ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪೆಟ್ಟಿಗೆಯಲ್ಲಿ ವಿಜ್ಞಾನದ ವಿರಾಟ್ ಇತಿಹಾಸ

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ಸೆಲ್‌ಫೋನ್‌ಗಳ ಜನಪ್ರಿಯತೆ ಹೆಚ್ಚಿದಷ್ಟೂ ಕನ್ನಡ ಭಾಷೆ ಕ್ಷೀಣಿಸುತ್ತ ಹೋಗುತ್ತದೆ. ಟೀವಿ ಚಾನೆಲ್‌ಗಳ ಜನಪ್ರಿಯತೆ ಹೆಚ್ಚಿದಷ್ಟೂ ಮನೆಯೊಳಗಿನ ಗೃಹಿಣಿ ದಢೂತಿಯಾಗುತ್ತ ಹೋಗುತ್ತಾಳೆ. ವಿಜ್ಞಾನ-ತಂತ್ರಜ್ಞಾನ ನಮ್ಮ ಸಮಾಜದಲ್ಲಿ ಹೊಕ್ಕುಹಬ್ಬಿದಷ್ಟೂ ನಮ್ಮ ಅರಿವಿಗೆ ಬಾರದಂತೆ ವಿಪ್ಲವಗಳು ಆಗುತ್ತ ಹೋಗುತ್ತವೆ. ಇವತ್ತು ಕೃಷಿ, ವೈದ್ಯಕೀಯ, ಕ್ರೀಡೆ, ವಾಣಿಜ್ಯ, ಮನರಂಜನೆ, ಫ್ಯಾಶನ್, ಸಂಪರ್ಕ, ಸೌಕರ್ಯ ಎಲ್ಲ ರಂಗಗಳಲ್ಲೂ ಕ್ರಾಂತಿಕಾರಿ ಸುಧಾರಣೆ ತರುತ್ತಿರುವ ವಿಜ್ಞಾನ ನಮ್ಮ ಬದುಕನ್ನೇ ಬದಲಾಯಿಸುತ್ತಿದೆ; ಪರವಶ ಮಾಡುತ್ತಿದೆ.

ಆದರೂ ನಮ್ಮ ಬಹುತೇಕ ವಿದ್ವಾಂಸರು, ವಿಮರ್ಶಕರು, ಇತಿಹಾಸಕಾರರು ವಿಜ್ಞಾನಲೋಕದತ್ತ ಕಣ್ಣೆತ್ತಿ ನೋಡಿದ್ದೇ ಇಲ್ಲ. ವಿಜ್ಞಾನ ಮತ್ತು ವಿಜ್ಞಾನ ಸಾಹಿತ್ಯ ಎರಡೂ ಅವರ ಜಿಜ್ಞಾಸೆಯ ಪರಿಧಿಯ ಆಚೆಗೇ ಉಳಿದಿವೆ. ಇತ್ತ ಲ್ಯಾಬಿನಲ್ಲಿ ತಪೋಮಗ್ನರಾದ ವಿಜ್ಞಾನಿಗಳೂ ಅಷ್ಟೆ, ಸಮಾಜದ ಆಗುಹೋಗುಗಳ ಕಡೆ ಕಣ್ಣೆತ್ತಿ ನೋಡಿದ್ದೇ ಕಡಿಮೆ. ತಾವೇ ಸೃಷ್ಟಿಸುವ ವಿಜ್ಞಾನ-ತಂತ್ರಜ್ಞಾನಗಳು ಹೇಗೆ ಸಮಾಜವನ್ನು ಪ್ರಭಾವಿಸುತ್ತವೆ, ರೂಪಿಸುತ್ತವೆ ಎಂಬುದರ ಕಡೆ ನಮ್ಮ ವಿಜ್ಞಾನಿಗಳು ಸಮಗ್ರ ನೋಟ ಬೀರಿದ್ದು, ಬರೆದಿದ್ದು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ನಾವು ವಿಜ್ಞಾನವನ್ನು ತಿದ್ದಬೇಕೊ, ವಿಜ್ಞಾನ ನಮ್ಮನ್ನು ತಿದ್ದುತ್ತಿದೆಯೊ– ಈ ನಿಟ್ಟಿನ ಚಿಂತನೆಗಳಿಂದ ಬಹಪಾಲು ಬುದ್ಧಿಜೀವಿಗಳು ದೂರವೇ ಉಳಿದಿದ್ದಾರೆ. ನಮ್ಮಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ.

ಇಂಗ್ಲೆಂಡಿನಲ್ಲಿ ಜಾನ್ ಡೆಸ್ಮಂಡ್ ಬರ್ನಾಲ್ (ಜೆ.ಡಿ. ಬರ್ನಾಲ್ 1901-1971) ಎಂಬ ವಿಜ್ಞಾನಿಯೊಬ್ಬನಿದ್ದ. ಸ್ಫಟಿಕಗಳ ಮೇಲೆ ಹಾಗೂ ಅತಿಸೂಕ್ಷ್ಮ ವಸ್ತುಗಳ ಮೇಲೆ ಎಕ್ಸ್‌ರೇ ಹಾಯಿಸುತ್ತ ಕ್ರಮೇಣ ನಮ್ಮೊಳಗಿನ ನೀರು, ರಕ್ತ, ಜೀವಸತ್ವಗಳೂ ಅಣುಗಾತ್ರದಲ್ಲಿ ಹೇಗೆ ಜೋಡಣೆಗೊಂಡಿವೆ ಎಂಬುದನ್ನು ಅಧ್ಯಯನ ಮಾಡುತ್ತಲೇ ವಿಜ್ಞಾನದ ಸಾಮಾಜಿಕ ಸ್ವರೂಪದ ಬಗೆಗೂ ಅಲ್ಲಿ ಇಲ್ಲಿ ಉಪನ್ಯಾಸ ನೀಡುತ್ತ ಹೋದ. ಎರಡು ಮಹಾಯುದ್ಧಗಳ ನಡುವಣ ಅವಧಿಯಲ್ಲಿ ವಿಜ್ಞಾನದಲ್ಲಿ ಕ್ರಾಂತಿಕಾರಿ ಉತ್ಕರ್ಷಗಳು ಸಂಭವಿಸುತ್ತಿದ್ದ ವೇಳೆಯಲ್ಲಿ ಈತ ಫಿಸಿಕ್ಸ್ ಪ್ರೊಫೆಸರ್ ಆಗಿ, ಜೀವವಿಜ್ಞಾನಿಯೂ ಆಗಿ, ವಿಜ್ಞಾನ ಇತಿಹಾಸದ ಪ್ರಾಧ್ಯಾಪಕನೂ ಆದ.

ವಿಜ್ಞಾನದ ಉಗಮ, ಸಂವರ್ಧನೆ, ವಿಕಾಸ ಕುರಿತು ಈತ ನೀಡುತ್ತಿದ್ದ ಉಪನ್ಯಾಸಗಳಿಗೆ ಹಾಗೂ ಲೇಖನಗಳಿಗೆ ತುಂಬ ಬೇಡಿಕೆಯಿತ್ತು. ಶಿಷ್ಯರ ಕಣ್ಣಿಗೆ ಆತನೊಬ್ಬ ಋಷಿಯಾಗಿ ಕಾಣುತ್ತಿದ್ದ. ಕ್ರಮೇಣ ಆತ ತನ್ನ ಉಪನ್ಯಾಸ ಮಾಲಿಕೆಯನ್ನೇ ಸಂಸ್ಕರಿಸಿ ‘ಸೈನ್ಸ್ ಇನ್ ಹಿಸ್ಟರಿ’ ಹೆಸರಿನ ನಾಲ್ಕು ಸಂಪುಟಗಳ ಬೃಹತ್ ಕೃತಿಯನ್ನಾಗಿ ರೂಪಿಸಿದ. 1954ರಲ್ಲಿ ಪೆಂಗ್ವಿನ್ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿಸಮುಚ್ಚಯ ಅದುವರೆಗಿನ ಜಾಗತಿಕ ವಿಜ್ಞಾನ ಇತಿಹಾಸದ ಬಹುಮುಖ್ಯ ಮೈಲುಗಲ್ಲು ಎಂದು ಪರಿಗಣಿತವಾಯಿತು. ಮುಂದಿನ ಹದಿನಾಲ್ಕು ವರ್ಷಗಳಲ್ಲಿ ನಾಲ್ಕು ಪರಿಷ್ಕರಣಗಳ ನಂತರ ಅದು ಜಗತ್ತಿನ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಕೃತಿಯೆನಿಸಿತು. ಇದೀಗ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಮೂಲಕ ಆ ನಾಲ್ಕೂ ಸಂಪುಟಗಳು ಕನ್ನಡಕ್ಕೆ ತರ್ಜುಮೆಗೊಂಡಿವೆ.

ಮನುಷ್ಯನ ವಿಕಾಸದ ಕತೆಯೆಂದರೆ ವಿಜ್ಞಾನದ ವಿಕಾಸದ ಕತೆ ಎಂತಲೇ ತಾನೆ? ಬೆಣಚುಕಲ್ಲನ್ನೇ ಚೂಪಾಗಿ ಮಸೆದು ಆಯುಧವನ್ನಾಗಿ ಮಾಡಿಕೊಂಡ ಮನುಷ್ಯ ಇತರ ಜೀವಿಗಳ ಮೇಲೆ ಪ್ರಭುತ್ವ ಸ್ಥಾಪಿಸುತ್ತ, ಕ್ರಮೇಣ ಕಲ್ಲನ್ನೇ ಕರಗಿಸಿ ಲೋಹಗಳ ಶಸ್ತ್ರಾಸ್ತ್ರಗಳನ್ನು ರೂಪಿಸಿ ದುರ್ಬಲ ಮನುಷ್ಯರ ಮೇಲೂ ಪ್ರಭುತ್ವ ಸಾಧಿಸುತ್ತ ಆ ಮೂಲಕ ಸಮಾಜದ ವ್ಯಾಖ್ಯೆಯನ್ನೇ ಬದಲಿಸುತ್ತ ಬಂದಿದ್ದು ನಮಗೆಲ್ಲ ಗೊತ್ತೇ ಇದೆ. ವಿಜ್ಞಾನ ತಾನೇ ಒಂದು ಅವತಾರವಾಗಿ ರೂಪುಗೊಳ್ಳುತ್ತ, ಅತಿ ಸೂಕ್ಷ್ಮದಿಂದ ಹಿಡಿದು ಅನಂತದವರೆಗಿನ ಬ್ರಹ್ಮಾಂಡದ ಅನಾವರಣ ಮಾಡುತ್ತ, ಮನುಷ್ಯನ ರೂಢನಂಬಿಕೆಗಳನ್ನು ಗುಡಿಸಿಹಾಕುತ್ತ, ಸತ್ಯದ ಹೊಸ ಅನ್ವೇಷಣೆಗೆ ಹುರಿದುಂಬಿಸುತ್ತ, ಸಾಮಾಜಿಕ ಸಂಪ್ರದಾಯಗಳನ್ನು ಬದಲಿಸುತ್ತ, ತನ್ನನ್ನು ತಾನೇ ದೇಶದಿಂದ ದೇಶಕ್ಕೆ, ಖಂಡದಿಂದ ಖಂಡಕ್ಕೆ ವಿಸ್ತರಿಸಿಕೊಳ್ಳುತ್ತ ಏಕಕಾಲಕ್ಕೆ ಆತನ ಒಡೆಯನಾಗಿಯೂ ಅಡಿಯಾಳಾಗಿಯೂ ಹೇಗೆ ವರ್ತಿಸುತ್ತಿದೆ ಎಂಬುದನ್ನು ಈ ಸಂಪುಟಗಳಲ್ಲಿ ಹಿಂಜಿ ಹಿಂಜಿ ದಾಖಲಿಸಲಾಗಿದೆ.

ಶಿಲಾಯುಗದಿಂದ ಹಿಡಿದು ಉಪಗ್ರಹ ಉಡಾವಣೆಯವರೆಗಿನ ವಿಜ್ಞಾನದ ಈ ಬೆಳವಣಿಗೆ ಏಕಮುಖವೇನೂ ಆಗಿರಲಿಲ್ಲ; ಅನವರತವೂ ಆಗಿರಲಿಲ್ಲ. ಕೆಲವು ದೇಶಗಳಲ್ಲಿ ಕೆಲವು ಕಾಲದಲ್ಲಿ ಅದು ಉಚ್ಛ್ರಾಯಕ್ಕೇರಿ ಕ್ರಮೇಣ ಮಸಕಾಗಿದೆ. ಕೆಲವೊಮ್ಮೆ ದಿಕ್ಕುಗಾಣದೆ ಧುತ್ತೆಂದು ಶತಮಾನಗಳ ಕಾಲ ನಿಂತಲ್ಲೇ ನಿಂತಿದೆ. ಮತ್ತೆ ಅದು ಅಷ್ಟೇ ಅನಿರೀಕ್ಷಿತವಾಗಿ ದಿಕ್ಕು ಬದಲಿಸಿ ಹಠಾತ್ತಾಗಿ ಧುಮ್ಮಿಕ್ಕಿ ಭೋರ್ಗರೆಯುವ ಧಾರೆಯಾಗಿದೆ. ಅಂಧಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರಾಬಲ್ಯವಿರುವಲ್ಲಿ ಅದು ಹಿಂದೆ ಸರಿಯುತ್ತ, ತುಳಿಸಿಕೊಳ್ಳುತ್ತ ತನ್ನ ಗಾಯಗಳಿಗೆ ತಾನೇ ಔಷಧ ಹುಡುಕಿಕೊಳ್ಳುತ್ತ, ಶಸ್ತ್ರಾಸ್ತ್ರಗಳ ಕೋಠಿಯಲ್ಲಿ ಹೊಸರೂಪ ಪಡೆದು ಆಕ್ರಮಣಕಾರಿಯಾಗುತ್ತ, ಯುದ್ಧದಲ್ಲಿ ಸೋತು ನೆಲಕಚ್ಚಿದವರ ನಡುವೆ ತಾನೇ ಸಮಾಧಿಯಾಗುತ್ತ, ಧನಧಾರೆ ಸಿಕ್ಕಾಗ ಮತ್ತೆ ಭಾಗೀರಥಿಯಾಗಿ ಬಾನೆತ್ತರ ಚಿಮ್ಮುತ್ತ ವಿಜ್ಞಾನ ಬೆಳೆದುಬಂದ ಪರಿ ಚಮತ್ಕಾರಿಕವಾಗಿದೆ. ಅದನ್ನು ಪ್ರಶಸ್ತ ಉದಾಹರಣೆಗಳ ಮೂಲಕ, ಸಚಿತ್ರ ದಾಖಲೆಗಳ ಮೂಲಕ, ವಿವಿಧ ಸಮಾಜ-ಸಂಸ್ಕೃತಿಗಳ ಏಳುಬೀಳುಗಳೊಂದಿಗೆ ಹಾಗೂ ವಿಜ್ಞಾನಿಗಳ ಖಾಸಗಿ ಚರಿತ್ರೆಗಳೊಂದಿಗೆ ತಳಕು ಹಾಕಿ ಅಕ್ಷರ ರೂಪದಲ್ಲಿ ಹಿಡಿದಿಟ್ಟು ಜೆ.ಡಿ. ಬರ್ನಾಲ್ ಅಸಾಮಾನ್ಯ ಸಾಧನೆ ಮೆರೆದಿದ್ದಾನೆ.

ಅದನ್ನು ಕನ್ನಡಕ್ಕೆ ತಂದಿದ್ದೂ ಅಸಾಮಾನ್ಯ ಸಾಧನೆಯೇ ಸರಿ. ಭಾಷಾ ಭಾರತಿ ಪ್ರಾಧಿಕಾರದ ಪ್ರಧಾನ್ ಗುರುದತ್ತರು ಪ್ರಧಾನ ಸಂಪಾದಕರಾಗಿರುವ ಈ ನಾಲ್ಕೂ ಸಂಪುಟಗಳಿಗೆ ಕನ್ನಡದ ಹೆಸರಾಂತ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಸಂಪಾದಕರಾಗಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮೊದಲನೆಯ ಸಂಪುಟವನ್ನು (‘ವಿಜ್ಞಾನದ ಉದಯ’) ಗಾಯತ್ರಿ ಮೂರ್ತಿ ಮತ್ತು ಪ್ರೊ.ಕೆ.ಎಸ್ ನಟರಾಜ್; ಎರಡನೆಯ ಸಂಪುಟವನ್ನು (‘ವಿಜ್ಞಾನ ಮತ್ತು ಕೈಗಾರಿಕಾ ಕ್ರಾಂತಿ’) ಜಿ.ಎನ್. ನರಸಿಂಹಮೂರ್ತಿ ಮತ್ತು ಜಿ.ವಿ. ನಿರ್ಮಲ; ಮೂರನೆಯ ಸಂಪುಟವನ್ನು (‘ಸಮಕಾಲೀನ ನೈಸರ್ಗಿಕ ವಿಜ್ಞಾನಗಳು’) ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಮತ್ತು ಡಾ. ಎನ್.ಎಸ್. ಲೀಲಾ ಹಾಗೂ ನಾಲ್ಕನೆಯ ಸಂಪುಟವನ್ನು (‘ಸಮಾಜವಿಜ್ಞಾನ ಸಮಾರೋಪ’) ಜಿ.ಎನ್. ರಂಗನಾಥರಾವ್ ಅನುವಾದಿಸಿದ್ದಾರೆ. ಎಲ್ಲ ಏಳೂ ಅನುವಾದಕರು ಸಮರ್ಥ ಬರಹಗಾರರೇ ಆಗಿರುವುದರಿಂದ ಭಾಷಾಂತರದ ಬಗ್ಗೆ ಮತ್ತೊಂದು ಮಾತಿಲ್ಲ. ವಿಜ್ಞಾನದ ಚರಿತ್ರೆಯೇ ಕೆಲವೆಡೆ ಸುಲಲಿತವಾಗಿದ್ದರೂ ಇನ್ನು ಕೆಲವೆಡೆ ಕ್ಲಿಷ್ಟವಾಗಿ ಕಾಡುತ್ತದೆ.

ಅರಿಸ್ಟಾಟಲ್‌ನಿಂದ ಹಿಡಿದು ಪೈಥಾಗೋರಸ್, ಐನ್‌ಸ್ಟೀನ್, ಹೈಸೆನ್‌ಬರ್ಗ್ ಮುಂತಾದವರ ಸಂಕೀರ್ಣ ವಿಷಯಗಳನ್ನು ಆದಷ್ಟು ಸಂಕ್ಷಿಪ್ತವಾಗಿ ಹೇಳುವ ಧಾವಂತದಲ್ಲಿ ಬರ್ನಾಲ್‌ನ ಮೂಲಪಠ್ಯವೇ ಕೆಲವೆಡೆ ತೀರ ಬಿಗಿಯಾಗಿದ್ದು ವಿಜ್ಞಾನ ವಿಷಯಗಳ ತುಸು ಆಳ ಪರಿಚಯವಿದ್ದವರಿಗೂ ಕೆಲವು ಪರಿಕಲ್ಪನೆಗಳು ಗಡಚೆನಿಸುತ್ತವೆ. ಇನ್ನು ನ್ಯೂಕ್ಲಿಯಿಕ್ ಆಮ್ಲ, ಪಾಲಿ ಪೆಪ್ಟೈಡ್‌ಗಳಂಥ ಪದಗಳು ಬಂದಾಗ ಅವುಗಳ ಸ್ವರೂಪವನ್ನು ಊಹಿಸಿಕೊಂಡು ಮುಂದೆ ಸಾಗಬೇಕೆ ವಿನಾ 1350 ಪುಟಗಳ ಈ ವಿಶಾಲ ಚರಿತಾಧಾರೆಯಲ್ಲಿ ಅರ್ಥವಿವರಣೆಗಳನ್ನು ನಿರೀಕ್ಷಿಸುವಂತಿಲ್ಲ. ಇದು ವಿಜ್ಞಾನದ ವಿಶ್ವಕೋಶವಲ್ಲ. ಇಲ್ಲಿನ ವಿಷಯಗಳು ಕಾಲಾನುಕ್ರಮದಲ್ಲಿ ಜೋಡಣೆಯಾಗಿಯೂ ಇಲ್ಲ. ಅನುವಾದಕರ ಹಾಗೂ ಸಂಪಾದಕರ ಶ್ರಮಕ್ಕೆ ಹಾಗೂ ತಾಳ್ಮೆಗೆ ಜೈಕಾರ ಹಾಕಲೇಬೇಕು.

ರೋಚಕತೆಯನ್ನೇ ಹುಡುಕುವವರಿಗೆ ಬರ್ನಾಲ್ ಕೃತಿ ತುಸು ನಿರಾಸೆಯನ್ನೇ ತಂದೀತು. ಪೀಸಾ ಗೋಪುರದಿಂದ ಗೆಲಿಲಿಯೊ ನಿಜಕ್ಕೂ ತೂಕದ ಗುಂಡುಗಳನ್ನು ಬೀಳಿಸಿದನೆ? ನ್ಯೂಟನ್ ತಲೆಯ ಮೇಲೆ ನಿಜಕ್ಕೂ ಸೇಬು ಬಿತ್ತೆ? ಅಲೆಕ್ಸಾಂಡರ್ ಫ್ಲೆಮಿಂಗ್ ಸೂಕ್ಷ್ಮದರ್ಶಕದಲ್ಲಿ ರೋಗಾಣು ಗಳನ್ನು ನೋಡುತ್ತಿದ್ದಾಗ ಗಾಳಿಯಲ್ಲಿ ತೇಲಿಬಂದ ಬೂಷ್ಟಿನ ಕಣವೊಂದು ಗಾಜಿನ ಬಟ್ಟಲಿಗಿಳಿದು ಆತನ ಕಣ್ಣೆದುರೇ ರೋಗಾಣುಗಳನ್ನು ನುಂಗಿದ್ದು ನಿಜವೆ?– ಇವೇ ಮುಂತಾದ ಪ್ರಶ್ನೆಗಳಿಗೆ ಇಲ್ಲಿ ನೇರ ಉತ್ತರ ಸಿಗಲಾರದು. ಥಿಯರಿಯ ಮೂಲಕ ಹೇಳುತ್ತಿದ್ದ ಸಂಗತಿಗಳನ್ನು ಪ್ರತ್ಯಕ್ಷ ತೋರಿಸುವುದರ ಮೂಲಕ ವಿಜ್ಞಾನವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಬೇಕಾದ ಪ್ರಕ್ರಿಯೆಗೆ ಎಲ್ಲೆಲ್ಲಿ ಹೇಗೆ ಹೇಗೆ ಚಾಲನೆ ಸಿಕ್ಕಿತು ಎಂಬುದನ್ನು ಹೇಳುವುದಷ್ಟೇ ಬರ್ನಾಲ್ ಉದ್ದೇಶವಾಗಿತ್ತೇ ವಿನಾ ಕತೆಗಳ ಮೂಲಕ ಓದುಗರಿಗೆ ಮಸಾಲೆ ಉಣಬಡಿಸುತ್ತ ಕೂರುವಷ್ಟು ವ್ಯವಧಾನ ಆತನಿಗಿರಲಿಲ್ಲ. ಹಾಗೆಯೇ ಭಾರತದ ಭವ್ಯ ವಿಜ್ಞಾನ ಪರಂಪರೆಯ ಸಮಗ್ರ ಚಿತ್ರಣ ಸಿಕ್ಕೀತೆಂದು ಹುಡುಕುವವರಿಗೂ ಇದು ನಿರಾಸೆ ತರುತ್ತದೆ.

ಆರ್ಯಭಟ, ವರಾಹಮಿಹಿರ ಮತ್ತು ಬ್ರಹ್ಮಗುಪ್ತ ಎಲ್ಲರನ್ನೂ ಸೇರಿಸಿ ಒಂದೇ ವಾಕ್ಯದಲ್ಲಿ ಬರ್ನಾಲ್ ಟಿಪ್ಪಣಿ ಮುಗಿದುಹೋಗಿದೆ. ಸಾಲದ್ದಕ್ಕೆ, ಈ ಭಾರತೀಯರ ಸಾಧನೆಗೆ ‘ಗ್ರೀಕ್, ಬ್ಯಾಬಿಲೋನ್ ಮತ್ತು ಚೀನಾದಿಂದಲೂ ಬಂದು ಸೇರಿಕೊಂಡ ವಿಷಯಗಳೇ ತಳಹದಿಯಾಗಿವೆ’ ಎಂಬ ಮಾತನ್ನೂ ಆತ ಸೇರಿಸಿದ್ದಾನೆ. ಇನ್ನು ಗಣಿತಶಾಸ್ತ್ರಕ್ಕೆ ಅಷ್ಟೆಲ್ಲ ದೊಡ್ಡ ಕೊಡುಗೆ ಕೊಟ್ಟಿದ್ದ ಕನ್ನಡಿಗ ಭಾಸ್ಕರಾಚಾರ್ಯನ ಪ್ರಸ್ತಾಪವನ್ನಂತೂ ಕೇಳಲೇಬೇಡಿ. ವಿಜ್ಞಾನ ವಿಕಾಸದಲ್ಲಿ ಭಾರತೀಯರ ಕೊಡುಗೆಯನ್ನು ಪಶ್ಚಿಮದ ಇತಿಹಾಸಕಾರರು ಅದೆಷ್ಟು ನಗಣ್ಯವಾಗಿ ಕಂಡಿದ್ದಾರೆಂಬುದಕ್ಕೆ ಈ ಸಂಪುಟಗಳಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. 

ವಿಜ್ಞಾನ ಮತ್ತು ನಾಗರಿಕತೆಯ ವಿಕಾಸದ ಜಂಟಿಕಥನವನ್ನು ಅದೆಷ್ಟು ಸಮರ್ಥವಾಗಿ, ಸಮಗ್ರವಾಗಿ ಹಿಡಿದಿದ್ದಾನೆಂಬ ಹೆಗ್ಗಳಿಕೆ ಬಿಟ್ಟರೆ ಬರ್ನಾಲ್‌ಗೆ ಈ ಕೃತಿಸಮುಚ್ಚಯದ ಸಂಬಂಧ ಸಾಕಷ್ಟು ಟೀಕೆಗಳೂ ಬಂದಿವೆ. ಆತ ಎಡಪಂಥೀಯನಾಗಿದ್ದ; ನಿರೀಶ್ವರವಾದಿಯಾಗಿದ್ದ; ಸೋವಿಯತ್ ಒಕ್ಕೂಟ ವ್ಯವಸ್ಥೆಯೇ ಆದರ್ಶಪ್ರಾಯವೆಂಬ ಭಾವನೆ ಬೆಳೆಸಿಕೊಂಡಿದ್ದ. ರಷ್ಯದ ಕೃಷಿಕ್ರಾಂತಿಯಲ್ಲಿ ಲಾಂಛನಾಸ್ಪದ ಪಾತ್ರ ವಹಿಸಿದ್ದ ಲೈಸೆಂಕೊ ಎಂಬ ಜೀವವಿಜ್ಞಾನಿಯ ಕೊಡುಗೆಯನ್ನು ಇನ್ನಿಲ್ಲದಷ್ಟು ಬೆಂಬಲಿಸಿದ್ದ- ಇವೇ ಮುಂತಾದ ಆರೋಪಗಳು ಆತನ ಮೇಲಿದ್ದವು. ಆದರೆ ಬರ್ನಾಲ್ ತನ್ನ ವೈಯಕ್ತಿಕ ನಿಲುವುಗಳನ್ನು ಇಲ್ಲಿ ತುರುಕಿದ್ದಾನೆಂಬುದಕ್ಕೆ ಯಾವ ಬಲವಾದ ಸಾಕ್ಷ್ಯಗಳೂ ಕಾಣುವುದಿಲ್ಲ.

ಈ ಕೃತಿಸಮುಚ್ಚಯದ ಎಲ್ಲಕ್ಕಿಂತ ಮುಖ್ಯ ಮಿತಿ ಏನೆಂದರೆ ಅದು ಐವತ್ತು ವರ್ಷಗಳ ಹಿಂದಿನದು. ಅದರ ಪ್ರಕಟನೆಯ ನಂತರದ ಈಚಿನ ವರ್ಷಗಳಲ್ಲೇ ಕ್ರಾಂತಿಗಳ ಸರಮಾಲೆಯನ್ನು ನಾವು ನೋಡುತ್ತಿದ್ದೇವೆ. ಮಾನವ ಚಂದ್ರನ ಮೇಲೆ ಕಾಲಿಟ್ಟಿದ್ದು, ಮುಕ್ತ ಮಾರುಕಟ್ಟೆಯ ಅಟಾಟೋಪ, ಜೀವಿಗಳ ಪೇಟೆಂಟಿಂಗ್, ತದ್ರೂಪು ಜೀವಿಗಳ ಸೃಷ್ಟಿ, ಐಟಿ, ಬಿಟಿ, ನ್ಯಾನೊಟೆಕ್ ಮುಂತಾದ ಮುಖಗಳ ಮೂಲಕ ವಿಜ್ಞಾನ ವಿರಾಟ್ ಸ್ವರೂಪ ತಾಳುತ್ತಿದೆ. ತಟ್ಟಿಸಿಕೊಳ್ಳಬಯಸುವ ಎಲ್ಲರನ್ನೂ ಅದರ ಪ್ರಭಾವ ಸುಲಭವಾಗಿ ತಟ್ಟುತ್ತಿದೆ. ಜಗತ್ತಿನ ಅತಿಶ್ರೇಷ್ಠ ವಿಜ್ಞಾನಿಗಳಲ್ಲಿ ಶೇಕಡಾ 90ರಷ್ಟು ಜನರು ನಮ್ಮ ಸಮಕಾಲೀನರಾಗಿ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷನೇ ಆಗಿರುವ ಸ್ಟೀಫನ್ ಹಾಕಿಂಗ್ ಹೆಸರು ಕೂಡ ಇದರಲ್ಲಿ ಪ್ರಸ್ತಾಪವಾಗಿಲ್ಲ. ಕೃತಿಯ ಈ ಮಿತಿಯ ಅರಿವು ಸಂಪಾದಕರಿಗೆ ಇರಲಿಲ್ಲವೆಂದಲ್ಲ. ‘ಬರ್ನಾಲ್‌ನ ಈ ಸಂಪುಟಗಳು ಕನ್ನಡಿಗರಿಗೆ ಈಗ ಹೇಗೆ ಪ್ರಸ್ತುತವಾಗುತ್ತವೆ?’ ಎಂಬ ಪ್ರಶ್ನೆಯನ್ನು ತಾವೇ ಹಾಕಿಕೊಂಡು ಟಿ.ಆರ್. ಅನಂತರಾಮು ಅದಕ್ಕೆ ಉತ್ತರವನ್ನೂ ನೀಡಿದ್ದಾರೆ: ಕನ್ನಡದಲ್ಲಿ ಹೇರಳವಾಗಿ ವಿಜ್ಞಾನದ ಕೃತಿಗಳು ಬರುತ್ತಿವೆ.

ಕನ್ನಡ ಭಾಷೆ ವಿಜ್ಞಾನದ ಸಂಕೀರ್ಣ ಪರಿಕಲ್ಪನೆಗಳನ್ನು ಅರಗಿಸಿಕೊಳ್ಳುವ ತಾಕತ್ತು ಗಳಿಸಿದೆ. ಮುಂದಿನ ದಿನಗಳಲ್ಲಿ ಆಸಕ್ತ ಕನ್ನಡಿಗರು ವಿಜ್ಞಾನದ ಜಾಗತಿಕ ಇತಿಹಾಸವನ್ನು ಅರಿಯಬಯಸಿದರೆ ‘ಈ ಅಭಿಜಾತ ಕೃತಿಯನ್ನು ಗಮನಿಸಲೇಬೇಕಾಗುತ್ತದೆ’ ಎಂದಿದ್ದಾರೆ. ಯಾರಿಗೆ ಗೊತ್ತು, ಈ ನಾಲ್ಕು ಸಂಪುಟಗಳಿಂದ ಪ್ರೇರಣೆ ಪಡೆದು ನಮ್ಮವರಲ್ಲೇ ಯಾರಾದರೂ ಐದನೆಯದನ್ನು ಸ್ವತಂತ್ರವಾಗಿ ಬರೆಯಲು ಸಜ್ಜಾಗಬಹುದು. ಸುಂದರ ಮುದ್ರಣದ ಈ ಬೃಹತ್ ಸಂಪುಟಗಳು ಅಂದದ ಪೆಟ್ಟಿಗೆಯಲ್ಲಿ ವಿರಾಜಮಾನವಾಗಿ ಕೇವಲ 500 ರೂಪಾಯಿಗಳಲ್ಲಿ ಕನ್ನಡಿಗರ ಮನೆಯ ಶೋಕೇಸಿನಲ್ಲಿ ಕೂರಬಹುದಾದರೆ ಆ ಅದೃಷ್ಟ ಭಾರತದ ಇತರ ಎಷ್ಟು ಭಾಷೆಗಳ ಜನರಿಗಿದ್ದೀತು?

ಇಂಗ್ಲಂಡಿನಲ್ಲಿ ಅನೇಕರು ಬರ್ನಾಲ್‌ನನ್ನು ‘ಋಷಿ’ ಎಂದೇ ಪರಿಗಣಿಸುತ್ತಾರೆ. ಜ್ಞಾನಿಗಳಲ್ಲಿ ಕಾಣಬೇಕಾದ ಅಲಿಪ್ತ ದೃಷ್ಟಿಕೋನ, ಹರಿತ ವಿಶ್ಲೇಷಣೆ, ಕಾಲಾತೀತ ಕಾಣ್ಕೆಯೇ ಮುಂತಾದ ಗುಣಗಳನ್ನು ನಾವಿಲ್ಲಿ ನೋಡಬಹುದು. ಈತ ಹೇಳುತ್ತಾನೆ, ‘ನಿಜವಾದ ಸಂಪತ್ತು ಇರುವುದು ಕಚ್ಚಾವಸ್ತುಗಳಲ್ಲಿ ಅಲ್ಲ; ಕಾರ್ಮಿಕರ ಸಂಖ್ಯೆಯಲ್ಲಿ ಅಲ್ಲ; ಅಥವಾ ಯಂತ್ರಗಳಲ್ಲೂ ಅಲ್ಲ.... ಹೊಸಯುಗದ ನಿಜವಾದ ಸಂಪತ್ತೆಂದರೆ ಶಿಕ್ಷಣವೇ ಆಗಿದೆ. ದುರದೃಷ್ಟವಶಾತ್ ಸರಕಾರಗಳು ಶಿಕ್ಷಣದ ಮೇಲೆ ಬಂಡವಾಳ ಹೂಡಲು ಹಿಂಜರಿಯುತ್ತಿವೆ...’.

ನಲವತ್ತೈದು ವರ್ಷಗಳ ಹಿಂದೆಯೇ ತನ್ನ ಈ ಬೃಹತ್ ಕೃತಿಯ ಪೀಠಿಕೆಯಲ್ಲಿ ಜೆ.ಡಿ. ಬರ್ನಾಲ್ ಹೇಳಿದ ಈ ಮಾತು ಈಗ ಹಿಂದೆಂದಿಗಿಂತ, ಬೇರೆಲ್ಲರಿಗಿಂತ ನಮ್ಮ ಪಾಲಿಗೆ ಸತ್ಯವೆನಿಸುತ್ತಿದೆ. ಜಾಗ ಸಿಕ್ಕಲ್ಲಿ ಯಂತ್ರಸ್ಥಾವರಗಳನ್ನು ಹೂಡುತ್ತ, ಕಂಡಕಂಡಲ್ಲಿ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತ, ಅದೇ ನಿಜವಾದ ಸಂಪತ್ತಿನ ವೃದ್ಧಿಯ ಬೀಜಮಂತ್ರವೆಂದು ಸಾರುತ್ತ ಹೊರಟ ನಮ್ಮ ಸರಕಾರಗಳು ಬರ್ನಾಲನ ಈ ಮಾತುಗಳನ್ನು ಮನನ ಮಾಡಬೇಕಿದೆ. ನಾಳಿನ ಸಮಾಜಕ್ಕಾದರೂ ಈ ವಿವೇಕ ಅಂತರ್ಗತವಾದೀತೆಂದು ನಾವು ಆಶಿಸಬೇಕಾಗಿದೆ.

ಇತಿಹಾಸದಲ್ಲಿ ವಿಜ್ಞಾನ
(ನಾಲ್ಕು ಸಂಪುಟಗಳಲ್ಲಿ)
ಮೂಲ: ಜೆ.ಡಿ. ಬರ್ನಾಲ್
ಕನ್ನಡಕ್ಕೆ: ವಿವಿಧ ಲೇಖಕರು
ಒಟ್ಟೂ ಪುಟಗಳು: 1315+ಸುಮಾರು 120
ಬೆಲೆ: ರೂ. 500
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಬೆಂಗಳೂರು-560056
ಫೋನ್‌: 080-23183311, 23183312

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT