ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್ ಉದ್ಯಾನವನದಲ್ಲಿ ವಾಯುಮಾಲಿನ್ಯ ವ್ಯಾಪಕ

Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಬ್ಬನ್‌ ಉದ್ಯಾನದಲ್ಲಿ ಓಡಾಡುತ್ತಿರುವ ವಾಹನಗಳಿಂದ ವ್ಯಾಪಕ ಪ್ರಮಾಣದಲ್ಲಿ ವಾಯುಮಾಲಿನ್ಯ  ಆಗುತ್ತಿರುವುದು ತಪಾಸಣೆಯಿಂದ ಬೆಳಕಿಗೆ ಬಂದಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಸಾರಿಗೆ ಇಲಾಖೆ,  ಪೊಲೀಸ್‌, ಬಿಎಂಟಿಸಿ ಸಹಯೋಗದಲ್ಲಿ ನಡೆಸಿದ ವಾಹನಗಳ ಹೊಗೆ ತಪಾಸಣೆ ಕಾರ್ಯಾಚರಣೆಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷಣ್‌ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಚಾರ ದಟ್ಟಣೆ ಜಾಸ್ತಿ ಇರುವ ಆರು ಪ್ರದೇಶಗಳಲ್ಲಿ ಜೂನ್‌ 22ರಿಂದ ಸೋಮವಾರದ ವರೆಗೆ ತಪಾಸಣೆ ನಡೆಸಲಾಯಿತು.
ಕಬ್ಬನ್‌ ಉದ್ಯಾನದಲ್ಲಿ ನಡೆಸಿದ 103 ವಾಹನಗಳ ಪೈಕಿ 64 (ಶೇ 62) ವಾಹನಗಳು ವಾಯುಮಾಲಿನ್ಯ ಮಾಡುತ್ತಿರುವುದು ಬಹಿರಂಗಗೊಂಡಿವು. ವಾಯುಮಾಲಿನ್ಯ ಮಾಡುತ್ತಿರುವ ವಾಹನಗಳ ಪೈಕಿ ಸರ್ಕಾರಿ ವಾಹನಗಳು ಅಧಿಕ ಸಂಖ್ಯೆಯಲ್ಲಿ ಇದ್ದವು. 

ಡೀಸೆಲ್‌ ವಾಹನಗಳಲ್ಲಿ ಹೊಗೆ ಸಾಂದ್ರತೆ 65 ಎಚ್‌ಎಸ್‌ಯು ಇರಬಹುದು. ಆದರೆ, ವಿಧಾನಸೌಧಕ್ಕೆ ತೆರಳುತ್ತಿದ್ದ ಇಟಿಯೋಸ್‌ನಲ್ಲಿ 98.7, ವಕ್ಫ್‌ ಮಂಡಳಿಗೆ ಹೋಗುತ್ತಿದ್ದ ಜೀಪಿನಲ್ಲಿ 81.6, ಮತ್ತೊಂದು ಜೀಪಿನಲ್ಲಿ 89.3 ಇರುವುದು ಕಂಡು ಬಂತು. ತಪಾಸಣೆ ನಡೆಸಿದ 14 ಸರ್ಕಾರಿ ವಾಹನಗಳ ಪೈಕಿ 6 ಪರೀಕ್ಷೆಯಲ್ಲಿ ಫೇಲ್‌ ಆದವು.

‘ನಗರದಲ್ಲಿ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಈ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ವೈಟ್‌ಫೀಲ್ಡ್‌ನಲ್ಲಿ ಕಾರ್ಯಾಚರಣೆ ನಡೆಯಲಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ತಪಾಸಣೆ ಹಮ್ಮಿಕೊಳ್ಳುತ್ತೇವೆ. ಚೆಕ್‌ಪೋಸ್ಟ್‌ಗಳಲ್ಲೂ ಅನ್ಯ ರಾಜ್ಯದಿಂದ ಬರುವ ವಾಹನಗಳ ತಪಾಸಣೆ ನಡೆಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್‌ ಮಾತನಾಡಿ, ‘ನಗರದಲ್ಲಿ ಈಗ 61 ಲಕ್ಷ ವಾಹನಗಳಿವೆ.  ಹೀಗಾಗಿ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ವಾಹನ ಮಾಲೀಕರು ಆರು ತಿಂಗಳಿಗೊಮ್ಮೆ ವಾಹನಗಳ ಸಾಮರ್ಥ್ಯ ಪ್ರಮಾಣಪತ್ರ ಪಡೆಯಬೇಕು’ ಎಂದು ಸಲಹೆ ನೀಡಿದರು.

***
ನಗರದಲ್ಲಿ ಡೀಸೆಲ್‌ ವಾಹನಗಳಿಂದ ಶೇ 45ರಷ್ಟು ಮಾಲಿನ್ಯ ಆಗುತ್ತಿದೆ. 15 ವರ್ಷ ದಾಟಿದ ಡೀಸೆಲ್‌ ವಾಹನಗಳ ಸಂಚಾರವನ್ನು ನಿಷೇಧ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ.
-ಲಕ್ಷ್ಮಣ, ಮಂಡಳಿಯ ಅಧ್ಯಕ್ಷ

14 ಎಸ್‌ಟಿಪಿ ವಿರುದ್ಧ ಮೊಕದ್ದಮೆ
‘ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶಕ್ಕೆ ಕೊಳಚೆ ನೀರು ಬಿಡುತ್ತಿರುವ 14 ಕೊಳಚೆ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದೇವೆ’ ಎಂದು ಲಕ್ಷ್ಮಣ್‌ ತಿಳಿಸಿದರು.

‘ಜಲಾನಯನ ಪ್ರದೇಶದಲ್ಲಿ 588 ಖಾಸಗಿ ಎಸ್‌ಟಿಪಿಗಳು ಇವೆ. ಇದರಲ್ಲಿ 137 ಎಸ್‌ಟಿಪಿಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಕೊಳಚೆ ನೀರು ಕೆರೆಗೆ ಸೇರುತ್ತಿದೆ’ ಎಂದು ಅವರು ತಿಳಿಸಿದರು. 

‘ಬೆಳ್ಳಂದೂರು ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಲು ಎಸ್‌ಟಿಪಿಗಳ ನಿರ್ಮಾಣಕ್ಕೆ ಮಂಡಳಿಯಿಂದ ₹100 ಕೋಟಿ ನೀಡಲಿದ್ದೇವೆ. ಅಲಸೂರು ಕೆರೆಯಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ₹4 ಕೋಟಿ ಕೊಡುತ್ತೇವೆ. ಇದಕ್ಕೆ ಟೆಂಡರ್‌ ಆಗಿದೆ. ಶೀಘ್ರ ಕೆಲಸ ಶುರುವಾಗಲಿದೆ’ ಎಂದು ಅವರು ವಿವರ ನೀಡಿದರು.
‘900 ಎಕರೆ ಪ್ರದೇಶದಲ್ಲಿರುವ ಬೈರಮಂಗಲ ಕೆರೆ ಕಲುಷಿತಗೊಂಡಿದೆ. ಅದಕ್ಕೆ ಕೊಳಚೆ ನೀರು ಸೇರದಂತೆ ತಡೆಯಲು ಎರಡು ಸಭೆಗಳನ್ನು ನಡೆಸಲಾಗಿದೆ. ಬಿಡದಿ ಕೈಗಾರಿಕಾ ಸಂಘಟನೆಯ ಸದಸ್ಯರ ಜತೆಗೂ ಚರ್ಚೆ ನಡೆಸಿದ್ದೇವೆ. ಕೆರೆ ಅಭಿವೃದ್ಧಿಪಡಿಸಲು ಬಾಷ್‌, ಟೊಯೊಟಾ, ಕೊಕ್ಕೊಕೋಲಾ, ಪೆಪ್ಸಿ ಕಂಪೆನಿಗಳು ಆಸಕ್ತಿ ತೋರಿವೆ’ ಎಂದು ಅವರು ತಿಳಿಸಿದರು.

ಡೀಸೆಲ್‌ ವಾಹನಗಳಿಗೆ ಸೀಮೆಎಣ್ಣೆ ಕಲಬೆರಕೆ
ಡೀಸೆಲ್‌ ವಾಹನಗಳಿಗೆ ಸೀಮೆಎಣ್ಣೆ ಕಲಬೆರಕೆ ಮಾಡುತ್ತಿರುವ ಅಂಶವೂ ತಪಾಸಣೆ ಸಂದರ್ಭದಲ್ಲಿ ಬಹಿರಂಗಗೊಂಡಿದೆ. ‘ಮೈಸೂರು ರಸ್ತೆಯಲ್ಲಿ ಗೂಡ್ಸ್‌ ವಾಹನಗಳ ಸಂಚಾರ ವ್ಯಾಪಕವಾಗಿದೆ. ಈ ವಾಹನಗಳು ಅತ್ಯಧಿಕ ಪ್ರಮಾಣದಲ್ಲಿ ಮಾಲಿನ್ಯ ಮಾಡುತ್ತಿವೆ. ಕೆಲವು ವಾಹನಗಳ ಹೊಗೆ ಸಹಿಸಲು ಆಗದೆ ಹಾಗೆಯೇ ಬಿಟ್ಟಿದ್ದೂ ಉಂಟು’ ಎಂದು ಲಕ್ಷ್ಮಣ್‌ ತಿಳಿಸಿದರು.

‘ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲೂ ಕಲಬೆರಕೆ ಆಗುತ್ತಿದೆ. ಹಣ ಉಳಿಸುವ ಉದ್ದೇಶದಿಂದ ಹಲವು ವಾಹನಗಳ ಮಾಲೀಕರೇ ಕಲಬೆರಕೆ ಮಾಡುತ್ತಿದ್ದಾರೆ. ಕಲಬೆರಕೆ ಆಗುತ್ತಿರುವ ವಿಷಯ ಕೆಲವು ವಾಹನಗಳ ಮಾಲೀಕರಿಗೆ ಗೊತ್ತಿಲ್ಲ. ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕೆಲಸ ಮಾಡಬೇಕಿದೆ. ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಲಾಖೆಗೆ ಪತ್ರ ಬರೆಯುತ್ತೇವೆ’ ಎಂದು ಅವರು ತಿಳಿಸಿದರು.
‘ಈ ಕಲಬೆರಕೆಯನ್ನು ಪತ್ತೆ ಹಚ್ಚುವುದು ಕಷ್ಟ. ಇದನ್ನು ಪತ್ತೆ ಹಚ್ಚುವ ಯಂತ್ರ ಎಂಆರ್‌ಪಿಎಲ್‌ ಹಾಗೂ ಎರಡು  ಕಂಪೆನಿಗಳ ಬಳಿ ಮಾತ್ರ ಇವೆ’ ಎಂದು ಹೇಳಿದರು. ಮಾಗಡಿ ರಸ್ತೆ, ಮೆಜೆಸ್ಟಿಕ್‌, ಮೈಸೂರು ರಸ್ತೆ, ಶಿವಾಜಿನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲಬೆರಕೆ ಆಗುತ್ತಿದೆ ಎಂದು ಹೇಳಿದರು.

ಇಂಡಿಕಾ ಕಾರುಗಳಿಂದಲೂ ಮಾಲಿನ್ಯ: ವಿಮಾನ ನಿಲ್ದಾಣ ರಸ್ತೆಯಲ್ಲಿ ಇಂಡಿಕಾ ಕಾರುಗಳಿಂದಲೂ ವಾಯುಮಾಲಿನ್ಯ ಆಗುತ್ತಿರುವ ಸಂಗತಿ ಬೆಳಕಿಗೆ ಬಂತು. ಶೇ 65ರಷ್ಟು ಕಾರುಗಳು ತಪಾಸಣೆಯಲ್ಲಿ ಅನುತ್ತೀರ್ಣಗೊಂಡವು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT