ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪೌಂಡ್‌ ಕೆಡವಿದ್ದಲ್ಲಿ ತಂತಿಬೇಲಿ!

ಸಾರಕ್ಕಿ ಕೆರೆ ಒತ್ತುವರಿ: ಪೂರ್ವಂಕರ ಸಂಸ್ಥೆಯ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ
Last Updated 19 ಏಪ್ರಿಲ್ 2015, 20:02 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಎಲಿಟಾ ಪ್ರಾಮಿನೇಡ್‌ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ತೆರವುಗೊಳಿಸಿದ್ದ ಸ್ಥಳದಲ್ಲಿ ಪೂರ್ವಂಕರ ಸಂಸ್ಥೆಯ ವ್ಯವಸ್ಥಾಪಕರು ಮತ್ತೆ ತಂತಿಬೇಲಿ ಹಾಕಿಸಿದ್ದರಿಂದ ಸಾರಕ್ಕಿ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ಭಾನುವಾರ ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ತಂತಿಬೇಲಿ ನಿರ್ಮಾಣ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತಹಶೀಲ್ದಾರ ಡಾ.ದಯಾನಂದ ಅವರು ಪೂರ್ವಂಕರ ಸಂಸ್ಥೆಯ ವ್ಯವಸ್ಥಾಪಕ ನಾಗೇಶ್‌ ಹಾಗೂ ಕರ್ನಲ್‌ ಜಗದೀಶ್‌ ಎಂಬುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದರು. ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಲು ಅಡಚಣೆ ಉಂಟುಮಾಡಿದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ.

ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌)ಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾಗಿದೆ. ಸಾರಕ್ಕಿ ಕೆರೆಯ ಉಳಿದ ಅತಿಕ್ರಮಿತ ಪ್ರದೇಶವನ್ನು ತೆರವುಗೊಳಿಸಲು ಬಂದ ಕಂದಾಯ ಅಧಿಕಾರಿಗಳಿಗೆ ಭಾನುವಾರ ಅಚ್ಚರಿ ಕಾದಿತ್ತು. ಶುಕ್ರವಾರವಷ್ಟೇ ತಾವು ತೆರವುಗೊಳಿಸಿದ್ದ ಕಾಂಪೌಂಡ್‌ ಜಾಗದಲ್ಲಿ ತಂತಿಬೇಲಿ ಎದ್ದು ನಿಂತಿತ್ತು.

‘ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಗೋಮಾಳದ ಪ್ರದೇಶದಲ್ಲಿತ್ತು ಎನ್ನುವುದು ದೃಢಪಟ್ಟ ಬಳಿಕವೇ ಅದನ್ನು ತೆರವುಗೊಳಿಸಲಾಗಿದೆ. ತೆರವುಗೊಳಿಸಿದ ಬೆನ್ನಹಿಂದೆಯೇ ಮತ್ತೆ ಬೇಲಿ ಹಾಕಲಾಗಿದೆ. ಹೀಗಾಗಿ ವ್ಯವಸ್ಥಾಪಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ತಿಳಿಸಿದರು.

‘ಅಪಾರ್ಟ್‌ಮೆಂಟ್‌ನಲ್ಲೂ ಒತ್ತುವರಿಯಾಗಿದೆಯೋ ಹೇಗೊ ಎನ್ನುವುದನ್ನು ಪರಿಶೀಲಿಸಲು ನಾವು ತೆರಳಿದ್ದೆವು. ವ್ಯವಸ್ಥಾಪಕ ನಾಗೇಶ್‌ ಅವರ ನೇತೃತ್ವದಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು ನಮ್ಮ ಜತೆ ವಾದಕ್ಕೆ ಇಳಿದರು. ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಅದಕ್ಕಾಗಿ ತಂತಿಬೇಲಿ ಹಾಕಲಾಗಿದೆ ಎಂದರು’ ಎಂದು ಅವರು ವಿವರಿಸಿದರು.

‘ಕಾಂಪೌಂಡ್‌ ಇದ್ದ ಜಾಗಕ್ಕಿಂತ ನಾಲ್ಕು ಅಡಿ ಹಿಂದೆ ಬೇಲಿ ನಿರ್ಮಿಸಿಕೊಳ್ಳಬೇಕು ಎನ್ನುವ ಸಲಹೆ ನೀಡಿದೆವು. ನಮ್ಮ ಮಾಲೀಕರು ಕಾಂಪೌಂಡ್‌ ಇದ್ದ ಜಾಗದಲ್ಲೇ ಬೇಲಿ ಹಾಕಲು ಹೇಳಿದ್ದಾರೆ ಎಂದು ನಾಗೇಶ್‌ ಮತ್ತು ಅವರ ಜತೆಗಾರರು ವಾದಿಸಿದರು. ಅವರ ವಿರುದ್ಧ ದೂರು ನೀಡಿ, ಬೇಲಿಯನ್ನೂ ತೆಗೆಸಿದೆವು’ ಎಂದು ಮಾಹಿತಿ ನೀಡಿದರು.

‘ಅಪಾರ್ಟ್‌ಮೆಂಟ್‌ನ ಒಂದು ಭಾಗ ಸಹ ಒತ್ತುವರಿ ಜಾಗದಲ್ಲಿ ನಿರ್ಮಾಣವಾದ ಬಗೆಗೆ ಅನುಮಾನ ಇದ್ದು, ವಿವರವಾದ ಸಮೀಕ್ಷೆ ನಡೆಸಿದ ಮೇಲೆ ಸತ್ಯಾಂಶ ತಿಳಿಯಲಿದೆ. ಅಲ್ಲಿನ ಭೂಮಿ ಗೋಮಾಳ ಎನ್ನುವುದನ್ನು ಮರೆಮಾಚಿ ಕೆಲವು ಗ್ರಾಮಸ್ಥರು ಮಾರಾಟ ಮಾಡಿದ್ದಾರೆ. 2006ರಲ್ಲಿಯೇ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ. ಸೋಮವಾರ ಭೂದಾಖಲೆಗಳನ್ನೆಲ್ಲ ವಿವರವಾಗಿ ಪರಿಶೀಲನೆ ಮಾಡಲಿದ್ದೇವೆ. ಆಗ ಸತ್ಯಾಂಶ ಗೊತ್ತಾಗಲಿದೆ’ ಎಂದು ಅವರು ಹೇಳಿದರು.

ಕಟ್ಟಡ ತ್ಯಾಜ್ಯ ಸಾಗಾಟಕ್ಕೆ 30 ಟಿಪ್ಪರ್ ಬಳಕೆ
ಬೆಂಗಳೂರು: ಸಾರಕ್ಕಿ ಕೆರೆಯಲ್ಲಿ ಅತಿಕ್ರಮಣ ತೆರವುಗೊಳಿಸುತ್ತಿರುವ ಕಂದಾಯ ಅಧಿಕಾರಿಗಳು ಭಾನುವಾರ ಮತ್ತೆ ಮೂರು ಕಟ್ಟಡಗಳನ್ನು ನೆಲಸಮ ಮಾಡಿಸಿದರು.

ಶುಕ್ರವಾರ ಧರೆಗುರುಳಿಸಿದ ಕಟ್ಟಡಗಳ ಅವಶೇಷವು ಕೆರೆ ಪ್ರದೇಶದಲ್ಲಿ ಗುಡ್ಡದಂತೆ ಬಿದ್ದಿತ್ತು. ಅದನ್ನು ತೆರವುಗೊಳಿಸಲು 30 ಟಿಪ್ಪರ್‌ಗಳನ್ನು ಬಳಸಲಾಯಿತು. ಸಂಜೆವರೆಗೆ ಸುಮಾರು ನೂರು ಟ್ರಿಪ್‌ ತ್ಯಾಜ್ಯವನ್ನು ಅಂಜನಾಪುರದ ಕಲ್ಲಿನ ಕ್ವಾರಿಗಳಿಗೆ ಸಾಗಿಸಲಾಯಿತು. 150 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು.

ಶುಕ್ರವಾರಕ್ಕೆ ಹೋಲಿಸಿದರೆ ಪೊಲೀಸರು ತುಂಬಾ ಕಡಿಮೆ ಪ್ರಮಾಣದಲ್ಲಿದ್ದರು. ಉರುಳಿಬಿದ್ದ ಮನೆಗಳ ತ್ಯಾಜ್ಯದಿಂದ ಕಬ್ಬಿಣವನ್ನು ಕಿತ್ತು ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಗಾಗ ಕೆಲವರು ಬಂದು ಅಧಿಕಾರಿಗಳಿಗೆ ಅಹವಾಲು ಸಲ್ಲಿಸುತ್ತಿದ್ದರು. ತಮಗೆ ಭೂಮಿಯನ್ನು ಮಾರಾಟ ಮಾಡಿದ ವ್ಯಕ್ತಿಗಳನ್ನು ಪತ್ತೆಹಚ್ಚಿ ನ್ಯಾಯ ದೊರಕಿಸಿ ಕೊಡುವಂತೆ ಗೋಗರೆಯುತ್ತಿದ್ದರು. ಅವರನ್ನೆಲ್ಲ ಅಧಿಕಾರಿಗಳು ಸಮಾಧಾನಪಡಿಸಿ ಕಳುಹಿಸುತ್ತಿದ್ದರು.

‘ಸೋಮವಾರ ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ. ಬಳಿಕ ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸುಪರ್ದಿಗೆ ಒಪ್ಪಿಸಲಾಗುತ್ತದೆ. ಅಲ್ಲಿನ ರಸ್ತೆ ಸೇರಿದಂತೆ ನಿರ್ಮಾಣದ ಉಳಿದ ಭಾಗವನ್ನು ತೆರವುಗೊಳಿಸಿ (ರಸ್ತೆ ಹರಡಿಕೊಂಡ ಪ್ರದೇಶವೇ 4 ಎಕರೆಯಷ್ಟಿದೆ), ಕೆರೆಗೆ ರಾಜಕಾಲುವೆ ಸಂಪರ್ಕ ಒದಗಿಸುವುದು ಬಿಡಿಎ ಜವಾಬ್ದಾರಿಯಾಗಿದೆ’ ಎಂದು ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT