ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಗರ್ಭ ಸೇರಿದ ಎಚ್‌ಎಂಟಿ

ಕಣ್ಣೀರಾಗಿ ಹರಿಯಿತು ಕಾರ್ಮಿಕರ ನೆನಪುಗಳು
Last Updated 30 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ತುಮಕೂರು: ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಯ ಹೋರಾಟದ ಬದುಕು ಕೊನೆಯಾಯಿತು. ನಷ್ಟದಲ್ಲಿದ್ದ ಕಾರ್ಖಾನೆಗೆ ಶನಿವಾರ ಬೀಗ ಹಾಕಲಾಯಿತು. ಕಾರ್ಮಿಕರ ದಿನಾಚರಣೆಯ ಮುನ್ನಾದಿನವೇ ಎಲ್ಲ 120 ಕಾರ್ಮಿಕರಿಗೆ  ಬಿಡುಗಡೆ ಪತ್ರ (ರಿಲೀವಿಂಗ್ ಲೆಟರ್‌) ನೀಡಿ ಹೊರಗೆ ಕಳುಹಿಸಲಾಯಿತು.

ಮುಂದಿನ ಹತ್ತು ದಿನದಲ್ಲಿ ಕಾರ್ಮಿಕರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ. ಕನಿಷ್ಠ ₹ 25 ರಿಂದ 30 ಲಕ್ಷ ಸಿಗಬಹುದು ಎಂಬುದು ಕಾರ್ಮಿಕರ ಲೆಕ್ಕಾಚಾರ. ಕಣ್ಣೀರು ಒರೆಸಿಕೊಳ್ಳುತ್ತಾ, ಭಾರವಾದ ಹೃದಯ ಹೊತ್ತು ಫ್ಯಾಕ್ಟರಿಯಿಂದ ಈಚೆ ಬಂದ ಕಾರ್ಮಿಕರು ಪರಸ್ಪರ ತಬ್ಬಿಕೊಂಡು ಗದ್ಗದಿತರಾದರು. 

‘ಇಷ್ಟು ವರ್ಷದ ದುಡಿತಕ್ಕೆ ಸಣ್ಣ ಕೃತಜ್ಞತೆಯನ್ನೂ ಆಡಳಿತ ಮಂಡಳಿ ಹೇಳಲಿಲ್ಲ. ನಾಳೆ ಕಾರ್ಮಿಕರ ದಿನಾಚರಣೆ. ಅದರ ನಂತರ ಬಿಡುಗಡೆ ಮಾಡಬಹುದಾಗಿತ್ತು’ ಎಂದು ಕೆಲವರು ಕಣ್ಣೀರಾದರು. ‘ಫ್ಯಾಕ್ಟರಿಗೆ ಸೇರಿದಾಗ ನಾನೊಬ್ಬಳೇ ಮಹಿಳೆ. ಅಂದಿನಿಂದ ಒಂದು ದಿನವೂ ಅಭದ್ರತೆ ಕಾಡಿದ್ದಿಲ್ಲ. ನನಗೆ ಹಣದ ಸಮಸ್ಯೆ ಇಲ್ಲ. ಆದರೆ ಕಾರ್ಖಾನೆ ಮುಚ್ಚುತ್ತಿರುವುದು ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ನಾಗರತ್ನಮ್ಮ ಎಂಬುವವರು ಕಣ್ಣೀರು ಹಾಕಿದರು.
‘ನಾವು ಧೈರ್ಯವಾಗಿ ಮಾತನಾಡುತ್ತೇವೆ. ಮೇಕ್‌ ಇನ್‌ ಇಂಡಿಯಾ ಎನ್ನುವ ಮೋದಿಯವರ ಸರ್ಕಾರ ಈ ಕಾರ್ಖಾನೆಯನ್ನು ಮುಚ್ಚಿಬಿಟ್ಟಿತು’ ಎನ್ನುವಾಗ ಕಾರ್ಮಿಕರಾದ ಚಂದ್ರಶೇಖರ್‌, ರಮೇಶ್ ಮುಂತಾದವರ ಗಂಟಲು ಉಬ್ಬಿಬಂತು.

‘ನಮಗೆ ಇನ್ನೂ  90 ತಿಂಗಳು ಸೇವಾವಧಿ ಇದೆ. ಆದರೆ ಈಗ ಕೇವಲ 40 ತಿಂಗಳ ಸಂಬಳ ನೀಡುವುದಾಗಿ ಹೇಳಿದ್ದಾರೆ. ಬೇರೆಡೆ ಕೆಲಸ ಸಿಗುವುದಿಲ್ಲ. ಮಕ್ಕಳು ಇನ್ನೂ ಹೈಸ್ಕೂಲಿನಲ್ಲಿದ್ದಾರೆ. ಕೆಲಸ ಕಳೆದುಕೊಂಡವರೆಂದು ಜನ ನಮ್ಮನ್ನು ನಿಕೃಷ್ಟವಾಗಿ ನೋಡುತ್ತಾರೆ. ಆ ನೋವನ್ನು ಸಹಿಸಿಕೊಳ್ಳಬೇಕಾಗಿದೆ’ ಎಂದು ಕೆಲ ಕಾರ್ಮಿಕರು ದುಃಖ ತೋಡಿಕೊಂಡರು.

ಶನಿವಾರ ಸಂಜೆ 5 ಗಂಟೆಗೆ ಏಕಕಾಲಕ್ಕೆ ಬೆಂಗಳೂರಿನ ಎರಡು ಘಟಕ, ಜಮ್ಮು, ರಾಣಿಬಾಗ್‌ ಹಾಗೂ ತುಮಕೂರಿನ ಘಟಕ ಮುಚ್ಚಲಾಗಿದೆ. ಎಚ್‌ಎಂಟಿ ಟೂಲ್ಸ್ ಫ್ಯಾಕ್ಟರಿ ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ‘ವಿಆರ್‌ಎಸ್‌ ಪಡೆಯದಿದ್ದರೆ ಆರು ತಿಂಗಳ ಸಂಬಳ ನೀಡಿ ಪರಿಹಾರವನ್ನು ನ್ಯಾಯಾಲಯಕ್ಕೆ ಕಟ್ಟುವುದಾಗಿ ಹೆದರಿಸಿ ನಮ್ಮಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ಕಾರ್ಮಿಕರು ಯಾರೂ ಸ್ವ ಇಚ್ಛೆಯಿಂದ ವಿಆರ್‌ಎಸ್‌ ಪತ್ರಕ್ಕೆ ಸಹಿ ಹಾಕಿಲ್ಲ’ ಎಂದು ಎಚ್‌ಎಂಟಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ತಿಳಿಸಿದರು.

ನೋವಿನಲ್ಲೂ ಬ್ಯಾಂಕ್‌ಗಳ ಕಾಟ
ಕೆಲಸ ಕಳೆದುಕೊಂಡು ಮನೆಗೆ ಹೋಗುವ ಕಾರ್ಮಿಕರು ಬ್ಯಾಂಕ್‌ಗಳ ಕಾಟ ಸಹಿಸಿಕೊಳ್ಳಬೇಕಾಯಿತು. ನಗರದ ಹಲವು ಸಹಕಾರಿ ಬ್ಯಾಂಕ್‌, ವಾಣಿಜ್ಯ ಬ್ಯಾಂಕ್‌ನವರು ತಮ್ಮ ಬ್ಯಾಂಕ್‌ನಲ್ಲೇ ಪರಿಹಾರದ ಹಣ ಠೇವಣಿ ಇಡುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಾಣಿಸಿತು. ಶೇ 0.5ರಷ್ಟು ಹೆಚ್ಚು ಬಡ್ಡಿ ನೀಡುವ ಆಮಿಷ ತೋರಿಸುತ್ತಿದ್ದರು.

ಎಚ್‌ಎಂಟಿ ಇತಿಹಾಸ
ಜಪಾನ್‌ ಸಹಭಾಗಿತ್ವದಲ್ಲಿ 1963ರಲ್ಲಿ ಬೆಂಗಳೂರಿನಲ್ಲಿ ಎಚ್‌ಎಂಟಿ ಫ್ಯಾಕ್ಟರಿ ಆರಂಭವಾಯಿತು. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಸ್ವದೇಶಿ ಕೈಗಾರಿಕೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಫ್ಯಾಕ್ಟರಿ ಆರಂಭಕ್ಕೆ ಕಾರಣವಾಗಿದ್ದರು.

ಬೇಡಿಕೆ ಹೆಚ್ಚಿದ ಕಾರಣ ಬೆಂಗಳೂರಿನಲ್ಲೇ ಎರಡನೇ ಘಟಕ ತೆರೆಯಲಾಯಿತು. ನಂತರ ಜಮ್ಮು ಕಾಶ್ಮೀರದಲ್ಲಿ ಮೂರನೇ ಘಟಕ, 1979ರಲ್ಲಿ ತುಮಕೂರಿನಲ್ಲಿ ನಾಲ್ಕನೇ ಘಟಕ ಆರಂಭವಾಯಿತು. ಎಚ್‌ಎಂಟಿಯ ಸಂಗಂ, ಉತ್ಸವ್‌, ಎಲಿಗೆನ್ಸ್ ಹೆಸರಿನ ವಾಚ್‌ಗಳು ಹೆಸರುವಾಸಿಯಾಗಿದ್ದವು. ಫ್ಯಾಕ್ಟರಿ ಆರಂಭದ ವರ್ಷಗಳಲ್ಲಿ ಪೈಲೆಟ್‌, ಜನತಾ, ವಿಜಯ್‌, ಆಶಾ, ಸೋನಾ, ಕೊಹಿನೂರ್‌ ಹೆಸರಿನ ವಾಚ್‌ ಕೊಳ್ಳಲು ಕಾಯಬೇಕಾದ ದಿನಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT