ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಕಂಪು ಗಮಕ ಇಂಪು

Last Updated 16 ಮೇ 2016, 19:30 IST
ಅಕ್ಷರ ಗಾತ್ರ

ಎನ್‌.ಆರ್‌.ಕಾಲೊನಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಕಳೆದ ಎರಡು ವರ್ಷದಿಂದ ನಡೆಯುತ್ತಿರುವ ಕುಮಾರವ್ಯಾಸ ಭಾರತ ಗಮಕ ಇಂದು (ಮೇ 17) ಮುಕ್ತಾಯಗೊಳ್ಳಲಿದೆ. ಮೇ 18ರಿಂದ ಜೈಮಿನಿ ಭಾರತ ಆರಂಭ. 280 ಗಂಟೆಗಳಷ್ಟು ಗಮಕ ಧ್ವನಿ ಮುದ್ರಣಗೊಂಡಿದೆ. ಸಿ.ಡಿ. ಬಿಡುಗಡೆ ಮಾಡುವ ಉದ್ದೇಶವೂ ಸಂಸ್ಥೆಗೆ ಇದೆ.

ಪುರಾಣ ಕಥೆಗಳ ವಿವಿಧ ಸನ್ನಿವೇಶ, ಭಾವ, ಸಂದರ್ಭಗಳಿಗನುಗುಣವಾಗಿ ಸಂಗೀತದಲೆ ಎಬ್ಬಿಸಿ ಕೇಳುಗನ ಮನತಟ್ಟುವ ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮ ಎನ್‌.ಆರ್‌.ಕಾಲೊನಿಯಲ್ಲಿ ಇರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬಹುಕಾಲದಿಂದ ನಡೆಯುತ್ತಿದೆ.

ಕುಮಾರವ್ಯಾಸ ಭಾರತಕ್ಕೆ ಸಂಬಂಧಿಸಿದ ಗಮಕ ವಾಚನ ಕಾರ್ಯಕ್ರಮ 2014 ಜುಲೈನಿಂದ ನಡೆಯುತ್ತಿದೆ. ಉಡುಪಿ ಸಮೀಪದ ಬ್ರಹ್ಮಾವರದ ಚಂದ್ರಶೇಖರ ಕೆದಿಲಾಯ ಅವರಿಂದ ಗಮಕ ವಾಚನ, ಆರ್‌. ಗಣೇಶ್‌ ಅವರಿಂದ ರಸವತ್ತಾದ ವ್ಯಾಖ್ಯಾನ. ವೇಣುಗೋಪಾಲ್‌ ಅವರ ಕೊಳಲಿನ ಇಂಪು ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು.

‘ಸುಮಾರು 140 ದಿನಗಳ ಕಾಲ ಸಂಜೆ 6ರಿಂದ 8 ಗಂಟೆವರೆಗೆ, ಗಮಕ ನಡೆಯಿತು. ಸಂಸ್ಥೆಯ ಸಭಾಂಗಣದ 250 ಆಸನಗಳೂ ತುಂಬಿ ಅನೇಕರು ನಿಂತು ಗಮಕ ಆಲಿಸುತ್ತಿದ್ದರು’ ಎಂದು ನೆನಪಿಸಿಕೊಂಡರು ಗಮಕಿ ಚಂದ್ರಶೇಖರ ಕೆದಿಲಾಯ.

ಕಾಲೇಜು ದಿನಗಳಿಂದಲೇ ಗಮಕಗಳ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಕೆದಿಲಾಯ ಅವರು ಗಮಕ ವಾಚನ ಕಾರ್ಯಕ್ರಮಕ್ಕಾಗಿ ಬ್ರಹ್ಮಾವರದಿಂದ ಬೆಂಗಳೂರಿಗೆ ಬರುತ್ತಾರೆ.

‘ಈಚೆಗೆ ಗಮಕದತ್ತ ಜನರಿಗೆ ಆಸಕ್ತಿ ಕಡಿಮೆಯಾಗಿದೆ. ಆದರೆ ಈಗಲೂ ಅನೇಕರು ಗಮಕ ಕಲಿಯಲು ಉತ್ಸಾಹ ತೋರುತ್ತಿರುವುದು ಸುಳ್ಳಲ್ಲ. ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಡಿದರೆ ಇಷ್ಟ ಪಡುತ್ತಾರೆ. ಆದರೂ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಧ್ಯವಯಸ್ಕರು, ಕೆಲಸದಿಂದ ನಿವೃತ್ತಿ ಪಡೆದ ಸಭಿಕರೇ ಜಾಸ್ತಿ ಇರುತ್ತಾರೆ.

ಇನ್ನು ಅನೇಕರು ತಾವೂ ಆ ದಿನದ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ತಂದಿಟ್ಟುಕೊಂಡು ಅವುಗಳನ್ನು ನೋಡುತ್ತಾ, ಹೋಲಿಕೆ ಮಾಡುತ್ತಾ, ವಾಚನ, ವ್ಯಾಖ್ಯಾನವನ್ನು ಆಸ್ವಾದಿಸುವುದನ್ನು ಕಂಡರೆ ತುಂಬಾ ಖುಷಿ ಎನಿಸುತ್ತದೆ’ ಎನ್ನುತ್ತಾರೆ ಅವರು.

ಕಾವ್ಯ ಹಳೆಯದ್ದೇ ಆದರೂ ಅದು ಸರ್ವಕಾಲಕ್ಕೂ ಸೂಕ್ತ. ಕಾವ್ಯಗಳಲ್ಲಿ ಬರುವ ಕಥೆಗಳನ್ನು ರಸವತ್ತಾಗಿ ತಿಳಿಸಿಕೊಡುವುದು ಒಂದು ಅಂಶವಾದರೆ ಅದು ಪಸರಿಸುವ ಮಾನವೀಯ ಮೌಲ್ಯ ಇಂದಿಗೂ ಪ್ರಸ್ತುತ. ಆಧುನಿಕ ಬದುಕಿನ ತೆಕ್ಕೆಯಲ್ಲಿ ಮನುಷ್ಯ ಬದಲಾಗಿರಬಹುದು.

ಆದರೆ ಸ್ನೇಹ, ಪ್ರೀತಿ, ತ್ಯಾಗ, ಕೋಪದಂತಹ ಭಾವನಾತ್ಮಕ ವಿಷಯಗಳು ಎಲ್ಲ ಕಾಲದಲ್ಲೂ ಇರುವಂಥದ್ದೇ. ಹೀಗಾಗಿ ಗಮಕದಲ್ಲಿ ಬಳಸಿಕೊಳ್ಳಲಾಗುವ ಕಾವ್ಯ, ಕಥೆಗಳು ಎಂದಿಗೂ ಮಾನವನ ಬದುಕಿಗೆ ಪ್ರಸ್ತುತವಾಗಿಯೇ ಇರುತ್ತವೆ ಎನ್ನುವುದು ಅವರ ಭಾವನೆ.

ಎರಡು ವರ್ಷಗಳ ಕಾಲ ನಡೆದ ಗಮಕ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದ ಭಾಮಿನಿ ಷಟ್ಪದಿಯಲ್ಲಿರುವ ಸುಮಾರು 3,500 ಆಯ್ದ ಪದ್ಯಗಳಿಗೆ ಇಂಪಾದ ಸಂಗೀತ, ಚೆಂದದ ವ್ಯಾಖ್ಯಾನ ನೀಡಲಾಯಿತು.

ಗಮಕ ವಾಚನ– ವ್ಯಾಖ್ಯಾನದ ಸುಮಾರು 280 ಗಂಟೆಗಳ ಆಡಿಯೊ ಸೀಡಿ ರೂಪಿಸಲಾಗಿದೆ. ಈ ಸೀಡಿಗಳು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಲಭ್ಯ.

ಸಂಗೀತಕ್ಕೆ ಕಾವ್ಯದ ಸೊಬಗು
ಎಳವೆಯಿಂದಲೇ ಕಾವ್ಯ, ಗಮಕದ ಕಡೆಗೆ ಒಲವು ಬೆಳೆಸಿಕೊಂಡವರು ಚಂದ್ರಶೇಖರ ಕೆದಿಲಾಯ. ಕಾಲೇಜು ದಿನಗಳಲ್ಲಿ ಹಾಡುವುದು, ರೂಪಕ ನಾಟಕಗಳಿಗೆ ಸುಶ್ರಾವ್ಯ ಗಾಯನದ ಮೋಡಿ ಹರಿಸುತ್ತಿದ್ದ ಕೆದಿಲಾಯ ಅವರು ತಮ್ಮ ಪ್ರಾಂಶುಪಾಲರಾದ ಗೋಪಾಲಕೃಷ್ಣ ಅಡಿಗರ ಕಾವ್ಯಗಳನ್ನೂ ಹಾಡಿ ಮೆಚ್ಚುಗೆ ಗಳಿಸಿದ್ದರು.

ಅವರ ಪ್ರತಿಭೆಯನ್ನು ಗುರುತಿಸಿದ ಕನ್ನಡ ಪ್ರೊಫೆಸರ್‌ ಮಠಪಾಡಿ ರಾಜಗೋಪಾಲಾಚಾರಿ ಕಾವ್ಯಗಳನ್ನೂ ಸೊಗಸಾಗಿ ಹಾಡುವುದನ್ನು ಅಭ್ಯಾಸ ಮಾಡಿಕೊ ಎಂದು ಸಲಹೆ ನೀಡಿದರಂತೆ.

ಇದೇ ಹೊತ್ತಿಗೆ ಮೈಸೂರಿನ ಎಂ. ರಾಘವೇಂದ್ರ ರಾಯರು ಬ್ರಹ್ಮಾವರದ ಕನ್ನಡ ಸಂಘದಲ್ಲಿ ಕಾವ್ಯ ವಾಚನ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು.
ಕೆದಿಲಾಯ ಅವರು ಕನ್ನಡ ಸ್ನಾತಕೋತ್ತರ ಪದವಿ ಓದುತ್ತಿದ್ದುದನ್ನು ತಿಳಿದು ರಾಘವೇಂದ್ರ ಅವರು ನೀನು ಕನ್ನಡದ ಕವಿಗಳ ಕಾವ್ಯಗಳನ್ನು ಹಾಡೋಕೆ ಪ್ರಯತ್ನ ಮಾಡು ಎಂದರಂತೆ.

ಹೀಗಾಗಿ ಅದೇ ದಾರಿಯಲ್ಲಿ ನಡೆದ ಕೆದಿಲಾಯ ಅವರು ಈ ಮುಂಚೆ ಕಲಿತಿದ್ದ ಗಾಯನಕ್ಕೆ ಕಾವ್ಯ ಸಂಪತ್ತಿನ ಮೋಡಿಯನ್ನೂ ಸೇರಿಸಿಕೊಂಡು ಹಾಡಲಾರಂಭಿಸಿದರು.

ಉಡುಪಿಯಲ್ಲಿ ಮಾಧವಾಚಾರ್ಯ ಮತ್ತು ಗೆಳೆಯರು ರೂಪಕಗಳನ್ನು ಮಾಡುತ್ತಿದ್ದರು. ಅದರಲ್ಲೂ ಚಂದ್ರಶೇಖರ ಹಾಡುತ್ತಿದ್ದರಿಂದ ಕಾವ್ಯ, ರಸಗಳು, ಭಾವ, ಸನ್ನಿವೇಶಗಳಿಗನುಗುಣವಾಗಿ ಹಾಡಲು ಕಲಿತುಕೊಂಡರು.

ಈ ನಡುವೆ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದ ಅವರಿಗೆ ಗಮಕ ಕಲೆ ಹೆಚ್ಚು ಆಪ್ತವಾಯಿತು. ಅಲ್ಲದೆ ಇವರು ಸುಗಮ ಸಂಗೀತ, ಭಾವಗೀತೆಗಳನ್ನೂ ಹಾಡಿ ಅನೇಕರಿಂದ ಮೆಚ್ಚುಗೆ ಗಳಿಸಿದ್ದು ಹಾಡುವ ಪ್ರತಿ ಹಾಡಿಗೂ ಸ್ವತಃ ರಾಗಸಂಯೋಜನೆ ಮಾಡಿ ಹಾಡುತ್ತಾರೆ ಎಂಬುದು ವಿಶೇಷ.

ಗೋಪಾಲಕೃಷ್ಣ ಅಡಿಗ, ಜಿ.ಎಸ್‌. ಶಿವರುದ್ರಪ್ಪ, ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ, ಕೆ.ಎಸ್‌. ನರಸಿಂಹಸ್ವಾಮಿ, ಚೆನ್ನವೀರ ಕಣವಿ,  ಎಚ್‌.ಎಸ್. ವೆಂಕಟೇಶಮೂರ್ತಿ ಮುಂತಾದ ಖ್ಯಾತರೆದುರು ಹಾಡಿ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

ಕೆದಿಲಾಯ ಅವರು 37 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಅನೇಕ ಶಾಲಾ ಕಾಲೇಜುಗಳಿಗೆ ಗಮಕಕ್ಕೆ ಸಂಬಂಧಿಸಿದಂತೆ ತರಬೇತಿ, ಶಿಬಿರಗಳನ್ನೂ ಮಾಡಿದ್ದಾರೆ.

*
ಹಳಗನ್ನಡ, ಗಮಕ, ಸಾಹಿತ್ಯದ ಬಗೆಗೆ ಇಂದಿನ ಯುವಕರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಮಾತಿಗೆ ಅಪವಾದಗಳೂ ಇವೆ ಎನ್ನುವುದು ಸಮಾಧಾನದ ವಿಷಯ. ಕೆಲ ಯುವಕರಲ್ಲಿ ಕಲಿಕೆಯ ಆಸಕ್ತಿಯನ್ನೂ ನಾನು ಗುರುತಿಸಿದ್ದೇನೆ.
–ಚಂದ್ರಶೇಖರ ಕೆದಿಲಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT