ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ತಕೋಟಿಯವರ ಹಾಡುಗಾರಿಕೆ

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

1963ರ ಸುಮಾರಿಗೆ ಬೆಳಗಾವಿಯಲ್ಲಿದ್ದಾಗ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರನ್ನು ಭೇಟಿಯಾಗುವುದಕ್ಕೆ ಧಾರವಾಡಕ್ಕೆ ಹೋಗಿದ್ದೆ. ಸ್ನೇಹಿತರು ಸಿಕ್ಕರೆ ಓದಬಹುದೆಂದು ‘ಹೇಳತೇನ ಕೇಳ’ ಬರೆದ ನೋಟ್‌ಬುಕ್ಕನ್ನೂ ಜೊತೆಗೆ ಒಯ್ದಿದ್ದೆ. ಅಲ್ಲಿಯತನಕ ನಾನು ಕೀರ್ತಿನಾಥ ಕುರ್ತಕೋಟಿಯವರನ್ನು ನೋಡಿರಲಿಲ್ಲ. ಇದ್ದರೆ ನೋಡೋಣವೆಂದು ‘ಅಟ್ಟ’ಕ್ಕೆ ಹೋದೆ. ಕುರ್ತಕೋಟಿಯವರು ಕುಂತಿದ್ದರು. ಹಳೇ ಪರಿಚಿತ ರಂತೆ ಮುಖ ಅರಳಿಸಿ ಬರಮಾಡಿಕೊಂಡುದನ್ನು ನೋಡಿ ಬೆರಗಾದೆ. ಅವರಾಗಲೇ ‘ಸಾಕ್ಷಿ’ಯಲ್ಲಿ ಬಂದ ನನ್ನ ಪದಗಳನ್ನು ಓದಿದ್ದರಾದ್ದರಿಂದ ಮಾತುಕತೆ ಸುಲಭವಾಯ್ತು. ಜಿ.ಬಿ. ಪ್ರಕಾಶಕರ ಟೇಬಲ್‌ ಪಕ್ಕದ ಬಾಕಿನ ಮೇಲೆ ಇಡಿಯಾಗಿ ಒಬ್ಬರೇ ಆಕ್ರಮಿಸಿ ಕೊಂಡು ಸಿಟ್ಟು ಮಾಡಿದ ಬೆಟ್ಟದ ಹಾಗೆ ಕುಂತಿದ್ದರು. ಕುರ್ತಕೋಟಿಯವರು ಪರಿಚಯಿಸಿದರೂ ಅವರ ದೊಡ್ಡ ಮುಖದ ತುಂಬ ಇದ್ದ ಮುಳ್ಳಿನಂಥ ಗಡ್ಡದಲ್ಲಿ ಒಂದು ಬಿಳಿಗಡ್ಡವೂ ಅಲುಗಲಿಲ್ಲ.

ಕುರ್ತಕೋಟಿಯವರ ಮುಂದೆ ‘ಹೇಳತೇನ ಕೇಳ’ ಓದಬೇಕೆಂದು ಬಹಳ ಆಸೆಯಾಗುತ್ತಿತ್ತು. ಆದರೆ ಭಯ. ಯೂನಿವರ್ಸಿಟಿಯ ಅಧ್ಯಾಪಕರ ನೆನಪೂ ಅಯಿತಾದ್ದರಿಂದ ‘ಹೇಳತೇನ ಕೇಳ’ ಇದ್ದ ಕೈಚೀಲವನ್ನು ಅಲ್ಲಿಯೇ ಬಿಟ್ಟು ಹೋದೆ. ಸಂಜೆ ಸುಮಾರಿಗೆ ತಿರುಗಿ ಬಂದೆ. ಅಷ್ಟರಲ್ಲಿ ನನ್ನ ಜೀವನದ ಒಂದು ದೊಡ್ಡ ಘಟನೆ ನಡೆದುಹೋಗಿತ್ತು. ಕುರ್ತಕೋಟಿಯವರು ‘ಹೇಳತೇನ ಕೇಳ’ ಓದಿದ್ದರು!
ಸಾಲದ್ದಕ್ಕೆ ‘ಹೇಳತೇನ ಕೇಳ’ವನ್ನು ಜೀಬಿಯವರೆದುರು ಹಾಡುತ್ತಿದ್ದರು! ಕುರ್ತಕೋಟಿಯವರ ಹಾಡುಗಾರಿಕೆಯನ್ನು ಎಷ್ಟು ಜನ ಪುಣ್ಯಾತ್ಮರು ಕೇಳಿದ್ದಾರೊ ನನಗೆ ತಿಳಿಯದು. ಇಷ್ಟಂತೂ ನಿಜ, ಅವರ ಸಂಗೀತ ಕಛೇರಿ ಒಂದು ಭಯಂಕರ ಅನುಭವ.

ಅನುಭವಿಸಿದವರೇ ಬಲ್ಲರು ಆ ಸವಿಯ! ನಾನು ಬರೆದದ್ದು ದ್ರಾವಿಡ ಛಂದಸ್ಸಿನ ಅಂಶಗಣದಲ್ಲಿ, ಅವರೋ ಹಟಮಾರಿ ವಿಮರ್ಶಕ, ಅಂಶಗಣವನ್ನು ಮಾತ್ರಾಗಣಕ್ಕೆ ಬಗ್ಗಿಸಿ, ಬಗ್ಗದಿದ್ದಲ್ಲಿ ಮುರಿದು, ಮುರಿದದ್ದನ್ನು ಜೋಡಿಸಿ, ಎಳೆಯಬಾರದ್ದನ್ನು ಎಳೆದೆಳೆದು ಹಾಡುತ್ತಿದ್ದರು! ಆಶ್ಚರ್ಯವೆಂದರೆ ಜಿ.ಬಿ. ಕಣ್ಣು ಮುಚ್ಚಿ ತನ್ಮಯರಾಗಿ ಕೇಳುತ್ತಿದ್ದರು! ಅಥವಾ ನಿದ್ದೆ ಮಾಡುತ್ತಿದ್ದರು. ನನಗೆ ತಡೆಯಲಾಗಲಿಲ್ಲ. ‘ಇದೂ ಹಿಂಗ ಹೇಳೂದಲ್ಲರೀ’ ಅಂದೆ. ತಕ್ಷಣ ನಿಲ್ಲಿಸಿ ನನ್ನನ್ನು ದುರುಗುಟ್ಟಿ ನೋಡಿದರು. ಜಾತಿವಂತ ಸಂಗೀತಗಾರನಿಗಾದಂತೆ ರಸಭಂಗವಾಗಿ ಕೋಪದಲ್ಲಿ ಕುದಿಯುತ್ತ ‘ಮತ್ತ ಹೆಂಗ ಹೇಳಬೇಕೊ? ಅಂದ ತೋರ್ಸು’ ಅಂದರು. ‘ಹೇಳತೇನ ಕೇಳ’ ಹಾಡಿದೆ. ಅಂದಾಜು ಒಂದು ತಾಸು ಹಾಡಿ ನಿಲ್ಲಿಸಿದಾಗ ಅಟ್ಟದ ತುಂಬ ಜನ ಸೇರಿದ್ದರು. ಕುರ್ತಕೋಟಿ ಅವರ ಕಣ್ಣು ಫಳಫಳ ಹೊಳೆಯುತ್ತಿದ್ದವು. ಬೆಟ್ಟ ಮಿದುವಾಗಿ ಜೀಬಿಯಾಗಿದ್ದರು. ಆ ದಿನ ಜಿ.ಬಿ.ಯವರ ಒಡ್ಡೋಲಗವನ್ನು ಗೆದ್ದುಬಿಟ್ಟಿದ್ದೆ. ಜಿ.ಬಿ. ಎಷ್ಟು ಗೆಲುವಾಗಿದ್ದರೆಂದರೆ – ಅಲ್ಲಿದ್ದವರಿಗೆಲ್ಲ ಚಹ ತರಿಸಿಕೊಟ್ಟರು. ಮುಂದೆ ಸದರಿ ‘ಹೇಳತೇನ ಕೇಳ’ ಕವಿತೆಯೇ ಋಷ್ಯಶೃಂಗವಾಗಿ, ಹುಲಿಯ ನೆರಳಾಗಿ ಬೆಳೆಯಿತು. ‘ಹೇಳತೇನ ಕೇಳ’ದ ಹುಲಿ ಹದ್ದಾಗಿ, ತಾಯಿ ವಿಶ್ವದ ತಾಯಾಗಿ ನನ್ನ ಅನೇಕ ಕೃತಿಗಳಿಗೆ ತಾಯಾದಳು. ಈ ಎಲ್ಲ ಕೃತಿಗಳ ಜೊತೆಗೆ ಕುರ್ತಕೋಟಿ ಅವರ ಕರುಳ ಸಂಬಂಧವಿತ್ತು.

(ಅಂಕಿತ ಪುಸ್ತಕ ಪ್ರಕಟಿಸಿರುವ ಚಂದ್ರಶೇಖರ ಕಂಬಾರರ ‘ನಾದಗಳು ನುಡಿಯಾಗಲೇ’ ಕೃತಿಯ ‘ಲೇಖಕರ ಮಾತು’ಗಳಿಂದ ಆಯ್ದ ಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT