ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಾಗಾಣಿಕೆಯಲ್ಲಿ ಲಾರಿ ಮಾಫಿಯಾ: ಆರೋಪ

Last Updated 22 ಡಿಸೆಂಬರ್ 2014, 7:08 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ತಾಲ್ಲೂಕಿನ ಆರೂಢಿ, ಚಿಗರೇನಹಳ್ಳಿ, ಗುಂಡ್ಲಹಳ್ಳಿ ಮತ್ತಿತರ ಕಡೆಗಳಿಗೆ ಬೆಂಗಳೂರಿನ ಕಸ ಬರಲು ಲಾರಿ ಸಾರಿಗೆ ಮಾಫಿಯಾ  ಮುಖ್ಯ ಕಾರಣವಾಗಿದೆ ಎಂದು ಜನಸಂಘ ಪರಿಷತ್ ಕಾರ್ಯದರ್ಶಿ ರವಿಕೃಷ್ಣರೆಡ್ಡಿ ಆರೋಪಿಸಿದರು. ಅವರು ಭಾನುವಾರ ನಗರದಲ್ಲಿ  ನಡೆದ  ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನಲ್ಲೆ ಕಸ ವಿಲೇವಾರಿ ಮಾಡುವಂತೆ ನ್ಯಾಯಾಲಯ ಸೇರಿದಂತೆ ಹಲವಾರು ಪರಿಸರ ತಜ್ಞರು ಸಲಹೆ ಮಾಡಿದ್ದಾರೆ. ಕಸ ನಿರ್ವಹಣೆ ಬೆಂಗಳೂರಿನಲ್ಲೆ ಮಾಡಲು ಸಾಧ್ಯವಿರುವಾಗ ೮೦ ಕಿ.ಮೀ. ದೂರವಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಮುಂತಾದ ಗ್ರಾಮಗಳಿಗೆ ಕಸ ತರುತ್ತಿರುವುದರ ಹಿಂದೆ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವಿದೆ. ಇದರಲ್ಲಿ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು  ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ.  ದೊಡ್ಡಬಳ್ಳಾಪುರವನ್ನು ಬೆಂಗಳೂರಿನ ತಿಪ್ಪೆಗುಂಡಿಯಾಗಲು ತಾಲ್ಲೂಕಿನ ಜನರು ಬಿಡಬಾರದು  ಎಂದರು.

ಜನಸಂಘ ಪರಿಷತ್‌ನ ನರೇಂದ್ರಕುಮಾರ್ ಮಾತನಾಡಿ, ಆರೂಢಿ ಸಮೀಪ ಪ್ರಾರಂಭವಾಗಿರುವ ಕಸ ನಿರ್ವರ್ಹಣೆ ಘಟಕಕ್ಕೆ ಕೇವಲ ೬ ಕಿ.ಮೀ ಅಂತರದಲ್ಲಿ ಎತ್ತಿನಹೊಳೆ ಕಾಲುವೆ ಹಾಗೂ ಡ್ಯಾಂ ಬರಲಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ  ಹಲವಾರು  ಕಿ.ಮೀ ದೂರದ ತನಕ ಅಂತರ್ಜಲ ವೃದ್ಧಿಯಾಗಲಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ತ್ಯಾಜ್ಯವು ಅಂತರ್ಜಲ ಸೇರಿದರೆ ಇಲ್ಲಿನ ಜನರ ಬದುಕು ಸಂಕಷ್ಟಕ್ಕೆ ಗುರಿಯಾಗುತ್ತದೆ ಎಂದರು.

ಮತ್ತೊಂದು ಮಹತ್ವದ ಯೋಜನೆಯೂ ಸಹ ಆರೂಢಿ ಸಮೀಪಕ್ಕೆ ಬಂದಿದೆ. ಕೊರಟಗೆರೆ  ತಾಲ್ಲೂಕಿನ ದೊಡ್ಡಸಾಗರೆ ಗ್ರಾಮದ ಸಮೀಪ ತೋಟಗಾರಿಕೆ ಕ್ಷೇತ್ರದಲ್ಲಿ ಸಸ್ಯ ಸಂರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ ಪ್ರಾರಂಭವಾಗುತ್ತಿದೆ. ಇದು ಆರೂಢಿಯಲ್ಲಿ ಕಸ ಹಾಕುವ ಸ್ಥಳದಿಂದ ೪ ಕಿ.ಮೀ ದೂರದಲ್ಲಿದೆ.

ಬೆಂಗಳೂರಿನ ಕಸದಿಂದ ಈ ಯೋಜನೆಯೂ ತನ್ನ ಮಹತ್ವವನ್ನು ಕಳೆದುಕೊಳ್ಳುವ ಸ್ಥಿತಿ  ಇದೆ ಎಂಬ ಆತಂಕ ಜನರಲ್ಲಿ ಮೂಡಿದೆ.   ದೊಡ್ಡಸಾಗರೆ ತೋಟಗಾರಿಕೆ ಕ್ಷೇತ್ರದಲ್ಲಿ ಸಸ್ಯ ಸಂರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರದ ಆಶ್ರಯದಲ್ಲಿ ೧೨೦ ದೇಶಗಳ  ವಿನಾಶದ ಅಂಚಿನಲ್ಲಿರುವ ೪೦೦ ಔಷಧಿ ಸಸ್ಯಗಳನ್ನು ಸಂರಕ್ಷಿಸುವ ಮಹತ್ವದ ಯೋಜನೆ ರೂಪಿತವಾಗಿದೆ. ಇಂತಹ ಅತಿ  ಸೂಕ್ಷ್ಮ  ಪ್ರದೇಶದ ಸಮೀಪದಲ್ಲೆ ಬೆಂಗಳೂರಿನ ಕಸ ನಿರ್ವಹಣೆ ಘಟಕ­ವಿರುವುದು ಸರಿಯಲ್ಲ.  ಮತ್ತೊಂಡೆಡೆ ೧೦ ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಮಾವತ್ತೂರು ಕೆರೆ ಇದೆ. ಆರೂಢಿಗೆ  ಸಮೀಪದಲ್ಲೆ ಮೂರು ಐತಿಹಾಸಿಕ ದೇವಾಲಯಗಳಿವೆ ಎಂದರು.

ಹಸಿರು ಸೇನೆ ಅಧ್ಯಕ್ಷ ಕೆ.ಪಿ.ಕುಮಾರ್ ಮಾತನಾಡಿ, ಸರ್ಕಾರ ರೈತರಿಗೆ ಜೋಳ ಖರೀದಿ ಕೇಂದ್ರ ಪ್ರಾರಂಭಿಸಿ  ₨ ೧,೩೧೦ ಬೆಂಬಲ ಬೆಲೆ ನೀಡುವುದಾಗಿ ತಿಳಿಸಿತ್ತು. ಆದರೆ ಈಗ  ₨ ೧,೧೦೦ಗಳನ್ನು  ಸರ್ಕಾರ ಮತ್ತೆ ತಿಳಿಸಿದೆ. ಇಂತಹ ರೈತ ವಿರೋಧಿ ನೀತಿಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಸರ್ಕಾರ ಮೊದಲು ಹೇಳಿದ್ದಂತೆ   ₨ ೧,೩೧೦ಗಳಿಗೆ ಜೋಳಕ್ಕೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಸಂತಕುಮಾರ್, ರೈತ ಮುಖಂಡರುಗಳಾದ ಸತೀಶ್, ಮರಿಯಪ್ಪ. ಜಿಂಕೆಬಚ್ಚಹಳ್ಳಿ ಸತೀಶ್,ಮುನಿರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT