ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಜಿರುವೆ ಅಡುಗೆ ಕಲೆ

Last Updated 22 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಮೈನಳ್ಳಿ ಗ್ರಾಮದ ಅರಣ್ಯದಲ್ಲಿರುವ ಸಿದ್ಧಿಜನಾಂಗದ ಬದುಕಿನ ಪರಿಯೇ ವಿಚಿತ್ರ. ಬೇಸಿಗೆ ಬಂತೆಂದರೆ ಇವರದ್ದು ಕೆಂಜಿರುವೆ ಬೇಟೆ. ಒಮ್ಮೆ ಕಚ್ಚಿದರೆ ಚೂಪಾದ ಆಯುಧದಿಂದ ತಿವಿದಷ್ಟು ನೋವಾಗುವ ಈ ಇರುವೆಯ ಪದಾರ್ಥ ಮಾಡಿ ಬಾಯಿ ಚಪ್ಪರಿಸುವುದೆಂದರೆ ಇವರಿಗೆ ಬಲು ಪ್ರೀತಿ!

ಕೆಂಜಿರುವೆ ತಿನ್ನುವುದು, ಅದನ್ನು ಔಷಧಕ್ಕಾಗಿ ಬಳಸುವ ಪದ್ಧತಿ ಇಂದು ನಿನ್ನೆಯದ್ದಲ್ಲ. ತಲೆತಲಾಂತರಗಳಿಂದ ಈ ಪದ್ಧತಿ ನಡೆದು ಬಂದಿದೆ. ಬೇಸಿಗೆ ಕಾಲದಲ್ಲಿ ಈ ಇರುವೆಯನ್ನು ಹಿಡಿದು ಹಸಿಹಸಿಯಾಗಿ ತಿನ್ನುವುದು ಮಾತ್ರವಲ್ಲದೇ ಸಾಂಬಾರ ಪದಾರ್ಥಗಳನ್ನೂ ಮಾಡಿ ಮೆಲ್ಲುತ್ತಾರೆ. ಮಳೆಗಾಲದಲ್ಲಿ ಬಾಣಂತಿಯರಿಗೆ ನೀಡಲೆಂದೇ ಈ ಇರುವೆಗಾಗಿ ಕಾಡನ್ನು ಜಾಲಾಡುತ್ತಾರೆ.

 ಈ ಕೆಂಜಿರುವೆಗಳ ಬಾಯಲ್ಲಿ ಫಾರ್ಮಿಕ್ ಆ್ಯಸಿಡ್ ಇರುವ ಕಾರಣ ಇದನ್ನು ಸೋಂಕು ನಿವಾರಕವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ ಕಿವುಡು, ಸಂಧಿವಾತ, ಕೀಲು ರೊಗಗಳ ವೈದ್ಯೋಪಚಾರದಲ್ಲಿಯೂ ಇದನ್ನು ಬಳಸಲಾಗುತ್ತಿದೆ.

ಇರುವೆ ಮತ್ತು ಅವುಗಳ ಮೊಟ್ಟೆಗಳನ್ನು ಬಾಣಲೆಯಲ್ಲಿ ಹುರಿದು ನಂತರ ಬಟ್ಟಿ ಇಳಿಸಿ ಬಂದ ದ್ರವವನ್ನು ರಾತ್ರಿ ಮಲಗುವ ಮುನ್ನ ಕಣ್ಣಿನಲ್ಲಿ ಮೂರು ತೊಟ್ಟು ಹಾಕಿಕೊಂಡರೆ ಕಣ್ಣಿನ ಪೊರೆ ಹಾಗೂ ಕಲೆಗಳು ಹೋಗುತ್ತವೆ ಎಂಬ ಕಾರಣ ಅದನ್ನು ಈ ಜನಾಂಗದ ಜನರು ಬಳಸುತ್ತಿದ್ದಾರೆ. ಇವುಗಳನ್ನು ಜಜ್ಜಿದ ನಂತರ ಬರುವ ದ್ರವವನ್ನು ಮೈ ಕೈ ಹಾಗೂ ಕಾಲು ನೋವಿನ ನಿವಾರಣೆಗಾಗಿ ಬಳಸುತ್ತಾರೆ.

ಇದನ್ನು ಮರಗಳಿಂದ ತೆಗೆಯುವಾಗ ಅದರ ಮೇಲೆ ಉಪ್ಪಿನ ಮಿಶ್ರಣ ಹಾಕುವ ಕಾರಣ ಅವು ಸಾಯುತ್ತವೆ ಎನ್ನುತ್ತಾರೆ ರಂಜಿತಾ ಫ್ರಾನ್ಸಿಸ್ ಸಿದ್ಧಿ. ‘ಕೆಂದಿರುವೆ ರುಚಿ ಹುಳಿಯಾಗಿರುತ್ತದೆ. ಇದರಿಂದ ಸೌಳಿ ಸಾರು, ಚಟ್ನಿ ಮಾಡುತ್ತೇವೆ.

ಇವುಗಳನ್ನು ಹುರಿದು ಬೆಳ್ಳುಳ್ಳಿ, ಈರುಳ್ಳಿ, ಮೆಣಸು, ತೆಂಗಿನ ಕಾಯಿ ತುರಿ, ಕಾಡು ಕರಿಬೇವುಗಳನ್ನು ಬೆರೆಸಿ ರುಬ್ಬಿ ಇದಕ್ಕೆ ಕೆಸುವಿನ ಗಡ್ಡೆ ಮಿಶ್ರಣ ಮಾಡಿದರೆ ರುಚಿಕರವಾದ ಸಾರು ಸಿದ್ಧವಾಗುತ್ತದೆ’ ಎನ್ನುತ್ತಾರೆ  ರೂಪಾ ಸಾನ್ಯಾ ಸಿದ್ಧಿ. ನೆಗಡಿಯಾದಾಗ, ಬೇಧಿಯಾದಾಗ ಈ ಸಾರನ್ನು ನೀಡಲಾಗುವುದಂತೆ. ಈ ಇರುವೆಗಳನ್ನು ದಕ್ಷಿಣ ಅಮೆರಿಕದ ಗಯಾನ ಅರಣ್ಯ ಪ್ರದೇಶ ವಾಸಿಗಳು ಮತ್ತು ಮೆಡಿಟರೇನಿಯಾದ ಕೆಲವು ಜನಾಂಗದವರೂ ಮಾಡುತ್ತಿದ್ದಾರೆ ಎಂಬ ಉಲ್ಲೇಖವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT