ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಮೊದಲ ಧರ್ಮ ಲಿಂಗಾಯತ: ಕಲಬುರ್ಗಿ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾಚೀನ ಕರ್ನಾಟಕದಲ್ಲಿ ವೃತ್ತಿ­ಮೂಲದ ಜಾತಿಗಳು ಮಾತ್ರ ಇದ್ದವೇ ವಿನಾ ಧರ್ಮಗಳು ಇರಲಿಲ್ಲ. ವಚನ­ಕಾರರು ಸೃಜಿಸಿದ ಲಿಂಗಾಯತ ಧರ್ಮವೇ ಕನ್ನಡಿಗರು ಹುಟ್ಟುಹಾಕಿದ ಮೊಟ್ಟಮೊದಲ ಧರ್ಮ’ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಪ್ರತಿಪಾದಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತು ಜತೆಯಾಗಿ ಏರ್ಪಡಿಸಿರುವ ‘ವಚನ ಚಳವಳಿ ಗುರಿ – ಪರ್ಯಾಯ ಸಂಸ್ಕೃತಿ’ ಕುರಿತ ಮೂರು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ನಾಡಿನಲ್ಲಿ ಶ್ರೀವೈಷ್ಣವ ಮತವೂ ಇದೆ. ಅದರ ಮೂಲ ತಮಿಳು­ನಾಡು. ಮಾಧ್ವ ಧರ್ಮದ ಉದಯವೂ ಈ ನಾಡಿನಲ್ಲಿ ಆಗಿದೆ. ಆದರೆ, ಅದು ಜನ್ಮತಾಳಿದ್ದು 13ನೇ ಶತಮಾನದಲ್ಲಿ. ಹೀಗಾಗಿ ಲಿಂಗಾಯತ ಧರ್ಮವೇ ಕನ್ನ­ಡದ ಮೊದಲ ಧರ್ಮ’ ಎಂದರು.

‘ಬೌದ್ಧ, ಜೈನ, ವೈದಿಕ ಹಾಗೂ ಶೈವ ಉತ್ತರ ಭಾರತದಿಂದ ರಾಜ್ಯಕ್ಕೆ ವಲಸೆ ಬಂದ ಧರ್ಮಗಳಾಗಿವೆ. ಆತ್ಮ–ಪರಮಾತ್ಮ ಎರಡರಲ್ಲೂ ನಂಬಿಕೆ ಇಲ್ಲದ ಬೌದ್ಧ ಧರ್ಮ ರಾಜ್ಯದಲ್ಲಿ ಬಹುಬೇಗ ನಾಶವಾಯಿತು. ಕೇವಲ ಆತ್ಮವಾದಿ­ಯಾದ ಜೈನಧರ್ಮ ಅರೆಜೀವ ಹಿಡಿದು ಉಳಿಯಿತು. ಆದರೆ, ವೈದಿಕ ಮತ್ತು ಶೈವ ಧರ್ಮಗಳು ಬಲಾಢ್ಯವಾಗಿ ಬೆಳೆದು ಎಲ್ಲರನ್ನೂ ಆಳುತ್ತಾ ಬಂದವು’ ಎಂದು ವಿಶ್ಲೇಷಿಸಿದರು.

‘ಬ್ರಾಹ್ಮಣರಲ್ಲಿ ಎರಡು ವಿಧ. ವೈದಿಕ ಬ್ರಾಹ್ಮಣರದು ಒಂದು ಪಂಗಡವಾದರೆ, ಆಗಮಿಕ ಶೈವ ಬ್ರಾಹ್ಮಣರದು ಮತ್ತೊಂದು ಪಂಗಡ. ಈ ಎರಡನೇ ಪಂಗಡದವರನ್ನು ಲಿಂಗಿ ಬ್ರಾಹ್ಮಣರು ಎಂದೂ ಕರೆಯಲಾಗುತ್ತಿತ್ತು. ಅವರಿಗೆ ಜನಿವಾರ ಕಡ್ಡಾಯವಾದರೆ, ಲಿಂಗ­ಧಾರಣೆ ಐಚ್ಛಿಕವಾಗಿತ್ತು. ಬಸವಣ್ಣ ಈ ಪಂಗಡಕ್ಕೆ ಸೇರಿದ ವ್ಯಕ್ತಿ. ಇದುವರೆಗೆ ಆತ ವೈದಿಕ ಬ್ರಾಹ್ಮಣ ಎಂಬ ನಂಬಿಕೆಯೇ ಹರಡಿತ್ತು’ ಎಂದು ವಿವರಿಸಿದರು.

‘ವಲಸೆ ಬಂದ ಧರ್ಮಗಳು ನಮ್ಮ ಸಾಹಿತ್ಯ ಹಾಗೂ ಜೀವನ ಕ್ಷೇತ್ರ ಎರಡರ ಮೇಲೂ ಗಾಢ ಪ್ರಭಾವ ಬೀರಿದವು. ಉತ್ತರ ಭಾರತದ ರಾಮಾಯಣ, ಮಹಾಭಾರತ, ತೀರ್ಥಂಕರರ ಪುರಾಣ­ಗಳನ್ನೇ ಓದುವುದು ಕನ್ನಡಿಗರಿಗೆ ಅನಿ­ವಾರ್ಯವಾಯಿತು. ಅವುಗಳಿಂದ ನಮ್ಮ ಅರಿವು ವಿಸ್ತಾರವಾದರೂ ಅಸ್ಮಿತೆ ನಾಶ­ವಾಯಿತು’ ಎಂದು ವಿಷಾದದಿಂದ ಹೇಳಿದರು.

‘ಧರ್ಮಗಳ ದಬ್ಬಾಳಿಕೆ ಹೆಚ್ಚಾದಾಗ ಬಸವಣ್ಣ ಬಂಡಾಯ ಹೂಡಿದ. ತಳ ಸಮುದಾಯಗಳನ್ನೂ ತನ್ನ ಬಂಡಾಯ­ದಲ್ಲಿ ತೊಡಗಿಸಿಕೊಂಡ. ವಿಸ್ಮೃತಿಯಾ­ಗಿದ್ದ ಅಸ್ಮಿತೆಯನ್ನು ಜಾಗೃತಿಗೊಳಿಸಿದ. ಅದರ ಪರಿಣಾಮವೇ ಲಿಂಗಾಯತ ಧರ್ಮದ ಉದಯ’ ಎಂದು ವಚನ ಚಳವಳಿ ಮೇಲೆ ಬೆಳಕು ಚೆಲ್ಲಿದರು.

‘ವೈದಿಕ ಧರ್ಮ ಸೋಹಂ (ನಾನೇ ದೇವರು) ಎಂದರೆ, ಲಿಂಗಾಯತ ಧರ್ಮ ದಾಸೋಹಂ (ದೈವಿ ವ್ಯಕ್ತಿತ್ವದ ಸಾಮಾಜಿಕರಣ) ತತ್ವವನ್ನೇ ತನ್ನ ಧ್ಯೇಯ ಮಾಡಿಕೊಂಡಿತು. ಲಿಂಗ ಆಗುವ ಜತೆಗೆ ಜಂಗಮವೂ ಆಗಬೇಕೆನ್ನುವುದು ಅದರ ಗುರಿ. ಮತಾಂತರಕ್ಕೆ ಎಂದಿಗೂ ಬಸವಣ್ಣ ಪುಷ್ಟಿ ನೀಡಲಿಲ್ಲ. ಮತ ನಿರಸನವನ್ನು ಮಾತ್ರ ಆತ ಪ್ರೋತ್ಸಾಹಿಸಿದ’ ಎಂದು ವಿವರಿಸಿದರು.

ಮತ್ತೊಬ್ಬ ಸಂಶೋಧಕ ಡಾ.ಪಿ.ವಿ. ನಾರಾಯಣ, ‘ರಾಜತ್ವದ ದೈವೀಕರಣದ ದುರಂತ ಹಾಗೂ ಜಾತಿ ದುರಂತದ ವಿರುದ್ಧ ಕೆಳವರ್ಗದ ಕೆನೆ ಒಗ್ಗೂಡಿದ ಪರಿಣಾಮವೇ ವಚನ ಚಳವಳಿ’ ಎಂದು ಹೇಳಿದರು. ‘ದೇವಾಲಯದ ಭ್ರಷ್ಟಾಚಾರ ಹಾಗೂ ಸಾಮಾಜಿಕ ಶ್ರೇಣೀಕರಣದ ವಿರುದ್ಧದ ಕೂಗು ಆಗ ಹೋರಾಟದ ರೂಪವನ್ನು ತಾಳಿತ್ತು’ ಎಂದು ಅಭಿಪ್ರಾಯಪಟ್ಟರು.

‘ಬಸವಣ್ಣ ಹಿಂದೆ ಯಾವುದನ್ನು ವಿರೋಧಿಸಿದ್ದನೋ ಅದೇ ಸಂಗತಿ ಇಂದಿನ ಜನಕ್ಕೆ ಅಪ್ಯಾಯಮಾನವಾಗಿದೆ. ವ್ಯಕ್ತಿಗತ ವೈಭವೀಕರಣವನ್ನು ಆತ ವಿರೋಧಿಸಿದ್ದ. ಆತನನ್ನು ಹಾಡಿ­ಹೊಗಳಲು ಬಸವ­ಪುರಾಣ­ವನ್ನೇ ರಚಿಸಿದ್ದೇವೆ. ದೇವಾಲಯ ಸಂಸ್ಕೃ­ತಿಗೂ ಆತ ವಿರೋಧವಾಗಿದ್ದ. ಬಸವ­ಣ್ಣನಿಗೇ ನಾವೀಗ ಗುಡಿ ಕಟ್ಟಿದ್ದೇವೆ. ಯಾವುದರ ಕುರಿತು ಭಿನ್ನತೆ ಸಾಧಿ­ಸಲು ವಚನ ಚಳವಳಿ ರೂಪು­ಗೊಂಡಿತೋ ಅದೇ ಸಂಗತಿಗಳೊಂದಿಗೆ ಸಾಮ್ಯತೆ ಸಾಧಿಸಲು ಇಂದಿನ ಚಟುವಟಿಕೆಗಳು ನಡೆದಿವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ‘ಪ್ರಕ್ಷಿಪ್ತ ವಚನ­ಗಳ ಬಳಕೆ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಆಶಯ ನುಡಿಗಳನ್ನಾಡಿದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.­ವೀರಣ್ಣ, ‘ವಚನಗಳ ಅಂತರಂಗದ ಗುಟ್ಟು ಬಿಡಿಸಲು ಈ ಹೊಸ ಚರ್ಚೆ ಹುಟ್ಟುಹಾಕ­ಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT