ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಮಸ್ಯೆ ನಿವಾರಿಸಿ

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಜನರು ಮತ್ತೊಮ್ಮೆ ಕಸ ಸಮಸ್ಯೆ ಎದುರಿಸು­ವಂತಾ­ಗಿದೆ. ಕಳೆದ ಎರಡು ವರ್ಷಗಳಲ್ಲಿ ಕಸದ ಕಗ್ಗಂಟು ಎದುರಾಗು­ತ್ತಿ­ರುವುದು ಇದು ಮೂರನೇ ಬಾರಿ. ಮಂಡೂರು ತ್ಯಾಜ್ಯ ವಿಲೇವಾರಿ ಘಟ­ಕಕ್ಕೆ ಕಸ ಸುರಿಯಲು ಗ್ರಾಮಸ್ಥರು ಬಿಡುತ್ತಿಲ್ಲ.

ಜೂನ್ 1ರೊಳಗೆ  ಕಸ ವಿಲೇ­­ವಾ­ರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಮಂಡೂರು ಗ್ರಾಮಸ್ಥರಿಗೆ ಮಾತುಕೊಟ್ಟಿದ್ದ ಸರ್ಕಾರ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಮತ್ತೊಂದಿಷ್ಟು ತಿಂಗಳು ಕಾಲಾವಕಾಶಬೇಕು ಎಂದು ಹೇಳುತ್ತಿದೆ. ಆದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ನಾಟಕವಾಡಲಾಗುತ್ತಿದೆಯೇ ಹೊರತು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ­ಪಡಿ­ಸಿ­ರುವ ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಬೆಂಗ­ಳೂರು ನಗರದಲ್ಲಿ ಪ್ರತಿದಿನ 4000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ಪೈಕಿ ಪ್ರತಿ ದಿನ ಮಂಡೂರು ಘಟಕಕ್ಕೆ ಸುಮಾರು 1500ರಿಂದ 1800 ಟನ್ ಕಸ ವಿಲೇ­ವಾರಿ­ಯಾಗುತ್ತದೆ. ಈಗ ಇಷ್ಟು ಪ್ರಮಾಣದ ಕಸ ಸುರಿ­ಯಲು ಪರ್ಯಾಯ ವ್ಯವಸ್ಥೆ ಇಲ್ಲ. ಮಳೆಗಾಲ ಬೇರೆ ಬರುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬ­ಣ­ವಾಗಲಿದೆ. ಪರಿಸ್ಥಿತಿ ಈ ಮಟ್ಟಕ್ಕೆ ಹೋಗಲು ಸರ್ಕಾ­ರದ ನಿಷ್ಕ್ರಿ­ಯ­ತೆಯೇ ಕಾರಣ.

ಬೆಂಗಳೂರಿನಲ್ಲಿ ಕಸ ನಿರ್ವಹಣೆ ಎಂಬುದು ₨ 400 ಕೋಟಿ ಚಿನ್ನದ ಮೊಟ್ಟೆ ಇಡುವ ವ್ಯವ­ಹಾರ. ಕಸ ಸಾಗಣೆ ವಿಚಾರ­ದಲ್ಲಿ ಗುತ್ತಿಗೆದಾರರು ಹಾಗೂ ರಾಜಕಾರಣಿಗಳ ಅಪ­ವಿತ್ರ ಮೈತ್ರಿ ಬಲವಾ­ಗಿದೆ. ಆದರೆ ಇದನ್ನು ಬಗ್ಗುಬಡಿಯಲಾಗದಿರು­ವುದು ಆಡಳಿತದ ವೈಫಲ್ಯ. ಈ ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಮುಖ್ಯ­ಮಂತ್ರಿ­ಗಳು ದೂರಿದ್ದಾರೆ. ಸಮಸ್ಯೆಗೆ ಹೀಗೆ ರಾಜ­ಕೀಯ ಬಣ್ಣ ನೀಡುತ್ತಾ ತನ್ನ ನಿಷ್ಕ್ರಿ­ಯ­ತೆಗೆ ನೆಪ ಹೇಳುವುದು ಜವಾ­ಬ್ದಾರಿ­ಯುತ ಸರ್ಕಾರದ ಲಕ್ಷಣವಲ್ಲ.

ಮೂಲದಲ್ಲೇ ಕಸ ವಿಂಗಡಣೆ ಹಾಗೂ ಸಂಸ್ಕರಣೆಗೆ ಬಿಬಿಎಂಪಿ ಮುಂದಾ­ಗ­­­ದಿರುವುದು ಕಸ ನಿರ್ವಹಣೆಯ ಸಮಸ್ಯೆಯನ್ನು ಜಟಿಲವಾಗಿಸು­ತ್ತದೆ. ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸಬೇಕು ಎಂಬ ಹೈಕೋರ್ಟ್ ನಿರ್ದೇಶ­ನವೂ ಪಾಲನೆಯಾಗಿಲ್ಲ. ಮನೆಗಳಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಪ್ರತ್ಯೇಕ­ವಾಗಿ ಸಂಗ್ರಹಿಸಿ ನೀಡಿದರೂ ಕಸ ಸಂಗ್ರಹಿಸುವ ವಾಹನದಲ್ಲಿ ಒಟ್ಟಿಗೇ ಸುರಿ­ಯು­ತ್ತಿರುವುದು ಅಕ್ಷಮ್ಯ. ತ್ಯಾಜ್ಯ ಸಂಗ್ರಹಿಸುವ ಕಾರ್ಮಿಕರಿಗೆ ತರಬೇತಿ ನೀಡು­ವಲ್ಲಿ  ಮುತುವರ್ಜಿ ವಹಿಸದಿರುವುದು ಎದ್ದು ಕಾಣಿಸುತ್ತದೆ. ಒಟ್ಟಾರೆ ಕಸ ನಿರ್ವಹಣೆಯಲ್ಲಿ ಉಡಾಫೆತನ ಢಾಳಾಗಿ ಪ್ರದರ್ಶಿತವಾಗುತ್ತಿದೆ.

ಸೇಲಂ­­ನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಬಂದಿದ್ದ ಸಚಿವ ಹಾಗೂ ಮೇಯರ್ ನೇತೃತ್ವದ ಬಿಬಿಎಂಪಿ ತಂಡ ಕಸ ನಿರ್ವಹಣೆಗೆ ವೈಜ್ಞಾನಿಕವಾದ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮಾತುಗಳನ್ನಾಡಿತ್ತು. ಆದರೆ ಈಗ ಮತ್ತೊಮ್ಮೆ ವಿಲೇವಾರಿಯಾಗದ ಕಸದ ರಾಶಿಯ ಕುರೂಪ ದರ್ಶನಕ್ಕೆ ನಗರ ಸಾಕ್ಷಿಯಾಗಬೇಕಾದ ಭೀತಿ ತಲೆದೋರಿದೆ.

ಕಸ ನಿರ್ವಹಣೆ ಬಿಬಿ­ಎಂ­ಪಿಯ ಜವಾಬ್ದಾರಿ. ಆದರೆ ಕಸ ಹಾಕಲು ಜಮೀನು ಹಾಗೂ ಸಂಸ್ಕರಣೆಗೆ ಅಗತ್ಯ ನೆರವು ನೀಡುವ ವಿಚಾರದಲ್ಲಿ ಸರ್ಕಾರದ  ಜವಾಬ್ದಾರಿಯೂ ಇದೆ. ಪರಿಸ್ಥಿತಿ ಈ ಮಟ್ಟಕ್ಕೆ ಹೋಗುವವರೆಗೆ ಸರ್ಕಾರ ವಿಳಂಬ ನೀತಿ ತೋರಿರು­ವುದು ಸರಿಯಲ್ಲ. ಪರಿಸ್ಥಿತಿ ಇನ್ನೂ ಕೈಮೀರುವ ಮೊದಲು ಸರ್ಕಾರ ಎಚ್ಚೆತ್ತು­ಕೊಳ್ಳಲಿ. ವಿಲೇವಾರಿಯಾಗದ ಕಸದಿಂದಾಗಿ ಮತ್ತೊಮ್ಮೆ ಮಾಹಿತಿ ತಂತ್ರ­ಜ್ಞಾನ ರಾಜಧಾನಿ ಬೆಂಗಳೂರಿನ ವರ್ಚಸ್ಸಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT