ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಹಿತ, ಕನ್ನಡಿಗರ ಆತ್ಮಗೌರವ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಬಂದ್ ಹಿಂದೆ ಕರ್ನಾಟಕದ ಹಿತ ಮಾತ್ರ ಇದೆಯೇ?’ ಎಂಬ ಪದ್ಮರಾಜ ದಂಡಾವತಿಯವರ ಲೇಖನ (ನಾಲ್ಕನೇ ಆಯಾಮ, ಸೆ. 27) ಓದಿದೆ. ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಕೊರೆಯುತ್ತಿದ್ದ, ನನ್ನಿಂದ ವ್ಯಕ್ತಪಡಿಸಲು ಆಗದೆ ಚಡಪಡಿಸುತ್ತಿದ್ದ ಅನಿಸಿಕೆಗಳನ್ನು ಸ್ಪಷ್ಟವಾಗಿ, ಧೈರ್ಯವಾಗಿ ಅವರು ಹೇಳಿದ್ದಾರೆ. ಈ ಅಂಕಣ ಓದಿದ ಬಳಿಕ, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ  ‘ಹೊಸ ವಿಚಾರಗಳು’ ಪುಸ್ತಕ ಓದಿದೆ. ಅದರಲ್ಲಿ ತೇಜಸ್ವಿ 22 ವರ್ಷಗಳ ಹಿಂದೆ ಕಾವೇರಿ ಗಲಭೆ ಮತ್ತು ಕರ್ನಾಟಕ ಬಂದ್ ಸಂದರ್ಭದಲ್ಲಿ ಬರೆದ ಒಂದು ಲೇಖನ ಮತ್ತು ಎಚ್.ಡಿ.ದೇವೇಗೌಡರಿಗೆ ಅವರು ಬರೆದ ಒಂದು ಪತ್ರ ನನ್ನಲ್ಲಿ ತೀವ್ರ ಆಸಕ್ತಿ ಮೂಡಿಸಿತು. ನನಗೆ ಆಗಾಗ್ಗೆ ತಿಳಿ ಹೇಳುತ್ತಿದ್ದ ನಮ್ಮ ಜಿಲ್ಲೆಯವರೇ ಆಗಿದ್ದ ತೇಜಸ್ವಿಯವರು ಎರಡು ದಶಕಗಳ ಹಿಂದೆ ವ್ಯಕ್ತಪಡಿಸಿದ್ದ ಭಾವನೆಗಳ ಪ್ರತಿಫಲನವೋ ಎಂಬಂತೆ ದಂಡಾವತಿ ಅವರ ಬರಹ ಕಾಣಿಸಿದ್ದು ನನ್ನನ್ನು ಮತ್ತಷ್ಟು ಚಕಿತಗೊಳಿಸಿತು.

ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಎರಡು ಮಾತಿಲ್ಲ. ಆದರೆ ನ್ಯಾಯ ಪಡೆದುಕೊಳ್ಳುವ ಬಗೆ ಹೇಗೆ? ಕೇಂದ್ರ, ನ್ಯಾಯಮಂಡಳಿಯ ಮುಂದೆ ಕರ್ನಾಟಕ ಮಂಡಿಯೂರಿ ಬೇಡಿಕೊಳ್ಳಬೇಕೆ? ಕರ್ನಾಟಕ ಬಂದ್‌ನಂತಹ ಅಸ್ತ್ರ ಪ್ರಯೋಗ ಅನಿವಾರ್ಯವೇ? ನಾವು ನೆಲ-ಜಲ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ನ್ಯಾಯಮಂಡಳಿಗಳ ಅವಕೃಪೆ, ಅಲಕ್ಷ್ಯಕ್ಕೆ ಪದೇ ಪದೇ ಗುರಿಯಾಗುತ್ತಿರುವುದಕ್ಕೆ ಕಾರಣವೇನು?

ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ನಾವೆಲ್ಲ ಹೀಗೆ ಅಸಹಾಯಕರಾಗಿರುವುದೇಕೆ? ಪಕ್ಷಗಳ ರಾಜಕೀಯ ಲಾಭಕ್ಕೋ, ವೋಟ್‌ ಬ್ಯಾಂಕಿಗಾಗಿಯೋ ನಮ್ಮಂತಹ ರಾಜಕಾರಣಿಗಳು  ಹೀಗೆ ವರ್ತಿಸಬೇಕೆ? ಹಾಗಾದಲ್ಲಿ ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗಳ  ಸರಮಾಲೆಯೇ ನಮಗೆ ಎದುರಾಗುತ್ತದೆ.

ಬಂದ್, ಧರಣಿ, ಮುಷ್ಕರ, ಪ್ರತಿಭಟನಾ ಮೆರವಣಿಗೆ, ಅಣಕು ಶವಯಾತ್ರೆ... ಇವೆಲ್ಲವುಗಳನ್ನು ಮೀರಿದ ಪರಿಹಾರದ ಚಿಂತನೆಯನ್ನು ನಾವೀಗ ಮಾಡಬೇಕಾಗಿದೆ. ಅಂತಹ ಚಿಂತನೆಗೆ ದಿಟ್ಟ ಹಾಗೂ ಸ್ಪಷ್ಟ ಸೈದ್ಧಾಂತಿಕ ಬದ್ಧತೆ ಬೇಕು. ಅದಕ್ಕೆ ಕನ್ನಡಿಗರು ಮಾನಸಿಕವಾಗಿ ಇನ್ನೂ ತಯಾರಿ ಆಗಿಲ್ಲದಿರುವುದೇ ಸದ್ಯದ ದುರಂತ.

1992ರ ಫೆಬ್ರುವರಿ 16ರ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಾದೇಶಿಕ ಪಕ್ಷದ ಸಾಧ್ಯಾಸಾಧ್ಯತೆಯ ಬಗ್ಗೆ ತೇಜಸ್ವಿ ಬರೆದ ಲೇಖನ ಈ ಸಂದರ್ಭದಲ್ಲಿ ಪ್ರಸ್ತುತವೆನ್ನಿಸುತ್ತದೆ.

‘ಕಾವೇರಿ ನೀರಿನ ಬಗ್ಗೆ, ಕರ್ನಾಟಕದ ಹಿತಾಸಕ್ತಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವವರು ಶಾಸಕರ ರಾಜೀನಾಮೆಗೆ ಆಗ್ರಹಪಡಿಸುವುದಾಗಲಿ, ಅವರು ಕೊಡುತ್ತೇನೆಂದು ಹೇಳುವುದಾಗಲಿ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಶಾಸಕರೆಲ್ಲ ರಾಜೀನಾಮೆ ಕೊಟ್ಟು ಮೊನ್ನೆ ಮಾಡಿದ ಹಾಗೆ ಎಲ್ಲ ಪಕ್ಷಗಳೂ ಬಂದ್‌ಗೆ ಕರೆಕೊಟ್ಟು ದೊಂಬಿ ಎಬ್ಬಿಸಿದರೆ ಕರ್ನಾಟಕವನ್ನು ಗಲಭೆ ಪೀಡಿತ ಪ್ರದೇಶ ಎಂದು ಘೋಷಿಸಿ ಒಬ್ಬ ಖದೀಮ ರಾಜ್ಯಪಾಲನನ್ನು ನೇಮಿಸಿ ಚುನಾವಣೆಯೇ ನಡೆಸದೆ ಕೇಂದ್ರ, ಕರ್ನಾಟಕವನ್ನು ಅನೇಕ ವರ್ಷಗಳವರೆಗೆ ಆಳಬಹುದು. ದೊಂಬಿ ಗಲಭೆಗಳಿಂದ ನಾವು ಕರ್ನಾಟಕದಲ್ಲಿ ಇಂಥ ಪರಿಸ್ಥಿತಿಯನ್ನು ರೂಪಿಸುತ್ತೇವೆ...

ಆಂಧ್ರ, ತಮಿಳುನಾಡುಗಳಲ್ಲಿ ಬಲವಾದ ಪ್ರಾದೇಶಿಕ ಪಕ್ಷಗಳಿವೆ. ಆದ್ದರಿಂದ ಅವರ ಮಾತಿಗೆ ಕೇಂದ್ರ ಸರ್ಕಾರವಾಗಲಿ ನ್ಯಾಯಮಂಡಳಿ
ಯಾಗಲಿ ಹೆಚ್ಚು ಬೆಲೆ ಕೊಡುತ್ತದೆ. ಕರ್ನಾಟಕ ಈವರೆಗೂ ಅಂಥ ರಾಜಕೀಯ ಪಕ್ಷವನ್ನಾಗಲಿ ರಾಜಕಾರಣಿಯನ್ನಾಗಲಿ ರೂಪಿಸಲಿಲ್ಲ. ಕೇಂದ್ರಕ್ಕೆ ನಜರು ಒಪ್ಪಿಸುವ ಸಾಮಂತರು ಮಾತ್ರ ಇಲ್ಲಿ ಬಂದಿದ್ದಾರೆ... ಪ್ರಾದೇಶಿಕ ಪಕ್ಷ        ನಮ್ಮ ರಾಜಕೀಯ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ...’

‘...ಇಂಥ ಸಂದರ್ಭದಲ್ಲಿ ಕನ್ನಡಿಗರ ಆಶೋತ್ತರಗಳನ್ನು ಬಲವಾಗಿ ಪ್ರತಿಪಾದಿಸುವ ಪಕ್ಷ ಮತ್ತು ರಾಜಕಾರಣಿಗಳು ಕನ್ನಡ ನಾಡಿನಲ್ಲಿ ಇಲ್ಲದಿದ್ದರೆ ನಾವು ನದಿ ನೀರಿನಂತೆಯೇ  ನೆಲವನ್ನೂ ಕಳೆದುಕೊಳ್ಳುತ್ತೇವೆ. ನಜರು ಒಪ್ಪಿಸುವ  ಹುಜೂರುಗಳಾಗಿರುವ ನಮ್ಮ ಪ್ರಸ್ತುತ  ರಾಜಕಾರಣಿಗಳು ತಾವು ಅಧಿಕಾರದಲ್ಲಿ ಮುಂದುವರೆಯಲು ನಾಡಿನ ಹಿತಾಸಕ್ತಿಯನ್ನು ಅಲಕ್ಷಿಸಲು ಹೇಸುವುದಿಲ್ಲ.

ಬಂದ್‌ಗೆ ಕರೆ ನೀಡುವುದು ದೊಂಬಿ ಲೂಟಿ ನಡೆಸುವುದು ಅತ್ಯಂತ ಕ್ಷುದ್ರ ರಾಜಕಾರಣ. ಕಳ್ಳಕಾಕರು, ಡಕಾಯಿತರು ಯಾವ ರಾಜ್ಯ ಹಿತಾಸಕ್ತಿಯನ್ನಾದರೂ  ಕಾಯಲು ಸಾಧ್ಯವೆ. ಕನ್ನಡನಾಡು ಇಂಥ ರಾಜಕಾರಣಿಗಳನ್ನು ಈವರೆಗೆ  ರೂಪಿಸಿದ್ದು, ವಿಷಾದದ ಸಂಗತಿ...’ ಎಂದು ತೇಜಸ್ವಿ ಬರೆದಿದ್ದರು. ಅವರ ಈ ಮಾತು ನಮ್ಮನ್ನು ಈಗ ಚಿಂತನೆಗೆ ಹಚ್ಚಬೇಕಾಗಿದೆ. ಅಂತಹ ವಾತಾವರಣ ನಿರ್ಮಿಸುವುದಕ್ಕೆ ಮಾನಸಿಕವಾಗಿ ತಯಾರಾಗಬೇಕಾಗಿದೆ.

ಇದು ಕರ್ನಾಟಕದ ಅಭಿವೃದ್ಧಿಗೆ ಮಾತ್ರ ಸಂಬಂಧಿಸಿದ ವಿಷಯ ಎಂದು ತೇಜಸ್ವಿಯವರು ಭಾವಿಸಿಲ್ಲ. ಅದನ್ನೂ ಮೀರಿ ಕನ್ನಡಿಗರ ಆತ್ಮಗೌರವದ ಪ್ರಶ್ನೆಯೆಂದೇ ಅವರು ಭಾವಿಸುತ್ತಾರೆ. 1992ರಲ್ಲಿ ಕಾವೇರಿ ನದಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡು ಎಚ್.ಡಿ. ದೇವೇಗೌಡರು ಕರ್ನಾಟಕ ವಿಕಾಸ ವೇದಿಕೆಯ ಮೂಲಕ ಹೋರಾಟದ ಮುಂಚೂಣಿಯಲ್ಲಿದ್ದಾಗ ತೇಜಸ್ವಿಯವರು ದೇವೇಗೌಡರಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾರೆ– ‘ಇತ್ತೀಚಿನ ಕಾವೇರಿ ನದಿ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿಷಯದಲ್ಲಿ ತಮ್ಮ ಪ್ರತಿಕ್ರಿಯೆ ಓದಿದೆ.

ಈ ಕುರಿತು ನನ್ನ ಕೆಲವು ದೃಷ್ಟಿಕೋನಗಳನ್ನು ನಿಮ್ಮ ಅವಗಾಹನೆಗೆ ತರಲು ಈ ಕಾಗದ ಬರೆದಿದ್ದೇನೆ. ದಕ್ಷಿಣ ಭಾರತದಲ್ಲಿ ಈವರೆಗೂ ಇದ್ದ ಶಾಂತಿಯನ್ನು ಕದಡುವಂಥ ಪ್ರಯತ್ನ ಇದೆಂದೇ ನನ್ನ ಭಾವನೆ. ಇದು ಉದ್ದೇಶಪೂರ್ವಕ ಎಂದು ಆಪಾದಿಸಲು ನನಗೆ ಇಷ್ಟವಿಲ್ಲವಾದರೂ ಈ ತೀರ್ಪಿನಿಂದ ದೇಶದ ಈ ಭಾಗದಲ್ಲಿ ರೂಪುಗೊಳ್ಳುವ ಚಾರಿತ್ರಿಕ ಒತ್ತಡಗಳು ಉತ್ತರ ಭಾರತದಲ್ಲಿಯಂಥ ಅಶಾಂತಿಯುತ ವಾತಾವರಣಕ್ಕೆ ಪೂರ್ವಭಾವಿಯಾದ ಸಿದ್ಧತೆಗಳನ್ನು ರೂಪಿಸುತ್ತಿವೆ. ರಾಜ್ಯ ರಾಜ್ಯಗಳ ನಡುವಿನ ವಿವಾದಗಳನ್ನು ಸರ್ವೋಚ್ಚ ನ್ಯಾಯಾಲಯ ಇಬ್ಬರು ವ್ಯಕ್ತಿಗಳ ನಡುವಿನ  ವಿವಾದಗಳಂತೆ ಪರಿಗಣಿಸಿ ತೀರ್ಮಾನಿಸುವುದರಲ್ಲಿ ಅರ್ಥವೇ ಇಲ್ಲ...’

‘...ಸೂಕ್ಷ್ಮ ಸಾಂಸ್ಕೃತಿಕ ಸಾಮಾಜಿಕ  ಆಯಾಮಗಳನ್ನು  ನಾಲ್ಕು ಗೋಡೆ ಮಧ್ಯೆ ಕುಳಿತು ತೀರ್ಪು ಕೊಡುವ ನ್ಯಾಯಾಧೀಶರು ಅರಿಯುವುದು ಸಾಧ್ಯವೇ ಇಲ್ಲ. ಮತ್ತು ಅದಕ್ಕೆ ಅವರಿಗೆ ಯಾವ ಪೂರ್ವಸಿದ್ಧತೆಗಳೂ ಇಲ್ಲ. ಒಂದು ನದಿಯೂ ಅದರ ನೀರೂ ಒಂದು ದೇಶದ ಸಂಸ್ಕೃತಿ ಚರಿತ್ರೆಯೊಳಗೇ ಹಾಸುಹೊಕ್ಕಾಗಿ ಹರಿದಿರುತ್ತದೆ... ತಾವು ಕನ್ನಡಿಗರಿಗೆ  ಆಗುತ್ತಿರುವ  ಆರ್ಥಿಕ ಮತ್ತು ರಾಜಕೀಯ ಅನ್ಯಾಯದ ಜೊತೆಗೆ ಕನ್ನಡಿಗರಿಗೆ  ಆಗುತ್ತಿರುವ ಈ ತೇಜೋವಧೆಯನ್ನು ಮುಖ್ಯವಾಗಿ ಪರಿಗಣಿಸಬೇಕು. ನಾವು ಕೇವಲ ಅಭಿವೃದ್ಧಿ ಮತ್ತು ಅಧಿಕಾರಗಳಿಗಾಗಿ ಮಾತ್ರ ಹುಟ್ಟಿ ಬದುಕುತ್ತಿರುವವರಲ್ಲ. ನಮ್ಮ ಆತ್ಮಗೌರವ ಎಲ್ಲಕ್ಕಿಂತ ಮುಖ್ಯವಾದುದಲ್ಲವೇ? ಕೇಂದ್ರ ಸರ್ಕಾರ ಮತ್ತು ಕೋರ್ಟುಗಳ ವಿವೇಕಶೂನ್ಯ ಇತ್ಯರ್ಥಗಳಿಂದ ಆಗುವ ಸಾಂಸ್ಕೃತಿಕ ಪರಿಣಾಮಗಳನ್ನು ನೀವು ಪ್ರಧಾನವಾಗಿ ಇನ್ನು ಮುಂದೆ ಪ್ರಸ್ತಾಪಿಸಬೇಕಾಗಿ  ಕೋರುತ್ತೇನೆ...’

ತೇಜಸ್ವಿಯವರ ಮೇಲಿನ ಮಾತುಗಳು, ಕಳಸಾ ಬಂಡೂರಿ ಸಮಸ್ಯೆ ಮತ್ತು ಮೊನ್ನೆ ನಡೆದ ಕರ್ನಾಟಕ ಬಂದ್ ಕುರಿತು ಹೇಳಿದಂತಿವೆ. ನೆಲ-ಜಲ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ತೇಜಸ್ವಿಯವರ ಮಾತುಗಳು ನನ್ನನ್ನು ಮತ್ತೆ ಮತ್ತೆ ಕಾಡುತ್ತಲೇ ಇವೆ. ನೀವು ತೇಜಸ್ವಿಯವರ ಅನಿಸಿಕೆ ಓದಿದ ಬಳಿಕ ನಿಮಗೂ ಹಾಗೆ ಅನ್ನಿಸಿದಲ್ಲಿ ಅದೇ ಮುಂದೆ ನಮ್ಮಂತಹ ಸಮಾನ ಮನಸ್ಕರ ಒಟ್ಟು ಚಿಂತನೆಯಾಗಿ ಸಮಷ್ಟಿ ಸ್ವರೂಪ ಪಡೆದುಕೊಳ್ಳಬಹುದೇನೋ ಎಂಬ ಆಸೆ ನನ್ನದು.
- ಲೇಖಕ ಕಡೂರು ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT