ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ–ಫ್ರೆಂಚ್‌ ಸಂಸ್ಕೃತಿ ಸೇತುವೆ ವಸುಂಧರಾ ಫಿಲಿಯೋಜಾ

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ವಸುಂಧರಾ  ಫಿಲಿಯೋಜಾ ಶಾಸನಶಾಸ್ತ್ರತಜ್ಞೆ, ಕಲಾ ಇತಿಹಾಸಗಾರ್ತಿ. ಫ್ರಾನ್ಸ್‌ನ ರಾಜಧಾನಿಯಾದ ಪ್ಯಾರಿಸ್ಸಿನಲ್ಲಿ ನೆಲೆಸಿರುವ ಅವರು ಅಲ್ಲಿಯೂ ಕನ್ನಡದ ಸಾಂಸ್ಕೃತಿಕ ಪರಿಮಳವನ್ನು ಪಸರಿಸುತ್ತಿದ್ದಾರೆ.  ಇದೇ ಭಾನುವಾರ (ಜುಲೈ, 24) ಅವರಿಗೆ ಬೆಂಗಳೂರಿನಲ್ಲಿ ಚಿದಾನಂದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

‘ವಿಜಯನಗರ ಸಾಮ್ರಾಜ್ಯ’ ಅನ್ನುವ ಪದವೇ ಬಹಳ ಮೂರ್ಖತನದ್ದು. ವಿಜಯನಗರ ಸಾಮ್ರಾಜ್ಯ ಅಲ್ರಿ, ಅದನ್ನು ‘ಕರ್ನಾಟಕ ಸಾಮ್ರಾಜ್ಯ’ ಅಂತಲೇ ಕರಿಬೇಕು. ಅಂದ ಹಾಗೇ  ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದು ವಿದ್ಯಾರಣ್ಯರಲ್ಲ, ಅವರ ಗುರುಗಳು ವಿದ್ಯಾತೀರ್ಥರು. ವಿದ್ಯಾತೀರ್ಥರಿಗಿದ್ದ ದೂರದೃಷ್ಟಿಯಿಂದಲೇ ‘ಕರ್ನಾಟಕ ಸಾಮ್ರಾಜ್ಯ’ ಸ್ಥಾಪನೆಯಾಯಿತು’.

ಹೀಗೆ ಇತಿಹಾಸದ ಪುಟಗಳಲ್ಲಿ ಹುದಗಿಹೋದ ಅದೆಷ್ಟೋ ಸತ್ಯಗಳನ್ನು ಮೆಲುದನಿಯಲ್ಲಿ, ಆದರೆ ಅಷ್ಟೆ ದೃಢವಾಗಿ ಹೇಳುವುದಕ್ಕೆ ಸಾಧ್ಯವಾದದ್ದು ಹಿರಿಯ ಸಂಶೋಧಕಿ ವಸುಂಧರಾ ಫಿಲಿಯೋಜಾ ಅವರಿಗೆ. ಮೋಹಕ ದೇಶ ಫ್ರಾನ್‌ನಲ್ಲಿ ಏಕಕಾಲಕ್ಕೆ ಕನ್ನಡ ಮತ್ತು ಸಂಸ್ಕೃತದ ಡಿಂಡಿಮವನ್ನು ಬಾರಿಸುತ್ತಿದ್ದಾರೆ. 

ಭಾಷೆ, ಪ್ರದೇಶಗಳ ಮೇರೆ ಮೀರಿ ಸಂಸ್ಕೃತ, ಇತಿಹಾಸ ವಿಷಯಗಳ ಮೇಲೆ ಪಾಂಡಿತ್ಯ ಸಾಧಿಸಿದ್ದಾರೆ. ಪಾಂಡಿತ್ಯದೊಡನೆ ಉಕ್ಕುವ ಜೀವನಪ್ರೀತಿ, ಲವಲವಿಕೆಯಿಂದ ಎಳವೆಯರಿಗೆ ಸ್ಫೂರ್ತಿಯಾಗಿದ್ದಾರೆ. ಎಪ್ಪತ್ತೆಂಟರ ಹರೆಯದ ವಸುಂಧರಾ ಫಿಯೋಜಾ ಕನ್ನಡದ ಮಗಳಾಗಿ, ಫ್ರಾನ್ಸ್ ನೆಲದ ಸೊಸೆಯಾಗಿ ಎರಡು ಸಂಸ್ಕೃತಿಗಳ ನಡುವಿನ ಸೇತುವೆಯಂತಿದ್ದಾರೆ. ಅವರು ಮಾತಿಗೆ ಸಿಕ್ಕಾಗ.....

‘ಫ್ರೆಂಚ್‌ಜನರಿಗೆ ಸಂಸ್ಕೃತ, ಭಾರತೀಯ ಸಂಸ್ಕೃತಿಗಳ ಬಗ್ಗೆ ಅಪಾರ ಸೆಳೆತ. ಫ್ರಾನ್ಸ್‌ನಲ್ಲಿ ಸಂಸ್ಕೃತ ಕಲಿಯಲು ಹವಣಿಸುವವರ ಸಂಖ್ಯೆಯೂ ದೊಡ್ಡದಿದೆ. ಸಂಸ್ಕೃತದ ಒಟ್ಟಿಗೆ ಹಿಂದೂ ಪೌರಾಣಿಕ ದೇವರುಗಳ ಕುರಿತ ಅಧ್ಯಯನವೆಂದರೆ ಇಲ್ಲಿನ ಜನಕ್ಕೆ ಎಲ್ಲಲ್ಲಿದ ಆಸಕ್ತಿ.

ವಿಷ್ಣು, ಶಿವನ ಕುರಿತ ಕಥೆಗಳ ಬಗ್ಗೆ ಕುತೂಹಲ ಉಳಿಸಿಕೊಂಡವರೇ ಹೆಚ್ಚು. ಭಾರತೀಯ ಪರಂಪರೆಯೆಡೆಗೆ ದೃಷ್ಟಿಗಂಟಿದ ಅಸಡ್ಡೆಯ ಪೊರೆಯನ್ನು ಕಳಚಬೇಕಾದದ್ದು ಇಂತಹ ಕುತೂಹಲಿಗಳನ್ನು ಕಂಡಲ್ಲವೇ?’  ಎನ್ನುತ್ತಾರೆ ಅವರು.  

‘ನನ್ನೂರು ಹಾವೇರಿ. ಅಪ್ಪ ಚನ್ನಬಸಪ್ಪ ಕವಲಿ. ಕನ್ನಡ ಮತ್ತು ಸಂಸ್ಕೃತದ ಘನ ವಿದ್ವಾಂಸರು. ಪಾಂಡಿತ್ಯ ನನಗೆ ಅಪ್ಪನಿಂದ ಬಂದ ಬಳುವಳಿ. ಅಲ್ಲದೇ ಅಪ್ಪನಿಗೆ ನಾಟಕ, ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ನಾಟಕಗಳನ್ನು ರಚಿಸಿದ್ದರು.

ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದ ನಂತರ, 1965ರಲ್ಲಿ ಯುರೋಪಿಯನ್ ಥಿಯೇಟರ್ ಬಗ್ಗೆ ಅಭ್ಯಾಸ ಮಾಡಲು ಫ್ರಾನ್ಸ್‌ನಲ್ಲಿರುವ ಇಂಟರ್ ನ್ಯಾಷನಲ್ ಥಿಯೇಟರ್ ಸೆಂಟರ್‌ಗೆ ತೆರಳಿದೆ. ಅಲ್ಲಿಂದ ಆರಂಭಗೊಂಡ ನನ್ನ ಹಾಗೂ ಫ್ರಾನ್ಸ್ ನೆಲದ ನಂಟು ಕಳ್ಳುಬಳ್ಳಿಯ ಸಂಬಂಧದಂತೆ ಮುಂದುವರಿದಿದೆ’ ಎನ್ನುತ್ತ ನಗೆ ಬೀರುತ್ತಾರೆ.

ಭಾಷೆ ಬಿರಿವ ಮಲ್ಲಿಗೆ
ಯಾವುದೇ ಭಾಷೆಯಿರಲಿ, ಅದು ಬಿರಿವ ಮಲ್ಲಿಗೆಯಂತೆ. ಅದರ ಕಂಪನ್ನು ಆಸ್ವಾದಿಸುವ ಆಸೆಯಿರಬೇಕಷ್ಟೆ. ಯುರೋಪಿನ ರಂಗಭೂಮಿ ಕುರಿತ ಕೋರ್ಸ್ ಮುಗಿಯುವ ಹೊತ್ತಿಗೆ ವಸುಂಧರಾ ಅವರ ಇತಿಹಾಸದ ಗುರು ಜಿ.ಎಸ್. ದೀಕ್ಷಿತರು ಫ್ರಾನ್ಸ್‌ನಲ್ಲಿ ನೆಲೆಸಿದ್ದ ಸಂಸ್ಕೃತ ಹಾಗೂ ಇತಿಹಾಸ ಪಂಡಿತ ಜಾನ್ ಫಿಲಿಯೋಜಾ ಅವರ ಬಳಿ ತೆರಳಲು ಸೂಚಿಸಿದರು.

ಜಾನ್ ಫಿಲಿಯೋಜಾ ಅವರ ಬಳಿ ‘ವಿಜಯನಗರದ  ಮೊದಲ ರಾಜರುಗಳು’ ಎಂಬ ವಿಷಯದ ಕುರಿತು ಫ್ರೆಂಚ್ ಭಾಷೆಯಲ್ಲಿ ಪ್ರೌಢಪ್ರಬಂಧ ಮಂಡಿಸಿದರು. ಕಡಿಮೆ ಅವಧಿಯಲ್ಲಿ ಫ್ರೆಂಚ್ ಭಾಷೆ ಕಲಿತು, ಅದರಲ್ಲಿಯೇ ಪಿಎಚ್.ಡಿ. ಗಳಿಸಿದ ಅಗ್ಗಳಿಕೆ ವಸುಂಧರಾ ಅವರದ್ದು. ಕನ್ನಡ, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್ – ಹೀಗೆ ನಾಲ್ಕು ಭಾಷೆಗಳಲ್ಲೂ ನಿರರ್ಗಳವಾಗಿ ಮಾತನಾಡುವ, ಅವುಗಳನ್ನು ಸೃಜನಶೀಲತೆಗೆ ತಕ್ಕಂತೆ ದುಡಿಸಿಕೊಳ್ಳುವ ಕಲೆ ವಸುಂಧರಾ ಅವರಿಗೆ ಸಿದ್ಧಿಸಿದೆ.

ಇತಿಹಾಸದ ನೇಯ್ಗೆಯಲ್ಲಿ ತಪ್ಪು ಎಳೆ
‘ಇತಿಹಾಸವನ್ನೆಲ್ಲ ತಪ್ಪು ತಪ್ಪಾಗಿ ತಿದ್ದಲಾಗಿದೆ. ಶಾಸನಗಳು ಹೇಳುವ ಇತಿಹಾಸವೇ ಬೇರೆ. ಶಾಸನಗಳಲ್ಲಿರುವಂತೆ ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದು ವಿದ್ಯಾರಣ್ಯರ ಗುರು ವಿದ್ಯಾತೀರ್ಥರು.  ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಯಾಗುವಾಗ ವಿದ್ಯಾರಣ್ಯರು ಇರಲಿಲ್ಲ.

ಬಾಯಿಂದ ಬಾಯಿಗೆ ಹರಡಿದ ದಂತಕತೆಗಳೆಲ್ಲ ಇತಿಹಾಸಗಳಾಗಿವೆ. ಇದನ್ನು ಹೆಕ್ಕಿ, ಶೋಧಿಸುವುದೇ ನನ್ನಂತಹ ಸಂಶೋಧಕರ ಕೆಲಸ.  ಹುಕ್ಕಬುಕ್ಕ ಕರ್ನಾಟಕ ಸಾಮ್ರಾಜ್ಯದ ಸ್ಥಾಪಕರು. ಅದರಲ್ಲಿ ಹುಕ್ಕ ಹೊಯ್ಸಳರ ಕೈಯಡಿ ಮಹಾಮಂಡಲೇಶ್ವರನಾಗಿ ಗದ್ದುಗೆ ಏರುತ್ತಾನೆ. ಈ ಹುಕ್ಕ ಬ್ರಿಟಿಷರ ಬಾಯಲ್ಲಿ ಅಪಭ್ರಂಶವಾಗಿ ಹಕ್ಕನಾಗಿದ್ದಾನೆ. ನಾವು ಹಾಗೇ ಕರೆಯೋದು ಎಷ್ಟು ಸರಿ?’ ಎಂದು  ಇತಿಹಾಸ ನೇಯ್ಗೆಯಲ್ಲಿ ತಪ್ಪಾಗಿ ಹೊಸೆದ ಎಳೆಗಳನ್ನು ಬಿಡಿಸಿ ಕೌತುಕ ಮೂಡಿಸುತ್ತಾರೆ.

ಜಾತಿ–ಧರ್ಮ ಮೀರಿದ ಪ್ರೀತಿ
‘ಕನ್ನಡ, ಸಂಸ್ಕೃತ ಭಾಷೆಗಳ ಅಂಗಳದಲ್ಲಿಯೇ ಆಡಿ ಬೆಳೆದ ನನಗೆ  ಸಹಪಥಿಕನ ದೆಸೆಯಿಂದ ಫ್ರೆಂಚ್ ಭಾಷೆ  ಹೃದಯದ ಭಾಷೆಯೇ ಆಯಿತು. ನನ್ನ ಇತಿಹಾಸದ ಗುರು ಜಾನ್ ಫಿಲಿಯೋಜಾ ಅವರ ಮಗ ಪಿಯರ್ ಸಿಲ್ವ ಫಿಲಿಯೋಜಾ ನನಗೆ ಆತ್ಮಸಂಗಾತಿಯಾದರು.

ಭಾರತೀಯ ಸಂಗೀತ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅಪಾರ ಒಲವು ಹೊಂದಿದ್ದ  ಜಾನ್ ಫಿಲಿಯೋಜಾ ಅವರ ಮನೆಗೆ ಸೊಸೆಯಾಗಿ ಹೋಗಿದ್ದರಿಂದ ಫ್ರೆಂಚ್ ಭಾಷೆ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ನನ್ನ ತವರು ಮನೆಯವರು ಪ್ರಗತಿಪರ ನಿಲುವು ಹೊಂದಿದ್ದರಿಂದ ಅಂತರ್‌ಧರ್ಮೀಯ ಮದುವೆಗೆ ಯಾವ ಅಡೆತಡೆಗಳು ಎದುರಾಗಲಿಲ್ಲ’ ಎನ್ನುವ ಹೆಮ್ಮೆ ವಸುಂಧರಾ ಅವರದ್ದು.

‘ಪಿಯರ್ ಮತ್ತು ನನಗೆ ಸಮಾನ ಆಸಕ್ತಿಗಳಿದ್ದವು. ನಾವು 1968 ಆಗಸ್ಟ್ 19ರಂದು ಪಾಂಡಿಚೇರಿಯಲ್ಲಿ ಭೇಟಿಯಾದೆವು. 24ಕ್ಕೆ ಅವರೇ ಮದುವೆಯ ಪ್ರಸ್ತಾಪ ಮಾಡಿದ್ದರು. ಮನಸ್ಸು, ಮನಸ್ಸು ಒಂದಾಗಲು ಅರೆಗಳಿಗೆಯಾದರೂ ನಡೆದೀತು. ಪ್ರೀತಿಗೆ ಭಾಷೆ, ಧರ್ಮ, ಜಾತಿ, ಪ್ರಾದೇಶಿಕತೆಯ ಹಂಗಿಲ್ಲ. ಅಹಂನ ಗೋಡೆ ಕಟ್ಟಿಕೊಳ್ಳದೊರತು ಬದುಕು ಸದಾ ವಿಸ್ಮಯಗಳ ಹಾದಿ’ ಎನ್ನುವ ಅವರದ್ದು ಜೀವನಮುಖಿಯ ನೋಟ.

ಪದ್ಯಗಳಿಗೆ ನೃತ್ಯರೂಪಕ
ಶಾಸನಗಳಲ್ಲಿರುವ ಪದ್ಯಗಳನ್ನು ಇಟ್ಟುಕೊಂಡು ನೃತ್ಯರೂಪಕವನ್ನು ಸಂಯೋಜಿಸಿದ್ದಾರೆ. ರಾಣೇಬೆನ್ನೂರಿನ ಸಮೀಪದ ಹರಳಹಳ್ಳಿಯಲ್ಲಿ ಸೋಮನಾಥೇಶ್ವರ ದೇವಸ್ಥಾನದಲ್ಲಿ ದೊರೆತ ಶಾಸನ, ರಟ್ಟಿಹಳ್ಳಿಯಲ್ಲಿ ಕಡಂಬೇಶ್ವರ ದೇವಸ್ಥಾನದ ಹಳೇಗನ್ನಡದಲ್ಲಿರುವ ಶಾಸನಗಳ ಪದ್ಯಗಳನ್ನು ಕನ್ನಡಕ್ಕೆ  ಭಾಷಾಂತರಿಸಿ ನೃತ್ಯರೂಪಕವನ್ನು ಸಂಯೋಜಿಸಿದ್ದಾರೆ.

ಸವಾಲುಗಳಂದರೆ ಇಷ್ಟ
‘ಸಂಶೋಧನಾ ಕ್ಷೇತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳಿರುತ್ತವೆ. ಅದರಲ್ಲೂ ಮಹಿಳೆ ಹೊಸತೊಂದನ್ನು  ಹೇಳ್ತಾಳೆ  ಅಂದರೆ ಕಾಲೆಳೆಯುವವರ ಸಂಖ್ಯೆ ಹೆಚ್ಚೆ ಇರುತ್ತೆ. ಬೇರೆಯವರು ಏನು ಹೇಳ್ತಾರೋ? ಅನ್ನೊದಕ್ಕೆಲ್ಲ ತಲೆಕೆಡಿಸಿಕೊಳ್ಳುವುದನ್ನು ಹೆಣ್ಣುಮಕ್ಕಳು ಬಿಡಬೇಕು. ಯಾವುದೇ ಕ್ಷೇತ್ರವಿರಲಿ ಕಂಡುಕೊಂಡ ಸತ್ಯವನ್ನು ಧೈರ್ಯದಿಂದ ಹೇಳೋದನ್ನು ಅಭ್ಯಾಸ ಮಾಡಿಕೊಳ್ಳಬೇಕು’ ಎನ್ನುವುದು ಅವರ ಸಲಹೆ.

‘ವಿಜಯನಗರ ಸಾಮ್ರಾಜ್ಯವಲ್ಲ  ಅದು  ‘‘ಕರ್ನಾಟಕ ಸಾಮ್ರಾಜ್ಯ’’  ಎಂದು ಸಂಶೋಧನೆ ಮಾಡಿ ಹೇಳುವಾಗ ಎಷ್ಟೊಂದು ವಿರೋಧಗಳಿತ್ತು. ವಿದ್ಯಾತೀರ್ಥರ ಶಿಷ್ಯ ಮಾಧವಾಚಾರ್ಯನೇ, ಮುಂದೆ ವಿದ್ಯಾರಣ್ಯರಾದರು ಎಂಬುದನ್ನು ಮಾಧವಾಚಾರ್ಯರ ಮೂರು ಕೃತಿಗಳ ಆಧಾರದ ಮೇಲೆ ಸಾಬೀತು ಮಾಡಿದ್ದೇನೆ.

ಹೀಗೆ ದಕ್ಕಿದ ಹೊಸ ಸತ್ಯ, ಹೊಳಹುಗಳನ್ನು ಸಂಶೋಧನೆಯಿಂದ ಸಾಬೀತು ಮಾಡುವುದಕ್ಕೆ ಹಂತ ಹಂತವಾಗಿ ಸವಾಲುಗಳು ಎದುರಾಗುತ್ತವೆ. ವೃತ್ತಿಯಿರಲಿ, ವೈಯಕ್ತಿಕ ಜೀವನವಿರಲಿ ಸವಾಲುಗಳಿಗೆ ಬದ್ಧರಾಗಿಯೇ ಬದುಕು ಹೊಸೆದುಕೊಳ್ಳೋಣ’ ಎನ್ನುವ ದಿಟ್ಟ ನಿಲುವು ವಸುಂಧರಾರದ್ದು.

‘ಸಂಶೋಧಕರಿಗೆ ಬದ್ಧತೆಯಿದ್ದಾಗ ಮಾತ್ರ ಇತಿಹಾಸ ಕಲಿಯಲು ಸಾಧ್ಯ. ಯುವ ಸಮೂಹದಲ್ಲಿ ಸಂಶೋಧನಾ ಪ್ರವೃತ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ಮಾರ್ಗದರ್ಶಕರ ಕೊರತೆಯೂ ಕಾರಣವಿದ್ದಿರಬಹುದು. ಮೂಲಾಧಾರಗಳನ್ನು ಇಟ್ಟುಕೊಂಡೇ ಸಂಶೋಧನೆಯಲ್ಲಿ ತೊಡಗೋಣ’ ಎನ್ನುವುದು ಅವರ ಭಿನ್ನಹ.

ಇಷ್ಟೆ ಅಲ್ಲದೇ, ವಸುಂಧರಾ ಅವರು ಪಟ್ಟದಕಲ್ಲಿನ ದೇವಾಲಯಗಳಿಗೂ ಕಾಂಬೋಡಿಯಾದ ಬಂತೈಸರೈ ದೇವಾಲಯಗಳಿಗೂ ಸಾಮ್ಯತೆ ಇರುವುದನ್ನು ಸಂಶೋಧನಾ ನೆಲೆಯಲ್ಲಿ ಕಂಡುಕೊಂಡಿದ್ದಾರೆ. ಜೊತೆಗೆ ಫ್ರಾನ್ಸ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ‘ಸಂಸ್ಕೃತ ದಿವಸ್’ ಆಯೋಜಿಸಿ ಯಶ ಕಂಡಿದ್ದಾರೆ.

150 ಕನ್ನಡ ಶಾಸನಗಳನ್ನು ಫ್ರೆಂಚ್ ಭಾಷೆಗೆ ಭಾಷಾಂತರಿಸಿದ್ದಾರೆ. ಕನ್ನಡ, ಸಂಸ್ಕೃತ, ಫ್ರೆಂಚ್, ಇಂಗ್ಲಿಷ್ ಭಾಷೆಗಳನ್ನು ದುಡಿಸಿಕೊಂಡು ಇತಿಹಾಸದ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಮೂಲಕ ಎಳೆವೆಯರ ಮುಂದೆ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT