಮೂದಿಸಲು ಹಿಂದೆಗೆದಿರುವ ಸಾಧ್ಯತೆಗಳೇ ಹೆಚ್ಚು.

ಅಂದರೆ ಧರ್ಮ ರೂಪಿಸಿದ ವಿಧಿಗಳಲ್ಲಿ ಸಾಗುವ ಮತ್ತು ಅಂತಹ ಧರ್ಮಗಳ ಕಟ್ಟಾ ಅನುಯಾಯಿಗಳಾದವರು ಮಾಂಸಾಹಾರದ ಬಗೆಗೆ ಮೃದುಧೋರಣೆ ತಾಳಲು ಸಾಧ್ಯವೇ ಇರಲಿಲ್ಲ. ಇದರಾಚೆಗೆ ಮಾಂಸಾಹಾರ ಅವರ ಅನುಭವ ಲೋಕದ ಹೊರತಾಗಿದ್ದರಿಂದ ಆ ಬಗೆಗಿನ ಅರಿವನ್ನು ಸಾಹಿತ್ಯದೊಳಗೆ ಅವರು ತರುವ ಸಾಧ್ಯತೆಯೇ ಇರಲಿಲ್ಲ.

ಜಾತಿ ಹಿನ್ನೆಲೆಯಿಂದ ನೋಡಿದಾಗಲೂ ಮಾಂಸಾಹಾರ ಮಾಡದ ಮೇಲು ಜಾತಿಗಳವರೇ ಮೊದಲ ಹಂತದಲ್ಲಿ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದರು ಹಾಗಾಗಿ ಮಾಂಸಾಹಾರ ಸಂಬಂಧಿಯಾದ ಅರಿವು ಮತ್ತು ನುಡಿಗಟ್ಟು ಆ ಸಾಹಿತ್ಯದಲ್ಲಿ ಮತ್ತು ಪದಕೋಶಗಳಲ್ಲಿ ನಮೂದಾಗುವ ಸಾಧ್ಯತೆಗಳಿರಲಿಲ್ಲ.

ಕುಮಾರವ್ಯಾಸನ  `ಹರನೇತ್ರ ವಹ್ನಿಯೊಳ್ ಅಡಬಳ(ಮಾಂಸ)ವ ಸುಡುಬಗೆದೆಲಾ...'  ಎಂಬಂತಹ ಕೆಲವು ರೂಪಕದ ಸಾಲುಗಳನ್ನು ನೋಡಬಹುದಷ್ಟೇ. ಅಂದರೆ ಮಾಂಸಾಹಾರಕ್ಕೆ ಸಂಬಂಧಿಸಿದ ಅರಿವು ಮತ್ತು ಆ ಬಗೆಗಿನ ಪದಸಂಪತ್ತು ಕನ್ನಡ ಸಾಹಿತ್ಯದ ಮುಖ್ಯವಾಹಿನಿಯೊಳಗೆ ಸೇರಲು ಬೇಕಾದ ಪೂರಕ ವಾತಾವರಣವೇ ಇರಲಿಲ್ಲ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹೆಚ್ಚುಜನರ ಬದುಕಿನ ಭಾಗವಾಗಿರುವುದು ಮಾಂಸಾಹಾರ. ವಿವಿಧ ಬಗೆಯ ಮಾಂಸದ ಅಡುಗೆಗಳು, ರುಚಿಗಳು, ಅವುಗಳನ್ನು ತಯಾರಿಸುವ ವಿಧಾನದ ಅರಿವು; ಖಾದ್ಯಕ್ಕೆ ಬೇಕಾದ ಮಾಂಸಕ್ಕೆ ಬಳಕೆಯಾಗುವ ಪ್ರಾಣಿಗಳು, ಪಕ್ಷಿಗಳು, ಅವುಗಳ ತಳಿಗಳು, ಮಾಂಸದ ಗುಣಗಳು ಹಾಗೂ ಅವುಗಳ ಬಳಕೆಯ ವಿಧಾನ ಇತ್ಯಾದಿಗಳನ್ನು ಕುರಿತ ಅರಿವು ಅಪಾರವಾಗಿರುತ್ತದೆ.

ಅದು ಸಮುದಾಯದ ಅರಿವೇ ಆಗಿರುತ್ತದೆ. ಅಲ್ಲದೆ ಅದು ಸಾವಿರಾರು ವರ್ಷಗಳಲ್ಲಿ ಬೆಳೆದ ಜ್ಞಾನವಾಗಿದ್ದು ಅದಕ್ಕೊಂದು ಪರಂಪರೆಯೂ ಇರುತ್ತದೆ. ಆದರೆ ಈ ಅರಿವಿನ ಬಗೆಗೆ ನಮ್ಮಲ್ಲಿ ಅವಜ್ಞೆಯೇ ಹೆಚ್ಚು. ಇಂತಹ ಅವಜ್ಞೆ ಮಾಂಸಾಹಾರಿಗಳಲ್ಲಿಯೂ ಇದೆ. ಜಾಗತೀಕರಣದ ಪರಿಣಾಮವಾಗಿ ಹೊಸದಾಗಿ ಸೇರಿಕೊಂಡಿರುವ ವಿದೇಶಿ ಹೋಟೆಲ್‌ಗಳು ನಮ್ಮ ಮಾಂಸದಡುಗೆಯ ರುಚಿಗಳನ್ನೆ ನಾಶಮಾಡುತ್ತಿವೆ. ಈ ಬಗೆಗಿನ ತಿಳುವಳಿಕೆಯನ್ನು, ನಾಲಗೆಯನ್ನು ತಿದ್ದುತ್ತಿವೆ.

ಮಾಂಸಾಹಾರದ ಕುರಿತ ಕೀಳರಿಮೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗಳೂ ಕಾರಣವಾಗಿವೆ. ಮಾಂಸಾಹಾರವನ್ನು ಬದುಕಿನ ಭಾಗವಾಗಿ ಮಾಡಿಕೊಂಡಿದ್ದ ವರ್ಗ ಬಹುಕಾಲ ಅಕ್ಷರದಿಂದ ದೂರವಿತ್ತು. ಅಕ್ಷರಲೋಕಕ್ಕೆ ತೆರೆದುಕೊಂಡ ಮೇಲೂ ತಮ್ಮ ಬದುಕಿನ ಅನುಭವಗಳನ್ನು ದಿಟ್ಟವಾಗಿ ಹೇಳಿಕೊಳ್ಳಲು ಅವರನ್ನು ಹಿಂಜರಿಕೆ ಕಾಡಿತು.

ಕುವೆಂಪು, ತೇಜಸ್ವಿ ಮತ್ತು ದಲಿತ-ಬಂಡಾಯದ ಚಳವಳಿಗಳ ಪ್ರಭಾವದಿಂದ ಸಾಹಿತ್ಯ ರಚಿಸಿದ ಕೆಲವರು ತಮ್ಮ ಕಥನ ಕ್ರಮದಲ್ಲಿ ಮಾಂಸಾಹಾರಕ್ಕೆ ಒಂದು ಸ್ಥಾನವನ್ನು ಒದಗಿಸಿಕೊಟ್ಟರು. ಆದರೂ ಕನ್ನಡದ ಮಾಂಸಾಹಾರಿ ಪದಕೋಶವನ್ನು ಪುನರುಜ್ಜೀವನಗೊಳಿಸುವಂಥ ಸಾಹಿತ್ಯದ ರಚನೆ ಇಂದಿಗೂ ಆಗಿಲ್ಲ ಮತ್ತು ಆಗುತ್ತಿಲ್ಲ.

  ನಮ್ಮ ಪದಕೋಶಗಳು ಪ್ರಧಾನವಾಗಿ ಬರಹರೂಪದಲ್ಲಿರುವ ಆಕರಗಳನ್ನು ಆಧರಿಸಿ ರೂಪಿಸಿದ ಪರಿಣಾಮವಾಗಿಯೂ ಮೌಖಿಕ ಸಮುದಾಯಗಳ ಪದ ಸಂಪತ್ತು ಕನ್ನಡದ ಮುಖ್ಯಧಾರೆಗೆ ಸೇರಿಕೆಯಾಗಲಿಲ್ಲ. ಇಂತಹ ವಿದ್ಯಮಾನಗಳ ಪರಿಣಾಮವಾಗಿ ಕನ್ನಡ ಪದಕೋಶದಲ್ಲಿ ಸಾಹಿತ್ಯದಲ್ಲಿ ಮಾಂಸಾಹಾರದ ಬಗೆಗಿನ ಪದಗಳು ನುಡಿಗಟ್ಟುಗಳು ದೊರೆಯುವುದಿಲ್ಲ; ಅದರ ವೈವಿಧ್ಯಮಯವಾದ ಬಗೆಗಳಿಗೆ ಸಂಬಂಧಿಸಿದ ಪದಗಳೇ ನಮೂದಾಗಿಲ್ಲ. ನಮೂದಾಗಿರುವ ಪದಗಳೆಲ್ಲ ಮಾಂಸ, ಬಾಡು ಇತ್ಯಾದಿ ಸಾಮಾನ್ಯ ಪದಗಳು ಮಾತ್ರ. `ಅಗ್ರಮಾಂಸ'  ಎಂಬ ಒಂದು ಪದವಿದೆ.

ಅಗ್ರಮಾಂಸವೆಂದರೆ ಹೃದಯದ ಮಾಂಸ ಎಂದು ಅರ್ಥ. ಬಹುಶಃ ಇದು ಯಜ್ಞಗಳ ಸಂದರ್ಭದಲ್ಲಿ ನೀಡುತ್ತಿದ್ದ ಆತಿಥ್ಯದ ವೇಳೆ ಮಾಂಸದ ಯಾವ ಭಾಗವನ್ನು ಯಾರಿಗೆ ನೀಡಬೇಕು ಎಂಬ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ರೂಪಿತವಾಗಿರುವ ಸಂಸ್ಕೃತ ಮೂಲದ ಪದವಾಗಿದೆ. ಇಂತಹ ಒಂದೆರಡು ಪದಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಮಾಂಸಾಹಾರ ಸಂಬಂಧಿಯಾದ ಪದಗಳು ವಿರಳ. 

ವಿವಿಧ ರುಚಿಗಳು, ಬಗೆಗಳು ಮತ್ತು ವಿಧಾನಗಳ ಅರಿವನ್ನು ನೀಡುವ ಮಾಂಸಾಹಾರ ಸಂಬಂಧೀ ಪದಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಹಂಚಿಹೋಗಿವೆ. ಅಂತಹ ಪದಗಳನ್ನು ಹುಡುಕಿ ಕನ್ನಡದ ಪದಸಂಪತ್ತಿಗೆ ಇಂದು ಸೇರಿಸಬೇಕಿದೆ. ಆ ಮೂಲಕ ಕರ್ನಾಟಕದ ಜನರ ಸಂಸ್ಕೃತಿಯ ಭಾಗವಾಗಿರುವ ಆಹಾರ ಸಂಸ್ಕೃತಿಯ ಅರಿವನ್ನು ಕನ್ನಡದ ಪ್ರಧಾನ ಧಾರೆಗೆ ತರಬೇಕಿದೆ.

ಈಚೆಗೆ ನಮೂದಾಗುತ್ತಿರುವ ಮಾಂಸಾಹಾರದ ನುಡಿಗಟ್ಟುಗಳೆಲ್ಲ ಇಂಗ್ಲಿಷ್ ಮತ್ತು ಚೈನೀಸ್ ಮೂಲದ ಪದಗಳು. ಇದು ಮಾಂಸದ ಅಡುಗೆಯ ಬಗೆಗಳು, ಅದರ ಅರಿವು ಮತ್ತು ಆ ಪದಕೋಶ ಕನ್ನಡ ನಿಘಂಟಿನ ಒಳಗೆ ಸೇರಿಕೆಯಾಗಬೇಕಾದ, ಆ ನೆಲೆಯಲ್ಲಿ ಕನ್ನಡವೂ ಬೆಳೆಯಬೇಕಾದ ಅಗತ್ಯ ಇರುವುದನ್ನು ಸೂಚಿಸುತ್ತದೆ. ಇಲ್ಲವಾದರೆ, ವಿದೇಶಿ ಉದ್ಯಮಗಳಿಗೆ ಮಾರುಕಟ್ಟೆ ಬಿಟ್ಟುಕೊಟ್ಟಂತೆ ಪದಕೋಶಗಳಲ್ಲಿ ಅನ್ಯಭಾಷೆಯ ಪದಗಳಿಗೆ ಜಾಗ ಬಿಟ್ಟುಕೊಟ್ಟು ಕನ್ನಡ ಅವುಗಳ ಕಾವಲು ಕಾಯಬೇಕಾಗುತ್ತದೆ.

ಈಗ ಮಾಂಸಾಹಾರದ ಮೇಲಿನ ಹಲ್ಲೆ ಮತ್ತೊಂದು ರೀತಿಯಲ್ಲಿ ನಡೆಯುತ್ತಿದೆ. ಪುಣ್ಯಕೋಟಿಯ ಕಥನ ಕವಿತೆಯ ಕೊನೆಯ ಭಾಗವನ್ನೇ ತಿದ್ದಿ ಹುಲಿ ಸಾಯುವ ಮೊದಲು ದನದ ಮಾಂಸ ತಿನ್ನುವುದಕ್ಕಿಂತ ಸಾಯುವುದೇ ಲೇಸು ಎಂದು ಹೇಳಿದಂತೆ ಬದಲಾಯಿಸಿದ್ದು ಒಂದು ಉದಾಹರಣೆ ಮಾತ್ರ.  ದನದ ಬಾಡು ತಿನ್ನುವುದನ್ನು ನಿಷೇಧಿಸುವಂತೆ ಒತ್ತಡ ತರಲಾಗುತ್ತಿದೆ. ಈ ನಿಷೇಧ ದನದ ಮಾಂಸದ ಖಾದ್ಯದ ನುಡಿಗಟ್ಟನ್ನೂ ನಿಷೇಧಿಸುತ್ತದೆ. ಒಂದು ಆಹಾರ ಕ್ರಮ ನಿಂತರೆ ಅದರ ನುಡಿಗಟ್ಟು ನಾಶವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT