ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿ ನೈವೇದ್ಯ

ನಮ್ಮೂರ ಊಟ
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಶ್ರೀಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಅಷ್ಟಮಿಯೇ ಶ್ರೀಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಸೆರೆಮನೆಯಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಈ ದಿನ ಶ್ರೀಕೃಷ್ಣನ ವಿಗ್ರಹವನ್ನು ವಿಶಿಷ್ಟವಾಗಿ ಅಲಂಕರಿಸಿ ಪೂಜಿಸುವರು.  ಅಲ್ಲದೇ ತಪ್ಪದೇ ಉಪವಾಸ ಆಚರಿಸುವರು. ಮಧ್ಯರಾತ್ರಿಯವರೆಗೂ ಉಪವಸವಿದ್ದು, ಕೃಷ್ಣನಿಗೆ ಶಂಖದಲ್ಲಿ ಹಾಲು-ದಕ್ಷಿಣೆ ಇಟ್ಟು ಅರ್ಘ್ಯವನ್ನು ಕೊಡುವರು. ಶುಂಠಿ-ಬೆಲ್ಲ ಮತ್ತು ತರಹೇವಾರಿ ಉಂಡೆಗಳು ಹಾಗೂ ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ನಿಪ್ಪಟ್ಟುಗಳನ್ನು ನೈವೇದ್ಯ ಮಾಡಿ, ಎಲ್ಲರೂ ಫಲಹಾರ ಸ್ವೀಕರಿಸುವರು. ಗೋಕುಲಾಷ್ಟಮಿಯಂದು ತಯಾರಿಸುವ ವಿಶೇಷ ತಿಂಡಿಗಳ ವಿಧಾನವನ್ನು ವಿವರಿಸಿದ್ದಾರೆ ಛಾಯಾ ಪಿ.ಮಠ್.

ಕೋಡುಬಳೆ
ಸಾಮಗ್ರಿ:ಅಕ್ಕಿ ಅರ್ಧ ಕೆ.ಜಿ, ತೆಂಗಿನಕಾಯಿ ಒಂದು ಹೋಳು, ಹುರಿಗಡಲೆ ಒಂದುಪಾವು, ಒಣಮೆಣಸಿನಕಾಯಿ 8-10, ಎಣ್ಣೆ ಕಾಲು ಕೆ.ಜಿ, ತುಪ್ಪ ಸ್ವಲ್ಪ, ಉಪ್ಪು ರುಚಿಗೆ, ಸ್ವಲ್ಪ ಜಿರಿಗೆ.

ವಿಧಾನ: ಅಕ್ಕಿ, ಹುರಿಗಡಲೆ, ಮೆಣಸಿನಕಾಯಿ ಬೀಸಿಟ್ಟುಕೊಳ್ಳಬೇಕು. ತೆಂಗಿನಕಾಯಿ ತುರಿದಿಟ್ಟುಕೊಳ್ಳಿ. ಬೀಸಿಟ್ಟುಕೊಂಡ ಹಿಟ್ಟಿಗೆ ತೆಂಗಿನತುರಿ, ಉಪ್ಪು, ಜೀರಿಗೆ, ಹಾಗೂ ಸ್ವಲ್ಪ ತುಪ್ಪ ಕಾಯಿಸಿ ಹಾಕಿ, ತಕ್ಕಷ್ಟು ನೀರು ಹಾಕಿ ಹದವಾಗಿ ಕಲಸಿ, ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಕೋಡುಬಳೆಗಳನ್ನು ಹೊಸೆದು ಕರಿಯುವದು.

ಬೆಣ್ಣೆ ಚಕ್ಕುಲಿ
ಸಾಮಗ್ರಿ: ಕಡಲೆ ಹಿಟ್ಟು - 1 ಕೆ.ಜಿ, ಮೈದಾಹಿಟ್ಟು ಕಾಲು ಕೆ.ಜಿ, ಅಕ್ಕಿಹಿಟ್ಟು 100 ಗ್ರಾಂ, ಎಣ್ಣೆ ಕರಿಯಲು, ಬೆಣ್ಣೆ 200 ಗ್ರಾಂ, ಉಪ್ಪು ರುಚಿಗೆ, ಸ್ವಲ್ಪ ಸೋಡಾಪುಡಿ.

ವಿಧಾನ: ಮೂರೂ ಹಿಟ್ಟನ್ನು ಕೂಡಿಸಿ, ಅದಕ್ಕೆ ಉಪ್ಪು, ಕರಗಿಸಿದ ಬೆಣ್ಣೆ, ಸೋಡಾಪುಡಿ ಹಾಕಿ, ಸರಿಹೊಂದುವಷ್ಟು ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಚೆನ್ನಗಿ ನಾದಿರಿ, ಚಕ್ಕುಲಿ ಒರಳಿನಲ್ಲಿ ಹಿಟ್ಟು ತುಂಬಿ, ಕಾದ ಎಣ್ಣೆಯಲ್ಲಿ ಹಿಂಡಿ, ಹದವಾಗಿ ಕರಿಯಿರಿ.

ಅಂಟಿನ ಉಂಡೆ
ಸಾಮಗ್ರಿ:
100 ಗ್ರಾಂ ಅಂಟು, ಒಣಗಿದ ಖರ್ಜೂರ 200 ಗ್ರಾಂ, ಒಣಕೊಬ್ಬರಿ 500 ಗ್ರಾಂ, ಗೇರುಬೀಜ 100 ಗ್ರಾಂ, ಬೆಲ್ಲ ಅರ್ಧ ಕಿಲೋ, ತುಪ್ಪ ಅರ್ಧ ಕಿಲೋ, ಏಲಕ್ಕಿ, ಲವಂಗ, ಗಸಗಸೆ ಸ್ವಲ್ಪ.

ವಿಧಾನ: ಕೊಬ್ಬರಿ ತುರಿದುಕೊಂಡು, ಬಿಸಿಲಿನಲ್ಲಿ ಸ್ವಲ್ಪ ಒಣಗಿಸಬೇಕು. ನಂತರ ತುಪ್ಪದಲ್ಲಿ ಅಂಟನ್ನು ಕರಿದು ತೆಗೆದಿಡಿ. ಖರ್ಜೂರದ ಬೀಜ ತೆಗೆದು ಕೆಂಪಗೆ ತುಪ್ಪದಲ್ಲಿ ಹುರಿಯಿರಿ. ನಂತರ ತುರಿದ ಕೊಬ್ಬರಿ, ಏಲಕ್ಕಿ, ಲವಂಗ, ಗಸಗಸೆ, ಗೇರುಬೀಜ ಎಲ್ಲವನ್ನೂ ತುಪ್ಪದಲ್ಲಿ ಸ್ವಲ್ಪ ಹುರಿದು ಕುಟ್ಟಿ ಪುಡಿಮಾಡಿಕೊಳ್ಳಿರಿ. ಬೆಲ್ಲದಿಂದ ಪಾಕ ತಯಾರಿಸಿ, ಎಲ್ಲಾ ಪದಾರ್ಥಗಳನ್ನು ಹಾಕಿ ಕಲಸಿ ಉಂಡೆ ಕಟ್ಟಿರಿ.

ಕರ್ಚಿಕಾಯಿ
ಸಾಮಗ್ರಿ:
ಕಾಲು ಕೆ.ಜಿ ಪುಠಾಣಿ ಹಿಟ್ಟು, ಅರ್ಧ ಕೆ.ಜಿ. ಸಕ್ಕರೆಪುಡಿ, ನೂರು ಗ್ರಾಂ ಎಳ್ಳು, 100 ಗ್ರಾಂ ಒಣಕೊಬ್ಬರಿ, ಸ್ವಲ್ಪ ಏಲಕ್ಕಿಪುಡಿ, ಗಸಗಸೆ, ಮೈದಾಹಿಟ್ಟು ಅರ್ಧ ಕೆ.ಜಿ, ಕರಿಯಲು ಎಣ್ಣೆ.

ವಿಧಾನ: ಪುಠಾಣಿಹಿಟ್ಟು, ಸಕ್ಕರಪುಡಿಯನ್ನು ಮಿಶ್ರಣಮಾಡಿ. ಇದಕ್ಕೆ ಏಲಕ್ಕಿ, ಗಸಗಸೆ, ಕೊಬ್ಬರಿತುರಿ ಸೇರಿಸಿರಿ. ಮೈದಾಹಿಟ್ಟನ್ನು ನೀರು ಹಾಕಿ ಕಣಕವನ್ನು ತಯಾರಿಸಿ. ಇದರಿಂದ ಸಣ್ಣ-ಸಣ್ಣ ಪೂರಿಗಳನ್ನು ಲಟ್ಟಿಸಿ, ಮಿಶ್ರಣ ಮಾಡಿದ ಪುಡಿಯನ್ನು ಹಾಕಿ, ಅಂಚಿಗೆ ನೀರು ಸವರಿ ಸಮಭಾಗ ಮಾಡಿ ಅಂಟಿಸಿ, ಕಾದ ಎಣ್ಣೆಯಲ್ಲಿ  ಕರ್ಚಿಕಾಯಿಗಳನ್ನು ಕರಿಯಿರಿ.

ನಿಪ್ಪಟ್ಟು
ಸಾಮಗ್ರಿ:
ಅಕ್ಕಿಹಿಟ್ಟು 200 ಗ್ರಾಂ,ಮೈದಾ 100 ಗ್ರಾಂ, ಸೋಯಾಹಿಟ್ಟು 50 ಗ್ರಾಂ, ತುಪ್ಪ 4 ಚಮಚ, ಖಾರದಪುಡಿ 2 ಚಮಚ, ಅಜವಾನ ಸ್ವಲ್ಪ, ಎಳ್ಳು 1 ಚಮಚ, ಉಪ್ಪು ರುಚಿಗೆ, ಕರಿಯಲು ಎಣ್ಣೆ.

ವಿಧಾನ: ಹಿಟ್ಟುಗಳೆಲ್ಲವನ್ನು ಕೂಡಿಸಿ. ಖಾರದಪುಡಿ, ಎಳ್ಳು, ಅಜವಾನ, ಉಪ್ಪು ಸೆರಿಸಿ. ತುಪ್ಪ ಬಿಸಿ ಮಾಡಿ ಹಾಕಿ. ತಕ್ಕಷ್ಟು ನೀರು ಹಾಕಿ ಚಪಾತಿ ಕಣಕದ ಹದಕ್ಕೆ ಕಲಸಿರಿ. ನಿಂಬೆ ಗಾತ್ರದ ಉಂಡೆಗಳನ್ನ ಮಾಡಿಟ್ಟುಕೊಂಡು, ಬಾಳೆಎಲೆ ಮೇಲೆ ನಿಪ್ಪಟ್ಟಿನಂತೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಅವಲಕ್ಕಿ ಉಂಡೆ
ಸಾಮಗ್ರಿ:
ಅರ್ಧ ಕಿಲೋ ಅವಲಕ್ಕಿ, ಅರ್ಧ ಗಿಟಕು ಒಣಕೊಬ್ಬರಿತುರಿ, ಸ್ವಲ್ಪ ಗೋಡಂಬಿ, ಗಸಗಸೆ, ಎಳ್ಳು, ಕಾಲು ಕಿಲೋ ಪುಡಿ ಮಾಡಿದ ಬೆಲ್ಲ, ಕಾಲು ಕಿಲೋ ತುಪ್ಪ.

ವಿಧಾನ: ಅವಲಕ್ಕಿಯನ್ನು ತುಪ್ಪದಲ್ಲಿ ಕರಿದಿಟ್ಟುಕೊಳ್ಳಬೇಕು. ಕೊಬ್ಬರಿತುರಿ, ಗೋಡಂಬಿ, ಗಸಗಸೆ, ಎಳ್ಳನ್ನು ಸಹ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಬೆಲ್ಲ ಕರಗುವಷ್ಟು ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಂಡು, ಉಳಿದೆಲ್ಲಾ ಪದಾರ್ಥಗಳನ್ನು ಹಾಕಿ ಉಂಡೆ ಕಟ್ಟಬೇಕು.

ಹೆಸರು ಉಂಡೆ
ಸಾಮಾಗ್ರಿ:
ಹೆಸರು 250 ಗ್ರಾಂ, ತುಪ್ಪ 100 ಗ್ರಾಂ, ಬೆಲ್ಲ 500 ಗ್ರಾಂ.

ವಿಧಾನ: ಹೆಸರನ್ನು ಹುರಿದು ಬೀಸಿ ಹಿಟ್ಟು ಮಾಡಿಟ್ಟುಕೊಂಡು, ಅದಕ್ಕೆ ತುಪ್ಪ ಹಾಕಿ ಹುರಿಯಬೇಕು. ಬೆಲ್ಲದ ಪಾಕ ಮಾಡಿಕೊಂಡು ಅದಕ್ಕೆ ಹುರಿದ ಹಿಟ್ಟನ್ನು ಹಾಕಿ ಕಲಸಿ, ಕೈಗೆ ತುಪ್ಪ ಸವರಿಕೊಂಡು ಬಿಸಿಯಿರುವಾಗಲೇ ಉಂಡೆ ಕಟ್ಟಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT