ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಮೀಮಾಂಸೆಗೆ ಜಿಎಸ್‌ಎಸ್ ಕೊಡುಗೆ ಅಪಾರ

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನುಡಿಸೇವೆಯ ಗಂಭೀರ ಚರ್ಚೆ
Last Updated 18 ಜೂನ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಹಿರಿಯ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯ ಕೊಡುಗೆಗಳ ಬಗ್ಗೆ ಸಾಹಿತಿ ಹಾಗೂ ವಿಮರ್ಶಕರು ಗಂಭೀರವಾದ ಚರ್ಚೆ ನಡೆಸಿದರು. ನುಡಿ ಸೇವೆಗೆ ಜಿ.ಎಸ್.ಎಸ್ ಅವರ ಕಾಣಿಕೆಯನ್ನು ಸ್ಮರಿಸಿದರು. ಜಿ.ಎಸ್.ಎಸ್ ಅವರ ಹಳೆಯ ಸಹೋದ್ಯೋಗಿಗಳು ಅವರ ವ್ಯಕ್ತಿತ್ವವನ್ನು ತೆರೆದಿಟ್ಟರೆ, ವಿದ್ವಾಂಸರು ಅವರ ಸಾಹಿತ್ಯ ಸೃಷ್ಟಿ ಹಾಗೂ ಕಾವ್ಯ ಮೀಮಾಂಸೆಯ ಆಯಾಮಗಳನ್ನು ವಿಶ್ಲೇಷಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ `ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಸಮಗ್ರ ಸಾಹಿತ್ಯ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭವು ಈ ಚರ್ಚೆಗೆ ವೇದಿಕೆಯಾಗಿತ್ತು.

ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, `ಕನ್ನಡ ಕಾವ್ಯ ಮತ್ತು ಕಾವ್ಯ ಮೀಮಾಂಸೆಯ ಕ್ಷೇತ್ರಕ್ಕೆ ಜಿ.ಎಸ್.ಎಸ್ ಕೊಡುಗೆ ಅಪಾರ. ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯ ಮೀಮಾಂಸೆ ಕುರಿತ ಅವರ ದೃಷ್ಟಿಕೋನ ಶ್ರೇಷ್ಠಮಟ್ಟದ್ದು' ಎಂದು ಅಭಿಪ್ರಾಯಪಟ್ಟರು.

`ನವೋದಯದ ಸಂದರ್ಭದಲ್ಲಿ ರಮ್ಯ ಕವಿತೆಗಳ ಮೂಲಕ ಕಾವ್ಯಯಾನ ಆರಂಭಿಸಿದ ಅವರು ನಂತರ ತಮ್ಮದೇ ಆದ ಭಿನ್ನ ಕಾವ್ಯಮಾರ್ಗವನ್ನು ರೂಪಿಸಿಕೊಂಡರು. ಎಪ್ಪತ್ತರ ದಶಕದಲ್ಲಿ ಜಿ.ಎಸ್.ಎಸ್ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮನ್ನೆಲ್ಲ ಹುರಿದುಂಬಿಸಿ ಹೋರಾಟದ ಮಾರ್ಗವನ್ನು ತೋರಿಸಿದವರು ಅವರು. ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬುದುಕನ್ನು ಅವರು ತಮ್ಮ `ಮುಂಬೈ ಜಾತಕ' ಕವನದಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದಾರೆ' ಎಂದು ನುಡಿದರು.

ವಿಮರ್ಶಕ ಡಾ.ಸಿ.ವೀರಣ್ಣ ಮಾತನಾಡಿ, `ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜಿ.ಎಸ್.ಎಸ್ ಕವಿಯಾಗಿಯೂ, ವಿದ್ವಾಂಸರಾಗಿಯೂ ಗುರುತಿಸಿಕೊಂಡವರು. ಅವರು ಕೇವಲ ವ್ಯಕ್ತಿಗಳನ್ನು ಬೆಳೆಸದೆ ಸಮುದಾಯವನ್ನು ಕಟ್ಟುವ ಪ್ರಯತ್ನ ಮಾಡಿದರು. ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದವರು ಅವರು. ಹೀಗಾಗಿ ಕನ್ನಡ ಅಧ್ಯಯನ ಕೇಂದ್ರದ ವಿಚಾರ ಸಂಕಿರಣ ಸಭಾಂಗಣಕ್ಕೆ `ಜಿ.ಎಸ್.ಶಿವರುದ್ರಪ್ಪ ಸಭಾಂಗಣ' ಎಂದು ನಾಮಕರಣ ಮಾಡಬೇಕು' ಎಂದರು.

`ಪ್ರಸ್ತುತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಂಭೀರವಾದ ಸಂಶೋಧನೆ ನಡೆಯುತ್ತಿಲ್ಲ. ವಿವಿಧ ರೀತಿಯ ಪ್ರಭಾವಗಳನ್ನು ಬಳಸಿಕೊಂಡು ಅಧಿಕಾರ ಮತ್ತು ಸ್ಥಾನಗಳನ್ನು ಗಳಿಸುವ ಪ್ರವೃತ್ತಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸಂಶೋಧನೆಯ ಮೂಲಕ ಹೆಸರು ಮಾಡಿದ ಒಬ್ಬ ವಿದ್ವಾಂಸರೂ ಕಾಣುತ್ತಿಲ್ಲ. ಸಂಶೋಧನೆ ಸಂಪೂರ್ಣವಾಗಿ ನಿಂತು ಹೋಗಿದೆ' ಎಂದು ವಿಷಾದಿಸಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಕವಿ, ವಿಮರ್ಶಕ ಡಾ.ಸುಮತೀಂದ್ರ ನಾಡಿಗ, `ತಮ್ಮ ಮಿತಿಯ ಮಧ್ಯೆಯೂ ಪರಿಪೂರ್ಣತೆಯ ಕಡೆಗೆ ನಡೆಯುವ ಪ್ರಯತ್ನ ನಡೆಸಿದವರು ಜಿ.ಎಸ್.ಎಸ್. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾಗ ಅನೇಕ ಸಂದರ್ಭಗಳಲ್ಲಿ ಅವರು ನಮ್ಮ ಮೇಲೆ ಕೋಪಗೊಳ್ಳುತ್ತಿದ್ದರು. ಆದರೆ, ಅವರ ಕೋಪಕ್ಕೆ ಅರ್ಥವಿರುತ್ತಿತ್ತು. ಅವರದ್ದು ಸಾತ್ವಿಕವಾದ ಕೋಪ' ಎಂದರು.

ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಮಾತನಾಡಿ, `ಕಾವ್ಯ ಮೀಮಾಂಸೆಯಲ್ಲಿ ಲಾಕ್ಷಣಿಕರ ಬಗೆಗಿನ ಜಿ.ಎಸ್.ಎಸ್ ಅವರ ದೃಷ್ಟಿಕೋನ ಅಪರೂಪದ್ದು. ಭಾರತೀಯ ಸಾಹಿತ್ಯದ ಸಂದರ್ಭದಲ್ಲಿ ಕವಿಯನ್ನು ದೈವತ್ವಕ್ಕೇರಿಸಿದ ಕಾರಣಕ್ಕೆ ವಿಮರ್ಶೆಯ ಪ್ರಕಾರ ನಮ್ಮಲ್ಲಿ ಬೆಳೆಯಲಿಲ್ಲ ಎಂಬುದನ್ನು ಅವರು ಗುರುತಿಸಿದ್ದಾರೆ. ಕವಿ ಜನ ಸಾಮಾನ್ಯರಿಗಿಂತ ಅತೀತವಾದ ವ್ಯಕ್ತಿ ಎಂಬ ಮನೋಭಾವ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಬೆಳೆದು ಬಂದುದರಿಂದ ವಿಮರ್ಶೆಗೆ ಮಹತ್ವ ಸಿಗದೇ ಹೋಯಿತು' ಎಂದು ಹೇಳಿದರು.

`ಲಾಕ್ಷಣಿಕರು ಕವಿ ಪ್ರತಿಭೆಯನ್ನು ಅತಿ ಮಾನುಷಶಕ್ತಿ ಎಂದು ಪರಿಗಣಿಸಿದ್ದರಿಂದ ವ್ಯಕ್ತಿ ವಿಮರ್ಶೆ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಬೆಳೆಯದೇ ಹೋಯಿತು. ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಪ್ರಭಾವ ಭಾರತೀಯ ಸಾಹಿತ್ಯದ ಮೇಲೆ ಆಗುವವರೆಗೆ ನಮ್ಮಲ್ಲಿ ಕವಿ ಹಾಗೂ ಕಾವ್ಯವನ್ನು ಪ್ರಶ್ನಿಸುವುದೇ ಅಪರಾಧ ಎಂಬ ಭಾವನೆ ಬೆಳೆದು ಬಂದಿತ್ತು. ಈ ಅಂಶಗಳ ಮೇಲೆ ಜಿ.ಎಸ್.ಎಸ್ ಬೆಳಕು ಚೆಲ್ಲಿದ್ದಾರೆ' ಎಂದು ನುಡಿದರು.

`ಪಂಪ, ರನ್ನ, ಜನ್ನ ಮತ್ತಿತರ ಜೈನ ಕವಿಗಳು ತಮ್ಮ ಕಾವ್ಯಗಳಲ್ಲಿ ಯುದ್ಧದ ವರ್ಣನೆಗಳನ್ನು ರಂಜಿಸುತ್ತಾರೆ. ಜೈನ ಕವಿಗಳಾಗಿದ್ದರೂ ಯುದ್ಧ ಹಾಗೂ ಪರಾಕ್ರಮದ ಬಗ್ಗೆ ಈ ಕವಿಗಳಿರುವ ಒಲವನ್ನು ಜಿ.ಎಸ್.ಎಸ್ ಗುರುತಿಸಿದ್ದಾರೆ' ಎಂದು ಅವರು ತಿಳಿಸಿದರು.

ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಮಾತನಾಡಿ, `ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯ ಮೀಮಾಂಸೆಯ ಸೇತುವಂತೆ ಜಿ.ಎಸ್.ಎಸ್ ಕೆಲಸ ಮಾಡಿದ್ದಾರೆ. ಜತೆಗೆ ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯ ಮೀಮಾಂಸೆಯ ಸಾಮ್ಯತೆಗಳನ್ನು ಅವರು ಗುರುತಿಸಿದರು. ಅವರು ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ದೃಷ್ಟಿಕೋನವನ್ನು ಬೆಳೆಸಿದ ಕವಿ ಹೃದಯಿ ವಿದ್ವಾಂಸ' ಎಂದರು.

ಸಾಹಿತಿ ಶೂದ್ರ ಶ್ರೀನಿವಾಸ್ ಮಾತನಾಡಿ, `ಜಿ.ಎಸ್.ಎಸ್ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಮೌಲಿಕ ಚರ್ಚೆಗಳು ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದರು. ಅವರ ಅವಧಿಯಲ್ಲಿ ಕನ್ನಡ ಅಧ್ಯಯನ ಕೇಂದ್ರದಿಂದ ವಿದ್ವತ್ಪೂರ್ಣ ಗ್ರಂಥಗಳು ಹೊರಬಂದವು' ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಎಸ್. ವಿದ್ಯಾಶಂಕರ್ ಮಾತನಾಡಿ, `ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಸಂಘವನ್ನು ಕಟ್ಟಿದ ಜಿ.ಎಸ್.ಎಸ್, ಸಂಘದ ಮೂಲಕ ಅನೇಕ ಸಾಹಿತ್ಯಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರು. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಹಾಗೂ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆಯನ್ನು ಅವರು ಆರಂಭಿಸಿದ್ದರು' ಎಂದು ಹೇಳಿದರು.

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನು ಸಿದ್ಧಾರ್ಥ ಮಾತನಾಡಿ, `ಜಿ.ಎಸ್.ಎಸ್ ಅವರು ಕೇಂದ್ರದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಪ್ರಕಟಿಸಿದ ಗ್ರಂಥಗಳ ಮರು ಮುದ್ರಣಕ್ಕೆ ಯೋಜನೆ ರೂಪಿಸಲಾಗಿದೆ. `ಸಾಹಿತ್ಯ ವಾರ್ಷಿಕ'ವನ್ನು ಪುನರಾರಂಭಿಸಲು ಚಿಂತನೆ ನಡೆಸಲಾಗಿದೆ' ಎಂದರು.

ಪ್ರಾಧ್ಯಾಪಕರಾದ ಡಾ.ಸಿ.ಪಿ.ಸಿದ್ದಾಶ್ರಮ, ಡಾ.ಲಿಂಗಣ್ಣ ಗೋನಾಳ, ಡಾ.ಪ್ರಶಾಂತ ನಾಯಕ, ಪ್ರೊ.ಹು.ಕ.ಜಯದೇವ, ಡಾ.ವಿಜಯಾ ಸುಬ್ಬರಾಜ್, ಡಾ. ಹೇಮಲತಾ ವಡ್ಡೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT