ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಗಳಿಗೆ ಬೇಕಿರುವುದು ಬ್ರಹ್ಮಾಸ್ತ್ರವಲ್ಲ; ಕಡಿವಾಣ

ಸಾಮಾಜಿಕ ಜಾಲತಾಣಗಳಲ್ಲಿ ನಮಗಿರುವ ಅಪರಿಮಿತ ಸ್ವಾತಂತ್ರ್ಯದ ಬಗ್ಗೆ ವಸ್ತುನಿಷ್ಠ ವಿಮರ್ಶೆ ಆಗಬೇಕಾಗಿದೆ.
Last Updated 3 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಮಾಹಿತಿ ತಂತ್ರಜ್ಞಾನ ಅಧಿನಿಯಮ, 2000’ದ 66ಎ ಪರಿಚ್ಛೇದದ ವಿರುದ್ಧ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರ ಈ ಕುರಿತು ಹೋರಾಟ ನಡೆಸಿದ ಯುವತಿ ಶ್ರೇಯಾ ಸಿಂಘಾಲ್ ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು ಗಮನಾರ್ಹವಾಗಿವೆ: ‘ಈ ಕಾಯ್ದೆ ಹೀಗೆಯೇ ಮುಂದುವರಿದಿದ್ದರೆ ದೇಶದ ಜನಸಂಖ್ಯೆಯ ಅರ್ಧದಷ್ಟು ಮಂದಿ ಉಳಿದರ್ಧ ಜನರನ್ನು ಜೈಲಿಗೆ ಅಟ್ಟಬಹುದಾಗಿತ್ತು’.  ಇತ್ತೀಚಿನ ಕೆಲವು ಘಟನೆಗಳನ್ನು ವಿಶ್ಲೇಷಿಸುವುದಾದರೆ ಶ್ರೇಯಾ ಮಾತನ್ನು ಉತ್ಪ್ರೇಕ್ಷೆಯದೆಂದು ತಳ್ಳಿಹಾಕುವ ಹಾಗಿಲ್ಲ.

ಸುಪ್ರೀಂಕೋರ್ಟ್‌ ತೀರ್ಪನ್ನು ಒಪ್ಪಿದಂತೆ ತೋರಿಸಿಕೊಂಡ ಕೇಂದ್ರದ ಮಾಜಿ ಸಚಿವ  ಪಿ.ಚಿದಂಬರಂ ಅಧಿಕಾರದಲ್ಲಿದ್ದಾಗ ಸ್ವತಃ ಈ ಕಾಯ್ದೆಯನ್ನು ಬೆಂಬಲಿಸಿದ್ದರು. ಜತೆಗೆ ಅವರ ಮಗ ಕಾರ್ತಿ ಕಾಯ್ದೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದರು. ಅವರನ್ನು ಟೀಕಿಸುವ  ಟ್ವೀಟ್ ಒಂದನ್ನು ಕಳುಹಿಸಿ ರಾಮ್ ಶ್ರೀನಿವಾಸನ್ ಎಂಬುವವರು ಬಂಧನಕ್ಕೆ ಒಳಗಾಗಿದ್ದರು. ಅಸಲಿಗೆ ಶ್ರೀನಿವಾಸನ್ ಮಾಡಿದ್ದ ತಪ್ಪೆಂದರೆ, ಟ್ವಿಟರ್ ಮೂಲಕ ‘ಚಿದಂಬರಂ ಅವರ ಮಗ ರಾಬರ್ಟ್ ವಾಧ್ರ ಅವರಿಗಿಂತಲೂ ಹೆಚ್ಚು ಆಸ್ತಿ ಮಾಡಿಕೊಂಡಿದ್ದಾರೆ’ ಎಂಬ ಸಂದೇಶವನ್ನು ರವಾನಿಸಿದ್ದರು.  ಇದಕ್ಕೆ ಪ್ರತಿಯಾಗಿ ಕಾರ್ತಿ ‘ಮುಕ್ತ ಅಭಿವ್ಯಕ್ತಿಯು ಸೂಕ್ತ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಗೌರವಕ್ಕೆ ಕುಂದು ತರುವಂಥ/ಮಾನಹಾನಿ ಮಾಡಬಲ್ಲ ಟ್ವೀಟ್‌ಗಳ ವಿರುದ್ಧ ಸಾಂವಿಧಾನಿಕ/ ನ್ಯಾಯಾಂಗ ಪರಿಹಾರ ಪಡೆಯುವ ಹಕ್ಕುಗಳನ್ನು ನಾನು ಪಡೆದಿದ್ದೇನೆ’ ಎಂದು ಮರುಟ್ವೀಟ್ ಮಾಡಿದ್ದರು. 

ಕಾರ್ತಿ ಅವರ ಹಕ್ಕುಗಳನ್ನು ಗೌರವಿಸುತ್ತಲೇ ಪ್ರಶ್ನೆಯೊಂದು ಇಲ್ಲಿ ಉದ್ಭವಿಸುತ್ತದೆ. ಸದ್ಯಕ್ಕೆ ಲಭ್ಯವಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಟ್ವೀಟ್ ಪ್ರಸಾರ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದಲ್ಲವೆ?

ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯವರು ನಿಧನರಾದ ಸಂದರ್ಭದಲ್ಲಿ ಇಡೀ ಮಹಾರಾಷ್ಟ್ರಕ್ಕೇ ಬಂದ್‌ ಕರೆ ನೀಡಿದ್ದನ್ನು ಶಹೀನ್ ದಡಾ ಎಂಬ ಯುವತಿ ‘ಫೇಸ್‌ಬುಕ್’ ಪುಟದಲ್ಲಿ ಲೇವಡಿ ಮಾಡಿದ್ದಳು. ಆಕೆಯ ಸ್ನೇಹಿತೆ ರೇಣು ಶ್ರೀನಿವಾಸನ್ ‘ಲೈಕ್’ ಗುಂಡಿ ಒತ್ತಿ ಆ ಪುಟವನ್ನು ಮೆಚ್ಚಿದ್ದಳು. ಶಿವಸೈನಿಕರ ದೂರಿನ ಮೇರೆಗೆ ಚುರುಕಾದ ಮಹಾರಾಷ್ಟ್ರ ಪೊಲೀಸರು ಇವರಿಬ್ಬರನ್ನೂ ಬಂಧಿಸಿ 10 ದಿನ ಜೈಲಿನಲ್ಲಿಟ್ಟಿದ್ದರು. ಕಾರಣ ಏನೇ ಇರಲಿ, ಹಠಾತ್ ಬಂದ್ ಕರೆಗಳಿಂದ ತೊಂದರೆಗೊಳಗಾಗುವವರು ಅಮಾಯಕರೇ. ಬಂದ್ ಕರೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವ ನ್ಯಾಯಾಲಯದ ತೀರ್ಪುಗಳು ಸಾಕಷ್ಟಿವೆ. ಆದರೂ ಸಮೂಹ ಸನ್ನಿಗೊಳಗಾಗುವ ಸಂಘಟನೆಗಳ ಕಾರ್ಯಕರ್ತರು ಬಂದ್‌ಗಳಿಗೆ ಕರೆ ನೀಡುತ್ತಲೇ ಇರುತ್ತಾರೆ. ಈ ಬಗ್ಗೆ ಜನರ ಆಕ್ರೋಶ ಮಾಧ್ಯಮಗಳ ಮೂಲಕ ಹರಿದಾಡುತ್ತಲೇ ಇರುತ್ತದೆ.

ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್, ಬಿ.ವಿ.ರಾಮಮೂರ್ತಿ, ಅಬೂ ಅಬ್ರಹಾಂ ಅಂತಹವರು ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದ್ದರು.  ನಿರ್ಭೀತಿಯಿಂದ ವಾಸ್ತವವನ್ನು ವ್ಯಂಗ್ಯ ಮಾಡಿ ತಮ್ಮ ಅಸಹನೆ ತೋಡಿಕೊಂಡಿದ್ದರು. ಆದರೆ ಇಂಥ ಅದೃಷ್ಟ ‘ಫೇಸ್‌ಬುಕ್’ ಪುಟಗಳಲ್ಲಿ ತಮ್ಮ ಸಂಕಟ ತೋಡಿಕೊಂಡಿದ್ದ ಮುಂಬೈನ ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ ಅವರಿಗಿರಲಿಲ್ಲ.  ಭ್ರಷ್ಟಾಚಾರ ವ್ಯವಸ್ಥೆಯ ವಿರುದ್ಧ ಬರೆದ ಕಾರ್ಟೂನುಗಳು ಅವರನ್ನು ಜೈಲಿಗೆ ದೂಡಿದ್ದವು.

‘ನಿಷಿದ್ಧ ಕೋರಿಕೆ’ಯಲ್ಲಿ ಭಾರತವೇ ಮುಂದು!

ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಅನ್ನು ಬಳಸುವವರಲ್ಲಿ 11 ಕೋಟಿಗಿಂತಲೂ ಹೆಚ್ಚು ಮಂದಿ ಭಾರತದಲ್ಲಿದ್ದಾರೆ. ‘ಟ್ವಿಟರ್’ ಬಳಸುವವರ ಸಂಖ್ಯೆ 2 ಕೋಟಿಗೆ ಹತ್ತಿರವಿದೆ. ಈ ವರ್ಷದ ಕೊನೆಯ ಹೊತ್ತಿಗೆ ಈ ಬಳಕೆದಾರರ ಸಂಖ್ಯೆ ಪ್ರತಿಶತ 25ರಷ್ಟು ಏರಿಕೆಯಾಗಬಹುದೆಂಬ ಅಂದಾಜಿದೆ. ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆಯ ಭಾರತದ ಈ ಪ್ರಗತಿಯನ್ನು ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ.  ಆದರೆ ‘ಫೇಸ್‌ಬುಕ್’ನ ನಿರ್ವಾಹಕರು 15  ದಿನಗಳ ಹಿಂದಷ್ಟೇ ಪ್ರಕಟಿಸಿರುವ ಅಂಕಿಅಂಶವೊಂದು ಮುಕ್ತ ಅಭಿವ್ಯಕ್ತಿ ಪ್ರತಿಪಾದಕರನ್ನು ದಂಗುಬಡಿಸಿದೆ. ಕಳೆದ ವರ್ಷದ ಕೊನೆಯ ಆರು ತಿಂಗಳುಗಳಲ್ಲಿ ಭಾರತ ಸರ್ಕಾರ ‘ಫೇಸ್‌ಬುಕ್’ ಸಂಸ್ಥೆಗೆ ಕಳುಹಿಸಿರುವ ‘ನಿಷಿದ್ಧ ಕೋರಿಕೆಗಳ’ ಸಂಖ್ಯೆ 5832! 

ಸ್ಥಳೀಯ ಕಾನೂನುಗಳಿಗೆ ಭಂಗ ತರುವ ಮಾಹಿತಿ/ಪುಟಗಳ ನಿಷೇಧಕ್ಕೆಂದು ‘ಫೇಸ್‌ಬುಕ್’ ಅನ್ನು ವಿವಿಧ ದೇಶಗಳ ಆಳುವ ಸರ್ಕಾರಗಳು ಕೋರುವುದು ಸಹಜ.  ಆದರೆ ಇಂಥ ಕೋರಿಕೆಗಳ ಸಂಖ್ಯೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ದೇಶ ಭಾರತ.  ಇದೇ ಅವಧಿಯಲ್ಲಿ ಸಂಖ್ಯೆಯ ದೃಷ್ಟಿಯಿಂದ ಭಾರತಕ್ಕೆ ಸಮೀಪವಿರುವ ದೇಶ ರಾಜಕೀಯ ತುಮುಲಗಳಿಂದ ಕೂಡಿದ ಟರ್ಕಿ (3624).  ಅದರ ನಂತರದ್ದು ಕೇವಲ 60 ಕೋರಿಕೆಗಳ ಜರ್ಮನಿ ಹಾಗೂ 55 ಕೋರಿಕೆಗಳ ರಷ್ಯ.

ಮಹಾರಾಷ್ಟ್ರದ ಎನ್‌ಸಿಪಿ- ಕಾಂಗ್ರೆಸ್ ಒಕ್ಕೂಟ ಮಾತ್ರ ಇಂಥ ಹುನ್ನಾರ ನಡೆಸಿತೆಂದು ಆಪಾದಿಸಬೇಕಿಲ್ಲ.  ಪಶ್ಚಿಮ ಬಂಗಾಳದ ‘ದೀದಿ’ ಮಮತಾ ಬ್ಯಾನರ್ಜಿ ಅವರನ್ನು ಲೇವಡಿ ಮಾಡುವ ವ್ಯಂಗ್ಯಚಿತ್ರಗಳನ್ನು ಮತ್ತೊಬ್ಬರಿಗೆ ರವಾನಿಸಿದಆಪಾದನೆ ಮೇಲೆ ಜಾಧವಪುರ ವಿ.ವಿ ಪ್ರಾಧ್ಯಾಪಕ ಮೊಹಾಪಾತ್ರ ಮತ್ತು ಅವರ ನೆರೆಮನೆಯವರನ್ನು ಸೆರೆಮನೆಗೆ ದೂಡಲಾಯಿತು.  ತಮ್ಮೆಲ್ಲ ಸಮಯ-ಶಕ್ತಿ-ಹಣ  ವ್ಯಯಿಸಿ 3 ವರ್ಷ  ಅವರು ನ್ಯಾಯಾಲಯದಲ್ಲಿ ಹೋರಾಡಬೇಕಾಯಿತು.

ರಾಜಕಾರಣಿಗಳನ್ನು ಮಾತ್ರ ಚಾಪೆಯಡಿ ನುಸುಳುವವರೆಂದು ನಾವು ಆಪಾದಿಸುತ್ತೇವಲ್ಲವೆ? ಕಾರ್ಮಿಕ ಸಂಘಗಳ ಪದಾಧಿಕಾರಿಗಳು ರಂಗೋಲಿಯಡಿ ನುಸುಳುವ ಚಾಕಚಕ್ಯತೆಯನ್ನು ಪ್ರದರ್ಶಿಸಬಲ್ಲರು ಎಂಬುದಕ್ಕೆ ‘ಏರ್ ಇಂಡಿಯಾ’ ವಿಮಾನಯಾನ ಸಂಸ್ಥೆಯ ನಿದರ್ಶನವೊಂದು ಇಲ್ಲಿದೆ. ಕೆ.ವಿ.ರಾವ್ ಮತ್ತು ಮಯಾಂಕ್ ಶರ್ಮ ಎಂಬ ‘ಏರ್ ಇಂಡಿಯಾ’ ಉದ್ಯೋಗಿಗಳನ್ನು ರಾತ್ರೋರಾತ್ರಿ ಪೊಲೀಸರು ಏಕಾಏಕಿ ಬಂಧಿಸಿದರು. ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಜಯ ಸಿಕ್ಕರೂ ‘ಏರ್ ಇಂಡಿಯಾ’ ಅವರನ್ನು ಕೆಲಸದಿಂದ ತೆಗೆದು ಹಾಕಿತು.  ಕಾರ್ಮಿಕ ಸಂಘಟನೆಯ ನೇತಾರನೊಬ್ಬನ ವೈಯಕ್ತಿಕ ದ್ವೇಷಕ್ಕೆ ಬಲಿಯಾದವರ ಕತೆಯಿದು.

ಇ ಮೇಲ್ ಹಾಗೂ ಎಸ್ಸೆಮ್ಮೆಸ್‌ಗಳಿಗಿಂತಲೂ ಇಂದು ಹೆಚ್ಚು ಪ್ರಬಲವಾಗಿರುವುದು ಸಾಮಾಜಿಕ ಜಾಲತಾಣಗಳು. ಪ್ರಸಾರ  ಮಾಡಿದ ಮರುಕ್ಷಣದಲ್ಲಿಯೇ ಒಬ್ಬರಿಂದೊಬ್ಬರಿಗೆ ರವಾನೆ, ಮರುರವಾನೆಯಾಗುವುದರ ಜತೆಗೆ, ಅವರೆಲ್ಲರ ಟೀಕೆ-ಟಿಪ್ಪಣಿಗಳು ಸೇರ್ಪಡೆಯಾಗುತ್ತಾ ಹೋಗುತ್ತವೆ.  ಎಷ್ಟೋ ಬಾರಿ ಮೂಲ ಆಶಯದ ತದ್ವಿರುದ್ಧವಾದ ಚರ್ಚೆಗಳ ಸರಪಳಿ ಜತೆಗೂಡಿರುತ್ತದೆ. 

ಉದಾಹರಣೆಗೆ ಯಾರೋ ಪತ್ರಿಕೆಯೊಂದಕ್ಕೆ ಬರೆದಿದ್ದ ಲೇಖನದ ಚಿತ್ರವನ್ನು ಮತ್ಯಾರೋ ಇನ್ನೊಬ್ಬರ ‘ಫೇಸ್‌ಬುಕ್’ ಸ್ಟೇಟಸ್‌ಗೆ ಲಗತ್ತಿಸಬಹುದು. ಮಗದೊಬ್ಬರು ಆ ಪತ್ರಿಕಾ ಲೇಖನ ಅಥವಾ ಅದರ ಲೇಖಕನ ಮಾನಿಹಾನಿಯಾಗುವಂಥ ಟೀಕೆಯನ್ನು ಅದಕ್ಕೆ ಅಂಟಿಸಬಹುದು. ಸರಪಳಿಯ ಎಲ್ಲ ಚಟುವಟಿಕೆಗಳನ್ನೂ ಗಮನಿಸದೆ ಅದು ನೋಂದಾಯಿತ ಪುಟದಲ್ಲಿ ಹಾಗೆಯೇ ಉಳಿದುಕೊಂಡಿದ್ದರೆ, 66ಎ ಪರಿಚ್ಛೇದದ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಮೂವರಿಗೆ 40 ದಿನಗಳ ಸಜೆಯಾಗಿದ್ದು ಇಂಥದ್ದೊಂದು ಅಪರೂಪದ ಘಟನೆಯಿಂದ. ಯಾರೋ ಕಿಡಿಗೇಡಿಗಳು ಧರ್ಮವೊಂದನ್ನು ಅವಹೇಳನ ಮಾಡುವಂಥ ವಿಡಿಯೊ ಒಂದನ್ನು ಈ ಅಮಾಯಕರ ಫೇಸ್‌ಬುಕ್ ಪುಟಕ್ಕೆ ತಗುಲಿ (ಟ್ಯಾಗ್) ಹಾಕಿದ್ದರು.  ಅವರ ಪುಟಗಳನ್ನು ವೀಕ್ಷಿಸುವವರಿಗೆಲ್ಲರಿಗೂ ಈ ವಿಡಿಯೊ ಲಭ್ಯವಾಗುತ್ತಿತ್ತು.  ಆ ವಿಡಿಯೊದ ಮೂಲ ಪಾಕಿಸ್ತಾನ ಎಂಬುದು  ನಂತರ ಗೊತ್ತಾಯಿತು. ಆ ಮೂವರ ಯಾವುದೋ  ಸಂಪರ್ಕ ಈ ಫೇಸ್‌ಬುಕ್ ಸಂಬಂಧವನ್ನು ಬೆಸೆದಿತ್ತು.  ತೊಂದರೆಗೀಡಾದ ಮೂವರಲ್ಲಿ ಶರ್ಮ ಮತ್ತು ಲಾಲ್ ಎಂಬುವವರು ಸರ್ಕಾರಿ ಶಾಲಾ ಶಿಕ್ಷಕರು. ಅವರು ಸದ್ಯಕ್ಕೆ ಸೇವೆಯಿಂದ ಅಮಾನತುಗೊಂಡಿದ್ದಾರೆ.

66ಎ ಪರಿಚ್ಛೇದದ ಸಂಪೂರ್ಣ (ದುರ್) ಉಪಯೋಗಮಾಡಿಕೊಂಡ ಶ್ರೇಯಸ್ಸು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಅವರ ಕಟ್ಟಾ ಬೆಂಬಲಿಗ ಅಜಂ ಖಾನ್ ಅವರ ಒಕ್ಕೂಟಕ್ಕೆ ಸೇರಬೇಕು. ಐ.ಎ.ಎಸ್. ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಈ ಮಹೋದಯರು ನಡೆಸಿಕೊಂಡ ರೀತಿಯ ಬಗ್ಗೆ ಕನ್ವಲ್ ಭಾರ್ತಿ ಎಂಬ ಬರಹಗಾರರು ‘ಫೇಸ್‌ಬುಕ್’ ಪುಟದಲ್ಲಿ ಕಟಕಿಯಾಡಿದ್ದರು. ಸಮಾಜವಾದಿ ಪಕ್ಷದ ಗಣ್ಯರ ಗೌರವಕ್ಕೆ ಕುಂದು ತಂದಿದ್ದಾರೆಂಬ ಆಪಾದನೆ ಮೇಲೆ ಭಾರ್ತಿಯವರನ್ನು ಬಂಧಿಸಲಾಯಿತು. ಅಜಂ ಖಾನ್‌ರನ್ನು ಅವಹೇಳನ ಮಾಡುವ ಬರಹ ಹಾಕಿದ್ದನೆಂದು 11ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಜೈಲಿಗೆ ತಳ್ಳಲಾಯಿತು.

ಇತ್ತ ಕೇರಳದಲ್ಲಿ ಸಿಪಿಎಂ ಕಾರ್ಯಕರ್ತ ಕುಮಾರ್ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಚಿತ್ರ ಹಾಗೂ ಟೀಕೆಗಳನ್ನು ಪ್ರಕಟಿಸಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿದ್ದ. ಪೊಲೀಸರು ಆರೋಪಿಸಿದಂತೆ ಆತನ ಟೀಕೆಯೊಂದು ಮತೀಯ ಗಲಭೆಯನ್ನು ಸೃಷ್ಟಿಸಬಲ್ಲಷ್ಟು ಕಟುವಾಗಿತ್ತು.  ಹಾಗೆಯೇ ಗೋವಾದಲ್ಲಿ ‘ಬಿಜೆಪಿಗೆ  ಮತ ನೀಡಿದರೆ ಗುಜರಾತಿನಲ್ಲಾದಂತೆ ಗೋವಾದಲ್ಲೂ ಭೀಕರ ದುರಂತ ನಡೆಯಬಹುದು’ ಎಂದು ಫೇಸ್‌ಬುಕ್‌ನಲ್ಲಿ ಎಚ್ಚರಿಸಿದ್ದ ದೇವು ಚೋಡಂಕರ್ ಬಂಧನಕ್ಕೆ ಒಳಗಾಗಬೇಕಾಯಿತು. ‘ಮೋದಿ ಚುನಾಯಿತರಾದರೆ ಕ್ರಿಶ್ಚಿಯನ್ನರು ತಮ್ಮ ಪ್ರತ್ಯೇಕತೆಯನ್ನು ಕಳೆದುಕೊಳ್ಳಬೇಕಾದೀತು’ ಎಂಬ ಪ್ರಕಟಣೆಯೂ ಆತನ ವಿರುದ್ಧ ಸಾಕ್ಷ್ಯ ಹೇಳಿತ್ತು.

ತೀರಾ ಇತ್ತೀಚೆಗೆ ಕರ್ನಾಟದಲ್ಲೂ ವಿ.ಆರ್.ಭಟ್ ಎಂಬ ಬರಹಗಾರರೊಬ್ಬರು ತಮ್ಮ ‘ಫೇಸ್‌ಬುಕ್’ ಪುಟದಲ್ಲಿ ಕಟುಟೀಕೆ ಮಾಡಿದ ಮಹಿಳೆಯೊಬ್ಬರ ಬಗ್ಗೆ ಅವಹೇಳನಕಾರಿ ಪ್ರಕಟಣೆ ನೀಡಿ ಬಂಧನಕ್ಕೊಳಗಾಗಿದ್ದರು.  ಆ ಬಂಧನ ಪ್ರಕ್ರಿಯೆಗೆ ನೆರವು ನೀಡಿದ ಮಾಧ್ಯಮ ಮಿತ್ರರೊಬ್ಬರನ್ನು ‘ಫೇಸ್‌ಬುಕ್’ ಸಮೂಹವೊಂದರಲ್ಲಿ ಮತ್ತೊಂದು ಕಾರಣಕ್ಕಾಗಿ ವೈಯಕ್ತಿಕವಾಗಿ ಹೀಯಾಳಿಸಲಾಗಿತ್ತು.  ಪುಟ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಆ ಮಾಧ್ಯಮ ಮಿತ್ರರು ಕೇಸು ಜಡಿಯುವ ಬೆದರಿಕೆ ಹಾಕಿದ್ದರು. ಪುಟ ನಿರ್ವಾಹಕರು ತಮಗೆ ತಿಳಿಯದೆಯೇ ಆದ ಅಚಾತುರ್ಯವಿದು ಎಂದು ಕ್ಷಮೆಯನ್ನೂ ಕೋರಿದ್ದರು.

ನಮ್ಮೆಲ್ಲರ ಅಂಗೈಗಳಲ್ಲಿ ಅಡಕವಾಗುವಂಥ ಗ್ಯಾಜೆಟ್‌ಗಳ ಮೂಲಕ ಕ್ಷಣಾರ್ಧದಲ್ಲಿ ಯಾವುದೇ ಅನಿಸಿಕೆಗಳನ್ನು ಹಂಚಿಕೊಳ್ಳುವ,  ಎಂಥದ್ದೇ ಟೀಕೆಯನ್ನು, ಆಪಾದನೆಯನ್ನು ಅಥವಾ ಹೀಯಾಳಿಕೆಯನ್ನು ವ್ಯಕ್ತಪಡಿಸುವ ಅಪರಿಮಿತ ಸ್ವಾತಂತ್ರ್ಯ ನಮ್ಮದಾಗಿದೆ. ಇಂಥ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಸದುಪಯೋಗವಾಗುತ್ತಿದೆ ಎಂಬುದರ ಬಗ್ಗೆ ವಸ್ತುನಿಷ್ಠ ವಿಮರ್ಶೆ ಮಾಡುವಂಥ ಕಾಲ ಸನ್ನಿಹಿತವಾಗಿದೆ. ಪರಿಚ್ಛೇದ 66ಎಯಲ್ಲಿ  ನಮೂದಾಗಿದ್ದ ಸೆರೆಮನೆ ಶಿಕ್ಷೆಯಂಥ ಬ್ರಹ್ಮಾಸ್ತ್ರ ಅಲ್ಲದಿದ್ದರೂ ಕಠಿಣ ಕ್ರಮದ ಕಡಿವಾಣವಂತೂ ಬೇಕಾಗಿದೆ.
(ಲೇಖಕರು ವಿಜ್ಞಾನ ಬರಹಗಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT