ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಣ್ಣವರ್: ಶ್ರೀಸಾಮಾನ್ಯರ ಹಿತಚಿಂತಕ

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ನಿಂಗಪ್ಪ ನೀಲಪ್ಪ ಕಲ್ಲಣ್ಣವರ ನಾಡು ಕಂಡ ಅಪರೂಪದ ಸಮಾಜವಾದಿ ನಾಯಕ. ವಿಳಾಸವೇ ಇಲ್ಲದವರಿಗೆ ವಿಳಾಸ ಒದಗಿಸುವ ಕಾರ್ಯದಲ್ಲಿ ಅವರದು ಮಹತ್ವದ ಸಾಧನೆ. ಅವರ ವಿಶಿಷ್ಟ ಬದುಕು–ಸಾಧನೆಯ ಪರಿಚಯ ಇಲ್ಲಿದೆ.

ಅಸಾಧಾರಣ ವಿದ್ವತ್ತು, ಬದುಕಿನ ಶ್ರದ್ಧೆ, ಹೊಸ ಸಮಾಜದ ಕನಸುಗಳು ಮತ್ತು ಅಂತಃಕರಣ ಪೂರ್ವಕ ಬದುಕಿನ ಮೂಲಕ ಅಕ್ಷರಶಃ ಸಂತನಂತೆ ಬದುಕಿದ ಕೆ.ಎಂ. ಶಂಕರಪ್ಪನವರು ಒಮ್ಮೆ ತೀರಾ ಸಹಜವಾಗಿ ಕೆಲವು ಹೆಮ್ಮೆಯ ಮಾತುಗಳನ್ನು ಹೇಳಿದ್ದರು: ‘‘ಲೋಹಿಯಾ ಉಸಿರು ತಾಕಿದವರಿರಲಿ, ಹೆಸರು ಕೇಳಿದವರೂ ಮಾನವೀಯ ಕಳಕಳಿಯ ವಿಶಿಷ್ಟ ಚೇತನಗಳಾಗಿ ಮಾರ್ಪಡುತ್ತಾರೆ’’. ಈ ಬಗೆಯ ಕಳಕಳಿಯ ಜಾಯಮಾನದ ನಮ್ಮ ಹುಬ್ಬಳ್ಳಿಯ ಕಲ್ಲಣ್ಣವರ್ ಈಗ ಬದುಕಿದ್ದರೆ, ಎಂಬತ್ತೇಳು ವರ್ಷಗಳಾಗುತ್ತಿದ್ದುವು; ಅವರು ಗತಿಸಿ ಈಗಾಗಲೇ ಮೂವತ್ತಮೂರು (ಜನವರಿ 31, 1982) ಸಂಕ್ರಾಂತಿಗಳು ಸದ್ದಿಲ್ಲದೆ ಉರುಳಿವೆ.

ಹುಬ್ಬಳ್ಳಿಯ ನಿಂಗಪ್ಪ ನೀಲಪ್ಪ ಕಲ್ಲಣ್ಣವರ ಅವರು ಸಾರ್ವಜನಿಕ ವಲಯದ ಅಪರೂಪದ ವ್ಯಕ್ತಿತ್ವವಾಗಿದ್ದರು. ಎಳೆತನದಲ್ಲೇ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಅವರು, ಕರ್ನಾಟಕ ಏಕೀಕರಣದ ಆಶಯಗಳಿಗೂ ತಮ್ಮನ್ನು ತೆತ್ತುಕೊಂಡವರು. ಇದೆಲ್ಲದರ ನಡುವೆಯೂ ಇವರ ಹದಿಹರೆಯದ ದಿನಗಳಲ್ಲಿ ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ ಅವರಂತಹ ಅಪ್ರತಿಮ ಬದ್ಧತೆಯ ಸಮಾಜವಾದಿ ಹೋರಾಟಗಾರರ ಆದರ್ಶಗಳಿಗೆ ಮಾರುಹೋದವರು. ಈ ಎಲ್ಲ ಪ್ರಮುಖ ಕಾರಣಗಳಿಂದಾಗಿ ಬಡತನವನ್ನೇ ಹಾಸುಂಡು ಹೊದ್ದು ಮಲಗುವ ಸ್ಥಿತಿಯಲ್ಲಿದ್ದರೂ ತುಂಬು ಸ್ವಾಭಿಮಾನಿ ಯಾಗಿ, ಜನತಂತ್ರ ವ್ಯವಸ್ಥೆಯ ಸಂವೇದನಾಶೀಲ ಧುರೀಣರಾಗಿ ಬಾಳಿದವರು. ರೈತ, ಕಾರ್ಮಿಕ, ದಲಿತ, ಹಿಂದುಳಿದ ತಬ್ಬಲಿ ಸಮೂಹ ಹಾಗೂ ಮಹಿಳಾ ಜನವರ್ಗಗಳ ಸಮಸ್ಯೆ-ಸಂಕೋಲೆಗಳ ಬಗ್ಗೆ ಆಳವಾದ ಅರಿವಿದ್ದ ಕಲ್ಲಣ್ಣವರ ತಮ್ಮೆಲ್ಲ ಅಸಹಾಯತೆಯ ನಡುವೆಯೂ ದಣಿವರಿಯದೆ ಕಾರ್ಯಶೀಲರಾಗಿದ್ದು ಸಾರ್ಥಕ ಬದುಕನ್ನು ಕಂಡವರು.

ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ದೂರದ ಉತ್ತರ ಕರ್ನಾಟಕದ ಕಲ್ಲಣ್ಣವರ ನನಗೆ, ನನ್ನ ವಿದ್ಯಾರ್ಥಿ ಜೀವನದಲ್ಲೇ ಆತ್ಮೀಯರಾದವರು. ಬುದ್ಧ, ಬಸವ, ಗಾಂಧಿ, ಲೋಹಿಯಾ, ಅಂಬೇಡ್ಕರ್ ಮತ್ತು ಕುವೆಂಪು ಅವರ ಚಿಂತನೆಗಳ ಪ್ರಭಾವಕ್ಕೆ ಚಿಕ್ಕಂದಿನಲ್ಲೇ ಒಳಗಾಗಿದ್ದ ನಾವು ಕೆಲವು ಓರಗೆಯ ಗೆಳೆಯರು ನಂನಮ್ಮ ಮಿತಿಗಳ ಒಳಗೇ ಹಲವಾರು ಸಾಮಾಜಿಕ–ಆರ್ಥಿಕ ಬದಲಾವಣೆಯ ಕಾರ್ಯಕ್ರಮಗಳನ್ನು ಕಳೆದ ಅರವತ್ತರ ದಶಕದಲ್ಲಿಯೇ ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳುತ್ತಿದ್ದೆವು. ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್, ಅನಂತ ಮೂರ್ತಿ, ಶಾಂತವೇರಿ ಗೋಪಾಲಗೌಡರಂತಹ ಜನಪರ ಚಿಂತಕ-ಸಾಹಿತಿ-ಹೋರಾಟ ಗಾರರ ಚಟುವಟಿಕೆಗಳು ನಮ್ಮ ಕಣ್ಣೆದುರಿನಲ್ಲಿ ಆಗ ನಳನಳಿಸುತ್ತಿದ್ದವು. ಆ ಚಟುವಟಿಕೆಗಳ ಭಾಗವಾಗಿದ್ದ ನಮ್ಮ ಬಗ್ಗೆ ಬಿ. ಬಸವಲಿಂಗಪ್ಪ, ಕೆ.ಎಚ್. ರಂಗನಾಥ್, ಎಲ್.ಜಿ. ಹಾವನೂರ್, ಕಲ್ಲೆ ಶಿವೋತ್ತಮರಾವ್ ಅವರಿಗೆ ತುಂಬಾ ಕುತೂಹಲ ಮತ್ತು ಪ್ರೀತಿಯ ಭಾವನೆಗಳಿದ್ದವು. ಈ ಬಳಗದ ಅವಿಭಾಜ್ಯ ಅಂಗವಾಗಿದ್ದ ಕಲ್ಲಣ್ಣವರ್ ಅವರ ಸರಳತೆ, ಸಹಜ ಉತ್ಸಾಹ, ಮುಗ್ಧತೆ ಮತ್ತು ಸಾಮಾಜಿಕ ಬದ್ಧತೆಯ ಬಗ್ಗೆ ನನಗೆ ತುಂಬಾ ಅಭಿಮಾನ ಉಂಟಾಯಿತು. ತಮ್ಮೆಲ್ಲ ಸಾರ್ವಜನಿಕ ಬದುಕಿನ ಜಂಜಾಟಗಳ ನಡುವೆ ಪತ್ರಕರ್ತರಾಗಿಯೂ ತೊಡಗಿಸಿಕೊಂಡಿದ್ದ ಇವರು ಆ ದಿನಗಳಲ್ಲಿ ‘ಜನಪ್ರಗತಿ’ ವಾರಪತ್ರಿಕೆಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮರಾಯರ ಒಡನಾಟದಲ್ಲಿದ್ದರು. ಆ ಕಾಲಕ್ಕೆ ಈ ಪತ್ರಿಕೆಯು ಪ್ರಗತಿಪರ ನಿಲುವುಗಳ ದಿಟ್ಟತನದ ಪ್ರತಿರೂಪವಾಗಿ ಕಾರ್ಯನಿರ್ವಹಿಸುತ್ತಿತ್ತು.

ಮೊದಲಿನಿಂದಲೂ ಕಲ್ಲಣ್ಣವರ ಅವರ ಸಾಮಾಜಿಕ ಬದ್ಧತೆಯನ್ನು ಚೆನ್ನಾಗಿ ಅರಿತಿದ್ದ ದೇವರಾಜ ಅರಸರು, ಹಲವಾರು ಚುನಾವಣಾ ಸಭೆಗಳಲ್ಲಿ ಇವರ ಪರಿಣಾಮಕಾರಿ ಭಾಷಣಗಳನ್ನು ಆಲಿಸಿದ್ದರು; ಅವಕಾಶವಿಹೀನರ ಬಗೆಗೆ ಕಲ್ಲಣ್ಣವರ್ ಅಂತರಂಗದಲ್ಲಿದ್ದ ಅಪಾರವಾದ ಕಳಕಳಿಯನ್ನು ಅರಿತಿದ್ದರು. ಹಾಗೆಯೇ ಅಧಿಕಾರದಲ್ಲಿದ್ದವರನ್ನು ಓಲೈಸುತ್ತಾ ಚಮಚಾಗಿರಿಯ ಮೂಲಕ ಖಾಸಗಿಯಾದ ಕಾರ್ಯ ಸಾಧಿಸಿಕೊಳ್ಳುವ ಲಕ್ಷಣಗಳಿಲ್ಲದ ಕಲ್ಲಣ್ಣವರ್‌ಗೆ ತಾವೇ ಅಭಿಮಾನಿಯಾಗಿದ್ದರು. ನಾಡಿನ ಎಲ್ಲಾ ಭಾಗಗಳಿಂದ ಈ ಬಗೆಯ ಉತ್ಸಾಹಿಗಳನ್ನು ಆಯ್ದುಕೊಳ್ಳುವ ಅರಸರ ಮನೋಭಾವಕ್ಕೆ ಅನುಗುಣವಾಗಿ ವಿಧಾನಪರಿಷತ್ತಿನ ಸದಸ್ಯರನ್ನಾಗಿಸಲು ತೀರ್ಮಾನಿಸಿದ್ದರು. ಆದರೆ, ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಪಕ್ಷದಲ್ಲೇ ಕೆಲವು ಅಡೆತಡೆಗಳಿದ್ದು, ಆತಂಕದ ಪರಿಸ್ಥಿತಿ ಇತ್ತು. ಈ ಸಂದರ್ಭದಲ್ಲಿ ನಾನು ಕಲ್ಲಣ್ಣವರ ಜೊತೆಯಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಕೆ. ಎಚ್. ರಂಗನಾಥ್ ಅವರನ್ನು ಕಂಡೆ: ‘ಸಾರ್, ಯಾವ ಕಾರಣಕ್ಕೂ ನಮ್ಮ ಕಲ್ಲಣ್ಣವರ್ ಶಾಸಕರಾಗುವ ಅವಕಾಶ ತಪ್ಪಬಾರದು’ ಎಂದು ನಾನು ನನ್ನ ಮಾತನ್ನು ಮುಗಿಸುವ ಮುನ್ನವೇ ಅವರು, ‘ವಿಳಾಸವೇ ಇಲ್ಲದವರಿಗೆ ವಿಳಾಸ ಒದಗಿಸುವ ಕಾರ್ಯ ನಮ್ಮದಾಗಬೇಕೆನ್ನುವ ತತ್ವದಲ್ಲಿ ನಾನು ನಂಬಿಕೆ ಇಟ್ಟವನು. ಕಲ್ಲಣ್ಣವರ್‌ಗೆ ಯಾವ ತೊಂದರೆಯೂ ಆಗಲಾರದು; ಧೈರ್ಯದಿಂದಿರಿ’ ಎಂದರು.
ಅದು ನಿಜ ಆಯ್ತು: ಆದರೆ, ಈ ವಿಚಾರದಲ್ಲಿ ಅರಸರು ತೆಗೆದುಕೊಂಡ ಆಸಕ್ತಿ, ತೊಂದರೆ ದೊಡ್ಡದೆನ್ನುವುದು ನಮಗೆಲ್ಲ ಗೊತ್ತಿತ್ತು. ನಿರ್ಗತಿಕರ ಪರವಾದ ಗಟ್ಟಿ ದನಿಯಾಗಿದ್ದ ಕಲ್ಲಣ್ಣವರ್ ಅವರಿಗೆ ಅವರ ಭಾಗದ ಘಟಾನುಘಟಿ ನಾಯಕರು ಸಹಜವಾಗಿಯೇ ವಿರೋಧವಾಗಿದ್ದರು. ಇವರ ಹೆಸರನ್ನು ಪಕ್ಷದ ಸಭೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು– ‘ಸಾಮಾಜಿಕ ನ್ಯಾಯದ ಪರವಾದ ಕಲ್ಲಣ್ಣವರ್ ಅವರ ಬದ್ಧತೆ ಅಪರೂಪವಾದುದ್ದು. ಇಂತಹ ನಾಯಕರು ನಮ್ಮ ಪಕ್ಷದಲ್ಲಿ ಹೆಚ್ಚು ಜನರಿಲ್ಲ. ಇವರು ಶಾಸಕರಾಗುವ ಮೂಲಕ ನಮ್ಮ ಪಕ್ಷ ಮತ್ತು ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಲಭಿಸುತ್ತದೆ’ ಎಂದು ಹೇಳಿದ್ದ ಮಾತುಗಳನ್ನು ತೇವಭರಿತ ಕಣ್ಣುಗಳಲ್ಲಿ ಕಲ್ಲಣ್ಣವರ್ ನೆನೆದ ಕ್ಷಣ ಇನ್ನೂ ನನ್ನ ಕಣ್ಣುಗಳಲ್ಲಿ ಕಟ್ಟಿನಿಂತಿದೆ.

ಇದಾದ ಕೆಲದಿನಗಳಲ್ಲಿಯೇ ನಾನು 1974ರ ಕೊನೆಯಲ್ಲಿ ಡಾ. ಎಚ್. ನರಸಿಂಹಯ್ಯ ಮತ್ತು ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಸದಾಶಯಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದೆ. ಆಗ ನನ್ನ ಪತ್ನಿ ಮತ್ತು ಪುಟ್ಟಮಗಳು ಊರಿನಲ್ಲಿದ್ದರು. ನಾನು ಬೆಂಗಳೂರಲ್ಲಿ ಮನೆಹುಡುಕಿ, ಸಂಸಾರ ಹೂಡುವ ತನಕ ಜನರಲ್ ಹಾಸ್ಟೆಲ್‌ನ ತಮ್ಮ (ಶಾಸಕರ ಸಲುವಾಗಿ ಸರ್ಕಾರ ನೀಡುವ) ಕೊಠಡಿಯಲ್ಲೇ ಉಳಿಯಬೇಕೆಂದು ಕಲ್ಲಣ್ಣವರ್ ಆಗ್ರಹಿಸಿದರು. ಹೀಗಾಗಿ ನನ್ನ ವಸತಿ ಅವರ ಜೊತೆಗೇ ಆಯಿತು. ಎರಡನೇ ನಂಬರಿನ ಆ ರೂಂನಲ್ಲಿ ಅನೇಕ ಸಲ ನನ್ನನ್ನು ಮಂಚದ ಮೇಲೆ ಮಲಗಿಸಿ, ತಾವು ನೆಲದ ಮೇಲೆ ಬೇರೊಂದು ಹಾಸಿಗೆ ಹಾಸಿ ನಿರಾಳವಾಗಿ ನಿದ್ರಿಸುವ ಔದಾರ್ಯವನ್ನು ತೋರುತ್ತಿದ್ದರು.

ಮೇಲ್ಮನೆಯಲ್ಲಿ ನಡೆಯುತ್ತಿದ್ದ ಸ್ವಾರಸ್ಯಕರ ಚರ್ಚೆ ಮತ್ತು ವಾಗ್ಯುದ್ಧಗಳ ಬಗ್ಗೆ ನಾವು ಮಾತಾಡುತ್ತಿದ್ದೆವು. ಇಂತಹ ಮಾತುಕತೆಗಳ ನಡುವೆ ಒಮ್ಮೆ ವಿಧಾನ ಪರಿಷತ್ತಿನಲ್ಲಿ ಗೋಮಾಂಸ ನಿಷೇಧ ವಿವಾದದ ಕುರಿತು ಮುಖ್ಯಮಂತ್ರಿ ಅರಸರು ಮಾತನಾಡುತ್ತಾ– ‘ಜಗತ್ತಿನಾದ್ಯಂತ ಬೇರೆ ಬೇರೆ ಜನಾಂಗಗಳಲ್ಲಿ ಬಗೆಬಗೆಯ ಆಹಾರ ಪದ್ಧತಿ ಇದೆ; ಹಾಗೆಯೇ ನಮ್ಮಲ್ಲಿ ಕೂಡ. ಜನತಂತ್ರ ವ್ಯವಸ್ಥೆಯಲ್ಲಿ ಇದನೆಲ್ಲಾ ನಾವು ಸಹಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಬೇಕಾಗುತ್ತದೆ’ ಎಂದು ಪ್ರತಿಭಟನೆಯ ನಡುವೆಯೇ ಹೇಳಿದ್ದನ್ನು ಕಲ್ಲಣ್ಣವರ್ ನನಗೆ ವಿವರಿಸಿದರು. ಆಗ ನಾನು ಸಹಜವಾಗಿ– ಅನೇಕ ಸಂಸ್ಕೃತ ಶ್ಲೋಕಗಳಲ್ಲೇ ಇರುವ, ಗೋಮಾಂಸದ ಅಗ್ಗಳಿಕೆಯನ್ನು ಪ್ರಶಂಸಿಸುವ ಸಂಗತಿಗಳ ಬಗ್ಗೆ ಪ್ರಸ್ತಾಪಿಸಿದೆ. ಮರುದಿನದ ಅರಸರ ಭೇಟಿಯ ಸಂದರ್ಭದಲ್ಲಿ ಕಲ್ಲಣ್ಣವರ್ ಈ ಬಗ್ಗೆ ವಿವರಿಸಿದಾಗ, ಉಲ್ಲಸಿತರಾದ ಅರಸರು ಆ ಶ್ಲೋಕಗಳು ಮತ್ತು ಅದರ ಕನ್ನಡ ಅನುವಾದದ ಮಾಹಿತಿಗಳನ್ನು ತುರ್ತಾಗಿ ತರುವಂತೆ ತಿಳಿಸಿದ್ದರು.

ನಾವೆಲ್ಲ ಗೆಳೆಯರು ಯಜ್ಞಯಾಗಾದಿಗಳ ಸಂಬಂಧದ ಆಯ್ದ ಶ್ಲೋಕಗಳನ್ನು ಶಬ್ದಾರ್ಥ ಸಹಿತ ಸಡಗರದಿಂದ ಕಳಿಸಿಕೊಟ್ಟೆವು. ಅರಸರು ಅದನ್ನು ಕುತೂಹಲಭರಿತ ಚರ್ಚೆಯ ನಡುವೆ ಸಂದರ್ಭೋಚಿ ತ ವಾಗಿ ಬಳಸಿಕೊಂಡು ವಿರೋಧಿಗಳ ಬಾಯಿಮುಚ್ಚಿಸಿದರು.

ಎಲ್ಲರ ನಿರೀಕ್ಷೆಯಂತೆಯೇ ಕಲ್ಲಣ್ಣವರ್ ಶಾಸಕರಾಗಿ ಅದ್ಭುತವಾದ ಸಾರ್ವಜನಿಕ ಹೊಣೆಗಾರಿಕೆಯನ್ನು ನಿರ್ವಹಿಸಿದರು. ಒಂದು ಸಂದರ್ಭದಲ್ಲಿ ಬಡತನದ ಬೇಗೆಯಲ್ಲಿ ಬೆಂದವರ ದಿಕ್ಕುತೋಚದ ಸ್ಥಿತಿಯ ನಿಸ್ಸಹಾಯಕತೆಯ ಬಗ್ಗೆ ಭಾವುಕವಾಗಿ ಮಾತನಾಡುತ್ತಾ ಸದನದಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಇಡೀ ವಿಧಾನ ಪರಿಷತ್ತು ಕಂಗಾಲಾಗಿ, ಕ್ಷಣಕಾಲ ನಿಶ್ಶಬ್ದವಾಯಿತು. ಮತ್ತೊಮ್ಮೆ ತುರ್ತುಪರಿಸ್ಥಿತಿಯ ಅವಧಿಯಲ್ಲಿ ತಾವೇ ಆಡಳಿತ ಪಕ್ಷದ ಸದಸ್ಯರಾಗಿದ್ದೂ ಜನತಂತ್ರ ವ್ಯವಸ್ಥೆಯಲ್ಲಿ ಅಚಾನಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾದಾಗ ಕೇಂದ್ರಸರ್ಕಾರದ ಸರ್ವಾಧಿಕಾರದ ವರ್ತನೆಯನ್ನು ಉಗ್ರವಾಗಿ ಖಂಡಿಸಿದರು.

ಮೂಲತಃ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರ ವಿಚಾರಧಾರೆಗೆ ಮಾರುಹೋಗಿದ್ದ ಕಲ್ಲಣ್ಣವರ್ ಭಾವಾವೇಶಕ್ಕೆ ಒಳಗಾಗಿ ನಿರ್ಭೀತರಾಗಿ ಮಾತನಡುತ್ತಿದ್ದರು. ಆಗ ಖುದ್ದಾಗಿ ಸದನದಲ್ಲಿ ಮೆಚ್ಚುಗೆಯ ಮುಗುಳ್ನಗೆ ಸೂಸುತ್ತಾ ಕುಳಿತಿದ್ದ ಮುಖ್ಯಮಂತ್ರಿ ದೇವರಾಜ ಅರಸು ‘ಕಲ್ಲಣ್ಣವರ್, ತಾವು ಆಡಳಿತ ಪಕ್ಷದ ಶಾಸಕರೆನ್ನುವುದನ್ನು ಮರೆತಿದ್ದೀರಿ’ ಎಂದರು. ಅದರಿಂದಾಗಿ ಮತ್ತಷ್ಟು ಕೆರಳಿದ ಕಲ್ಲಣ್ಣವರ್, ‘ಸತ್ಯ ಹೇಳುವ ನನ್ನ ಹಕ್ಕು ಕಿತ್ತುಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ. ಬೇಕಾದರೆ ನನ್ನನ್ನೂ ಈ ಕೂಡಲೇ ಬಂಧಿಸಿ ನೀವು ಜೈಲಿಗೆ ನೂಕಬಹುದು ಅಷ್ಟೆ’ ಎಂದು ನಿಷ್ಠುರವಾಗಿ ಹೇಳಿದ್ದರು.


1973ರಲ್ಲಿ ಕರ್ನಾಟಕದ ಪ್ರಗತಿಪರ ಚಿಂತಕರೆಲ್ಲರೂ ಸಂಘಟಿತರಾಗಿ, ನೆರೆಯ ತಮಿಳುನಾಡಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಸಮಾಜಸುಧಾರಣಾ ಆಂದೋಲವನ್ನು ಉಂಟುಮಾಡಿದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರನ್ನು ಬೆಂಗಳೂರಿಗೆ ಕರೆಸಿ ವಿಚಾರವಾದಿ ಸಮ್ಮೇಳನ ನಡೆಸಲಾಯಿತು. ಈ ಐತಿಹಾಸಿಕ ಸಮಾವೇಶದಲ್ಲಿ ನಾವೆಲ್ಲಾ ಭಾಗವಹಿಸಿದ್ದೆವು. ಕನ್ನಡಿಗರೇ ಆಗಿದ್ದ ಪೆರಿಯಾರ್‌ರನ್ನು ನಾನು ಮತ್ತು ಕಲ್ಲಣ್ಣವರ್ ಸಂಪರ್ಕಿಸಿ, ಚರ್ಚಿಸಿದ ಚಿತ್ರ ನನ್ನ ಕಣ್ಣಲ್ಲಿ ಈಗಲೂ ಸ್ಪಷ್ಟವಾಗಿ ಅಚ್ಚೊತ್ತಿದೆ.

ಒಂದು ಜನತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ಮಂತ್ರಿ-ಶಾಸಕರು ಮತ್ತು ಅಧಿಕಾರಿಗಳು ಸಕಲಸೌಲಭ್ಯಗಳನ್ನು ಅನುಭವಿಸುತ್ತಿರುವ ಹೊತ್ತಿನಲ್ಲೇ- ಸಾರ್ವಜನಿಕ ವಲಯದ ನಿಷ್ಠಾವಂತ ಕಿಂಕರರಾಗಿ ದುಡಿಯಬೇಕೆನ್ನುವ ಮಹತ್ತರ ತತ್ತ್ವವನ್ನು ಒಪ್ಪಿರುವ ಕಲ್ಲಣ್ಣವರ್ ಹೊಣೆಗೇಡಿಗಳಾದ ಮಂತ್ರಿಮಾನ್ಯರಿಗೆ ಸತತವಾಗಿ ಭೂತಬಿಡಿಸುತ್ತಿದ್ದ ಚಿತ್ರಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ‘ನಿಮ್ಮ ಮಂತ್ರಿ ಎಲ್ಲಿದ್ದಾರೆ? ಎಷ್ಟು ಹೊತ್ತಿಗೆ ಸಿಗುತ್ತಾರೆ? ಸಹಜವಾಗಿ ಆಗಬೇಕಾಗಿದ್ದ ಈ ಕಾರ್ಯ ಇನ್ನೂ ಏಕೆ ಆಗಿಲ್ಲ?’ ಎಂದು ಸಚಿವರ ಆಪ್ತ ಸಹಾಯಕ - ಕಾರ್ಯದರ್ಶಿಗಳನ್ನು ಒಂದೇ ಸಮನೆ ಪ್ರಶ್ನಿಸುತ್ತಿದ್ದರು. ಮಂತ್ರಿಯೇ ಸಿಕ್ಕಾಗಂತೂ ಸಜ್ಜನಿಕೆ, ಬದ್ಧತೆ ಮತ್ತು ಜನಪರಕಾರ್ಯಗಳ ಬಗೆಗಿನ ಮುತುವರ್ಜಿಯ ಬಗ್ಗೆ ವಿವರಿಸುತ್ತಿದ್ದರು.

ಈ ಖಾದಿಪ್ರಿಯ ಸರಳವ್ಯಕ್ತಿಯ ಜೊತೆಗೆ ಹೆಚ್ಚುಕಾಲ ಕಾಲ್ನಡಿಗೆ ಮತ್ತು ಆಗಾಗ ಆಟೋ ಹತ್ತಿ ಬೆಂಗಳೂರಲ್ಲಿ ವಿವಿಧ ಅವಧಿಗಳಲ್ಲಿ ಚರ್ಚಿಸುತ್ತಾ ಸುತ್ತಾಡಿದ ದಿನಗಳು ನನ್ನ ನೆನಪಿನಲ್ಲಿ ಸಾಕಷ್ಟು ಉಳಿದಿವೆ. ಇವರ ಸರಳತೆ, ಮುಗ್ಧತೆ ಮತ್ತು ಗ್ರಾಮೀಣ ಹಿನ್ನೆಲೆಯ ಮನಸ್ಸಿನ ಪರಿಶುದ್ಧತೆಯನ್ನು ಕಂಡು ನಾನು ಬೆರಗಾಗುತ್ತಿದ್ದರೆ, ನನ್ನ ಜೊತೆ ಯಲ್ಲೇ ಇವರನ್ನು ಭೆಟ್ಟಿಯಾಗಲೂ ಬರುತ್ತಿದ್ದ ನನ್ನ ಆತ್ಮೀಯರಾಗಿದ್ದ ಡಿ.ಆರ್. ನಾಗರಾಜ ಮತ್ತು ಸಿದ್ದಲಿಂಗಯ್ಯ ಯಥಾಪ್ರಕಾರ ತಮ್ಮ ನಗರದ ಕಿಲಾಡಿತನ ಮತ್ತು ಚೇಷ್ಟೆಯ ಕ್ರಿಯಾಶೀಲತೆಯ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಎಚ್ಚರ ಮತ್ತು ತಮಾಷೆಯ ಅಂತರವನ್ನು ಸೊಗಸಾಗಿ ಕಾಯ್ದುಕೊಳ್ಳುತ್ತಿದ್ದರು.

ಗಾಂಧೀಯುಗದ ಪ್ರಭಾವಕ್ಕೆ ತೀವ್ರವಾಗಿ ಒಳಗಾಗಿದ್ದ ಕಲ್ಲಣ್ಣವರ್ ಮದ್ಯಪಾನದ ಕಡುವಿರೋಧಿಯಾಗಿದ್ದರು. ಒಮ್ಮೆ ಮುಖ್ಯಮಂತ್ರಿ ಅರಸರು ಹುಬ್ಬಳ್ಳಿ ಭಾಗದಲ್ಲಿ ಪ್ರವಾಸದಲ್ಲಿದ್ದಾಗ, ಅವರೊಡನೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಲಣ್ಣವರ್ ಮಾತಿನ ನಡುವೆ ಮದ್ಯವ್ಯಸನಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವಯಂ ಮದ್ಯಪಾನಪ್ರಿಯರಾಗಿದ್ದ ಅರಸರು ಈ ಮಾತುಗಳಿಂದಾಗಿ ಮುಜುಗರ ಅನುಭವಿಸಿದರು; ಇದರ ನಡುವೆಯೂ ಸಾವರಿಸಿಕೊಳ್ಳುತ್ತಾ ಅವರು, ‘ಅದು ಹಾಗಲ್ಲ ಕಲ್ಲಣ್ಣವರ್, ಬಿಯರ್ ಆರೋಗ್ಯಕ್ಕೆ ಒಳ್ಳೆಯದು. ಎಲ್ಲವನ್ನೂ ಕೆಟ್ಟದ್ದು ಎಂದು ತಳ್ಳುವುದು ವಿವೇಕವಲ್ಲ’ ಎಂದು ಹೇಳುತ್ತಾ ಬೇರೆ ವಿಷಯವನ್ನು ಪ್ರಸ್ತಾಪಿಸತೊಡಗಿದರು.

ಆಳವಾದ ಜೀವನಪ್ರೀತಿಯಿಂದ ತಮ್ಮ ಬದುಕನ್ನು ಅಕ್ಷರಶಃ ಸಾರ್ಥಕಪಡಿಸಿಕೊಂಡ ನಮ್ಮ ನಡುವಣ ಶ್ರೀಸಾಮಾನ್ಯ ಹಿರಿಯಜೀವವೊಂದರ ಜನಸಮುದಾಯದ ಬಗೆಗಿನ ಸಾಮಾಜಿಕ ನಿಷ್ಠೆಯು ಸಂವೇದನಾಶೀಲರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT