ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟು ನಿಂತ ಸಿಗ್ನಲ್‌ ದೀಪಗಳು

ಅಂಬೇಡ್ಕರ್, ವಿಶ್ವೇಶ್ವರಯ್ಯ ವೃತ್ತದಲ್ಲಿ 15ದಿನಗಳಾರೂ ದುರಸ್ತಿಗೊಳ್ಳದ ದೀಪಗಳು: ಸಂಚಾರ ಸಮಸ್ಯೆ
Last Updated 31 ಆಗಸ್ಟ್ 2015, 10:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಬಿ.ಬಿ.ರಸ್ತೆಯ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿನ (ಶಿಡ್ಲಘಟ್ಟ ವೃತ್ತ) ಸಂಚಾರ ಸಿಗ್ನಲ್‌ ದೀಪಗಳು ಸಂಪೂರ್ಣ ಬಂದ್‌ ಆಗಿದ್ದವು. ಅವು ಕೆಟ್ಟಿದ್ದರಿಂದ ವಾಹನಗಳ ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯಾದರೆ, ಸಂಚಾರ ಪೊಲೀಸರಿಗೆ ವಾಹನಗಳ ದಟ್ಟಣೆ ನಿಭಾಯಿಸುವುದು ಕಷ್ಟವಾಗಿತ್ತು. ಅಂತಹದ್ದೇ ಪರಿಸ್ಥಿತಿ ಈಗ ಮತ್ತೆ ಮರುಕಳಿಸಿದೆ. ಆದರೆ ಈ ಬಾರಿ ಅಂಬೇಡ್ಕರ್‌ ವೃತ್ತದಲ್ಲಿ ಅಷ್ಟೇ ಅಲ್ಲ, ನಗರದ ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದ ಸಿಗ್ನಲ್‌ ದೀಪಕ್ಕೂ ತಟ್ಟಿದೆ’.

ಅಂಬೇಡ್ಕರ್‌ ವೃತ್ತದ ಬದಿ ನಿಂತು ಬೈಕ್‌ ಸವಾರ ಎನ್‌.ಆರ್.ರಮೇಶ್‌ ಹೀಗೆ ಹಳೆಯ ನೆನಪು ಮೆಲುಕು ಹಾಕುತ್ತಿದ್ದರೆ, ಅಲ್ಲೇ ಇದ್ದ ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್‌ ಶಿಳ್ಳೆ ಊದಿ ಮುಂದೆ ಸಾಗಲು ಸೂಚಿಸಿದರು. ಅದೇ ವೇಳೆಗೆ ವೃತ್ತದ ಎರಡೂ ರಸ್ತೆಗಳಿಂದ ವಾಹನಗಳು ವೇಗವಾಗಿ ಬಂದವು. ಇನ್ನೇನು ವಾಹನಗಳ ನಡುವೆ ಡಿಕ್ಕಿ ಸಂಭವಿಸಬೇಕು. ಅಷ್ಟರಲ್ಲಿ ವಾಹನಸವಾರರು ಬ್ರೇಕ್‌ ಹಾಕಿದರು. ಅಲ್ಲಿಗೆ ಓಡೋಡುತ್ತ ಬಂದ ಕಾನ್‌ಸ್ಟೆಬಲ್‌ ಬುದ್ಧಿಮಾತು ಹೇಳಿ, ಎಚ್ಚರವಹಿಸಲು ಹೇಳಿದರು.

15 ದಿನಗಳಿಂದ ಸ್ಥಗಿತ: ಇದು ಒಂದೆರಡು ದಿನಗಳ ಪರಿಸ್ಥಿತಿಯಲ್ಲ. ಸಂಚಾರ ಸಿಗ್ನಲ್‌ ದೀಪಗಳು ಕೆಟ್ಟು 15ಕ್ಕೂ ಹೆಚ್ಚು ದಿನಗಳಾಗಿದ್ದು, ಈವರೆಗೆ ದುರಸ್ತಿಯಾಗಿಲ್ಲ. ಸಂಚಾರ ವ್ಯವಸ್ಥೆ ನಿಗಾವಣೆಗೆ ಸಂಚಾರ ಕಾನ್‌ಸ್ಟೆಬಲ್‌ ನಿಯೋಜಿಸಲಾಗಿದೆ. ಆದರೆ ಸಿಗ್ನಲ್‌ ದೀಪಗಳು ಯಾವುದೇ ರೀತಿಯ ಸೂಚನೆ ನೀಡದಿರುವುದನ್ನು ಗಮನಿಸುವ ವಾಹನ ಸವಾರರು ಅಕ್ಕಪಕ್ಕ ನೋಡದೇ ವೇಗವಾಗಿ ಹೊರಟುಬಿಡುತ್ತಾರೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದ್ದು, ವಾಹನಗಳ ದಟ್ಟಣೆಗೂ ಕಾರಣವಾಗುತ್ತದೆ.

‘ಅಂಬೇಡ್ಕರ್‌ ವೃತ್ತ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ವೃತ್ತ ಎರಡೂ ನಗರದ ಪ್ರಮುಖ ಸ್ಥಳಗಳು. ಬಸ್‌, ಲಾರಿ, ಕಾರು, ದ್ವಿಚಕ್ರ ವಾಹನ ಸೇರಿದಂತೆ ಅತಿ ಹೆಚ್ಚಿನ ವಾಹನಗಳು ಇಲ್ಲಿಂದಲೇ ಸಂಚರಿಸುತ್ತವೆ. ಇಲ್ಲಿ ಸಿಗ್ನಲ್‌ ದೀಪಗಳು ಕೆಟ್ಟರೆ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುವುಲ್ಲದೇ ಮಕ್ಕಳು ಸೇರಿದಂತೆ  ಪಾದಚಾರಿಗಳಿಗೂ ಸುರಕ್ಷಿತವಾಗಿ ರಸ್ತೆ ದಾಟಲು ಆಗುವುದಿಲ್ಲ. ಎಂದು ಹಿರಿಯರಾದ ಕೆ.ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಸ್ಯೆ ನಿವಾರಣೆ: ಸಿಗ್ನಲ್‌ ದೀಪಗಳು ಇದ್ದಲ್ಲಿ, ಸಂಚಾರ ಪೊಲೀಸರ ಮೇಲೆ ಒತ್ತಡ ಕಡಿಮೆಯಾಗುತ್ತದೆ. ವ್ಯವಸ್ಥಿತವಾಗಿ ಎಲ್ಲವೂ ನೆರವೇರುತ್ತದೆ. ಜಿಲ್ಲಾ ಕೇಂದ್ರವಾಗಿ ಎಂಟು ವರ್ಷ ಪೂರೈಸಿರುವ ನಗರವು ಇನ್ನಷ್ಟು ಅಭಿವೃದ್ಧಿಯಾಗಬೇಕಿತ್ತು. ಆದರೆ ಒಂಬತ್ತನೇ ವರ್ಷದಲ್ಲೂ ಇಂತಹದ್ದೇ ಸಿಗ್ನಲ್‌ ದೀಪದ ಸಮಸ್ಯೆ ತಕ್ಷಣವೇ ಪರಿಹಾರ ಆಗದಿರುವುದು ಬೇಸರದ ಸಂಗತಿ. ಸಂಬಂಧಪಟ್ಟವರು ಸಮಸ್ಯೆಯನ್ನು ಕೂಡಲೇ ನಿವಾರಿಸಬೇಕು ಎಂದು ಅವರು ತಿಳಿಸಿದರು.

ಮಳೆಗಾಳಿಯಿಂದ ಸಂಚಾರ ಸಿಗ್ನಲ್‌ ದೀಪದ ಬೋರ್ಡ್‌ ಹಾಳಾಗಿದ್ದು, ಇದರ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ₹1 ಲಕ್ಷ ಮೌಲ್ಯದ ಬೋರ್ಡ್‌ ಅಳವಡಿಕಸಬೇಕಿದ್ದು, ಕೊಂಚ ತಡವಾಗಿದೆ. ಬೋರ್ಡ್‌ ಶೀಘ್ರವೇ ಅಳವಡಿಸಿ, ವಾಹನ ಸಂಚಾರ ಸುಗಮಗೊಳಿಸುತ್ತೇವೆ. ಸಿಗ್ನಲ್ ದೀಪಗಳು ಮತ್ತೆ ಯಾವತ್ತೂ ಕೆಡದಂತೆ ಎಚ್ಚರವಹಿಸುತ್ತೇವೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಜೆ.ಬಾಲಾಜಿ ಸಿಂಗ್‌ ತಿಳಿಸಿದರು.

3 ತಿಂಗಳಾದರೂ ದುರಸ್ತಿಯಾಗಿರಲಿಲ್ಲ
2011ರಲ್ಲಿ ಅಂಬೇಡ್ಕರ್‌ ವೃತ್ತದಲ್ಲಿ ಸಿಗ್ನಲ್‌ ದೀಪಗಳು ಕೆಟ್ಟಾಗ, ಸುಮಾರು 3 ತಿಂಗಳವರೆಗೆ ದುರಸ್ತಿಯಾಗಿರಲಿಲ್ಲ. ಅದರ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಯಾರೂ ಹೊತ್ತಿರಲಿಲ್ಲ. ದೀಪಗಳ ನಿರ್ವಹಣೆ ಜವಾಬ್ದಾರಿ ಪೊಲೀಸ್‌ ಇಲಾಖೆಯದ್ದು ಎಂದು ನಗರಸಭೆ ಅಧಿಕಾರಿಗಳು ಹೇಳಿದರೆ, ಅವುಗಳ ಸಮಗ್ರ ನಿರ್ವಹಣೆ ಹೊಣೆ ನಗರಸಭೆಯದ್ದೇ ಹೊರತು ತಮ್ಮದಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದರು. ಈ ಶೀತಲ ಸಮರ ಹಲವು ದಿನಗಳವರೆಗೆ ಮುಂದುವರಿದಿತ್ತು.

ಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗೆ ಸಿಗ್ನಲ್‌ ದೀಪಗಳ ದುರಸ್ತಿಗೆ ಯಾರೂ ಆಸಕ್ತಿ ತೋರಲಿಲ್ಲ. ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳಿಂದ ಒತ್ತಡ ವ್ಯಕ್ತವಾದಾಗ, ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಪರಿಶೀಲಿಸಿದರು. ಜಿಲ್ಲಾಡಳಿತದ ಅಧಿಕಾರಿಗಳು ಪೊಲೀಸ್‌ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಲೋಪದೋಷ ತಲೆದೋರದಂತೆ ನಿಭಾಯಿಸಬೇಕು ಎಂದು ಸೂಚಿಸಿದ್ದರು. ಅದರಂತೆಯೇ ಎಲ್ಲವೂ ನಡೆಯುತ್ತಿತ್ತು. ಆದರೆ ಈಗ ಪುನಃ ಸಿಗ್ನಲ್‌ ದೀಪಗಳು ಕೆಟ್ಟು ನಿಂತಿವೆ ಎಂದು ಸಂಘಟನೆ ಮುಖಂಡ ನಾರಾಯಣಸ್ವಾಮಿ ತಿಳಿಸಿದರು.

ಸುಗಮ ಸಂಚಾರ ವ್ಯವಸ್ಥೆ ನಿಭಾಯಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ನಗರಸಭೆ ಅಧಿಕಾರಿಗಳು ಅಲ್ಲದೇ ಸಂಘ–ಸಂಸ್ಥೆಗಳ ಸದಸ್ಯರಿಂದಲೂ ಉತ್ತಮ ಸಹಕಾರ ಬೇಕು.
–ಎಂ.ಜೆ.ಬಾಲಾಜಿ ಸಿಂಗ್‌,
ಸರ್ಕಲ್‌ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT