ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ನೆನಪುಗಳು ಕಾಡಾಗಿ...

Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ಹುಟ್ಟಿದ ವ್ಯಕ್ತಿಗೆ ಸಾವು ನಿಶ್ಚಿತ. ಸಾವು ಅಂದರೆ ಶೋಕ, ವಿರಹ, ನೋವು, ಭಯ, ನಿಗೂಢತೆ ಏನೆಲ್ಲ. ಅಗಲಿದ ಹಿರಿಯರ – ಪ್ರೀತಿಪಾತ್ರರ ನೆನಪು ಮನದಂಗಳದಲ್ಲಿ ಸದಾ ಹಸಿರಾಗಿಯೇ ಉಳಿಯುತ್ತದೆ . ಈ ‘ಮನದಂಗಳದಲ್ಲಿ ಸದಾ ಹಸಿರು ನೆನಪು’ ಎಂಬುದಕ್ಕೆ ಒಂದು ಸುಂದರ, ಸರ್ವೋಪಯೋಗಿ, ಪರಿಸರಸ್ನೇಹಿ ಸ್ವರೂಪದ ಅಭಿವ್ಯಕ್ತಿಯನ್ನು ಕೊಡುವಂತಹ ಕನಸನ್ನು ನಾವು ಕಾಣಬಹುದೇ? ಈ ಕನಸಿನ ಹೆಸರೇ ‘ನೆನಪಿನ ಬನ’.

ಸಾವು ಸಹಜವಾದುದರಿಂದ ಊರಿಗೊಂದು ಸ್ಮಶಾನವೂ ಸಹಜ. ಊರಿಗೆ ಒಂದು ಸ್ಮಶಾನ ಸಹಜ ಅಂದೆ ನಾನು. ಆದರೆ ವಾಸ್ತವ ಹಾಗಿಲ್ಲ. ನಾವು ಜೀವಂತ ಜನರು ಜಾತಿಮತಗಳ ಹೆಸರಿನಲ್ಲಿ ನಮ್ಮ ಬದುಕುಗಳನ್ನು ಹೇಗೆ ತುಂಡು ತುಂಡು ಮಾಡಿಕೊಂಡಿದ್ದೇವೆಯೋ ಹಾಗೆಯೇ ನಮ್ಮ ಸಾವುಗಳನ್ನು ಕೂಡ. ಅದಕ್ಕೆಂದೇ ಪ್ರತಿ ಊರಿನಲ್ಲಿಯೂ ಜಾತಿಗೊಂದು, ಮತಕ್ಕೊಂದು ಸ್ಮಶಾನ ಎಂಬ ವಾಸ್ತವ ನಮ್ಮದು. ಈ ಅಮಾನವೀಯ ಅವೈಜ್ಞಾನಿಕ ವಾಸ್ತವವನ್ನು ಬದಲಾಯಿಸಿ ಊರಿಗೊಂದು ಹಸಿರು ಉಡುದಾರವನ್ನು ತೊಡಿಸಬಹುದೇ? ಈ ಹಂಬಲದ ಹೆಸರೇ ‘ನೆನಪಿನ ಬನ’.

ಏನಿದು ಈ ನೆನಪಿನ ಬನ ಅಥವಾ ಹಿರಿಯರ ಬನ?
ಊರ ಹೊರಗೆ ಒಂದಿಷ್ಟು ಪ್ರದೇಶವನ್ನು ಆರಿಸಿಕೊಳ್ಳುವದು. ಅದು ಹೊಲ ಮರಡಿ ಗೋಮಾಳ ಏನೂ ಆಗಿರಬಹುದು. ಮೊದಲಿಗೇ ಸರ್ಕಾರಕ್ಕೆ ಈ ಯೋಜನೆ ಮನವರಿಕೆಯಾಗಲಿಕ್ಕಿಲ್ಲ; ಸರ್ಕಾರದಿಂದ ಜಾಗ ಸಿಗಲಿಕ್ಕಿಲ್ಲ. ಆದುದರಿಂದ ಮೊದಲಿಗೆ ಊರೊಳಗಿನ ಒಬ್ಬ ಪರೋಪಕಾರಿ ಸಜ್ಜನ ವ್ಯಕ್ತಿಯಿಂದ ಒಂದು ಎಕರೆ ಜಮೀನು ದಾನವಾಗಿ ಪಡೆಯಬಹುದು. ಇದರ ಮೇಲ್ವಿಚಾರಣೆಗೆ ಊರಿನಲ್ಲಿ ಒಂದು ಪರಿಸರ ಸಮಿತಿ ಅಥವಾ ಯುವ ಸಮಿತಿ ರಚಿಸಿಕೊಳ್ಳಬೇಕು. ಈ ಸಮಿತಿ ಜಾತ್ಯತೀತ ಹಾಗೂ ಮತಾತೀತ ಆಗಿರಬೇಕು. ಈ ಸಮಿತಿಯ ಉಸ್ತುವಾರಿಯಲ್ಲಿ ನೆನಪಿನ ಬನಕ್ಕೆ ಬೇಲಿ, ಕಾವಲು, ನೀರಿನ ಸೌಕರ್ಯ ಇತ್ಯಾದಿಗಳ ವ್ಯವಸ್ಥೆಯಾಗಬೇಕು. ಯಾರಾದರೂ ಹಿರಿಯರು ಅಥವಾ ಪ್ರೀತಿಪಾತ್ರರು ತೀರಿಕೊಂಡಾಗ ಊರಿನ ಆ ಕುಟುಂಬದವರು ಬಂದು ಈ ನೆನಪಿನ ಬನದಲ್ಲಿ ಒಂದು ಸಸಿಯನ್ನು ಹಚ್ಚಬೇಕು ಅಥವಾ ಹಚ್ಚಿಸಬೇಕು. ಮತ್ತು ಈ ಸಸಿಯ ಪಾಲನೆ ಪೋಷಣೆಗೆಂದು 500 ರೂಪಾಯಿ ದೇಣಿಗೆ ಕೊಡಬೇಕು.

ಆ ಕುಟುಂಬದವರು ತಿಂಗಳಿಗೊಮ್ಮೆ ವರ್ಷಕ್ಕೊಮ್ಮೆ ಅಥವಾ ತಮಗೆ ಅನುಕೂಲವಿರುವಾಗ ನೆನಪಿನ ಬನಕ್ಕೆ ಭೆಟ್ಟಿ ಕೊಟ್ಟು ಸಸಿಯ ಕಾಳಜಿ ತೆಗೆದುಕೊಳ್ಳಬೇಕು. ಈ ನೆನಪಿನ ಬನದಲ್ಲಿ ಏಕತಾನತೆ ಆಗದ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯ. ಅಂದರೆ ಕೇವಲ ಮಾವು, ಕೇವಲ ತೆಂಗು ಆಗದ ಹಾಗೆ ಎಚ್ಚರ ವಹಿಸಬೇಕು. ಸಸ್ಯ ವೈವಿಧ್ಯವೇ ನೆನಪಿನ ಬನದ ಜೀವಾಳ . ಹಾಗಾಗಿ ಈ ನೆನಪಿನ ಬನದಲ್ಲಿ ಬೇವು, ಮಾವು, ಹೊಂಗೆ, ನೀರಲ, ಪೇರಲ, ತೆಂಗು, ಹುಣಿಸೆ, ಹಲಸು– ಹೀಗೆ ಎಲ್ಲ ಮರಗಳೂ ಇರುವಂತಾಗಬೇಕು. ಆದರೆ ಸ್ಥಳೀಯ ಮರಗಳಿಗೆ ಪ್ರಾಶಸ್ತ್ಯ ಇರಬೇಕು. ಸಸಿಗಳನ್ನು ಮಾಡುವುದು, ನೆಡುವುದನ್ನು ನೋಡಿಕೊಳ್ಳುವದು– ಈ ವಿಷಯದಲ್ಲಿ ಊರಿನ ತಜ್ಞರಿಂದ ಸಲಹೆ ಸಹಾಯ ಪಡೆಯಬೇಕು. ತೀರ ಅವಶ್ಯವಿದ್ದಲ್ಲಿ ಮಾತ್ರ ಹೊರಗಿನವರ ಸಹಾಯ ಕೇಳಬೇಕು. ಅರ್ಥಾತ್ ಈ ನೆನಪಿನ ಬನ ಎಂಬುದು ಪ್ರತಿ ಊರಿನ ಒಂದು ಸ್ವಾವಲಂಬಿ ಯೋಜನೆಯಾಗಿ ರೂಪುಗೊಳ್ಳಬೇಕು.

ವರ್ಷದಿಂದ ವರ್ಷಕ್ಕೆ ಈ ನೆನಪಿನ ಬನದಲ್ಲಿ ಹಸಿರು ಹೆಚ್ಚುತ್ತ ಹೋಗುತ್ತದೆ ಹಾಗೂ ಕೇವಲ ಐದಾರು ವರ್ಷಗಳಲ್ಲಿ ಬನವೆಂಬ ಪರಿಕಲ್ಪನೆ ಸಾರ್ಥಕ ಸಾಕಾರ ರೂಪು ಪಡೆಯುತ್ತದೆ. ಮೊದಲಿಗೆ ಕೇವಲ ಒಂದು ಎಕರೆ ವಿಸ್ತೀರ್ಣದಲ್ಲಿ ಪ್ರಾರಂಭವಾಗುವ ಈ ಕನಸು ಸಾಕಾರಗೊಳ್ಳುತ್ತ ಹೋದ ಹಾಗೆ ಊರವರಿಗೆ ಈ ಪರಿಕಲ್ಪನೆ ಮನವರಿಕೆಯಾಗುತ್ತ ಹೋಗುತ್ತದೆ. ಆಗ ಊರಿನ ಅನೇಕರು ಸ್ವ ಇಚ್ಛೆಯಿಂದ ಜಮೀನು ಕೊಡಲು ಮುಂದೆ ಬರುತ್ತಾರೆ. ನಿಧಾನವಾಗಿ ಆದರೆ ನಿಶ್ಚಿತವಾಗಿ ಕೆಲವೇ ವರ್ಷಗಳಲ್ಲಿ ಊರ ಸುತ್ತಲೂ ಒಂದು ‘ಗ್ರೀನ್ ಬೆಲ್ಟ್’ ಅಂದರೆ ಒಂದು ‘ಹಸಿರು ಉಡುದಾರ’ ನಿರ್ಮಾಣಗೊಳ್ಳುತ್ತದೆ.

ಈ ಬನವು ಊರಿನವರಿಗೆಲ್ಲ ಮುಕ್ತವಾಗಿರಬೇಕು. ಮಕ್ಕಳಿಗೆ ಆಟ, ದೊಡ್ಡವರಿಗೆ ವಿಹಾರ, ಸಣ್ಣ ಪುಟ್ಟ ಸಭೆ ಸಮಾರಂಭಗಳು– ಹೀಗೆ ಹತ್ತು ಹಲವು ರೀತಿಯಲ್ಲಿ ಬನ ಊರವರಿಗೆಲ್ಲ ದೊರಕುವಂತಾಗಬೇಕು. ಆದರೆ, ಇದು ಹಿರಿಯರ ಬನ ಆದುದರಿಂದ ಪವಿತ್ರವಾದ ಬನ ಎಂಬ ಭಾವನೆ ಎಲ್ಲರಲ್ಲಿಯೂ ಮೊದಲಿನಿಂದಲೇ ಸ್ಪಷ್ಟವಾಗಿರಬೇಕು; ಹಾಗೂ ಆ ಮೂಲಕ ಬನದಲ್ಲಿ ಯಾವುದೇ ತಪ್ಪು, ಕೆಟ್ಟ ಕೆಲಸ ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕು.

ಮುಂದೆ ಈ ನೆನಪಿನ ಬನ ವರ್ಷದುದ್ದಕ್ಕೂ ಹಸಿರು, ನೆರಳು, ಹೂವು, ಕಾಯಿ, ಹಣ್ಣು, ಶುದ್ಧ ಹವೆ, ಅಂತರ್ಜಲ ಮಟ್ಟ ಹೆಚ್ಚುವುದು, ಮಣ್ಣಿನ ಸವಕಳಿ ಕಡಿಮೆಯಾಗುವದು, ಫಲವತ್ತತೆ ಹೆಚ್ಚುವುದು, ಪಕ್ಷಿ ಕೀಟ ಪ್ರಾಣಿ ಮುಂತಾದ ಜೀವಸಂಕುಲಕ್ಕೆಲ್ಲ ಆಶ್ರಯ– ಹೀಗೆ ನಿರಂತರವಾಗಿ ನೂರಾರು ವಿಧದಲ್ಲಿ ಲಾಭ ನೀಡುತ್ತ ಊರಿನ ಏಳಿಗೆಗೆ ಸಹಾಯವಾಗುತ್ತದೆ. ಈ ನೆನಪಿನ ಬನ ಇನ್ನೊಂದು ರೀತಿಯಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ. ಇಂದು ನಾವು ಮನುಷ್ಯರು ನಮ್ಮ ತಪ್ಪು ಜೀವನಶೈಲಿಯಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಹವಾಮಾನ ಸಂಕಷ್ಟ ಮತ್ತು ಭೂಮಿತಾಯಿಗೆ ಜ್ವರ ಎಂಬ ಅತಿ ಬೃಹತ್ ಸಮಸ್ಯೆಯನ್ನು ಸೃಷ್ಟಿಸಿಕೊಂಡಿದ್ದೇವೆ. ಇದರಿಂದಾಗಿ ಕೇವಲ ಮನುಕುಲವನ್ನಷ್ಟೇ ಅಲ್ಲ, ಇಡೀ ಜೀವ ಸಂಕುಲವನ್ನೇ ವಿನಾಶದ ಅಂಚಿಗೆ ತಂದಿದ್ದೇವೆ. ಇದಕ್ಕೆ ಮುಖ್ಯ ಕಾರಣ ನಾವು ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮುಂತಾದ ಹಸಿರು ಮನೆ ಅನಿಲಗಳನ್ನು ವಿಪರೀತವಾಗಿ ತುಂಬುತ್ತಿರುವುದು.

ಜಗತ್ತಿನ ಮೂಲೆ ಮೂಲೆಯಲ್ಲಿ ತಜ್ಞರು ಈ ದೈತ್ಯ ಸಮಸ್ಯೆಗೆ ಪರಿಹಾರ – ನಿವಾರಣೆಯ ಉಪಾಯಗಳನ್ನು ಕಂಡು ಹಿಡಿಯುವುದರಲ್ಲಿ ಮಗ್ನರಾಗಿದ್ದಾರೆ. ಈ ಸಮಸ್ಯೆಗೆ ಸರಳ ಉಪಾಯವೆಂದರೆ ಹೆಚ್ಚು ಹೆಚ್ಚು ಮರಗಳನ್ನು ನೆಡುವುದು. ಭೂಮಿತಾಯಿಗೆ ಹಸಿರಿನ ಹೊದಿಕೆಯನ್ನು ಹೆಚ್ಚು ಮಾಡಿದಷ್ಟೂ ಅವಳ ಜ್ವರ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಪುಟ್ಟ ಅಳಿಲು ಸೇವೆಯ ರೂಪದಲ್ಲಿಯೇ ನೆನಪಿನ ಬನ ಗಟ್ಟಿ ಪ್ರಯತ್ನವಾಗುತ್ತದೆ. ಇಲ್ಲಿ ಇನ್ನೊಂದು ಮಾತನ್ನೂ ಸೇರಿಸಬೇಕು.

ಊರಿಗೊಂದು ನೆನಪಿನ ಬನ ಎಂಬ ಈ ಕನಸು ಸಂಪೂರ್ಣವಾಗಿ ಅಕೇಂದ್ರಿತ ರೀತಿಯಲ್ಲಿಯೇ ನನಸಾಗಬೇಕು. ಊರಿಗೊಂದು ಜಾತ್ರೆ, ಊರಿಗೊಂದು ಸಂತೆ ಎಂಬುದು ಹೇಗೆ ಪೂರ್ತಿ ಅಕೇಂದ್ರಿತವಾಗಿ ನಡೆಯುತ್ತ ಬಂದಿದೆಯೋ ಅದೇ ರೀತಿ ನೆನಪಿನ ಬನವೂ ಆಯಾ ಊರಿನವರ ಸ್ವತಂತ್ರ–ಸ್ವಾವಲಂಬಿ ಪ್ರಯತ್ನದ ರೂಪದಲ್ಲಿ ಅರಳಬೇಕೇ ವಿನಾ ಇದಕ್ಕೊಂದು ರಾಜ್ಯಮಟ್ಟದ ಕಚೇರಿ, ಆ ಕಚೇರಿಗೊಬ್ಬ ಕ್ಯಾಬಿನೆಟ್ ದರ್ಜೆಯ ಅಧಿಕಾರಿ, ಆ ಅಧಿಕಾರಿಯ ಮೇಲೊಬ್ಬ ಮಂತ್ರಿ, ಇವರ ಹಿಂದೆ ಲೋಕಾಯುಕ್ತರು– ಇದಾವುದಕ್ಕೂ ಅವಕಾಶ ಇರಬಾರದು. ಇದೆಲ್ಲ ಕನಸಿನ ಭಾಗವಾಯಿತು. ಕನಸಿನ ಕಡುಬನ್ನು ಎಷ್ಟು ದಿನ ತಿನ್ನಬಹುದು? ಕನಸು ಯಾವಾಗಲೂ ಚಂದವೇ.

ಆದೆ ವಾಸ್ತವ ಮಾತ್ರ ಬಹಳ ಕ್ರೂರ. ವಾಸ್ತವದ ಬಿಸಿಯೆದುರು ಕನಸು ಕರಗಿಬಿಡುತ್ತದೆ. ನಮ್ಮ ಸಮಾಜದಲ್ಲಿ ಎಲ್ಲ ಕಾಲಕ್ಕೂ ‘ಹುರುಪು ಹೀರಕರು’ ಅನ್ನುವವರು ಇರುತ್ತಾರೆ. ನೀವು ಅವರ ಮುಂದೆ ಬಹಳ ಹುರುಪಿನಿಂದ ಒಂದು ವಿಚಾರವನ್ನು ಇಟ್ಟರೆ ಅವರು ತಕ್ಷಣ ಹತ್ತು ಪ್ರಶ್ನೆಗಳನ್ನು ಕೇಳಿ ನಿಮ್ಮ ಹುರುಪು ಹೀರಿ ನಿಮ್ಮನ್ನು ಠುಸ್ ಮಾಡಿ ಬಿಡುತ್ತಾರೆ. ಇಂತಹದ್ದೊಂದು ನೆನಪಿನ ಬನ ಎಂಬ ಕನಸು ಸಾಕಾರಗೊಳ್ಳಬಹುದೇ? ಈ ಯೋಜನೆಗೆ ಜಮೀನು ಯಾರು ಕೊಡುತ್ತಾರೆ? ಮೇಲ್ವಿಚಾರಣೆ ಸಮಿತಿಯವರು ಸರಿಯಾಗಿ ಕೆಲಸ ಮಾಡದಿದ್ದರೆ? ಸರ್ಕಾರ ಅಥವಾ ಅರಣ್ಯ ಇಲಾಖೆ ಇದಕ್ಕೆ ಮಾನ್ಯತೆ ಕೊಡುತ್ತದೆಯೇ? ಮುಂದೆ ಹಣ್ಣು ಕಾಯಿ ಬಂದಾಗ ಅದನ್ನು ಯಾರಿಗೆ ಹೇಗೆ ಯಾವ ದರದಲ್ಲಿ ಕೊಡುತ್ತೀರಿ? ಹೀಗೆ ಹತ್ತಾರು ಪ್ರಶ್ನೆಯ ಹಾವುಗಳನ್ನು ನಿಮ್ಮ ಕಾಲಬುಡಕ್ಕೆ ಬಿಡುತ್ತಾರೆ ಈ ಹುರುಪು ಹೀರಕರು.

ಆದರೆ ಚರಿತ್ರೆ ಬೇರೆಯದೇ ಒಂದು ಕತೆಯನ್ನು ಹೇಳುತ್ತದೆ. ಕನಸು ಕಾಣುವ ಹುಚ್ಚರು ಮಾತ್ರ ಚರಿತ್ರೆಯನ್ನು ಬದಲಿಸುತ್ತಾರೆ. ನಮ್ಮ ಸಮಾಜದಲ್ಲಿ ಶತಶತಮಾನಗಳಿಂದ ಗ್ರಾಮ ಗ್ರಾಮಗಳಲ್ಲಿ ಜನರು ‘ದೇವರ ಕಾಡು’, ‘ನಾಗಬನ’, ಗೋಮಾಳ, ಹೀಗೆ ಸಾಮುದಾಯಿಕವಾಗಿ ಭೂಮಿಯನ್ನು ನಿರ್ವಹಿಸುತ್ತ ಬಂದಿದ್ದಾರೆ, ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಕೇವಲ ಆರೇಳು ದಶಕಗಳ ಹಿಂದೆಯಷ್ಟೇ ವಿನೋಬಾ ಭಾವೆ ಎಂಬ ಮಾಂತ್ರಿಕ ಮುದುಕ ಕಾಲ್ನಡಿಗೆಯಲ್ಲಿ ಇಡೀ ದೇಶವನ್ನು ಸುತ್ತಿ ಜಮೀನು ಇದ್ದವರ ಮನವೊಲಿಸಿ, ಅವರು ಸ್ವ ಇಚ್ಛೆಯಿಂದ ಭೂದಾನ ಮಾಡುವ ಹಾಗೆ ಮಾಡಿದ ನಿದರ್ಶನ ನಮ್ಮ ಮುಂದೆ ಇದೆಯಲ್ಲ.

ಈ ಭೂದಾನ ಚಳವಳಿಯಲ್ಲಿ ನಮ್ಮ ಜನರು ಕೊಡಮಾಡಿದ ಒಟ್ಟು ಜಮೀನು– ನಲವತ್ತೈದು ಲಕ್ಷ ಎಕರೆ! ಅಂದ ಬಳಿಕ ಇಂದು ನಮಗೆ ನೆನಪಿನ ಬನಕ್ಕಾಗಿ ಹಿರಿಯರ ಬನಕ್ಕಾಗಿ ಯಾವುದಾದರೂ ಒಂದು ಊರಿನಲ್ಲಿ ಜಮೀನು ಸಿಗಲಿಕ್ಕಿಲ್ಲವೇ? ಕೊಡುವವರು ಅದನ್ನು ಬೇಕಾದರೆ ತಮ್ಮ ಹಿರಿಯರ ಹೆಸರಿನಲ್ಲಿಯೇ ಕೊಡಲಿ. ಜನರು ಜಮೀನು ಕೊಡಲಿಕ್ಕಿಲ್ಲ ಎಂಬ ಸಂದೇಹ ನಮ್ಮನ್ನು ಕಾಡುವುದು ಬೇಡ. ನಮ್ಮ ಹಂಬಲ ಶುದ್ಧವಾಗಿದ್ದರೆ, ಪ್ರಯತ್ನ ಪ್ರಾಮಾಣಿಕವಾಗಿದ್ದರೆ, ಸಂಕಲ್ಪ ಗಟ್ಟಿಯಾಗಿದ್ದರೆ ಯಾರಾದರೂ ನಿಶ್ಚಿತವಾಗಿ ನಮ್ಮ ಕನಸಿಗೆ ಸ್ಪಂದಿಸುತ್ತಾರೆ. ಮುಂದೆ ಸಮಸ್ಯೆಗಳು ಉದ್ಭವಿಸುವುದಿಲ್ಲವೇ? ನೂರಕ್ಕೆ ನೂರು ಉದ್ಭವಿಸುತ್ತವೆ. ಆದರೆ ನಾಳೆ ಎಂತಹ ಅಳಿಯ ಸಿಗುತ್ತಾನೆ ಅಥವಾ ಎಂತಹ ಸೊಸೆ ಸಿಗುತ್ತಾಳೆ ಎಂದು ಚಿಂತಿಸುತ್ತ ಇಂದು ಮಕ್ಕಳನ್ನು ಹಡೆಯುವುದನ್ನು ಬಿಡುತ್ತೇವೆಯೇ ನಾವು? ವಾಸ್ತವ ಎಂಬುದು ಸಮಸ್ಯೆಗಳ ಸಾಗರ. ಅದರಲ್ಲಿ ಈಸಿ ಜೈಸುವುದೇ ಬದುಕು. ಧೈರ್ಯದಿಂದ ಬದುಕುವದು ನಮ್ಮ ಕೆಲಸ. ಸೋಲು ಗೆಲುವನ್ನು ಭವಿಷ್ಯ ನೋಡಿಕೊಳ್ಳುತ್ತದೆ.

ನೆನಪಿನ ಬನದ ಈ ಕನಸು ನನಸಾಗಿ ಪ್ರತಿ ಊರಿಗೂ ಒಂದು ನೆನಪಿನ ಬನ ರೂಪುಗೊಂಡರೆ ಎಷ್ಟು ಚಂದ ಅಲ್ಲವೇ? ಮೊದಲಿನಿಂದ ಇಲ್ಲಿಯವರೆಗೂ ಈ ನೆನಪಿನ ಬನ ತೀರಿಹೋದವರ ನೆನಪಿಗಾಗಿ ಎನ್ನುವಂತೆ ವಿವರಿಸಿದ್ದೇನೆ. ಆದರೆ ನೆನಪು ಅಥವಾ ಸ್ಮರಣೆ ಬೇರೆ ರೀತಿಯದ್ದೂ ಆಗಿರಬಹುದಲ್ಲವೇ? ಮನೆಯಲ್ಲಿ ನಡೆದ ಒಂದು ಮದುವೆಯ ನೆನಪಿಗೆ, ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸವಿ ನೆನಪಿಗೆ ಅಥವಾ ಊರಲ್ಲಿ ಹಮ್ಮಿಕೊಂಡ ಒಂದು ಒಳ್ಳೆಯ ಕಾರ್ಯಕ್ರಮದ ನೆನಪಿಗೆ– ಹೀಗೆ ಯಾವ ಬಗೆಯ ನೆನಪೇ ಆಗಿರಲಿ, ಅದು ನೆನಪಿನ ಬನವನ್ನು ವಿಸ್ತಾರಗೊಳಿಸಲು ನಮಗೊಂದು ನೆವ ಸಿಕ್ಕರಾಯಿತು ಅಷ್ಟೇ!

ಸರಿ ಇದಿಷ್ಟು ಮಾತಿನ ಗಾಳಿಪಟವಾಯಿತು. ಇದಕ್ಕೇನಾದರೂ ಕೃತಿಯ ಬಾಲಂಗೋಚಿ ಇದೆಯೇ ಎಂದು ನೀವು ಕೇಳಬಹುದು. ಇದೆ ಒಂದು ಪುಟ್ಟ ಬಾಲಂಗೋಚಿ. ಕಳೆದ ಮೇ ತಿಂಗಳಲ್ಲಿ ನಮ್ಮ ‘ಸುಮನ ಸಂಗಮ’ ಕಾಡುತೋಟದಲ್ಲಿ ‘ಸುಸ್ಥಿರ ಬದುಕು’ ಬಗ್ಗೆ ಎರಡು ದಿನಗಳ ಶಿಬಿರ ಹಮ್ಮಿಕೊಂಡಿದ್ದೆವು. ತೋಟದ ಒಂದು ಮೂಲೆಯಲ್ಲಿ ಸುಮಾರು ಒಂದು ಎಕರೆ ಜಾಗ ಹಾಗೆಯೇ ಉಳಿದಿತ್ತು. ಅಲ್ಲಿ ಶಿಬಿರದ ಕೊನೆಗೆ ಅದರ ನೆನಪಿಗೆಂದು ಈರಮ್ಮ ಮತ್ತು ಗವಿಸೀತಾ ಎಂಬ ಇಬ್ಬರು ಪುಟಾಣಿಗಳ ಕೈಯಿಂದ ಲೀಚಿ ಹಣ್ಣಿನ ಸಸಿ ಹಚ್ಚುವ ಮೂಲಕ ನಾವು ಒಂದು ರೀತಿಯಲ್ಲಿ ನೆನಪಿನ ಬನದ ಉದ್ಘಾಟನೆಯನ್ನು ಮಾಡಿ ಬಿಟ್ಟಿದ್ದೇವೆ! ಮುಂದಿನ ದಿನಗಳಲ್ಲಿ ಈ ಹುಚ್ಚು ಒಳ್ಳೆಯದು ಎಂದು ಭಾವಿಸುವ ಎಲ್ಲರಿಗೂ ನಮ್ಮ ಜೊತೆ ಕೈ ಜೋಡಿಸಲು, ನಮ್ಮ ಕನಸಿನ ಕಡುಬಿನ ಸಿಹಿ ಸವಿಯಲು ತುಂಬು ಹೃದಯದ ಸ್ವಾಗತವಿದೆ.

ಅನೇಕ ನೆನಪುಗಳ ಸ್ಫೂರ್ತಿವನ
‘ನೆನಪಿನ ವನ’ ಎಂದರೆ ಕೇವಲ ಗತಿಸಿದವರನ್ನು ಸ್ಮರಿಸುವುದಷ್ಟೇ ಅಲ್ಲ, ಜೀವನದ ಯಾವುದೇ ಸುಂದರ ಕ್ಷಣದ ನೆನಪಿಗಾದರೂ ಗಿಡಮರಗಳನ್ನು ನೆಡಬಹುದು. ಈ ಉದ್ದೇಶದಿಂದ ಬೆಂಗಳೂರಿನ ಹೊರವಲಯದಲ್ಲಿ ಸ್ಫೂರ್ತಿವನ ಹೆಸರಿನಲ್ಲಿ ವನನಿರ್ಮಾಣ ಕೆಲಸ ನಡೆಯುತ್ತಿದೆ. ಹುಟ್ಟುಹಬ್ಬ, ರ್‍್ಯಾಂಕ್ ಪಡೆದ ನೆನಪು, ವಿವಾಹದ ನೆನಪು, ಶತಮಾನೋತ್ಸವ– ಹೀಗೆ ಯಾವ ನೆಪದಲ್ಲಾದರೂ ಅಲ್ಲಿ ರೂ. 1500 ಶುಲ್ಕ ನೀಡಿ ಗಿಡ ನೆಡಬಹುದು ಅಥವಾ ನೆಡಲು ಹೇಳಬಹುದು.

ಪುಸ್ತಕ ಬಿಡುಗಡೆ, ಪರಿಸರ ವಿಚಾರ ಗೋಷ್ಠಿ, ಉದ್ಘಾಟನೆಯಂಥ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸುವವರೆಲ್ಲ ಸ್ಫೂರ್ತಿವನಕ್ಕೆ ಒಂದು ಸಸ್ಯ ದಾನ ಮಾಡಬೇಕು ಎಂದು ಲೇಖಕರೊಬ್ಬರು ನಿಬಂಧನೆ ಹಾಕಿದ್ದೂ ಇದೆ. ಸಂಘಟಕರು ಧಾರಾಳವಾಗಿ ವೃಕ್ಷದಾನ ಮಾಡಿದ್ದೂ ಇದೆ. ಮೈಸೂರು ಫಿಲ್ಮ್ ಸೊಸೈಟಿಯವರು ಒಂದಲ್ಲ, ಐದು ಗಿಡಗಳನ್ನು ಚಿತ್ರೋತ್ಸವದ ನೆನಪಿನಲ್ಲಿ ಕೊಟ್ಟಿದ್ದೂ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೂರನೆಯ ವರ್ಷಾಚರಣೆಯ ಸಂದರ್ಭದಲ್ಲಿ ನೂರು ಸಸ್ಯಗಳನ್ನು ಬೆಳೆಸಲು ಸ್ಫೂರ್ತಿವನಕ್ಕೆ ಧನಸಹಾಯ ನೀಡಿದೆ.

ಬೆಂಗಳೂರಿನ ‘ಭೂಮಿ ಬುಕ್ಸ್’ ಪ್ರಕಾಶನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾನು ಪ್ರಕಟಿಸುವ ಹಾಗೂ ಮರುಮುದ್ರಣ ಮಾಡುವ ಪ್ರತಿ ಪುಸ್ತಕದ ಹೆಸರಿನಲ್ಲೂ ಒಂದೊಂದು ಗಿಡವನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದೆ. ಪುಸ್ತಕಗಳ ಮುದ್ರಣವೆಂದರೆ ಕಾಗದದ ಉತ್ಪಾದನೆಗಾಗಿ ಗಿಡಮರಗಳ ನಾಶವಾಗುತ್ತದಾದ್ದರಿಂದ ಅದಕ್ಕೆ ಪರಿಹಾರ ರೂಪದಲ್ಲಿ ಗಿಡಮರ ಬೆಳೆಸಬೇಕೆಂಬುದು ಅದರ ನಿಲುವು. ಪ್ರಕಾಶಕರೆಲ್ಲ ಮುಂದೆ ಬಂದರೆ ಅಂಥದ್ದೊಂದು ಪುಸ್ತಕವನವನ್ನೂ ಕಲ್ಯಾಣ ಮಂಟಪಗಳು ಮುಂದೆ ಬಂದರೆ ಒಂದು ಕಲ್ಯಾಣ ವನವನ್ನೂ ಸೃಷ್ಟಿಸುವುದಾಗಿ ಸ್ಫೂರ್ತಿವನದ ಸಂಘಟಕರು ಹೇಳಿದ್ದಾರೆ.

ಹೀಗೇ ಯೋಚಿಸಿದರೆ ಬಟ್ಟೆ ಬಿಜಿನೆಸ್‌ನಲ್ಲಿ ಇರುವವರು ವಸ್ತ್ರವನವನ್ನೊ, ಕಾಲೇಜು ನಡೆಸುವವರು ವಿದ್ಯಾವನವನ್ನೊ, ಟ್ರಾನ್ಸ್‌ಪೋರ್ಟ್ ಮಾಲಿಕರು ವಾಹನವನವನ್ನೊ ಸ್ಥಾಪಿಸಬಹುದು. ಹುಟ್ಟುಹಬ್ಬಕ್ಕೊ, ಮುಂಜಿ-ಮದುವೆಗಳಿಗೋ ಅಧಿಕ ಖರ್ಚು ಮಾಡುವ ಇಂದಿನ ದಿನಗಳಲ್ಲಿ ಪ್ರತಿ ಊರಲ್ಲೂ ಇಂಥ ನೆನಪಿನ ವನ ರೂಪಿಸಲು ಸಾಧ್ಯವಿದೆ. ಗಿಡಮರ ಬೆಳೆಸಲೇಬೇಕೆಂದಿದ್ದರೆ ನೆನಪುಗಳು ನೂರಾರು, ನೆಪಗಳು ಸಾವಿರಾರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT