ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕುವೆಂಪು ಸಾಹಿತ್ಯದ ಪರಿಣಾಮಗಳ ಅಧ್ಯಯನವಾಗಲಿ'

`ಕುವೆಂಪು ಓದಿನ ಇಂದಿನ ಅಗತ್ಯಗಳು' ಸಂವಾದದಲ್ಲಿ ಡಾ.ಕೆ.ವೈ.ಎನ್ ಪ್ರತಿಪಾದನೆ
Last Updated 24 ಆಗಸ್ಟ್ 2013, 7:03 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ಈಗ ರೂಪಾಂತರಗೊಂಡಿದ್ದು, ಅವರೊಬ್ಬ ಲೇಖಕ, ಬರಹಗಾರ, ವ್ಯಕ್ತಿಯಾಗಿ ಉಳಿದಿಲ್ಲ. ಕುವೆಂಪು ಎಂಬುದು ಒಂದು ಆಲೋಚನೆ, ಲೋಕದೃಷ್ಟಿಯಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯದ ಪರಿಣಾಮಗಳ ಅಧ್ಯಯನಗಳಾಗಬೇಕು ಎಂದು ಚಿಂತಕ ಡಾ.ಕೆ.ವೈ.ನಾರಾಯಣಸ್ವಾಮಿ ಪ್ರತಿಪಾದಿಸಿದರು.

ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕಾಲೇಜಿನ ಭಾಷಾಶಾಸ್ತ್ರ ವಿಭಾಗ ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ನಿರಂತರ ಉಪನ್ಯಾಸ ಮಾಲಿಕೆ ಮತ್ತು ಕುವೆಂಪು ಓದು -ವಿಚಾರ ಸಂಕಿರಣದಲ್ಲಿ `ಕುವೆಂಪು ಓದಿನ ಇಂದಿನ ಅಗತ್ಯಗಳು' ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ಸಾಹಿತ್ಯವನ್ನು ಈಗ ಹೊಸ, ಹೊಸ ಬಗೆಯಲ್ಲಿ ಓದುವುದರಿಂದ ಕುವೆಂಪು ಅವರನ್ನು ಇನ್ನಷ್ಟು ಸಂಕುಚಿತಗೊಳಿಸಿದ್ದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಕುವೆಂಪು 20ನೇ ಶತಮಾನದ ಸಾಂಸ್ಕೃತಿಕ ವಿದ್ಯಮಾನ; ಅವರ ಸಾಹಿತ್ಯ, ಸಾಮಾಜಿಕ ನ್ಯಾಯ ಕಲ್ಪಿಸಲು ಸಮಾಜವನ್ನು ಸಿದ್ಧತೆಗೊಳಿಸಿದ ರೀತಿ, ಮತ-ಮೌಢ್ಯ, ಕ್ರೌರ್ಯಗಳನ್ನು ಅರ್ಥೈಸಲು ನೆರವಾದ ಬಗೆ, ಮತ್ತಿತರ ಪರಿಣಾಮಗಳ ಕಡೆಗೆ ನಮ್ಮ ಮನಸ್ಸುಗಳು ತಿರುಗಬೇಕು ಎಂದರು.

ಕುವೆಂಪು ಪರಿಣಾಮದಿಂದ ಕನ್ನಡ ವಿದ್ಯಮಾನ ಪಾರಾಗಲು ಸಾಧ್ಯವೇ ಇಲ್ಲ ಎಂದ ಅವರು, ಕುವೆಂಪು ಅಧ್ಯಯನ ದಿಕ್ಕು ಬದಲಾಗಬೇಕು ಎಂದು ಪ್ರತಿಪಾದಿಸಿದರು.

ಕುವೆಂಪು ಸಾಹಿತ್ಯ ಕುರಿತಂತೆ ವಿಮರ್ಶಕರು ಈ ಹಿಂದಿನಿಂದಲೂ ಆಯ್ಕೆ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅವರ ಸಾಹಿತ್ಯವನ್ನು ಬಿಡಿ, ಬಿಡಿಯಾಗಿ ಓದಿ, ಪರ ಮತ್ತು ವಿರೋಧವಾಗಿ ಹೇಳಲು ಮಾತ್ರ ಬಳಸಿಕೊಂಡಿದ್ದೂ ಆಯ್ಕೆ ರಾಜಕಾರಣದ ಒಂದು ಭಾಗ ಎಂದು ದೂರಿದರು.

ಸಂವಾದದ ಅಧ್ಯಕ್ಷತೆ ವಹಿಸಿದ್ದ ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕುವೆಂಪು ಪುರಾಣ ಭಂಜಕರಲ್ಲ; ಪುರಾಣ ಪುನರ್ ನಿರ್ಮಾಪಕರು ಎಂದರು.

ಕುವೆಂಪು ಪುರಾಣ ಭಂಜಕ ಎಂದು ಅಪಪ್ರಚಾರ ಮಾಡಲಾಯಿತು. ಆದರೆ, ಅವರು ಪುರಾಣ ಭಂಜಕರಾಗಿದ್ದರೆ `ಶ್ರೀರಾಮಾಯಣ ದರ್ಶನಂ' ಮಹಾಕಾವ್ಯವನ್ನು ಬರೆಯುತ್ತಿರಲಿಲ್ಲ. ಪುರಾಣಕ್ಕೆ ಆಘಾತವಾದಾಗ ಹಾಗೂ ಪುರಾಣದಲ್ಲಿರುವ ಪ್ರಕ್ಷೇಪ ಮತ್ತು ಕಸಗಳಿಂದ ಆದ ಅಪಾಯಗಳನ್ನು ಸರಿಪಡಿಸುವ ಕೆಲಸ ಮಾಡಿ, ಅದನ್ನು ಜೀವಪರವಾಗಿ ನಿರೂಪಿಸಿದರು. ಆ ಮೂಲಕ ಲೋಕದರ್ಶನ ಮಾಡಿಸಿದರು ಎಂದು ವಿಶ್ಲೇಷಿಸಿದರು.

ಸಂವಾದದಲ್ಲಿ ಪ್ರೊ.ಡಾಮಿನಿಕ್, ಡಾ.ಸಬಿತಾ ಬನ್ನಾಡಿ, ಬಿ.ಎಲ್.ರಾಜು, ಹೊನ್ನಾಳಿ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

`ಶಂಬೂಕನಿಗೆ ಜನಿವಾರ ತೊಡಿಸಿದ್ದು ಅತ್ಯಾಚಾರ'

ಕುವೆಂಪು ಅವರ `ಶೂದ್ರ ತಪಸ್ವಿ' ನಾಟಕದ ನಿರ್ದೇಶಕರು ಶಂಬೂಕ ಪಾತ್ರಧಾರಿಗೆ ಜನಿವಾರ ಹಾಕಿಸಿದ್ದು ಒಂದು ರೀತಿಯ ಅತ್ಯಾಚಾರ ಎಂದು ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸಂವಾದದಲ್ಲಿ ಸಭಿಕರೊಬ್ಬರು, `ಶೂದ್ರ ತಪಸ್ವಿ' ನಾಟಕ ಕೃತಿಯಲ್ಲಿ ಇಲ್ಲದ ಘಟನೆಯನ್ನು ನೀನಾಸಂ ತಿರುಗಾಟದ ನಾಟಕದ ಪ್ರದರ್ಶನದಲ್ಲಿ ಕಾಣಿಸಿದ್ದು ಸರಿಯೇ? ಎಂದು ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದೊಂದು ಪ್ರಕ್ಷೇಪ. ನಾಟಕಕೃತಿಯನ್ನು ರಂಗಕೃತಿಯಾಗಿ ಬಳಸುವಾಗ ನಿರ್ದೇಶಕನಿಗೆ ಸ್ವಾತಂತ್ರ್ಯ ಇರುತ್ತದೆ. ಆದರೆ, ನಾಟಕಕಾರನ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ಸಲ್ಲದು ಎಂದರು.

ಇದಕ್ಕೆ ಧ್ವನಿಗೂಡಿಸಿದ ಡಾ.ಕೆ.ವೈ.ನಾರಾಯಣಸ್ವಾಮಿ, ಸನಾತನ ಬೇರಿನಲ್ಲಿ ನಂಬಿಕೆ ಇಟ್ಟುಕೊಂಡವರಿಂದ ಈ ರೀತಿಯ ಕೆಲಸಗಳು ಆಗುತ್ತವೆ. ಕೆ.ವಿ.ಅಕ್ಷರ ಅವರ `ಸ್ವಯಂವರ ಲೋಕ' ನಾಟಕದ ಪಾತ್ರಧಾರಿಗಳು, ಶಿವರಾಮಕಾರಂತರ `ಬೆಟ್ಟದ ಜೀವ' ಕಾದಂಬರಿಯನ್ನು ಅದ್ಭುತ ಎನ್ನುತ್ತವೆ. ಅದೇ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು' ಬಗ್ಗೆ ಅದು, ಓಡಿ ಹೋದವರ ಕಥೆ ಎನ್ನುತ್ತವೆ. ಇದು ಏನನ್ನು ಧ್ವನಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕನ್ನಡದ ವಿವೇಕ ಜೊಳ್ಳು-ಕಾಳುಗಳನ್ನು ಸರಿಯಾಗಿ ವಿಂಗಡಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಹಿಂದೊಮ್ಮೆ ಶಿವಮೊಗ್ಗದಲ್ಲೇ ಒಬ್ಬರು, ಜಾತಿಯಲ್ಲಿ ಮೇಲು-ಕೀಳು ಇಲ್ಲ ಎಂದು ಹೇಳಿದ್ದರು. ಹೀಗೆ ಹೇಳುವ ಮೂಲಕ ಕುವೆಂಪು ಅವರನ್ನು ನಿರ್ನಾಮ ಮಾಡುವ ಹುನ್ನಾರ ಅಡಗಿದೆ. ಕುವೆಂಪು ಅವರ ಇಡೀ ಸಾಹಿತ್ಯವನ್ನು ಓದದಂತೆ ದೂರ ಇಡುವ ಪ್ರಯತ್ನವೂ ಇಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT