ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಬಂದ ಮಳೆ ಬೆಂಗಳೂರಲ್ಲಿ ಸುರಿದರೆ?

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

​ಭಾರತದಲ್ಲಿ ಮುಂಗಾರು ಮಳೆ ಬಹಳಷ್ಟು ಜನರ ಬದುಕಿಗೆ ಅಮೃತವಾಹಿನಿ ರೀತಿಯದು. ಆದರೆ ಇದೇ ಮಳೆ ಅತಿಯಾದರೆ, ಅದರ ಪರಿಣಾಮ ಅದನ್ನು ಎದುರಿಸಿದವರಿಗೇ ಗೊತ್ತು. ಇದೇ ತಿಂಗಳ ಮೊದಲ ವಾರದಲ್ಲಿ, ಜಮ್ಮು-ಕಾಶ್ಮೀರ ಮತ್ತು ಅದರ ಸುತ್ತ-ಮುತ್ತಲ ಪ್ರದೇಶದಲ್ಲಿ ಮುಂಗಾರಿನ ಕೊನೆಯ ಹಂತದಲ್ಲಿ ನಾಲ್ಕೈದು ದಿನ ಸತತವಾಗಿ ಮಳೆ ಅಬ್ಬರಿಸಿತು. ಇದರ ಪರಿಣಾಮ, ಝೇಲಮ್ ನದಿಯು ಅಪಾಯ ಮಟ್ಟಕ್ಕಿಂತ ನಾಲ್ಕೂವರೆ ಅಡಿಗಿಂತ ಹೆಚ್ಚು ಎತ್ತರ ಉಕ್ಕಿ ಹರಿದು, ಇಡೀ ಶ್ರೀನಗರವೇ ಜಲಾವೃತವಾಗಿತ್ತು. ಈ ಮಳೆ ಅಬ್ಬರದಲ್ಲಿ ನೂರಾರು ಜನ ಸಾವಿಗೀಡಾದರು, ಹಲವರು ಕಣ್ಮರೆಯಾದರು.

ಸಾವಿರಾರು ಜನ ಸ್ಥಳಾಂತರಗೊಂಡರು. ಮಳೆ–ಪ್ರವಾಹದಿಂದ ಉಂಟಾದ ನಷ್ಟದ ಸ್ಪಷ್ಟ ಅಂದಾಜು ತಿಳಿಯಲಿಕ್ಕೆ ಕೆಲವು ತಿಂಗಳೇ ಬೇಕು. ಈ ಪ್ರದೇಶದ ಪುನರ್‌ ನಿರ್ಮಾಣಕ್ಕೆ ಹತ್ತು ವರ್ಷಗಳೇ ಬೇಕಾಗಬಹುದು ಎನ್ನುವುದು ತಜ್ಞರು ಅಭಿಮತ. ಬಹುಶಃ ಕಾಶ್ಮೀರ ಕಣಿವೆಯು ಕಂಡ ಅತಿ ಹೆಚ್ಚು ಪ್ರಮಾಣದ ಮಳೆ ಇದೇ ಆಗಿರಲೂಬಹುದು.

ಅಂದಹಾಗೆ, ಇಷ್ಟೆಲ್ಲ ಹಾನಿ ಉಂಟು ಮಾಡುವ ಮಳೆ ಬರುವುದೆಂಬ ಮುನ್ಸೂಚನೆ ಭಾರತೀಯ ಹವಾಮಾನ ಇಲಾಖೆಗೆ ತಿಳಿದಿರಲಿಲ್ಲವೆ? ಹಾಗೆ ತಿಳಿದಿದ್ದರೆ ಅವರು ಈ ಮಾಹಿತಿಯನ್ನು ಜನರಿಗೆ ಅಥವಾ ಸಂಬಂದಪಟ್ಟ ಇಲಾಖೆ / ಅಧಿಕಾರಿಗಳಿಗೆ ತಿಳಿಸಲಿಲ್ಲವೇ?

ಅವಘಡ ಸಂಭವಿಸಿದ ಮೇಲೆಯೇ ನಮ್ಮಲ್ಲಿ ಮರಣೋತ್ತರ ಪರೀಕ್ಷೆ ನಡೆಯುವುದು. ಕಾಶ್ಮೀರ ಮಳೆ, ಮತ್ತದರ ಪರಿಣಾಮಗಳ ಮರಣೋತ್ತರ ಪರೀಕ್ಷೆಯೂ ಈಗ ನಡೆಯುತ್ತಿದೆ. ಕಳೆದ ವರ್ಷ ಕೇದಾರನಾಥ – ಬದರಿನಾಥದಲ್ಲಿ ಸಂಭವಿಸಿದ ಅನಾಹುತದಿಂದ ನಾವಿನ್ನೂ ಪಾಠ ಕಲಿತಿಲ್ಲವೆಂಬುದಕ್ಕೆ ಇದೇ ನಿದರ್ಶನ. ಕೇದಾರನಾಥದಲ್ಲಿ ಸಂಭವಿಸಿದ ಅನಾಹುತಕ್ಕೆ ಮೇಘ ಸ್ಫೋಟವೇ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತಷ್ಟೇ; ಆದರೆ, ಅದೇ ವಿಪತ್ತಿನಲ್ಲಿ ಸಿಕ್ಕಿಕೊಂಡು ಪಾರಾಗಿದ್ದ ‘ಭಾರತೀಯ ವಿಜ್ಞಾನ ಸಂಸ್ಥೆ’ಯ ಪ್ರಾಧ್ಯಾಪಕರಾದ ಪ್ರೊ. ಜೆ. ಶ್ರೀನಿವಾಸನ್ ಅವರು ‘ಕರೆಂಟ್ ಸೈನ್ಸ್’ ವೈಜ್ಞಾನಿಕ ನಿಯತಕಾಲಿಕದಲ್ಲಿ ಕೇದಾರನಾಥದ ಅನಾಹುತಕ್ಕೆ ಕಾರಣವಾದ ಘಟನೆಗಳನ್ನು ವಿಶ್ಲೇಷಿಸಿದ್ದಾರೆ.

ಅವರ ವಿಶ್ಲೇಷಣೆಯ ಪ್ರಕಾರ– ಕೇದಾರನಾಥದ ಉತ್ತರ ಭಾಗದಲ್ಲಿ ಸತತವಾಗಿ ಸಂಭವಿಸಿದ ಮಳೆಯಿಂದಾಗಿ, ಮಣ್ಣು ಪೂರ್ತಿಯಾಗಿ ನೆನೆದು, ತೇವಾಂಶ ಹೆಚ್ಚಾಗಿದ್ದರಿಂದ ಬಿಗಿಯನ್ನು ಕಳೆದುಕೊಂಡಿದೆ. ಇದರಿಂದ ಉಂಟಾದ ಭೂಕುಸಿತದಿಂದ ಅಲ್ಲಿದ್ದ ಕೆರೆ ಒಡೆದು, ಆ ನೀರಿನ ಪ್ರವಾಹವೇ ಕೇದಾರನಾಥದಲ್ಲಿನ ಅನಾಹುತಕ್ಕೆ ಕಾರಣವಾಗಿದೆ. ಯಾವುದೇ ಪ್ರದೇಶದಲ್ಲಿ ಗಂಟೆಗೆ 100 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಆ ವಿದ್ಯಮಾನಕ್ಕೆ ‘ಮೇಘ ಸ್ಫೋಟ' ಎನ್ನುತ್ತಾರೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಕೇದಾರನಾಥದಲ್ಲಿ ಅಷ್ಟೊಂದು ಮಳೆಯೇ ಬಂದಿರಲಿಲ್ಲ! ಅಲ್ಲಿ ಅನಾಹುತ ಸಂಭವಿಸಿದ್ದು ಸತತವಾಗಿ ನಾಲ್ಕೈದು ದಿನ ಸುರಿದ ಮಳೆಯಿಂದಷ್ಟೆ!

ಸಂವಹನದ ಕೊರತೆ
ಕೇದಾರನಾಥದ ಅವಘಡದ ಹಿನ್ನೆಲೆಯಲ್ಲಿ ಪ್ರೊ. ಶ್ರೀನಿವಾಸನ್‌ ಅವರು, ಡೆಹರಾಡೂನ್‌ನಲ್ಲಿ ಇರುವ ‘ಭಾರತೀಯ ದೂರ ಸಂವೇದಿ ಸಂಸ್ಥೆ’ಯು ಭೂ ಕುಸಿತ ಮತ್ತು ಇತರೆ ವಿಪತ್ತಿನ ಬಗ್ಗೆ ನಡೆಸಿದ ಅಧ್ಯಯನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು. ಇಂಥ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನಮ್ಮ ಕೆಲವು ಸಂಸ್ಥೆಗಳ ಸಮನ್ವಯ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದವರು ಒತ್ತಿ ಹೇಳಿದ್ದರು. ಇಷ್ಟಾದರೂ, ಕೇದಾರದ ದುರಂತದಿಂದ ನಾವು ‘ಸಮನ್ವಯದ ಪಾಠ’ ಕಲಿತಿಲ್ಲ ಎನ್ನುವುದಕ್ಕೆ ಪ್ರಸಕ್ತ ಕಾಶ್ಮೀರದ ವಿದ್ಯಮಾನ ರುಜುವಾತಿನಂತಿದೆ.

ಹವಾಮಾನದ ಬಗ್ಗೆ ನಮ್ಮ ವೈಜ್ಞಾನಿಕ ತಿಳಿವಳಿಕೆ ಸಾಕಷ್ಟು ಉತ್ತಮ ಮಟ್ಟದಲ್ಲಿದೆ. ಭಾರತೀಯ ಹವಾಮಾನ ಇಲಾಖೆಗೆ ಯಾವುದೇ ಪ್ರದೇಶದಲ್ಲಿ ಭಾರೀ ಮಳೆ ಬರಬಹುದೆನ್ನುವ ಮುನ್ಸೂಚನೆಯಂತೂ ಇದ್ದೇ ಇರುತ್ತದೆ. ಕೇಂದ್ರೀಯ ಜಲ ಆಯೋಗವು, ದೇಶದಲ್ಲಿನ ಎಲ್ಲಾ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟವನ್ನು ಅಳೆಯುತ್ತದೆ. ಹೀಗೆ ನಿಗಾ ವಹಿಸುವ ನದಿಗಳಲ್ಲಿ ಝೇಲಮ್ ನದಿಯೂ ಸೇರಿದೆ.

ವಿಪರ್ಯಾಸ ಎಂದರೆ ಈ ಎರಡೂ ಇಲಾಖೆಗಳು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜೊತೆಯಾಗಲಿ, ಭಾರತೀಯ ಸೇನೆಯ ಜೊತೆಯಾಗಲಿ ಸರಿಯಾದ ಸಮಯಕ್ಕೆ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಮತ್ತು ಸಮನ್ವಯದಿಂದ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ. ಹಿಂದೊಮ್ಮೆ ಒಡಿಶಾದಲ್ಲಿ ಅಬ್ಬರಿಸಿದ್ದ ‘ಫೇಲಿನ್’ ಅನ್ನು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳು ಪರಿಣಾಮಕಾರಿಯಾಗಿ ಎದುರಿಸಿ, ದೊಡ್ಡ ಪ್ರಮಾಣದ ಜೀವಹಾನಿಯನ್ನು ತಪ್ಪಿಸಿದ್ದರು. ಈ ಮುಂಜಾಗ್ರತೆ ಕಾಶ್ಮೀರದ ವಿಷಯದಲ್ಲಿ ಸಾಧ್ಯವಾಗಲಿಲ್ಲ.

ಶ್ರೀನಗರದಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುದು ಮೂರನೇ ದಿನ. ಮೂರು ದಿನವಾದರೂ ಮಳೆ ಕಡಿಮೆಯಾಗದ ಕಾರಣ, ಅಪಾಯ ಪ್ರದೇಶಗಳಿಂದ ದೂರ ಹೋಗುವಂತೆ ಜನರಿಗೆ ಸೂಚಿಸಲಾಯಿತು. ಈ ಸೂಚನೆಗೆ ಹಲವರು ಕಿವಿಗೊಡಲಿಲ್ಲ. ಪ್ರವಾಹ ಹೆಚ್ಚಾದಂತೆ ಜನ ನೆಲ ಮಹಡಿಯಿಂದ ಮೊದಲನೇ ಮಹಡಿಗೆ, ಅಲ್ಲಿಂದ ಎರಡನೇ ಮಹಡಿಗೆ ಸೇರಿದರು. ಐದು ದಿನಗಳ ಕಾಲ ಸುರಿದ ಮಳೆಯಿಂದ ಕಣಿವೆಯೇ ಜಲಾವೃತಗೊಂಡ ನಂತರವಷ್ಟೇ ಎಚ್ಚೆತ್ತು, ಬೇರೆಡೆ ಹೊರಡಲು ಸಿದ್ಧರಾದೆವೆಂದು ನನ್ನ ಕಾಶ್ಮೀರದ ಸ್ನೇಹಿತರೊಬ್ಬರು ತಿಳಿಸಿದರು.

ಬೆಂಗಳೂರಲ್ಲೂ ಅಪಾಯ?
ಕಾಶ್ಮೀರದ ಪ್ರವಾಹದ ಬಾಧೆ ಒಂದು ಸುದ್ದಿಯಂತೆ ಅಥವಾ ಮನಸ್ಸು ಕಲಕುವ ಘಟನೆಯಂತೆ ನಮಗೆ ಭಾಸವಾಗಬಹುದು. ಉತ್ತರ ಕರ್ನಾಟಕದಲ್ಲಿನ ಪ್ರವಾಹದ ಪ್ರಸಂಗಗಳು ಕೂಡ ಎಲ್ಲೋ ದೂರದ ಘಟನಾವಳಿಗಳಂತೆ ರಾಜಧಾನಿಯಲ್ಲಿ ಇರುವವರಿಗೆ ಅನ್ನಿಸಬಹುದು. ಒಂದು ವೇಳೆ, ಇಂಥ ಮಹಾಮಳೆ ಬೆಂಗಳೂರಿನಲ್ಲೂ ಸುರಿದರೆ?

ಭೌಗೋಳಿಕವಾಗಿ ಬೆಂಗಳೂರು ಎತ್ತರಪ್ರದೇಶದಲ್ಲಿದೆ. ಸಾಮಾನ್ಯವಾಗಿ ಸುರಿಯುವ ಮಳೆ ಕಾಲುವೆಗಳು-ಹೊಳೆಗಳ ಮೂಲಕ ಹಳ್ಳ-ಕೊಳ್ಳಗಳಿಂದ ಕೆರೆಗಳಿಗೆ ಹರಿದು, ಅವುಗಳು ಕೋಡಿ ಬಿದ್ದ ನಂತರ ಕೊನೆಗೆ ನದಿಯಾಗಿ ಸಾಗುತ್ತದೆ. ಸಾಮಾನ್ಯವಾಗಿ ವರ್ಷಂಪ್ರತಿ ಬೆಂಗಳೂರಿನಲ್ಲಿ ಸುಮಾರು ಅರವತ್ತು ದಿನಗಳಲ್ಲಿ ಸರಾಸರಿ 1000 ಮಿ.ಮೀ ಮಳೆಯಾಗುತ್ತದೆ. ಆದರೆ, ಸತತವಾಗಿ ಕೆಲವೇ ದಿನಗಳಲ್ಲಿ ನೂರಿನ್ನೂರು ಮಿ.ಮೀ ಮಳೆಯಾದರೆ? ಅದರ ಪರಿಣಾಮ ಭಾರೀ ದುರಂತವಲ್ಲದೆ ಬೇರೇನೂ ಅಲ್ಲ.

ಜಲವಿಜ್ಞಾನದಲ್ಲಿ ಕಾಲುವೆಗಳು, ಹೊಳೆಗಳು, ಉಪನದಿಗಳು ಹಾಗೂ ನದಿಗಳನ್ನು ಒಂದು ಕ್ರಮಾನುಗತ ಆಧರಿಸಿ ‘ಸ್ಟ್ರಾಹ್ಲರ್'' ಕ್ರಮವೆಂದು ವರ್ಗೀಕರಿಸಲಾಗುತ್ತದೆ. 

ನದಿ ಮೂಲದಲ್ಲಿ ಪುಟ್ಟದಾಗಿ ಹರಿಯುವ ಹೊಳೆ ಸಾಮಾನ್ಯವಾಗಿ ಮೊದಲ ಕ್ರಮದಲ್ಲಿರುತ್ತದೆ. ಮಳೆ ಸುರಿದಾಗ, ಮಳೆ ನೀರು ಮೊದಲು ಪ್ರಥಮ ಕ್ರಮದ ಹೊಳೆ/ಕಾಲುವೆಗಳಲ್ಲಿ ಹರಿದು ಸಾಗುತ್ತದೆ. ಇಂತಹ ಎರಡು ಮೊದಲ ಕ್ರಮದಲ್ಲಿರುವ ಹೊಳೆ ಸೇರಿ ಎರಡನೇ ಕ್ರಮವಾಗುತ್ತದೆ. ನಂತರ ಎರಡಕ್ಕಿಂತ ಹೆಚ್ಚು ಎರಡನೇ ಕ್ರಮ ಹೊಳೆ ಸೇರಿದರೆ, ಅದು ಮೂರನೇ ಕ್ರಮವಾಗುತ್ತದೆ. ಹಾಗೆಯೇ ಇದು ಒಂದು ನದಿಯಾಗಿ ಹರಿಯುವಷ್ಟರಲ್ಲಿ ಇದರ ಕ್ರಮ 4 ಅಥವಾ 5 ಆಗಿರುತ್ತದೆ (ಚಿತ್ರ ಗಮನಿಸಿ).

ಬೆಂಗಳೂರಿನ ಕೆರೆ-ಕಾಲುವೆಗಳನ್ನು 1920ರ ಒಂದು ನಕ್ಷೆಯನ್ನು ಆಧರಿಸಿ ‘ಗುಬ್ಬಿ ಲ್ಯಾಬ್ಸ್’ ಅಧ್ಯಯನವನ್ನು ಸಿದ್ಧಪಡಿಸಿದೆ. ಅದರಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1209 ಕಾಲುವೆಗಳಿದ್ದು, ಇದರ ಒಟ್ಟು ಉದ್ದ 793.85 ಕಿ.ಮೀ ಆಗಿದೆ. ಇವುಗಳಲ್ಲಿ ಮೊದಲನೇ, ಎರಡನೇ, ಮೂರನೇ, ನಾಲ್ಕನೇ ಹಾಗೂ ಐದನೇ ಕ್ರಮದ ಹೊಳೆಗಳು ಕ್ರಮವಾಗಿ 535.19 ಕಿಮೀ; 181.63 ಕಿಮೀ; 60.62 ಕಿಮೀ; 8.63 ಕಿಮೀ; ಮತ್ತು 7.79 ಕಿಮೀ ಇವೆ.

ಹಾಗೆಯೇ ನಗರದಲ್ಲಿ 262 ಕೆರೆಗಳಿದ್ದು, ಇವುಗಳ ಒಟ್ಟು ವಿಸ್ತೀರ್ಣ 68.84 ಚ.ಕಿ.ಮೀ ಎನ್ನಲಾಗಿದೆ. ಹಾಗಾದರೆ ಬೆಂಗಳೂರಿನಲ್ಲಿನ ಇಷ್ಟೆಲ್ಲ ಕೆರೆ ಕಾಲುವೆಗಳ ಇಂದಿನ ಸ್ಥಿತಿ ಏನು? ಇದನ್ನು ಗುರ್ತಿಸಲೆಂದೇ ಉಪಗ್ರಹಗಳಿಂದ ದೊರೆತ ಚಿತ್ರಗಳನ್ನು ಆಧರಿಸಿ ಭೌಗೋಳಿಕ ಮಾಹಿತಿ ವ್ಯವಸ್ಥೆಯಲ್ಲಿ ಅಧ್ಯಯನವನ್ನು ಮಾಡಿ, ನಂತರ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಯಿತು. ಇದರಂತೆ, ಇಂದಿನ ನಮ್ಮ ಕಾಲುವೆಗಳನ್ನು ಅದರ ಇಂದಿನ ಸ್ಥಿತಿ-ಗತಿಯ ಪ್ರಕಾರ ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಅದರಂತೆ ಇಂದು ‘ತೆರೆದ’ (ನೈಸರ್ಗಿಕ ಮತ್ತು ಗೋಡೆಯುಳ್ಳ) ಕಾಲುವೆ, ‘ಮುಚ್ಚಿದ’ ಕಾಲುವೆ, ‘ಬದಲಾವಣೆಗೊಂಡ’ ಕಾಲುವೆ ಮತ್ತು ‘ಕಣ್ಮರೆಯಾದ ಅಥವಾ ನಾಪತ್ತೆಯಾಗಿರುವ’ ಕಾಲುವೆಗಳೆಂದು ವಿಂಗಡಿಸಲಾಯಿತು.

ಈ ಅಧ್ಯಯನದಂತೆ ಇಂದು ಇವುಗಳಲ್ಲಿ ತೆರೆದ, ಮುಚ್ಚಿದ, ಬದಲಾವಣೆಗೊಂಡ  ಮತ್ತು ಕಣ್ಮರೆಯಾದ ಅಥವಾ ನಾಪತ್ತೆಯಾಗಿರುವ ಕಾಲುವೆಗಳ ಉದ್ದ ಕ್ರಮವಾಗಿ 133.01 ಕಿಮೀ; 110.39 ಕಿಮೀ; 170.86 ಕಿಮೀ; ಮತ್ತು 376.10 ಕಿಮೀ. ಅದರಂತೆ ಶೇಕಡಾ 60ರಷ್ಟು ಮೊದಲನೇ ಕ್ರಮದ ಕಾಲುವೆ ಕಣ್ಮರೆಯಾಗಿದೆ ಮತ್ತು ಸುಮಾರು ಶೇಕಡಾ 27ರಷ್ಟು ಎರಡನೇ ಕ್ರಮದ ಕಾಲುವೆಗಳು ಕಣ್ಮರೆಯಾಗಿದೆ. ಇವು ಬಹುಶಃ ಒತ್ತುವರಿಯಿಂದಲೇ ಆಗಿರಬಹುದು ಎಂದು ಹೇಳುವುದು ಸುಲಭ.

ಇದಕ್ಕೆ ಇನ್ನೊಂದು ಕಾರಣವೆಂದರೆ, ನಮ್ಮ ಭೂ ದಾಖಲೆಯಲ್ಲಿ ಕೆರೆಗಳಿಗೆ ಮಾತ್ರ ಸರ್ವೆ ಸಂಖ್ಯೆ ಇದ್ದು, ಮೊದಲ ಹಾಗೂ ಎರಡನೇ ಕ್ರಮದ ಕಾಲುವೆಗಳು ಸರ್ವೇ ಸರ್ವೆ ಹೊಂದಿರುವುದಿಲ್ಲ. ಹೀಗಾಗಿ ಒಂದೆಡೆ ತಾರ್ಕಿಕವಾಗಿ ಒತ್ತುವರಿಯೆಂದು ಹೇಳುವುದೂ ಕಷ್ಟ! ಇನ್ನೊಂದೆಡೆ ನಮ್ಮ ಅಪೂರ್ಣವಾದ ಒಳಚರಂಡಿ ವ್ಯವಸ್ಥೆಯಿಂದಾಗಿ ಕಾಲುವೆಗಳು ಕೊಳಚೆಯನ್ನು ಒಯ್ಯುವ ಬೃಹತ್ ಚರಂಡಿಗಳಾಗಿವೆ. ವಿಪರ್ಯಾಸವೇನೆಂದರೆ ಹಿಂದೊಮ್ಮೆ  ನೈಸರ್ಗಿಕವಾಗಿ ಹರಿಯುತ್ತಿದ್ದ ಈ ಹೊಳೆ/ಕಾಲುವೆಗಳು ಮೋರಿ/ಚರಂಡಿಗಳಾಗಿ ಪರಿವರ್ತನೆಗೊಂಡಿವೆ.

ಆತಂಕದ ಬೆಳವಣಿಗೆ!
ನಗರ ಬೆಳೆದಂತೆ, ಭೂ ಬಳಕೆ ಹಾಗೂ ಅದರ ಬದಲಾವಣೆಯಿಂದಾಗಿ, ಕಾಲುವೆಗಳಿರಲಿ ಕೆರೆಗಳೇ ಕಣ್ಮರೆಯಾಗಿವೆ. ಇದರ ಪರಿಣಾಮ, ಮಳೆಯಿಂದ ಬಂದ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲೇ ಸ್ಥಳೀಯವಾಗಿ ಪ್ರವಾಹ ಉಂಟಾಗುವ ಸಾಧ್ಯತೆ ಸೃಷ್ಟಿಯಾಗಿರುವುದು. ಈ ಕಾರಣದಿಂದಲೇ, ಇತ್ತೀಚಿನ ವರ್ಷಗಳಲ್ಲಿ ಹೊಸೂರು ರಸ್ತೆ, ಎಚ್.ಎಸ್.ಆರ್. ಬಡಾವಣೆ, ಈಜಿಪುರ, ಬನ್ನೇರುಘಟ್ಟ ರಸ್ತೆ, ಬಿ.ಟಿ.ಎಂ., ಇತ್ಯಾದಿ ತಗ್ಗು ಪ್ರದೇಶಗಳಲ್ಲಿ ನೀರು ಸ್ವಾಭಾವಿಕವಾಗಿ ಹರಿದು ಹೋಗುತ್ತಿದ್ದ ಕಾಲುವೆಗಳು ಇಲ್ಲವಾದುದರಿಂದ ಅಲ್ಲಲ್ಲೇ ನಿಂತು ಜನ-ಜೀವನಕ್ಕೆ ತೊಂದರೆ ಉಂಟಾಗುತ್ತಿರುವುದು.

ವಾಡಿಕೆಗಿಂತ ಹೆಚ್ಚು ಮಳೆ ಸುರಿದರೆ ಬೆಂಗಳೂರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಇದಕ್ಕೆ ಪರಿಹಾರವೇನು? ಇದಕ್ಕೆ ಮೊದಲು ನಮ್ಮ ಕಂದಾಯ ಇಲಾಖೆಯ ಭೂ ದಾಖಲೆಗಳಲ್ಲಿ ಹೊಳೆ/ಕಾಲುವೆಗಳನ್ನು ಗುರುತಿಸಿ ಅವುಗಳ ಜೀರ್ಣೋದ್ಧಾರಗೊಳಿಸುವುದು. ಇದಕ್ಕೆ ಬಹುಶಃ ನಮ್ಮ ಕರ್ನಾಟಕ ಭೂಕಂದಾಯ ಕಾಯ್ದೆ 1964ರಲ್ಲಿ ಸೂಕ್ತವಾದ ತಿದ್ದುಪಡಿಯನ್ನೇ ತರಬೇಕು.

ಆನಂತರ ನಗರ ಯೋಜನೆ ಇಲಾಖೆ ಅಥವಾ ನಿರ್ದೇಶನಾಲಯ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರಲ್ಲೂ ನಗರಗಳ ಮಾಸ್ಟರ್ ಪ್ಲಾನ್ ನಿರೂಪಣೆಯಲ್ಲಿ ಇವುಗಳನ್ನು ಗುರುತಿಸಿ ಅದಕ್ಕೆ ತಕ್ಕ ಸ್ಥಾನಮಾನ ಕೊಡುವಂತೆ ಸೂಕ್ತವಾದ ತಿದ್ದುಪಡಿಯನ್ನು ತರಬೇಕಿದೆ. ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ಕೆರೆಗಳ ಅಭಿವೃದ್ಧಿಯಲ್ಲದೆ ಕಾಲುವೆಗಳ ಸಂರಕ್ಷಣೆ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಬೆಂಗಳೂರು ಜಲ ಮತ್ತು ಒಳ ಚರಂಡಿ ಮಂಡಳಿಯು ಇಡೀ ನಗರದ ವ್ಯಾಪ್ತಿಯಲ್ಲಿ ಕೊಳಚೆ ನೀರನ್ನು ಸರಿಯಾಗಿ ಸಂಗ್ರಹಿಸಿ, ಅದರ ಶುದ್ಧೀಕರಣಕ್ಕೆ ತಕ್ಕ ವ್ಯವಸ್ಥೆಗಳನ್ನು ಮಾಡಿಕೊಳ್ಳದಿದ್ದಲ್ಲಿ ಮಹಾ ವಿಪತ್ತಿನ ಸಾಧ್ಯತೆಗಳು ಇಲ್ಲದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT